Friday, 13th December 2024

ಕೌಶಲಾಭಿವೃದ್ದಿಯೇ ಪ್ರಗತಿಗೆ ರಹದಾರಿ

ಯುವಶಕ್ತಿ

ಡಾ.ಎ.ಜಯಕುಮಾರ ಶೆಟ್ಟಿ

ಬಾಯಾರಿ ಬಸವಳಿದ ಕಾಗೆಯು ಕಲ್ಲುಗಳನ್ನು ಆಯ್ದು ತಂದು ಹೂಜಿಗೆ ಹಾಕಿ ಉಪಾಯದಿಂದ ನೀರು ಕುಡಿದ ಕತೆ ನಿಮಗೆ ಗೊತ್ತು. ಆದರೆ ಆ ಕಾಗೆ ಇಂದು ಬುದ್ಧಿವಂತ ಕಾಗೆಯಾಗಬೇಕಾದರೆ ಕಲ್ಲುಗಳ ಬದಲು ‘ಸ್ಟ್ರಾ’ ಹೆಕ್ಕಿ ತಂದು ತಳದಲ್ಲಿದ್ದ ನೀರನ್ನು ಎಳೆಯಬೇಕು ಅಷ್ಟೆ! ಆಧುನಿಕ ಕಾಗೆಗೆ ‘ಸ್ಟ್ರಾ’ ಬಗ್ಗೆ ಗೊತ್ತಿರಬೇಕು.

ಭಾರತವು ಯುವಶಕ್ತಿಯ ಭಂಡಾರವನ್ನೇ ಹೊಂದಿದ್ದು, ಆತ್ಮನಿರ್ಭರ ಭಾರತಕ್ಕೆ ಯುವ ಜನಾಂಗದ ಕೌಶಲವೇ ಪ್ರೇರಕ ಶಕ್ತಿ
ಯಾಗಲಿದೆ. ಕೌಶಲ ಅಭಿವೃದ್ಧಿಯಿಂದ ಮಾತ್ರ ವ್ಯಕ್ತಿ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ. ಉತ್ಸಾಹಿ ಯುವಜನರು ದೇಶದ ಅಭಿವೃದ್ಧಿಯ ಚಾಲಕಶಕ್ತಿಯಾಗಿದ್ದಾರೆ. ವೃತ್ತಿ, ಜೀವನ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾದ ಕೌಶಲವನ್ನು ಯುವಜನತೆ ಮೈಗೂಡಿಸಿಕೊಳ್ಳುವಂತಾಗ ಬೇಕು ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಕೌಶಲದಿನ ಹೆಚ್ಚು ಮಹತ್ವದ್ದಾಗಿದೆ.

ವಿಶ್ವ ಯುವಕೌಶಲ ದಿನ: ಆರ್ಥಿಕ ಬೆಳವಣಿಗೆ ಹಾಗೂ ವೈಯುಕ್ತಿಕ ಯಶಸ್ಸನ್ನು ಸಾಧಿಸುವಲ್ಲಿ ಕೌಶಲಗಳು ಎಷ್ಟು ಮಹತ್ವ ದ್ದಾಗಿವೆ ಎಂಬುದನ್ನು ಪ್ರಚುರಪಡಿಸಲು ಹಾಗೂ ಕೌಶಲಗಳ ಅಭಿವೃದ್ಧಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಚರ್ಚೆಯಾಗಿ ಈ ಕುರಿತು ಒಲವು ಮೂಡಿಸುವ ಉದ್ದೇಶದಿಂದ ೨೦೧೪ರಲ್ಲಿ ವಿಶ್ವಸಂಸ್ಥೆಯು ಜುಲೈ ೧೫ನ್ನು ವಿಶ್ವಯುವಕೌಶಲ ದಿನ ಎಂದು ಘೋಷಿಸಿತು.

ಉದ್ಯೋಗಿಗಳನ್ನಾಗಿ ಮಾಡಬಹುದು ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು ಈ ದಿನದ ಹಿಂದಿನ ಕೇಂದ್ರ ಕಲ್ಪನೆಯಾಗಿದೆ. ಔಪಚಾರಿಕ ಶಾಲಾ ಶಿಕ್ಷಣವನ್ನು ತಾಂತ್ರಿಕ ತರಬೇತಿಯೊಂದಿಗೆ ಸಂಯೋಜಿಸಬೇಕು. ಇದರಿಂದ ಯುವಕರು, ಶ್ರಮಶೀಲರು ಮತ್ತು ಉದ್ಯಮಶೀಲರಾಗಬಹುದು. ಇದು ಸ್ಥಳೀಯ ಮತ್ತು ಜಾಗತಿಕ ಆರ್ಥಿಕತೆಗಳ ಮೇಲೆ ಅಗಾಧ ವಾದ ಧನಾತ್ಮಕ ಪರಿಣಾಮ ಬೀರುತ್ತದೆ.

