Saturday, 14th December 2024

ನಮ್ಮ ಹೃದಯದಲ್ಲೇ ಶ್ರೀರಾಮನಿದ್ದರೂ ಅಯೋಧ್ಯೆಯಲ್ಲಿ ಮಂದಿರ ಅಗತ್ಯ

ಪ್ರಸ್ತುತ

ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಮೊದಲನೆಯದಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಇತ್ತೀಚೆಗೆ ಅಥಣಿಯಲ್ಲಿ ನಾನು ಸ್ವಯಂಪ್ರೇರಣೆಯಿಂದ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ನನ್ನ ದೇಣಿಗೆಯನ್ನು ನೀಡಿ ರಸೀದಿ ಪಡೆದಿದ್ದೇನೆ. ಆದ್ದರಿಂದ ಈ ವಿಷಯದಲ್ಲಿ ಪ್ರಸ್ತುತ ಕೆಲವರು ಸೃಷ್ಟಿಸುತ್ತಿರುವ ವಾದಗಳಿಗೆ ನನ್ನ ಪ್ರತಿಕ್ರಿಯೆ ನೀಡುವುದು ನನ್ನ ಜವಾಬ್ದಾರಿ ಎಂಬ ಕಾರಣದಿಂದ ಇದನ್ನು ಬರೆಯುತ್ತಿದ್ದೇನೆ.

ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ನೀಡಿದವರಾಗಲೀ ಅಥವಾ ನೀಡಬೇಕೆಂಬ ಇಚ್ಛೆ ಉಳ್ಳವರಾಗಲೀ ರಾಮ ಮಂದಿರ ನಿರ್ಮಾಣ ಅಭಿಯಾನದ ಮುಂಚೂಣಿಯಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ವಿಶ್ವಾಸಾರ್ಹತೆಗಳ ಬಗ್ಗೆ ಅಥವಾ ಸಂಗ್ರಹಿಸಲಾದ ಕಾಣಿಕೆಗಳ ಸದುಪಯೋಗದ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸಿಲ್ಲ. ಏಕೆಂದರೆ ರಾಮಮಂದಿರ ನಿರ್ಮಾಣದ ಅಭಿಯಾನದಲ್ಲಿ ಸಕ್ರಿಯವಾಗಿರುವ ವಿಶ್ವ ಹಿಂದೂ ಪರಿಷತ್ತಿನ ಅಥವಾ ಸಂಘ ಪರಿವಾರದ ಪ್ರಾಮಾಣಿಕತೆಯನ್ನು, ನಿಷ್ಠೆಯನ್ನು ಪ್ರಶ್ನಿಸುವುದಕ್ಕೆ ಆಸ್ಪದವಿಲ್ಲದಂತೆ ಈ ಸಂಘಟನೆಗಳು ಹಿಂದಿನಿಂದಲೂ ಸಚ್ಚಾರಿತ್ರ್ಯ ಕಾಪಾಡಿಕೊಂಡು ಬಂದಿರುವ ಇತಿಹಾಸ ಸ್ಫಟಿಕದಷ್ಟೇ ಪ್ರಚ್ಛನ್ನವಾಗಿದೆ.

