Friday, 13th December 2024

ಆತ್ಮವೊಂದೇ, ಅವತಾರಗಳು ಬೇರೆ ಬೇರೆ

ವಿಶ್ವರೂಪಿ ರಾಮಾಯಣ

ಚಂದ್ರಶೇಖರತನಯ

ಸಾಂಪ್ರದಾಯಿಕ ನಂಬಿಕೆಯಂತೆ ರಾಮಾಯಣ ಮಹಾಕಾವ್ಯವು ಹಿಂದೂ ಕಾಲಗಣನೆಯ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗಕ್ಕೆ ಸೇರಿದ್ದು. ಇದನ್ನು ರಚಿಸಿದ್ದು ಋಷಿ ವಾಲ್ಮೀಕಿ. ರಾಮಾಯಣ ಕಥನದಲ್ಲಿ ವಾಲ್ಮೀಕಿಯೂ ಸಕ್ರಿಯ ಪಾತ್ರ ವಹಿಸುತ್ತಾ ರೆಂಬುದು ಗಮನಾರ್ಹ. ರಾಮಾಯಣದ ಭಾಷೆಯು ಪಾಣಿನಿಯ ಕಾಲಕ್ಕಿಂತಲೂ ಪ್ರಾಚೀನವಾದ ಸಂಸ್ಕೃತ ಎಂಬುದು ಉಲ್ಲೇಖನೀಯ.

ಜಾನಪದೀಯ ಕಥೆಗಳಲ್ಲಿ ಕಾಣಬರುವಂತೆ ರಾಮಾಯಣದಲ್ಲೂ ಸಾಕಷ್ಟು ರೂಪಾಂತರಗಳು ಸಿಗುತ್ತವೆ. ಮುಖ್ಯವಾಗಿ, ಉತ್ತರ ಭಾರತ ದಲ್ಲಿ ಚಾಲ್ತಿಯಲ್ಲಿರುವ ರಾಮಾಯಣದ ಕಥನಕ್ಕೆ ಹೋಲಿಸಿದಾಗ, ಭಾರತದ ದಕ್ಷಿಣ ಭಾಗ ಹಾಗೂ ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಪ್ರಚಲಿತವಿರುವ ರಾಮಾಯಣ ಕಥನಗಳಲ್ಲಿ ಸಾಕಷ್ಟು ಅಂಶಗಳು ವಿಭಿನ್ನವಾಗಿವೆ. ಕೇವಲ ಭಾರತವಷ್ಟೇ ಅಲ್ಲದೆ, ಕಾಂಬೋಡಿಯಾ, ಥಾಯ್ಲೆಂಡ್, ಲಾವೋಸ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ದೇಶಗಳಲ್ಲೂ ರಾಮಾಯಣದ ಕಥಾಸಂಪ್ರದಾಯ ಚಾಲ್ತಿಯಲ್ಲಿದೆ.

ಅದರಲ್ಲೂ ನಿರ್ದಿಷ್ಟವಾಗಿ, ಮಲೇಷ್ಯಾದಲ್ಲಿ ಪ್ರಚಲಿತದಲ್ಲಿರುವ ಕಥನಗಳಲ್ಲಿ ರಾಮನಿಗಿಂತ ಲಕ್ಷ್ಮಣನ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಭಾರತದಲ್ಲೂ, ವಿವಿಧ ಕಾಲಘಟ್ಟಗಳಿಗೆ ಸೇರಿದ ವಿಭಿನ್ನ ಬರಹಗಾರರ ಮೂಸೆಯಲ್ಲಿ ಅರಳಿದ ರಾಮಾಯಣವು ತನ್ನದೇ ಆದ ರೂಪಾಂತರಗಳನ್ನು ದಕ್ಕಿಸಿಕೊಂಡಿರುವುದುಂಟು. ಪರಸ್ಪರ ಜತೆಗಿಟ್ಟು ನೋಡಿದಾಗ, ಇವು ಗಾತ್ರದಲ್ಲೂ, ವಿಷಯ ಪ್ರಸ್ತುತಿಯಲ್ಲೂ ಸಾಕಷ್ಟು ಭಿನ್ನವಾಗಿರುವುದು ಅರಿವಾಗುತ್ತದೆ.

