Saturday, 12th October 2024

ಅಭಿಮಾನ ಇರಲಿ, ಅಂಧಾಭಿಮಾನ ಬೇಡ

ಪ್ರಚಲಿತ

ಉಷಾ ಜೆ.ಎಂ.

ushajmb@gmail.com

ಸಿನಿಮಾ ನಟ ನಟಿಯರು, ಕ್ರೀಡಾ ಪಟುಗಳು ಹಾಗೂ ರಾಜಕಾರಣಿಗಳು ನಾನಾ ಕಾರಣಗಳಿಗೆ ಜನರಿಗೆ ಇಷ್ಟವಾಗುತ್ತಾರೆ. ಜೀವನದ ಏಳು ಬೀಳುಗಳನ್ನು
ಎದುರಿಸಿ, ಸಂಕಷ್ಟಗಳನ್ನು ಮೆಟ್ಟಿನಿಂತು ಸಾಧನೆಗೈದ ಸೆಲೆಬ್ರಿಟಿಗಳ ಮೂಲಕ ತಮ್ಮ ಕಷ್ಟಗಳನ್ನು ಮರೆತು ಸ್ಫೂರ್ತಿಯನ್ನು ಪಡೆದಿರುತ್ತಾರೆ.

ಅದರಲ್ಲೂ ಸಿನಿಮಾ ರಂಗದವರ ಪ್ರಭಾವ ಸಮಾಜದ ಮೇಲೆ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ತಾವು ಅಭಿನಯಿಸಿದ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಹುದುಗಿದ ಅದೆಷ್ಟೋ ಭಾವನೆಗಳಿಗೆ ಕಿಡಿ ಹಚ್ಚಿರು ತ್ತಾರೆ. ಹೊರಗಡೆ ಹೇಳಿಕೊಳ್ಳಲಾಗದ ನೋವುಗಳಿಗೆ ಅನೇಕ ಪಾತ್ರಗಳು ಸಮಾಧಾನ ನೀಡಿರುತ್ತವೆ ಮತ್ತು ಅಸ್ಪಷ್ಟ ಯೋಚನೆಗಳಿಗೆ ಸ್ಪಷ್ಟರೂಪವನ್ನು ನೀಡಿರುತ್ತವೆ.

ತಾವು ಅಭಿನಯಿಸಿದ ಪ್ರಭಾವ ಬೀರಬಲ್ಲ ಪಾತ್ರಗಳ ಮೂಲಕ ಅಥವಾ ತಮ್ಮ ರೂಪದ ಮೂಲಕವೋ ಇಲ್ಲವೇ ತಮ್ಮ ವಿಶಿಷ್ಟ ನಟನಾ ಶೈಲಿಯ ಮೂಲಕ ಜನರೊಂದಿಗೆ ಭಾವಾನಾತ್ಮಕ ನಂಟನ್ನು ಬೆಳೆಸಿಕೊಂಡು ಅಭಿಮಾನಿಗಳ ಜೀವನದ ಬಹುಮುಖ್ಯ ಭಾಗವಾಗಿರುತ್ತಾರೆ. ಇಂತಹ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾ, ಅವರ ನಡೆ ನುಡಿಯನ್ನು ಅನುಕರಿಸುತ್ತಾ ತಮ್ಮತನವನ್ನೇ ಮರೆತಿರುತ್ತಾರೆ.

