ಅಭಿವ್ಯಕ್ತಿ
ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ವಾಸ್ತು ತಜ್ಞರು ಮತ್ತು ಜ್ಯೋತಿಷಿಗಳು
ನಾವು ಒಂದನ್ನು ಬಗೆದರೆ ದೈವವು ಇನ್ನೊಂದನ್ನು ಬಗೆದು ನಮಗೆ ಕೊಡುತ್ತದೆ. ನಾವು ನಮ್ಮ ಗುರಿ ಸಾಧಿಸಲು ಮೂರು ದಾರಿ ಹುಡುಕಿದರೆ, ದೈವವು ನಾಲ್ಕುನೇಯದ್ದನ್ನು ಆಯ್ಕೆ ಮಾಡಿ ನಮ್ಮ ಯೋಜನೆಯನ್ನು ಕೆಡಿಸುತ್ತದೆ ಅಥವಾ ಸುಧಾರಿಸುತ್ತದೆ.
ಇಲ್ಲಿ ಕೆಡುಕು ಅಥವಾ ಒಳಿತು ಎರಡೂ ನಮ್ಮ ಮೂಲ ಉದ್ದೇಶದ ಅನುಸಂಧಾನದ ಆಧಾರ ದಲ್ಲಿರುತ್ತದೆ. ತನ್ನ ಇಚ್ಛೆಯಂತೆ ಎಲ್ಲವೂ ನಡೆಯುವುದಾದರೆ ದೇವರು ಎಂಬವನನ್ನು ಏಕೆ ಒಪ್ಪಬೇಕು. ಲೋಕಕ್ಕೆ ನಾನೇ ದೇವರು ಎಂದು ಎಲ್ಲ ಮನುಷ್ಯನು ಹೇಳಿಕೊಂಡು ದರ್ಪದಿಂದ ನಡೆದಾನು. ಇಲ್ಲಿ ದರ್ಪದ ನಿಯಂತ್ರಣ ಅಥವಾ ಅಂಕುಶವೇ ದೇವರು.
ನಮ್ಮ ಅಂಗೈನಲ್ಲೇ ಸತ್ಯ ಇರುವಾಗ ಅಂದರೆ ನಾವು ಮಾಡಿದ ಪಾಪ ಪುಣ್ಯ, ನಮ್ಮ ಕರ್ಮ ಫಲ ಇದ್ದ ವೇಳೆ ದೀಪವನ್ನು ಹಿಡಿದುಕೊಂಡು ಅತ್ತಿಂದಿತ್ತ ಹುಡುಕು ವುದರಲ್ಲಿ ಅರ್ಥವಿಲ್ಲ. ಸತ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ. ಸತ್ಯ ಎಂಬುದು ಸ್ವರ್ಗಕ್ಕೆ ಮೆಟ್ಟಿಲು. ಯಾವುದೇ ಸರಿ ಅಥವಾ ತಪ್ಪು ಮಾಡಿದರೂ, ಅದರಲ್ಲಿನ ಸತ್ಯವನ್ನು ಒಪ್ಪಿಕೊಳ್ಳಬೇಕು.
ಸತ್ಯವನ್ನು ಒಪ್ಪಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮಗೊಂದು ತಿಳಿದಿರಲಿ. ಮನಸ್ಸಿನ ನೆಮ್ಮದಿ, ಶಾಂತಿಯೇ ದೀರ್ಘಾ ಯುಷ್ಯದ ಗುಟ್ಟು. ಯಾವ ಮನಸ್ಸಿಗೆ ಗೊಂದಲ, ಆಸೆ, ಆತಂಕ, ಸಂಕಷ್ಟ, ಒತ್ತಡ ಹೀಗೆ ಅಹಿತಕರ ಘಟನೆಗಳು ಇರುತ್ತದೋ ಅಂತಹ ಮನಸ್ಸಿನ ಯಜಮಾನನ ಆಯುಷ್ಯ ಅಲ್ಪ ಅವಧಿಗೆ ಕುಸಿಯುತ್ತದೆ. ಇದು ವೈಜ್ಞಾನಿಕವಾಗಿಯೂ ಖಚಿತವಾಗಿದೆ. ಈ ಬಗ್ಗೆ ಜಪಾನ್ ನ ಅಧ್ಯಯನ ಅತ್ಯಂತ ಮಹತ್ವ ಪೂರ್ಣವಾಗಿದೆ.
