Saturday, 14th December 2024

ಮಿಸ್ಟರ್‌ ಕೂಲ್ ಆಗಿದ್ದಾರೆ ಸಿದ್ದು

ಮೂರ್ತಿಪೂಜೆ

ದಿಲ್ಲಿಯ ಬಿಜೆಪಿ ಕಂಪೋಂಡಿನಿಂದ ಕುತೂಹಲಕಾರಿ ಸುದ್ದಿಯೊಂದು ತೇಲಿ ಬಂದಿದೆ. ಆಂಧ್ರದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್
ಕುಮಾರ್ ಎಂಬ ಜೋಡೆತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಹೇಗೆ ನಿಯಂತ್ರಣಕ್ಕೆ ತೆಗೆದುಕೊಂಡರು? ಎಂಬುದೇ ಈ ಸುದ್ದಿ. ಅಂದ ಹಾಗೆ ಜೂನ್ ನಾಲ್ಕರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತಲ್ಲ? ಇದು ಸ್ಪಷ್ಟವಾಗುತ್ತಾ ಹೋದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ವಿಷಯ ಕ್ಲಿಯರ್ ಆಗಿದೆ.

ಅದೆಂದರೆ ಬಿಜೆಪಿ ಸ್ವಯಂಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಎನ್ ಡಿಎ ಮಿತ್ರ ಪಕ್ಷಗಳ ಜತೆ ಸೇರಿ ಸರಕಾರ ರಚಿಸಿದರೂ ಆ ಇಬ್ಬರು ಮಿತ್ರರು ಮಾತ್ರ ಸಮಯ ನೋಡಿ ಆಟ ಆಡಲು ಹಿಂಜರಿಯುವುದಿಲ್ಲ ಎಂಬದು. ಅರ್ಥಾತ್, ಸಂಯುಕ್ತ ಜನತಾದಳದ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್
ಕುಮಾರ್ ಮತ್ತು ಆಂಧ್ರದ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ತಮಗಿರುವ ಬಲದಿಂದ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ, ಮುಜುಗರಕ್ಕೆ ಈಡು ಮಾಡುತ್ತಾರೆ ಎಂಬುದು ನರೇಂದ್ರಮೋದಿ ಅವರ ಅನುಮಾನ.

ಹಾಗಂತಲೇ ಅವತ್ತು ಅಮಿತ್ ಶಾ, ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ಪಕ್ಷದ ಹಲವು ನಾಯಕರ ಜತೆ ತುರ್ತು ಸಮಾಲೋಚನೆ ನಡೆಸಿದ ನರೇಂದ್ರ ಮೋದಿ ಈ ಸಭೆಯಲ್ಲಿ ಒಂದು ತೀರ್ಮಾನ ಪ್ರಕಟಿಸಿzರೆ.ಈ ಹಂತದಲ್ಲಿ ನಾವು ಸರಕಾರ ರಚಿಸುವುದು ಬೇಡ ಎಂಬುದು ಅವರ ತೀರ್ಮಾನ. ಕಾರಣ? ಹೇಗಿದ್ದರೂ ಬಿಜೆಪಿಗೆ ಸರಕಾರ ರಚಿಸಲು ಅಗತ್ಯವಾದ ೨೭೩ ಸೀಟು ಬಂದಿಲ್ಲ. ಹೀಗಾಗಿ ನಾವು ಸರಕಾರ ರಚಿಸುವ ಬದಲು ಕಾಂಗ್ರೆಸ್ ನೇತೃತ್ವದ ಇಂಡಿಯ ಮೈತ್ರಿಕೂಟಕ್ಕೆ ಅವಕಾಶ ಕೊಡೋಣ. ಸದ್ಯಕ್ಕೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರೆಲ್ಲ ಆ ಒಕ್ಕೂಟಕ್ಕೇ ಬೆಂಬಲ ಕೊಡಲಿ.

ಅಂದ ಹಾಗೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಜನರಿಗೆ ಬೇಕಾದಷ್ಟು ಭರವಸೆ ನೀಡಿದ್ದಾರೆ. ದೇಶದ ಪ್ರತಿ ಗೃಹಿಣಿಯ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಹಾಕುತ್ತೇವೆ ಎಂದಿದ್ದಾರೆ. ಇದೇ ರೀತಿ ಅವರು ಕೊಟ್ಟಿರುವ ಹಲವು ಭರವಸೆಗಳನ್ನು ಈಡೇರಿಸಲು ಕನಿಷ್ಟವೆಂದರೂ ಐವತ್ತು ಲಕ್ಷ ಕೋಟಿ ರುಪಾಯಿ ಬೇಕು ಅಂದರೆ? ಕೇಂದ್ರ ಸರಕಾರದ ವಾರ್ಷಿಕ ಬಜೆಟ್ ಗಾತ್ರಕ್ಕಿಂತ ಈ ಭರವಸೆಗಳ ಗಾತ್ರ ದೊಡ್ಡದು.

ಹೀಗಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟ ಮೊದಲು ಸರಕಾರ ರಚಿಸಲು ಬಿಡೋಣ. ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಅವರೇನು ಆಡಳಿತ ಕೊಡುತ್ತಾರೋ ನೋಡೋಣ ಅಂತ ಮೋದಿ ವಿವರಿಸಿದಾಗ ಸಭೆಯಲ್ಲಿದ್ದ ಎಲ್ಲರೂ ಮೌನವಾಗಿ ತಲೆ ಆಡಿಸಿzರೆ. ಇದಾದ ಕೆಲವೇ ಕ್ಷಣಗಳಲ್ಲಿ ಮೋದಿಯವರ ತೀರ್ಮಾನ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ತಲುಪಿದೆ. ಯಾವಾಗ ಈ ವಿಷಯ ತಮ್ಮ ಕಿವಿಗೆ ಬಿತ್ತೋ? ಆಗ ಹೌಹಾರಿದ ಈ ನಾಯಕರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದ್ದಾರೆ.

ಅಷ್ಟೇ ಅಲ್ಲ, ಯಾವ ಕಾರಣಕ್ಕೂ ಇಂಡಿಯ ಮೈತ್ರಿಕೂಟಕ್ಕೆ ಸರಕಾರ ರಚಿಸುವ ಆಫರ್ ಹೋಗುವುದು ಬೇಡ. ನಾವಾದರೂ ಅಷ್ಟೇ. ಯಾವ ಕಾರಣಕ್ಕೂ ಆ ಕೂಟದ ಬೆಂಬಲಕ್ಕೆ ನಿಲ್ಲುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯ ಒಕ್ಕೂಟ ಸ್ಥಿರ ರಕಾರ ರಚಿಸಲು ಸಾಧ್ಯವೇ ಇಲ್ಲ. ಒಂದು ವೇಳೆ
ಅವರು ಸರಕಾರ ರಚಿಸಿದರೆ ಮಿತ್ರಪಕ್ಷಗಳ ಮಾರಾಮಾರಿಯ ಮಧ್ಯೆ ಆ ಸರಕಾರ ಉರುಳುತ್ತದೆ. ಇವತ್ತು ಎಲ್ಲಕ್ಕಿಂತ ಮುಖ್ಯವಾಗಿ ದೇಶಕ್ಕೆ ಬೇಕಿರುವುದು ಸ್ಥಿರ ಸರಕಾರ. ಅಂತಹ ಸರಕಾರವನ್ನು ಕೊಡಲು ನಿಮ್ಮ ನೇತೃತ್ವದ ಬಿಜೆಪಿಗೆ ಮಾತ್ರ ಸಾಧ್ಯ. ಹೀಗಾಗಿ ನಾವೇನು ಎನ್‌ಡಿಎ ಮಿತ್ರಪಕ್ಷಗಳಿದ್ದೇವೆ. ನಾವು ನಿಮ್ಮನ್ನೇ ನಂಬಿದ್ದೇವೆ. ಅಷ್ಟೇ ಅಲ್ಲ, ಧೃಢವಾಗಿ ನಿಮ್ಮ ಜತೆ ನಿಲ್ಲುತ್ತೇವೆ ಎಂದಿದ್ದಾರೆ.

ಹೀಗೆ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರಾಡಿದ ಮಾತು ಕೇಳಿ ಮೋದಿ ಮುಖದಲ್ಲಿ ಮಂದಹಾಸ ಮಿನುಗಿದೆ. ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ನಾಯ್ಡು, ನಿತೀಶ್ ಹೇಗೆ ಮೋದಿಯವರ ಅಕ್ಕ ಪಕ್ಕ ನಿಂತರು? ಒತ್ತಡ ಹೇರುವ ಗೋಜಿಗೆ ಹೋಗದೆ ಹೇಗೆ ಕೇಂದ್ರ ಸಂಪುಟದಲ್ಲಿ ತಮಗೆ ಸಿಕ್ಕ ಪಾಲನ್ನು ಪಂಚಾಮೃತ ಅಂತ ಒಪ್ಪಿಕೊಂಡರು ಎಂಬುದು ರಹಸ್ಯವೇನಲ್ಲ. ಅದೇನೇ ಇರಲಿ, ಒಟ್ಟಿನಲ್ಲಿ ತಮ್ಮ ನೇತೃತ್ವದ ಸರಕಾರಕ್ಕೆ ಮಿತ್ರರಿಂದ ಆಗಬಹುದಾದ ತೊಂದರೆಗಳನ್ನು ಊಹಿಸಿದ ಮೋದಿಯವರು ನಿತೀಶ್ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ತಿರುನಲ್ವೇಲಿ ಹಲ್ವ ತಿನ್ನಿಸಿದ್ದಾರೆ.

