Wednesday, 11th December 2024

ಪ್ರತಿಭಾವಂತ ಡಿಜಿಟಲ್ ರಾಯಭಾರಿಗಳು

ಸಾಮಾಜಿಕ ವೇದಿಕೆ

ಎ.ಎಸ್.ಬಾಲಸುಬ್ರಹ್ಮಣ್ಯ

balasubramanya52@gmail.com

ಪರಿಣತರಿಗೆ ಮಾತ್ರ ಮೀಸಲಾಗಿದ್ದ ಹಲವು ಕ್ಷೇತ್ರಗಳನ್ನು ಸಾಮಾಜಿಕ ಮಾಧ್ಯಮಗಳು ಜನಸಾಮಾನ್ಯರ ಮುಂದಿರಿಸಿವೆ. ಉನ್ನತ ತಂತ್ರಜ್ಞಾನವೆಂದು ಪರಿಗಣಿಸಲಾಗಿದ್ದ ಕ್ಯಾಮರಾ ಚಿತ್ರೀಕರಣ, ಸಂಕಲನ, ವಿಶೇಷ ಪರಿಣಾಮಗಳ ಅಳವಡಿಕೆ ಮುಂತಾದ ತಂತ್ರಗಳು, ಮೊಬೈಲ್ ತಂತ್ರಜ್ಞಾನದ ಮೂಲಕ ಇಂದು ಜನಸಾಮಾನ್ಯರಿಗೆ ಲಭ್ಯವಾಗಿವೆ.

ಸ್ಮಾರ್ಟ್ ಫೋನಿನಲ್ಲಿ ಬಹುಮಾಧ್ಯಮ ತಂತ್ರಜ್ಞಾನಗಳ ಅಳವಡಿಕೆ ಜನಸಾಮಾನ್ಯರಿಗೆ ಹೊಸ ಪ್ರಪಂಚವನ್ನೇ ಸೃಷ್ಟಿಸಿವೆ.
ಈ ಅಗ್ಗದ ಮೊಬೈಲ್ ಸಾಧನ ಅನೇಕರಿಗೆ ಹೊಸ ಕಲಿಕೆಯತ್ತ ಮುನ್ನುಗ್ಗಲು ಪ್ರೇರೇಪಿಸಿದೆ. ಕಳೆದ ಎರಡು ದಶಕಗಳಲ್ಲಿ ಮೊಬೈಲ್ ಹಿಡಿದ ಹಲವು ಉತ್ಸಾಹಿಗಳು ತಮ್ಮ ಸುತ್ತಲಿನ ಬೆಳವಣಿಗೆಗಳನ್ನು ದಾಖಲಿಸುವ ಪ್ರಯತ್ನದಲ್ಲಿ ಪರಿಣತಿಗಳಿಸಿದ್ದಾರೆ.

ಇವರೆಲ್ಲರ ಪ್ರತಿಭೆಗೆ ಫೇಸ್‌ಬುಕ್, ಯು ಟ್ಯೂಬ್, ಇನ್ಸ್ಟಾಗ್ರಾಮ, ಟಿಕ್‌ಟಾಕ್, ಟ್ವಿಟ್ಟರ್ ಮುಂತಾದ ಜಾಗತಿಕ ವೇದಿಕೆಗಳು ನೆರವಾಗಿವೆ. ನೆನಪಿರಲಿ, ಇವೆಲ್ಲ ಉಚಿತ ಮತ್ತು ಅತ್ಯಂತ ಕಡಿಮೆ ಬೆಲೆಯ ಉಪಕರಣಗಳಿಂದ ನಿರ್ಮಾಣ ಗೊಳ್ಳುತ್ತಿರುವ ಕಾರ್ಯಕ್ರಮ. ತಮ್ಮ ವಿಡಿಯೊಗಳ ಮೂಲಕ ಅನೇಕ ಪ್ರತಿಭಾವಂತರು ದೇಶ ವಿದೇಶಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಅಪಾರ ಪ್ರಮಾಣದ ಹಿಂಬಾಲಕರನ್ನು ಹೊಂದಿದ್ದಾರೆ.