ಇನ್ನೊಂದು ವಿಚಾರಪೂರ್ಣ ಪ್ರಮಾಣದಲ್ಲಿ ಗಾಂಧಿ ತತ್ತ್ವವನ್ನು ಕಾಯಾ – ವಾಚಾಮನಸ್ಸಾ ಪಾಲಿಸಿದವರ ಆಯುಷ್ಯವೂ ಹೆಚ್ಚು. ಯಾಕೆಂದರೆ ಅವರು ಪ್ರಕೃತಿಯಲ್ಲಿ ಔಷಧಿಯನ್ನು ಕಂಡುಕೊಂಡವರು. ಬಲತ್ಕಾರದಿಂದ ವಸೂಲಿ ಮಾಡಿದ ಹಣದಿಂದ
ಸದೃಢ ಹಾಗೂ ಸುಖದ ಸುರ್ಪತ್ತಿಗೆ ನಿರ್ಮಾಣ ಮಾಡಿದರೂ, ಅದರ ಆಯುಷ್ಯ ಅತ್ಯಲ್ಪವಾಗಿರುತ್ತದೆ. ಅಲ್ಪಕಾಲದ ಬಳಿಕ ಸುದೃಢ ಎಂದು ತಾವು ಭಾವಿಸಿದ ಸೋಪಾನ ಕುಸಿದು ಬೀಳುತ್ತದೆ.
ಉತ್ತಮ ವಿಚಾರಗಳಿಗೆ ಹೆದರಿ ಅಥವಾ ಅವುಗಳಿಗೆ ಗೌರವ ಕೊಟ್ಟು ಬಾಳುವುದು ಎಂದರೆ ಅದು ಸ್ವರ್ಗಕ್ಕೆ ಮೊದಲ ಹೆಜ್ಜೆ ಎಂಬಂತಾಗಿದೆ. ಇಲ್ಲಿ ಸ್ವರ್ಗ ಎಂಬುದು ಪರಲೋಕ ಮಾತ್ರವಲ್ಲ, ಬದುಕಿನ ಲೋಕದಲ್ಲೂ ಆನಂದಮಯ ಬದುಕು ಕಂಡರೆ ಅದು ಕೂಡಾ ಸ್ವರ್ಗಕ್ಕೆ ಸಮಾನ ಬದುಕು. ಹಾವು ಯಾವತ್ತೂ ರಕ್ತವನ್ನು ಹೀರುವುದಿಲ್ಲ. ಅದು ಕಚ್ಚುವುದು ಮಾತ್ರ. ಅಂದರೆ ಇಲ್ಲಿ ಹಾವು ಕಚ್ಚಿದರೆ ಮನುಷ್ಯನ ರಕ್ತವು ಹಾವಿಗೂ ಧಕ್ಕುವುದಿಲ್ಲ. ಹಾವು ಕಚ್ಚುವುದು ಆಹಾರಕ್ಕಾಗಿ ಅಲ್ಲ ಎಂಬುದು ಸ್ಪಷ್ಟ. ಆದರೆ ಹಾವು ಕಚ್ಚಿದರೆ ಮನುಷ್ಯನ ದೇಹದಲ್ಲಿಯೂ ರಕ್ತವು ಉಳಿಯುವುದಿಲ್ಲ.
