Monday, 14th October 2024

‘ಶ್ರಮ ಏವ ಜಯತೇ’ ಎನ್ನುವ ಅಪ್ಪ-ಮಕ್ಕಳ ಕಥೆಯಿದು

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@gmail.com

ಅಪ್ಪ ಎಂಜಿನಿಯರಿಂಗ್ ಓದುತ್ತಿದ್ದಾಗ ‘ಪರಮ ದಡ್ಡ’ ಎನಿಸಿಕೊಂಡಿದ್ದ ವಿದ್ಯಾರ್ಥಿ. ಡುಮ್ಕಿ ಮೇಲೆ ಡುಮ್ಕಿ ಹೊಡೆದು ಒಂದೊಂದು ಸಬ್ಜೆಕ್ಟನ್ನೂ ಕನಿಷ್ಠ 2-3 ಸಲ
ಎದುರಿಸಿದವನು. ‘ಕಲಿಯಲಾರದ ಕಲಿ’ಗಳ ಪೈಕಿಯವನು.

ಹರಸಾಹಸದಿಂದ ಪದವಿ ಪಡೆಯುವಷ್ಟರಲ್ಲಿ ಸಹಪಾಠಿಗಳಿಗಿಂತ ಒಂದೆರಡು ವರ್ಷ ಹಿಂದೆ ಬಿದ್ದವನು. ಇದು ಮೂರು ದಶಕಗಳ ಹಿಂದಿನ ಮಾತಾಯ್ತು. ಈಗ, ಅದೇ ಅಪ್ಪನ ಮಗಳು, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್. ಪಿಯುಸಿಯಲ್ಲೂ ರಾಜ್ಯಕ್ಕೆ 6ನೇ ರ‍್ಯಾಂಕ್(ಪಿಸಿಎಂಬಿ ನಾಲ್ಕೂ ಸಬ್ಜೆಕ್ಟ್‌ಗಳಲ್ಲಿ ನೂರಕ್ಕೆ ನೂರು
ಅಂಕ). ಸಿಇಟಿಯಲ್ಲಿ ರಾಜ್ಯಕ್ಕೆ 19ನೆಯ ರ‍್ಯಾಂಕ್.

ಎಂಬಿಬಿಎಸ್ ನಲ್ಲಿ ಚಿನ್ನದ ಪದಕದೊಂದಿಗೆ ಮೊದಲ ಸ್ಥಾನದಲ್ಲಿ ಉತ್ತೀರ್ಣಳಾಗಿ ಸ್ನಾತಕೋತ್ತರ ಶಿಕ್ಷಣಕ್ಕೆ ಅಡಿಯಿಟ್ಟಿದ್ದಾಳೆ! ಅದೇ ಅಪ್ಪನ ಮಗ, ಎಸ್ಸೆಸ್ಸೆಲ್ಸಿ ಯಲ್ಲಿ ರಾಜ್ಯಕ್ಕೆ 3ನೆಯ ರ‍್ಯಾಂಕ್. ಸಿಇಟಿಯಲ್ಲಿ ರಾಜ್ಯಕ್ಕೆ 10ನೆಯ ರ‍್ಯಾಂಕ್. ಕೆವಿಪಿವೈ, ಬಿಟ್ಸ್-ಪಿಲಾನಿ, ಎನ್ ಐಟಿಕೆ ಮುಂತಾದ ಪ್ರವೇಶ ಪರೀಕ್ಷೆಗಳಲ್ಲಿ ದಿಗ್ವಿಜಯ ಸಾಽಸಿ, ಐಐಟಿ-ಜೆಇಇ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿ, ದೆಹಲಿ ಐಐಟಿಯಲ್ಲಿ ಬಿ.ಟೆಕ್‌ಗೆ ಪ್ರವೇಶ ಪಡೆದು ಆಗಲೇ ಒಂದು ವರ್ಷ ವ್ಯಾಸಂಗ ಮುಗಿಸಿ ಭರದಿಂದ ಮುನ್ನಡೆಯುತ್ತಿದ್ದಾನೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ಆಗಲೇ ಒಂದು ಸ್ಟಾರ್ಟ್‌ಅಪ್ ಕಂಪನಿಯ ಟೆಕ್ನಿಕಲ್ ಟೀಮ್‌ನಲ್ಲಿದ್ದಾನೆ. ಪ್ರಪಂಚ ಮಟ್ಟದಲ್ಲಿ ಅತಿ ಬುದ್ಧಿವಂತರನ್ನು ಪರೀಕ್ಷಿಸಿ ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ‘ಮೆನ್ಸಾ’ ನಡೆಸಿದ ಪರೀಕ್ಷೆಯಲ್ಲಿ 99 ಪರ್ಸೆಂಟೈಲ್‌ಗಳಿಸಿ ವಿಶ್ವಮಾನ್ಯನಾಗಿದ್ದಾನೆ! ಇದೆಲ್ಲ ಅಮ್ಮನ ಪ್ರೋತ್ಸಾಹ ಮುತುವರ್ಜಿಗಳಿಂದ ಆಗಿದ್ದಿರಬಹುದು ಎಂದುಕೊಂಡಿರಾ? ಆಗಿದ್ದಿದ್ದರೆ ಚಂದವೇ ಇರುತ್ತಿತ್ತು, ಆದರೆ ಅಮ್ಮ ಇರುವುದು ಸ್ವರ್ಗದಲ್ಲಿ. ಅಲ್ಲಿಂದಲೇ ಹರಕೆ-ಹಾರೈಕೆ.

