Saturday, 14th December 2024

ದೇವರು, ಪೂಜೆ, ಹೋಮ-ಹವನ, ಪುಣ್ಯ, ಸಿದ್ದರಾಮಯ್ಯ ಇತ್ಯಾದಿ..

ನೂರೆಂಟು ವಿಶ್ವ

vbhat@me.com

ಬಹಳಷ್ಟು ರಾಜಕಾರಣಿಗಳು ‘ನನ್ನನ್ನು ಮುಖ್ಯಮಂತ್ರಿ ಮಾಡು’ ಎಂದು ಭಗವಂತನಲ್ಲಿ ಪರಿಪರಿಯಾಗಿ ಬೇಡಿಕೊಂಡರು, ದೇವರು ಮೆಚ್ಚುವ ಎಲ್ಲ ಧಾರ್ಮಿಕ ಕೈಂಕರ್ಯಗಳನ್ನೂ ನೆರವೇರಿಸಿದರು. ಆದರೆ ಅವರಾರೂ ಸಿಎಂ ಆಗಲಿಲ್ಲ. ಆದರೆ ಸಿದ್ದರಾಮಯ್ಯ ಯಾವ ದೇವರ ಮೊರೆಹೋಗಲಿಲ್ಲ. ಎಲ್ಲೂ ಮುಳುಗು ಹಾಕಲಿಲ್ಲ. ಆದರೂ ಎರಡನೇ ಸಲ ಮುಖ್ಯಮಂತ್ರಿ ಆದರು. ಏನಿದರ ಹಕೀಕತ್ತು ?

ಮೊನ್ನೆ ಮುಗಿದ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಇರುವಾಗ, ಯಾವ್ಯಾವ ಪಕ್ಷಗಳ ನಾಯಕರು ಯಾವ ಯಾವ ದೇವಸ್ಥಾನಗಳಿಗೆ (ಟೆಂಪಲ್ ರನ್), ಮಠ-ಮಾನ್ಯಗಳಿಗೆ ಹೋಗಿಬಂದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಪ್ರಾಯಶಃ ಆ ಅವಧಿಯಲ್ಲಿ ಜ್ಯೋತಿಷಿಗಳು, ಮಠಾಧೀಶರು, ಅವಧೂತರು, ಪವಾಡ ಪುರುಷರು ಎಂದು ಕರೆಯಿಸಿಕೊಂಡವರನ್ನೆಲ್ಲ ಬಹುತೇಕ ರಾಜಕಾರಣಿಗಳು ಭೇಟಿ ಮಾಡಿದ್ದನ್ನು, ಆಶೀರ್ವಾದ ಪಡೆದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ.

ಇವರೆಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಮಾಡಿಸಿದ್ದನ್ನೂ ನೋಡಿದ್ದೇವೆ. ನಮ್ಮ ರಾಜ್ಯವೊಂದೇ ಅಲ್ಲ, ವೈಷ್ಣೋದೇವಿ, ಕೇರಳ, ಅಜ್ಮೀರ್ ದರ್ಗಾಗಳಿಗೆ ಅವೆಷ್ಟೋ ರಾಜಕಾರಣಿಗಳು ಹೋಗಿ ಬಂದರು. ಬೆಂಗಳೂರಿನ ರಾಜಕಾರಣಿಯೊಬ್ಬರು ಕೇರಳಕ್ಕೆ ಹೋಗಿ ದೇವರ ಹೆಸರನ್ನು ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಬಂದರು. ಇನ್ನೊಬ್ಬರು ತಮ್ಮ ರಾಜಕೀಯ ವಿರೋಧಿಯ ಹೆಸರನ್ನು ಕಾಲಿನ ಮೇಲೆ ಬರೆಯಿಸಿಕೊಂಡು ಬಂದರು. ಬೆಂಗಳೂರಿನ ಮತ್ತೊಬ್ಬ ನಾಯಕರು ತಮ್ಮ ಕ್ಷೇತ್ರದಲ್ಲಿ ೧೦೮ ಕಡೆಗಳಲ್ಲಿ ಕುದುರೆ ಮೂತ್ರವನ್ನು ಸಿಂಪಡಿಸಿ, ಅಲ್ಲಿ ತಮ್ಮ ಪಕ್ಷದ ಬೆಳ್ಳಿಯ ಚುನಾವಣೆ ಚಿಹ್ನೆಯನ್ನು ನೆಟ್ಟು ಬಂದರು.