ಇದರಂತೆ ದುಷ್ಟರಾಗಿ ನೋಯಿಸಿ ಸಂಗ್ರಹಿಸಿದ ಐಶ್ವರ್ಯವು ಎಂದಿಗೂ ಧಕ್ಕದು. ಅದು ಧಕ್ಕಿದರೂ ಅಲ್ಪಾವಧಿಗೆ. ಬಳಿಕ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಸಂಪತ್ತು ಹೊರಕ್ಕೆ ಹರಿದು ಹೋಗುವುದು. ಇದನ್ನು ಚೆನ್ನಾಗಿ
ಅರಿತುಕೊಳ್ಳಬೇಕು. ಧರ್ಮಮಾರ್ಗದಿಂದ ನಡೆದರೆ ಮನಸ್ಸು ವಿಶಾಲಗೊಂಡು ನೆಮ್ಮದಿ ಆವರಿಸಿಕೊಂಡು, ಐಶ್ವರ್ಯವು ಹೆಚ್ಚುತ್ತಾ ಹೋಗುತ್ತದೆ. ಇಲ್ಲಿ ಐಶ್ವರ್ಯ ಎಂದರೆ ಕೇವಲ ಚಿನ್ನಾಭರಣ ಅಥವಾ ಹಣವನ್ನು ಮಾತ್ರ ಹೇಳಲಿಲ್ಲ. ಯಾಕೆಂದರೆ ಮನೆಯಲ್ಲಿ ಮೂಟೆ ಸಕ್ಕರೆ ಇದ್ದು ಯಜಮಾನನಿಗೆ ಸಕ್ಕರೆ ಕಾಯಿಲೆ ಇದ್ದರೆ ಸಕ್ಕರೆ ಇದ್ದು ಫಲ ಏನು.
ಹಾಗೆ ಇಲ್ಲಿ ಐಶ್ವರ್ಯ ಎಂದರೆ ಅನುಭವಿಸುವ ಸಾಮರ್ಥ್ಯ, ಶಕ್ತಿಯೂ ಸೇರಿದೆ. ಕಡ್ಲೆ ಇದ್ದಾಗ ಹಲ್ಲು ಇಲ್ಲ, ಹಲ್ಲು ಇದ್ದ ವೇಳೆ ಕಡ್ಲೆ ಇಲ್ಲ ಎಂಬ ಸ್ಥಿತಿ ಬಂದರೆ ಐಶ್ವರ್ಯ ಇದ್ದೂ ಏನು ಪ್ರಯೋಜನ. ಯಾವುದು, ಯಾವತ್ತು ಇರಬೇಕೋ ಅದು ಆಗಲೇ,
ಹೇಗೆ ಬೇಕೋ ಹಾಗೆ ಇದ್ದರೆ ಚೆಂದ, ಅಂದ. ಇದರಿಂದ ಕಲ್ಯಾಣವೂ ಆಗುತ್ತದೆ. ಕುಟುಂಬಕ್ಕೂ ಹಿತವುಂಟು ಮಾಡುತ್ತದೆ. ವೈರಿಗಳೂ ಅಡಗುತ್ತಾರೆ. ಹರಿಯುವ ಹೊಳೆ ಮೇರೆಯನ್ನು ದಾಟಿ ಉಕ್ಕಿ ಹರಿದರೆ ನದಿಯ ಎರಡು ದಡಗಳೂ ಕುಸಿಯ
ಲಾರಂಭಿಸುತ್ತದೆ. ಎಲ್ಲೆಂದರಲ್ಲಿ ನುಗ್ಗಿ ಹರಿಲಾರಂಭಿಸುತ್ತದೆ.
ಹೀಗಾಗಿ ಯಾವುದೇ ವಿಚಾರಕ್ಕೂ, ಬದುಕಿಗೂ ಎಲ್ಲೆ ಎಂಬುದು ಇರುತ್ತದೆ. ಆ ಎಲ್ಲೆಗಳನ್ನು ಮೀರಿ ಬದುಕಿದರೆ, ಅಲಕ್ಷಣ ವಾಗುತ್ತದೆ. ಹೆಂಗಸರು ಮರ್ಯಾದೆಯನ್ನು ಬಿಟ್ಟು ಮನಬಂದಂತೆ ಉರವಣಿಸಿ ನಡೆದರೆ, ಹುಟ್ಟಿದ ಕುಲ ಸೇರಿದ ಕುಲ ಇವೆರಡನ್ನೂ ಹಾಳು ಮಾಡಿ ಕೆಟ್ಟ ಹೆಸರನ್ನು ತರುತ್ತಾರೆ. ಶಾನುಭೋಗನೊಡನೆ ಹಗೆತನವನ್ನು ಬೆಳೆಸಿದರೆ ಸಂಪತ್ತಿಗೆ ಹಾನಿಯಾಗುತ್ತದೆ. ವೈದ್ಯನೊಡನೆ ವೈರವನ್ನು ಬೆಳೆಸಿದರೆ ಆಯುಷ್ಯಕ್ಕೆ ಹಾನಿ. ರಾಜ ಸಜ್ಜನರನ್ನು ದ್ವೇಷಿಸಿದರೆ ಧನ ಆಯುಷ್ಯ ಇವೆರಡೂ ಹಾನಿಗೆ ಒಳಗಾಗುತ್ತದೆ. ಆದ್ದರಿಂದ ಸಜ್ಜನರೊಡನೆ ದ್ವೇಷವನ್ನು ಬೆಳೆಸಬಾರದು.