ಸರಿಸುಮಾರು ಪ್ರಾಥಮಿಕ ಶಾಲೆಯಲ್ಲಿದ್ದಾಗಿನ ಪ್ರಾಯದಿಂದಲೇ ಮಕ್ಕಳಿಬ್ಬರಿಗೂ ‘ನಾನೇ ತಾಯಿ ನಾನೇ ತಂದೆ ನಿಮ್ಮ ಪಾಲಿಗೆ, ನಾಳೆ ನೀವೇ ನಂದಾದೀಪ ಎನ್ನ ಬಾಳಿಗೆ’ ಎನ್ನುತ್ತ ಅಪ್ಪನದೇ ಆರೈಕೆ. ಮತ್ತೆ, ಅಪ್ಪ ಈಗಲೂ ‘ಪರಮ ದಡ್ಡ’ನಾಗಿಯೇ ಉಳಿದಿದ್ದಾನೆಯೇ? ಇಲ್ಲ. ಎರಡು ದಶಕಗಳ ಕಾಲ ಐಟಿ ಕಂಪನಿ ಗಳಿಗೆ ಮಣ್ಣು ಹೊತ್ತು ಈಗ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಿಜವಾಗಿಯೂ ಮಣ್ಣು ಹೊರುತ್ತ ಅಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಇನ್ನೊಬ್ಬ ಬಂಗಾರದ ಮನುಷ್ಯ ಆಗಿದ್ದಾನೆ! ಈ ಶ್ರಮಜೀವಿ ಅಪ್ಪ-ಮಕ್ಕಳ ಕಥೆಯನ್ನು ನಾನು ನಿಮಗೆ ಹೇಳಲೇಬೇಕು.

ಶಿವನಗೌಡ ಟಿ ಪಾಟೀಲ. 1987ರಿಂದ1990ರವರೆಗೆ ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುವಾಗ ಈತ ನನ್ನ ಸಹಪಾಠಿ. ನನ್ನದು ಕಂಪ್ಯೂಟರ್ ಸೈನ್ಸ್ ಬ್ರ್ಯಾಂಚ್, ಈತನದು ಇನ್ಸ್‌ಟ್ರುಮೆಂಟೇಶನ್ ಟೆಕ್ನಾಲಜಿ. ಆ ಕಾಲೇಜಿನಲ್ಲಿ ಆಗಷ್ಟೇ ಆರಂಭವಾಗಿದ್ದ ಬ್ರ್ಯಾಂಚ್‌ಗಳು. ಸರಿಯಾಗಿ ಲೆಕ್ಚರರ್‌ ಗಳಾಗಲೀ, ಲ್ಯಾಬೊರೆಟರಿಗಳಾಗಲೀ, ಲೈಬ್ರರಿಯಲ್ಲಿ ಪಠ್ಯಪುಸ್ತಕಗಳಾಗಲೀ ಇರಲಿಲ್ಲ. ನಾವೆಲ್ಲ ಅಲ್ಲಿ ಏಕಲವ್ಯನ ಮಾದರಿಯಲ್ಲಿ ವಿದ್ಯಾರ್ಜನೆ ಮಾಡಿದವರು.

ಹಾಗಾಗಿ ಮತ್ತೆಮತ್ತೆ ‘ಪರಮ ದಡ್ಡ’ ಎಂದು ಮೂದಲಿಸುವುದೂ ಸರಿಯಲ್ಲ. ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಈ ಆಸಾಮಿ ಭಾರಿ ಚುರುಕು. ಹಾಸ್ಟೆಲ್‌ನಲ್ಲಿ ಈತನ ಹಾಸ್ಯಚಟಾಕಿ ಗಳಿಂದ ಸದಾ ನಗು, ಕೇಕೆ, ಅಟ್ಟಹಾಸ. ಹೆಸರು ‘ಶಿವನಗೌಡ ಟಿ ಪಾಟೀಲ’ ಎಂದೆನಷ್ಟೆ? ಅದು ಕಾಲೇಜಿನ ದಾಖಲಾತಿ ರಿಜಿಸ್ಟರ್ ನಲ್ಲಿ ಮಾತ್ರ. ನಮಗೆಲ್ಲ ಈತ ಪರಿಚಿತನಾಗಿ ಆತ್ಮೀಯನಾದದ್ದು ‘ಕ್ಯಾತ’ ಎಂಬ ಹೆಸರಿನಿಂದಲೇ. ಕಾಲೇಜಲ್ಲಿ ಹಾಜರಿ ಕರೆಯುವಾಗಲೂ ಅದೇ ಹೆಸರಿತ್ತೇ ಎಂದು ತರ್ಕ ಎತ್ತಬೇಡಿ. ಲೆಕ್ಚರರ್‌ಗಳೇ ಇರಲಿಲ್ಲವೆಂದ ಮೇಲೆ ಕ್ಲಾಸಲ್ಲಿ ಹಾಜರಿ ಕರೆಯುವ ಮಾತೆಲ್ಲಿಂದ? ಇರಲಿ, ಕ್ಯಾತನ ಖ್ಯಾತನಾಮದ ಬಗ್ಗೆಯೇ ಒಂದು ಸತ್ಯಘಟನೆಯ ಜೋಕ್ ಕೂಡ ಇದೆ.