‘ಮುಂದಿನ ತೊಂಬತ್ತು ದಿನ ಹೆಣ್ಣಿನ ಸಹವಾಸ ಮಾಡಬಾರದು’ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದನ್ನೇ ಕೇಳಿ, ಬೇರೆ ಮನೆ ಮಾಡಿ ಒಬ್ಬಂಟಿಯಾಗಿ ಮಲಗಿದರು. ತಿಪ್ಪರ ಲಾಗ ಹಾಕು ಎಂದು ಹೇಳಿದ ಜ್ಯೋತಿಷಿಯ ಮಾತನ್ನು ಶಿರಸಾವಹಿಸಿ ಪಾಲಿಸಿದರು. ಚಾಮರಾಜನಗರದ ವಾಮಾಚಾರಿಯೊಬ್ಬ ತುಮಕೂರಿನ ರಾಜಕಾರಣಿಯೊಬ್ಬರನ್ನು ನಲವತ್ತೈದು ದಿನ ತನ್ನ ಮನೆಯಲ್ಲಿಟ್ಟುಕೊಂಡು ಶತ್ರುಸಂಹಾರ ಯಜ್ಞ ಮಾಡಿಸಿದ. ಕೇರಳದ ತಂತ್ರಿಯೊಬ್ಬರನ್ನು ಭೇಟಿಮಾಡಿದ ಬಿಟಿಎಂ ಲೇಔಟ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೊಬ್ಬರು ಬರೋಬ್ಬರಿ ಹತ್ತು ಲಕ್ಷ ರುಪಾಯಿ ಬೋಳಿಸಿ ಕೊಂಡು ಬಂದರು. ಇನ್ನು ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ, ಬಿಜೆಪಿಯ ಯಡಿಯೂರಪ್ಪ ಅವರಂತೂ ನಮ್ಮ ರಾಜ್ಯದ ಪವಿತ್ರ ಕ್ಷೇತ್ರ, ಮಠಾಧೀಶರು, ವಿಶೇಷ ಮಹಾತ್ಮೆ ಇರುವ ಕ್ಷೇತ್ರಗಳನ್ನೆಲ್ಲ ಬಿಡದೇ ಸುತ್ತಿಬಂದರು. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಂತೂ ರಾಮನಗರದ ಹತ್ತಿರವಿರುವ ತಮ್ಮ ತೋಟದ ಮನೆಯಲ್ಲಿ ಮುನ್ನೂರಕ್ಕೂ ಹೆಚ್ಚು ಪುರೋಹಿತರು, ಋತ್ವಿಕರನ್ನು ಕರೆಯಿಸಿ ಹನ್ನೆರಡು ದಿನ ಭರ್ಜರಿ ಹೋಮ- ಹವನ, ಯಜ್ಞ-ಜಪ-ತಪಾದಿಗಳನ್ನು ನೆರವೇರಿಸಿ ದರು.

ಇವರೆಲ್ಲರ ಆಶಯ ಒಂದೇ, ‘ದೇವಾ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡು’, ಅಷ್ಟೇ. ಮಾಜಿ ಪ್ರಧಾನಿ ದೇವೇಗೌಡರೂ ಈ ಇಳಿವಯಸ್ಸಿನಲ್ಲೂ ಪವಿತ್ರಕ್ಷೇತ್ರ ಗಳಿಗೆ ಹೋಗಿ ಅಲ್ಲಿನ ನದಿಗಳಲ್ಲಿ ಮುಳುಗು ಹಾಕಿಬಂದರು. ನನ್ನ ಮಗನನ್ನು ಮುಖ್ಯಮಂತ್ರಿ ಮಾಡು ಎಂದು ಗೌಡರು ಕೇಳಿಕೊಳ್ಳುವುದರ ಜತೆಗೆ, ಬೇರೆ ಯಾರನ್ನೂ ಮಾಡಬೇಡ ಎಂದೂ ಕೇಳಿಕೊಂಡಿದ್ದಿರಬಹುದು. ಅವರು ‘ರಿವರ್ಸ್ ಪೂಜೆ’ ಮಾಡಿಸುವುದರಲ್ಲಿ ನಿಷ್ಣಾತರು ಎಂಬುದು ಅವರ ಬಗ್ಗೆ ಇರುವ ಮಾತು.

