ತುಂಟರಗಾಳಿ
ಸಿನಿಗನ್ನಡ
ಕೆಲವು ಸ್ಟಾರ್ ಸಿನಿಮಾಗಳು ಥಿಯೇಟರ್ಗಳಲ್ಲಿ ಬಿಡುಗಡೆ ಆಗಿ ಒಂದು ತಿಂಗಳು ಕಳೆಯುವ ಮುನ್ನವೇ ಓಟಿಟಿಗೆ ಕಾಲಿಡುತ್ತವೆ. ಅವುಗಳಲ್ಲಿ ಕೆಲವು ಚಿತ್ರಮಂದಿರ ದಲ್ಲಿ ಗೆದ್ದ ಚಿತ್ರಗಳೇ, ಆದರೆ ಇನ್ನು ಕೆಲವು ಸೋತ ಚಿತ್ರಗಳು ಓಟಿಟಿಯದರೂ ದುಡ್ಡು ಮಾಡೋಣ ಅಂತ ಬಹಳ ಮುಂಚೆನೇ ಸೇಲ್ ಆಗಿಬಿಡುತ್ತವೆ. ಚಿತ್ರಮಂದಿರ ಗಳಲ್ಲಿ ಸದ್ದು ಮಾಡಲಿಲ್ಲವಾದರೂ ನಿರ್ಮಾಪಕರು ಸಿನಿಮಾ ಸಕ್ಸಸ್ ಅನ್ನೋದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನಿಮಾ ಅಷ್ಟು ಕೋಟಿ
ಗಳಿಕೆ ಮಾಡಿದೆ ಎಂದು ಹೇಳೋದು, ಎಲ್ಲದರ ನಂತರವೂ ಆ ಚಿತ್ರದ ಗಳಿಕೆಯ ಅಸಲಿಯತ್ತು ಎಲ್ಲರಿಗೂ ಗೊತ್ತಿರುತ್ತದೆ.
ಹಾಗಾಗಿ ಈಗ ಕಳೆದ ತಿಂಗಳು ಚಿತ್ರ ಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದ ಚಿತ್ರ ಈ ತಿಂಗಳು ಶುರು ಆಗೋ ಮುನ್ನವೇ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಜೊತೆಗೇ ಮತ್ತೆ ಸಿನಿಮಾ ವಿಮರ್ಶೆ ಮಾಡುವವರು ಸೋಷಿಯಲ್ ಮೀಡಿಯಾಗಳಲ್ಲಿ ಬ್ಯುಸಿ ಆಗುತ್ತಾರೆ. ಒಂದು ಬದಲಾವಣೆ ಅಂದ್ರೆ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ಚೆನ್ನಾಗಿಲ್ಲ ಅಂತ ಹೇಳೋಕೆ ಹಿಂದೆ ಮುಂದೆ ನೋಡ್ತಾ ಇದ್ದವರು, ಈಗ ಸಾರಾ ಸಗಟಾಗಿ ನಿರ್ದೇಶಕರು ಹಂಗ್ ಮಾಡಿದ್ದಾರೆ, ಹಿಂಗ್ ಮಾಡಿzರೆ ಅಂತ ಅಂತ ನೇರವಾಗಿ ಟೀಕೆ ಮಾಡುತ್ತಾರೆ.
ಪ್ರೇಕ್ಷಕರ ಮಟ್ಟಿಗೆ ಚಿತ್ರಮಂದಿರಗಳಲ್ಲಿ ಫುಲ್ ಆದ ಇಂಥ ಚಿತ್ರಗಳನ್ನು ನೋಡೋಕೆ ಎಷ್ಟು ಜನ ಆಸಕ್ತಿ ತೋರಿಸ್ತಿದ್ದಾರೆ ಅನ್ನೋದ್ರ ಬಗ್ಗೆ ಇನ್ನೂ ಅಂಕಿ ಅಂಶಗಳು ಸಿಕ್ಕಿಲ್ಲ. ಥಿಯೇಟರ್ನಲ್ಲಂತೂ ಸಿನಿಮಾ ನೋಡೋಕೆ ಪ್ರೇಕ್ಷಕರು ಬರಲಿಲ್ಲ, ಇದ್ರೂ ಬರ್ತಾರಾ ಅಂತ ನಿರ್ಮಾಪಕರು ಕಾಯ್ತಾ ಇರುತ್ತಾರೆ. ಆದರೆ, ಚಿತ್ರಮಂದಿ ರಕ್ಕೆ ಬಾರದವರು ಓಟಿಟಿಗೆ ಬಂದಾರೆಯೇ? ಅಂತ ಗಾಂಧಿನಗರದ ಪಂಡಿತರು, ಅದು ಮುಂದುವರೆದ ಅಧ್ಯಾಯ ಅಲ್ಲ, ಮುಗಿದ ಅಧ್ಯಾಯ ಮುಂದಿನ ಸಿನಿಮಾ ಬಗ್ಗೆ ಮಾತಾಡಿ ಅಂತಿರದಂತೂ ಸತ್ಯ.
