Friday, 13th December 2024

ದೀಪಾವಳಿಯ ಹಲವು ವಿಶೇಷತೆಗಳು

ಸಕಾಲಿಕ

ಡಾ.ನಾ.ಸೋಮೇಶ್ವರ

(ನಿನ್ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಮುಂದುವರಿದ ಭಾಗ)

ಲಕ್ಷ್ಮೀಯ ಹುಟ್ಟಿದ ದಿನವನ್ನು ಆಚರಿಸಲು ದೀಪಾವಳಿಯಂದು ಹೊಸ ವಸ್ತುಗಳನ್ನು ಕೊಳ್ಳುವುದುಂಟು. ಮನೆಗೆ ಬೇಕಾದ
ಪಾತ್ರೆ ಪರಡಿಗಳನ್ನು ಕೊಳ್ಳುವುದರ ಜೊತೆಯಲ್ಲಿ ಚಿನ್ನ, ಬೆಳ್ಳಿಯ ಆಭರಣಗಳನ್ನು ವಿಶೇಷವಾಗಿ ಖರೀದಿ ಮಾಡುವುದುಂಟು.

ಹೀಗೆ ಖರೀದಿಸಿದರೆ ಲಕ್ಷ್ಮಿಯು ಮನೆಗೆ ಬಂದು ನೆಲೆಸುತ್ತಾಳೆ ಎನ್ನುವ ನಂಬಿಕೆ. ಆ ಸಂಜೆ, ಮನೆಯನ್ನು ದೀಪಗಳಿಂದ ಅಲಂಕ ರಿಸಿ, ಸಣ್ಣ ಸಣ್ಣ ಹೆಜ್ಜೆಯ ಗುರುತುಗಳನ್ನು ಹೊಸಲಿನಿಂದ ದೇವರ ಮನೆಯವರೆಗೆ ಬಿಡಿಸುವುದುಂಟು (ಕೃಷ್ಣ ಜನ್ಮಾಷ್ಟಮಿ ಯಂದು ಹೀಗೆಯೇ ಕೃಷ್ಣನ ಹೆಜ್ಜೆ ಗುರುತುಗಳೆಂಬಂತೆ, ಮಗುವಿನ ಕಾಲಿಗೆ ಬಣ್ಣ ಹಚ್ಚಿ ನಡೆಸುವುದುಂಟು ಇಲ್ಲವೇ ಕೈಯಿಂದ ಬಿಡಿಸುವ ಪದ್ಧತಿಯೂ ಇದೆ) ಲಕ್ಷ್ಮಿಯ ವಿಶೇಷ ಪೂಜೆ ಹಾಗೂ ಸಿಹಿ ಭಕ್ಷ್ಯಗಳ ನೈವೇದ್ಯ ಮಾಡಿ ಸಂಭ್ರಮಿಸುವು ದುಂಟು.

ಮಹಾರಾಷ್ಟ್ರದಲ್ಲಿ ವಿಶೇಷ ರೀತಿಯ ನೈವೇದ್ಯವನ್ನು ಅರ್ಪಿಸುವುದುಂಟು. ಧನಿಯ ಮತ್ತು ಬೆಲ್ಲವನ್ನು ಒಟ್ಟಿಗೆ ಕುಟ್ಟಿ ಉಂಡೆ ಯನ್ನು ಮಾಡಿ ಲಕ್ಷ್ಮೀಯನ್ನು ಪೂಜಿಸುವರು. ಅಂದು ತುಳಸಿ ಕಟ್ಟೆಯನ್ನು ವಿಶೇಷವಾಗಿ ದೀಪಗಳಿಂದ ಶೃಂಗರಿಸುವುದುಂಟು.
ತ್ರಯೋದಶಿಯಂದು ಯಮನ ಹೆಸರಿನಲ್ಲಿ ದೀಪಗಳನ್ನು ಹಚ್ಚಿ ಯಮನನ್ನು ವಿಶೇಷವಾಗಿ ಪ್ರಾರ್ಥಿಸಿ, ಅಕಾಲ ಮರಣವನ್ನು ನೀಡದಿರು ಎಂದು ಪ್ರಾರ್ಥಿಸುವುದುಂಟು. ಈ ಹಿನ್ನೆಲೆಯಲ್ಲಿ ಒಂದು ಕಥೆಯುಂಟು. ಹಿಂದು ಹಿಮ ಎಂಬ ರಾಜನಿದ್ದನಂತೆ.
ಆತನಿಗೆ ಒಬ್ಬನು ಮಗನು. 16 ವರ್ಷದ ಮಗನು ಮದುವೆಯಾದ ನಾಲ್ಕನೆಯ ದಿನದಂದು ಹಾವು ಕಚ್ಚಿ ಸಾಯುವನೆಂದು ಜ್ಯೋತಿಷಿಗಳು ನುಡಿದಿದ್ದರು.

ಹಾಗಾಗಿ ಮದುವೆಯಾದ ನಾಲ್ಕನೆಯ ರಾತ್ರಿ ರಾಜಕುಮಾರನ ಮಡದಿ ತಾನು ನಿದ್ರಿಸಲಿಲ್ಲ ಹಾಗೂ ಗಂಡನನ್ನು ನಿದ್ರಿಸಲು ಬಿಡಲಿಲ್ಲ. ಶಯ್ಯಾಗೃಹದ ದ್ವಾರದ ಬಳಿ ತನ್ನ ಚಿನ್ನದ ಆಭರಣಗಳನ್ನು ಹಾಗೂ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ ರಾಶಿಯನ್ನು
ಸುರಿದಳು. ಎಲ್ಲೆಡೆ ದೀಪಗಳನ್ನು ಹಚ್ಚಿ ಮರುಹಗಲನ್ನು ಸೃಜಿಸಿದಳು. ಇಡೀ ರಾತ್ರಿ ಗಂಡನಿಗೆ ರಮ್ಯವಾದ ಕಥೆಗಳನ್ನು ಹೇಳಿ ದಳು. ಹಾಡುಗಳನ್ನು ಹಾಡಿದಳು.

