ಗುರುವಂದನೆ
ನಂ.ಶ್ರೀಕಂಠ ಕುಮಾರ್
ಆಚಾರ್ಯ ಶ್ರೀ ಶಂಕರ ಭಗವತ್ಪಾದರು ಸ್ಥಾಪಿಸಿದ ನಾಲ್ಕು ವ್ಯಾಖ್ಯಾನ ಪೀಠಗಳಲ್ಲಿ ಪ್ರಥಮವಾದದ್ದು ದಕ್ಷಿಣಾಮ್ನಾಯ ಶೃಂಗೇರಿಯ ಶ್ರೀ ಶಾರದಾ
ಪೀಠ. ಅಂದಿನಿಂದಲೂ ವಿಶ್ವಕ್ಕೆ ಅದ್ವೈತವನ್ನು ಸಮಂಜಸವಾಗಿ ತಿಳಿಸುವ ತಪೋಬಲವು ಅವಿಚ್ಛಿನ್ನ ಗುರುಪರಂಪರೆಯಲ್ಲಿ ಸಾಗಿಬಂದಿದೆ. ಅಲ್ಲದೆ, ಸಂನ್ಯಾಸವೆಂದರೆ ಲೌಕಿಕವೆಲ್ಲವನ್ನೂ ತ್ಯಜಿಸಿ ತನ್ನ ಮೋಕ್ಷವನ್ನು ತಾನು ಕಂಡುಕೊಳ್ಳುವುದಷ್ಟೇ ಅಲ್ಲದೆ, ಲೋಕಕಲ್ಯಾಣವನ್ನು ಮಾಡುವುದೂ ಆಗಿದೆ
ಎಂಬುದು ವೇದಗಳು ಹೇಳುವ ತತ್ವವಾಗಿದೆ. ಹಾಗಾಗಿ ಸನಾತನ ಧರ್ಮವು ವಿಶ್ವಮಾನ್ಯವಾಗುತ್ತಿದೆ.
ಪ್ರಸ್ತುತ ಶೃಂಗೇರಿ ಶ್ರೀ ಶಾರದಾ ಪೀಠದ ೩೬ನೇ ಪೀಠಾಧಿಪತಿಗಳಾಗಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾ ಸನ್ನಿಧಾನಂಗಳವರು ೫೦ ವರ್ಷಗಳಿಂದ ಪರಂಪರೆಯಂತೆ ಸನಾತನ ಧರ್ಮವನ್ನು ರಕ್ಷಣೆ ಮಾಡುತ್ತಾ, ಶ್ರೀ ಶಾರದಾಂಬೆ ಮತ್ತು ಶ್ರೀ ಚಂದ್ರಮೌಳೀಶ್ವರರನ್ನು ನಿತ್ಯ ಪೂಜಿಸುತ್ತಾ ಶೃಂಗೇರಿಯನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಿದ್ದಾರೆ. ನವೆಂಬರ್ ೧೦ರಂದು ಶ್ರೀ ಭಾರತೀತೀರ್ಥ ಸ್ವಾಮಿಗಳ ಸಂನ್ಯಾಸ ಸ್ವೀಕಾರ ಸ್ವರ್ಣ ಮಹ್ಸೋವದ ಅಂಗವಾಗಿ ಶೃಂಗೇರಿಯ ಮಾರುತಿ ಬೆಟ್ಟದಲ್ಲಿ ತತ್ಕರಕಮಲ ಸಂಜಾತರಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರು ಮಹಾಸನ್ನಿಧಾನಂಗಳವರ ಸಮಕ್ಷಮದಲ್ಲಿ, ಶ್ರೀ ಶಂಕರ ಭಗವತ್ಪಾದಾಚಾರ್ಯರ ೩೨ ಅಡಿ ಎತ್ತರದ, ೭೫೦ ಟನ್ ತೂಕದ ಶಿಲಾಮಯ ಭವ್ಯಮೂರ್ತಿ, ಶ್ರೀ ಭಗವತ್ಪಾದರ ಪ್ರಧಾನ
ಶಿಷ್ಯರಾದ ಸರ್ವಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲ ಕಾಚಾರ್ಯ, ತೋಟಕಾಚಾರ್ಯರ ಮತ್ತು ಪೀಠದ ೧೨ನೇ ಅಧಿಪತಿಗಳೂ ಆದ ಶ್ರೀ ವಿದ್ಯಾರಣ್ಯರ ಶಿಲಾ ಮೂರ್ತಿಗಳನ್ನು ಹಾಗೂ ವಸ್ತುಪ್ರದರ್ಶನದ ಶಾಲೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಬೆಟ್ಟದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ.
