Thursday, 12th September 2024

ಸಿದ್ದರಾಮಯ್ಯ ವಿರುದ್ದ ಭೂಗಳ್ಳರ ಷಡ್ಯಂತ್ರ, ಪಾದಯಾತ್ರೆ

ಅಭಿಮತ

ಬಿ.ಎಸ್.ಶಿವಣ್ಣ

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವರ್ಗ ಅಧಿಕಾರದಲ್ಲಿದ್ದಾಗ ನಡೆಸಿದ ಭೂ ಹಗರಣದ ವಿವರಗಳನ್ನು ಜನತಾ ಜನಾರ್ದನನ ಪರಾಮರ್ಶೆಗಾಗಿ ಪ್ರಸ್ತುತಪಡಿಸಲಾಗಿದೆ. ಜೆಡಿಎಸ್ ನಾಯಕರು ಶ್ರೀಸಾಮಾನ್ಯರಲ್ಲಿ ಅನಗತ್ಯ ಗೊಂದಲ ಮೂಡಿಸಲು ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಖುದ್ದು ಭೂ
ಹಗರಣದಲ್ಲಿ ಭಾಗಿಯಾಗಿರುವ ಇವರ ಮಾತುಗಳನ್ನು ಕೇಳಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಭಾಸವಾಗುತ್ತದೆ. ಎಚ್.ಡಿ.ಕುಮಾರಸ್ವಾಮಿಯವರೇ ಹೇಳಿ, ಇನ್ನೂ ನೀವು ಬೇರೆಯವರ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಉಳಿಸಿಕೊಂಡಿದ್ದೀರಾ?’ -ಇದು ಕುಮಾರಸ್ವಾಮಿ ಹಾಗೂ ಕುಟುಂಬ ವರ್ಗದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಈ ಸಂದರ್ಭದ ಆರೋಪವಲ್ಲ.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ೨೦೦೯-೧೦ರ ಅವಧಿಯಲ್ಲಿ ಬಿಜೆಪಿಯ ಮೈಸೂರು ಘಟಕದ ವತಿಯಿಂದ ನೀಡಿದ್ದ
ಅಧಿಕೃತ ಪತ್ರಿಕಾ ಜಾಹೀರಾತು! ಅಂದು ಯಡಿಯೂರಪ್ಪನವರ ವಿರುದ್ಧ ಭೂ ಹಗರಣದ ಆರೋಪ ಮಾಡಿದ್ದ ಕುಮಾರಸ್ವಾಮಿಯವರ ಜನ್ಮ ಜಾಲಾಡಿದ ಬಿಜೆಪಿ, ಗೌಡರ ಕುಟುಂಬ ವರ್ಗದ ಭೂ ಅಕ್ರಮದ ವಿವರವನ್ನು ಸಾರ್ವಜನಿಕವಾಗಿ ತೆರೆದಿಟ್ಟಿತ್ತು.

ಆದರೆ ಈಗಿನ ಪರಿಸ್ಥಿತಿ ನೋಡಿ. ಭೂಮಿ ನುಂಗಿದವರು ಎಂದು ಯಾರು ದಶಕದ ಹಿಂದೆ ಕತ್ತಿನಪಟ್ಟಿ ಹಿಡಿದುಕೊಂಡು ಸಾರ್ವಜನಿಕವಾಗಿ ಬೆತ್ತಲೆಯಾಗಿದ್ದರೋ, ಅವರೇ ಇಂದು ಕೈ ಕೈ ಹಿಡಿದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟಿದ್ದಾರೆ. ಅದೂ ಯಾರ ವಿರುದ್ಧ? ತಮ್ಮ ನಲವತ್ತು ವರ್ಷಗಳ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ ಮೌಲ್ಯಾಧಾರಿತ ರಾಜಕಾರಣಿ ಸಿದ್ದರಾಮಯ್ಯನವರ ವಿರುದ್ಧ. ನೈತಿಕವಾಗಿ, ವೈಯಕ್ತಿಕ ವಾಗಿ ಸಾರ್ವಜನಿಕ ಜೀವನದಲ್ಲಿ ಪದೇಪದೆ ಎಡವಿದ ಈ ಎರಡೂ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವುದು ಹರ ಳೆಣ್ಣೆ ಕುಡಿಸಿದ ಅನುಭವವನ್ನು ಉಂಟುಮಾಡಿದ್ದು, ಅವರ ನಿಸ್ಪೃಹ ವ್ಯಕ್ತಿತ್ವಕ್ಕೆ ಮಸಿ ಬಳಿಸುವುದಕ್ಕಾಗಿ ಈಗ ಮುಡಾ ನಿವೇಶನ ಹಂಚಿಕೆ ವಿಚಾರವನ್ನು ಮುಂದಿಟ್ಟುಕೊಂಡು ಪಾದಯಾತ್ರೆಯ ಪ್ರಹಸನ ಪ್ರಾರಂಭಿಸಿದ್ದಾರೆ.