ಅಂತಹ ಸೃಜನಾತ್ಮಕ ಪ್ರತಿಭೆಗಳಿಗೆ ಉತ್ತೇಜನ ಬೇಡವೇ? ಇಂತಹ ಪ್ರತಿಭಾವಂತ ವಿಡಿಯೊ ಸೃಷ್ಟಿಕರ್ತರನ್ನು (Content Creators) ಗೌರವಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡಿದೆ. ಕಥೆ ಹೇಳುವಿಕೆ, ಸಾಮಾಜಿಕ ಬದಲಾವಣೆಯ ಸಮರ್ಥನೆ, ಪರಿಸರ ಸಮರ್ಥನೀಯತೆ, ಶಿಕ್ಷಣ ಮತ್ತು ಗೇಮಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗಳ ಶ್ರೇಷ್ಠತೆ ಮತ್ತು ಪ್ರಭಾವವನ್ನು ಗುರುತಿಸುವ ಪ್ರಯತ್ನ ಇದಾಗಿದೆ. ಸಕಾರಾತ್ಮಕ ಬದಲಾವಣೆ ಹೆಚ್ಚಿಸಲು ಹಾಗೂ ಸೃಜನಶೀಲತೆಯನ್ನು ಬಳಸುವುದಕ್ಕಾಗಿ ಪ್ರಶಸ್ತಿಗಳನ್ನು ನೀಡಲಾಯಿತು. ಯುವಜನರ ಸೃಜನಶೀಲತೆಯನ್ನು ಗೌರವಿಸುವ ಮೂಲಕ ಈ ಪ್ರಶಸ್ತಿಗಳು, ವಿಡಿಯೊ ಸೃಷ್ಟಿ ಕರ್ತರಿಗೆ ಸ್ಪೂರ್ತಿಯ ಸೆಲೆಯಾಗಲಿವೆ.

ಇಂತಹ ರಾಷ್ಟ್ರೀಯ ಸನ್ಮಾನ, ವಿಡಿಯೊ ನಿರ್ಮಾಣದಲ್ಲಿ ತೊಡಗಿರುವ ಅಸಂಖ್ಯಾತ ಉತ್ಸಾಹಿಗಳಿಗೆ ಚೇತೋಹಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನವದೆಹಲಿಯಲ್ಲಿ ಇತ್ತೀಚಿಗೆ ನಡೆದ ಬೃಹತ್ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ವಿಡಿಯೊ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿರುವ ಪ್ರತಿಭಾವಂತರನ್ನು ಉತ್ತೇಜಿಸಲು ಮೊದಲ ಬಾರಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರಶಸ್ತಿಯನ್ನು ಆಯೋಜಿಸಿತ್ತು. ೨೦ ವಿಭಾಗಗಳಲ್ಲಿ ಒಟ್ಟು ೧.೫ ಲಕ್ಷ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ೧೦ ಲಕ್ಷ ಮತಗಳು ಚಲಾವಣೆಯಾಗಿದ್ದವು.

೨೦ ವಿವಿಧ ವಿಭಾಗಗಳಲ್ಲಿ ನೀಡಲಾದ ಪ್ರಶಸ್ತಿಗಳಿಗೆ ಸುಮಾರು ಎರಡು ಲಕ್ಷ ವಿಡಿಯೊಗಳು ಸ್ಪರ್ಧೆ ಮಾಡಿದ್ದವು. ಒಟ್ಟು ೨೦ ಪ್ರತಿಭಾವಂತ ವಿಡಿಯೊ ನಿರ್ಮಾತೃಗಳು ಮತ್ತು ಭಾರತ ಕುರಿತಂತೆ ವಿಡಿಯೊಗಳನ್ನು ನಿರ್ಮಿಸುವ ಮೂವರು ವಿದೇಶಿಯರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ಡಿಜಿಟಲ್ ರಾಯಭಾರಿಗಳು ದೇಶದ ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗಳನ್ನು ವಿಡಿಯೊಗಳ ಮೂಲಕ ದೇಶ-ವಿದೇಶಯರಿಗೆ ಪರಿಚಯಿಸಿದ್ದಾರೆ.

