Saturday, 14th December 2024

ಜನನಾಯಕರ ಕ್ಷೇತ್ರಾಂತರ ಇದೇ ಮೊದಲಲ್ಲ !

ಅಶ್ವತ್ಥಕಟ್ಟೆ

ranjith.hoskere@gmail.com

ಈ ಬಾರಿಯೂ ಎರಡೆರೆಡು ಕ್ಷೇತ್ರದಿಂದ ಸ್ಪರ್ಧಿಸಿ ಕನಿಷ್ಠ ಒಂದು ಕ್ಷೇತ್ರದಲ್ಲಿಯಾದರೂ ಗೆಲ್ಲುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಅವರ ಆಪ್ತರು ಹಾಕಿಕೊಂಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ‘ಒಬ್ಬರಿಗೆ ಒಂದೇ ಕ್ಷೇತ್ರ’ ಎನ್ನುವ ಮೂಲಕ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗ ಎಲ್ಲ ರಾಜಕೀಯ ಪಕ್ಷಗಳು, ನಾಯಕರು, ಆಕಾಂಕ್ಷಿಗಳು ಚುನಾ ವಣೆಗೆ ವೇದಿಕೆ ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ. ಟಿಕೆಟ್ ಸಿಗುವುದು ಪಕ್ಕಾ ಮಾಡಿಕೊಂಡಿರುವವರು ಕ್ಷೇತ್ರದಲ್ಲಿ ಈಗಾಗಲೇ ‘ಕಾರ್ಯಚರಣೆ’ ಆರಂಭಿಸಿದ್ದರೆ, ಆಕಾಂಕ್ಷಿಗಳು ಟಿಕೆಟ್‌ಗಾಗಿ ನಾಯಕರ ಮನೆಯಿಂದ ಮನೆಗೆ ಓಡಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಭಾರಿ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ಮುಂದಿನ ಚುನಾವಣೆಯಲ್ಲಿ ‘ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ?’ ಎನ್ನುವುದಾಗಿದೆ.

ಈ ವಿಷಯ ಕಾಂಗ್ರೆಸ್‌ನೊಳಗಿನ ಮಾತ್ರ ಚರ್ಚೆಯಾಗಿ ಉಳಿಯದೇ ‘ಸರ್ವಪಕ್ಷ’ಗಳ ಚರ್ಚೆಯಾಗಿ, ಸಿದ್ದರಾಮಯ್ಯನವರ ಕ್ಷೇತ್ರದ ಮೇಲೆ ಇತರ ಪಕ್ಷಗಳ ಟಿಕೆಟ್ ಹಂಚಿಕೆಯಾಗುವ ಹಂತಕ್ಕೆ ಬಂದು ನಿಂತಿದೆ. ಯಾವುದೇ ಒಬ್ಬ ಮಾಸ್ ಲೀಡರ್ ಕ್ಷೇತ್ರ ಬದಲಾವಣೆ ಮಾಡಲು ಹೊರಟರೆ ಈ ರೀತಿಯ ಹವಾ ಸೃಷ್ಟಿ ಯಾಗುವುದು ಸರ್ವೆ ಸಾಮಾನ್ಯ. ೨೦೧೮ರ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಯೊಂದಿಗೆ ಬದಾಮಿಯಲ್ಲಿ ಸ್ಪರ್ಧಿಸಿದಾಗಲೂ ಇದೇ ರೀತಿಯ ‘ಅಲೆ’ ಸೃಷ್ಟಿಯಾಗಿತ್ತು.

ಇದೀಗ ಪುನಃ ಬದಾಮಿಯಿಂದ ಸ್ಪರ್ಧಿಸದೇ ಮತ್ತೊಂದು ಕ್ಷೇತ್ರವನ್ನು ಹುಡುಕಾಡಲು ಶುರು ಮಾಡಿದ್ದರಿಂದ ಅದೇ ರೀತಿಯ
ಗೊಂದಲ ಶುರುವಾಗಿದೆ. ಆದರೆ ಇಡೀ ರಾಜ್ಯದಲ್ಲಿ ಟ್ರೆಂಡ್ ಒಂದನ್ನು ಸೃಷ್ಟಿಸಲು ಸಾಧ್ಯವಿರುವ ನಾಯಕನಿಗೆ ಒಂದು ಕ್ಷೇತ್ರ ಸಿಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಕಾಂಗ್ರೆಸ್ ಅನ್ನು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಬರುವ, ಒಮ್ಮೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಚುನಾವಣಾ ಚಿತ್ರಣವೇ ಬದಲಾಗುತ್ತದೆ ಎನ್ನುವ ಮಾತಿರುವಾಗ ಸಿದ್ದರಾ ಮಯ್ಯ ಅವರು ಎಲ್ಲಿಂದ ನಿಂತರೂ ಗೆಲ್ಲಬಹುದಲ್ಲವೇ ಎನ್ನುವುದು ಸಾರ್ವಜನಿಕರ ವಾದ.