ಲೂಸ್ ಟಾಕ್ – ಬ್ರಿಜ್ ಭೂಷಣ್, ಸಂಸದ
ಅಲ್ರೀ, ನಿಮ್ಮನ್ನ ಬೆಂಗಳೂರು ಕಂಬಳಕ್ಕೆ ಅತಿಥಿ ಆಗಿ ಕರೆದು ಆಮೇಲೆ ಬ್ಯಾಡ ಅಂದು ಅವಮಾನ ಮಾಡಿಬಿಟ್ರಲ್ಲ?
– ಅಯ್ಯೋ, ಐ ಆಮ್ ನಾಟ್ ಕಮಿಂಗ್ ಫಾರ್ ಕಂಬಳ’ ಅಂತ ಮೊದಲೇ ಹೇಳಿದ್ದೆ. ನಂಗೇನೂ ಅವಮಾನ ಇಲ್ಲ
ಅಯ್ಯೋ, ಹಂಗೆ ಕಮಿಂಗ್ ಅಂತ ಹೇಳಬೇಡಿ, ನಿಮ್ಮ ಮೇಲೆ ಮೊದಲೇ ಲೈಂಗಿಕ ಕಿರುಕುಳದ ಆರೋಪ ಇದೆ. ಸರಿ, ಕಂಬಳದ ಅತಿಥಿಗಳ ಪಟ್ಟಿಯಲ್ಲಿ ಬರೀ
ಬಿಜೆಪಿಗರೇ ಇದ್ದಾರಂತಲ್ಲ?
– ಮತ್ತಿನ್ನೇನು?. ಕೆಸರಿನಲ್ಲಿ ನಡೆಯೋ ಆಟಕ್ಕೆ. ಕೆಸರಿನಲ್ಲಿ ಕಮಲ ಹುಟ್ಟಿಸೋರನ್ನೇ ಕರಿಬೇಕು ತಾನೇ
ಅದೂ ಸರಿ ಬಿಡಿ. ಆದ್ರೆ ನಿಜ ಹೇಳಿ, ನಿಮ್ಮನ್ನ ಅತಿಥಿಗಳ ಪಟ್ಟಿಯಿಂದ ಕೈ ಬಿಡೋಕೆ ಕಾರಣ ಏನು?
– ನನ್ನ ಹೆಸರನ್ನ ಕೈ ಬಿಡೋಕೆ ಕೈ ಪಕ್ಷದವರ ಕುತಂತ್ರವೇ ಕಾರಣ. ಹೆಸರು ಕೆಡಿಸಿಕೊಂಡವರನ್ನ ಕೆಸರು ಗz ಓಟಕ್ಕೆ ಕರೀಬಾರ್ದು ಅಂತ ಕಿತಾಪತಿ ಮಾಡಿಬಿಟ್ರು
ನಿಮ್ಮ ಹೆಸರನ್ನು ಕೈ ಬಿಟ್ಟಿದ್ದಕ್ಕೆ ಸಮಿತಿಯವರು ನಿಮಗೆ ಸಮಜಾಯಿಷಿ, ಏನಾದ್ರೂ ಕೊಟ್ಟಿದ್ದಾರಾ?
– ಏನೂ ಕೊಟ್ಟಿಲ್ಲ. ಮೊದಲೇ ಕ್ರೀಡಾ ಸಚಿವ , ಇಲ್ಲೂ ಏನಾದ್ರೂ ಆಟ ಆಡಿಬಿಟ್ರೆ. ಸುಮ್ನೆ ಯಾಕೆ ಬೇಕು ಅಂತ ಹೆಸರು ತೆಗೆದಿದ್ದಾರೆ ಅಂದ್ಕೊಂಡು ನಾನೇ
ಸುಮ್ಮನಾದೆ.
ಸರಿ, ಈ ವಿಷಯದಲ್ಲಿ ನಿಮಗೆ ಬೇಸರ ಆಗಿದೆಯಾ?