ನೃತ್ಯವನ್ನು ಮಾಡಿದಳು. ಯಮನು ಹಾವಿನ ರೂಪವನ್ನು ಧರಿಸಿ, ರಾಜಕುಮಾರನನ್ನು ಕೊಲ್ಲಲು ಶಯಾಗೃಹದ ಬಳಿಗೆ ಬಂದನು. ಅವನಿಗೆ ಬಾಗಿಲ ಬಳಿ ಹಚ್ಚಿದ ದೀಪಗಳ ಬೆಳಕು ಚಿನ್ನದ ನಾಣ್ಯಗಳ ರಾಶಿಯ ಮೇಲೆ ಬಿದ್ದು ಕಣ್ಣು ಕೋರೈಸಲಾ ರಂಬಿಸಿತು. ಹಾಗೆಯೇ ರಾಜಕುಮಾರನ ಮಡದಿಯ ಸುಶ್ರಾವ್ಯವಾದ ಹಾಡು – ಕಥೆಗಳು ಕೇಳಿಬಂದವು. ಯಮನು ಮೈಮರೆತು ಸಂಗೀತದಲ್ಲಿ ತಲ್ಲೀನನಾದನು. ಕತ್ತಲು ಕಳೆದು ಬೆಳಕಾದದ್ದು ಅವನ ಗಮನಕ್ಕೆ ಬರಲೇ ಇಲ್ಲ.

ಹೀಗೆ ರಾಜಕುಮಾರನ ಮರಣ ಕಾಲ ತಪ್ಪಿಹೋಯಿತು. ರಾಜಕುಮಾರನು ದೀರ್ಘಾಯುಷಿಯಾದ. ಈ ಹಿನ್ನೆಲೆಯಲ್ಲಿ ತ್ರಯೋ ದಶಿಯ ದೀಪಗಳನ್ನು ಯಮದೀಪಗಳೆಂದು ಕರೆದು, ಮನೆಯ ದಕ್ಷಿಣ ದಿಕ್ಕಿನಲ್ಲಿ 18 ದೀಪಗಳನ್ನು ಹಚ್ಚುವರು. ಈ ಆಚರಣೆಯ ಹೆಸರು ‘ಯಮದೀಪದಾನ’ ಇವು ಅಕಾಲಮೃತ್ಯುವನ್ನು ತಪ್ಪಿಸುತ್ತವೆ ಎನ್ನುವುದು ಒಂದು ನಂಬಿಕೆ.

ಕರ್ನಾಟಕದಲ್ಲಿ ತ್ರಯೋದಶಿಯನ್ನು ‘ನೀರು ತುಂಬುವ ಹಬ್ಬ’ ಎಂದು ಆಚರಿಸುವ ಪದ್ಧತಿಯಿದೆ. ಮನೆಯನ್ನೆಲ್ಲ ಸ್ವಚ್ಛ ಗೊಳಿಸಿದ ನಂತರ, ಸಂಜೆ ಮನೆಯಲ್ಲಿರುವ ಪ್ರಧಾನ ಹಂಡೆ, ಕೊಳಗ, ಬಿಂದಿಗೆ ಮುಂತಾದವುಗಳಲ್ಲಿ ನೀರನ್ನು ತುಂಬುತ್ತಾರೆ. ಮರುದಿವಸದ ಎಣ್ಣೆ ನೀರಿನ ಸ್ನಾನಕ್ಕೆ ಸಾಕಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ತೀರಾ ಅಗತ್ಯವಾಗಿರುತ್ತದೆ.

ಚತುರ್ದಶಿ: ಅಶ್ವಯುಜ, ಕೃಷ್ಣ 14ನೆಯ ದಿನವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ನರಕ ಚತುರ್ದಶಿ, ನರಕ ನಿರ್ವಾಣ ಚತುರ್ದಶಿ, ಕಾಳೀ ಚೌದಾಸ್, ರೂಪ ಚೌದಾಸ್, ಛೋಟೀ ದಿವಾಳಿ, ಭೂತ ಚತುರ್ದಶಿ ಇತ್ಯಾದಿ ಯಾಗಿ ಆಚರಿಸುವುದುಂಟು.

ನರಕಾಸುರನು ಕಾಮರೂಪ ದೇಶದ ಅರಸು. ಪ್ರಾಗ್ಜೋತಿಷಪುರವು ಇದರ ರಾಜಧಾನಿ. ಕಾಮರೂಪ ಎಂಬ ಹೆಸರು ಬರಲು ಕಾರಣ, ಶಿವನ ಹಣೆಗಣ್ಣಿನಿಂದ ಸುಟ್ಟುಹೋದ ಕಾಮನು ಮತ್ತೆ ತನ್ನ ಸ್ವರೂಪವನ್ನು ಪಡೆದದ್ದು ಈ ಪ್ರದೇಶದಲ್ಲಂತೆ. ಹಾಗಾಗಿ ಇದು ಕಾಮರೂಪವೆಂದು ಪ್ರಸಿದ್ಧಿಯಾಗಿದೆ. ನರಕಾಸುರನು ವಿಷ್ಣು ಹಾಗೂ ಭೂದೇವಿಯ ಮಗ. ಭೂದೇವಿಯನ್ನು ರಣ್ಯಾಕ್ಷನು ಹೊತ್ತುಕೊಂಡು ಹೋದಾಗ, ವಿಷ್ಣುವು ವರಾಹಾವತಾರವನ್ನು ತಾಳಿ ರಣ್ಯಾಕ್ಷನನ್ನು ಕೊಂದು, ಭೂದೇವಿಯನ್ನು ಬಿಡುಗಡೆ ಮಾಡಿದ. ಆಗ ವರಾಹ ಮತ್ತು ಭೂದೇವಿಯರ ಸಂಸರ್ಗದಿಂದ ನರಕನು ಜನಿಸಿದ. ಭೂದೇವಿಯು ತನ್ನ ಮಗನಿಗೆ ಅಪಾರ
ಶಕ್ತಿಯನ್ನು ಹಾಗೂ ದೀರ್ಘಾಯಸ್ಸನ್ನು ಬೇಡಿದಳು.