ಅಷ್ಟಕ್ಕೂ ಸಿದ್ದರಾಮಯ್ಯನವರ ವಿರುದ್ಧ ಭೂ ಅಕ್ರಮದ ಆರೋಪ ಮಾಡುತ್ತಿರುವವರಾದರೂ ಯಾರು? ಸಾರ್ವಜನಿಕ ಸ್ವತ್ತನ್ನು ನುಂಗಿ ನೀರು ಕುಡಿದವರು, ಭೂಗಳ್ಳರು ಎಂದು ಈ ಹಿಂದೆ ಪರಸ್ಪರ ಆರೋಪ ಮಾಡಿಕೊಂಡವರು! ಇಂಥವರಿಂದ ಸಿದ್ದರಾಮಯ್ಯನವರು ಪಾಠ ಕಲಿಯುವ ಅನಿವಾರ್ಯತೆ ಇದೆಯೇ? ಖಂಡಿತ ಇಲ್ಲ.

ಮರುಸ್ಥಾಪನೆಯ ಯತ್ನ: ಸಿದ್ದರಾಮಯ್ಯನವರೇ ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುವ ಪ್ರಕಾರ, ಇದು ಬಿಜೆಪಿ ಮತ್ತು ಜೆಡಿಎಸ್‌ಗಳೆರಡೂ ಸೇರಿಕೊಂಡು ಅವರನ್ನು ‘ವೈಯಕ್ತಿಕವಾಗಿ’ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕದಲ್ಲಿ ಕುಸಿದುಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿ ನಿಜವೆಂದು ಪ್ರತಿಷ್ಠಾಪಿಸುವ ಪ್ರಯತ್ನವಿದು. ಹಿಟ್ಲರ್‌ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದು, ಅದಕ್ಕೆ ಕುಟುಂಬ ವಾದಿ ಜೆಡಿಎಸ್ ಸಾಥ್ ನೀಡುತ್ತಿದೆ.

ನಿಜ ಹೇಳಬೇಕೆಂದರೆ, ಇದು ಕೇವಲ ಸಿದ್ದರಾಮಯ್ಯನವರೊಬ್ಬರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿ ಅಲ್ಲ. ಸಮಸ್ತ ‘ಅಹಿಂದ’ ವರ್ಗದ ಕಡೆಗೆ ಎಸೆಯುತ್ತಿರುವ ಬಲಾಢ್ಯರ ಬ್ರಹ್ಮಾಸ. ಈ ರಾಜ್ಯದಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಹುದ್ದೆಗೆ ಏರಿದ ಸಂದರ್ಭದಲ್ಲೆಲ್ಲಾ ಈ ಬಗೆಯ ವೃಥಾ ಆರೋಪ, ವ್ಯಕ್ತಿತ್ವ ಹರಣದ ಪ್ರಯತ್ನಗಳು ನಡೆದೇ ಇವೆ. ಹಿಂದೆ ದೇವರಾಜ ಅರಸರ ವಿಚಾರದಲ್ಲೂ ಹೀಗೆ ಆಯಿತು. ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಯಿತು. ಇವರಿಬ್ಬರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಯಾರು ಮುಂಚೂಣಿಯಲ್ಲಿ ನಿಂತು ಕುತಂತ್ರ ಮಾಡಿದ್ದರೋ, ಅವರೇ ಈಗ ಸಿದ್ದರಾಮಯ್ಯನವರ ವಿರುದ್ಧ ಆರೋಪ ಹಾಗೂ ಷಡ್ಯಂತ್ರ ಹೆಣೆಯುತ್ತಿದ್ದಾರೆ.