ಕೆಲ ಅಭಿಮಾನಿಗಳಂತೂ ತಾರೆಯರು ಎಲ್ಲರಂತೆ ದೌರ್ಬಲ್ಯಗಳು ಇರುವ ಮನುಷ್ಯರೆಂಬುದನ್ನೂ ಮರೆತು, ದೇವರನ್ನು ಪೂಜಿಸುವ ಬದಲು ಇವರಿಗಾಗಿ ದೇವಸ್ಥಾನಗಳನ್ನು ಕಟ್ಟಿಸಿ, ಆರಾಧಿಸಿದ ಘಟನೆಗಳು ನಮ್ಮಲ್ಲಿ ನಡೆದಿವೆ. ತಮ್ಮ ಮಕ್ಕಳಿಗೆ ನಟ ನಟಿಯರ ಹೆಸರುಗಳನ್ನು ಇಡುವುದಂತೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇಸಾಮಾನ್ಯ. ತಾವು ಆರಾಧಿಸುವ ನಟ ನಟಿಯರು ಏನು ಮಾಡಿದರೂ ಸರಿ ಎಂದು ಸಮರ್ಥಿಸಿಕೊಳ್ಳುತ್ತಾ, ಟೀಕಿಸುವವರ ಜತೆ ಜಗಳವಾಡಿ ಸಂಬಂಧ ಗಳನ್ನು ಹಾಳು ಮಾಡಿಕೊಳ್ಳುವ ಮನಸ್ಥಿತಿ ತಲುಪಿರುತ್ತಾರೆ.

ಬಹುತೇಕ ನಟರು ತಮ್ಮಲ್ಲಿರುವ ಪ್ರತಿಭೆಯಿಂದ ಪ್ರಸಿದ್ಧಿಯನ್ನು ಪಡೆದಿರುತ್ತಾರೆಯೇ ಹೊರತು ತಮ್ಮಲ್ಲಿರುವ ಗುಣ ಅಥವಾ ಧಾರ್ಮಿಕ ಭಾವನೆಗಳಿಂದ ಅಲ್ಲ.
ಆದರೂ ಅಭಿಮಾನಿಗಳು ಅದರಲ್ಲೂ ಯುವ ಸಮೂಹ ಇವರನ್ನು ರೋಲ್ ಮಾಡೆಲ್ ಅಗಿ ನೋಡುವುದರಿಂದ ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನ ದಲ್ಲಿ ಮಾದರಿಯಾಗುವಂತೆ ನಡೆದುಕೊಳ್ಳುವ ನೈತಿಕ ಜವಬ್ದಾರಿ ಇವರ ಹೆಗಲ ಮೇಲಿರುತ್ತದೆ. ಕೀರ್ತಿವಂತರಾಗಲು ಪ್ರತಿಭೆ ಮುಖ್ಯವಾದರೆ, ಬಂದ ಕೀರ್ತಿ ಯನ್ನು ನಿಭಾಯಿಸಲು ವಿನಮ್ರತೆ ಮುಖ್ಯವಾಗುತ್ತದೆ.

ಆದರೆ ಸದಾ ಅಭಿಮಾನಿಗಳ ಹೊಗಳಿಕೆಯ ಮಧ್ಯದಲ್ಲೇ ಕಾಲ ಕಳೆಯುವ ಕೆಲ ನಟರಿಗೆ ಮಾತ್ರ ಸಿನಿಮಾಕ್ಕೂ ನಿಜ ಜೀವನಕ್ಕೂ ವ್ಯತ್ಯಾಸವೇ ಇರುವುದಿಲ್ಲ. ತಾನು ಏನು ಮಾಡಿದರೂ ಸರಿ ಎಂದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಎಗ್ಗಿಲ್ಲದೇ ತೊಡಗಿರುತ್ತಾರೆ. ಬಾಲಿವುಡ್‌ನ ಸಲ್ಮಾನ್ ಖಾನ್ ಫುಟ್‌ಪಾತ್‌ನ
ಮೇಲೆ ಮಲಗಿದವರ ಮೇಲೆ ಕಾರ್ ಓಡಿಸಿ ಅವರ ಸಾವಿಗೆ ಕಾರಣನಾಗಿದ್ದರೂ ಮತ್ತು ಕೃಷ್ಣಮೃಗವನ್ನು ಬೇಟೆಯಾಡಿದ ಕೇಸ್‌ನಲ್ಲಿ ಆರೋಪಿಯಾದರು ಸಹ ಏನೂ ಅಗಿಲ್ಲವೆಂಬಂತೆ ಇನ್ನೂ ಪ್ರಭಾವಿಯಾಗೇ ಇದ್ದಾನೆ.