ದಂಡಿಸಲು ಸಾಮರ್ಥ್ಯವಿದ್ದರೂ ಯಾವನು ಕ್ಷಮಿಸುವನೋ, ದರಿದ್ರನಾಗಿದ್ದರೂ ಯಾವನು ದಾನ ಮಾಡುವನೋ ಇವರಿಬ್ಬರು ಶ್ರೇಷ್ಠ ವ್ಯಕ್ತಿಗಳು. ಧನವಂತನು ಮಾಡುವ ದಾನವಾಗಲಿ ಕೈಲಾಗದವನ ಸೈರಣೆಯಾಗಲಿ ಹೆಚ್ಚಿನದಲ್ಲ. ಇಂತಹ ಬದುಕಿನ ವ್ಯಕ್ತಿಗಳು ಮುಂದೆ ಅಮರರಾಗಿ ಉಳಿಯುತ್ತಾರೆ. ಅಮರತ್ವದ ಬದುಕು ನಮ್ಮದಾಗಬೇಕು. ಇಲ್ಲಿ ಅಮರತ್ವ ಎಂದರೆ ದೇಹವಲ್ಲ –
ಹೆಸರು. ದೇಹ ಯಾವತ್ತೂ ಅಮರತ್ವ ಬಯಸಬಾರದು.
ಅರಸು ಕುಲದಲ್ಲಿ ಹುಟ್ಟಿಯೂ ಶತ್ರುಗಳು ಇದ್ದಾಗಲೂ ಪ್ರತೀಕಾರವನ್ನು ಕೈಗೊಳ್ಳದೆ ದೇಹಾಭಿಮಾನದಿಂದ ಹಾವಿನಂತೆ ಒಳಗೆ ಅಡಗಿಕೊಳ್ಳುವುದು ಧರ್ಮವಲ್ಲ. ಆಯಾ ವ್ಯಕ್ತಿಯ ಬದುಕಿಗೆ ಆಯಾ ರೀತಿಯ ಧರ್ಮ ಪಾಲಿಸಬೇಕು. ಸೈನಿಕನು ಗುಂಡು
ಹಾರಿಸಿ ಶತ್ರು ಸಂಹಾರ ಮಾಡುವುದು ಆತನ ಧರ್ಮ. ಆದರೆ ಜನಸಾಮಾನ್ಯರು ನಮ್ಮ ಶತ್ರುಗಳನ್ನು ಸಂಹಾರ ಮಾಡುವುದು ತಪ್ಪು. ಆದರೆ ಎರಡೂ ಕಡೆ ಶತ್ರುಗಳು.
ಆದರೆ ಯಾರ ಶತ್ರು ಎಂಬುದು ಇಲ್ಲಿ ಧರ್ಮವನ್ನು ನಿರ್ಧರಿಸುತ್ತದೆ. ದೇಶದ ಶತ್ರು ಅಂದರೆ ಆತ ರಾಜದ್ರೋಹಿ. ದೇಶದ ಶಾಂತಿ ಕದಡುವ ಸಂಚಿನ ರೂವಾರಿ ದೇಶ ದ್ರೋಹಿ. ಇಲ್ಲಿ ಸಮಷ್ಠಿ ಇರುತ್ತದೆ. ಸಂಪಾದಿಸಿದ ಹಣವನ್ನು ವಿನಿಯೋಗಿಸುವ ಮೊದಲು ಯಾವುದು ಹಿತಕಾರಿ, ಯಾವುದು ಹಿತಕಾರಿಯಲ್ಲ ಎಂಬ ಭೇದವನ್ನರಿತು ಹಣವನ್ನು ವಿನಿಯೋಗಿಸಿ ಆತ್ಮೋನ್ನತಿ ಯನ್ನು ಸಾಧಿಸಿಕೊಳ್ಳಬೇಕು.