ಅದರಲ್ಲಿಯೂ ದೇವರಾಜ ಅರಸು ಅವರ ಬಳಿಕ, ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಈ ದುಷ್ಟಕೂಟಕ್ಕೆ ಅನ್ನ ಸೇರದಂತೆ ಮಾಡಿಬಿಟ್ಟಿದೆ. ಇದು ‘ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೇ ಮಾಡಬಾರದು, ಅವರು ಅಽಕಾರದ ಹತ್ತಿರ ಸುಳಿಯಲೇಬಾರದು’ ಎಂಬ ಪಟ್ಟಭದ್ರ ಮನಸ್ಥಿತಿಯ ಅನಾವರಣವಷ್ಟೇ.

ಸಿದ್ದರಾಮಯ್ಯನವರೇ ಏಕೆ ಟಾರ್ಗೆಟ್?: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ಬಿಜೆಪಿ ಹಾಗೂ ಜೆಡಿಎಸ್‌ನವರು ಬಾಯಿಗೆ ಬಂದಂತೆ ಮಾತನಾಡಿಕೊಂಡಿದ್ದರು. ಪೇಶ್ವೆ ಬ್ರಾಹ್ಮಣ ವಂಶದವರನ್ನು ಮುಖ್ಯಮಂತ್ರಿ ಯಾಗಿಸಲು ಹೊರಟಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಸಭೆಗಳ ಬಗ್ಗೆಯೂ ವಾಗ್ದಾಳಿ ನಡೆಸಿದ್ದರು. ಆದರೆ ಫಲಿತಾಂಶದ ಬಳಿಕ ಎರಡೂ ಪಕ್ಷಗಳ ಜಂಘಾಬಲ ಉಡುಗಿ ಹೋಗಿತ್ತು. ೧೩೫ ಸ್ಥಾನಗಳ ಪೂರ್ಣ ಬಹುಮತ ಕಾಂಗ್ರೆಸ್‌ಗೆ ಲಭಿಸುವಂತಾಗಿದ್ದರಲ್ಲಿ ಸಿದ್ದರಾಮಯ್ಯನವರ ಕಳಂಕರಹಿತ ವ್ಯಕ್ತಿತ್ವ ಪ್ರಧಾನ ಪಾತ್ರ ವಹಿಸಿತ್ತು. ಆ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಒಂದರಿಂದ ಒಂಬತ್ತು ಸ್ಥಾನಕ್ಕೆ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದೆ.

ಮೈತ್ರಿ ಮಾಡಿಕೊಂಡರೂ ಬಿಜೆಪಿ-ಜೆಡಿಎಸ್‌ಗಿಂತ ಹೆಚ್ಚಿನ ಸರಾಸರಿ ಮತಗಳಿಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಲಭಿಸಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಿದ್ದರಾಮಯ್ಯ ನವರು ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳ ಪಕ್ಕೆಲುಬು ಗಳನ್ನು ಮುರಿದುಬಿಡುತ್ತಾರೆಂಬ ಭಯ ಜೆಡಿಎಸ್ ಹಾಗೂ
ಬಿಜೆಪಿ ನಾಯಕರನ್ನು ಆವರಿಸಿದೆ. ರಾಜ್ಯದಲ್ಲಿ ಏಕಪಕ್ಷೀಯವಾಗಿ ಅಧಿಕಾರಕ್ಕೆ ಬರುವುದು ಸಾಧ್ಯವಾಗದೆ ಇದ್ದರೂ, ಮೈತ್ರಿ ಮೂಲಕ ಅಧಿಕಾರ ಗಿಟ್ಟಿಸಿಕೊಳ್ಳೋಣ ಎಂದು ಕನಸು ಕಾಣುತ್ತಿರುವವರಿಗೆ ಸಿದ್ದರಾಮಯ್ಯ ಹೆಬ್ಬಂಡೆಯಂತೆ ನಿಂತು ಅಡ್ಡಿಯಾಗಿದ್ದಾರೆ.

