Saturday, 23rd November 2024

ಎಣ್ಣೆ ದುಬಾರಿ ಅಂತ ಕುಡಿತ ಬಿಟ್ರೆ- ಸಿದ್ದರಾಮರಾಜ್ಯ

ತುಂಟರಗಾಳಿ

ಸಿನಿಗನ್ನಡ

ಟಿವಿ ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೈಕ್ ಮುಂದೆ ‘ಸೂಪರ್, ೧೦೦ ಡೇಸ್ ಗ್ಯಾರಂಟಿ’ ಎನ್ನುವ ಮೊದಲ ದಿನದ ಪ್ರೇಕ್ಷಕರು ಭಾರಿ ಕಿಲಾಡಿಗಳು ಎಂಬುದು ಮತ್ತೆ ಮತ್ತೆ ಪ್ರೂವ್ ಆಗ್ತಾನೇ ಇದೆ. ಚಿತ್ರದ ಮೊದಲ ದಿನ, ಸಾಮಾನ್ಯ ವಾಗಿ ಸಿನಿಮಾ ನೋಡಿ ಹೊರ ಬಂದವರು, ದೃಶ್ಯ ಮಾಧ್ಯಮದ ವರು ಕೇಳುವ ‘ಹೇಗಿದೆ ಸಿನಿಮಾ’ ಎಂಬ ಪ್ರಶ್ನೆಗೆ, ಸುಮ್ಮನೆ ಚೆನ್ನಾಗಿದೆ, ಚೆನ್ನಾಗಿದೆ ಅಂದ್ರೆ, ಮತ್ತೆ ‘ಏನ್ ಚೆನ್ನಾಗಿದೆ’ ಅಂತ ಕೇಳ್ತಾರೆ, ಅದಕ್ಕೆ ಇವ್ರ್ ಸಾವಾಸನೇ ಬೇಡ ಅಂತ ಮಾತೆತ್ತಿದ ತಕ್ಷಣ, ‘ಸೂಪರ್, ೧೦೦ ಡೇಸ್ ಗ್ಯಾರಂಟಿ, ಇದು ಇನ್ನೊಂದು ಮುಂಗಾರುಮಳೆ ಆಗುತ್ತೆ’ ಅಂತ ಹೇಳಿ ಅದೃಶ್ಯರಾಗ್ತಾರೆ.

ಸಿನಿಮಾದವರು ಜನರನ್ನ ಯಾಮಾರಿಸ್ತಾರೆ ಅಂತಾರೆ. ಆದರೆ ಇದನ್ನೆ ನೋಡಿದರೆ ಪ್ರೇಕ್ಷಕರೇ ಸಿನಿಮಾ ದವರನ್ನೇ ಯಾಮಾರಿಸ್ತಾರೆ ಎನಿಸಬಹುದು. ಇತ್ತೀಚೆಗೆ ಹಲವು ಚಿತ್ರಗಳಿಗೆ ಹೀಗಾಗುತ್ತಿದೆ. ಅದ್ಭುತ, ೧೦೦ ಡೇಸ್ ಗ್ಯಾರಂಟಿ ಅಂತ ಮೈಕ್ ಮುಂದೆ ಇಷ್ಟು ಹೇಳಿ ತಮ್ಮ ಎರಡು ಮಾತು ಮುಗಿಸಿದ ಪ್ರೇಕ್ಷಕರು ಮೆಟ್ಟಿಲು
ಇಳಿಯುತ್ತಿದ್ದಂತೆ ಹೇಳಿದ್ದು, ಅವ್ನಜ್ಜಿ, ತಲೆಬುಡ ಒಂದೂ ಅರ್ಥ ಆಗಲ್ಲ. ಗುರೂ, ಕ್ಲೈಮ್ಯಾPನಲ್ಲೂ ಅದೇನ್ ಹೇಳ್ತಾನೋ ಅನ್ನೋದು ಅವನಿಗೇ ಗೊತ್ತು ಅಂತ ಕೆಂಡ ಕಾರುತ್ತಿದ್ದರು. ಸಿನಿಮಾ ಪೂರ್ತಿ ಏನೇನನ್ನೋ ಹೇಳಿ ಕೊನೆಯಲ್ಲಿ ಬರೀ ಮೆಸೇಜ್ ಕೊಡುವ ಸಿನಿಮಾಗಳ ಧಾಟಿ ಯಾವ ಕಾಲದ ಹಳೆಯದಾಗಿದೆ. ಇದು ಪ್ರೇಕ್ಷಕನ ಪಾಲಿಗೆ ‘ಲೇಟ್’ ಡೆಲಿವರಿ’ ಎನಿಸುವುದರಿಂದಲೋ ಏನೋ ಅದು ಅರ್ಥವಾಗದ ಪ್ರೇಕ್ಷಕರಿಂದ ಬೈಗುಳ ಫ್ರೀ ಎನ್ನುವ ಪರಿಸ್ಥಿತಿ.