ಆದರೆ ಇಂದು ಸಿದ್ದರಾಮಯ್ಯ ಎದುರಿಸುತ್ತಿರುವ ‘ಸವಾಲ’ನ್ನು ಎದುರಿಸುತ್ತಿರುವುದು ಅವರೊಬ್ಬರೇ ಅಲ್ಲ. ಈ ಹಿಂದೆ ರಾಜ್ಯ ರಾಜಕೀಯವನ್ನು ‘ಆಳಿದ’ ಹಲವು ನಾಯಕರಿಗೆ ಈ ರೀತಿಯ ಕ್ಷೇತ್ರ ಪರ್ಯಟನೆಯ ಸಮಸ್ಯೆ ಎದುರಾಗಿದೆ. ಹಾಗೇ ನೋಡಿ ದರೆ ಈ ರೀತಿ ಕ್ಷೇತ್ರದ ಹುಡುಕಾಟವನ್ನು ಆರಂಭಿಸಿದ್ದು 1962ರಲ್ಲಿ ರಾಜ್ಯಕಂಡ ಅದ್ಭುತ ನಾಯಕ  ಎಸ್.ನಿಜಲಿಂಗಪ್ಪ. ಹೊಸದುರ್ಗದಿಂದ ಸ್ಪರ್ಧಿಸಿದ್ದ ಅವರು ಅಲ್ಲಿಂದ ಸೋತ ಬಳಿಕ, ಅವಿಭಜಿತ ಬಿಜಾಪುರ ಜಿಲ್ಲೆಗೆ ವಲಸೆ ಹೋಗಿ ಉಪಚುನಾವಣೆ ಯಲ್ಲಿ ಗೆಲುವನ್ನು ಕಂಡರು.

ಇದಾದ ಬಳಿಕ ಈ ರೀತಿಯ ಸಾಹಸಕ್ಕೆ ಕೈಹಾಕಿದ್ದು, ರಾಜ್ಯದ ಕಂಡ ಅತ್ಯುತ್ತಮ ಮುಖ್ಯಮಂತ್ರಿ, ಕಾಂಗ್ರೆಸೇತ್ತರ ಮೊದಲ
ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು. ಸಿದ್ದಾಪುರದಲ್ಲಿ ಜನಿಸಿ, ಅಲ್ಲಿಂದ ಬಾಗಲಕೋಟೆ ಜಿಲ್ಲೆ ಹೋಗಿ, ಬಳಿಕ ದೇವೇಗೌಡ ‘ಬೆಂಬಲ’ದೊಂದಿಗೆ ಕನಕಪುರಕ್ಕೆ ಬಂದು ಗೆದ್ದ ಅವರು 1983ರಲ್ಲಿ ಬೆಂಗಳೂರಿನ ಬವಸನಗುಡಿ ಮೂಲಕ ಗೆದ್ದು ಮುಖ್ಯ ಮಂತ್ರಿಯಾಗಿದ್ದರು.