ಇನ್ನು ಟಿಕೆಟ್ ಆಕಾಂಕ್ಷಿಗಳಂತೂ ಕೇಳಲೇಬೇಡಿ. ಮೂರೂ ಪಕ್ಷಗಳ ಕನಿಷ್ಠ ಹತ್ತು ಸಾವಿರ ಟಿಕೆಟ್ ಆಕಾಂಕ್ಷಿಗಳು ಕೇಳದ ವರಗಳಿಲ್ಲ, ಬೇಡದ ಕೋರಿಕೆಗಳಿಲ್ಲ. ಆ ದಿನಗಳಲ್ಲಿ ‘ಟೆಂಪಲ್ ರನ್’ ಎಂಬುದು ಸಹಜವಾಗಿ ಹೋಗಿತ್ತು. ರಾಜಕೀಯ ಪಕ್ಷ ಗಳ ನಾಯಕರು ದಿನ ಬೆಳಗಾದರೆ ಒಂದೊಂದು ಮಠ, ಮಠಾಧೀಶರು, ಪುಣ್ಯಕ್ಷೇತ್ರ, ಧಾರ್ಮಿಕ ಕ್ಷೇತ್ರಗಳಿಗೆ ಹೆಲಿಕಾಪ್ಟರಿನಲ್ಲಿ ಹೋಗುವುದು ಮಾಮೂಲಾಗಿಬಿಟ್ಟಿತ್ತು. ಒಂದು ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹದಿನಾಲ್ಕು ಬಾಡಿಗೆ
ಹೆಲಿಕಾಪ್ಟರುಗಳಿದ್ದರೂ, ಒಂದು ವಾರ ಮುಂಗಡ ಕಾದಿರಿಸಿ ದರೂ ಸಿಗುತ್ತಿರಲಿಲ್ಲ. ಅಷ್ಟೊಂದು ಬೇಡಿಕೆ. ಅನೇಕ ರಾಜಕಾರಣಿಗಳು ದೇವರ ಜತೆಗೆ ವ್ಯವಹಾರ ಕುದುರಿಸಲು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದರು.

‘ಸರ್, ಮುಂಡುಗೋಡಿನಲ್ಲಿ ಪ್ರಸಿದ್ಧ ಜ್ಯೋತಿಷಿ ಇದ್ದಾರೆ. ಅವರು ಹೇಳಿದ್ದು ಇಲ್ಲಿ ತನಕ ಸುಳ್ಳಾಗಿಲ್ಲ’ ಎಂದು ಯಾರಾದರೂ ತಮ್ಮ ಪಕ್ಷದ ನಾಯಕರ ಮುಂದೆ ಹೇಳಿದರೆ ಸಾಕು, ನಾಳೆಯೇ ಅವರ ಮನೆ ಮುಂದೆ ಹಾಜರ್. ‘ಸರ್, ನಿಡಸೋಸಿಯಲ್ಲಿ ಒಬ್ಬ ಬಾಬಾ ಇದ್ದಾರೆ. ಅವರು ಭಕ್ತರ ತಲೆ ಮೇಲೆ ಕಾಲಿಟ್ಟು ಏನೇ
ಹೇಳಿದರೂ ಅದು ಖರೆ ಆಗುತ್ತದೆ’ ಎಂದು ಹೇಳಿದರೆ, ಮರುದಿನವೇ ಆ ಬಾಬಾನ ಕಾಲಿನ ಕೆಳಗೆ ಈ ನಾಯಕಮಣಿ ತಲೆ ಇಟ್ಟು ಕೂರುತ್ತಿದ್ದ!