ಅದೇನೇ ಇರಲಿ, ಫೇಸ್ಬುಕ್ನಲ್ಲಿ ಪೋಸ್ಟ್‌ಗಳನ್ನು ಓದದೇ ಲೈಕ್ ಮಾಡುವ ಸ್ನೇಹಿತರ ಮತ್ತು ಮೈಕ್ ಮುಂದೆ ಪ್ರೇಕ್ಷಕರು ಆಡುವ ಇಂಥ ಮುತ್ತಿನಂಥ ಮಾತುಗಳನ್ನು ನಂಬಿಕೊಂಡರೆ, ಮಾಧ್ಯಮಗಳ ವಿಮರ್ಶೆಗಳಲ್ಲಿ ಕೊಡುವ ಮೂರೂವರೆ ಸ್ಟಾರುಗಳನ್ನೇ, ಮೂರೂವರೆ ವಜ್ರಗಳು ಎಂದುಕೊಂಡರೆ ಸಿನಿಮಾ ಮಾಡಿದವರಿಗೆ ನಿಜವಾದ ರಿಪೋರ್ಟ್ ಸಿಗುವುದಂತೂ ಸಾಧ್ಯವಿಲ್ಲ.

ಲೂಸ್ ಟಾಕ್
ಕರ್ನಾಟಕದ ಕುಡುಕ (ಕಾಲ್ಪನಿಕ ಸಂದರ್ಶನ)
ಏನ್ರೀ, ನಮ್ ಚೀ- ಮಿನಿಸ್ಟರು ಎಣ್ಣೆ ರೇಟ್ ಜಾಸ್ತಿ ಮಾಡ್ ಬಿಟ್ಟಿದಾರೆ, ಇನ್ನೇಲೆ ನಿಮ್ಮಂಥವರು ಬದುಕೋದಾದ್ರೂ ಹೆಂಗೆ?
-ಎಣ್ಣೆ ರೇಟು ಜಾಸ್ತಿ ಆಗಿ, ಕುಡುಕರ ವ್ಯಾಲ್ಯೂ ಜಾಸ್ತಿ ಆಗಿದೆ ಅಂದ್ಕೊಂಡ್ರಾಯ್ತು ಬಿಡಿ. ಎಣ್ಣೆ ಏಟು ಇನ್ನೂ ಜಾಸ್ತಿ ಆಗುತ್ತೆ.

ಆದರೂ ಬಿಯರ್ ರೇಟೂ ಜಾಸ್ತಿ ಆಗಿದೆ. ಇದು ನಿಮ್ಮ ದೈನಂದಿನ ಕಾರ್ಯಕ್ರಮದ ಮೇಲೆ ಯಾವ ರೀತಿ ಪರಿಣಾಮ ‘ಬೀರ’ಬಹುದು ಅಂತೀರಾ?

-ಅಯ್ಯೋ, ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಂತ ಕೇಳಿಲ್ವಾ, ಎಣ್ಣೆ ರೇಟು ಜಾಸ್ತಿ ಆದ್ರೆ ಹೆಂಡ್ತಿ ಮಕ್ಳು ಇನ್ನೊಂದೆರಡ್ ದಿನ ಜಾಸ್ತಿ
ಉಪವಾಸ ಇರಬೇಕಾಯ್ತದೆ ಅಷ್ಟೆ, ಕುಡುಕರಿಗೇನೂ ಪ್ರಾಬ್ಲಂ ಇಲ್ಲ.