ಹಿಂದೆ ನಿಂತು ಆಟ ಆಡುತ್ತಿರುವ ಸೈದ್ಧಾಂತಿಕ ಗುರುಗಳಿಗೆ ಕರ್ನಾಟಕದ ಜನರ ಮನಸ್ಥಿತಿ ಅರ್ಥವಾಗುತ್ತಿದೆ. ಜನ ತಮ್ಮಿಂದ ದೂರ ಸರಿಯುತ್ತಿದ್ದಾರೆ
ಎಂದು ಅವರಿಗೆ ಗೊತ್ತಿದೆ. ಹೀಗಾಗಿ ಕಾಗಕ್ಕ-ಗೂಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ. ಬಿಜೆಪಿ-ಜೆಡಿಎಸ್ ನವರ ಮಿದುಳು ಖಾಲಿಯಾಗಿದೆ, ಅವರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಹೀಗಾಗಿ ವಾಲ್ಮೀಕಿ ನಿಗಮ ಹಾಗೂ ಮುಡಾ ವಿಚಾರವನ್ನು ಮುಂದುಟ್ಟುಕೊಂಡು ಸಿದ್ದ ರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಫಲಶ್ರುತಿಯೇ ಈಗ ಪ್ರಾರಂಭವಾಗಿರುವ ಪಾದಯಾತ್ರೆ!

ಅಷ್ಟಕ್ಕೂ ಮುಡಾದಲ್ಲಿ ಹಗರಣವಾಗಿದೆಯೇ?: ಸದನದ ಒಳಗೆ ಹಾಗೂ ಹೊರಗೆ ಇಂಥದೊಂದು ಅನುಮಾನವನ್ನು ಬಿತ್ತುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಿರಂತರ ಪ್ರಯತ್ನ ನಡೆಸಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಂತೂ ಮೈಸೂರಿಗೆ ಬಂದು ಸಿದ್ದರಾಮಯ್ಯನವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. ‘ತಾನು ಕಳ್ಳ, ಪರರ ನಂಬ’ ಎಂಬಂತಾಗಿದೆ ಅವರ ಪರಿಸ್ಥಿತಿ. ಇಲ್ಲವಾದರೆ ಖುದ್ದು ಮುಡಾದಲ್ಲಿ ಪರ್ಯಾಯ ನಿವೇಶನ ಬೇಡಿದವರು
ಇಂಥದೊಂದು ಆರೋಪ ಮಾಡುವುದಕ್ಕೆ ಸಾಧ್ಯವಿತ್ತೇ? ಮೈತ್ರಿ ಪಕ್ಷಗಳ ಈ ಒಳಸಂಚಿನ ಬಗ್ಗೆ ಸಿದ್ದರಾಮಯ್ಯನವರು ಈಗಾಗಲೇ ಪತ್ರಿಕಾಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸೈದ್ಧಾಂತಿಕವಾಗಿ ಅವರ ಜತೆಗೆ ಸುದೀರ್ಘ ವರ್ಷಗಳಿಂದ ನಿಂತಿರುವ ನಮಗೆಲ್ಲ ಅವರ ವ್ಯಕ್ತಿತ್ವ ಎಂಥದೆಂದು ಸ್ಪಷ್ಟವಾಗಿ ಗೊತ್ತು. ತಮ್ಮ ಇಷ್ಟು ವರ್ಷಗಳ ರಾಜಕಾರಣದಲ್ಲಿ ಅವರೆಂದೂ ಕುಟುಂಬ ವರ್ಗಕ್ಕೆ ಆಡಳಿತದ ಪಡಸಾಲೆಯ ಹತ್ತಿರ ಬರುವುದಕ್ಕೆ ಅವಕಾಶ
ಕೊಟ್ಟಿಲ್ಲ. ಅವರ ಶ್ರೀಮತಿಯವರನ್ನು ಸಾರ್ವಜನಿಕವಾಗಿ ಯಾರೂ ನೋಡಿಲ್ಲ.