ಆದರೆ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಈಗ ಇಡೀ ರಾಷ್ಟ್ರದಲ್ಲಿ ಎಲ್ಲಾ ಜಾತಿ – ಮತ ಬಾಂಧವರು ನೀಡುತ್ತಿರುವ
ಅಭೂತಪೂರ್ವ – ಸ್ವಯಂ ಪ್ರೇರಿತ ಪ್ರೋತ್ಸಾಹ ಕಂಡು ಸಹಿಸದ ಕೆಲವರು ಪರೋಕ್ಷವಾಗಿ ರಾಮನಪರವಿರುವ ಸಂಘಟನೆಗಳ ವಿರುದ್ಧ ತಮಗಿದ್ದ ಆಕ್ರೋಶಗಳನ್ನೇ ಈಗ ತಮ್ಮ ಹುಸಿ ಆರೋಪಗಳ ಅಸವನ್ನಾಗಿ ಮಾಡಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಜನ್ಮಸ್ಥಳದಲ್ಲಿ ಹಿಂದಿದ್ದ ರಾಮಮಂದಿರವನ್ನು ಭಗ್ನಗೊಳಿಸಿ ಬಾಬ್ರಿ ಮಸೀದಿಯನ್ನು ಕಟ್ಟಿದ ನಂತರ ಸುಮಾರು ೫೦೦ ವರ್ಷಗಳಿಂದಲೂ ಮತ್ತೆ ರಾಮಮಂದಿರವನ್ನು ಅಲ್ಲಿಯೇ ನಿರ್ಮಿಸಬೇಕೆಂಬುದು ಬಹುಸಂಖ್ಯಾತ ಹಿಂದೂಗಳ ಬೇಡಿಕೆಯಾಗಿತ್ತು.

ಶಬರಿಯು ದೀರ್ಘಕಾಲದಿಂದ ರಾಮನಿಗೆ ಕಾದಂತೆ, ಕೋಟ್ಯಂತರ ಭಾರತೀಯರು ರಾಮಮಂದಿರದ ಪುನರ್‌ಸೃಷ್ಟಿಗೆ ಕನಸು
ಕಂಡಿದ್ದು ಈಗ ನನಸಾಗುತ್ತಿರುವುದಕ್ಕೆ ಹೆಮ್ಮೆಪಡಬೇಕೇ ವಿನಾ ಹೊಟ್ಟೆಕಿಚ್ಚು ಪಟ್ಟುಕೊಂಡರೆ, ರಾಮಾಯಣದಲ್ಲಿ ಮಂಥರೆಗೆ ಉಂಟಾದ ಗತಿಯೇ ಈ ಕಲಿಗಾಲದಲ್ಲೂ ಎದುರಾದೀತು.

ಸುದೀರ್ಘಕಾಲ ಸಮುದ್ರಮಥನವನ್ನು ಕೈಗೊಂಡ ನಂತರ ಅಮೃತ ಸಿದ್ಧಿಸಿದಂತೆ ಈಗ ರಾಮಮಂದಿರದ ನಿರ್ಮಾಣ ಕೈಗೂಡುತ್ತಿದೆ. ಆದರೆ ಈ ಅಮೃತಕ್ಕೆ ಹುಳಿ ಹಿಂಡುವ ಕೃತ್ಯಕ್ಕೆ ಅತ್ತ ಕೆಲವು ಆಸ್ತಿಕರೂ ಅಲ್ಲದ – ಇತ್ತ ನಾಸ್ತಿಕರೂ ಅಲ್ಲದ ಎಡಬಿಡಂಗಿಗಳು ಮುಂದಾಗಿರುವುದು ದೌರ್ಭಾಗ್ಯವೇ ಸರಿ. ಹಾಗೆ ನೋಡಿದರೆ ಶ್ರೀ ರಾಮನ ಸಾತ್ವಿಕ ಶಕ್ತಿಗೆ ತಾಟಕಿ, ಶೂರ್ಪನಖಿ, ರಾವಣನಂಥವರ ಪ್ರತಿರೋಧ, ಕುಹಕ ಹಿಂದಿನಿಂದಲೂ ಇದ್ದಿದ್ದೇ. ಇಂತಹ ಭಂಜಕ ಶಕ್ತಿಗಳೇ ಹಿಂದೆ ಐತಿಹಾಸಿಕವಾದ ಶ್ರೀರಾಮ ಸೇತುವೆಯನ್ನೂ ಸಹ ವಿನಾಕಾರಣ ಶಂಕೆಯಿಂದ ಪ್ರಶ್ನಿಸಿ ರಾಮಭಕ್ತರನ್ನು ವಿಚಲಿತಗೊಳಿಸಲು ಯತ್ನಿಸಿದ್ದುಂಟು.
ಈಗ ಶ್ರೀರಾಮ ಮಂದಿರದ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೂ ಮಸಿ ಬಳಿಯಲು ಕೆಲವರು ಪೈಪೋಟಿಗಿಳಿದಿರುವುದು ವಿಪರ್ಯಾಸ.