ಪಾರಂಪರಿಕ ತಾಣಗಳನ್ನು ಪರಿಚಯಿಸಿ ನೋಡುಗರ ಕಣ್ಣು ತೆರೆಸಿದ್ದಾರೆ. ಹಿಂದಿನ ದಿನಗಳಲ್ಲಿ ಇಂತಹ ಬಹುತೇಕ ಪ್ರಯತ್ನ ಗಳಲ್ಲಿ ಸರಕಾರಿ ಮಾಧ್ಯಮಗಳು ಸಕ್ರಿಯವಾಗಿ ತೊಡಗಿಕೊಂಡಿದ್ದವು. ಈಗಿನ ಆಧುನಿಕ ಸಂವಹನ ತಂತ್ರಜ್ಞಾನಗಳನ್ನು
ಬಳಸಿಕೊಂಡು ಉತ್ಸಾಹಿ ಯುವಕರು ಉಚಿತವಾಗಿ ಲಭ್ಯವಿರುವ ಸಾಮಾಜಿಕ ಮಾಧ್ಯಮಗಳ ವೇದಿಕೆಗಳನ್ನು ಬಳಸಿಕೊಂಡು ಸಮರ್ಥವಾಗಿ ಈ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಹಲವು ಗಮನಾರ್ಹ ಪ್ರತಿಭೆಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

ಅತ್ಯಂತ ಸೃಜನಶೀಲ ವಿಡಿಯೊ ನಿರ್ಮಾಣ ಮಹಿಳಾ ಪ್ರಶಸ್ತಿಯನ್ನು ಶ್ರದ್ಧಾ ಜೈನ್ ಅವರು ಪಡೆದರು. ಹಾಸ್ಯಮಯ ವಿಷಯದ ಮೂಲಕ ತ್ವೇಷಮಯ ವಾತಾವರಣ ತಿಳಿಗೊಳಿಸುವ ಪ್ರಯತ್ನಗಳನ್ನು ತಾವು ವಿಡಿಯೊಗಳ ಮೂಲಕ ಮಾಡುತ್ತಿರುವುದಾಗಿ ಶ್ರದ್ದೆ ಹೇಳುತ್ತಾರೆ. ಅಯ್ಯೋಶ್ರದ್ಧಾ ಎಂದು ಹೆಸರುವಾಸಿಯಾಗಿರುವ ಶ್ರದ್ಧಾ ಜೈನ್ ಅವರಿಗೆ ಅತ್ಯಂತ ಸೃಜನಶೀಲ ವಿಡಿಯೊ ನಿರ್ಮಾಪಕಿ ಎಂಬ ಪ್ರಶಸ್ತಿಯನ್ನು ಪಡೆದರು. ಡಿಜಿಟಲ್ ವಿಡಿಯೊ ನಿರ್ಮಾಣ ಯ ಕ್ಷೇತ್ರದಲ್ಲಿ ಅವರು ಗಮನಾರ್ಹ ಪ್ರಭಾವ ಬೀರಿದ್ದಾರೆ.

ಹಾಸ್ಯ ಮತ್ತು ಸೃಜನಶೀಲತೆಗಳ ವಿಶಿಷ್ಟ ಮಿಶ್ರಣದಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಹಾಸ್ಯ ಮತ್ತು ವಿಡಂಬನೆಯ ಸುತ್ತ ಅವರು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಯಶಸ್ವಿಯಾಗಿ ವೀಕ್ಷಕರನ್ನು ಆಕರ್ಷಿಸುವ ಪ್ರತಿಭೆ ಹೊಂದಿದ್ದಾರೆ.