ವಿಷ್ಣುವು ಅವನ್ನು ದಯಪಾಲಿಸಿದ. ಕಾಮರೂಪವನ್ನು ಘಟಕಾಸುರ ಎಂಬ ದಾನವ ಕುಲದ ರಾಕ್ಷಸನು ಆಳುತ್ತಿದ್ದ. ಈ
ದಾನವ ಕುಲವನ್ನು ಮರಂಗ ಎನ್ನುವ ದಾನವನ್ನು ಆರಂಭಿಸಿದ್ದ. ನರಕನು ಈ ಘಟಕಾಸುರನನ್ನು ಕೊಂದು ಕಾಮರೂಪದಲ್ಲಿ ಭೌಮವಂಶವನ್ನು ಸ್ಥಾಪಿಸಿದ. (ಭೌಮ ಎಂದರೆ ಭೂಮಿಗೆ ಸಂಬಂಧಿಸಿದ್ದು. ನರಕನು ಭೂದೇವಿಯ ಮಗ. ಇದೇ ಭೌಮ ವಂಶದಲ್ಲಿ ನರಕಾಸುರನ ಮಗನಾಗಿ ಭಗದತ್ತನು ಜನಿಸಿದ. ಈತನು ಮಹಾಭಾರತ ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡಿ
ಅರ್ಜುನನಿಂದ ಹತನಾದ. ನಂತರ ಈತನ ಮಕ್ಕಳಾದ ವಜ್ರದತ್ತ ಮತ್ತು ಪುಷದತ್ತರು ಕಾಮರೂಪವನ್ನು ಆಳಿದರು) ನರಕಾಸುರನು ಬ್ರಹ್ಮನನ್ನು ಕುರಿತು ಉಗ್ರವಾದ ತಪಸ್ಸನ್ನು ಆಚರಿಸಿ, ತನ್ನ ಸ್ವಂತ ತಾಯಿಯಿಂದ ಮಾತ್ರ ಸಾವು ಬರುವಂತೆ ವರವನ್ನು ಬೇಡಿದ. ನರಕನು ತನ್ನ ಎದುರು ನಿಲ್ಲುವವರು ಮೂರೂ ಲೋಕದಲ್ಲಿ ಯಾರು ಇಲ್ಲ ಎಂಬ ಸತ್ಯವನ್ನು ಮನಗಾಣು ತ್ತಲೇ ಭೂಮಿಯ ಎಲ್ಲ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ, ಅವರನ್ನು ಸೋಲಿಸಿ, ಅವರ ಹೆಣ್ಣುಮಕ್ಕಳನ್ನು ಸೆರೆ ಹಿಡಿದು ಪ್ರಾಗ್ಜೋತಿಷದಲ್ಲಿ ಸೆರೆಮನೆಗೆ ತಳ್ಳಿದ.

ಹೀಗೆ 16,000 ರಾಜಕುಮಾರಿಯರು ನರಕನ ಗುಲಾಮರಾಗಿ ನರಳುತ್ತಿದ್ದರು. ನರಕಾಸುರನು ಸ್ವರ್ಗಲೋಕಕ್ಕೆ ದಾಳಿಯಿಟ್ಟು ಇಂದ್ರಾದಿಗಳನ್ನು ಸೋಲಿಸಿ, ದೇವಮಾತ ಅದಿತಿಯ ಕರ್ಣಕುಂಡಲಗಳನ್ನು (ಸಮುದ್ರ ಮಂಥನದಲ್ಲಿ ಹುಟ್ಟಿತು) ಅಪಹರಿಸಿದ.
ನರಕನ ಉಪಟಳವು ಸಹಿಸಲಸಾಧ್ಯವಾದಾಗ ಇಂದ್ರಾದಿಗಳು ವಿಷ್ಣುವಿನ ಮೊರೆ ಹೊಕ್ಕರು. ಆಗ ವಿಷ್ಣುವು ತಾನು ಕೃಷ್ಣಾವ ತಾರದಲ್ಲಿ ನರಕನನ್ನು ಕೊಲ್ಲುವುದಾಗಿ ಭರವಸೆಯನ್ನು ನೀಡಿದ.