– ಬೇಸರ ಆಗಿತ್ತು. ಆದ್ರೆ, ಸುಮ್ನೆ ಆಟ ನಡೆಯೋ ಜಾಗಕ್ಕೆ ಹೋದ್ರೆ, ಅಲ್ಲಿ ಸೋತವರ ಬಾಯಿಂದ, ಇವನು ಐರನ್ ಲೆಗ್, ಇವ್ನು ಬಂದಿದ್ದಕ್ಕೇ ನಾವು ಸೋತಿದ್ದು
ಅಂತ ಮಾತು ಕೇಳೋದು ತಪ್ಪುತ್ತೆ ಅಂತ ನಮ್ಮ ಮೋದಿಯವರು ಹೇಳಿದ್ದು ಕೇಳಿ ಸಮಾಧಾನ ಮಾಡ್ಕೊಂಡೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಇಬ್ಬರು ಬ್ಯುಸಿನೆಸ್ಮನ್ಗಳು ಅಂದಿನ ಗಾಲ ಪ್ರಾಕ್ಟೀಸಿಗೆ ರೆಡಿ ಆಗ್ತಾ ಇದ್ರು. ಖೇಮು ಅದೇ ಕ್ರೀಡಾಂಗಣದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಾ ಇದ್ದ.
ಇವರಿಬ್ಬರೂ ಆಡೋಕೆ ರೆಡಿ ಆಗ್ತಾ ಇದ್ದಿದ್ದನ್ನು ನೋಡಿ, ಇವರ ಬಳಿ ಬಂದು , ಸರ್ ನನ್ನ ಬಳಿ ಒಂದು ವಿಶೇಷವಾದ ಬಾಲ್ ಇದೆ, ಬೇಕಾ ಅಂತ ಕೇಳಿದ. ಅದಕ್ಕೆ ಅವರು ಗಾಲ್ಫ್ ಬಾಲ್ನಲ್ಲಿ ವಿಶೇಷ ಏನಿರುತ್ತೆ ಅಂತ ಆಶ್ಚರ್ಯ ಪಟ್ಟುಕೊಂಡೇ ಖೇಮುವಿ ನಿಂದ ಬಾಲ್ ತೆಗೆದುಕೊಂಡು ನೋಡಿದರು. ಅದರಲ್ಲಿ ಅವರಿಗೆ ವಿಶೇಷ ಏನೂ ಕಾಣಲಿಲ್ಲ.
ಮಾಮೂಲಿ ಬಾಲ್ ಥರನೇ ಇತ್ತು. ಅದಕ್ಕೆ ಇಬ್ಬರೂ ಮುಖ ಮುಖ ನೋಡಿಕೊಂಡು ಮತ್ತೆ ಖೇಮು ಮುಖ ನೋಡಿ ಕೇಳಿದರು, ಎಲ್ಲಾ ಬಾಲ್ ಥರಾನೇ ಇದೆಯಲ್ಲಪ್ಪ ಇದರಲ್ಲಿ ವಿಷೇಷ ಏನ್ ಬಂತು?. ಅದಕ್ಕೆ ಖೇಮು ಹೇಳಿದ, ಸರ್ ನೋಡೋಕೆ ಮಾಮೂಲಿಯಾಗೇ ಇದೆ. ಆದ್ರೆ ಇದರ ವಿಶೇಷ ಏನು ಅಂದ್ರೆ, ಇದು
ಏನ್ ಮಾಡಿದರೂ ಕಳೆದೇ ಹೋಗದ ಬಾಲ್ ಅಂದ. ಇಬ್ಬರೂ ಅದು ಹೆಂಗೆ ಅಂತ ಕೇಳಿದ್ರು. ಅದಕ್ಕೆ ಮುಂದುವರಿದ ಖೇಮು, ನೋಡಿ ಸರ್, ಇದು ಎದರೂ
ಪೊದೆಯೊಳಗೆ ಹೋದ್ರೆ ಅಲ್ಲಿಂದ ಬೀಪ್ ಬೀಪ್ ಅಂತ ಸೌಂಡ್ ಮಾಡುತ್ತೆ.
ನೀರಿನಲ್ಲಿ ಬಿದ್ದರೆ ಗುಳ್ಳೆಗಳನ್ನು ಹೊರಡಿಸುತ್ತೆ. ಬೆಂಕಿಯಲ್ಲಿ ಬಿದ್ರೆ ಸುಡೋದಿಲ್ಲ, ಅಲ್ಲಿಂದಲೇ ಬೇರೆ ಬೇರೆ ಕಲರ್ ಫ್ರೇಮ್ ಹೊರಡಿಸುತ್ತೆ. ಹಾಗಾಗಿ ಬಾಲ್
ಹುಡುಕೋದು ಸುಲಭ ಆಗುತ್ತೆ. ಕಳೆದು ಹೋಗೋ ಛಾನ್ಸೇ ಇಲ್ಲ ಅಂದ. ಈ ಮಾತನ್ನು ಕೇಳಿ ಇಬ್ಬರೂ ತುಂಬಾ ಇಂಪ್ರೆಸ್ ಆಗಿ, ಆ ಬಾಲ್ ಅನ್ನು ದೊಡ್ಡ ಮೊತ್ತಕ್ಕೆ
ಖರೀದಿ ಮಾಡಿದ್ರು. ಬಾಲ್ ಕೊಟ್ಟು ಹಣ ಇಸ್ಕೊಂಡು ಹೊರಟ ಖೇಮುವನ್ನು ಒಬ್ಬ ಬ್ಯುಸಿನೆಸ್ ಮನ್ ದೂರದಿಂದಲೇ ಕೇಳಿದ, ಅ ಖೇಮು, ಈ ಬಾಲ್ ನಿಂಗೆ ಎಲ್ ಸಿಕ್ತು?. ಅದಕ್ಕೆ ಖೇಮು ಅಲ್ಲಿಂದಲೇ ತಿರುಗಿ ನೋಡಿ ಕೂಲಾಗಿ ಹೇಳಿದ, ಯಾರೋ ಕಳಕೊಂಡಿದ್ರು ಅನ್ಸುತ್ತೆ, ಹಿಂಗೇ ಎಲ್ಲಾ ಸಿಕ್ತು ಸರ್!