ಹೀಗೆ ಅವರು ತಿನ್ನಿಸಿದ ಹಲ್ವದ ಘಮ ದೇಶದೆಡೆ ಹರಡುತ್ತಿದೆ ಮತ್ತು ಎನ್‌ಡಿಎ ಸರಕಾರ ಅಪಾಯದಿಂದ ಬಚಾವಾಗಿದೆ ಎಂಬುದನ್ನು ಸಂಕೇತಿಸುತ್ತಿದೆ.

ಸಿದ್ದು ಮಿಸ್ಟರ್ ಕೂಲ್ ಆಗಿದ್ದೇಕೆ?

ಈ ಮಧ್ಯೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟದ ಹಲವು ಸಚಿವರಿಗೆ ಚಿಂತೆ ಶುರುವಾಗಿದೆ. ಕಾರಣ? ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಮಿಸ್ಟರ್ ಕೂಲ್ ಆಗಿರುವುದು. ಈ ಹಿಂದೆ ತಮ್ಮ ನಿರ್ಧಾರಗಳಿಗೆ ಯಾರೇ ವ್ಯತಿರಿಕ್ತ ಹೆಜ್ಜೆ ಇಟ್ಟರೂ ಭುಸುಗುಡುತ್ತಿದ್ದ, ತಕ್ಷಣ ತಿರುಗೇಟು ನೀಡುತ್ತಿದ್ದ ಸಿದ್ದರಾಮಯ್ಯ ಈಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ. ಇತ್ತೀಚೆಗೆ ವಿಧಾನಪರಿಷತ್ತಿನ ಟಿಕೆಟ್ ಹಂಚಿಕೆ ವಿಚಾರವಾಗಿ ವರಿಷ್ಠರ ಜತೆ ಮಾತನಾಡಲು ಅವರು ದೆಹಲಿಗೆ ಹೋಗಿದ್ದರಲ್ಲ?ಈ ಸಂದರ್ಭದಲ್ಲಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ.

ಹೀಗೆ ಭೇಟಿ ಮಾಡಿದವರು, ಪರಿಷತ್ತಿಗೆ ಹೋಗಬೇಕಾದವರು ಯಾರು? ಅಂತ ಪಟ್ಟಿ ಕೊಟ್ಟಿದ್ದಾರೆ. ಅವರು ಕೊಟ್ಟ ಪಟ್ಟಿಯನ್ನು ಒಮ್ಮೆ ನೋಡಿದ
ಖರ್ಗೆಯವರು, ಓಕೆ, ಇದನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು ಕ್ಲಿಯರ್ ಮಾಡಿಸುತ್ತೇನೆ ಎಂದಿದ್ದಾರೆ. ಇದಾದ ನಂತರ ಬೆಂಗಳೂರಿಗೆ ವಾಪಸ್ಸಾದ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಪ್ರಕಟಿಸಿದ ಪಟ್ಟಿ ಸಿಕ್ಕಿದೆ. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ತಾವು ಹೇಳಿದ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆದರೆ ಇಷ್ಟಾದರೂ ಸಿದ್ದರಾಮಯ್ಯ ದುಸುರಾ ಮಾತನಾಡದೆ ಮೌನವಾಗಿzರೆ. ಹಿಂದೆಲ್ಲ ಆಗಿದ್ದರೆ ರಪ್ಪಂತ ತಿರುಗೇಟು
ಹೊಡೆಯುತ್ತಿದ್ದ ಸಿದ್ದರಾಮಯ್ಯ ಈಗೇಕೆ ತಣ್ಣಗಿದ್ದಾರೆ? ಎಂಬುದೇ ಹಲವು ಸಚಿವರ ಅನುಮಾನ.