ಭೂದೇವಿಯೇ ಸತ್ಯಭಾಮೆಯ ರೂಪವನ್ನು ಧರಿಸಿದ್ದಳು. ತನ್ನ ಮಗನಾದ ನರಕನು ದೇವಮಾತೆಗೆ ಅವಮಾನವನ್ನು ಮಾಡಿ. ಆಕೆಯ ಕುಂಡಲಗಳನ್ನು ಅಪಹರಿಸಿ, ಆಕೆಗೆ ಸೇರಿದ್ದ ರಾಜ್ಯವನ್ನು ಅಪಹರಿಸಿದ್ದು ಕೋಪವನ್ನು ತಂದಿತು. ಹಾಗಾಗಿ ಕೃಷ್ಣನ ಜೊತೆಯಲ್ಲಿ ಸತ್ಯಭಾಮೆಯೊಡನೆ ಗರುಡನನ್ನೇರಿ ಕಾಮರೂಪಕ್ಕೆ ಬಂದಳು. ನರಕಾಸುರನು 11 ಅಕ್ಷೌಣಿ ಸೇನೆಯೊಡನೆ
ಕೃಷ್ಣನನ್ನು ಎದುರಿಸಿದ. ನರಕನ ಸೈನ್ಯಾಧಿಪತಿ ಮುರ ಎಂಬ ರಾಕ್ಷಸ. ಕೃಷ್ಣನು ಮುರನನ್ನು ಕೊಂದು ಮರಾರಿಯಾದ. ಕೊನೆಗೆ ನರಕನೇ ಯುದ್ಧಕ್ಕೆ ಬಂದ. ನರಕ ಮತ್ತು ಕೃಷ್ಣರಿಗೆ ಘೋರ ಯುದ್ಧವಾಯಿತು.

ನರಕನು ಪ್ರಯೋಗಿಸಿದ ಶಕ್ತಿಯು ಕೃಷ್ಣನಿಗೆ ತಾಗಿ, ಬವಳಿ ಬಂದು (ಬಂದ ಹಾಗೆ ನಟಿಸಿ) ರಥದಲ್ಲಿ ಒರಗಿದ. ಇದನ್ನು ನೋಡಿ ಸತ್ಯಭಾಮೆಗೆ ತುಂಬಾ ಕೋಪ ಬಂದು ತಾನೆ ಬಿಲ್ಲನ್ನು ಎತ್ತಿಕೊಂಡು ಬಾಣವನ್ನು ಹೂಡಿದಳು. ತಾಯಿ – ಮಗನಿಗೆ ಘೋರ ಯುದ್ಧವಾಯಿತು. ಅಷ್ಟರಲ್ಲಿ ಕೃಷ್ಣನಿಗೆ ಎಚ್ಚರವಾಯಿತು. ಕೃಷ್ಣ ಮತ್ತು ಸತ್ಯಭಾಮೆಯರಿಬ್ಬರೂ ಸೇರಿ ನರಕನನ್ನು ಕೊಂದರು. ಅಂದು ಕಾರ್ತೀಕ ಮಾಸದ ಕೃಷ್ಣಪಕ್ಷ ಚತುರ್ದಶಿ. ಕೃಷ್ಣ ಸತ್ಯಭಾಮೆಯರು ಪ್ರಾಗ್ಜೋತಿಷಪುರವನ್ನು ಪ್ರವೇಶಿಸಿದರು.

16,000 ರಾಜಕುಮಾರಿಯರನ್ನು ಬಿಡುಗಡೆ ಮಾಡಿದರು. ಇವರೆಲ್ಲರೂ ಕೃಷ್ಣ ಸತ್ಯಭಾಮೆಯರ ಜೊತೆಯಲ್ಲಿ ದ್ವಾರಕೆಗೆ ಹಿಂದಿರುಗಿದರು. ಕೃಷ್ಣನು ಇವರೆಲ್ಲರನ್ನೂ ಮದುವೆಯಾದ ಎಂಬ ಪ್ರತೀತಿಯಿದೆ. ಕೃಷ್ಣನು ದೇವಮಾತೆ ಅದಿತಿಯ ಕುಂಡಲ ಗಳನ್ನು ಆಕೆಗೆ ಹಿಂದಿರುಗಿಸಿದ. ದ್ವಾರಕೆಗೆ ಹಿಂದಿರುಗಿದ ಕೃಷ್ಣನು ತನ್ನ ರಕ್ತಸಿಕ್ತ ಮೈಯನ್ನು ಎಣ್ಣೆೆಯಿಂದ ಸ್ವಚ್ಛಗೊಳಿಸಿ ಅಭ್ಯಂಗನ ಸ್ನಾನವನ್ನು ಮಾಡಿದ. ಈ ಘಟನೆಯನ್ನು ನೆನೆಪಿಸಿಕೊಳ್ಳಲು ಪ್ರತಿವರ್ಷ ಚತುರ್ದಶಿಯಂದು ಬೆಳಗ್ಗೆ, ಎಣ್ಣೆಗೆ ಸ್ವಲ್ಪ ಕುಂಕುಮವನ್ನು ಬೆರೆಸಿ (ಕೆಂಪು ಕುಂಕುಮ ಕೃಷ್ಣನ ರಕ್ತದ ಸಂಕೇತ) ಮೈಕೈಗೆ ಹಚ್ಚಿಕೊಂಡು, ನಂತರ ಬಿಸಿ ನೀರಿನಲ್ಲಿ ಅಭ್ಯಂಗನ ವನ್ನು ಮಾಡುವ ಪದ್ಧತಿಯು ಬೆಳೆಯಿತು.