ಉತ್ತರ ಕರ್ನಾಟಕದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದ ಹೆಗಡೆ, ಬ್ರಾಹ್ಮಣರಾಗಿದ್ದರೂ ‘ಲಿಂಗಾಯತ’ ಸಮುದಾಯದ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿದ್ದರು. ಉತ್ತರ ಕರ್ನಾಟಕದಲ್ಲಿ ಜನತಾದಳ ಅರಳಲು ಕಾರಣೀಭೂತರಾದರೂ, ತಮ್ಮ ಕ್ಷೇತ್ರದ ಆಯ್ಕೆಯ ವಿಷಯ ಬಂದಾಗ ಮಾತ್ರ ಹರಸಾಹಸವನ್ನೇ ಪಡಬೇಕಾಗಿದ್ದು ಇತಿಹಾಸ. ಆ ಬಳಿಕ ನೋಡುವು ದಾದರೆ, ‘ಎಲೈಟ್ ರಾಜಕಾರಣಿ’ ಯಾಗಿಯೇ ಗುರುತಿಸಿಕೊಂಡು, ಕಾಂಗ್ರೆಸ್‌ನ ಥಿಂಕ್ ಟ್ಯಾಂಕ್ ಎನಿಸಿಕೊಂಡಿದ್ದ ಎಸ್.ಎಂ. ಕೃಷ್ಣ ಅವರು ತಮ್ಮ ಕ್ಷೇತ್ರವನ್ನು ಬದಲಾಯಿಸಿದ್ದು ೨೦೦೪ರಲ್ಲಿ.

ಇತರ ನಾಯಕರಿಗೆ ಹೋಲಿಸಿದರೆ ‘ಮಾಸ್ ಲೀಡರ್’ ಎನಿಸಿಕೊಳ್ಳದಿದ್ದರೂ, ತಮ್ಮ ಫಾರ್ಮಲ್ ಲುಕ್‌ನಿಂದಲೇ ಹಲವು ಸುಶಿಕ್ಷಿತರಿಗೆ ಹತ್ತಿರವಾದ, ಬೆಂಗಳೂರನ್ನು ಐಟಿ ಹಬ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಾಂಚಜನ್ಯ ರಥಯಾತ್ರೆಯ
ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದ ಅವರು, ತಮ್ಮ ಕ್ಷೇತ್ರವನ್ನು ಮಾತ್ರ ಮದ್ದೂರಿ ನಿಂದ ಚಾಮರಾಜಪೇಟೆಗೆ ಶಿಫ್ಟ್ ಮಾಡಿಕೊಳ್ಳ ಬೇಕಾದ ಅನಿವಾರ್ಯ ಸೃಷ್ಟಿಸಿಕೊಂಡಿದ್ದರು.

ಈ ನಾಯಕರನ್ನು ಹೊರತುಪಡಿಸಿ ಅನೇಕರು ತಮ್ಮ ಕ್ಷೇತ್ರಗಳನ್ನು ಅಲ್ಲಲ್ಲಿಯೇ ಬದಲಾಯಿಸಿಕೊಂಡಿದ್ದಾರೆಯೇ ಹೊರತು, ಈ ರೀತಿ ಮೂಲೆಯಿಂದ ಮೂಲೆಗೆ ಹೋಗುವ ಅಥವಾ ‘ಆಡಳಿತ ವಿರೋಽ’ ಅಲೆಯಿಂದ ತಪ್ಪಿಸಿಕೊಳ್ಳಲು ಅಥವಾ ರಾಜ್ಯಾದ್ಯಂತ ಪ್ರವಾಸ ಮಾಡಬೇಕು ಎನ್ನುವ ಕಾರಣಕ್ಕೆ ‘ಸೇ- ಕ್ಷೇತ್ರ’ಕ್ಕಾಗಿ ಬದಲಾವಣೆ ಮಾಡಿಕೊಂಡಿಲ್ಲ. ಹಾಗೇ ನೋಡಿದರೆ, ರಾಜ್ಯದ ಅತ್ಯಂತ ಪ್ರಭಾವಿ, ಈಗಲೂ ಜನಮಾನಸದಲ್ಲಿರುವ ಮುಖ್ಯಮಂತ್ರಿಯಾಗಿರುವ ದೇವರಾಜ ಅರಸು ಅವರು 1978ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇ ಇಲ್ಲ.