ಏಕೆಂದರೆ, ಆಡಳಿತ, ಅಧಿಕಾರ ಇತ್ಯಾದಿ ವಿಚಾರಗಳಿಂದ ಅವರು ಗಾವುದ ದೂರ. ತಮ್ಮ ಸೋದರನಿಂದ ದಾನವಾಗಿ ಬಂದ ಭೂಮಿಯನ್ನು ಮುಡಾ
ಕಾನೂನುಬಾಹಿರವಾಗಿ ಸ್ವಾಽನಪಡಿಸಿಕೊಂಡ ವಿಚಾರವನ್ನು ೨೦೧೪ರಲ್ಲಿ ಅವರು ಸಿದ್ದರಾಮಯ್ಯನವರ ಬಳಿ ಪ್ರಸ್ತಾಪಿಸಿದಾಗ, ‘ಯಾವುದೇ ಕಾರಣಕ್ಕೂ ನಾನು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಕುಟುಂಬದ ಆಸ್ತಿ ವಿಚಾರ ಪರಿಹರಿಸಲು ಹೋದರೆ ಸ್ವಜನಪಕ್ಷಪಾತ ಹಾಗೂ ಆಡಳಿತದ ದುರುಪ ಯೋಗವಾಗುತ್ತದೆ’ ಎಂದು ಅವರು ಖಡಾಖಂಡಿತವಾಗಿ ನಿರಾಕರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದಾಗ್ಯೂ ಬಿಜೆಪಿ ಮತ್ತು ಜೆಡಿಎಸ್‌ನವರು ಯಾವುದೇ ದಾಖಲೆಗಳಿಲ್ಲದೆ ಎರಡು ವಾರಗಳ ಕಾಲ ಸದನವನ್ನು ದಿಕ್ಕು ತಪ್ಪಿಸಿದರು. ಸಂಸದೀಯ  ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗಬಾರದೋ ಅದಕ್ಕೆ ಬಿಜೆಪಿಯವರು ಮಾದರಿಯಾದರು. ಆದರೆ ಸಿದ್ದರಾಮಯ್ಯನವರು ಅಗ್ನಿಪರೀಕ್ಷೆಗೆ
ತಮ್ಮನ್ನು ಒಡ್ಡಿಕೊಂಡಿದ್ದಾರೆ. ಆರೋಪ ಸುಳ್ಳೇ ಆದರೂ, ನಿವೃತ್ತ ನ್ಯಾಯಾಽಶರಾದ ಜಸ್ಟಿಸ್ ಪಿ.ಬಿ.ದೇಸಾಯಿ ಯವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿ ಸ್ವಯಂತನಿಖೆಗೆ ಒಡ್ಡಿಕೊಂಡಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರ ವಿರುದ್ಧವೂ ಆರೋಪ ಕೇಳಿಬಂದಿತ್ತು.