ಸ್ನಾನದ ನಂತರ ಹೊಸಬಟ್ಟೆಯನ್ನು ಹಾಕಿಕೊಂಡು, ಸಿಹಿಯನ್ನು ತಿಂದು ಪಟಾಕಿಯನ್ನು ಹೊಡೆಯಲು ಮಕ್ಕಳು ಹೊರಟರೆ, ದೊಡ್ಡವರು ಕೃಷ್ಣ ಸತ್ಯಭಾಮೆಯರ ಆರಾಧನೆಯನ್ನು ಮಾಡುವರು. ನರಕ ಚತುರ್ದಶಿಯನ್ನು ಭಾರತಾದ್ಯಂತ ಆಚರಿಸು ತ್ತಾದರೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಆಚರಿಸುವುದುಂಟು. ಪಶ್ಚಿಮ ಬಂಗಾಳ, ರಾಜಸ್ತಾನ, ಮಹಾರಾಷ್ಟ್ರ,
ಗುಜರಾತ್ ರಾಜ್ಯಗಳಲ್ಲಿ ನರಕ ಚತುರ್ದಶಿಯ ದಿನವನ್ನು ‘ಕಾಳೀ ಚೌದಾಸ್’ ಎಂಬ ಹೆಸರಿನಲ್ಲಿ ಆಚರಿಸುವುದುಂಟು. ಕಾಳ ಎಂದರೆ ಕಪ್ಪು. ಕಾರ್ತೀಕ ಮಾಸದ ಕೃಷ್ಣ ಪಕ್ಷದ ಕತ್ತಲೆಯ ಸೂಚಕ. ಕತ್ತಲ ದಿನಗಳ 14ನೆಯ ದಿನ ಎಂದರ್ಥ. ಕಾಳಿಯು
ಮಧುಕೈಟಭರಲ್ಲಿ ಕೈಟಭನನ್ನು, ರಕ್ತಬೀಜಾಸುರನನ್ನು ಕೊಂದವಳು. ತಂತ್ರಶಾಸ್ತ್ರದಲ್ಲಿ ಮಹಾಕಾಳಿಗೆ ದೊಡ್ಡ ಸ್ಥಾನವಿದೆ. ದಶಮಹಾವಿದ್ಯೆಗಳಲ್ಲಿ ಕಾಳಿಯೂ ಓರ್ವ ವಿದ್ಯಾಧಿದೇವತೆ. ಹಾಗಾಗಿ ತಂತ್ರಶಾಸ್ತ್ರದಲ್ಲಿ ನಂಬಿಕೆಯಿರುವವರು ಕಾಳೀಚೌದಾಸ್ ದಿನದಂದು ತಂತ್ರವಿದ್ಯೆಯ ಉಪಾಸನೆಯನ್ನು ಆರಂಭಿಸುವ ಪದ್ಧತಿಯಿದೆ.

ದೀಪಾವಳಿಯು ವಾಸ್ತವದಲ್ಲಿ ಸುಗ್ಗಿಯ ಹಬ್ಬ. ಹೊಸ ಅಕ್ಕಿಯಿಂದ ಅವಲಕ್ಕಿಯನ್ನು ಮಾಡಿ, ಅದಕ್ಕೆ ಎಳ್ಳು, ಬೆಲ್ಲ, ತುಪ್ಪ ಗಳನ್ನು ಸೇರಿಸಿ ಹನುಮಂತನಿಗೆ ನೈವೇದ್ಯ ಮಾಡುವ ಪದ್ಧತಿಯು ಪಶ್ಚಿಮ ಭಾರತದಲ್ಲಿದೆ. ಗೋವಾದಲ್ಲಿ ನರಕಾಸುರನ ಹುಲ್ಲಿನ ರೂಪವನ್ನು ರಚಿಸುವರು. ಅದರೊಳಗೆ ಪಟಾಕಿಗಳನ್ನು ತುಂಬುವರು. ಚತುರ್ದಶಿಯ ಬೆಳಗಿನ ನಾಲ್ಕು ಗಂಟೆಗೆ ಈ ಹುಲ್ಲಿನ ರೂಪಕ್ಕೆ ಬೆಂಕಿ ಹಚ್ಚಿ, ಅದು ಸಿಡಿಯುವುದನ್ನು ನೋಡಿ ಸಂಭ್ರಮಿಸುವರು.

ರಾಕ್ಷಸ ‘ಸತ್ತ’ ಎಂಬ ಸಂತೋಷದಲ್ಲಿ ಮನೆಗೆ ಬರುವರು. ಎಣ್ಣೆ ನೀರಿನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಇಡೀ ದಿನ ಸಂಭ್ರಮಿಸುವರು. ಪಶ್ಚಿಮ ಬಂಗಾಳದಲ್ಲಿ ಚತುರ್ದಶಿಯನ್ನು ‘ಭೂತ ಚತುರ್ದಶಿ’ ಎನ್ನುವ ಹೆಸರಿನಲ್ಲಿ ಆಚರಿಸುವರು. ಈ
ದಿನದಂದು ಮೃತ ಹೊಂದಿದ ಹಿರಿಯರ ಆತ್ಮಗಳು ಭೂಮಿಗೆ ಬರುತ್ತವೆ ಹಾಗೂ ಆವರವರ ಮನೆಗಳಿಗೆ ಭೇಟಿ ನೀಡುತ್ತವೆ ಎನ್ನುವ ನಂಬಿಕೆಯಿದೆ. ಹೀಗೆ 14 ತಲೆಮಾರಿನ ಹಿರಿಯರು ಭೇಟಿಯನ್ನು ನೀಡುವರಂತೆ.

ಈ ಹಿನ್ನೆಲೆಯಲ್ಲಿ ಒಬ್ಬೊಬ್ಬ ಹಿರಿಯರಿಗೆ ಒಂದೊಂದು ದೀಪದಂತೆ, 14 ದೀಪಗಳನ್ನು ಹಚ್ಚಿ, ಮನೆಯ ಸುತ್ತಮುತ್ತಲೂ ಇಡುವರು. ಈ ದೀಪಗಳು ಇದ್ದರೆ ಮಾತ್ರ ಹಿರಿಯರು ಮನೆಯ ಒಳಗೆ ಬರುತ್ತಾರೆ ಎನ್ನುವ ನಂಬಿಕೆಯು ಅವರದ್ದು.