1978ರಲ್ಲಿ ದೇವರಾಜ ಅರಸು, ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶದಿಂದ, ಹಣಸೂರಿನಿಂದ ಸ್ಪಽಸಲಿಲ್ಲ. ತಮ್ಮ ಆಪ್ತರನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ರಾಜ್ಯದಲ್ಲಿ ತಮ್ಮದೇ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಅವರಿಗೆ ರಾಜೀನಾಮೆ ಕೊಡಿಸಿ ಪುನಃ ಅಲ್ಲಿಂದ ನಿಂತು ಗೆದ್ದು ಮುಖ್ಯಮಂತ್ರಿಯಾಗಿದ್ದರು. ಹೀಗೆ ರಾಜ್ಯ ಕಂಡಿರುವ ಹಲವು ಮಾಸ್ ಲೀಡರ್‌ಗಳು ಈ ರೀತಿ ಕ್ಷೇತ್ರ ಬದಲಾವಣೆಯ ಸಾಹಸಕ್ಕೆ ಕೈಹಾಕಿದ್ದಾರೆ. ಆದರೆ ಕೆಲವರು ಯಶಸ್ವಿಯಾಗಿದ್ದರೆ, ಇನ್ನು ಕೆಲವರು ಆ ಬದಲಾವಣೆಯಿಂದಲೇ ಸೋತು ಸೊರಗಿದ್ದಾರೆ. ಉದಾಹರಣೆಗೆ 2019ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು , ತುಮಕೂರಿನಿಂದ ಸ್ಪರ್ಧಿಸಿ ದ್ದರು.

ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದರೂ, ಅವರಿಗೆ ತುಮಕೂರಿನ ಜನ ಮತ ಹಾಕದೇ ‘ಸೋಲಿನ ರುಚಿ’ಯನ್ನು ತೋರಿಸಿ ದರು. ಆ ಮೂಲಕ ಅದೇ ಅವರ ಕೊನೆಯ ಲೋಕಸಭಾ ಚುನಾವಣೆಯೂ ಆಯಿತು(ಮುಂದಿನ ಚುನಾವಣೆಯಲ್ಲಿ ನಿಲ್ಲುವು ದಿಲ್ಲ ಎನ್ನುವ ವಿಶ್ವಾಸದೊಂದಿಗೆ ಈ ಮಾತು). ಇದೀಗ ಈ ಮಾಸ್ ಲೀಡರ್‌ಗಳ ಮಾದರಿಯಲ್ಲಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಬದಾಮಿ, ಅಲ್ಲಿಂದ ಪುನಃ ಇದೀಗ ಕೋಲಾರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಮುಂದಾಗಿ ದ್ದಾರೆ. ಈ ಚುನಾವಣೆಯೇ ತನ್ನ ಕೊನೆಯ ಚುನಾವಣೆ ಎಂದು ಈಗಾಗಲೇ ಸಿದ್ದರಾಮಯ್ಯ ಅವರು ಘೋಷಿಸಿರು ವುದರಿಂದ, ಮುಖ್ಯಮಂತ್ರಿಯಾಗುವುದಕ್ಕೂ ಇದು ಕೊನೆಯ ಅವಕಾಶ.

ಒಂದೆಡೆ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಸುತ್ತಾಡುವ ಜತೆಜತೆಗೆ ತಮ್ಮ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಸಿದ್ದರಾಮಯ್ಯ ಅವರಿಗೆ ‘ಮಾಸ್’ ವ್ಯಕ್ವಿತ್ವ ಇರುವುದು ಸತ್ಯ. ಆದರೆ ಸ್ಥಳೀಯ ಮಟ್ಟ ದಲ್ಲಿ ಈ ಮಾಸ್ ಲುಕ್ ಕೆಲವೊಮ್ಮೆ ವರ್ಕ್‌ಔಟ್ ಆಗುವುದಿಲ್ಲ ಎನ್ನುವ ಆತಂಕದಲ್ಲಿ ಸಿದ್ದರಾಮಯ್ಯ ಅವರ ಆಪ್ತರಿದ್ದಾರೆ.

ಇದೇ ಕಾರಣಕ್ಕಾಗಿ ಚಾಮುಂಡೇಶ್ವರಿಯಲ್ಲಿ ಕಳೆದ ಬಾರಿ ಸೋತಿದ್ದರು. ಹಾಗೇ ನೋಡಿದರೆ ಬದಾಮಿಯಲ್ಲಿನ ಗೆಲವು
ಸಹ ‘ಕಷ್ಟ’ಪಟ್ಟುಕೊಂಡೇ ಗೆದ್ದಿದ್ದರು. ಆದ್ದರಿಂದ ಇದೀಗ ಕೋಲಾರದಲ್ಲಿ ಯಾವ ರೀತಿಯಲ್ಲಿ ಚುನಾವಣೆ ನಡೆಯಬಹುದು ಎನ್ನುವ ಆತಂಕ ಕಾಡುತ್ತಿದೆ.