ಈ ಸಲ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಪೈಪೋಟಿ ಇತ್ತು. ಡಿ.ಕೆ. ಶಿವಕುಮಾರ ಕಂಡಕಂಡ ದೇವರ ದರ್ಶನ ಪಡೆದಿದ್ದರು. ಕೈಗೆ ತಾಯತ ಕಟ್ಟಿಸಿಕೊಂಡು ಕೆಂಪು-ಕಪ್ಪು ದಾರಗಳಿಂದ ಅವರ ಕೈ ತುಂಬಿಹೋಗಿತ್ತು. ಅದರಲ್ಲೂ ಶಿವಕುಮಾರ ತಿಪಟೂರು ಬಳಿಯಿರುವ ಐನೂರು ವರ್ಷಗಳ ಇತಿಹಾಸ ವಿರುವ ಕಾಡಸಿದ್ದೇಶ್ವರ ಮಠದ ಪೀಠಾಧೀಪತಿಗಳಾದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ (ಅವರು ನೊಣವಿನಕೆರೆ ಅಜ್ಜಯ್ಯ ಎಂದೇ
ಪ್ರಸಿದ್ಧರು) ಅವರ ಅಪ್ಪಣೆ ಇಲ್ಲದೇ ಒಂದು ಹೆಜ್ಜೆಯನ್ನು ಇಡುತ್ತಿರಲಿಲ್ಲ. ನಾಮಪತ್ರ ಸಲ್ಲಿಸುವಾಗ, ಪಕ್ಷದ ಅಭ್ಯರ್ಥಿಗಳಿಗೆ ‘ಬಿ’ ಫಾರಂ ವಿತರಿಸುವಾಗ, ‘ಸಿ’ ಫಾರಂ ನೀಡುವಾಗ, ಚುನಾವಣಾ ಫಲಿತಾಂಶ ಘೋಷಣೆಯಾದಾಗ ಅಜ್ಜಯ್ಯನವರು ಹೇಳಿದಂತೆ ಮಾಡಿದರು.

‘ಈ ಸಲ ನೀವೇ ಮುಖ್ಯಮಂತ್ರಿ ಆಗುತ್ತೀರಿ’ ಎಂದು ಅಜ್ಜಯ್ಯನವರು ಶಿವಕುಮಾರ ರಿಗೆ ಆಶೀರ್ವಾದ ಮಾಡಿದ್ದರು (ಗೆದ್ದು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮುಂಚೆ ಮತ್ತು ನಂತರ ಅಜ್ಜಯ್ಯನವರ ದರ್ಶನ ಮಾಡಿದ್ದನ್ನು, ಅಜ್ಜನಯ್ಯವರ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದನ್ನು ನಾವೆಲ್ಲಾ ನೋಡಿದ್ದೇವೆ). ನಮಗೆಲ್ಲ ಗೊತ್ತಿರುವ ಒಂದು ಸಂಗತಿ ಅಂದ್ರೆ, ‘ಹೇ ಭಗವಂತ, ನನ್ನ ಪಕ್ಷಕ್ಕೆ ಬಹುಮತ ಬರುವಂತೆ ಮಾಡು, ನನ್ನನ್ನು ಮುಖ್ಯಮಂತ್ರಿ ಮಾಡು’ ಎಂದು ಕೇಳದ, ಕಂಡ ಕಂಡ ದೇವರಲ್ಲಿ ಮೊರೆಹೋಗದ ಒಬ್ಬ ರಾಜಕಾರಣಿ ಇದ್ದರೆ, ನಿಸ್ಸಂದೇಹವಾಗಿ ಅವರು ಸಿದ್ದರಾಮಯ್ಯ!

ಅವರು ಯಾವ ದೇವಸ್ಥಾನಕ್ಕೂ ಹೋಗಲಿಲ್ಲ. ದೇವರ ಮುಂದೆ ಅಡ್ಡಬೀಳಲಿಲ್ಲ. ಜ್ಯೋತಿಷಿಗಳಿಗೆ ಎಡತಾಕಲಿಲ್ಲ. ಮಠಾಧೀಶರ ಆಶೀರ್ವಾದ ಬೇಡಲು ಅವರ ಕಾಲಿಗೆ ಬೀಳಲಿಲ್ಲ. ಹೋಮ-ಹವನ-ಜಪ-ತಪ-ಯಜ್ಞ-ವಾಮಾಚಾರ ಮಾಡಿಸಲಿಲ್ಲ. ಆರತಿ ತಟ್ಟೆಗೆ ಹತ್ತು ರುಪಾಯಿಯನ್ನೂ ಹಾಕಲಿಲ್ಲ. ಆದರೂ ಮುಖ್ಯಮಂತ್ರಿ ಆದರು. ಅದೂ ಎರಡು ಸಲ.