ಲೈನ್ ಮ್ಯಾನ್
ಕುಡಿತ ಬಿಡಿಸುವ ಕೆಲಸ
-ಡಿ‘ವೈನ್’
ಹಳೇ ಕಾಲದ ಹಳ್ಳಿ ಶೈಲಿಯಲ್ಲಿ ಊಟ ಮಾಡೋ ಪದ್ಧತಿ
– ತಾಟ್ ಪ್ರೊಸೆಸ್
ದುಂಬಿ ಜೇನಿಗೆ ಹೇಳಿದ್ದೇನು?
– ನಾನು ನಿನ್ನ ಮನದುಂಬಿ ಪ್ರೀತಿಸ್ತೀನಿ
ಕೆಲಸ ಮಾಡೋರದ್ದು – ಟಾಸ್ಕ್ ಫೋರ್ಸ್
– ಎಲ್ಲವನ್ನೂ ಬರೀ ಪ್ರಶ್ನೆ ಮಾಡುವವರ ಗುಂಪು – ಆ ಪೋರ್ಸ್
ಧ್ರುವ ಸರ್ಜಾ ಓದುಗರ ಪ್ರಶ್ನೆಗೆ ಉತ್ತರಿಸುವ ಕಾಲಂ ಶುರು ಮಾಡಿದ್ರೆ ಅದರ ಹೆಸರು
– ಉತ್ತರ ಧ್ರುವ
ಧ್ರುವ ಸರ್ಜಾ ಅವರ ಹೊಸ ಸಿನಿಮಾ ರಿಲೀಸ್ ಆದಾಗ ಥಿಯೇಟರ್ನಲ್ಲಿ ಸೊಳ್ಳೆಗಳ ಕಾಟ ಇರಲ್ಲ
– ಯಾಕಂದ್ರೆ ಸಿನಿಮಾ ಹೆಸರು ಮಾರ್ಟಿನ್
ಡೇಂಜರಸ್ ಆಗಿ ಡ್ರೈವ್ ಮಾಡೋ ಆಂಬುಲೆ ಡ್ರೈವರ್ಗೆ ಏನಂತ ಬಯ್ಬೇಕು?
– ಯಾಕೋ ಮಗನೇ, ಇವತ್ ಯಾರೂ ಗಿರಾಕಿ ಸಿಗಲಿಲ್ವಾ?
ಪೊರ್ಕಿ ಹುಡುಗರ ಪಾಲಿಸಿ
– ಹುಡುಗಿ ‘ಸೈಟ್’ ಕೊಡ್ತಾಳೆ ಅಂತ ಒಬ್ಬಳನ್ನ ಲವ್ ಮಾಡೋದು, ಅವರಪ್ಪ ‘ಸೈಟ್’ ಕೊಡ್ತಾನೆ ಅಂತ ಇನ್ನೊಬ್ಬಳನ್ನ ಮದುವೆ ಆಗೋದು.
ಪ್ರಪಂಚದ ಮೊದಲ ಮತ್ತು ಅಕ್ಷರಶಃ ಸ್ಪ್ಲಿಟ್ ಪರ್ಸನಾಲಿಟಿ ಅಂದ್ರೆ
-ಭೀಮನಿಂದ ಎರಡು ತುಂಡಾಗಿ ಸತ್ತು ಹೋದ ಜರಾಸಂಧ
ಕೆಲವು ಸಿನಿಮಾ ಹೀರೋಗಳಿಗೆ ಅವರನ್ನ ಟೀಕೆ ಮಾಡೋರನ್ನ ಕಂಡ್ರೆ ಸಿಟ್ಟು
-ಯಾಕಂದ್ರೆ ಅವರಿಗೆ ಟಿ.ಕೆ ಜಾಸ್ತಿ