ಈ ಸ್ವರ್ಣಮಹೋತ್ಸವದ ಸಂಬಂಧವಾಗಿ ಅತಿರುದ್ರ ಮಹಾಯಾಗ, ಲಕ್ಷಮೋದಕ ನರಸಿಂಹ ಹೋಮ, ಪಂಚಾಕ್ಷರಿ ಹೋಮ, ಆಂಜನೇಯ ಹೋಮ,
ಮೇಧಾ ದಕ್ಷಿಣಾಮೂರ್ತಿ ಹೋಮ, ಸಹಸ್ರ ಚಂಡಿ ಮಹಾಯಾಗ, ಮಹಾವಿಷ್ಣು ಆರಾಧನೆ ಅಲ್ಲದೆ, ೫೦,೦೦೦ ವೃಕ್ಷಾರೋಪಣ ಕಾರ್ಯಕ್ರಮವೂ ಲೋಕ ಕಲ್ಯಾಣಾರ್ಥ ವಾಗಿ ಜರುಗಲಿದೆ.
ಮಹಾಸ್ವಾಮಿಗಳು ನಡೆದುಬಂದ ದಾರಿ ಆಂಧ್ರಪ್ರದೇಶದ ಅಲುಗು ಮಲ್ಲೇಪಾಡು ಎಂಬ ಗ್ರಾಮದಲ್ಲಿ ಶ್ರೀ ತಂಗಿರಾಲ ವೆಂಕಟೇಶ ಅವಧಾನಿಗಳು ತಮ್ಮ
ಧರ್ಮಪತ್ನಿ ಅನಂತಲಕ್ಷಮ್ಮನವರೊಂದಿಗೆ ಸಂತೋಷದ ತುಂಬುಜೀವನ ನಡೆಸುತ್ತಿದ್ದರು. ಈ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳ ಜನನವಾದರೂ ಪುತ್ರ ಸಂತಾನವಾಗಲಿಲ್ಲ ಎಂಬ ಕೊರಗು ಅವರಿಗಿತ್ತು. ಕಾಲಾನಂತರದಲ್ಲಿ ಅವಧಾನಿಗಳು ತಮ್ಮ ನೆಲೆಯನ್ನು ಮಚಲೀಪಟ್ಟಣಕ್ಕೆ ಬದಲಾಯಿಸಿ ಅಲ್ಲಿನ
ಶ್ರೀರಾಮ ದೇವಾಲಯದಲ್ಲಿ ದೇವರ ಸೇವೆಯನ್ನು ಪ್ರಾರಂಭಿಸಿದರು. ಅವರ ಪತ್ನಿಯು ಪುತ್ರ ಸಂತಾನ ಕರುಣಿಸುವಂತೆ ಅಲ್ಲಿಯೇ ಇದ್ದ ಮಾರುತಿಯನ್ನು ನಿತ್ಯವೂ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದರು ಹಾಗೂ ಹುಟ್ಟಿದ ಮಗನಿಗೆ ‘ಆಂಜನೇಯಲು’ ಎಂದು ಹೆಸರಿಸಿ ನಿತ್ಯ ಸ್ಮರಿಸುತ್ತೇನೆ ಎಂದು ಬೇಡುತ್ತಿದ್ದರು.
ಒಂದು ಬೆಳಗಿನ ಜಾವ ಶ್ರೀರಾಮನು ಆಂಜನೇಯನ ಮುಖಾಂತರ ಮೂರು ಮಾವಿನ ಹಣ್ಣುಗಳನ್ನು ಅನುಗ್ರಹಿಸಿದಂತೆ ಈ ಸಾಧಿಗೆ ಭಾಸವಾಯಿತು.
ಸತ್ವ-ರಜಸ್ಸು-ತಮಸ್ಸು ಈ ಮೂರು ಗುಣಗಳ ರೂಪವಾಗಿ ಬೆಳಗುವ ಪ್ರಭಾವಶಾಲಿ ಚೈತನ್ಯವು ಉದಯಿಸುವುದು ಎಂಬುದರ ಸೂಚನೆಯಾಗಿ ಈ ಮೂರು ಫಲಗಳನ್ನು ಇತ್ತನೇ ಎಂದು ಆಕೆ ಪರಿಭಾವಿಸಿದರು. ಶ್ರೀಮತ್ ಖರನಾಮ ಸಂವತ್ಸರದ ಚೈತ್ರಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಮೃಗಶಿರ ನಕ್ಷತ್ರದಲ್ಲಿ (೧೧.೦೪.೧೯೫೧) ಮಧ್ಯರಾತ್ರಿ ಧರೆಯಲ್ಲಿ ದಿವ್ಯಶಕ್ತಿಯ ಅವತಾರವಾಯಿತು.