ಒಮ್ಮೆ ಹಾಸ್ಟೆಲಿಗೆ ಉತ್ತರ ಕರ್ನಾಟಕದಿಂದ ಒಬ್ಬ ವಯೋವೃದ್ಧರು ಬಂದಿದ್ದರು. ಮಾಸಲು ಪಂಚೆ, ಹರಿದ ಕೋಟಿನ ದುಸ್ತಿನಲ್ಲಿದ್ದರು. ‘ಶಿವನಗೌಡ ಪಾಟೀಲ
ಇದಾನೇನ್ರಪ್ಪಾ? ಭೆಟ್ಟಿಯಾಗ್ಬೇಕಿತ್ತು’ ಎಂದು, ಅಲ್ಲಿ ಪ್ರವೇಶ ದ್ವಾರದ ಮೆಟ್ಟಲುಗಳ ಮೇಲೆ ಕುಳಿತು ಸಂಜೆಹೊತ್ತು ಪಟ್ಟಾಂಗ ಹೊಡೆಯುತ್ತಿದ್ದ ಒಂದಿಷ್ಟು ಹುಡುಗರನ್ನು ಕೇಳಿದರು. ‘ಆ ಹೆಸರಿನ ಹುಡುಗನಾರೂ ಹಾಸ್ಟೆಲಲ್ಲಿ ಇಲ್ಲವಲ್ಲ!’ ಎಂದು ಬಿಟ್ಟೆವು. ಅಜ್ಜ ಅಷ್ಟಕ್ಕೇ ಬಿಡದೆ ‘ಇರದೇ ಎಲ್ಹೋಗ್ತಾನಪ್ಪ? ಈ ಹಾಸ್ಟೆಲ್‌ದೇ ವಿಳಾಸ ಕೊಟ್ಟಿದ್ದಾನೆ’ ಎಂದು ಬೇರೆ ಹುಡುಗರನ್ನೂ ಕೇಳತೊಡಗಿದರು.

‘ನೀವ್ಯಾರು?’ ಎಂದಿದ್ದಕ್ಕೆ ‘ಅವನ ಊರಿಂದ ಬಂದೀನಿ, ನೋಡ್ಕೊಂಡು ಹೋಗೋಣ ಎಂದು ಇಲ್ಲಿಗೆ ಬಂದೆ’ ಎಂದರು. ಯಾರಿಗೂ ಗೊತ್ತಾಗಲಿಲ್ಲ ಶಿವನಗೌಡ ಪಾಟೀಲ ಯಾರು ಅಂತ. ಆಮೇಲೆ ಸ್ವಲ್ಪ ಹೊತ್ತಿನಲ್ಲಿ ಎಲ್ಲೋ ಹೊರಗಡೆ ಹೋಗಿದ್ದ ಕ್ಯಾತನ ಆಗಮನವಾಯ್ತು. ಅವನನ್ನು ನೋಡುತ್ತಲೇ ಅಜ್ಜನ ಮುಖ ವರಳಿತು. ಕ್ಯಾತನ ಕಣ್ಣಲ್ಲೂ ಮಿಂಚು. ಅದಕ್ಕೆ ಕಾರಣವೂ ಇತ್ತು. ಈ ಅಜ್ಜ ದಾವಣಗೆರೆಗೆ ಏನೋ ಕೆಲ್ಸದ ಮೇಲೆ ಹೋಗೋವ್ರಿದ್ದಾರೆ ಎಂದು ತಿಳಿದ ಕ್ಯಾತನ ಅಪ್ಪ
ಒಂದಿಷ್ಟು ಪುಡಿಗಾಸು ಕಳಿಸಿಕೊಟ್ಟಿದ್ದರೆಂದು ಕಾಣುತ್ತದೆ (ಆ ಥರ ಮನಿಯಾರ್ಡರ್‌ನಲ್ಲೋ ಯಾರ ಮೂಲಕವಾದರೂ ಹತ್ತೈವತ್ತು ರುಪಾಯಿ ಬಂದರೆ ಆಗ ಅದೇ ನಮಗೆ ಕೊಪ್ಪರಿಗೆ.

ಪೋಸ್ಟ್‌ಮ್ಯಾನ್ ಯಾರಿಗಾದರೂ ಮನಿಆರ್ಡರ್‌ನ ಹಣ ಕೊಟ್ಟುಹೋದರೆ ಉಳಿದ ಹುಡುಗರು, ‘ಒಮ್ಮೆ ನೋಟನ್ನು ಕೈಯಿಂದ ಸವರಿಯಾದರೂ ಕೊಡ್ತೀನಪ್ಪಾ’ ಎಂದು ಹೇಳುತ್ತಿದ್ದದ್ದೂ ಇತ್ತು. ಎಲ್ಲರೂ ಬಡ-ಮಧ್ಯಮ ವರ್ಗದಿಂದ ಬಂದವರಾದ್ದರಿಂದ ಅಷ್ಟೂ ತತ್ವಾರ). ಅಂತೂ ನಮಗೆಲ್ಲ ಕ್ಯಾತನ ನಿಜನಾಮದರ್ಶನ ಆ ಘಟನೆಯಿಂದ. ಕ್ಯಾತನ ಊರು ಯಾವುದು ಎಂಬುದನ್ನೂ ಹೇಳಬೇಕು. ‘ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಿ ಹೊಟ್ಟೆ ಹೊರೆಯಲು ವಿದ್ಯೆಯೇನು ಬಳೆಯ ಮಲಾರವೇ?’ ಎಂದು ಗುರು ವೊಬ್ಬನಿಂದ ಮೂದಲಿಕೆಗೊಳಗಾಗಿದ್ದನಲ್ಲ ರನ್ನನೆಂಬ ಮಹಾ ಕವಿ? ರನ್ನನ ಮುಧೋಳವೇ ಕ್ಯಾತನ ಊರು ಕೂಡ. ಹಾಗಾಗಿ ಅದೇ ಟಿಪಿಕಲ್ ಉತ್ತರಕರ್ನಾಟಕದ ‘ಜವಾರಿ’ತನ, ಒರಟು ಶರೀರದೊಳಗೆ ಮುಗ್ಧ ಮನಸಿನ ಮೃದುತನ.

