Friday, 13th December 2024

ಆರೋಗ್ಯವಾಗಿರಲು ನಮಗೆ ಎಷ್ಟು ನಿದ್ರೆ ಬೇಕು ?

ವೈದ್ಯ ವೈವಿಧ್ಯ

drhsmohan@gmail.com

ವ್ಯಕ್ತಿಯ ನಿದ್ರೆಯ ವೇಳಾಪಟ್ಟಿ ಹಾಗೂ ಆತನ ದೇಹದ ಸರ್ಕೇಡಿಯನ್ ಗಡಿಯಾರದ ವ್ಯವಸ್ಥೆಗೆ ಸಂಬಂಧಪಟ್ಟಿರುತ್ತದೆ. ಬೆಳಗ್ಗೆ ಹೊತ್ತು ನಮ್ಮನ್ನು ಎಚ್ಚರವಿಡುವ ಹಾರ್ಮೋನು ಕಾರ್ಟಿಸೋಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇನ್ನಿತರ ಹಾರ್ಮೋನುಗಳು ೨೪ ಗಂಟೆಯ ವೇಳಾಪಟ್ಟಿಗೆ ಹೊಂದಿಕೊಂಡು ಸ್ರಾವವಾಗುತ್ತವೆ.

ರಾತ್ರಿ ಸರಿಯಾಗಿ ನಿದ್ರೆಯಾಗದಿದ್ದರೆ ನಾವು ದೈಹಿಕವಾಗಿ, ಮಾನಸಿಕ ವಾಗಿ ಉಲ್ಲಸಿತರಾಗಿರುವುದಿಲ್ಲ. ಹಾಗಾಗಿ ನಮಗೆಲ್ಲ ರಿಗೂ ನಿಯಮಿತ ಕಾಲದ ಸರಿಯಾದ ನಿದ್ರೆಯ ಅವಶ್ಯಕತೆ ಇದೆ. ಹೌದು ನಮ್ಮ ದೈನಂದಿನ ಜೀವನಕ್ಕೆ ನಿದ್ರೆ ಒಂದು ಅವಿಭಾಜ್ಯ ಅಂಗ. ಇದು ಸರಿಯಾಗಿ ಆದಾಗ ನಮ್ಮ ದೇಹ ಮತ್ತು ಮನಸ್ಸು ನವ ನವೀನವಾಗುತ್ತದೆ.

ಬೆಳಗ್ಗೆ ಎದ್ದಾಗ ನಾವು ಉತ್ಸಾಹದಿಂದ ಏಳುತ್ತೇವೆ. ನಿದ್ರೆ ಸರಿಯಾಗಿ ಬಂದು, ಆರೋಗ್ಯವಂತ ನಿದ್ರೆಯಾದರೆ ದೇಹವು ಆರೋಗ್ಯ ವಾಗಿರುತ್ತದೆ. ಮಾಥ್ರವಲ್ಲ, ಅದು ಹಲವು ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತದೆ. ನಿರ್ದಿಷ್ಟ ಗಂಟೆಗಳ ನಿದ್ರೆ ಸರಿಯಾಗಿ ಆಗದಿದ್ದರೆ ನಮ್ಮ ದೇಹದ ಮುಖ್ಯ ಅಂಗ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆಗ ನಾವು ಮಾಡುವ ಯಾವುದೇ ಕೆಲಸವವನ್ನು ಏಕಾಗ್ರಚಿತ್ತದಿಂದ ಮಾಡಲಾಗುವುದಿಲ್ಲ.

