ಚಿಂತನ ಚಿಲುಮೆ
ಮಹಾದೇವ ಬಸರಕೋಡ
ಏಕಾಂಗಿತನವೆನ್ನುವುದು ಶಾಪವಲ್ಲ, ವರ. ಬದುಕಿನಲ್ಲಿ ಬರುವ ಏಕಾಂಗಿತನವನ್ನು, ಕೋಪ, ನಿರಾಸೆ, ಕ್ರೋಧ, ದ್ವೇಷ ಇವುಗಳ ಸೆರಗಿನಲ್ಲಿ ಸ್ವೀಕರಿಸುವುದಕ್ಕೆ ಪರ್ಯಾಯವಾಗಿ ಧನ್ಯತೆಯಿಂದ, ಪ್ರೀತಿಯಿಂದ, ಸಂಯಮದಿಂದ ನಮ್ಮದಾಗಿಸಿಕೊಂಡಾಗ ನಿಶ್ಚಿಂತ ಭಾವ, ಶಾಂತಿ, ಪ್ರೀತಿ, ಸಮಾಧಾನ ಸಿಗುತ್ತವೆ.
ಪ್ರಾಣಿ ಪ್ರಪಂಚದ ಮೂಲ ಲಕ್ಷಣಗಳಲ್ಲಿ ಗುಂಪಿನಲ್ಲಿ ಬದುಕುವುದು ಕೂಡ ಮಹತ್ತರವಾದ ಸಂಗತಿ. ಗುಂಪು-ಗುಂಪಾಗಿಯೇ ಬದುಕುವುದು, ಬೇಟೆ ಯಾಡುವುದು, ತಮ್ಮದೇ ಆದ ನೆಲೆ ಕಂಡುಕೊಳ್ಳುವುದು, ಬೆಳೆಯುವುದು, ಸುಖಿಸುವುದು, ಸುಭದ್ರತೆ ಅರಸುವುದನ್ನು ನಾವು ನೋಡಿದ್ದೇವೆ. ಅಂತೆಯೇ ಪ್ರಾಣಿಗಳು ತಮ್ಮ ಗುಂಪಿನಿಂದ ದೂರವಾದಾಗ ದಿಕ್ಕೆಟ್ಟು ಓಡುತ್ತ ತಮ್ಮ ಗುಂಪನ್ನು ಸೇರಿಕೊಳ್ಳಲು ಪ್ರಯತ್ನಿಸುತ್ತವೆ.
ಮನುಷ್ಯನು ಕೂಡ ಮೂಲತಃ ಪ್ರಾಣಿಯೇ ಆಗಿರುವುದರಿಂದ ಇದು ಅನಿರೀಕ್ಷಿತವೇನಲ್ಲ. ಮನುಷ್ಯನಂತೂ ಸಾಮಾಜಿಕ ಜೀವಿ. ಅವನಲ್ಲಿರುವ ಸಂವಹನ ಕೌಶಲವು ಇತರೆಲ್ಲ ಜೀವಸಂಕುಲಕ್ಕಿಂತ ವಿಶೇಷವಾಗಿ ದೊರಕಿದ ಉಡುಗೊರೆಯಾಗಿದೆ. ಇದರಿಂದಾಗಿ ಆತ ಪ್ರಾಣಿ ಪ್ರಪಂಚದಲ್ಲಿ ತೀರಾ
ಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ; ಮನುಷ್ಯ ನಾಗರಿಕತೆಯನ್ನು ಕಟ್ಟಿದ್ದು, ಜ್ಞಾನಪ್ರಪಂಚದ ನಿರ್ಮಾಣಕ್ಕೆ ನಾಂದಿಹಾಡಿದ್ದು ಮಾತಿನ ಶಕ್ತಿಯಿಂದಲೇ. ಹಾಗಾಗಿಯೇ ಅವನಿಗೆ ಸಾಮಾಜಿಕ ಸಂಬಂಧಗಳು ಸದಾ ಅಗತ್ಯವೆಂಬುದು ಒಪ್ಪತಕ್ಕ ಸಂಗತಿಯೇ ಆಗಿದೆ. ಅದರೂ ಬದುಕಿನ ಹಲವು
ಸಂದರ್ಭಗಳಲ್ಲಿ ನಮಗೆ ತೀರಾ ಏಕಾಂಗಿತನದ ಭಾವವು ಅನಿರೀಕ್ಷಿತವಾಗಿ ಕಾಡುತ್ತಲಿರುತ್ತದೆ. ಬದಲಾವಣೆಯು ಜಗದ ನಿಯಮವೇ ಆಗಿರುವುದರಿಂದ ಅದು ಸಹಜವೂ ಹೌದು.
ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ದೂರದ ದೇಶಗಳಿಗೆ ಹೋಗಿ ಅಲ್ಲಿಯೇ ನೆಲೆ ನಿಂತಾಗ, ಸಪ್ತಪದಿ ತುಳಿದು ಬದುಕಿನ ತುಂಬ ಜತೆಯಾಗಿ
ಹೆಜ್ಜೆ ಹಾಕುತ್ತೇನೆ ಎಂದ ಪತಿ ಇಲ್ಲವೇ ಸತಿ ಇದ್ದಕ್ಕಿದ್ದಂತೆ ಯಾವುದೋ ತಿರುವಿನಲ್ಲಿ ಸರಿದುಹೋದಾಗ, ನಮ್ಮವರೆನಿಸಿಕೊಂಡ ಬಂಧು- ಬಳಗ, ಆಪ್ತರು
ನಮ್ಮ ನಂಬಿಕೆಗಳಿಗೆ ಒಂದಷ್ಟು ಧಕ್ಕೆ ತಂದು ದೂರದಲ್ಲಿ ನಿಂತಾಗ, ಪರಿಸ್ಥಿತಿಯ ಅಸಹಾಯಕತೆಯ ಆಳದಲ್ಲಿ ಬಿದ್ದು ತಂದೆ-ತಾಯಿಗಳೇ ನಮ್ಮ ನೆರವಿಗೆ ಬಾರದೇ ಹೋದಾಗ, ಸ್ನೇಹಿತರೂ ಸಣ್ಣ-ಪುಟ್ಟ ಕಾರಣಗಳಿಗಾಗಿ ಕೈಕೊಟ್ಟು ಹೋದಾಗ, ತುಂಬಾ ಪ್ರೀತಿಸಿದ ಹುಡುಗ ಇಲ್ಲವೇ ಹುಡುಗಿ ಕಾರಣ ಹೇಳದೆ ಬಿಟ್ಟುಹೋದಾಗ, ಜಗತ್ತು ನಮ್ಮ ವಿರುದ್ಧ ತನ್ನೆಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಟ್ಟಿದೆ ಎಂದು ನಮಗೆ ಅನಿಸತೊಡಗುತ್ತದೆ.
ನನ್ನ ಬದುಕೇ ಮುಗಿದು ಹೋಯಿತು ಎನ್ನುವ ಹತಾಶೆಯ ಭಾವದಲ್ಲಿ ಸಿಲುಕಿ ಬದುಕು ಬೇಡವೆನಿಸತೊಡಗುತ್ತದೆ. ನಮ್ಮ ನಿಯಂತ್ರಣಕ್ಕೆ ದಕ್ಕದ ಇಂಥ
ಕೆಲವು ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಅವನ್ನು ಸಮರ್ಥವಾಗಿ ಎದುರಿಸಲು, ನಾವೊಂದಿಷ್ಟು ವಿಭಿನ್ನ ಆಲೋಚನೆ, ನಡೆ ರೂಢಿಸಿ ಕೊಳ್ಳುವುದು ಅಗತ್ಯವೆನಿಸುತ್ತದೆ. ನಮಗೆ ಸಂಕಷ್ಟವೆನಿಸಿದ ಅಂಥ ಸಂದರ್ಭವನ್ನು ಸಮಚಿತ್ತದಿಂದ ಎದುರುಗೊಳ್ಳುವುದು ಜಾಣತನವಾಗಿದೆ.