ಉದ್ವಿಗ್ನ ಸನ್ನಿವೇಶಗಳಲ್ಲಿ ಹಾಸ್ಯವನ್ನು ತುಂಬುವ ಮೂಲಕ ಸಕಾರಾತ್ಮಕತೆಯನ್ನು ಹರಡಲು ತಮ್ಮ ವಿಡಿಯೊಗಳ ಮೂಲಕ
ಪ್ರಯತ್ನಿಸುತ್ತಾರೆ. ಶ್ರದ್ಧಾ ಜೈನ್ ಅವರು ಜನಪ್ರಿಯ ಆರ್.ಜೆ ಮತ್ತು ಮತ್ತು ಟಿವಿ ನಿರೂಪಕಿ. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಹಾಸ್ಯಮಯ ವಿಡಿಯೊಗಳನ್ನು ರಚಿಸಿ ಇನ್ಸ್ಟಾಗ್ರಾಮ್ ಮತ್ತು ಲಿಂಕ್ಡ್ ಇನ್ ವೇದಿಕೆಗಳಲ್ಲಿ ಅಪಾರಸಂಖ್ಯೆಯ ಫಾಲೋವರ‍್ಸ್‌ ಗಳನ್ನು ಹೊಂದಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ೬.೮೮ ಲಕ್ಷ ಹಿಂಬಾಲಕರನ್ನು ಶ್ರದ್ಧಾ ಜೈನ್ ಹೊಂದಿದ್ದಾರೆ. ಟೆಕ್ಕಿಗಳ ವಜಾ ಕುರಿತ ಅವರ ಇತ್ತೀಚಿನ ವೀಡಿಯೊವನ್ನು ಅವರ ಅಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ತಾಂತ್ರಿಕ ಗುರೂಜಿ ಎಂದೇ ಪ್ರಸಿದ್ದವಾಗಿರುವ ಯೂಟ್ಯೂಬರ್ ಗೌರವ್ ಚೌಧರಿ ಹೊಸ ಫೋನ್ ಹಾಗು ಇತರೆ ತಂತ್ರಜ್ಞಾನವನ್ನು ವೀಕ್ಷಕರಿಗೆ ಪರಿಚಯಿಸುವಲ್ಲಿ ನಿಷ್ಣಾತರು.
ಸ್ಮಾರ್ಟ್ ಫೋನ್ ಮತ್ತು ಇತರೆ ಉಪಕರಣಗಳನ್ನು ಸರಳವಾಗಿ ಪರಿಚಯಿಸುತ್ತಾರೆ.

ಅವರ ಮಾಹಿತಿಯುಕ್ತ ವಿಡಿಯೊಗಳು ಆಕರ್ಷಕವಾಗಿದೆ ಮತ್ತು ಟೆಕ್ ಉತ್ಸಾಹಿಗಳಲ್ಲಿ ಜನಪ್ರಿಯವಾಗಿವೆ. ಹತ್ತು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಗಳಿಸಿದ ಮೊದಲ ತಂತ್ರಜ್ಞಾನ ಯೂಟ್ಯೂಬರ್ ಎಂಬ ಖ್ಯಾತಿ ಹೊಂದಿರುವ ಅವರು ಯು ಟ್ಯೂಬಿನಲ್ಲಿ ಪ್ರಸ್ತುತ ಎರಡು ಕೋಟಿಗೂ ಹೆಚ್ಚಿನ ಚಂದಾದಾರರನ್ನು ಹೊಂದಿದ್ದಾರೆ. ಹಿಂದಿಯಲ್ಲಿ ವಿವರಿಸುವ ಮೂಲಕ ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿರುವ ಖ್ಯಾತಿ ಚೌಧರಿ ಅವರದು.

ಅವರ ಕಾರ್ಯಕ್ರಮಗಳ ವೀಕ್ಷಣೆ ಇದುವರೆಗೆ ಮೂರು ಕೋಟಿ ವೀಕ್ಷಣೆಯನ್ನು ಗಳಿಸಿದೆ. ಸಂಕೀರ್ಣ ತಂತ್ರಜ್ಞಾನ ಪರಿಕಲ್ಪನೆ ಗಳನ್ನು ಸಮರ್ಥವಾಗಿ ವ್ಯಾಖ್ಯಾನಿಸುವ ಗೌರವ್ ಅವರ ಅಮಿತ ಉತ್ಸಾಹವು ಇತರರಿಗೆ ಮಾದರಿ. ಅಮನ್ ಗುಪ್ತಾ ಅವರು ಹಾಸ್ಯ ಮತ್ತು ಮನರಂಜನೆ ಕ್ಷೇತ್ರದ ಉದಯೋನ್ಮುಖ ತಾರೆ ಎಂದೇ ಗುರುತಿಸಲಾಗಿದೆ. ಅವರ ಉಸದ ರೇಖಾಚಿತ್ರಗಳು, ಹಾಸ್ಯ ಮತ್ತು ಮಿಮಿಕ್ರಿ ವಿಶ್ವಾದ್ಯಂತ ನಿಷ್ಠಾವಂತ ಅಭಿಮಾನಿ ಬಳಗವನ್ನು ಗಳಿಸಿದೆ.