ನಾನು ಈ ಪ್ರಶ್ನೆಯನ್ನು ಅನೇಕರಿಗೆ ಕೇಳಿದ್ದೇನೆ, ಆದರೆ ಯಾರಿಂದಲೂ ಇಲ್ಲಿ ತನಕ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಅದೇನೆಂದರೆ, ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಉಳಿದವರೆಲ್ಲರೂ ಆ ಪರಿ ಬೇಡಿಕೊಂಡರು, ದೇವರು ಮೆಚ್ಚುವ ಎಲ್ಲ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು, ಆದರೆ ಅವರಾರೂ ಮುಖ್ಯಮಂತ್ರಿ ಆಗಲಿಲ್ಲ. ಆದರೆ ಸಿದ್ದರಾಮಯ್ಯ ಯಾವ ದೇವರ ಮೊರೆಹೋಗಲಿಲ್ಲ. ಎಲ್ಲೂ ಮುಳುಗು ಹಾಕಲಿಲ್ಲ. ಆರತಿಯ ಉಷ್ಣ, ತೀರ್ಥದ ಶೀತವನ್ನು ಅನುಭವಿಸಲಿಲ್ಲ. ಆದರೂ ಎರಡನೇ ಸಲ ಮುಖ್ಯಮಂತ್ರಿ ಆದರು. ಏನಿದರ ಹಕೀಕತ್ತು? ಇದರ ಸಂದೇಶವೇನು? ದೇವರು ಇದ್ದಾನಾ, ಇಲ್ಲವಾ? ದೇವರು
ತನಗೆ ಇಷ್ಟೆಲ್ಲ ನಡೆದುಕೊಂಡವರಿಗೆ ಆಶೀರ್ವಾದ ಮಾಡಲಿಲ್ಲ.

ಒಂದು ದಿನವೂ ಆತನ ಭಜನೆ ಮಾಡದವರಿಗೆ ದೇವರು ಒಲಿದಿದ್ದಾರೂ ಹೇಗೆ? ಹಾಗಾದರೆ ದೇವರು ಯಾರು? ಆತನನ್ನು ಒಲಿಸಿಕೊಳ್ಳಲು ಏನು ಮಾಡಬೇಕು? ದೇವರು ತನಗೆ ವಶೀಲಿಬಾಜಿ ಮಾಡುವವರನ್ನು, ಮಸ್ಕಾ ಹೊಡೆಯುವವರನ್ನು ಇಷ್ಟಪಡುವುದಿಲ್ಲವಾ? ಹಾಗೆಂದು ಸಿದ್ದರಾಮಯ್ಯನವರು ಎಲ್ಲೂ ತಾನು ನಾಸ್ತಿಕ
ಅಥವಾ ದೇವರಲ್ಲಿ ನಂಬಿಕೆ ಇಲ್ಲದವ ಎಂದು ಹೇಳಿಲ್ಲ. ಮಠಾಧೀಶರ ಬಗ್ಗೆ ತನಗೆ ಭಕ್ತಿ, ಗೌರವ ಇಲ್ಲ ಎಂದೂ ಹೇಳಿದವರಲ್ಲ. ಮಠಾಽಶರು ಭಾಗವಹಿಸಿದ ಅನೇಕ
ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲರಿಗೂ ಕಾಣುವ ಹಾಗೆ ವೇದಿಕೆಯಲ್ಲಾಗಲಿ, ಸಾರ್ವಜನಿಕವಾಗಲಿ, ಅವರ ಪಾದಸ್ಪರ್ಶ ಮಾಡದೇ ಇರಬಹುದು ಅಥವಾ ನಡುಬಗ್ಗಿ ಬಾಗದಿರಬಹುದು. ಆದರೆ ಎರಡೂ ಕೈಗಳಿಂದ ನಮಸ್ಕರಿಸಿ ದ್ದನ್ನು ನೋಡಿದ್ದೇವೆ.