ಒಮ್ಮೆ ಕೆಆರ್‌ಇಸಿ ಸುರತ್ಕಲ್‌ನಿಂದ ವಿಸಿಟಿಂಗ್ ಪ್ರೊಫೆಸರ್‌ರೊಬ್ಬರು ಒಂದು ವಾರದ ಮಟ್ಟಿಗೆ ನಮಗೆ ಸ್ಪೆಷಲ್ ಕ್ಲಾಸಸ್ ತೆಗೆದುಕೊಳ್ಳಲಿಕ್ಕೆ ಬಂದಿದ್ದರು.
ದಾವಣಗೆರೆಯಲ್ಲಿ ಅವರ ವಾಸ್ತವ್ಯದ ಏರ್ಪಾಡಿನಲ್ಲಿ ಏನೋ ಕೊನೆಕ್ಷಣದಲ್ಲಿ ಅಡಚಣೆಯಾಗಿತ್ತು. ಆಗ ಅವರನ್ನು ಹಾಸ್ಟೆಲಿಗೆ ಕರೆದುಕೊಂಡು ಬಂದು ತನ್ನ
ರೂಮಿನಲ್ಲಿ ಉಳಿದುಕೊಳ್ಳುವಂತೆ ಹೇಳಿ, ತನ್ನ ಮಂಚ ಹಾಸಿಗೆ ಹೊದಿಕೆಯನ್ನು ಅವರಿಗೆ ಬಿಟ್ಟುಕೊಟ್ಟು ತಾನು ನೆಲದ ಮೇಲೆ ಮಲಗಿದ ಪುಣ್ಯಾತ್ಮ ನಮ್ಮ ಕ್ಯಾತ!

ಎಂಜಿನಿಯರಿಂಗ್ ಸಬ್ಜೆಕ್ಟುಗಳು ತಲೆಗೆ ಹತ್ತುತ್ತಿರಲಿಲ್ಲವಾಗಿ, ಕಂಪ್ಯೂಟರ್ ಪ್ರೊಗ್ರಾಮಿಂಗ್‌ನಲ್ಲಿ ಪದೇಪದೇ ಫೇಲ್ ಆಗಿ, ನಮ್ಮ ಕ್ಲಾಸಿನ ಕೇಶವಮೂರ್ತಿಯಿಂದ
ಪಾಠ ಹೇಳಿಸಿಕೊಂಡು ಕೊನೆಗೂ ಉತ್ತೀರ್ಣನಾದ ವಿಧೇಯ ಹುಡುಗ. ಆದರೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲೆಲ್ಲ ಪಾರಿತೋಷಕಗಳನ್ನು ಬಾಚುವಲ್ಲಿ ಕ್ಯಾತ ವಿಖ್ಯಾತ. ಈಗ ಬಿಜೆಪಿಯ ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಎಲ್.ಸಂತೋಷ್, ಇನೋಸಿಸ್‌ನಲ್ಲಿ ಉನ್ನತ ಹುದ್ದೆಗಳಲ್ಲಿ ದಶಕಗಳ ಕಾಲ
ಸೇವೆ ಸಲ್ಲಿಸಿ ಈಗ ಸ್ವಂತ ಕಂಪನಿ ಸ್ಥಾಪಿಸಿರುವ ವಿಷ್ಣು ಭಟ್, ಹೈದರಾ ಬಾದ್‌ನಲ್ಲಿ ಒಳ್ಳೆಯದೊಂದು ಉದ್ಯೋಗದಲ್ಲಿರುವ ಶ್ರೀನಾಥ್ ಕೆ.ವಿ, ‘ಅಕ್ಕ’ ಸಂಸ್ಥೆ
ನಡೆಸಿದ ಜಾಗತಿಕ ಮಟ್ಟದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸಂಪನ್ನ ಮುತಾಲಿಕ್, ಹಾಗೆಯೇ ಬಸನಗೌಡ ಬಿರಾದಾರ್, ಟಿಪ್ಪು ಸುಲ್ತಾನ್-
ಹೀಗೆ ಕೆಲ ಅದ್ಭುತ ಪ್ರತಿಭೆಗಳು ನಮ್ಮ ಬ್ಯಾಚ್‌ನಲ್ಲಿದ್ದವರು.

ವಿವಿ ಮಟ್ಟದಲ್ಲಿ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಿಡಿಟಿ ಕಾಲೇಜಿಗೆ ಸತತವಾಗಿ ಟ್ರೋಫಿ ತಂದುಕೊಡುತ್ತಿದ್ದವರು. ‘ಹೊಡೀ ಚಣ್‌ಛಣಾ ತಾಳ ಥೈಯ ಥಕ ಧೂಊಊ ಊಊಂ!’ ಎನ್ನುತ್ತ ಬಿಡಿಟಿ ಕೀರ್ತಿಪತಾಕೆಯನ್ನು ಮುಗಿಲೆತ್ತ ರಕ್ಕೇರಿಸಿದವರು. ಕ್ಯಾತ ಆ ತಂಡದ ಪ್ರಮುಖ ಮತ್ತು ಅವಿಭಾಜ್ಯ ಅಂಗ.
ಇಂತಿರುವ ಕ್ಯಾತನನ್ನು ನಾನು ಎಂಜಿನಿಯರಿಂಗ್ ಆದಮೇಲೆ ಮುಖತಃ ಭೇಟಿಯಾದದ್ದಿಲ್ಲ. ಐದಾರು ವರ್ಷಗಳ ಹಿಂದೆ ನಮ್ಮ ಬ್ಯಾಚ್‌ನವರು ಸಿಲ್ವರ್‌ಜುಬಿಲಿ ರಿ-ಯೂನಿಯನ್‌ನಲ್ಲಿ ಸೇರಿದ್ದರಾದರೂ ನನಗೆ ಯಾವುದೋ ಕಾರಣದಿಂದಾಗಿ ಹೋಗಲಿಕ್ಕಾ ಗಿರಲಿಲ್ಲ. ಆದ್ದರಿಂದ ವಾಟ್ಸಪ್ ಗ್ರೂಪಲ್ಲಷ್ಟೇ ಸ್ನೇಹಸಂಪರ್ಕ.