ನಮ್ಮ ಯೋಚನಾ ಶಕ್ತಿ ಕುಂಠಿತವಾಗುತ್ತದೆ, ನೆನಪಿನ ಕೋಶ ಸರಿಯಾಗಿ ಕೆಲಸ ಮಾಡುವುದಿಲ್ಲ. ಹೆಚ್ಚಿನ ವಯಸ್ಕರಿಗೆ ೭ ರಿಂದ ೧೦ ಗಂಟೆಗಳ ರಾತ್ರಿಯ ನಿದ್ರೆ ಅವಶ್ಯಕ. ಚಿಕ್ಕ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಇನ್ನೂ ಹೆಚ್ಚಿನ ಅವಧಿಯ ನಿದ್ರೆ ಅವಶ್ಯಕತೆ ಇದೆ. ನಮ್ಮ ಕೆಲಸದ ಸಮಯದ ವಿಂಗಡಣೆ, ದೈನಂದಿನ ಕೆಲಸದ ಒತ್ತಡಗಳು, ಮಲಗುವ ಕೋಣೆಯ ಅನಾರೋಗ್ಯಕರ ವಾತಾವರಣ, ಹಲವು ದೈಹಿಕ ಕಾಯಿಲೆಗಳು – ಇವೆಲ್ಲವೂ ಆರೋಗ್ಯವಂತ ಮತ್ತು ಅವಶ್ಯಕ ಅವಧಿಯ ನಿದ್ರೆ ಬರದಿರಲು ಇರುವ ಕಾರಣಗಳು. ಆರೋಗ್ಯವಂತ ಆಹಾರ, ಧನಾತ್ಮಕ ಜೀವನ ಪದ್ಧತಿಗಳು ರಾತ್ರಿಯ ಸರಿಯಾದ ನಿದ್ರೆಗೆ ಪೂರಕ ಅಂಶಗಳು.

ನಿದ್ರೆ ಎಂದರೆ ಏನು?
ಇಲ್ಲಿ ನಮ್ಮ ಎಂದಿನ ಎಚ್ಚರದ ಸ್ಥಿತಿ ವ್ಯತ್ಯಯವಾಗಿರುತ್ತದೆ. ನಮ್ಮ ಹತ್ತಿರದ ಪರಿಸರದ ಜತೆ ನಾವು ಸಂಪರ್ಕ ನಡೆಸುತ್ತಿರುವು ದಿಲ್ಲ. ಹಾಗೂ ಹೆಚ್ಚಿನ ಸಂದರ್ಭ ನಾವು ನಿಶ್ಯಬ್ದರಾಗಿರುತ್ತೇವೆ (ಗೊರಕೆ ಪ್ರವೀಣರನ್ನು ಬಿಟ್ಟು). ಆದರೆ ಈ ಸಂದರ್ಭದಲ್ಲಿ ನಮ್ಮ ಮೆದುಳು ಹತ್ತು ಹಲವಾರು ಕ್ರಿಯೆಯನ್ನು ನಡೆಸುತ್ತ ತುಂಬಾ ಚುರುಕಾಗಿ ಕೆಲಸ ಮಾಡುತ್ತಿರುತ್ತದೆ. ಅಂತೆಯೇ ದೇಹದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೂ ನಿದ್ರೆ ತೀರಾ ಅವಶ್ಯಕ. ಅದರಲ್ಲಿಯೂ ಮಾರನೇ ದಿನ ನಾವು ಕೈಗೊಳ್ಳುವ ದೈಹಿಕ ಮತ್ತು ಮಾನಸಿಕ ಕ್ರಿಯೆಗಳಿಗೆ ಇದು ತೀರಾ ಅವಶ್ಯಕ.

ದೇಹದ ಪ್ರತಿರೋಧ ಶಕ್ತಿ ಉತ್ತಮಗೊಂಡು ನಮಗೆ ಆಗಾಗ ಕಾಯಿಲೆ ಬರದಿರಲು ಇದು ಅತೀ ಅಗತ್ಯ. ಒಂದು ಮಾತಿನ ಸಾರಾಂಶ ರೀತಿಯಲ್ಲಿ ಹೇಳುವುದಾದರೆ ಇದು ದೇಹದ ಪ್ರತಿಯೊಂದು ಅಂಗದ ಪ್ರತಿಯೊಂದು ಕ್ರಿಯೆಗೂ ತೀರಾ ಅವಶ್ಯಕ.