ಮಠಾಧೀಶರನ್ನು ಒಲಿಸಿಕೊಳ್ಳಲು ಬೂಟಾಟಿಕೆ ಮಾಡಿದವರಲ್ಲ ಅಥವಾ ಓಲೈಕೆ ರಾಜಕಾರಣ ಮಾಡಿದವರಲ್ಲ. ಎರಡು ವರ್ಷಗಳ ಹಿಂದೆ, ಉತ್ತರಹಳ್ಳಿ ಸನಿಹ ದಲ್ಲಿರುವ ಪೂರ್ಣಪ್ರಜ್ಞ ಬಡಾವಣೆಯಲ್ಲಿರುವ ಗುರು ಶ್ರೀ ರಾಘವೇಂದ್ರ ಸ್ವಾಮೀಜಿಯವರ ಮಠದಲ್ಲಿ ನಡೆದ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳ ಬೇಕೆಂದು ನಾನು ಅವರನ್ನು ಆಹ್ವಾನಿಸಿದಾಗ, ಅವರು ಮರು ಮಾತಾಡದೇ, ಮುಕ್ತಭಾವದಿಂದ ಭಾಗವಹಿಸಿದ್ದರು. ಅಷ್ಟೇ ಅಲ್ಲ, ಸುಮಾರು ಒಂದು ಗಂಟೆ ಮಠದಲ್ಲಿ ಕಳೆದಿದ್ದರು. ನಂತರ ಭಕ್ತರನ್ನು ಉದ್ದೇಶಿಸಿ, ‘ನಾನು ದೇವರಿಲ್ಲ ಎಂದು ವಾದಿಸುವುದಿಲ್ಲ. ನಾನು ಮೂಲತಃ ದೇವರಲ್ಲಿ ನಂಬಿಕೆ ಇರುವವನು. ನಮಗಿಂತ ಬಲಿಷ್ಠವಾದ ಒಂದು ಶಕ್ತಿ ಇರುವುದನ್ನು ನಾನು ನಂಬುತ್ತೇನೆ. ಅದೇ ನಮ್ಮನ್ನು ಕಾಯುತ್ತಿದೆ, ನಿಯಂತ್ರಿಸುತ್ತಿದೆ. ಅದನ್ನು ಬೇಕಾದರೆ ನೀವು ದೇವರು
ಎಂದು ಕರೆಯಿರಿ, ಅಭ್ಯಂತರವಿಲ್ಲ. ಆ ಶಕ್ತಿಯನ್ನು ಆರಾಧಿಸಿ, ತಪ್ಪಿಲ್ಲ. ಅದಕ್ಕಿಂತ ಮುಖ್ಯವಾಗಿ, ದೇವರು ಮತ್ತೆಲ್ಲೂ ಇಲ್ಲ.

ದೇವರು ನಮ್ಮಲ್ಲೇ ಇದ್ದಾನೆ. ಅವನಿಗಾಗಿ ನಾವು ಹುಡುಕಿ ಕೊಂಡು ಹೋಗಬೇಕಾಗಿಲ್ಲ. ಒಳ್ಳೆಯ ಕೆಲಸ ಮಾಡಿದರೆ ನಮ್ಮಲ್ಲಿಯೇ ದೈವತ್ವ ಗುಣ ಹೆಚ್ಚಾಗುತ್ತದೆ. ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕಾಗಿಲ್ಲ. ಕೆಟ್ಟ, ನೀಚ, ಮನೆ ಹಾಳ ಕೆಲಸ ಮಾಡಿ, ದೇವರ ಮೊರೆಹೋದರೆ, ಆತ ಒಳ್ಳೆಯದನ್ನು ಮಾಡುತ್ತಾನಾ? ಅಥವಾ ಒಳ್ಳೆಯದನ್ನು ಮಾಡ ಬೇಕೆಂದು ನಾವು ಅಪೇಕ್ಷಿಸುವುದು ಸರಿಯಾ? ನೀವು ಒಳ್ಳೆಯ ಕೆಲಸ ಮಾಡಿದರೆ, ಅದು ನಿಮಗೆ ಮನವರಿಕೆಯಾದರೆ,
ದೇವಾಲಯಕ್ಕೆ ದೇವರನ್ನು ಹುಡುಕಿಕೊಂಡು ಹೋಗಬೇಕಿಲ್ಲ.