ಅವನೊಬ್ಬ ಸಾತ್ವಿಕ. ಅವನು ಒಂದೊಮ್ಮೆ ಒಂದು ಹಳ್ಳಿಗೆ ಹೋಗಿದ್ದ. ಅಲ್ಲಿರುವ ಮನೆಗಳು ಬೆರಳೆಣಿಕೆಯಷ್ಟು ಮಾತ್ರವೇ. ಅದಾಗಲೇ ಸಂಜೆಯಾಗಿತ್ತು. ಬೇರೆ ಹಳ್ಳಿಗೆ ಹೋಗುವುದು ಕಷ್ಟಸಾಧ್ಯವಾಗಿತ್ತು. ಅಲ್ಲಿಯೇ ಯಾವುದಾದರೊಂದು ಮನೆಯಲ್ಲಿ ಆಶ್ರಯ ಪಡೆದರಾಯಿತು ಎಂದು ನಿರ್ಧರಿಸಿ ಮನೆಗಳಲ್ಲಿ ಇರುವವರನ್ನು ಕೇಳಿದನು.
ಅಲ್ಲಿರುವ ಯಾವುದೇ ಮನೆಯವರೂ ಅವನಿಗೆ ಒಂದಷ್ಟು ಆಶ್ರಯ ಕೊಡಲು ಒಪ್ಪಿಗೆ ಸೂಚಿಸಲಿಲ್ಲ. ಕಾರಣವೂ ಸರಳವಾಗಿತ್ತು. ಆ ಹಳ್ಳಿಯ ಜನರಾರೂ ಆ ಸಾತ್ವಿಕ ಪ್ರತಿಪಾದಿಸುತ್ತಿದ್ದ ಧರ್ಮ ಸಿದ್ಧಾಂತಗಳನ್ನು ಒಪ್ಪುತ್ತಿರಲಿಲ್ಲ. ಆತ ಅನಿವಾರ್ಯವಾಗಿ ಅದೇ ಹಳ್ಳಿಯಲ್ಲಿಯೇ ರಾತ್ರಿಯೆಲ್ಲ ಕಳೆಯಬೇಕಾಗಿತ್ತು. ಹೀಗಾಗಿ, ಅಲ್ಲಿನ ಹೊಲದ ಮರದ ಮೈಚಾಚಿಕೊಂಡ ಸಾತ್ವಿಕ, ಒಂದಷ್ಟು ಸಮಯದ ನಂತರ ನಿದ್ದೆಗೆ ಜಾರಿದ. ಇನ್ನೂ ಮಧ್ಯರಾತ್ರಿ ೨ ಗಂಟೆಯ ಸಮಯ. ತೀವ್ರ ಚಳಿ ಯಿಂದಾಗ ಸಾತ್ವಿಕನಿಗೆ ಎಚ್ಚರವಾಯಿತು. ಕಣ್ಣು ತೆರೆದು ನೋಡಿದರೆ, ಅದ್ಭುತ ಪ್ರಪಂಚ ಅನಾವರಣಗೊಂಡಿತ್ತು ಅವ ನೆದುರು.