‘ಪರಿವರ್ತನೀಯ ಭವಿಷ್ಯಕ್ಕಾಗಿ ಕೌಶಲದ ಶಿಕ್ಷಕರು, ತರಬೇತುದಾರರು ಮತ್ತು ಯುವಕರು’ ಈ ಘೋಷವಾಕ್ಯದೊಂದಿಗೆ ಈ ವರ್ಷದ ವಿಶ್ವ ಯುವಕೌಶಲ ದಿನವನ್ನು ಆಚರಿಸಲಾಗುತ್ತದೆ. ಯುವಕರು ಕಾರ್ಮಿಕ ಮಾರುಕಟ್ಟೆಗೆ ಪರಿವರ್ತನೆಗೊಳ್ಳಲು ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕೌಶಲಗಳನ್ನು ಒದಗಿಸುವಂತಾಗುವಲ್ಲಿ ಶಿಕ್ಷಕರು,  ತರಬೇತು ದಾರರು ಮತ್ತು ಇತರ ವಿಷಯತಜ್ಞರು ವಹಿಸುವ ಪ್ರಮುಖ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ. ತಾಂತ್ರಿಕ ಪ್ರಗತಿಗಳು ಮತ್ತು ಕಾರ್ಮಿಕ ಮಾರುಕಟ್ಟೆಯ ಚಲನಶೀಲತೆಯನ್ನು ಹೆಚ್ಚಿಸುವಲ್ಲಿ ಚುರುಕುಬುದ್ಧಿ ಮತ್ತು ಹೊಂದಿಕೊಳ್ಳುವ ಮನೋಧರ್ಮ ಮಹತ್ತರ ಪಾತ್ರವನ್ನು ವಹಿಸುತ್ತವೆ.

ಸವಾಲುಗಳು ಹಾಗೂ ಅವಕಾಶಗಳು: ರಾಷ್ಟ್ರದ ಆರ್ಥಿಕ ಅಭಿವೃದ್ಧಿಯನ್ನು ನಿರ್ಧರಿಸುವ ಸಮೀಕರಣಗಳು ಇತ್ತೀಚಿನ
ದಶಕಗಳಲ್ಲಿ ಬದಲಾಗಿವೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚಿನ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಭವಿಷ್ಯದಲ್ಲಿ ಹೆಚ್ಚಿನ
ಬದಲಾವಣೆಗಾಗಿ ಕಾಯುತ್ತಿವೆ. ಇಂದು ಜಾಗತಿಕ ಜನಸಂಖ್ಯೆಯ ಶೇ. ೧೬ರಷ್ಟು ಜನ (೧.೨ ಬಿಲಿಯನ್) ೧೫ರಿಂದ ೨೪ ವಯಸ್ಸಿನ ಯುವಕ ಯುವತಿಯರಿದ್ದಾರೆ. ಸುಸ್ಥಿರ, ಒಳಗೊಳ್ಳುವ ಹಾಗೂ ಸ್ಥಿರ ಸಮಾಜ ರಚನೆಯಲ್ಲಿ ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತಿ ಮಹತ್ವದ್ದಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಒಂದು ಅಂದಾಜಿನ ಪ್ರಕಾರ ೩.೩ ಶತಕೋಟಿ ಉದ್ಯೋಗಿಗಳ ಅಗತ್ಯ ವಿರುತ್ತದೆ. ಅತಿ ಹೆಚ್ಚು ಉದ್ಯೋಗವನ್ನು ಒದಗಿಸುವ ವಲಯಗಳಾಗಿ ಸೇವೆ ಹಾಗೂ ಹೆಚ್ಚು ಬಂಡವಾಳ ಅಗತ್ಯವಿರುವ ಉತ್ಪಾದನಾ ಕ್ಷೇತ್ರಗಳು ಮೂಡಿಬರುತ್ತವೆ.

ಇಂದಿನ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಮ್ಮ ದೇಶದ ಯುವ ಜನರ ಕೌಶಲವರ್ಧನೆಯ ಬಗೆಗಿನ ಚರ್ಚೆ ಮುನ್ನಲೆಗೆ ಬಂದಿದೆ.