ಆದ್ರೂ, ನಿಮ್ಮ ಜೀವದ್ರವದ ರೇಟು ಜಾಸ್ತಿ ಮಾಡಿದ ಚೀಫ್ ‘ಮಿನಿಸ್ಟರ್’ ಅವರ ಈ ಕ್ರಮದ ಹಿಂದೆ, ಯಾವ ಘನವಾದ ಉದ್ದೇಶ ಇರಬಹುದು ಅಂತ
ನಿಮ್ಮ ಅನಿಸಿಕೆ?
-ಎನೂ ಫ್ರೀ ಆಗಿ ಕೊಟ್ರೆ ‘ಚೀಪ್’ ಮಿನಿಸ್ಟರ್ ಆಗ್ಬಿಡ್ತೀನಿ, ಆಲ್ಕೋಹಾಲ್ ರೇಟ್ನಾದ್ರೂ ಜಾಸ್ತಿ ಮಾಡೋಣ ಅನ್ನೋ ಆಲೋಚನೆ ಇರಬಹುದು.

ಅದೇನೋ ಸರಿ, ಕುಡಿಯೋಕ್ ಮುಂಚೆನೇ ಉಚ್ಚೆ ಹೊಯ್ಕೋಬೇಕು ಅನಿಸುವಷ್ಟು ಯಾಕ್ ರೇಟ್ ಜಾಸ್ತಿ ಮಾಡಿದ್ರಿ ಅಂತ ಚೀಫ್ ಮಿನಿಸ್ಟರ್‌ಗೇ ಒಂದ್ ಫೋನ್ ಮಾಡಿ ಕೇಳ್ಬಹುದಾ? 
-ಅವರತ್ರ ಮಾತಾಡಾಣ ಅಂತನೇ, ನಿನ್ನೆ ರಾತ್ರಿ ಟೈಟ್ ಆಗುವಷ್ಟು ಕುಡಿದು ಅಡ್ತಾ ಫೋನ್ ಮಾಡಿದ್ದೆ, ಆ ಕಡೆಯಿಂದ ‘ಯುವರ್ “ಬ್ಯಾಲೆ” ಈಸ್ ಟೂ ಲೋ, ಟು ಮೇಕ್ ಎ ಕಾಲ’ ಅಂತ ಬಂತು.

ಹೋಗಿ, ನೀವ್ಯಾಕೆ ಈ ಕುಡಿಯೋ ಚಟನೇ ಬಿಟ್ಬಿಟ್ಟು, ಈ ದರ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡಬಾರದು?
-ರೀ, ಹಂಗೆ ಮಾಡಿದ್ರೆ, ಅಂತೂ ನಮ್ಮದು ಸಿದ್ದ‘ರಾಮರಾಜ್ಯ’ ಆಯ್ತು ಅಂತ ಖುಷಿ ಪಟ್ಕೋತಾರೆ, ಸುಮ್ನಿರಿ

ನೆಟ್ ಪಿಕ್ಸ್
ಖೇಮುಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಂಗಾಗಿ ಗೆಳೆಯರ ಜೊತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂಥ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಸೋಮು ಜತೆಗೆ ಮೊದಲ ಬಾರಿ ಜಂಗಲ್ ಸಫಾರಿ ಹೊರಟಿದ್ದ. ಸೋಮು ಸ್ವಲ್ಪ ದಡ್ಡ. ಜೊತೆಗೆ, ಸ್ಲೋ ಕೂಡ ಆಗಿದ್ರಿಂದ, ಖೇಮು ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೋಮುವನ್ನು ಕರ್ಕೊಂಡು ಹೊರಟ. ಇಬ್ಬರೂ ಜಂಗಲ್ ಸಫಾರಿ ಹೊರಟ್ರು.

ಹೋಗುವಾಗ, ಖೇಮು, ನಾನು ಮುಂದೆ ಹೋಗ್ತೀನಿ, ನಂಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ ಅಂತ ಹೇಳಿದ. ಸರಿ ಅಂತ ಇಬ್ಬರೂ ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ. ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ, ಖೇಮುಗೆ ಇದ್ದಕ್ಕಿದ್ದಂತೆ ಸೈಡಿನ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದಿದ್ದು ಕಾಣಿಸಿತು. ಕೂಡಲೇ, ಚಿರತೆ, ‘ಓಡು’ ಅಂತ ಕೂಗಿ ಓಡಿ ತಪ್ಪಿಸಿಕೊಂಡ ಖೇಮು. ಆದರೆ ಸೋಮು ಮಾತ್ರ ಅ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಖೇಮು ವಾಪಸ್ ಬಂದು ತನ್ನ ಬಳಿ ಇದ್ದ ದೊಡ್ಡ ಕುಡುಗೋಲು ತೋರಿಸಿ ಚಿರತೆಯನ್ನು ಹೇಗೋ ಹೆದರಿಸಿ ಓಡಿಸಿದ. ಆಮೇಲೆ ಸೋಮು ಕಡೆ ನೋಡಿ, ‘ನಿಂಗೇನ್ ಬುದ್ಧಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ ನೀನ್ಯಾಕೆ ಇ ನಿಂತಿದ್ದೆ, ಚಿರತೆ
ಬಂದಿದ್ದು ಕಾಣಿಸಲಿಲ್ವಾ ನಿಂಗೆ?’ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ ‘ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ಚಿರತೆ, “ಓಡು” ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ ಅಂದ್ಕೊಂಡು ಸುಮ್ನೆ ಇದ್ದೆ’.