ಹಣವನ್ನು ವಿನಿಯೋಗಕ್ಕೆ ಒಂದು ಗುರಿಯನ್ನಿಟ್ಟುಕೊಳ್ಳುವುದೇ ಸರಿಯಾದ ನೀತಿ. ಸರಿಯಾಗಿ ವಿನಿಯೋಗ ಮಾಡುವುದು ನಾವು ಪಡೆದುಕೊಂಡು ಬಂದ ವಿಧಿಯನ್ನು ನಿರ್ಧರಿಸುತ್ತದೆ. ಐಶ್ವರ್ಯವಾಗಲೀ ಯೌವನವಾಗಲೀ ಸ್ಥಿರವಾಗಿ ನಿಲ್ಲುವುದಿಲ್ಲ. ಮುಪ್ಪು ಬಂದಾಗ ದೇಹದ ಸೌಂದರ್ಯವೂ ನಶಿಸಿಹೋಗುತ್ತದೆ. ಇನ್ನೂ ದೇಹವಂತೂ ಶಾಶ್ವತವೇ ಅಲ್ಲ. ಜಯದ ಸಿರಿಯೂ ನಿಲ್ಲತಕ್ಕ ದಲ್ಲ. ಹಣದ ಮದ, ಕುಲದ ಮದ, ವಿದ್ಯೆಯ ಮದ, ತಾರುಣ್ಯದ ಮದ ಇವುಗಳ ಅಹಂಕಾರದಲ್ಲಿ ಗುರುಹಿರಿಯರನ್ನು ಲೆಕ್ಕಿಸದೆ ಕೊಬ್ಬಿದ ಗೂಳಿಯಂತೆ ಮುನ್ನಡೆದರೆ ಬದುಕು ಅವರಿಗೆ ಮುಳುವಾಗಲಿದೆ.
ಗಳಿಸಿದ ವಿದ್ಯೆಗೆ ಸಮನಾದ ಬಂಧು, ರೋಗಕ್ಕೆ ಸಮನಾದ ಶತ್ರು, ಸಂತಾನಕ್ಕೆ ಸಮವಾದ ಸಂತೋಷ ಜಗತ್ತಿನಲ್ಲಿ ಇನ್ನೊಂದು ಇಲ್ಲ. ಸೂರ್ಯನ ತೇಜಸ್ಸಿನಂಥ ತೇಜಸ್ಸು ಇಂದ್ರನ ಭೋಗದಂತಹ ಭೋಗವೂ ಇಲ್ಲ. ಇದನ್ನು ಅರಿತುಕೊಂಡರೆ ನಾನು ನನ್ನದು, ನನಗೆ, ನನಗೆ ಮಾತ್ರ ಮುಂತಾದ ವಿಪರೀತ ವಾದ ಕಡಿಮೆಯಾಗ ಬಹುದು. ನಮ್ಮತನ ಎಂಬ ವಾದ ಬೆಳೆಯಬಹುದು.