ಬದಲಾಗುತ್ತಿರುವ ಉದ್ಯೋಗಗಳು: ಪ್ರಪಂಚದಾದ್ಯಂತದ ಯುವಕರು ಇಂದು ಅವರ ಪೋಷಕರು ಎದು ರಿಸಿದ ಸವಾಲು ಗಳಿಗಿಂತ ಮೂಲ ಭೂತವಾಗಿ ಭಿನ್ನವಾದ, ಕೌಶಲ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಗಂಭೀರ ಸವಾಲುಗಳನ್ನು ಎದುರಿ
ಸುತ್ತಿದ್ದಾರೆ. ಆಧುನಿಕ ಉದ್ಯೋಗ ಗಳಿಗೆ ಯುವಕರನ್ನು ಸಿದ್ಧಪಡಿಸುವುದು ಮತ್ತು ಮಾನವ ಸಂಪನ್ಮೂಲ ಯೋಜನೆ ಬಹಳ
ಕ್ಲಿಷ್ಟಕರವಾದ ವಿಷಯ ಹಾಗೂ ಪ್ರಸಕ್ತ ಕಾಲದ ಕಾಳಜಿಯೂ ಆಗಿದೆ.

 Read E-Paper click here

ಜಾಗತಿಕ ಆರ್ಥಿಕ ಸಂಘಟನೆಯ ೨೦೧೯ರ ವರದಿಯ ಪ್ರಕಾರ ‘ಇಂದು ಪ್ರಾಥಮಿಕ ಶಾಲೆಗೆ ಪ್ರವೇಶಿಸುವ ಶೇ. ೬೫ರಷ್ಟು ಮಕ್ಕಳು ಅಂತಿಮವಾಗಿ ಇನ್ನೂ ಅಸ್ತಿತ್ವದಲ್ಲಿರದ ಹೊಸ ಉದ್ಯೋಗ ಪ್ರಕಾರಗಳಲ್ಲಿ ತೊಡಗುವಂತಾಗುತ್ತದೆ’. ಹಳೆಯ ಉದ್ಯೋಗಗಳೂ ತಂತ್ರಜ್ಞಾನ, ಜಾಗತೀಕರಣ ಹಾಗೂ ರೂಪಾಂತರಗೊಳ್ಳುತ್ತಿರುವ ಜನಸಂಖ್ಯೆಯಿಂದಾಗಿ ಕೆಲಸದ ಸ್ಥಳಗಳಲ್ಲಿ ಅಮೂಲಾಗ್ರವಾಗಿ ವಿಭಿನ್ನವಾಗಲಿದೆ.

ಭಾರತ ಜಗತ್ತಿನಲ್ಲೇ ಯುವಕ: ಭಾರತದ ಜನಸಂಖ್ಯೆಯಲ್ಲಿ ವಿಶ್ವದ ಅತ್ಯಂತ ಕಿರಿಯರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಜನಸಂಖ್ಯೆ ಯ ಶೇ.೬೫ರಷ್ಟುಮಂದಿ ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಮ್ಮ ಜನಸಂಖ್ಯೆಯ ಶೇ.೬೨ರಷ್ಟು ಮಂದಿ ೧೫-೫೯ ವರ್ಷಗಳ ದುಡಿಯುವ ವಯಸ್ಸಿನ ಗುಂಪಿನಲ್ಲಿ ದ್ದಾರೆ. ೨೦೨೨-೨೩ರಲ್ಲಿ ಭಾರತದಲ್ಲಿ ಜನರ ಸರಾಸರಿ ವಯಸ್ಸು ೨೮ ವರ್ಷ ವಾಗಿದ್ದರೆ, ಚೀನಾದಲ್ಲಿ ೩೭ ಮತ್ತು ಪಶ್ಚಿಮ ಯುರೋಪ್‌ನಲ್ಲಿ ೪೫ ವರ್ಷಗಳಾಗಿವೆ. ಇದು ಭಾರತದ ದುಡಿಯುವ ಜನಸಂಖ್ಯೆ ಯು ದುಡಿಯದ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಇದು ಜನಸಂಖ್ಯೆಯ ಲಾಭದ ಅನುಕೂಲಕರ ಸ್ಥಿತಿಗೆ ಕಾರಣವಾಗುತ್ತದೆ.

ಸ್ಕಿಲ್ ಇಂಡಿಯಾ: ಕೇಂದ್ರ ಸರಕಾರದ ಮಹತ್ವದ ಯೋಜನೆ ‘ಸ್ಕಿಲ್ ಇಂಡಿಯಾ’ ಬರೀ ಹೊಟ್ಟೆ ತುಂಬಿಸುವ ಯೋಜನೆಯಲ್ಲ, ಬದಲಾಗಿ ಬಡ ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ರಾಷ್ಟ್ರಕ್ಕೆ ಹೊಸ ಶಕ್ತಿಯನ್ನು ನೀಡಲಿರುವ ಯೋಜನೆ ಯಾಗಿದೆ. ಜುಲೈ ೧೫ರ ವಿಶ್ವ ಯುವಕೌಶಲ ದಿನಾಚರಣೆ ಅಂಗವಾಗಿ ನಮ್ಮ ಕೇಂದ್ರ ಸರಕಾರವು, ಯುವಜನತೆಯ ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಸಜ್ಜುಗೊಳಿಸುವ ಆಶಯದಿಂದ ‘ಕೌಶಲ ಭಾರತ’ ಯೋಜನೆಯನ್ನು ೨೦೧೫ರಲ್ಲಿ ಘೋಷಿಸಿತು. ಆತ್ಮ ನಿರ್ಭರ ಭಾರತ ಯೋಜನೆ ಯಶಸ್ಸಿಗೆ ಕೌಶಲಯುತ ಯುವಪೀಳಿಗೆಯ ಅವಶ್ಯಕತೆಯಿದೆ.