ನಿದ್ರೆಯ ಹಿಂದಿನ ವಿಜ್ಞಾನ: ನಮ್ಮ ದೇಹದೊಳಗೆ ಒಂದು ಅಂತರಿಕ ಗಡಿಯಾರವಿದೆ. ಇದು ನಮ್ಮ ನಿದ್ರೆಯ ಚಕ್ರವನ್ನು ನಿಯಂತ್ರಿಸುತ್ತದೆ. ನಮಗೆ ಆಯಾಸವಾದಾಗ ನಿದ್ದೆ ಮಾಡುವಂತೆ ಸೂಚಿಸುತ್ತದೆ. ಈ ಗಡಿಯಾರ ೨೪ ಗಂಟೆಗಳ ಅವಧಿಯದ್ದು. ಅದಕ್ಕೆ ‘ಸರ್ಕೇಡಿಯನ್ ರಿದಂ’ ಎನ್ನುತ್ತಾರೆ. ದೇಹಕ್ಕೆ ಸರಿಯಾದ ಅವಧಿಯಷ್ಟು ನಿದ್ರೆ ಇಲ್ಲದಿದ್ದಾಗ,
ಮಾರನೆಯ ದಿನ ಎzಗ ತುಂಬಾ ಸುಸ್ತು ಆಗುತ್ತದೆ. ದಿನವಿಡೀ ಅದೇ ರೀತಿ ಇರುತ್ತದೆ.

ಸಂಜೆಯ ಹೊತ್ತು ಈ ಅನುಭವ ಜಾಸ್ತಿಯಾಗಿ ಬೇಗ ಮಲಗಲು ಪ್ರೇರೇಪಿಸುತ್ತದೆ. ನಿದ್ರೆ ಮತ್ತು ಎಚ್ಚರದ ಸಮತೋಲನ ಸ್ಥಿತಿಯನ್ನು ಮೆದುಳಿನಿಂದ ಉತ್ಪನ್ನವಾಗುವ ಅಡಿನೋಸಿನ್ ಎಂಬ ರಾಸಾಯನಿಕವು ನಿಯಂತ್ರಿಸುತ್ತದೆ. ದಿನವಿಡೀ ನಾವು ನಾನಾ ಕೆಲಸ ಮಾಡಿ ಸುಸ್ತಾಗುವಾಗ ಈ ಅಡಿನೋಸಿನ್ ಮಟ್ಟವು ಜಾಸ್ತಿಯಾಗುತ್ತ ಬರುತ್ತದೆ. ರಾತ್ರಿ ಮಲಗಿ ನಿದ್ರೆ ಮಾಡುವಾಗ ನಮ್ಮ ದೇಹವು ಈ ರಾಸಾ ಯನಿಕ ವಸ್ತುವನ್ನು ವಿಭಜಿಸುತ್ತದೆ. ಬೆಳಕು ಸಹಿತ ಈ ಸರ್ಕಿಡಿಯನ್ ರಿದಂ ಮೇಲೆ ಪ್ರಭಾವ ಹೊಂದಿದೆ. ಮೆದುಳಿನಲ್ಲಿ ಹೈಪೋಥಲಾಮಾಸ್ ಎಂಬ ವಿಶೇಷ ಜೀವಕೋಶಗಳನ್ನು ಒಳಗೊಂಡ ಭಾಗ ಇದೆ.

ಇದರಲ್ಲಿ ಸುಪ್ರಾಖಯಾಸ್ಮಾಟಿಕ್ ನ್ಯೂಕ್ಲಿಯಸ್ ಎಂಬ ಜೀವಕೋಶಗಳ ವಿಶೇಷ ಪ್ರದೇಶ ಇದೆ. ನಾವು ಸಹಜವಾದ ಬೆಳಕು ಮತ್ತು ಎಲೆಕ್ಟ್ರಿಕ್ ಬೆಳಕುಗಳಿಗೆ ಒಡ್ಡಿಕೊಂಡಾಗ ಈ ಮೇಲಿನ ಸುಪ್ರಾಖಯಾಸ್ಮಾಟಿಕ್ ನ್ಯೂಕ್ಲಿಯಸ್ ಭಾಗವು ಬೆಳಕಿನ ಸಂಕೇತಗಳನ್ನು ಪರಿಷ್ಕರಿಸಿ, ಮೆದುಳಿಗೆ ನಿರ್ದಿಷ್ಟ ಸಮಯವು ಹಗಲು ಅಥವಾ ರಾತ್ರಿ ಎಂಬುದನ್ನು ತಿಳಿಸುತ್ತದೆ. ಹಗಲಿನ ಬೆಳಕು ಸಂಜೆಯಲ್ಲಿ ಕಡಿಮೆ ಆದ ಹಾಗೆ ದೇಹವು ಮೆಲಟೋನಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.