ಶ್ರೀರಾಮ ಭಾರತೀಯ ಸಂಸ್ಕೃತಿಯ ಅಸ್ಮಿತೆಯ ಪ್ರತೀಕ. ನನ್ನ ದೃಷ್ಟಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ಕೇವಲ ರಾಮಮಂದಿರವಲ್ಲ. ಅದು ರಾಷ್ಟ್ರಮಂದಿರವೂ ಹೌದು. ಏಕೆಂದರೆ ನಮ್ಮೆಲ್ಲಾ ಶ್ರದ್ಧಾ, ಭಕ್ತಿ ಕೇಂದ್ರವಾಗಿ ನಮಗೆ ದಾರಿದೀಪವಾಗಬಲ್ಲ ಈ ಮಂದಿರವನ್ನು ಜಗತ್ಪ್ರಸಿದ್ಧ ಭಾರತೀಯ ಕಲೆ, ಸಾಂಸ್ಕೃತಿಕ, ಸಾರಸ್ವತ ಮತ್ತು ಧಾರ್ಮಿಕ ಕೇಂದ್ರ ವನ್ನಾಗಿಯೂ ಬೆಳೆಸುವಂಥ ಉದ್ದೇಶ ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಮುಂದೆ ಇದು ಪ್ರವಾಸೋದ್ಯಮದ ಹಿತದೃಷ್ಟಿಯಿಂದಲೂ ನಮ್ಮ ದೇಶದ ದೊಡ್ಡ ಆಕರ್ಷಣೆಯಾಗಲಿದೆ. ಆದರೆ
ಇಂತಹ ಘನಕಾರ್ಯದಲ್ಲೂ ಅಪಸ್ವರ ಎತ್ತುವ ಕೆಲವರ ಪ್ರಯತ್ನ ಮೊಸರಲ್ಲಿ ಕಲ್ಲು ಹುಡುಕಿದಂತೆ. ಆದರೆ ಇಂತಹ ವಿಘ್ನ ಸಂತೋಷಿಗಳಿಗೆಲ್ಲ ನಮ್ಮ ದಿಟ್ಟ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜಿ ಅವರಾಗಲಿ ಅಥವಾ ಅಮಿತ್ ಶಾ ಜಿ
ಯವರಾಗಲೀ ಸೊಪ್ಪು ಹಾಕುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