ಹದಿನಾಲ್ಕು/ಹದಿನೈದನೇ ಶತಮಾನದಲ್ಲಿ ಕುಮಾರ ವಾಲ್ಮೀಕಿ ಬರೆದ ‘ತೊರವೆ ರಾಮಾಯಣ’, ರಾಷ್ಟ್ರಕವಿ ಕುವೆಂಪು ಅವರ ಜ್ಞಾನಪೀಠ ಪುರಸ್ಕೃತ ಕೃತಿ ಎಂಬ
ಹೆಗ್ಗಳಿಕೆಯಿರುವ ‘ಶ್ರೀ ರಾಮಾಯಣ ದರ್ಶನಂ’ ಮತ್ತು ರಂಗನಾಥ ಶರ್ಮಾ ಅವರ ‘ಕನ್ನಡ ವಾಲ್ಮೀಕಿ ರಾಮಾಯಣ’ ಕನ್ನಡದ ಮಟ್ಟಿಗೆ ಎದ್ದುಕಾಣುವ ರಾಮಾಯಣ ಕಥನಗಳೆನ್ನಬಹುದು. ಉಪ-ರೂಪಾಂತರಗಳಿಗೂ ರಾಮಾಯಣ ಹೊರತಾಗಿಲ್ಲ; ಇಂಥ ಒಂದು ಆವೃತ್ತಿಯಲ್ಲಿ, ‘ಅಹಿರಾವಣ’ ಮತ್ತು ‘ಮಹಿರಾವಣ’ ಎಂಬಿಬ್ಬರ ಉಲ್ಲೇಖವಿದೆ. ಇವರು ರಾವಣನ ‘ಕೇಡಿಗ ತಮ್ಮಂದಿರು’ ಎಂಬುದು ಬಲ್ಲವರ ವರ್ಣನೆ!

ಇಲ್ಲಿನ ಕಥನಗಾರಿಕೆಯು ವಾಡಿಕೆಯ ರಾಮಾಯಣದಂತಿರದೆ ಕೊಂಚ ಹೊರಳುದಾರಿಯನ್ನು ತುಳಿದಿದೆ. ಕಾಳಿಗೆ ಬಲಿಯಾಗಿ ನೀಡಲು ರಾಮ ಮತ್ತು ಲಕ್ಷ್ಮಣ ರನ್ನು ಅಹಿರಾವಣ ಮತ್ತು ಮಹಿರಾವಣರು ಹೊತ್ತೊಯ್ಯುವಂತೆ ಹಾಗೂ ಹನುಮಂತನು ರಾಮ-ಲಕ್ಷ್ಮಣರನ್ನು ಕಾಪಾಡುವಂತೆ ಈ ಉಪ-ರೂಪಾಂತರ ದಲ್ಲಿ ಚಿತ್ರಿಸಲಾಗಿದೆ. ಅಂದರೆ, ಈ ಕಥನದಲ್ಲಿ ಹನುಮಂತನಿಗೆ ಪ್ರಾಮುಖ್ಯ ನೀಡಲಾಗಿದೆ. ಜನಪದರ ಬುಡಕಟ್ಟು ಸಂಸ್ಕೃತಿಯಲ್ಲೂ ‘ಗೊಂಡ ರಾಮಾಯಣ’ ಸಾಕಷ್ಟು ಪ್ರಸಿದ್ಧವಾಗಿದೆ. ಈ ಕಥನದಲ್ಲಿ ಶ್ರೀರಾಮನನ್ನು ಬುಡಕಟ್ಟು ಜನಾಂಗದವರ ಮುಖಂಡನ ರೀತಿಯಲ್ಲಿ ಚಿತ್ರಿಸಿರುವುದು ಗಮನಾರ್ಹ.

ಮತ್ತೊಂದೆಡೆ ‘ಮಾಪಿಳ್ಳೆ ರಾಮಾಯಣ’ ಎಂದೇ ಕರೆಯಲ್ಪಡುವ ರೂಪಾಂತರವೊಂದು ಕೇರಳದಲ್ಲಿ ಪ್ರಚಲಿತದಲ್ಲಿದ್ದು, ಇದು ಮಾಪಿಳ್ಳೆಗಳ ಜಾನಪದೀಯ ಹಾಡುಗಳ ಪ್ರಕಾರಕ್ಕೆ ಸೇರುವಂಥದ್ದಾಗಿದೆ. ‘ಕಂಬ’ ಎಂಬ ತಮಿಳು ಕವಿಯು ೧೨ನೇ ಶತಮಾನದಲ್ಲಿ ರಚಿಸಿದ ರಾಮಾಯಣ ಕಥನಕ್ಕೆ ‘ಕಂಬ ರಾಮಾಯಣ’ ಅಥವಾ ‘ರಾಮಾವತಾರಮ್’ ಎಂದು ಕರೆಯುವುದುಂಟು. ಇನ್ನು ‘ಶ್ರೀ ರಾಮಚರಿತ ಮಾನಸ’ವನ್ನು ತುಲಸೀದಾಸರು ಬರೆದದ್ದು ಗೊತ್ತೇ ಇದೆ. ಇದಲ್ಲದೆ ಗುಜರಾತಿ ಕವಿ ಪ್ರೇಮಾನಂದರು, ಬಂಗಾಲಿ ಕವಿ ಕೃತ್ತಿವಾಸರು, ಒರಿಯಾ ಕವಿ ಬಲರಾಮದಾಸರು, ಮರಾಠಿ ಕವಿ ಶ್ರೀಧರರು, ತೆಲುಗು ಕವಿ ರಂಗನಾಥರು ಕೂಡ ರಾಮಾಯಣದ ಆವೃತ್ತಿಗಳನ್ನು ರಚಿಸಿದ್ದು ಅವು ಸಾಕಷ್ಟು ಜನಪ್ರಿಯವಾಗಿವೆ.