ಕ್ಯಾತ ತನ್ನ ಕೃಷಿ ಫಾರ್ಮ್‌ನಲ್ಲಿ ಬೆಳೆದ ಗುಲಾಬಿ ಮತ್ತಿತರ ಹೂವುಗಳ, ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಚಿತ್ರಗಳನ್ನು ಆಗಾಗ ಹಾಕುತ್ತಿರುತ್ತಾನೆ. ಮಕ್ಕಳ ಶೈಕ್ಷಣಿಕ ಸಾಧನೆಗಳ ಸಮಾಚಾರ ತಿಳಿಸುತ್ತಿರುತ್ತಾನೆ. ಕಳೆವ ವರ್ಷ ಕೋವಿಡ್ ಮೊದಲ ಅಲೆಯ ವೇಳೆ ಆಗಿನ್ನೂ ಮೆಡಿಕಲ್ ಇಂಟರ್ನ್‌ಶಿಪ್ ಮಾಡುತ್ತಿ
ರುವಾಗಲೇ ಪಿಪಿಇ ದಿರಿಸು ಧರಿಸಿ ಕರೋನಾ ವಾರಿಯರ್ ಆಗಿ ಸೇವೆಗೆ ಧುಮುಕಿದ್ದ ಮಗಳ ಚಿತ್ರವನ್ನು ಗ್ರೂಪಲ್ಲಿ ಹಂಚಿಕೊಂಡಾಗ ನಾವೆಲ್ಲ ಅವಳ ಬಗ್ಗೆಯೂ, ಕ್ಯಾತನ ಬಗ್ಗೆಯೂ ತುಂಬ ಹೆಮ್ಮೆಪಟ್ಟುಕೊಂಡೆವು. ಆಗಿನಿಂದಲೂ ಕ್ಯಾತನ ಕಥೆಯನ್ನು ತಿಳಿರುತೋರಣವಾಗಿ ಕಟ್ಟಬೇಕು ಎಂದು ನನ್ನ ಮನಸ್ಸಲ್ಲಿ ಸುಳಿಯು ತ್ತಿತ್ತು. ಯಾಕೋ ಕೂಡಿಬಂದಿರಲಿಲ್ಲ.

ಕಳೆದ ಭಾನುವಾರ ಎಪಾಯಿಂಟ್‌ಮೆಂಟ್ ಪಡೆದುಕೊಂಡು ಎಂಬಂತೆ ಕ್ಯಾತನೊಂದಿಗೆ ವಾಟ್ಸಪ್ ಕರೆಯಲ್ಲಿ ಮಾತನಾಡಿದೆ. ಬಿಡಿಟಿಯಿಂದ ಹೊರಬಿದ್ದ ದಿನದಿಂದ ಈಗಿನವರೆಗಿನ ಘಟನಾವಳಿಯನ್ನೆಲ್ಲ ಕೇಳಿಸಿಕೊಂಡೆ. ಆವತ್ತು ಕ್ಯಾತನ ಮಗನೂ ದಿಲ್ಲಿಯಲ್ಲಿರದೆ ಬೆಂಗಳೂರಲ್ಲಿ ಅವರ ಮನೆಯಲ್ಲೇ ಇದ್ದನು, ಅವನದೂ ಒಂದು
ದೂರವಾಣಿ ಸಂದರ್ಶನ ಮಾಡಿದೆ. ಆ ಎಲ್ಲ ಮಾತುಕತೆಯ ಕೆಲವು ಮುಖ್ಯಾಂಶಗಳು ಇಲ್ಲಿ ನಿಮಗಾಗಿ: ಹರಸಾಹಸದಿಂದ 1991ರಲ್ಲಿ ಎಂಜಿನಿಯರಿಂಗ್ ಮುಗಿಸಿದ ಕ್ಯಾತ ಅದೇ ವರ್ಷ ಪುಣೆಯ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ.

ಏಳು ವರ್ಷ ಅಲ್ಲಿದ್ದ. ಆಗಲೇ ಐಐಎಂನಿಂದ ಎಂಬಿಎ ಸಹ ಮಾಡಿಕೊಂಡ. ಆಮೇಲೆ ಸಿಂಗಾಪುರ ಮೂಲದ ಕಂಪನಿಯೊಂದರಲ್ಲಿ ದೆಹಲಿ ಮತ್ತು ಬೆಂಗಳೂರು ಆಫೀಸ್‌ಗಳಲ್ಲಿ ಕೆಲಸ ಮಾಡಿದ. 2000ದಲ್ಲಿ ಮತ್ತೊಂದು ಕಂಪನಿಗೆ ಸೇರಿಕೊಂಡು ಬೆಂಗಳೂರಿನಲ್ಲೇ 15 ವರ್ಷ ದುಡಿದ. 1995ರಲ್ಲಿ ಅನಿತಾ ಎಂಬುವಳನ್ನು ಮದುವೆಯಾದ. ಮೂಲತಃ ಮುಧೋಳದವಳೇ ಆದ ಆಕೆಯೂ ಎಂಜಿನಿಯರಿಂಗ್ ಓದಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಳು. ವಿದೇಶಗಳಿಗೆ ಎಸೈನ್‌ಮೆಂಟ್ ಮೇಲೆ ಒಂದೆರಡು ಸರ್ತಿ ಹೋದದ್ದೂ ಉಂಟು.

1997ರಲ್ಲಿ ಮಗಳು ಕಾವ್ಯಾಳ ಜನನ. 2002ರಲ್ಲಿ ಮಗ ದೀಪಿತ್ ಹುಟ್ಟಿದನು. ೨೦೧೨ರ ಅಕ್ಟೋಬರ್‌ನಲ್ಲೊಂದು ದಿನ ವಿಧಿಯ ಕರಾಳ ಸಂಚು. ಆಫೀಸ್‌ ನಿಂದ ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದು ಮನೆಗೆಲಸವನ್ನೆಲ್ಲ ಮುಗಿಸಿ ಮಲಗಿದ ಅನಿತಾಗೆ ಇದ್ದಕ್ಕಿದ್ದಂತೆ ಏನೋ ಸಂಕಟ ಚಳಿಜ್ವರ ಶುರುವಾಯ್ತು. ಹತ್ತಿರದಲ್ಲೇ ಇದ್ದ ವೈದ್ಯರನ್ನು ಕರೆದು ಉಪಚಾರದ ಪ್ರಯತ್ನ ಮಾಡಲಾಯಿತಾದರೂ ಫಲಿಸಲಿಲ್ಲ. ಅದೇನೋ ಮೆದುಳು ಹಠಾತ್ತನೆ ನಿಷ್ಕ್ರಿಯವಾಗುವ ಬಲು ಅಪರೂಪದ ಕೇಸ್ ಅಂತೆ. ಅನಿತಾ ಅಸುನೀಗಿದರು.