ಕಳೆದ ಬಾರಿಯ ರೀತಿಯಲ್ಲಿಯೇ ಈ ಬಾರಿಯೂ ಎರಡೆರೆಡು ಕ್ಷೇತ್ರದಿಂದ ಸ್ಪರ್ಧಿಸಿ ಕನಿಷ್ಠ ಒಂದು ಕ್ಷೇತ್ರದಲ್ಲಿಯಾದರೂ ಗೆಲ್ಲುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಅವರ ಆಪ್ತರು ಹಾಕಿಕೊಂಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ‘ಒಬ್ಬರಿಗೆ ಒಂದೇ ಕ್ಷೇತ್ರ’ ಎನ್ನುವ ಮೂಲಕ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಡಿಕೆಶಿ ಅವರು ಈ ರೀತಿಯ ಹೇಳಿಕೆ ನೀಡಿದ್ದು ಸಿದ್ದರಾಮಯ್ಯ ಅವರನ್ನು ಗಮನದಲ್ಲಿರಿಸಿಕೊಂಡೇ ಎನ್ನಲಾಗುತ್ತಿದೆ. ಮುಂದಿನ ಬಾರಿ ಕಾಂಗ್ರೆಸ್ಸೆನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯ ಹುದ್ದೆಯ ಮೇಲೆ ಕೂರಬೇಕು ಎಂದು ಡಿಕೆ ಹಾಗೂ ಸಿದ್ದು ಇಬ್ಬರೂ ತಂತ್ರ ಹೂಡಿದ್ದಾರೆ.

ಆದ್ದರಿಂದ ಎರಡು ಕ್ಷೇತ್ರಗಳನ್ನು ನೀಡಿ, ಸಿದ್ದರಾಮಯ್ಯ ಅವರಿಗೆ ‘ಹೆಚ್ಚುವರಿ’ ಮೈಲೇಜ್ ನೀಡಲು ಸಿದ್ಧರಿಲ್ಲ. ಇದರೊಂದಿಗೆ ಸಿದ್ದಮಯ್ಯ ಅವರು ಕ್ಷೇತ್ರಕ್ಕೆ ಮಾತ್ರ ಸೀಮಿತವಾದರೆ, ಮತಗಳು ಬರುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೇ, ಇಡೀ ರಾಜ್ಯ ಸುತ್ತಬೇಕು ಎನ್ನುವುದು ಬಹುತೇಕರ ಅಭಿಪ್ರಾಯ. ‘ಮಾಸ್ ಲೀಡರ್’ ಪಟ್ಟ ಪಡೆದುಕೊಂಡಿರುವ ಅನೇಕ ನಾಯಕರು ತಮಗೆ ಸೇ- ಎನಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಥವಾ ಇರುವ ಕ್ಷೇತ್ರವನ್ನು ಕಾಪಿಟ್ಟುಕೊಳ್ಳುವಲ್ಲಿ ಎಡವಿರುವುದಕ್ಕೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅನೇಕ ಉದಾಹರಣೆಗಳಿವೆ. ಇದೀಗ ಸಿದ್ದರಾಮಯ್ಯ ಅವರೂ ಇಂತಹದ್ದೇ ‘ಸಂದಿಗ್ಧ’ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೋ ಅಥವಾ ತಮ್ಮ ಕೊನೆಯ ಕ್ಷೇತ್ರವನ್ನು ಭದ್ರಗೊಳಿಸಿಕೊಳ್ಳುವುದೋ ಎನ್ನುವ ಗೊಂದಲ ಮುಂದುವರಿದಿದೆ. ಮನೆ ದೇವರು ಹೇಳಿರುವಂತೆ ‘ಎರಡು ಕ್ಷೇತ್ರ’ದಲ್ಲಿ ನಿಲ್ಲುವರೋ ಅಥವಾ ತಮ್ಮ ವರ್ಚಸ್ಸಿನ ಹಾಗೂ ಆಪ್ತರ ಬಗ್ಗೆಯಿರುವ ವಿಶ್ವಾಸದೊಂದಿಗೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗುವರೋ ಎನ್ನುವುದನ್ನು ಮುಂದಿನ ದಿನದಲ್ಲಿ ಕಾದು ನೋಡಬೇಕಿದೆ.