ಇನ್ನೂ ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದ ಮೂಲಕ ಗಾಂಧಿವಾದಿಯಾಗಲು ಯತ್ನಿಸಿದ ಸಂಜಯ್‌ದತ್ ತನ್ನ ನಿಜ ಜೀವನದಲ್ಲಿ ಮುಂಬೈ ಸರಣಿ ಸ್ಪೋಟದ ಅಪರಾಧಿ. ಇವರಿಗೆ ಶಿಕ್ಷೆಯಾದಾಗ ಇವರ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ನಟರು ಪ್ರಶ್ನಾತೀತರು ಶಿಕ್ಷೆ ವಿಧಿಸಿದ ನ್ಯಾಯಾಂಗ ವ್ಯವಸ್ಥೆಯೇ ಸರಿ ಇಲ್ಲವೆಂಬಂತೆ ವರ್ತಿಸಿದ್ದು ಜನ ಮಾನಸದಿಂದ ಇನ್ನೂ ಮಾಸಿಲ್ಲ.

ಆದರೆ ಸಭ್ಯತೆಗೆ ಹೆಸರುವಾಸಿಯಾಗಿದ್ದ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ನಮ್ಮ ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟ ದರ್ಶನ್ ರವರು ತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಸೆರೆ ಮನೆಗೆ ಹೋದಾಗ, ಬೀದಿಗೆ ಇಳಿದು ಪ್ರತಿಭಟಿಸಿದ ಅಭಿಮಾನಿ ಗಳನ್ನು ಕಂಡು ಪ್ರಜ್ಞಾವಂತ ಜನಾಂಗ ತಲೆ ತಗ್ಗಿಸಿತ್ತು. ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಇವರು ಮಾಡಿದ ಯಾವುದೋ
ಒಳ್ಳೆಯ ಕೆಲಸವನ್ನು ಮುಂದಿಟ್ಟುಕೊಂಡು ಹಲ್ಲೆಯಂತಹ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿದ್ದ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಸಂಜನಾ ಮತ್ತು ರಾಗಿಣಿ ಒಂದು ಕಾಲದಲ್ಲಿ ತಮ್ಮ ಸಹಜ ಸೌಂದರ್ಯ ಮತ್ತು ನಟನೆಯಿಂದ ಮನೆಮಾತಾದ ನಟಿಯರನ್ನು ಕಂಡ ಚಿತ್ರರಂಗವನ್ನು ಅನುಮಾನದಿಂದ ನೋಡುವಂತೆ ಮಾಡಿದ ಘಟನೆ ಎಲ್ಲರಿಗೂ ತಿಳಿದೇ ಇದೆ. ಸಿನಿಮಾ ತಾರೆಯರ ಪ್ರಭಾವ ಕೇವಲ ಮನೋರಂಜನೆ ಮತ್ತು ಜಾಹೀರಾತು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಚುನಾವಣೆಯ ಸಮಯದಲ್ಲಿ ಅನೇಕ ಪಕ್ಷಗಳು ಸ್ಟಾರ್ ಪ್ರಚಾರಕ ರಾಗಿ ಇವರನ್ನು ಬಳಸಿಕೊಳ್ಳುತ್ತಿದ್ದಾರೆ.

ಯುವ ಸಮೂಹದ ಮೇಲೆ ಇವರ ಪ್ರಭಾವವನ್ನರಿತ ಸರಕಾರಗಳು ಸಹ ಅನೇಕ ಸರಕಾರಿ ಸಂಸ್ಥೆಗಳ ಮತ್ತು ಸರಕಾರದ ಯೋಜನೆಗಳಿಗೆ ರಾಯಭಾರಿಗಳಾಗಿ ನೇಮಿಸಿಕೊಳ್ಳುತ್ತಿವೆ. ಆದರೆ ಕೃಷಿಕರಲ್ಲಿ ಸೂರ್ತಿ ತುಂಬಲು ಕೃಷಿ ಇಲಾಖೆಗೆ ರಾಯಭಾರಿಯಾಗಿರುವ ನಟ ದರ್ಶನರವರ ಬಾಯಲ್ಲಿ ಇಂದು ಸದಾ ಮಚ್ಚು, ಲಾಂಗು ಮತ್ತು ತಲೆ ಕತ್ತರಿಸೋ ಮಾತುಗಳು ಬರುತ್ತಿವೆ. ಚುನಾವಣಾ ಆಯೋಗದ ರಾಯಭಾರಿಯಾಗಿ ಮತದಾನದ ಮಹತ್ವವನ್ನು ಸಾರಬೇಕಾಗಿದ್ದ ಮತ್ತೊಬ್ಬ ನಟ ಚುನಾವಣೆಯಲ್ಲಿ ಮತಚಲಾಯಿಸದೇ ವಿದೇಶಕ್ಕೆ ಹಾರುತ್ತಾರೆ.