ಪುಟ್ಟ ಮಕ್ಕಳಿಬ್ಬರಿಗೆ ತಾಯಿಯೂ ತಂದೆಯೂ ಆಗಬೇಕಾಯ್ತು ಕ್ಯಾತ. ಆಮೇಲೆ ಊರಿನಿಂದ ಅವನ ಅಮ್ಮ ಬಂದು ಅವರ ಜತೆಯಲ್ಲೇ ಇರುವುದೆಂದಾಯ್ತು.
ಮಕ್ಕಳು ಅಜ್ಜಿಯಲ್ಲೇ ಅಮ್ಮನನ್ನೂ ಕಂಡರೇನೊ. ಸ್ವಲ್ಪವೂ ಧೃತಿಗೆಡದೆ ಶಾಲಾಚಟುವಟಿಕೆಗಳನ್ನು ಮುಂದುವರಿಸಿದರು. ಓದಿನಲ್ಲಿ ಸದಾ ಮುಂದು. ಪರೀಕ್ಷೆ ಗಳಲ್ಲಿ ಶಾಲೆಗೆ ಪ್ರಥಮಸ್ಥಾನ. ಕಾವ್ಯಾ ಬೆಳೆದು ದೊಡ್ಡವಳಾದಳು. 2020ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಪದವಿ ಪ್ರದಾನ ಸಮಾರಂಭದ ದಿನ ಗೌನು, ಟೋಪಿ ಧರಿಸಿ ಕೊರಳಲ್ಲಿ ಚಿನ್ನದ ಪದಕ ಹಾಕಿಸಿಕೊಂಡು ಅಪ್ಪ ಮತ್ತು ತಮ್ಮನ ಜತೆ ಫೋಟೊಕ್ಕೆ ಪೋಸ್ ಕೊಟ್ಟು ನಿಲ್ಲುವವರೆಗೂ ಬೆಳೆದಳು. ಎಲ್ಲವೂ ಸ್ವಪ್ರಯತ್ನದಿಂದ, ಪ್ರಾಮಾಣಿಕ ಪರಿಶ್ರಮದಿಂದ, ಸ್ವರ್ಗದಲ್ಲಿರುವ ಅಮ್ಮನ ಆಶೀರ್ವಾದದಿಂದ.

ಈ ಮಧ್ಯೆ 2015ರಲ್ಲಿ ಐಟಿ ಕಂಪನಿಯ ಉದ್ಯೋಗಕ್ಕೆ ತಿಲಾಂಜಲಿಯಿತ್ತ ಕ್ಯಾತ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದ ಬಳಿ 15 ಎಕರೆ
ಜಮೀನು ಖರೀದಿ ಮಾಡಿ ಕೃಷಿಕಾಯಕಕ್ಕೆ ಹೆಜ್ಜೆಯಿಟ್ಟನು. ಸಾವಯವ ಕೃಷಿ ಪದ್ಧತಿ ಅನುಸರಿಸಿ ಮೊದಲಿಗೆ ‘ಮಲ್ಲಿಕಾ’ ತಳಿಯ ಮಾವು ಮತ್ತು ವಿದೇಶದಿಂದ ಬೀಜ ತರಿಸಿ ಸ್ವಾದಿಷ್ಟ ಕರಬೂಜ ಬೆಳೆಸಿದನು. ಇಂಟರ್‌ನೆಟ್ ಮತ್ತು ಸೋಶಿಯಲ್ ಮೀಡಿಯಾದ ಸಮರ್ಥ ಬಳಕೆ ಮಾಡಿ ತನ್ನ ಕೃಷಿ ಉತ್ಪನ್ನಗಳಿಗೆ ತಾನೇ ಮಾರುಕಟ್ಟೆ ಕಂಡುಕೊಂಡನು.

‘ಟೆಕಿ ಕೃಷಿಕನ ಮಾರುಕಟ್ಟೆ ಜಾಣತನ’ ಎಂದು 2016ರಲ್ಲೇ ಕ್ಯಾತನ ಬಗ್ಗೆ ಪ್ರಜಾವಾಣಿಯಲ್ಲೊಂದು ಲೇಖನವೂ ಪ್ರಕಟವಾಯ್ತು. ಸ್ಥಳೀಯವಾಗಿಯಷ್ಟೇ ಅಲ್ಲದೆ ಮಲೇಷ್ಯಾ, ದುಬೈ, ಹಾಂಕಾಂಗ್ ಮುಂತಾದೆಡೆಗೂ ಮಾವು ರಫ್ತು. ಆಮೇಲೆ ಒಂದೆರಡು ವರ್ಷ ತನ್ನ ಕೃಷಿ ಫಾರ್ಮ್ ಅನ್ನು ಗುಲಾಬಿ ಹೂವುಗಳ ತಳಿ ಅಭಿವೃದ್ಧಿಗೆ ಬಳಸಿಕೊಂಡನು. ದೇಶದಲ್ಲೇ ಪ್ರಥಮ ಮತ್ತು ಏಕೈಕ ಯೋಜನೆ ಅದು. ಕ್ಯಾತ ಬೆಳೆಸಿದ ಹೂವುಗಳು ವಿಮಾನವೇರಿ ವಿದೇಶಗಳಿಗೆ ಹೋದವು. ಕೋವಿಡ್
ಕರಾಳತೆಯಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾದಾಗ ದೊಣ್ಣೆಮೆಣಸು, ಕೋಸುಗೆಡ್ಡೆ, ಕ್ಯಾರೆಟ್, ಟೊಮ್ಯಾಟೊ ಮುಂತಾಗಿ ತರಕಾರಿ ಬೆಳೆ ಆರಂಭಿಸಿ ಅದಕ್ಕೂ ಮಾರುಕಟ್ಟೆ ಕಂಡುಕೊಂಡನು.