ಇದು ದೇಹವು ಮಂಕಾಗಲು ಅಥವಾ ನಿದ್ರೆಗೆ ಹೋಗಲು ಸಹಾಯ ಮಾಡುತ್ತದೆ. ಹಗಲಿನಲ್ಲಿ ಸೂರ್ಯೋದಯವಾದಾಗ ದೇಹವು ಕಾರ್ಟಿಸೋಲ್ ಹಾರ್ಮೋ ನ್ನು ಸ್ರವಿಸುತ್ತದೆ. ಇದು ನಮ್ಮಲ್ಲಿ ಉತ್ಸಾಹ ತುಂಬಿ ಪೂರ್ಣ ಎಚ್ಚರವಿರುವಂತೆ ಮಾಡುತ್ತದೆ. ನಮಗೆ ಎಷ್ಟು ನಿದ್ದೆ ಅವಶ್ಯಕ ? ಬೇರೆ ಬೇರೆ ವಯಸ್ಸಿನವರಿಗೆ ನಿದ್ರೆಯ ಪ್ರಮಾಣದ ಅವಶ್ಯಕತೆ ವ್ಯತ್ಯಾಸ ವಾಗುತ್ತದೆ. ನವಜಾತ ಶಿಶು – ೩ ತಿಂಗಳಿನವರೆಗೆ – ೧೪ -೧೭ ಗಂಟೆಗಳು, ನಂತರ ೪ – ೧೧ ತಿಂಗಳಿನ ಮಗು – ೧೨-೧೫ ಗಂಟೆಗಳು, ೧-೨ ವರ್ಷ – ೧೧-೧೪ ಗಂಟೆಗಳು, ೩-೫ ವರ್ಷದ ಮಕ್ಕಳಿಗೆ ೧೦- ೧೩ ಗಂಟೆಗಳು, ೬-೧೩ ವಯಸ್ಸಿನ
ಮಕ್ಕಳಿಗೆ ೯-೧೧ ಗಂಟೆಗಳು, ಹದಿಹರೆಯ ೧೪-೧೭ ವರ್ಷ : ೮-೧೦ ಗಂಟೆಗಳು, ಯೌವ್ವನ ೧೮-೨೫ ವರ್ಷಗಳು ೭ – ೯ ಗಂಟೆಗಳು, ೨೬-೬೪ ವಯಸ್ಕರು ೭-೯ ಗಂಟೆಗಳು , ೬೫ ವರ್ಷಗಳ ನಂತರ ೭-೮ ಗಂಟೆಗಳು.

ನಿದ್ರೆಯ ಮಹತ್ವ: ಹೆಚ್ಚಿನ ಎಲ್ಲ ವಯಸ್ಕರಿಗೆ ಕನಿಷ್ಠ ೭ ಗಂಟೆಗಳ ನಿದ್ರೆ ಅವಶ್ಯಕ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಮೆದುಳಿನ ಕಾರ್ಯಕ್ಷಮತೆ ಮತ್ತು ಆರೋಗ್ಯಕರ ನಡವಳಿಕೆಗೆ ಇದು ಅವಶ್ಯಕ. ಕಡಿಮೆ ಅವಧಿಯ ನಿದ್ರೆ ದೇಹದ ಮೇಲೆ
ಹಲವು ವ್ಯತಿರಿಕ್ತ ಪರಿಣಾಮಗಳನ್ನು ಬೀರಬಲ್ಲದು. ಕಡಿಮೆ ನಿದ್ರೆ ಮಾಡುವುದರಿಂದ ನಮ್ಮ ಏಕಾಗ್ರತೆಯ ನಷ್ಟ, ಮೆದುಳಿನ ಸೂಕ್ಷ್ಮ ಬೆಳವಣಿಗೆಯಲ್ಲಿ ಕುಂದು ಬರುವುದು, ಪ್ರತಿಕ್ರಿಯೆ ಕೊಡುವಲ್ಲಿ ವಿಳಂಬವಾಗುವುದು, ಹಾಗೆಯೇ ವ್ಯಕ್ತಿಯ ಮೂಡ್ ಬಹಳಷ್ಟು ಏರು ಪೇರಾಗುವುದು – ಈ ರೀತಿಯ ತೊಂದರೆಗಳು ಬರುತ್ತವೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