ಅಮಾವಾಸ್ಯೆೆ: ದೀಪಾವಳಿ ದಿನದ ಮೂರನೆಯ ದಿನ, ಅಂದರೆ ಕಾರ್ತೀಕ ಕೃಷ್ಣ ಅಮಾವಾಸ್ಯೆಯಂದು ದೀಪಾವಳಿ ಎನ್ನುವ ಹೆಸರಿನಲ್ಲಿ ಉತ್ಸವವು ಭಾರತಾದ್ಯಂತ ನಡೆಯುತ್ತದೆ. ಈ ದಿನದ ಬಹುಮುಖ್ಯವಾದ ಆಚರಣೆಯೆಂದರೆ ಲಕ್ಷ್ಮೀಪೂಜೆ. ಇದು ದೀಪಾವಳಿ ಹಬ್ಬದ ಅತಿಮುಖ್ಯವಾದ ದಿನ. ಲಕ್ಷ್ಮೀಯು ಅತ್ಯಂತ ಪರಿಶುದ್ಧ ಪರಿಸರ ಪ್ರಿಯೆ.

ಹಾಗಾಗಿ ಯಾರ ಮನೆಯು ಸ್ವಚ್ಛವಾಗಿದೆಯೋ ಅವರ ಮನೆಗೆ ಮೊದಲು ಬರುತ್ತಾಳೆ ಎಂಬ ನಂಬಿಕೆ. ಹಾಗಾಗಿ ಮನೆಯನ್ನು ಗುಡಿಸಿ, ಸಾರಿಸಿ, ರಂಗವಲ್ಲಿಯನ್ನಿಟ್ಟು ಅಲಂಕರಿಸುತ್ತಾರೆ. ಹೆಬ್ಬಾಗಿಲಲ್ಲಿ ತಳಿರುತೋರಣಗಳನ್ನು ಕಟ್ಟುತ್ತಾರೆ. ಹೊಸ ಬಟ್ಟೆ ಗಳನ್ನು ಧರಿಸುತ್ತಾರೆ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ನೋಮು ಅಥವ ನೋಂಬು ಎನ್ನುವ ವಿಶಿಷ್ಟ ಆಚರಣೆಯಿದೆ. ತುಪ್ಪದಲ್ಲಿ ಕಜ್ಜಾಯವನ್ನು ಮಾಡಿ, ಅದನ್ನು ಸಮೀಪದ ದೇವಾಲಯಕ್ಕೆ ಕೊಂಡೊಯ್ದು, ದೇವರಿಗೆ ಅರ್ಪಿಸಿ, ಅದನ್ನು ಮನೆಗೆ ತಂದು ಪ್ರಸಾದವೆಂದು ಇಷ್ಟಮಿತ್ರರಿಗೆ ಹಂಚುತ್ತಾರೆ.

ಹಬ್ಬದ ಅಡುಗೆಯು ಭರ್ಜರಿಯಾಗಿರುತ್ತಾರೆ. ಕೆಲವರು ಹಿರಿಯರಿಗೆಂದು ವಿಶೇಷ ಅಡುಗೆ, ಅವರಿಗಿಷ್ಟವಾದ ವಸ್ತುಗಳು, ಹೊಸಬಟ್ಟೆ ಇತ್ಯಾದಿಗಳನ್ನು ಎಡೆ ಇಟ್ಟು ಆಚರಿಸುವುದುಂಟು. ದೀಪಾವಳಿಯ ಸಂಜೆ ಬಹಳ ಮುಖ್ಯವಾದದ್ದು. ಅಂದು ಲಕ್ಷ್ಮೀಪೂಜೆಯು ನಡೆಯುತ್ತದೆ. ಮನೆಯಲ್ಲಿ ಗಣೇಶ, ಮಹಾಲಕ್ಷ್ಮೀ, ಮಹಾ ಸರಸ್ವತಿ ಹಾಗೂ ಮಹಾಕಾಳಿಯ ಪೂಜೆಯನ್ನು ನಡೆಸುವರು. ಮಹಾಲಕ್ಷ್ಮೀಯ ಜೊತೆಯಲ್ಲಿ ಜೊತೆಯಲ್ಲಿ ಕುಬೇರನನ್ನು ಇಟ್ಟು ಪೂಜಿಸುತ್ತಾರೆ.