ಇಂಡೋನೇಷ್ಯಾದ ಜಾವಾ ಪ್ರದೇಶದಲ್ಲೂ ರಾಮನ ಹೆಜ್ಜೆಗುರುತುಗಳು ಸ್ಪಷ್ಟವಾಗಿರುವುದನ್ನು ಕಾಣಬಹುದು. ಇಲ್ಲಿ ೯ನೇ ಶತಮಾನದ ಆಸುಪಾಸಿನಲ್ಲಿ ‘ಕಾಕಾವಿನ್ ರಾಮಾಯಣ’ ಎನ್ನಲಾಗುವ ರಾಮಾಯಣದ ರೂಪಾಂತರವೊಂದು ಅಸ್ತಿತ್ವಕ್ಕೆ ಬಂತು ಎನ್ನುತ್ತಾರೆ ವಿದ್ವಾಂಸರು. ಸಂಸ್ಕೃತದಲ್ಲಿ ಲಭ್ಯವಿರುವ ರಾಮಾಯಣವನ್ನು ಅಷ್ಟಾಗಿ ಬದಲಿಸುವ ಗೋಜಿಗೆ ಹೋಗದೆ ಮಾಡಿದ ಭಾಷಾಂತರಿತ ರೂಪ ಇದಾಗಿದೆ ಎನ್ನಲಾಗುತ್ತದೆ. ‘- ಲಕ್ – ಲಾಮ್’ ಎಂಬ ಹೆಸರು ಹೊತ್ತಿದೆ ಲಾವೋಸ್ ದೇಶದ ರಾಮಾಯಣದ ರೂಪಾಂತರ. ಈ ಹೆಸರಲ್ಲಿ ಅಂತರ್ಗತವಾಗಿರುವ ‘ಲಕ್’ ಮತ್ತು ‘ಲಾಮ್’ ಎಂಬುದು ಲಕ್ಷ್ಮಣ ಮತ್ತು ರಾಮರ ಹೆಸರಿನ ಲಾವೋಸ್ ರೂಪಾಂತರಗಳು ಎನ್ನಲಾಗುತ್ತದೆ.

ಇದರಲ್ಲಿ ರಾಮನ ಬದುಕನ್ನು ಬುದ್ಧನ ಹಿಂದಿನ ಅವತಾರಗಳಲ್ಲಿ ಒಂದು ಎನ್ನುವಂತೆ ನಿರೂಪಿಸಲಾಗಿದೆಯಂತೆ. ಚೀನಾ ದೇಶದ ‘ಜರ್ನಿ ಟು ವೆಸ್ಟ್’ ಎಂಬ ಮಹಾಕೃತಿಯ ಒಂದಷ್ಟು ಭಾಗಗಳು ರಾಮಾಯಣವನ್ನು ಆಧರಿಸಿವೆ ಎನ್ನಲಾಗುತ್ತದೆ. ಈ ಕೃತಿಯಲ್ಲಿ ಬರುವ ‘ಸುನ್ ವುಕಾಂಗ್’ ಎಂಬ ಪಾತ್ರವು ತನ್ನ ಸ್ವರೂಪದಲ್ಲಿ ರಾಮಾಯಣದ ಹನುಮಂತನನ್ನು ಹೋಲುತ್ತದೆಯಂತೆ. ‘ಹಿಕಾಯತ್ ಸೆರಿ ರಾಮ’ ಎಂಬ ಹೆಸರಿನ ಮಲೇಷ್ಯಾ ದೇಶದ ಮಹಾಕಾವ್ಯದಲ್ಲಿ, ದಶರಥ ಮಹಾರಾಜನನ್ನು ಪ್ರವಾದಿ ಆದಮನ ಮೊಮ್ಮಗ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಮಾತ್ರವಲ್ಲ, ರಾವಣನು ತನಗೆ ಮರಣ ಬಾರದಂತೆ ವರ ಪಡೆಯುವುದು ಅಲ್ಲಾನಿಂದ ಎಂಬಂತೆ ನಿರೂಪಿಸಲಾಗಿದೆಯಂತೆ.