ಕಡಿಮೆ ನಿದ್ರೆ ಮಾಡಿ ಅದನ್ನೇ ಅಭ್ಯಾಸ ಮಾಡಿಕೊಂಡ ವ್ಯಕ್ತಿಗಳು ಅದನ್ನು ತಮ್ಮ ದೈನಂದಿನ ಕ್ರಮವಾಗಿ ಮುಂದುವರಿ ಸುತ್ತಿರುತ್ತಾರೆ. ಅವರ ದೇಹ ಮತ್ತು ಮೆದುಳು ಕಡಿಮೆ ನಿದ್ರೆಯ ಕಾರಣದಿಂದ ತೊಂದರೆಗೆ ಒಳಗಾದರೂ ಅವರಿಗೆ ಅದರ ಬಗ್ಗೆ ಅರಿವಿರುವುದಿಲ್ಲ. ತಮ್ಮ ದೇಹಕ್ಕೆ, ತಮ್ಮ ಕೆಲಸದ ಒತ್ತಡಕ್ಕೆ ಇಷ್ಟೇ ನಿದ್ರೆ ಸಾಕು ಎಂದು ಅವರು ತೀರ್ಮಾನ ಮಾಡಿ ಅದೇ
ದಿಸೆಯಲ್ಲಿ ಮುಂದುವರಿಯುತ್ತಿರುತ್ತಾರೆ. ಕಡಿಮೆ ನಿದ್ರೆಯಿಂದ ಸ್ಥೂಲಕಾಯ, ಟೈಪ್ ೨ ಡಯಾ ಬಿಟಿಸ್, ವಿಪರೀತ ರಕ್ತಒತ್ತಡದ ಏರಿಕೆ, ಹೃದಯ ಕಾಯಿಲೆಗಳು, ಪಾರ್ಶ್ವವಾಯು, ಹಲವು ಮಾನಸಿಕ ಕಾಯಿಲೆಗಳು ಹಾಗೂ ಕೆಲವೊಮ್ಮೆ ಮರಣ ಸಹಿತ ಬೇಗ ಬರಬಹುದು.

ಹೃದಯ ಮತ್ತು ರಕ್ತನಾಳಗಳ ಮೇಲೆ ನಿದ್ರೆಯ ಪ್ರಭಾವವನ್ನು ಗಮನಿಸೋಣ: ನಿದ್ರೆ ಮಾಡಲು ತೊಡಗಿ ಸ್ವಲ್ಪ ಸಮಯದ ನಂತರ (ನಾನ್ ಆರ್ ಇಎಂ ನಿದ್ರೆ) ವ್ಯಕ್ತಿಯ ರಕ್ತದೊತ್ತಡ ಮತ್ತು ಹೃದಯದ ಬಡಿತದ ವೇಗ ಕಡಿಮೆಯಾಗುತ್ತ ಬರುತ್ತದೆ. ನಿದ್ರೆ ಮಾಡುತ್ತಿರುವ ಸಮಯದಲ್ಲಿ ನಮ್ಮ ದೇಹದ ಪ್ಯಾರಾ ಸಿಂಪಥೆಟಿಕ್, ವ್ಯವಸ್ಥೆ ನಮ್ಮ ದೇಹವನ್ನು ನಿಯಂತ್ರಿಸಲು ಆರಂಭಿಸುತ್ತದೆ. ನಾವು ಎಚ್ಚರವಿರುವಾಗ ಕೆಲಸ ಮಾಡುವಷ್ಟು ವೇಗದ ಗತಿಯಲ್ಲಿ ಹೃದಯ ಈ ಸಂದರ್ಭದಲ್ಲಿ ಕೆಲಸ
ಮಾಡುವುದಿಲ್ಲ. ನಿದ್ರೆಯು ಆರ್‌ಇಎಂ ನಿದ್ರೆಯ ಹಂತ ತಲುಪಿದಾಗ ಮತ್ತು ದೇಹಕ್ಕೆ ಎಚ್ಚರವಿರುವಾಗ ನಮ್ಮ ಸಿಂಪೆಥೆಟಿಕ್ ನರವ್ಯೂಹ ವ್ಯವಸ್ಥೆ ಚೇತನಗೊಳ್ಳುತ್ತದೆ. ಪರಿಣಾಮ ಹೃದಯದ ಬಡಿತದ ವೇಗ ಜಾಸ್ತಿಯಾಗುತ್ತದೆ, ರಕ್ತದೊತ್ತಡ ಎಂದಿನಂತೆ ಸಹಜ ರಕ್ತದೊತ್ತಡದ ಸಂಖ್ಯೆಗೆ ಬರುತ್ತದೆ.