ತಂದೆಯು ಅಂದುಕೊಂಡಂತೆ ‘ಸೀತಾರಾಮ’, ತಾಯಿಯ ಬಯಕೆಯಂತೆ ‘ಆಂಜನೇಯಲು’ ಹೀಗೆ ಎರಡನ್ನೂ ಸೇರಿಸಿ ‘ಸೀತಾರಾಮಾಂಜನೇಯಲು’ ಎಂದು ಶಿಶುವಿಗೆ ನಾಮಕರಣ ಮಾಡಿದರು. ಮಗುವು ಬೆಳೆದಂತೆಲ್ಲಾ ಅದರ ಶಿವಭಕ್ತಿಯೂ ವೃದ್ಧಿಸತೊಡಗಿತು. ದಿನಗಳೆದಂತೆ ಪೂಜಾಸಮಯದಲ್ಲಿ
ತಂದೆಯವರೊಂದಿಗೆ ಕೆಲವು ಮಂತ್ರ, ಶ್ಲೋಕಗಳನ್ನು ಹೇಳುವುದನ್ನು ಕಲಿತ ಬಾಲಕನಿಗೆ ೮ ವರ್ಷವಾಗುತ್ತಿದ್ದಂತೆ ಉಪನಯನವಾಯಿತು.
ಧರ್ಮರಕ್ಷಣೆಗೆ ವಟುವು ಸಿದ್ಧನಾದ. ತರುವಾಯ ಪಂಡಿತರಲ್ಲಿಗೆ ಕಳಿಸಿ ಸಂಸ್ಕೃತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಯಿತು. ವೇದಪಾರಂಗತರು,
ಅನುಷ್ಠಾನ ವೇದಾಂತಿಗಳು ಎಂದು ಖ್ಯಾತಿ ಪಡೆದಿದ್ದ ತಂದೆಯಿಂದ ಬಾಲಕ ಸೀತಾರಾಮಾಂಜನೇಯಲು ಮಂತ್ರಗಳನ್ನು ಏಕಸಂಧಿಗ್ರಾಹಿಯಾಗಿ ಕಲಿಯ ತೊಡಗಿದ. ಚಿಕ್ಕ ಹುಡುಗ ನಾಗಿದ್ದರೂ ವೇದ ಪ್ರವರ್ಧಕ ವಿದ್ವತ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ. ಶೃಂಗೇರಿ ಪೀಠದ ಜಗದ್ಗುರು ಗಳಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ೧೯೬೦ರಲ್ಲಿ ಆಂಧ್ರಪ್ರದೇಶದಲ್ಲಿ ವಿಜಯಯಾತ್ರೆ ಮಾಡುತ್ತಾ ನರಸರಾವ್ ಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು. ಅವಧಾನಿಗಳು ಮಗನೊಂದಿಗೆ ಹೋಗಿ ಅವರ ದರ್ಶನ ಪಡೆದರು. ಗುರುಗಳ ಬಗ್ಗೆ ಬಾಲಕನಲ್ಲಿ ವಿಶೇಷ ಗೌರವವು ಮೂಡಿತು. ಗುರುಗಳು ಈರ್ವರನ್ನೂ ಹರಸಿದರು. ೧೯೬೬ರಲ್ಲಿ, ಗ್ವಾಲಿಯರ್‌ನ ರಾಜಮಾತೆ ವಿಜಯರಾಜೇ ಸಿಂಽಯಾರ ವಿನಂತಿಯ ಮೇರೆಗೆ ಶ್ರೀ
ಅಭಿನವ ವಿದ್ಯಾತೀರ್ಥರು ಉಜ್ಜಯಿನಿಯಲ್ಲಿ ಚಾತುರ್ಮಾಸ ವ್ರತವನ್ನು ಕೈಗೊಂಡಿದ್ದರು.