ಬದಲಾದ ಬುದ್ಧಿವಂತಿಕೆ: ಬಾಯಾರಿ ಬಸವಳಿದ ಕಾಗೆಯು ಕಲ್ಲುಗಳನ್ನು ಆಯ್ದು ತಂದು ಹೂಜಿಗೆ ಹಾಕಿ ಉಪಾಯದಿಂದ ನೀರು ಕುಡಿದ ಕತೆ ದಶಕಗಳ ಹಿಂದಿನವರೆಗೂ ಮಾರ್ಗದರ್ಶಿ ಕತೆಯಾಗಿತ್ತು. ಆದರೆ ಆ ಕಾಗೆ ಇಂದು ಬುದ್ಧಿವಂತ ಕಾಗೆಯಾಗ ಬೇಕಾದರೆ ಕಲ್ಲುಗಳ ಬದಲು ‘ಸ್ಟ್ರಾ’ ಹೆಕ್ಕಿ ತಂದು ತಳದಲ್ಲಿದ್ದ ನೀರನ್ನು ಎಳೆಯಬೇಕು ಅಷ್ಟೆ! ಆಧುನಿಕ ಕಾಗೆಗೆ ‘ಸ್ಟ್ರಾ’ ಬಗ್ಗೆ ಗೊತ್ತಿರಬೇಕು, ಹೊಸತನ್ನು ಅಳವಡಿಸುವ ಮನಸ್ಥಿತಿ ಇರಬೇಕು ಹಾಗೂ ಅದನ್ನು ಉಪಯೋಗಿಸುವ ಕಲೆಯೂ ಕರಗತ ವಾಗಿರಬೇಕು. ಬೆಳವಣಿಗೆಗೆ ಬದಲಾವಣೆ ಅಗತ್ಯ ಹಾಗೂ ಬದಲಾವಣೆ ಪ್ರಗತಿಪರ ಆಗಿರಬೇಕು. ಪ್ರಗತಿಪರ ನಡವಳಿಕೆಗಳನ್ನು ಅಳವಡಿಸಲು ಆಧುನಿಕ ಜ್ಞಾನ, ಮನೋಧರ್ಮ ಹಾಗೂ ಕೌಶಲ ಅಗತ್ಯ.

ನಿರಂತರ ಕಲಿಕೆ ಯಶಸ್ಸಿನ ಕೀಲಿಕೈ: ಇಂದಿನ ಕೆಲಸಗಳನ್ನು ನಿನ್ನೆಯ ವಿಧಾನಗಳ ಮೂಲಕ ಮಾಡಿ ನಾಳೆ ವ್ಯವಹಾರ
ಮಾಡಲಾಗದು ಎಂಬುದು ಉದ್ಯಮ ಜಗತ್ತಿನ ಮಾರ್ಗದರ್ಶಿ ಸೂತ್ರ. ನಿರಂತರ ಕಲಿಕೆ, ಅನ್ವೇಷಣೆ ಹಾಗೂ ಅಳವಡಿಕೆ ಸ್ಪರ್ಧಾ ತ್ಮಕ ಜಗತ್ತಿನಲ್ಲಿ ಯಶಸ್ಸಿನ ಕೀಲಿಕೈ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ
ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹುಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಪುಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.

ವಿಶ್ವ ಯುವಕೌಶಲ ದಿನದಂದು, ಬದಲಾವಣೆಗೆ ವೇಗ ವರ್ಧಕಗಳಾಗಿ ಯುವಜನರ ಸಾಮರ್ಥ್ಯವನ್ನು ಗುರುತಿಸುವಲ್ಲಿ ನಾವು ಒಂದಾಗೋಣ ಮತ್ತು ಎಲ್ಲರಿಗೂ ಸಮೃದ್ಧ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸಲು ಅವರಿಗೆ ಅಗತ್ಯವಿರುವ ಕೌಶಲ ಮತ್ತು ಅವಕಾಶಗಳನ್ನು ಒದಗಿಸಲು ಬದ್ಧರಾಗೋಣ.