ನಿದ್ರೆ ಮತ್ತು ಹಾರ್ಮೋನುಗಳು: ನಮ್ಮ ದೇಹವು ದಿನದ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹಾರ್ಮೋನುಗಳನ್ನು ಸ್ರವಿಸುತ್ತದೆ. ಇದು ವ್ಯಕ್ತಿಯ ನಿದ್ರೆಯ ವೇಳಾಪಟ್ಟಿ ಹಾಗೂ ಆತನ ದೇಹದ ಸರ್ಕೇಡಿಯನ್ ಗಡಿಯಾರದ ವ್ಯವಸ್ಥೆಗೆ ಸಂಬಂಧ
ಪಟ್ಟಿರುತ್ತದೆ. ಬೆಳಗ್ಗೆ ಹೊತ್ತು ನಮ್ಮನ್ನು ಎಚ್ಚರವಿಡುವ ಹಾರ್ಮೋನು ಕಾರ್ಟಿಸೋಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇನ್ನಿತರ ಹಾರ್ಮೋನುಗಳು ೨೪ ಗಂಟೆಯ ವೇಳಾಪಟ್ಟಿಗೆ ಹೊಂದಿಕೊಂಡು ಸ್ರಾವವಾಗುತ್ತವೆ. ಅವು ನಮ್ಮ ಜೀವನದ ನಾನಾ
ವಯಸ್ಸಿಗೆ ತಕ್ಕುದಾಗಿ ಬದಲಾಗುತ್ತಿರುತ್ತವೆ.

ಮಕ್ಕಳಲ್ಲಿ ಹದಿಹರೆಯದವರಲ್ಲಿ ಟೆಸ್ಟೋಸ್ಟಿರೋನ್, ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ – ಈ ಹಾರ್ಮೋನುಗಳು ರಾತ್ರಿ ವೇಳೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಇವರು ಹದಿಹರೆಯ ತಲುಪುವ ವಯಸ್ಸಾಗುತ್ತಿದ್ದಂತೆ ಈ ಹಾರ್ಮೋನು ಗಳು ಸ್ರಾವವಾಗುವ ಪ್ರಮಾಣ ಜಾಸ್ತಿಯಾಗುತ್ತಾ ಹೋಗುತ್ತದೆ.