ದೈನಂದಿನ ಸಂದರ್ಭಗಳಲ್ಲಿ ಹಾಸ್ಯವನ್ನು ಕಂಡುಕೊಳ್ಳುವ ಅವರ ಸಾಮರ್ಥ್ಯವು ಅವರಿಗೆ ವಿಶೇಷ ಸ್ಥಾನವನ್ನು ದೊರಕಿಸಿದೆ. ಹಿಂದಿ ಚಿತ್ರಗಳ ಸಂಭಾಷಣೆಗಳನ್ನು ಗೇಲಿ ಮಾಡುವುದರಲ್ಲಿ ಅವರು ನಿಸ್ಸಿಮರು. ಫಿಟ್‌ನೆಸ್ ಮತ್ತು ಜೀವನಶೈಲಿ ವಿಭಾಗದಲ್ಲಿ ಅಪಾರ ಮನ್ನಣೆಗಳಿಸಿರುವ ರಣವೀರ್ ಅಬಾಡಿಯಾ ದೈಹಿಕ ವಿಷಯಗಳನ್ನು ಕುರಿತಂತೆ ನಿರರ್ಗಳವಾಗಿ ಸಲಹೆಗಳನ್ನು ನೀಡಬಲ್ಲರು. ಅವರ ಯುಟ್ಯೂಬ್ ವಾಹಿನಿಯಲ್ಲಿ ಪೌಷ್ಠಿಕಾಂಶ ಕುರಿತ ಸಲಹೆಗಳು, ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಅಭಿವೃದ್ಧಿಯ ವಿಷಯಗಳನ್ನು ಬಹುಸಮರ್ಪಕವಾಗಿ ಮಂಡಿಸುತ್ತಾರೆ.

ಲಕ್ಷಾಂತರ ಜನರಿಗೆ ಆರೋಗ್ಯಕರ ಜೀವನವನ್ನು ನಡೆಸಲು ಇವರು ಸ್ಪೂರ್ತಿ ನೀಡುತ್ತಾರೆ. ಸಮಗ್ರ ಯೋಗಕ್ಷೇಮವನ್ನು ಜೀವನಶೈಲಿಯಾಗಿ ಸ್ವೀಕರಿಸುವಂತೆ ತಮ್ಮ ವೀಕ್ಷಕರನ್ನು ಹುರಿದುಂಬಿಸುತ್ತಾರೆ. ರಣವೀರ್ ಅವರು ಪ್ರೇರಕ ಭಾಷಣಕಾರರು. ಉದ್ಯಮಶೀಲತೆ ಮತ್ತು ಪಾಡ್‌ಕಾಸ್ಟಿಂಗ್ ಕ್ಷೇತ್ರಗಳಲ್ಲಿ ಸಹ ಪ್ರತಿಭೆ ಹೊಂದಿರುವ ಅವರೀಗ ಉನ್ನತ ಸ್ಥಾನಕ್ಕೆ ಏರಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ೧೬ ಲಕ್ಷ ಮತ್ತು ಯೂಟ್ಯೂಬ್ನಲ್ಲಿ ೨೭ ಲಕ್ಷ ಮಿಲಿಯನ್ ಚಂದಾದಾರರನ್ನು ಹೊಂದಿರುವ ಕೀರ್ತಿ ಇವರದು. ಪ್ರಸಿದ್ಧ ವ್ಯಕ್ತಿಗಳನ್ನು ಇವರು ತಮ್ಮ ಕಾರ್ಯಕ್ರಮಕ್ಕೆ ಕರೆತರುತ್ತಾರೆ. ಇದರಿಂದ ಅವರ ಜನಪ್ರಿಯತೆ ಮತ್ತಷ್ಟು ವೃದ್ಧಿಯಾಗಿದೆ. ಅಂತಾರಾಷ್ಟ್ರೀಯ ವಿಷಯಗಳನ್ನು ಕುರಿತು ನೂರಾರು ವಿಡಿಯೊಗಳನ್ನು ನಿರ್ಮಿಸಿರುವ ಅಮೆರಿಕದ ಡ್ರೂ ಹಿP
ವಿಡಿಯೊ ಪ್ರಿಯರಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಅವರು ಸುತ್ತಾಡುವ ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಕುರಿತ ವ್ಲಾಗ್‌ಗಳು, ಸಾಹಸ ಕಥೆಗಳು ಮತ್ತು ಆಕರ್ಷಕ ಛಾಯಾಗ್ರಹಣ ವೀಕ್ಷಕರನ್ನು ಚುಂಬಕದಂತೆ ಸೆರೆಹಿಡಿಯುತ್ತವೆ. ತನ್ನ ಕ್ಯಾಮರಾ ಮೂಲಕ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಭೂದೃಶ್ಯಗಳ ಸೌಂದರ್ಯವನ್ನು ಸೆರೆಹಿಡಿದು ತಮ್ಮ ಅನುಯಾಯಿಗಳಿಗೆ ಮುದನೀಡುತ್ತಾರೆ. ಡ್ರೂ ಹಿಕ್ ಅವರು ತಮ್ಮ ಬಾಲ್ಯದ ಬಹುಭಾಗವನ್ನು ಭಾರತದಲ್ಲಿ ಕಳೆದಿದ್ದಾರೆ. ಭಾರತೀಯ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ.