ವಹಿವಾಟಿಗೆಲ್ಲ ತಂತ್ರeನದ ಬಳಕೆ. ದಲ್ಲಾಳಿಗಳಿಗೆ ಪ್ರವೇಶವಿಲ್ಲ. ನೇರವಾಗಿ ಗ್ರಾಹಕರಿಗೇ ಉತ್ಪನ್ನಗಳ ಪೂರೈಕೆ. ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂಬುದನ್ನು ಬರಿ ಮಾತಿನಲ್ಲಲ್ಲ, ಕೃತಿಯಲ್ಲಿ ಮಾಡಿ ತೋರಿಸಿದ ಛಲವಂತ ನಮ್ಮ ಕ್ಯಾತ. ಕ್ಯಾತನ ಮಗ ದೀಪಿತ್‌ನದು ಟೆಕ್ನಾಲಜಿಯ ಕೃಷಿ. ಬಾಲ್ಯದಿಂದಲೂ ತಂತ್ರeನದ ಬಗ್ಗೆ ವಿಶೇಷ ಒಲವು. ಅಮ್ಮ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ‘ಬೆಳಗಿಂದ ಸಂಜೆವರೆಗೆ ಆಫೀಸ್‌ನಲ್ಲಿ ಕೆಲಸ ಮಾಡಿ ಮನೆಗೆ ಬಂದು ಅಡುಗೆ ಮತ್ತಿತರ
ಮನೆಕೆಲಸಗಳಲ್ಲಿ ತೊಡಗಿಸಿಕೊಂಡು ಅವಿಶ್ರಾಂತ ದುಡಿಯುವ ಅಮ್ಮ ನನಗೆ ರೋಲ್‌ಮಾಡೆಲ್’ ಎನ್ನುತ್ತಾನೆ ದೀಪಿತ್.

ಮೂರನೆಯ ಕ್ಲಾಸಲ್ಲಿರುವಾಗಲೇ ಕಂಪ್ಯೂಟರ್ ಪ್ರೊಗ್ರಾಮಿಂಗ್ ಮಾಡುವಷ್ಟು ಪ್ರಾವೀಣ್ಯ ಗಳಿಸಿದ, ನಾಲ್ಕನೆಯ ಕ್ಲಾಸಲ್ಲಿರುವಾಗ ತಂತ್ರeನದ ಯುಟ್ಯೂಬ್ ವಿಡಿಯೊಗಳನ್ನು ಮಾಡಿದ, ಮೇಧಾವಿ ಪೋರನಿವ. ಒಂಬತ್ತನೆಯ ತರಗತಿ ಮುಗಿಸಿ ಬೇಸಗೆ ರಜೆಯಲ್ಲಿ ಒಂದು ವಾರ ಅನ್ನಾಹಾರ ನಿದ್ದೆ ಬಿಟ್ಟು ಎಂಬಂತೆ ಕುಳಿತುಕೊಂಡು ಒಂದು ಆಪ್ ಅಭಿವೃದ್ಧಿಪಡಿಸಿ ಗೂಗಲ್ ಪ್ಲೇ ಸ್ಟೋರ್‌ಗೇರಿಸಿಟ್ಟಿದ್ದ. ಅದು, ಕಾಮಿಕ್ ಅಥವಾ ವಿಡಿಯೊ ರೂಪದಲ್ಲಿರುವ ಸಾಹಸಕಥೆಗಳನ್ನು
ಟೆಕ್ಸ್ಟ್ ರೂಪದಲ್ಲಿ ಓದಲಿಕ್ಕಾಗುವಂತೆ ಮಾಡುವ ಆಪ್.

ಅಬ್ಬಬ್ಬಾ ಅಂದ್ರೆ ಹತ್ತಿಪ್ಪತ್ತು ಮಂದಿ ಡೌನ್‌ಲೋಡ್ ಮಾಡಿಕೊಂಡಾರು ಎಂದು ಆತ ಅಂದುಕೊಂಡಿದ್ದರೆ 70000ಕ್ಕಿಂತಲೂ ಹೆಚ್ಚು ಡೌನ್‌ಲೋಡ್ಸ್ ಆದವು! ಐಐಟಿಯಲ್ಲೇ ಬಿ.ಟೆಕ್ ಮಾಡುವವನು ಎಂದು ಪಣತೊಟ್ಟು ಅದಕ್ಕೆ ಬೇಕಾದ ಸಿದ್ಧತೆಗಾಗಿ ‘ಬೇಸ್’ ಶಿಕ್ಷಣಸಂಸ್ಥೆ ಸೇರಿ, ಟಿವಿ-ಮೊಬೈಲ್ ಫೋನ್ ಇತ್ಯಾದಿ
ಯನ್ನೆಲ್ಲ ಕಟ್ಟುನಿಟ್ಟಾಗಿ ತ್ಯಜಿಸಿ ಏಕಾಗ್ರತೆಯಿಂದ ಅಭ್ಯಾಸ ಮಾಡಿ, ಗುರಿ ಸಾಧಿಸಿದ ಪ್ರಚಂಡ ಬಾಲಕ ದೀಪಿತ್. ಅದಕ್ಕೆ ತಕ್ಕಂತೆ ಆತ ಬೆಳೆಸಿಕೊಂಡ ಸ್ನೇಹವರ್ಗವೂ ಹಾಗೆಯೇ. ಒಬ್ಬರಿಗಿಂತ ಒಬ್ಬರು ಚುರುಕು, ಕುಶಾಗ್ರಮತಿಗಳು. ಸುದರ್ಶನ್ ಎಂಬುವರೊಬ್ಬ ತರಬೇತುದಾರರ ಮಾರ್ಗದರ್ಶನವನ್ನೂ
ದೀಪಿತ್ ಮನಸಾರೆ ಸ್ಮರಿಸುತ್ತಾನೆ.