ನಿದ್ರೆ ಮತ್ತು ಮೆಟಬಾಲಿಸಂ: ನಮ್ಮ ದೇಹದ ಸರ್ಕೇಡಿಯನ್ ಗಡಿಯಾರಕ್ಕೆ ಅನುಗುಣವಾಗಿ ದೇಹದ ಕೊಬ್ಬಿನ ಅಂಶದ ವಿಲೇವಾರಿಯಾಗುತ್ತದೆ. ದೇಹದ ಲಿವರ್, ಕೊಬ್ಬಿನ ಶೇಖರಣಾ ಸ್ಥಾನ ಮತ್ತು ಮಾಂಸಖಂಡಗಳಲ್ಲಿರುವ ಕೊಬ್ಬು ಸಹಿತ ಇದೇ
ವ್ಯವಸ್ಥೆಗೆ ಒಳಪಟ್ಟಿದೆ. ಲಿವರ್‌ನಲ್ಲಿ ಕೊಬ್ಬಿನ ಅಂಶ ಆಯಾಯ ಕಾಲಕ್ಕೆ ತಕ್ಕುದಂತೆ ಜೀರ್ಣವಾಗುವಂತೆ ನಮ್ಮ ಸರ್ಕೇಡಿ ಯನ್ ಗಡಿಯಾರವು ವ್ಯವಸ್ಥೆ ಮಾಡುತ್ತದೆ. ನಾವು ಯಾವ್ಯಾವುದೋ ಹೊತ್ತಿನಲ್ಲಿ ಆಹಾರ ಸೇವಿಸಿದರೆ ಅದಕ್ಕೆ ಅನುಗುಣ ವಾಗಿ ದೇಹವು ಜೀರ್ಣಿಸಿಕೊಳ್ಳಲು ಸಜ್ಜಾಗುತ್ತದೆ. ಸರಿಯಾದ ಪ್ರಮಾಣದ ನಿದ್ರೆ ದೇಹಕ್ಕೆ ಇಲ್ಲದಿದ್ದಾಗ ಹಸಿವೆ ಯನ್ನು ನಿಯಂತ್ರಿಸುವ ಹಾರ್ಮೋನುಗಳಾದ ಲೆಪ್ಟಿನ್ ಮತ್ತು ಗ್ರೇಲಿನ್‌ಗಳ ಪ್ರಮಾಣ ಜಾಸ್ತಿ ಆಗುತ್ತದೆ.

ಇನ್ಸುಲಿನ್ ಹಾರ್ಮೋನಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೆಚ್ಚಿನ ಆಹಾರಗಳು ಅದರಲ್ಲಿಯೂ ಕೊಬ್ಬಿನ ಅಂಶ ಜಾಸ್ತಿ ಇರುವ ಆಹಾರ, ಸಿಹಿ ತಿನಿಸುಗಳು ಹಾಗೂ ಉಪ್ಪಿನ ಅಂಶ ಜಾಸ್ತಿ ಇರುವ ಆಹಾರವನ್ನು ಜಾಸ್ತಿ ಸೇವಿಸಲು ವ್ಯಕ್ತಿ ತೊಡಗುತ್ತಾನೆ. ದೈಹಿಕ ಕ್ರಿಯೆ ಮತ್ತು ವ್ಯಾಯಾಮದ ಅಂಶ ಕಡಿಮೆಯಾಗುತ್ತದೆ.

ಹಲವು ಮೆಟಬಾಲಿಕ್ ಸಿಂಡ್ರೋಂಗಳು ಬರಲು ದಾರಿಯಾಗುತ್ತವೆ. ಇವೆ ಕಾರಣದಿಂದ ವ್ಯಕ್ತಿಯ ದೇಹದ ತೂಕ ವಿಪರೀತ ಜಾಸ್ತಿಯಾಗಿ ಆತ ಸ್ಥೂಲಕಾಯದವನಾಗುತ್ತಾನೆ.

ಉಸಿರಾಟದ ಮತ್ತು ಪ್ರತಿರೋಧ ವ್ಯವಸ್ಥೆ: ನಿದ್ರೆಯ ಸಮಯದಲ್ಲಿ ವ್ಯಕ್ತಿಯ ಉಸಿರಾಟದ ಗತಿ ಅಥವಾ ವೇಗ ನಿಧಾನವಾಗುತ್ತದೆ. ಪರಿಣಾಮ ಎಂದರೆ ವ್ಯಕ್ತಿ ಆಮ್ಲಜನಕವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾನೆ. ಈ ಬದಲಾವಣೆ
ಉಸಿರಾಟದ ತೊಂದರೆ ಇರುವವರಿಗೆ ಬಹಳ ಸಮಸ್ಯೆಯಾಗಬಹುದು. ಉದಾಹರಣೆಗೆ ಅಸ್ತಮಾ ಅಥವಾ ಉಸಿರಾಟದ ನಾಳಗಳ ತೀವ್ರ ಸಮಸ್ಯೆ ಇರುವವರಿಗೆ ಉಸಿರಾಡಲು ಬಹಳ ತೊಂದರೆಯಾಗುತ್ತದೆ. ಇದೇ ಕಾರಣದಿಂದ ಅಸ್ತಮಾ ಕಾಯಿಲೆ ಇರುವವರಲ್ಲಿ ಬೆಳಗಿನ ಹೊತ್ತು ತೀವ್ರ ತೊಂದರೆ ಅನುಭವಿಸುತ್ತಾರೆ. ಅಂತೆಯೇ ಉಸಿರಾಟದ ನಾಳದ ತೀವ್ರ ಸಮಸ್ಯೆ ಇರುವವರಿಗೆ ಅವರ ರೋಗ ಲಕ್ಷಣಗಳು ರಾತ್ರಿ ಮಲಗಿದಾಗ ತೀರಾ ಜಾಸ್ತಿಯಾಗಿ ಅವರಿಗೆ ಮಲಗಲು ಸಾಧ್ಯ ವಾಗದೆ ಕುಳಿತುಕೊಂಡೇ ರಾತ್ರಿ ಕಳೆದ ಉದಾಹರಣೆಗಳು ಬಹಳ ಇವೆ.