ಲೋಕಕ್ಕೆ ಹಿತ ಯಾವುದರಿಂದಾಗುವುದು, ಜನರಿಗೆ ಕೆಡುಕು ಯಾವುದರಿಂದಾಗುವುದು ಎಂಬುದನ್ನು ವಿಚಾರಮಾಡಿ ಅದಕ್ಕೆ ಅನುಗುಣವಾಗಿ ವ್ಯವಹಾರ ಮಾಡಬೇಕು. ನಾಸ್ತಿಕತೆಯ ಸೋಂಕು ಸಹ ಇಲ್ಲದೆ ಜ್ಞಾನಿಯಾಗಿ ವಿವೇಕಮಾರ್ಗದಲ್ಲಿ ನಡೆಯ ಬೇಕು. ನಾಸ್ತಿಕತ್ವದ ಜ್ಞಾನ ಪೂರ್ಣಸತ್ಯವಲ್ಲ. ಅದು ಅರ್ಧ ಸತ್ಯ. ಅರ್ಧ ಸತ್ಯದ ಬದುಕು ಅಸತ್ಯದ ಬದುಕಿಗಿಂತಲೂ
ಅಪಾಯಕಾರಿ. ಜ್ಞಾನಿ – ಅಜ್ಞಾನಿ – ಅಲ್ಪಜ್ಞಾನಿ ಈ ಮೂವರಲ್ಲಿ ಅಲ್ಪಜ್ಞಾನಿ ಅಪಾಯಕಾರಿ. ಆತನಲ್ಲಿರುವ ಅಲ್ಪಜ್ಞಾನವೇ ಸತ್ಯ ಎಂದು ನಂಬಿ ಬಾಳಿ ಬದುವುದಲ್ಲದೆ ಸಮಾಜವನ್ನೂ ಹಾದಿ ತಪ್ಪಿಸುತ್ತಾನೆ. ಇದರಿಂದಾಗಿಯೇ ಅಲ್ಪರ ಸಂಘ ಅಭಿಮಾನ ಭಂಗ ಎಂಬ ಗಾದೆ ಮಾತನ್ನು ಬರೆದಿರಬೇಕು.
ಒಳ್ಳೆಯದು ಯಾವುದು – ಕೆಟ್ಟದು ಯಾವುದು ಎಂಬುದನ್ನು ವಿಚಾರಿಸಿ ಒಳ್ಳೆಯ ಕಾರ್ಯವನ್ನಾರಂಭಿಸಿದಾಗ ಸಂತೋಷ, ದರ್ಪ, ಕೋಪ, ನಾಚಿಕೆ, ಮಾನ, ಅವಮಾನಗಳ ಪ್ರಸಂಗವು ಬಂದರೂ, ಯಾವ ಅಡ್ಡಿಯೂ ಬಂದರೂ ಲೆಕ್ಕಿಸದೆ ಯಾವನು ಹಿಡಿದ ಕೆಲಸವನ್ನು ಸಾಧಿಸುತ್ತಾನೆಯೋ ಅವನೇ ಪಂಡಿತ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯ ಇವು ಆರು ಕುಸಿದು ಬೀಳುವ ಉಸುಬಿನ ಗುಂಡಿಗಳು. ಇವೆಲ್ಲವನ್ನೂ ಪರಿತ್ಯಜಿಸದೆ ತಾಮಸ ಗುಣದಿಂದಲೇ ಮುಂದುವರಿಯುವುದು ಉಚಿತವಲ್ಲ.
ನಮ್ಮ ಬದುಕನ್ನು ನಾವು ರೂಪಿಸಬೇಕು. ಹೇಗೆ ರೂಪಿಸಿಕೊಳ್ಳಬೇಕು ಎಂಬುದು ನಾವು ಬಯಸುವ ಬದುಕಿನ ರೀತಿ ರಿವಾಜಿನ ಆಧಾರದಲ್ಲಿರುತ್ತದೆ.
ನಮ್ಮ ಹೆಸರು ದೇಹಕ್ಕೆ ಸೀಮಿತವಾಗಿರದೆ ಅದು ಶಾಶ್ವತವಾಗುವಂತೆ ರೂಪಿಸಬೇಕಿದೆ, ಯಾಕೆಂದರೆ ದೇಹ ನಾಶವಾದಂತೆ ಹೆಸರೂ ನಾಶವಾಗುವ ಬದುಕನ್ನು ನಾವು ಕಾಣಬಾರದು. ದೇಹ ಹೋದರೂ ಶಾಶ್ವತವಾಗಿ ಹೆಸರು ನಿಲ್ಲುವಂತಿರಬೇಕು. ಈ ನಿಟ್ಟಿನಲ್ಲಿ ನಮ್ಮ ಬದುಕಿನ ಹಾದಿಯನ್ನು ರೂಪಿಸಿಕೊಳ್ಳಬೇಕಿದೆ.