ಲೈನ್ ಮ್ಯಾನ್
ಎಣ್ಣೆ ರೇಟು ಜಾಸ್ತಿ ಮಾಡಿದ್ದಕ್ಕೆ ಕುಡುಕರ ರಿಯಾಕ್ಷನ್
-ಸಿದ್ದರಾಮನ ‘ಹುಂಡಿ’ಗೆ ದುಡ್ಡು ಹಾಕಿದ್ವಿ ಅಂತ ಸಮಾಧಾನ ಮಾಡ್ಕೊತೀವಿ ಬಿಡಿ.

‘ಹಾಲಕೋಡಾ’ ಅನ್ನೋ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ 

-ಊರ ಹೆಸರು ಸರಿ ಇಲ್ಲ, ಅದು ಹಾಕೋ ‘ಲೋಡಾ’ ಆಗಬೇಕಿತ್ತು ಅಲ್ವಾ?

ಲೆಜೆಂಡರೀ ಡೆಂಟಿ ಜೀವನ ಚರಿತ್ರೆ
-‘ದಂತ’ಕಥೆ

ಫಿಲಾಸಫಿ
-ನಾನೇನೂ ಅವನಷ್ಟು ದೊಡ್ಡ ತಪ್ಪು ಮಾಡಿಲ್ಲ ಅಂತ ನಮ್ಮನ್ನ ನಾವು ಸಮರ್ಥನೆ ಮಾಡಿಕೊಳ್ಳೋದು ತಪ್ಪು. ಯಾಕಂದ್ರೆ ದುಡ್ ಕದ್ರೂ ಕಳ್ಳಾನೇ,
ಬ್ರೆಡ್ ಕದ್ರೂ ಕಳ್ಳಾನೇ.

ಜೋಕ್ ಹೇಳುವುದಕ್ಕಿಂತ ದೊಡ್ಡಕಷ್ಟ ಯಾವುದು?
-ಅದನ್ನ ಎಕ್ಸ್ ಪ್ಲೈನ್ ಮಾಡೋದು

ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
ಗಾಂಜಾ ಗಿರಾಕಿ- ನಾವ್ ಅದಕ್ಕೆ ‘ಸೊಪ್ಪು’ ಹಾಕಲ್ಲ

ಬಿಜೆಪಿಯವರ ಬಗ್ಗೆ ವಿರೋಧ ಪಕ್ಷದವರು ಏನಂತ ಟೀಕೆ ಮಾಡ್ತಾರೆ? 
-ಇವ್ರಿಗೆ ಬರೋದು ಎರಡೇ. ದೇವರ ಹೆಸರಲ್ಲಿ ಭಜನೆ, ಧರ್ಮದ ಹೆಸರಲ್ಲಿ ವಿಭಜನೆ

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ವರ್ಲ್ಡ್ ಬ್ಯಾಂಕ್ ನಿಂದ ಕೋಟಿಗಟ್ಟಲೆ ಸಾಲ ತಗೊಂಡರೂ ಅದು ಬರೀ..
-‘ಕೈ’ ಸಾಲ

ದುಡಿಮೆಯ ಗಾದೆ
ಕಾಯಕವೇ ಕೈಲಾಸ
ಕಾಯಕ ಇಲ್ಲದಿದ್ರೆ ಕೈಸಾಲ
ಕೆಲವು ದೆವ್ವದ ಸಿನಿಮಾಗಳ ರೀ ರೆಕಾರ್ಡಿಂಗ್ ನೋಡಿದಾಗ ಅನ್ನಿಸೋದು
-ಇದೇನು ಹಾರ್ರ‍ ಸಿನಿಮಾನಾ ಇ, ಸಿನಿಮಾನಾ?