ಇದೇ ರೀತಿ ಅಧಿಕಾರಕ್ಕೆ ಬಂದ ಶುರುವಿನಲ್ಲಿ, ನಾನೇ ಐದು ವರ್ಷ ಮುಖ್ಯಮಂತ್ರಿ ಅಂತ ಗುಟುರು ಹಾಕುತ್ತಿದ್ದ ಅವರು ಈಗ ಈ ವಿಷಯದಲ್ಲೂ ಸೈಲೆಂಟ್ ಆಗಿದ್ದಾರೆ. ಅವರ ಈ ಮೌನವೇ ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಸೇರಿದಂತೆ ಹಲ ಸಚಿವರ
ಅನುಮಾನಕ್ಕೆ ಕಾರಣವಾಗಿದೆಯಲ್ಲದೆ, ದಿಲ್ಲಿ ರಾಜಕಾರಣದಲ್ಲಿ ನಡೆದಿರಬಹುದಾದ ಸೀಕ್ರೇಟಿನ ಬಗ್ಗೆ ಚರ್ಚಿಸುವಂತೆ ಮಾಡಿದೆ.

ಸದ್ಯದ ಸ್ಥಿತಿಯಲ್ಲಿ ಸಿಎಂ ಪಟ್ಟದ ಹಂಚಿಕೆ ಬಗ್ಗೆ ವರಿಷ್ಠರಿಂದ ಹಿಡಿದು ಯಾರೊಬ್ಬರೂ ಚಕಾರವೆತ್ತುತ್ತಿಲ್ಲ. ಆದರೂ ಸಿದ್ದರಾಮಯ್ಯ ಅವರ ಇತ್ತೀಚಿನ ಕೂಲ್ ಕೂಲ್ ನಡವಳಿಕೆ ಈ ಸಚಿವರ ಅನುಮಾನಕ್ಕೆ ಕಾರಣವಾಗಿದೆ. ಒಂದು ವೇಳೆ ಮೇಡಂ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರೇನಾದರೂ ಅಧಿಕಾರ ಹಂಚಿಕೆಗೆ ಸಹಕರಿಸಿ ಅಂತ ಹೇಳಿದರೆ ಸಿದ್ದರಾಮಯ್ಯ ಅದನ್ನು ಪುರಸ್ಕರಿಸಬಹುದು ಎಂಬುದು ಈ ಸಚಿವರ ಅನುಮಾನ.
ಹೀಗಾಗಿಯೇ ಮುಂದಿನ ದಿನಗಳು ಹೇಗಿರಬಹುದು? ಎಂಬುದನ್ನು ಊಹಿಸಿ ಕಾರ್ಯಾಚರಣೆಗಿಳಿದಿರುವ ಸಚಿವರ ಪಡೆ, ಅಧಿಕಾರ ಹಂಚಿಕೆಯ ಸನ್ನಿವೇಶ ಉದ್ಭವಿಸಿದರೆ ಏನು ಮಾಡಬೇಕು? ಅಂತ ಬ್ಲೂ ಪ್ರಿಂಟು ರೆಡಿ ಮಾಡುತ್ತಿದೆ.

ಒಂದು ವೇಳೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ರಾಜಕಾರಣದಿಂದ ಮರಳಿದರೆ ಯಾವ ಹೆಜ್ಜೆ ಇಡಬೇಕು? ಅಥವಾ ಅವರು ಬರದೆ ಹೋದರೆ ಯಾವ ಹೆಜ್ಜೆ ಇಡಬೇಕು? ಎಂಬುದು ಈ ಬ್ಲೂ ಪ್ರಿಂಟಿನ ಸೆಂಟರ್ ಪಾಯಿಂಟು.

ಮಂತ್ರಿ ರಾಜಣ್ಣ ಗೇಮ್ ಪ್ಲಾನು
ಇನ್ನು ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೇರಲು ಟ್ರೈ ಕೊಡುತ್ತಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೊಸ ಗೇಮ್ ಪ್ಲಾನಿನೊಂದಿಗೆ ದಿಲ್ಲಿಗೆ ದೌಡಾಯಿಸಲಿzರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸಾಧನೆ ಮಾಡದಿರಲು ಕಾರಣವೇನು? ಮತ್ತು ಭವಿಷ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಹಣಿಯಲು ಅನುಸರಿಸಬೇಕಾದ ತಂತ್ರವೇನು? ಎಂಬ ಬಗ್ಗೆ ಕೆ.ಎನ್.ರಾಜಣ್ಣ ರಿಪೋರ್ಟು ರೆಡಿ ಮಾಡಿದ್ದಾರೆ.