ಗುಜರಾತಿನಲ್ಲಿ ಉಕ್ಕಿನ ನಾಯಕ ಸರ್ದಾರ್ ಪಟೇಲರ ಭವ್ಯ ಪ್ರತಿಮೆ ನಿರ್ಮಿಸುವಾಗಲೂ ಇಂತಹ ಹಲವು ಕುಹಕ
– ನಿಂದನೆಗಳು ಈ ಮುಖಂಡರಿಗೆ ಎದುರಾಗಿದ್ದವು. ಆದರೆ ದಿಟ್ಟವಾಗಿ ನಡೆಯುವ ಆನೆಗೆ ಇವೆಲ್ಲಾ ಯಾವ ಲೆಕ್ಕ? ಶ್ರೀರಾಮ ಎಂದಾಕ್ಷಣ ನನಗೆ ಬಾಲ್ಯದಲ್ಲಿ ನನ್ನ ತಾಯಿ ಹೇಳುತ್ತಿದ್ದ ರಾಮನ ಕಥೆಗಳೇ ನೆನಪಾಗುತ್ತಿವೆ. ಹೀಗಾಗಿ ಆಂಜನೇಯನ ಹೃದಯ ಬಗೆದರೆ ಶ್ರೀರಾಮನ ದರ್ಶನವಾಗುವಂತೆ, ನಮ್ಮಂತಹ ಕೋಟ್ಯಾಂತರ ಜನರ ಹೃದಯ ಮಂದಿರದಲ್ಲಿ ಶ್ರೀರಾಮ ಈಗಾಗಲೇ
ಶಾಶ್ವತವಾಗಿದ್ದಾನೆ. ಆದರೆ ನಾವು ಗುಡಿಸಲಿನಲ್ಲಿದ್ದರೂ ನಮ್ಮ ದೇವರು ಮಾತ್ರ ಸುಂದರವಾದ ಗುಡಿಗೋಪುರದಲ್ಲಿರಬೇಕೆಂದು ಹಂಬಲಿಸುವ ಉದಾತ್ತ ಭಕ್ತಿ ಪರಂಪರೆ ಯನ್ನು ನಮ್ಮ ಹಿಂದೂ ಧರ್ಮ ನಮಗೆ ಕಲಿಸಿಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಆದ್ದರಿಂದ ನಾವೆಲ್ಲೇ ಇರಲಿ, ಹೇಗೇ ಇರಲಿ… ನಮ್ಮ ಭಗವಂತನ ನೆಲೆ ಸುಂದರವಾಗಿದ್ದರೆ ಅದರಂತಹ ಸಂತೋಷ ಇನ್ನೊಂದಿಲ್ಲ ಎಂಬ ನಮ್ಮ ಸಂಸ್ಕೃತಿಗೆ ಈ ರಾಮ ಮಂದಿರವೂ ಸೂಕ್ತ ನಿದರ್ಶನವಾಗಲಿದೆ. ಇಲ್ಲದಿದ್ದರೆ ಸಾಂಸ್ಕೃತಿಕವಾಗಿ ಬರಡಾಗಿರುವ ಎಷ್ಟೋ ಕಮ್ಯೂನಿಸ್ಟ್ ರಾಷ್ಟ್ರಗಳಿಗೆ ಎದುರಾದ ದುಸ್ಥಿತಿಯೇ ನಮ್ಮ ದೇಶಕ್ಕೂ ಎದುರಾಗುವ ಅಪಾಯವಿದೆ. ಇತಿಹಾಸವನ್ನು
ಗಮನಿಸಿದರೆ ನಮ್ಮ ರಾಜಮಹಾರಾಜರುಗಳೂ ಕೂಡ ಗ್ರಾಮಕ್ಕೊಂದಾದರೂ ದೇವಾಲಯವನ್ನು ನಿರ್ಮಿಸುತ್ತಿದ್ದ ವಾಸ್ತವಗಳು ನಮ್ಮ ಕಣ್ಮುಂದೆಯೇ ಇವೆ. ಆ ರಾಜ ಮಹಾರಾಜರುಗಳು ತಮ್ಮ ಸ್ವಂತ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಈ ದೇವಾಲಯಗಳನ್ನು ನಿರ್ಮಿಸಿಲ್ಲ.

ಊರಿಗೆ ಒಳ್ಳೆಯದಾಗುತ್ತದೆ ಎಂಬ ಒಂದೇ ಸದಿಚ್ಛೆಯಿಂದ ಇಂತಹ ಪುಣ್ಯಕಾರ್ಯ ಕೈಗೊಂಡಿದ್ದರು ಎಂಬುದು ನಮಗೆ ಸದಾ ಮಾರ್ಗದರ್ಶಕವಾಗಬೇಕು. ಈ ಎಲ್ಲಾ ವಿಚಾರಗಳ ಪರಿಜ್ಞಾನವಿಲ್ಲದೇ ಅಥವಾ ಪರಿಜ್ಞಾನವಿದ್ದೂ ಜಾಣ  ಕುರುಡುತನ ವನ್ನು ಶ್ರೀರಾಮನ ವಿಚಾರದಲ್ಲಿ ಪ್ರದರ್ಶಿಸುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ ಹಿಂದೆ ರಾವಣನಿಗೆ ಉಂಟಾದ ದುರ್ಗತಿಯೇ ಎದುರಾದೀತು ಎಂಬ ವಿವೇಕ ಇದ್ದರೆ ಒಳ್ಳೆಯದು.