ಆದರೆ ಯಾರಾದರೂ ತನಿಖೆಯ ‘ಅಗ್ನಿದಿವ್ಯ’ ಹಿಡಿಯುವ ಧೈರ್ಯ ಮಾಡಿದ್ದರೇ? ಇಲ್ಲ. ಏಕೆಂದರೆ ಆ ಸಾಹಸಕ್ಕೆ ಕೈಹಾಕುವುದಕ್ಕೆ ಅವರ ಆತ್ಮಸಾಕ್ಷಿ ಚುಚ್ಚುತ್ತಿತ್ತು. ತಪ್ಪಿತಸ್ಥರ ಭಾವನೆ ಕಾಡುತ್ತಿತ್ತು. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಚಾರ ಸಿದ್ದರಾಮಯ್ಯನವರಿಗೆ ಸ್ಪಷ್ಟ ವಾಗಿರುವುದರಿಂದಲೇ ತನಿಖೆಗೆ ಸಿದ್ಧರಾಗಿದ್ದಾರೆ. ಪಾದಯಾತ್ರೆ ದಿಲ್ಲಿಗೆ ಮಾಡಿ: ಅಷ್ಟಕ್ಕೂ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪಾದಯಾತ್ರೆಯನ್ನು ಮಾಡಬೇಕಿರುವುದು ಬೆಂಗಳೂರಿನಿಂದ ಮೈಸೂರಿಗೆ ಅಲ್ಲ, ಬೆಂಗಳೂರಿನಿಂದ ದಿಲ್ಲಿಗೆ. ಉಭಯಪಕ್ಷಗಳ ನಾಯಕರೇ, ಕನ್ನಡಿಗರಿಗೆ ಕೇಂದ್ರ ಸರಕಾರ ನಿರಂತರವಾಗಿ ಮಾಡುತ್ತಿರುವ ಅನ್ಯಾಯವನ್ನು
ಪ್ರಶ್ನಿಸಿ ನೀವು ಹೋರಾಟವನ್ನು ಮಾಡಬೇಕಿದೆ. ಅದು ನಿಮ್ಮ ನಿಜವಾದ ಕರ್ತವ್ಯ. ಆದರೆ ಅದನ್ನು ಬಿಟ್ಟು ರಿಯಲ್ ಎಸ್ಟೇಟ್ ಏಜೆಂಟ್‌ಗಳ ರೀತಿಯಲ್ಲಿ ದಿನಕ್ಕೊಂದು ಕತೆ ಹೇಳುತ್ತಾ ಪಾದಯಾತ್ರೆ ನಡೆಸಿದರೆ ಜನ ನಂಬುತ್ತಾರೆಯೇ? ಈ ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಗಣಿ ಅಕ್ರಮ, ನದಿ- ನೀರು ಇತ್ಯಾದಿ ವಿಷಯಗಳಿಗಾಗಿ ನಡೆದ ಪಾದಯಾತ್ರೆಗಳು ಯಶಸ್ವಿಯಾಗಿವೆ.

ನಿಮ್ಮಂತೆ ಅಧಿಕಾರ ಹಾಗೂ ಸುಳ್ಳು ಪ್ರತಿಪಾದನೆಗಾಗಿ ನಡೆದ ಹೋರಾಟ ಅರ್ಧಕ್ಕೇ ಮುಳುಗಿ ಹೋಗಿದೆ. ಸಾಧ್ಯವಿದ್ದರೆ, ನೀಟ್ ಅಕ್ರಮ, ಒಂದು ದೇಶ
ಒಂದು ಚುನಾವಣೆ, ಕ್ಷೇತ್ರ ಪುನರ್‌ವಿಂಗಡಣೆಯಂಥ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ. ಭೂಗಳ್ಳರನ್ನು ಬಗಲಲ್ಲಿ ಕಟ್ಟಿಕೊಂಡು ಹೋರಾಟ ನಡೆಸಿದರೆ ಜನ ದೊಣ್ಣೆ ತೆಗೆದುಕೊಳ್ಳುತ್ತಾರೆಂಬುದನ್ನು ಮರೆಯಬೇಡಿ.

(ಲೇಖಕರು ರಾಮಮನೋಹರ್
ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರು)

Leave a Reply

Your email address will not be published. Required fields are marked *