ದೇಹದ ಪ್ರತಿರೋಧ ವ್ಯವಸ್ಥೆಯ ಬೇರೆ ಬೇರೆ ಭಾಗಗಳ ಮೇಲೆ ನಿದ್ರೆಯು ಪರಿಣಾಮ ಬೀರುತ್ತದೆ. ದಿವಸದ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ಪ್ರತಿರೋಧ ವ್ಯವಸ್ಥೆ ಕೆಲಸ ಮಾಡುತ್ತದೆ.ಉದಾಹರಣೆಗೆ ವ್ಯಕ್ತಿ
ನಿದ್ರಿಸುತ್ತಿರು ವಾಗ ಯಾವುದೋ ಒಂದು ರೀತಿಯ ಪ್ರತಿರೋಧ ವ್ಯವಸ್ತೆಗೆ ಸಂಬಂಧಪಟ್ಟ ಜೀವಕೋಶಗಳು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತವೆ. ಈ ಕಾರಣದಿಂದಲೇ ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನಿದ್ರಿಸದ ವ್ಯಕ್ತಿಗಳು ಪದೇ ಪದೇ
ಶೀತ ಮತ್ತು ಇತರ ಸೋಂಕುಗಳಿಗೆ ಒಳಗಾಗುತ್ತಾರೆ.

ಯೋಜನಾ ಕ್ರಿಯೆ ಮತ್ತು ನೆನಪಿನ ಶಕ್ತಿ: ನಾವು ಕಲಿಯುವ ಕ್ರಿಯೆ ಮತ್ತು ದೀರ್ಘ ಕಾಲದ ನೆನಪಿನ ಶಕ್ತಿಯ ಮೇಲೆ ನಿದ್ರೆಯು ಬಹಳ ಪರಿಣಾಮ ಬೀರುತ್ತದೆ. ಸರಿಯಾಗಿ ನಿದ್ರೆ ಬರದವರಿಗೆ ಹಾಗೆಯೇ ಉತ್ತಮ ಗುಣಮಟ್ಟದ ನಿದ್ರೆ ಮಾಡದ ವ್ಯಕ್ತಿಗಳಲ್ಲಿ, ಕೆಲಸದ ಮೇಲೆ ಏಕಾಗ್ರ ಚಿತ್ತವಿಡುವುದು ಸಾಧ್ಯವಾಗುವುದಿಲ್ಲ. ಹಾಗೆಯೇ ಸ್ಪಷ್ಟವಾಗಿ ಯೋಚನೆ ಮಾಡುವ ಕ್ರಿಯೆಯೂ ಕುಂದುತ್ತದೆ. ಜೊತೆಗೆ ವಾಹನ ಚಲಾಯಿಸುವಾಗ ಕಷ್ಟವಾಗ ತೊಡಗುತ್ತದೆ.

ಕೊನೆಯ ನುಡಿ: ಹಾಗಾಗಿ ದೀರ್ಘಕಾಲ ಆರೋಗ್ಯವಂತರಾಗಿರಬೇಕು ಎಂತಾದರೆ ನಿದ್ರೆಯ ಬಗ್ಗೆ ಸರಿಯಾದ ಶಿಸ್ತು ಬೆಳೆಸಿಕೊಂಡು ಅದನ್ನು ಚಾಚೂ ತಪ್ಪದಂತೆ ಪಾಲಿಸಬೇಕು.