ದೆಹಲಿ ಐಐಟಿಗೆ ಪ್ರವೇಶ ದೊರೆತಾಗ ಸುದರ್ಶನ್ ಬರೆದಿದ್ದ ಮೆಚ್ಚುಗೆಯ ಮಾತುಗಳನ್ನು ಕ್ಯಾತ ವಾಟ್ಸಪ್‌ನಲ್ಲಿ ನಮಗೆಲ್ಲರಿಗೂ ತೋರಿಸಿದ್ದ. ದೀಪಿತ್
ಎಂಥ ಪ್ರಖರ ಪ್ರತಿಭೆ ಎಂಬುದು ಅದರ ಅಕ್ಷರ ಅಕ್ಷರದಲ್ಲೂ ಗೊತ್ತಾಗುತ್ತಿತ್ತು. ಹಾಗಂತ ದೀಪಿತ್ ಒಬ್ಬ ‘ಕುಡುಮಿ’ ಅಲ್ಲ. ಹವ್ಯಾಸಗಳೇನು ಎಂದು ಕೇಳಿದ್ದಕ್ಕೆ ‘ಫಾರ್ಮುಲಾ 1’ ಕಾರ್ ರೇಸ್ ಬಗೆಗೆ ದೊಡ್ಡ ಭಾಷಣವನ್ನೇ ಬಿಗಿದ! ಅದರಲ್ಲೊಮ್ಮೆ ಪಾಲ್ಗೊಳ್ಳುವ ಆಸೆ ಅವನದು. ಅಮೆರಿಕದ ಹೈಟೆಕ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಬೇಕೆಂಬ ಕನಸಿದೆಯೇ ಎಂದು ಕೇಳಿದ್ದಕ್ಕೆ ದೀಪಿತ್ ಏನೆಂದ ಗೊತ್ತೇ? ‘ವಿದೇಶಕ್ಕೆ ಹೋಗಿ ದುಡಿಯುವುದು ನನಗೆ ಇಷ್ಟವಿಲ್ಲ.

ನಾನು ಹಾರ್ವರ್ಡ್‌ನ ಸ್ಟಾರ್ಟ್‌ಅಪ್ ಕಂಪನಿಗೆ ಸೇರಿದ್ದು ಹಣಗಳಿಕೆಗೆ ಅಲ್ಲ. ಸ್ಟಾರ್ಟ್‌ಅಪ್ ಅಂದ್ರೆ ಹೇಗಿರುತ್ತೆ, ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಕಲಿತು ಕೊಳ್ಳುವುದಕ್ಕಷ್ಟೇ. ಆ ಅರಿವನ್ನು ಬಳಸಿಕೊಂಡು ನಮ್ಮ ಭಾರತದಲ್ಲೇ ನಾನೇ ಒಂದು ಸ್ಟಾರ್ಟ್‌ಅಪ್ ಕಂಪನಿ ಮಾಡಬೇಕೆಂದಿದ್ದೇನೆ.’ ವಾಹ್‌ರೆವಾಹ್! ನಿಜವಾಗಿಯೂ ದೀಪಿತ್‌ನನ್ನು(ಮತ್ತು ಇಂಥ ದೀಪಜ್ಯೋತಿಗಳನ್ನು) ತರಬೇಕು ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಪರಿಽಯೊಳಗೆ. ಶ್ರಮ ಏವ ಜಯತೇ ಮಂತ್ರದ ಸಾಕ್ಷಾತ್ಕಾರವಾಗುವುದಕ್ಕೆ.

ಇನ್ನೊಂದು ವಿಷಯ ಮರೆತೆ. ಕ್ಯಾತನ ಮಗಳು ಕಾವ್ಯಾ ಕಳೆದ ವರ್ಷವೇ ಕರೋನಾ ವಾರಿಯರ್ ವೈದ್ಯೆಯಾಗಿ ಸೇವೆ ಸಲ್ಲಿಸಿದಳು ಎಂದೆನಷ್ಟೆ? ಕ್ಯಾತನ ಮಗ ದೀಪಿತ್ ಈ ವರ್ಷ ದೆಹಲಿ ಐಐಟಿಯಿಂದ ಅಭಿವೃದ್ಧಿಪಡಿಸಲಾದ ‘ಕೋವಿಡ್ ರಿಸೋರ್ಸಸ್ ಟ್ರ್ಯಾಕಿಂಗ್ ವೆಬ್‌ಸೈಟ್’ನ ನಿರ್ಮಾಣ ತಂಡದ ಸದಸ್ಯರಲ್ಲೊಬ್ಬ! ದೇಶ ನನಗೇನು ಕೊಡುತ್ತದೆ ಎಂದು ಬಾಯ್ದೆರೆದು ಕಾಯುವ ಮಾನಗೇಡಿಗಳೆಲ್ಲಿ, ದೇಶಕ್ಕೆ ನಾನೇನು ಕೊಡಬಲ್ಲೆ ಎಂದು ತುದಿಗಾಲಲ್ಲಿ ನಿಲ್ಲುವ ಈ ಕ್ಯಾತ-ಕುಡಿಗಳೆಲ್ಲಿ! ಇವರಿಗೊಂದು ಚಪ್ಪಾಳೆ ಇರಲಿ ನಮ್ಮೆಲ್ಲರಿಂದಲೂ.