ಥಾಯ್ಲೆಂಡ್ ದೇಶದ ‘ರಾಮಕಿಯೆನ್’ ಎಂಬ ಹೆಸರಿನ ಮಹಾಕಾವ್ಯವು ರಾಮಾಯಣವನ್ನು ಆಧರಿಸಿದ್ದು, ಇದರಲ್ಲಿ ಸೀತೆಯನ್ನು ರಾವಣ ಮತ್ತು ಮಂಡೋದರಿ ಯರ ಮಗಳೆಂದು ನಿರೂಪಿಸಲಾಗಿದೆ. ನೀತಿಶಾಸ್ತ್ರಜ್ಞ ಆಗಿದ್ದರ ಜತೆಗೆ ಮಹಾನ್ ಜ್ಯೋತಿಷಿಯೂ ಆಗಿದ್ದ ವಿಭೀಷಣನು ಸೀತೆಯ ಜಾತಕವನ್ನು ವಿಶ್ಲೇಷಿಸಿ ಒಂದಷ್ಟು ದೋಷಗಳು/ಅಪಶಕುನಗಳನ್ನು ಮುನ್ನುಡಿದ; ಇದರಿಂದ ಕೋಪೋದ್ರಿಕ್ತನಾದ ರಾವಣ ಸೀತೆಯನ್ನು ನೀರಿಗೆಸೆದ ಹಾಗೂ ತರುವಾಯದಲ್ಲಿ ಜನಕ
ಅವಳನ್ನು ಕರೆತಂದು ಪೋಷಿಸಿದ ಎಂದು ಈ ಕಥನದಲ್ಲಿ ವರ್ಣಿಸಲಾಗಿದೆ. ಹನುಮಂತನಿಗೆ ಪ್ರಾಮುಖ್ಯ ನೀಡಿರುವುದು ಈ ಕಥನದ ವೈಶಿಷ್ಟ್ಯ.

ಹಂಪೆಯ ಆಸುಪಾಸಿನಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳ ನಡುವೆ ‘ಸುಗ್ರೀವನ ಗುಹೆ’ ಎಂಬ ಹೆಸರಿನ ಗುಹೆಯೊಂದಿದ್ದು, ಇದರಲ್ಲಿ ಬಣ್ಣ ಬಣ್ಣದ ಗುರುತುಗಳಿವೆ. ರಾಮಾಯಣದ ಸುಂದರಕಾಂಡ ಭಾಗದಲ್ಲಿ ದಾಖಲಾಗಿರುವ ಕಿಷ್ಕಿಂಧೆಯ ವರ್ಣನೆಯಂತೆಯೇ ಈ ಸ್ಥಳದ ಸ್ವರೂಪವಿದ್ದು ಸೀತೆಯನ್ನು ಹುಡುಕಿಕೊಂಡು ಬಂದ ರಾಮನು ಹನುಮಂತನನ್ನು ಭೇಟಿಯಾಗಿದ್ದು ಇಲ್ಲಿಯೇ ಎನ್ನಲಾಗುತ್ತದೆ.

ವಿಶ್ವನಾಥ ಸತ್ಯನಾರಾಯಣ ಎಂಬ ತೆಲುಗು ಕವಿ ‘ರಾಮಾಯಣ ಕಲ್ಪವೃಕ್ಷಮು’ ಎಂಬ ಕೃತಿಯನ್ನು ರಚಿಸಿದ್ದಾರೆ. ಇವರಿಗೂ ಜ್ಞಾನಪೀಠ ಪುರಸ್ಕಾರ ಲಭಿಸಿದೆ ಎಂಬುದು ಗಮನಾರ್ಹ. ಆಶೋಕ್ ಬ್ಯಾಂಕರ್ ಎಂಬ ಇಂಗ್ಲಿಷ್ ಲೇಖಕರು ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ೬ ಸರಣಿ ಕಾದಂಬರಿಗಳನ್ನು ರಚಿಸಿದ್ದಾರೆ.