ತನ್ನ ಒಂದು ಸಿನಿಮಾದಲ್ಲಿ ಸಾಧನೆ ಮಾಡಲು ಅಂಕಗಳ ಅವಶ್ಯಕತೆ ಇಲ್ಲ ಎಂದು ತೋರಿಸಿದ ಅಮೀರ್‌ಖಾನ್ ಇಂದು ಅಂಕಗಳನ್ನು ಗಳಿಸಲು ಸಹಾಯ ಮಾಡುವ ಆಪ್‌ನ ರಾಯಭಾರಿ. ಅನೇಕ ನಟರ ಸಿದ್ಧಾಂತಗಳು ಸಂದರ್ಭಕ್ಕನುಗುಣವಾಗಿ ಮತು ಸಂಭಾವನೆಗನುಗುಣವಾಗಿ ಬದಲಾಗುತ್ತಿರುತ್ತವೆ. ಎಲ್ಲರಿಗೂ ಒಂದಿಲ್ಲೊಂದು ವಿಷಯದಲ್ಲಿ ನಿಪುಣತೆ ಇರುವ ಹಾಗೆ ನಟ ನಟಿಯರು ನಟನೆಯಲ್ಲಿ ನಿಪುಣರಾಗಿರುತ್ತಾರಷ್ಟೆ. ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆಯನ್ನು
ಹಣಗಳಿಸಲು ಉಪಯೋಗಿಸುವ ಹಾಗೆ, ಇವರೂ ಸಹ ಹಣಗಳಿಸಲು ತಮ್ಮಲ್ಲಿರುವ ನಟನಾ ಕೌಶಲ್ಯವನ್ನು ಉಪಯೋಗಿಸುತ್ತಾರೆ.

ಕೆಲವು ಹಿಟ್ ಚಿತ್ರಗಳನ್ನು ಕೊಟ್ಟ ಮಾತ್ರಕ್ಕೆ ಪ್ರತಿಯೊಂದು ಕ್ಷೇತ್ರದಲೂ ಇವರು ಅನುಕರಣೀಯರೆಂದಲ್ಲ. ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುವ
ಪಾತ್ರಗಳನ್ನು ಮಾಡಿದಾಗ ಮತ್ತು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿದಾಗ ಬೆಂಬಲಿಸಿದ ಹಾಗೆ ಇವರಿಂದ ತಪ್ಪುಗಳಾದಾಗಲೂ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಬೆಂಬಲಿಸುವುದು ಅಂಧಾಭಿಮಾನವೇ ಹೊರತು ಅಭಿಮಾನವಂತು ಅಲ್ಲ. ಅಭಿಮಾನಿಗಳಿಗೆ ದೇವರ ಪಟ್ಟ ಕೊಟ್ಟು, ಅಭಿಮಾನಿಗಳನ್ನು
ದುಶ್ಚಟದ ದಾರಿಗೆ ಎಳೆಯಬಾರದೆಂದು ಧೂಮಪಾನ ಮತ್ತು ಮಧ್ಯಪಾನದ ದೃಶ್ಯಗಳಲ್ಲಿ ನಟಿಸುವುದನ್ನು ನಿಲ್ಲಿಸಿದ ಡಾ. ರಾಜಕುಮಾರ್ ನಂತಹ ವ್ಯಕ್ತಿತ್ವವನ್ನು ಇಂದಿನ ಚಿತ್ರರಂಗದಲ್ಲಿ ನಿರೀಕ್ಷಿಸುವುದು ವ್ಯರ್ಥ.