ಮರದ ತುಂಬೆಲ್ಲ ತುಂಬಿಕೊಂಡಿದ್ದ ಮೊಗ್ಗುಗಳು ಅರಳಿ ನಗು ಸೂಸುತ್ತಿದ್ದವು. ಹೂವುಗಳ ಕಂಪು ವಾತಾವರಣವನ್ನು ಆಹ್ಲಾದಕರವಾಗಿಸಿತ್ತು. ಪೂರ್ಣ
ಚಂದಿರನ ಬೆಳದಿಂಗಳು ಹಾಲು ಸುರಿದಂತೆ ಹೊಲದ ತುಂಬೆಲ್ಲ ಪಸರಿಸಿತ್ತು. ಆ ಸಾತ್ವಿಕ ಪ್ರತಿಕ್ಷಣವನ್ನೂ ಮನಸಾರೆ ಅನುಭವಿಸಿದ್ದ. ಬದುಕಿನ ಸಾರ್ಥಕತೆ ಎಂದರೆ ಇದುವೇ ಎನ್ನುವ ಭಾವ ಅವನದಾಗಿತ್ತು. ಬೆಳಗಾಗುತ್ತಲೇ ಅವನು ಹಳ್ಳಿಯ ಮನೆಮನೆಗೆ ಹೋಗಿ ಬಾಗಿಲು ಬಡಿದು ಪ್ರತಿಯೊಬ್ಬ ರಿಗೂ ಧನ್ಯವಾದ ಹೇಳಿದ. ಹಳ್ಳಿಯ ಜನರೆಲ್ಲ ಆಶ್ಚರ್ಯಚಕಿತರಾದರು.
‘ನಿನಗೆ ಆಶ್ರಯ ಕೊಡದ ನಮಗೇಕೆ ಧನ್ಯವಾದ?’ ಎಂದು ಪ್ರಶ್ನಿಸಿದರು. ಆಗ ಸಾತ್ವಿಕ, ‘ನಿನ್ನೆ ರಾತ್ರಿ ನೀವು ನನ್ನ ಮೇಲಿನ ಪ್ರೀತಿಯಿಂದ, ದಯೆಯಿಂದಲೇ ಬಾಗಿಲು ಮುಚ್ಚಿದಿರಿ. ನನ್ನನ್ನು ಏಕಾಂಗಿಯಾಗಿಸಿದಿರಿ. ಅದರಿಂದಾಗಿಯೇ ನಾನು ಬದುಕಿನ ಸಾರ್ಥಕ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗಿದ್ದು. ಅದು ನೀವು ಕೊಟ್ಟ ಬಹುದೊಡ್ಡ ಕಾಣಿಕೆ. ನೀವು ಆಶ್ರಯ ಕೊಟ್ಟಿದ್ದರೆ ನಾನು ನಿಮ್ಮ ಮನೆಯಲ್ಲಿ ತಂಗುತ್ತಿದ್ದೆ. ಹೊರಗೆ ನಾನು ಅನುಭವಿಸಿದ ಅಪೂರ್ವ ಕ್ಷಣ ನನ್ನ ಪಾಲಿಗೆ ಇಲ್ಲ ವಾಗುತ್ತಿತ್ತು’ ಎಂದು ಹೇಳಿ ಮತ್ತೊಮ್ಮೆ ಧನ್ಯವಾದ ಅರ್ಪಿಸಿದ.
ಕೆಲವೊಮ್ಮೆ ಏಕಾಂಗಿತನದ ಭಾವ ನಮ್ಮನ್ನು ತೀವ್ರವಾಗಿ ಕಾಡುವುದುಂಟು. ಹಾಗಾದಾಗ, ‘ಇದು ಜಗತ್ತಿನ ವಿರುದ್ಧ ನಾವಾಗಿಯೇ ಎಲ್ಲ ಕಿಟಕಿ ಬಾಗಿಲು ಗಳನ್ನು ಮುಚ್ಚಿಕೊಂಡಿರುವ ಸ್ಥಿತಿಯೇ ಆಗಿದೆ’ ಎಂಬ ವಾಸ್ತವಿಕತೆಯನ್ನು ನಾವು ಅರಿತುಕೊಳ್ಳಬೇಕು. ಹತಾಶೆ, ನಿರಾಸೆ, ಸಂಕಟಗಳನ್ನು ಒಂದಷ್ಟು