ನೀವು ಒಳ್ಳೆಯ ಕೆಲಸ ಮಾಡಿದಾಗ ಆತ ನಿಮ್ಮಲ್ಲಿಯೇ ನೆಲೆಸುತ್ತಾನೆ. ಹೀಗಾಗಿ ನಾನು ದೇವರನ್ನು ಬಹಿರಂಗವಾಗಿ ಪೂಜಿಸುವುದಿಲ್ಲ. ಕಂಡಕಂಡ ದೇವರನ್ನು ಹುಡುಕಿಕೊಂಡು ಹೋಗುವುದಿಲ್ಲ. ಮನಸ್ಸಿನಲ್ಲಿಯೇ ನಮಿಸುತ್ತೇನೆ. ಒಂದು ಸಂಗತಿ ಗೊತ್ತಿರಲಿ, ಅಷ್ಟಕ್ಕೂ ನಾವು ನಂಬಿದ ದೇವರು ನಮಗೆ ಯಾವತ್ತೂ ಒಳ್ಳೆಯದನ್ನೇ ಮಾಡುತ್ತಾನೆ. ದೇವರು ಕೆಟ್ಟದ್ದನ್ನು ಮಾಡಿದರೆ, ಅವನು ದೇವರಾಗುತ್ತಿರಲಿಲ್ಲ, ಮನುಷ್ಯನೇ ಆಗುತ್ತಿದ್ದ. ಮಠಾಽಶರು ಮತ್ತು ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ. ಹಾಗೆಂದ ಮಾತ್ರಕ್ಕೆ ಅದನ್ನು ಪ್ರಕಟಪಡಿಸಲು ಅವರ ಕಾಲಿಗೆ ಬೀಳಬೇಕಾಗಿಲ್ಲ. ಮನಃ ಪೂರ್ವಕವಾಗಿ ಕೈಮುಗಿದರೂ ಸಾಕು. ಕಾಲಿಗೆ ಬೀಳುವುದು ಬೇರೆಯವರಿಗೆ ತೋರಿಸುವ ನಾಟಕದ ಭಕ್ತಿ. ಮನಸ್ಸಿನಲ್ಲಿ ನಮಿಸುವುದು ನಮಗೆ ಮಾತ್ರ ಗೊತ್ತಾಗುವಂಥ ಆಂತರಿಕ ಭಕ್ತಿ. ನಮ್ಮ ಭಕ್ತಿ ಎಂಥದ್ದು ಎಂಬುದು ನಮಗೆ ಗೊತ್ತಿದ್ದರೆ ಸಾಕು’ ಎಂದು ಹೇಳಿದ್ದರು.

ಸಿದ್ದರಾಮಯ್ಯನವರ ಭಾಷಣ ಕೇಳಿದ ಅನೇಕರು ಅವರ ಬಳಿ ಬಂದು, ’ಸರ್, ನಾವು ನಿಮ್ಮ ಬಗ್ಗೆ ತಪ್ಪು ಭಾವಿಸಿದ್ದೆವು. ದೇವರ ಬಗ್ಗೆ ನಿಮ್ಮ ಭಾವನೆ ಏನಿದೆ ಎಂಬುದು ನಮಗೆ ಗೊತ್ತಿರಲಿಲ್ಲ’ ಎಂದು ಹೇಳಿದ್ದರು. ನಂತರ ಮಠದಲ್ಲಿ ಪ್ರಸಾದ ಭೋಜನ ಸೇವಿಸಿ ಹೋಗಿದ್ದರು. ಸಿದ್ದರಾಮಯ್ಯನವರು ಅನೇಕ ಸಂದರ್ಭದಲ್ಲಿ ತಮ್ಮ ಮಾತಿನಲ್ಲಿ ‘ಉಳ್ಳವರು ಶಿವಾಲಯ ಮಾಡುವರು/ ನಾನೇನು ಮಾಡಲಿ ಬಡವನಯ್ಯ/ ಎನ್ನ ಕಾಲೇ ಕಂಬ/ ದೇಹವೇ ದೇಗುಲ/ ಶಿರವೇ ಹೊನ್ನ ಕಳಶವಯ್ಯ/ ಕೂಡಲ ಸಂಗಮ ದೇವಾ ಕೇಳಯ್ಯ/ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನವರ ವಚನವನ್ನು ಪ್ರಸ್ತಾಪಿಸಿದ್ದನ್ನು ಕೇಳಿದ್ದೇವೆ.
ಅದಿರಲಿ, ಸಿದ್ದರಾಮಯ್ಯನವರು ಟೆಂಪಲ್ ರನ್ ಮಾಡದೇ, ಯಜ್ಞ-ಯಾಗಾದಿಗಳನ್ನು ಮಾಡದೇ, ಅವನ್ನೆಲ್ಲ ವನ್ನೂ ಧಾರಾಳವಾಗಿ ಮಾಡಿದವರನ್ನು ಹಿಂದಕ್ಕೆ ಹಾಕಿ, ಎರಡು ಸಲ ಮುಖ್ಯಮಂತ್ರಿ ಆಗಿದ್ದು ಹೇಗೆ? ಎಂಬ ಪ್ರಶ್ನೆ ಹಾಗೇ ಉಳಿಯಿತು.