ಅಂಗಡಿಗಳಲ್ಲಿ ಮಹಾಲಕ್ಷ್ಮೀಯ ಪೂಜೆ ವಿಶೇಷವಾಗಿ ನಡೆಯುತ್ತದೆ. ಹಿಂದಿನ ವರ್ಷದ ಲೆಕ್ಕವನ್ನು ಪೂರ್ಣಗೊಳಿಸಿ, ಹೊಸ ಲೆಕ್ಕದ ಪುಸ್ತಕವನ್ನು ಆರಂಭಿಸಿ ಗಣೇಶಾಯ ನಮಃ ಎಂದು ಬರೆದು, ಆ ಕಡೆ ಈ ಕಡೆ ಏರುಮುಖ ಸ್ವಸ್ತಿಕವನ್ನು ಬರೆದು
ಪೂಜಿಸುತ್ತಾರೆ. ಅಂದು ಅಂಗಡಿಗೆ ಬಂದವರಿಗೆಲ್ಲ ಸಿಹಿಯನ್ನು ಹಂಚುವ ಪದ್ಧತಿಯಿದೆ. ಹಾಗೆಯೇ ತಮ್ಮ ವ್ಯವಹಾರಕ್ಕೆ ಪೂರಕವಾಗಿರುವ ಎಲ್ಲ ಬಂಧುಮಿತ್ರರಿಗೂ, ಗ್ರಾಹಕರಿಗೂ ಹಾಗೂ ಅಧಿಕಾರಿಗಳ ಮನೆಗೆ ಸಿಹಿಯನ್ನು ಕಳುಹಿಸಿಕೊಡುವ
ಪದ್ಧತಿಯಿದೆ. ಮನೆಗಳಲ್ಲಿ ಸಂಜೆ ಮುತ್ತೆದೆಯರನ್ನು ಕರೆಯಿಸಿ, ಅರಸಿನ ಕುಂಕುಮದೊಡನೆ ಬಾಗಿನ / ಉಡುಗೊರೆ / ಸಿಹಿಯನ್ನು ನೀಡುವ ವಾಡಿಕೆಯಿದೆ.

ಎಲ್ಲ ಕಡೆಯಲ್ಲಿ ದೀಪಗಳನ್ನು ಹಚ್ಚಿ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುವರು. ಮಹಾರಾಷ್ಟ್ರದ ಸದ್ಗುರು ಅನಿರುದ್ಧ ಉಪಾ ಸನಾ ಟ್ರಸ್ಟ್‌ ಸಂಸ್ಥೆಯು ವೈಭವ ಲಕ್ಷ್ಮಿಯ ಆರಾಧನೆಯನ್ನು ಜಾರಿಗೆ ತಂದಿದೆ. ಇದನ್ನು ಬಿಡದೆ 21 ವರ್ಷಗಳ ಕಾಲ ನಡೆಸಿದರೆ, ಲಕ್ಷ್ಮಿಯು ಮನೆಯಲ್ಲಿ ನೆಲೆಸುತ್ತಾಳಂತೆ.

ಕೆಲವು ಮನೆಗಳಲ್ಲಿ ದೀಪಾವಳಿಯ ದಿನವನ್ನು ‘ಕೇದಾರಗೌರೀ ವ್ರತ’ ಎನ್ನುವ ಹೆಸರಿನಲ್ಲಿಯೂ ಆಚರಿಸುವರು. ವಾಸ್ತವದಲ್ಲಿ ಈ ವ್ರತವು 21 ದಿನಗಳ ಅವಧಿಯದ್ದು. ಈ ಹಬ್ಬವು ಈ ವರ್ಷ ಅಕ್ಟೋಬರ್ 25, ಭಾನುವಾರದಂದು ಆರಂಭವಾಯಿತು. ಇದು
ಪೂರ್ಣಗೊಳ್ಳುವುದು ಇದೇ ಅಮಾವಾಸ್ಯೆಯಂದು. ಈ ಸಲ ಅಮಾವಾಸ್ಯೆಯು ನವೆಂಬರ್ 14ರಂದು ಮಧ್ಯಾಹ್ನ 2.17 ನಿಮಿಷಕ್ಕೆ ಆರಂಭವಾಗಿ, 15ನೆಯ ತಾರೀಕು ಬೆಳಿಗ್ಗೆೆ 10.36 ನಿಮಿಷದವರೆಗೆ ವ್ಯಾಪಿಸಿರುತ್ತದೆ. ಈ ಅವಧಿಯಲ್ಲಿ ಈ ವ್ರತವನ್ನು ಪೂರ್ಣ ಗೊಳಿಸಬಹುದು. ಕೇದಾರಗೌರೀ ವ್ರತದ ಹಿನ್ನೆಲೆಯಲ್ಲಿ ಅರ್ಧನಾರೀಶ್ವರರ ಕಥೆಯಿದೆ. ಭೃಂಗೀ ಎಂಬ ಋಷಿ. ಈತನಿಗೆ ಕೇವಲ ಶಿವನ ಮೇಲೆ ಮಾತ್ರ ಭಕ್ತಿ ಮತ್ತು ಪ್ರೀತಿ. ಪಾರ್ವತಿಯನ್ನು ಪೂರ್ಣ ತಿರಸ್ಕರಿಸುತ್ತಾನೆ.

ಇದರಿಂದ ಪಾರ್ವತಿಗೆ ಅತೀವ ಕೋಪ ಬರುತ್ತದೆ. ಸ್ವಲ್ಪ ಹೊಟ್ಟೆಕಿಚ್ಚೂ ಬರುತ್ತದೆ. ತಾನೂ ಸಹ ಶಿವನ ಶರೀರದಲ್ಲಿ ಸೇರಿದರೆ, ಶಿವನಿಗೆ ಪೂಜೆಯನ್ನು ಸಲ್ಲಿಸುವ ಎಲ್ಲರೂ, ತನಗೂ ಪೂಜೆಯನ್ನು ಸಲ್ಲಿಸಿದ ಹಾಗೆ ಆಗುತ್ತದೆ ಎನ್ನುವ ತರ್ಕ ಆಕೆಯದು. ಆಕೆಯು ಗೌತಮ ಋಷಿಯನ್ನು ಕುರಿತು ಪ್ರಾರ್ಥಿಸಿದಾಗ, ಗೌತಮರು ‘ಕೇದಾರೇಶ್ವರ ವ್ರತ’ವನ್ನು ಮಾಡುವಂತೆ ಸೂಚಿಸುತ್ತಾರೆ. ಹಾಗೆಯೇ ಪಾರ್ವತಿಯು ತಪಸ್ಸನ್ನು ಆಚರಿಸುತ್ತಾಳೆ. ಶಿವನು ಈ ವ್ರತದಿಂದ ಸಂತೃಪ್ತಗೊಂಡು ಗೌರೀಯನ್ನು ತನ್ನ ಶರೀರದಲ್ಲಿ ಪ್ರವೇಶಿಸಲು ಅನುಮತಿಯನ್ನು ನೀಡುವುದರ ಜೊತೆಯಲ್ಲಿ ತನ್ನ ಅರ್ಧ ಶರೀರವನ್ನೇ ಆಕೆಗೆ ನೀಡುತ್ತಾನೆ. ಹೀಗೆ ಶಿವ-ಶಕ್ತಿಯರ ಸಮಷ್ಠಿ ರೂಪವು ‘ಅರ್ಧನಾರೀಶ್ವರ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗುತ್ತದೆ.