ಪಕ್ಕಕ್ಕಿಟ್ಟು ಸಮಚಿತ್ತ ಮತ್ತು ಸಂತೋಷದ ಭಾವದಿಂದ ಏಕಾಂಗಿತನವನ್ನು ಸ್ವೀಕರಿಸಲು ಸಿದ್ಧತೆ ಮಾಡಿಕೊಂಡರೆ ಅದು ನಮಗೆ ಶಾಪವಾಗದೇ ವರವಾಗಿ ಪರಿಣಮಿಸುವ ಸಾವಿರಾರು ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ಬದುಕಿನಲ್ಲಿ ಬರುವ ಏಕಾಂಗಿತನವನ್ನು, ಕೋಪ, ನಿರಾಸೆ, ಕ್ರೋಧ, ದ್ವೇಷ ಇವುಗಳ ಸೆರಗಿನಲ್ಲಿ ಸ್ವೀಕರಿಸುವುದಕ್ಕೆ ಪರ್ಯಾಯವಾಗಿ ಧನ್ಯತೆಯಿಂದ, ಪ್ರೀತಿಯಿಂದ, ಸಂಯಮದಿಂದ ನಮ್ಮದಾಗಿಸಿಕೊಂಡಾಗ ನಿಶ್ಚಿಂತ ಭಾವ, ಶಾಂತಿ, ಪ್ರೀತಿ, ಸಮಾಧಾನ ಸಿಗುತ್ತವೆ. ಏಕಾಂಗಿತನವೆನ್ನುವುದು ನಿಜಕ್ಕೂ
ಶಾಪವಲ್ಲ, ಅದೊಂದು ವರ. ನಮ್ಮ ನೆಲದಲ್ಲಿ ಅದೆಷ್ಟೋ ಋಷಿ-ಮುನಿಗಳು, ಸಾಧು-ಸಂತರು ಎಲ್ಲವನ್ನೂ ತ್ಯಾಗ ಮಾಡಿ ಏಕಾಂತವನ್ನು ಬಯಸಿ ಕಾಡನ್ನು ಅರಸಿಹೋದ, ಬದುಕಿನ ಸಾರ್ಥಕತೆಯನ್ನು ಕಂಡುಕೊಂಡ ಹೇರಳ ಉದಾಹರಣೆಗಳಿವೆ.
ಬಹುತೇಕ ಬಾರಿ ಅವರ ನಡೆ-ನುಡಿಗಳು, ಮಾರ್ಗದರ್ಶನ ಉಪದೇಶಗಳು ನಮಗೆಲ್ಲ ಅನುಕರಣೀಯ ವೆನಿಸಿರುವುದು ಸುಳ್ಳಲ್ಲ. ಏಕಾಂಗಿತನವು ಬದಲಾವಣೆಗೆ ಒಳಪಡುವ ಎಲ್ಲ ಸಂಬಂಧಗಳ ಮೇಲಿನ ಅವಲಂಬನೆಯನ್ನು ಮಿತಗೊಳಿಸಿ ನಮ್ಮತನವನ್ನು, ನಮ್ಮಲ್ಲಿರುವ ಅಂತಃಶಕ್ತಿಯನ್ನು, ಸೃಜನ ಶೀಲತೆಯನ್ನು ಅನಾವರಣಗೊಳಿಸುವ ಸದವಕಾಶವೇ ಸರಿ. ನಾವು ಸಲ್ಲದ ಸದ್ದುಗಳಿಂದ, ಜಗದ ಗದ್ದಲಗಳಿಂದ ದೂರಾದಾಗ ಮಾತ್ರವೇ ವಿಶೇಷವಾದ, ಅತ್ಯದ್ಭುತವಾದ ಅನುಭವ ಗಳು ನಮಗೆ ದಕ್ಕಲು ಸಾಧ್ಯ. ನಾವು ಅಂತರ್ಮುಖಿಯಾಗುವಲ್ಲಿ ಇಂಥ ಏಕಾಂಗಿತನದ ಸಂದರ್ಭಗಳು ಬಹುದೊಡ್ಡ ಶಕ್ತಿಯನ್ನು ತಂದುಕೊಡುತ್ತವೆ. ಸತ್ಯವನ್ನು ಕುರಿತು ಗಾಢವಾಗಿ ಯೋಚಿಸಲು ರಹದಾರಿಯನ್ನೊದಗಿಸುತ್ತದೆ.
ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ಏಕಕಾಲಕ್ಕೆ ಗ್ರಹಿಸುವ ಶಕ್ತಿಯನ್ನು ತಂದು ಕೊಡುತ್ತವೆ, ವಿಚಾರಶೀಲತೆಯನ್ನು ಪ್ರೇರೇಪಿಸುತ್ತವೆ. ಇಂಥ ವಿಚಾರಶೀಲತೆಯಿಂದಲೇ ಮನುಷ್ಯ ಸ್ವತಂತ್ರನಾಗಲು ಸಾಧ್ಯವಾಗುತ್ತದೆ. ಅನಗತ್ಯ ಕೊರಗಿನಿಂದ, ಮಾಲಿನ್ಯಗಳಿಂದ ಮನಸ್ಸು ಮುಕ್ತಗೊಳ್ಳುತ್ತದೆ, ಅಂತರಂಗದ ವಿಕಾಸಕ್ಕೆ ಕಾರಣ ವಾಗುತ್ತದೆ. ನಮ್ಮ ಮಾನಸಿಕ ಆರೋಗ್ಯವನ್ನು ಹದವಾಗಿಡುತ್ತದೆ. ಒಳಮನಸ್ಸಿನ ಅನಾವರಣಕ್ಕೆ ಇಂಬು ನೀಡಿ,
ಹೊರಗಿನ ದುಗುಡವನ್ನು ಇಲ್ಲವಾಗಿಸುತ್ತ ಸಮದರ್ಶನ ನೀಡುವ ಸಾಧನವಾಗುತ್ತದೆ. ರೂಢಿಗತ ಜಡತೆಯನ್ನು ನೀಗಿ ಬದುಕಿಗೆ ಅಗತ್ಯವಾದ ಚಲನಶೀಲತೆಯನ್ನು ತಂದುಕೊಡು ತ್ತದೆ. ಖಾಲಿಯೂ, ವಿಷಣ್ಣವೂ, ನೀರವವೂ ಆದ ಮನಸ್ಸಿನಲ್ಲಿ ನಂಬಿಕೆ, ಭರವಸೆ ಚಿಮ್ಮಿಸಿ ಪುನರ್ನವೀಕರಿಸುವ ಸೃಜನಶೀಲ ಶಕ್ತಿಗೆ ಮುನ್ನುಡಿ ಬರೆಯುತ್ತದೆ. ಬದುಕನ್ನು ಹೊಸದಾಗಿಸುತ್ತದೆ. ಆಧ್ಯಾತ್ಮಿಕ ಬದುಕಿನ ಬೆಳವಣಿಗೆಯ ಬೀಡಾಗಿಸುತ್ತದೆ.
ಬಹಿರಂಗದ ಬಯಕೆಗಳ ತಣಿವಿಗಿಂತ ಅಂತರಂಗದ ಸಂತೃಪ್ತಿಯು ದೊಡ್ಡದು ಎಂಬ ಸತ್ಯವನ್ನು ಮನದಟ್ಟು ಮಾಡಿಸುತ್ತದೆ. ಅದಮ್ಯ ಜೀವನಪ್ರೀತಿಗೆ ಕಾರಣವಾಗುತ್ತದೆ. ಬದುಕಿನ ಸಾರ್ಥಕತೆಗೆ ಮುನ್ನುಡಿಯಾಗುತ್ತದೆ. ಎಲ್ಲ ಬಗೆಯ ಆಧೀನತೆಯನ್ನು ಮೀರಿದ ನೆಲೆಯಲ್ಲಿ ಬದುಕನ್ನು ಭದ್ರವಾಗಿಸುತ್ತದೆ. ಆಗ ಬದುಕು ಚೇತೊಹಾರಿಯಾಗುತ್ತದೆ.
(ಲೇಖಕರು ಶಿಕ್ಷಕರು)