ಈ ಪ್ರಶ್ನೆಯನ್ನು ನಾನು ಆಪ್ತ ಸ್ನೇಹಿತರಾದ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ರಾಮ ನಾರಾಯಣ ಜೋಯಿಸರ ಮುಂದೆ ಇಟ್ಟೆ. ಅವರು ಸಹ ಆರಂಭದಲ್ಲಿ ಆಶ್ಚರ್ಯಚಕಿತರಾದರು. ನಂತರ ತುಸು ಯೋಚಿಸಿ, ‘ದೇವರ ಆಶೀರ್ವಾದ ಇಲ್ಲದೇ ಯಾರೂ ಅಂಥ (ಮುಖ್ಯಮಂತ್ರಿ) ಪದವಿಗೆ ಹೋಗಲು ಸಾಧ್ಯವಿಲ್ಲ. ಒಳ್ಳೆಯ
ಕೆಲಸ ಮಾಡಲೆಂದು ಆ ಭಗವಂತ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅವರನ್ನು ಕಳಿಸಿರಬಹುದು. ಆಗ ಅವರು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ನಂಥ
ಯೋಜನೆಯ ಮೂಲಕ ಕೋಟ್ಯಂತರ ಜನರ ಹಸಿವನ್ನು ನಿವಾರಿಸುವ ಕೆಲಸ ಮಾಡಿದರು. ಆ ಆಶೀರ್ವಾದವೇ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಹಾಯಕವಾಗಿರ ಬಹುದು. ಇವರಿಗಿಂತ ಬೇರೆಯವರೂ ದೇವರ ಮೊರೆ ಹೋದರು.

ಸಿದ್ದರಾಮಯ್ಯನವರು ದೇವರ ಮೊರೆ ಹೋಗದೇ, ಪುಣ್ಯ ಗಳಿಸಿದರು. ಅದು ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಹಾಯಕವಾಗಿರಬಹುದು. ಇಲ್ಲದಿ ದ್ದರೆ ಇದು ಸಾಧ್ಯವಾಗುತ್ತಿತ್ತೇ? ಎಂದು ಅರ್ಥೈಸ ಬಹುದು’ ಎಂದು ಹೇಳಿದರು. ಮೊನ್ನೆ ‘ವಿಶ್ವವಾಣಿ ಪುಸ್ತಕ’ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರು ಪುಸ್ತಕಗಳ ಬಿಡುಗಡೆ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಆಹ್ವಾನಿಸಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಅವರಿಗೆ ಬರಲಾಗಲಿಲ್ಲ. ಬಂದಿದ್ದರೆ ಈ ಮಾತುಗಳನ್ನು ಹೇಳಬೇಕು ಅಂದುಕೊಂಡಿದ್ದೆ. ಆ ಮಾತುಗಳು ನನ್ನೊಳಗೇ ಉಳಿದು ಬಿಡಬಾರದೆಂದು ನಿಮ್ಮ ಮುಂದೆ ಹಂಚಿಕೊಂಡೆ, ಅಷ್ಟೇ.