ವಿಷ್ಣು ಮತ್ತು ಲಕ್ಷ್ಮೀಯರು ಈ ವ್ರತವನ್ನು ಆಚರಿಸಿದ ಕಾರಣ ಅವರಿಗೆ ವೈಕುಂಠವು ವಾಸಸ್ಥಾನವಾಗಿ ದೊರೆಯುತ್ತದೆ. ಬ್ರಹ್ಮ ಮತ್ತು ಸರಸ್ವತಿಯರಿಗೆ ಹಂಸವು ವಾಹನವಾಗಿ ದೊರೆಯುತ್ತದೆ. ಹೀಗೆ ಕೇದಾರಗೌರೀ ವ್ರತ ಮಾಡಿದವರಿಗೆಲ್ಲ ಇಷ್ಟಕಾಮ್ಯವು ಸಿದ್ಧಿಸುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸಿದರೆ ತಮ್ಮ ಬಯಕೆ ಪೂರ್ಣಗೊಳ್ಳುತ್ತದೆ ಎಂದು ನಂಬಿ ಇಂದಿಗೂ ಆಚರಿಸುತ್ತಿದ್ದಾರೆ.

ಪಾಡ್ಯ ಅಥವಾ ಪ್ರತಿಪದ: ಕಾರ್ತಿಕ ಮಾಸದ ಮೊದಲ ದಿನ ಪಾಡ್ಯ ಅಥವ ಪ್ರತಿಪದ. ಸಾಮಾನ್ಯ ವಾಗಿ ಈ ದಿನವನ್ನು ‘ಬಲಿ ಪಾಡ್ಯಮಿ ಅಥವ ಬಲಿಪ್ರತಿಪದ’ ಎನ್ನುವ ಹೆಸರಿನಲ್ಲಿ ಆಚರಿಸುವುದುಂಟು. ಇದು ದೀಪಾವಳಿ ಹಬ್ಬದ ನಾಲ್ಕನೆಯ ದಿನ.
ಭಾರತದಲ್ಲಿ ಇದು ಬಹಳ ಪ್ರಾಚೀನವಾದ ಹಬ್ಬ ಎಂದು ಕಾಣುತ್ತದೆ. ಕ್ರಿ.ಪೂ.2ನೆಯ ಶತಮಾನದಲ್ಲಿ ರಚನೆಯಾಗಿರಬಹುದಾದ ಪಾಣಿನಿಯ ಅಷ್ಠಾಧಾಯ್ಯಿಯಲ್ಲಿ ಈ ಹಬ್ಬದ ಪ್ರಸ್ತಾಪವು ಬರುತ್ತದೆ. ರಾಮಾಯಣ, ಮಹಾಭಾರತ ಹಾಗೂ ಬಹಳಷ್ಟು ಪುರಾಣ ಗಳಲ್ಲಿ ಬಲಿ ಚಕ್ರವರ್ತಿಯ ಕಥೆಯನ್ನು ಕಾಣಬಹುದು. ಬಲಿಯು ಪ್ರಹ್ಲಾದನ ಮೊಮ್ಮೊಗ. ಪ್ರಹ್ಲಾದನ ಹಾಗೆ ವಿಷ್ಣುಭಕ್ತ. ತನ್ನ ಶಕ್ತಿ ಸಾಮರ್ಥ್ಯದಿಂದ ಮೂರೂ ಲೋಕಗಳನ್ನು ಗೆಲ್ಲುತ್ತಾನೆ. ಆದರೆ ಧರ್ಮದಿಂದ ರಾಜ್ಯವನ್ನಾಳುತ್ತಾ ಪ್ರಜಾವತ್ಸಲನಾಗಿರು ತ್ತಾನೆ.

ರಾಜ್ಯ ಮತ್ತು ಅಧಿಕಾರ ವನ್ನು ಕಳೆದುಕೊಂಡ ಇಂದ್ರಾದಿಗಳು ವಿಷ್ಣುವನ್ನು ಮೊರೆ ಹೋಗುತ್ತಾರೆ. ವಿಷ್ಣುವು ಬಲಿಯು ತನ್ನ ಭಕ್ತನಾದುದರಿಂದ ಆತನನ್ನು ತಾನು ಕೊಲ್ಲಲಾರೆ ಎನ್ನುತ್ತಾನೆ. ಆದರೆ ಇಂದ್ರಾದಿಗಳು ರಾಜ್ಯವಿಲ್ಲದೆ ಭ್ರಷ್ಟರಾಗಿ ತಿರುಗುವುದನ್ನು ನೋಡಿ ವಿಷ್ಣುವಿನ ಮನಸ್ಸು ಮರಗುತ್ತದೆ.

(ಮುಂದುವರಿಯುತ್ತದೆ)