ಹಿಂದಿ ಮತ್ತು ಭೋಜ್ಪುರಿಯಲ್ಲಿ ಅವರ ನಿರರ್ಗಳತೆ ಅದ್ಭುತವಾಗಿದೆ. ಭಾರತೀಯ ಬೀದಿ ಆಹಾರಗಳನ್ನು ಸವಿಯುವುದನ್ನು ಆಸ್ವಾದಿಸುತ್ತಾರೆ. ಅವರ ತಂದೆ ರಫ್ತು ವ್ಯವಹಾರದಲ್ಲಿದ್ದಾರೆ. ಹೀಗಾಗಿ ಅವರು ನಮ್ಮ ದೇಶದೊಡನೆ ನಿಕಟ ಸಂಪರ್ಕ ಹೊಂದಿ ದ್ದಾರೆ. ೨೦೨೩ ರಲ್ಲಿ  ಅವರ ನಿರ್ಮಾಣದ ವೀಡಿಯೊ ವೈರಲ್ ಆಯಿತು. ಅಂದಿನಿಂದ ಅವರು ಹೆಚ್ಚು ಪ್ರಸಿದ್ಧರಾದರು.
ಪ್ರಯಾಣ ಮತ್ತು ಆಹಾರ ಸಂಬಂಽತ ವಿಷಯಗಳಲ್ಲಿ ವಿಡಿಯೊಗಳನ್ನು ನಿರ್ಮಿಸುವ ಕಾಮಿಯಾ ಜಾನಿ ಅವರು ವೀಕ್ಷಕರ ಗಮನಕ್ಕೆ ಬಾರದ ಅನೇಕ ಗುಪ್ತ ಸ್ಥಳಗಳನ್ನು ಪರಿಚಯಿಸುವಲ್ಲಿ ಅತ್ಯಂತ ಯಶಸ್ವಿ ವಿಡಿಯೊ ನಿರ್ಮಾಪಕರು.

ಅವರು ದೇಶವಿದೇಶಗಳಲ್ಲಿ ಅಡ್ಡಾಡುವಾಗ ಸವಿಯುವ ಸ್ಥಳೀಯ ಅನುಭವಗಳನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ ಪ್ರವೀಣೆ. ಪಾಕಶಾಲೆಯ ಆನಂದವನ್ನು ಮನಮುಟ್ಟುವಂತೆ ಅವರು ವರ್ಣಿಸಬಲ್ಲರು. ಬೀದಿಬದಿಯ ಆಹಾರವಿರಲಿ ಅಥವಾ ಐಷಾರಾಮಿ ಹೋಟೆಲ್‌ಗಳ ಪಾಕಶಾಲೆಗಳನ್ನು ಕುರಿತಂತೆ ಸಮಾನದೃಷ್ಟಿಯಲ್ಲಿ ವೀಕ್ಷಕರನ್ನು ರಂಜಿಸಬಲ್ಲರು. ವಿಡಿಯೊ ಅನ್ವೇಷಕರಿಗೆ ಅವರ ಉತ್ತೇಜನ ನಿರಂತರ ಚೈತನ್ಯ.

ವರ್ಷದ ಸಾಂಸ್ಕೃತಿಕ ರಾಯಭಾರಿ ಎಂದು ಪ್ರಶಸ್ತಿ ಪಡೆದ ಮೈಥಿಲಿ ಠಾಕೂರ್, ಹಿನ್ನೆಲೆ ಗಾಯಕಿ ಮತ್ತು ಸಂಗೀತಗಾರ್ತಿ. ತಮ್ಮ ಭಾವಪೂರ್ಣ ಗಾಯನ ಮತ್ತು ಬಹುಮುಖ ಪ್ರತಿಭೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿರುವ ಅವರು ಮೈಥಿಲಿ ಸಂಗೀತದಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು. ಮೈಥಿಲಿ ಕೇವಲ ತಮ್ಮ ಹತ್ತು ವಯಸ್ಸಿನಲ್ಲಿ, ಜಾಗರಣಗಳು ಮತ್ತು ಇತರ ಸಂಗೀತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು.