ಅಂದ ಹಾಗೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದರೂ ಒಕ್ಕಲಿಗರ ಪ್ರಾಬಲ್ಯವಿರುವ ಹಾಸನದಲ್ಲಿ ಗೆಲುವು ಗಳಿಸಿತ್ತು.
ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎದುರು ಕಾಂಗ್ರೆಸ್ಸಿನ ಶ್ರೇಯಸ್ ಪಟೇಲ್ ಗೆಲುವು ಸಾಧಿಸಲು ಹಲ ಕಾರಣಗಳಿದ್ದರೂ ಹಾಸನ ಜಿಯ ಉಸ್ತುವಾರಿ ಸಚಿವರಾಗಿರುವ ಕೆ.ಎನ್.ರಾಜಣ್ಣ ಅನುಸರಿಸಿದ ಒಂದು ತಂತ್ರ ದೊಡ್ಡ ಮಟ್ಟದಲ್ಲಿ ಫಲ ನೀಡಿದೆ.

ಅರ್ಥಾತ್, ಹಾಸನದ ರಣಾಂಗಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೈನ್ಯ ಒಗ್ಗೂಡಿ ಕೆಲಸ ಮಾಡದಂತೆ ಸಚಿವ ರಾಜಣ್ಣ ನೋಡಿಕೊಂಡಿದ್ದರು. ಇದಕ್ಕಾಗಿ ತಮ್ಮ ಸಂಪರ್ಕಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಅವರು ಮೈತ್ರಿಕೂಟದ ನಾಯಕರು ವಿರುದ್ಧ ನೆಲೆಯಲ್ಲಿ ನಿಲ್ಲುವಂತೆ ಮಾಡಿದರು.
ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೆಲಸ ಮಾಡಿದ್ದು ನಿಜವಾದರೂ, ಆಳದಲ್ಲಿ ರಾಜಣ್ಣ ಅನುಸರಿಸಿದ ಗೇಮ್ ಪ್ಲಾನು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮುಖ್ಯ ಕಾರಣವಾಯಿತು. ಹೀಗಾಗಿ ಇದೇ ಗೇಮ್ ಪ್ಲಾನಿನ ವಿವರವನ್ನು ದಿಲ್ಲಿಗೆ ಕೊಂಡೊಯ್ಯಲು ಸಜ್ಜಾಗುತ್ತಿರುವ ಅವರು: ರಣಾಂಗಣದಲ್ಲಿ ಬಿಜೆಪಿ-ಜೆಡಿಎಸ್ ಸೈನ್ಯ ಒಗ್ಗೂಡದಂತೆ ನೋಡಿಕೊಳ್ಳಬೇಕು ಅಂತ ವರಿಷ್ಠರಿಗೆ ವಿವರಿಸಲಿದ್ದಾರೆ.

ರಾಜಣ್ಣ ಅವರ ಪ್ರಕಾರ, ಈ ತಂತ್ರವನ್ನು ಅನುಸರಿಸಿದರೆ ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ವಿರುದ್ಧ ನೆಲೆಗಳಲ್ಲಿ ನಿಲ್ಲಲಿವೆ. ಅಂದ ಹಾಗೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಕೇಂದ್ರ ಸಂಪುಟ ರಚನೆಯಾದ ನಂತರ ಬಿಜೆಪಿಯ ಲಿಂಗಾಯತ ಪಡೆ ಕುದಿಯುತ್ತಿದೆ. ಕಾರಣ? ಮೋದಿ- ಅಮಿತ್ ಶಾ ಜೋಡಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಪ್ರಾಮಿನೆನ್ಸು ನೀಡುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಎಂದರೆ ಕುದಿಯುತ್ತಿರುವ ಯಡಿಯೂರಪ್ಪ ಟೀಮು ಮುಂದಿನ ದಿನಗಳಲ್ಲಿ ಜೆಡಿಎಸ್ ವಿರುದ್ಧ ತಿರುಗಿ ಬೀಳಲಿದೆ. ಈ ಸನ್ನಿವೇಶವನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಅದೇ ಕಾಲಕ್ಕೆ ಅಹಿಂದ ವರ್ಗಗಳನ್ನು ಕನ್‌ಸಾಲಿಡೇಟ್ ಮಾಡಬೇಕು
ಎಂಬುದು ರಾಜಣ್ಣ ಅವರ ಗೇಮ್ ಪ್ಲಾನು.

ಹೀಗೆ ರೆಡಿ ಮಾಡಿರುವ ಗೇಮ್ ಪ್ಲಾನಿನೊಂದಿಗೆ ದಿಲ್ಲಿಗೆ ದೌಡಾಯಿಸಲಿರುವ ಅವರು, ಇದನ್ನು ಸಾಧಿಸಲು ನನಗೆ ಕೆಪಿಸಿಸಿ ಅಧ್ಯಕ್ಷ ಪದವಿ ಕೊಡಿ ಎಂಬ ಪ್ರಸ್ತಾಪವನ್ನು ವರಿಷ್ಠರ ಮುಂದಿಟ್ಟು ಬರಲಿದ್ದಾರೆ.