ಜೀ ಟಿವಿಯಲ್ಲಿನ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿರ್ಯನಲ್ಲಿ ಸ್ಪರ್ಧಿಸಿ ಹೆಸರುಮಾಡಿದರು. ಅವರ ಮೊದಲ ಆಲ್ಬಂ ಯಾ ರಬ್ಬಾ ಅವರಿಗೆ ಮತ್ತಷ್ಟು ಪ್ರಸಿದ್ದಿ ತಂದುಕೊಟ್ಟಿತು. ಹಿಂದಿ, ಬಂಗಾಳಿ, ಮೈಥಿಲಿ, ಉರ್ದು, ಮರಾಠಿ, ಭೋಜಪುರಿ, ಪಂಜಾಬಿ, ತಮಿಳು ಮತ್ತು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅವರ ಸಂಗೀತ ಪ್ರತಿಭೆ ವ್ಯಾಪಿಸಿದೆ. ಮೈಥಿಲಿ ಠಾಕೂರ್ ವರ್ಷದ ಪ್ರತಿಷ್ಠಿತ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರ ಸುಮಧುರ ಧ್ವನಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಸಮರ್ಪಣೆ ಅವರನ್ನು ವಿಶ್ವಾದ್ಯಂತ ಸಂಗೀತ ಉತ್ಸಾಹಿಗಳಿಗೆ ಸ್ಪೂರ್ತಿಯನ್ನಾಗಿ ಮಾಡಿದೆ. ತಮ್ಮ ಯೂಟ್ಯೂಬ್ ಚಾನೆಲ್ ಮಾನಸ್ಪಥ ಮೂಲಕ ಮೈಥಿಲಿ ಠಾರ್ಕೂ ಸಂಗೀತ ಪ್ರಿಯರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಾರೆ. ಅವರ ಧ್ವನಿ ಲಕ್ಷಾಂತರ ಜನರ ಹೃದಯದಲ್ಲೂ ಪ್ರತಿಧ್ವನಿಸುತ್ತದೆ. ಇದು ಅವರನ್ನು ನಿಜವಾದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದೆ.

ಕೀರ್ತಿ ಹಿಸ್ಟರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೀರ್ತಿಕಾ ಗೋವಿಂದಸಾಮಿ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪ್ರತಿಭಾವಂತೆ. ತಮಿಳುನಾಡಿನ ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದಿರುವ ಕೀರ್ತಿಕಾ ಇತಿಹಾಸದ ವಿಷಯಗಳನ್ನು ಕುರಿತು ವಿಡಿಯೊ ಗಳನ್ನೂ ನಿರ್ಮಿಸಿ ಜನಪ್ರಿಯತೆ ಹೊಂದಿzರೆ. ಅವರ ವಾಹಿನಿ ಸುಮಾರು ೨೦
ಲಕ್ಷ ಚಂದಾದಾರರನ್ನು ಹೊಂದಿದೆ. ದೇಶದ ಶ್ರೀಮಂತ ಹಾಗೂ ಸಂಕೀರ್ಣ ಇತಿಹಾಸವನ್ನು ಅನ್ವೇಷಿಸಲು ಮತ್ತು ಗತಕಾಲದ ಮರೆತುಹೋದ ಅಂಶಗಳ ಮೇಲೆ ಬೆಳಕು ಚೆಲ್ಲಲು ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ.

ನನ್ನ ದಣಿವರಿಯದ ಸಂಶೋಧನೆ ಮತ್ತು ಸಮರ್ಪಣೆಯ ಮೂಲಕ, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಎಂದಿಗೂ ಮರೆಯಲಾಗುವುದಿಲ್ಲ ಎಂಬ ಮಹಾನ್ ಆಸೆ ಹೊಂದಿರುವ ಕೀರ್ತಿ ಅವರು ಅತ್ಯುತ್ತಮ ಕಥೆಗಾರ ಪ್ರಶಸ್ತಿಯನ್ನು ಪಡೆದರು.

(ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)