ಅವರ ದರ್ಶನಕ್ಕೆಂದು ನರಸರಾವ್ ಪೇಟೆಯಿಂದ ಗುರುಭಕ್ತರೊಬ್ಬರು ಉಜ್ಜಯಿನಿಗೆ ಪ್ರವಾಸ ಏರ್ಪಡಿಸಿದ್ದರು. ಗುರುಗಳ ದರ್ಶನಕ್ಕೆ ಹಾತೊರೆ ಯುತ್ತಿದ್ದ ಬಾಲಕ ಸೀತಾರಾಮಾಂಜನೇಯಲು ತಾನೂ ಉಜ್ಜಯಿನಿಗೆ ಹೋಗಲು ಆಶಿಸಿ, ಅಲ್ಲಿಗೆ ತೆರಳಿ ದರ್ಶನ ಪಡೆದು ಕೃತಾರ್ಥನಾದನು. ‘ಬಂದ ಕಾರಣವೇನು?’ ಎಂದು ಗುರುಗಳು ಕೇಳಿದಾಗ, ‘ಶಾಸಾಭ್ಯಾಸವನ್ನು ಕಲಿಯಬೇಕು, ಅನುಗ್ರಹಿಸಿ’ ಎಂದು ವಿನಂತಿಸಿದನು. ಮಾರನೆಯ ದಿನ ಬಾಲಕನಿಗೆ ಗುರುಗಳಿಂದ ಒಪ್ಪಿಗೆ ಕರೆ ಬಂತು. ಅಂದಿನಿಂದಲೇ ತರ್ಕಸಂಗ್ರಹ ಪಾಠಗಳನ್ನು ಪ್ರಾರಂಭಿಸಿದರು. ಅತ್ತ ಬಾಲಕನು ಗುರುಗಳನ್ನೇ ನಂಬಿ ಕೃತಾರ್ಥನಾಗಿದ್ದರೆ, ಇತ್ತ ಆತನ ತಂದೆ-ತಾಯಿ ಚಿಂತಿತರಾಗಿದ್ದರು. ಅವರಿಗೆ ಬಾಲಕನು ಬರೆದ ಪತ್ರ ತಲುಪಿ, ಜಗದ್ಗುರುಗಳ ಸಾನಿಧ್ಯ ಅವನಿಗೆ
ದೊರಕಿದ್ದು ತಿಳಿದು ಸಂತಸ-ನೆಮ್ಮದಿ ಉಂಟಾದವು.
ಜಗದ್ಗುರುಗಳು ಯಾತ್ರೆ ಹೋದಲ್ಲೆಲ್ಲ ವಿದ್ವತ್ ಸಭೆಗಳು ನಡೆಯುತ್ತಿರುತ್ತವೆ; ಅಂಥ ಸಭೆಗಳಲ್ಲಿ ಭಾಗವಹಿಸುವಂತೆ ಅವರು ಈ ಶಿಷ್ಯನಿಗೆ ಸೂಚಿಸು ತ್ತಿದ್ದರು. ಅಲ್ಲಿ ಶಿಷ್ಯನಿಂದ ಹೊಮ್ಮುತ್ತಿದ್ದ ಪರಿಣತಿಯನ್ನು ಕಂಡು ಸಂತೃಪ್ತ ಭಾವವನ್ನು ವ್ಯಕ್ತಪಡಿಸುತ್ತಿದ್ದರು. ಶ್ರೀ ಅಭಿನವ ವಿದ್ಯಾತೀರ್ಥರು ವಿಜಯಯಾತ್ರೆಯನ್ನು ಪೂರ್ಣಗೊಳಿಸಿ ೧೯೬೮ರ ಮಾರ್ಚ್‌ನಲ್ಲಿ ಶೃಂಗೇರಿ ಪುರ ಪ್ರವೇಶ ಮಾಡಿದಾಗ, ಅವರೊಂದಿಗೆ ಪ್ರಥಮ ಬಾರಿಗೆ ಶಿಷ್ಯ ಶ್ರೀ ಸೀತಾರಾಮಾಂಜನೇಯಲುರವರೂ ಶೃಂಗೇರಿಗೆ ಆಗಮಿಸಿದಂತಾಯಿತು. ಮಾತೆ ಶಾರದೆಯು ತನ್ನ ಮತ್ತೊಬ್ಬ ಆರಾಧಕನನ್ನು ಅನುಗ್ರಹಿಸಲು ಅಭಯಹಸ್ತದಿಂದ ರಾರಾಜಿಸುತ್ತಿದ್ದಳು.
ಗುರುಗಳು ಶಿಷ್ಯನಿಗೆ ನರಸಿಂಹವನದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಸಿದರು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶ್ರೇಷ್ಠ ಪಂಡಿತರನ್ನು ನೇಮಿಸಿದರು. ಅಲ್ಲದೆ ಸ್ವತಃ ಆತನಿಗೆ ವಿಶೇಷ ಪ್ರೀತಿಯಿಂದ ಪಾಠ-ಪ್ರವಚನ ನೀಡಿ ಪರಿಪೂರ್ಣ ಪಾಂಡಿತ್ಯವನ್ನು ಅನುಗ್ರಹಿಸಿದರು. ಜತೆಗೆ ಜೀವನ ಶಿಕ್ಷಣವೂ ನಡೆಯಿತು. ಇವನ್ನೆಲ್ಲ ಕಂಡ ಶಿಷ್ಯನಿಗೆ ಗುರುಗಳ ಮೇಲಿನ ಅಭಿಮಾನ, ಭಕ್ತಿ ಇಮ್ಮಡಿಯಾಯಿತು.
ಪ್ರತಿವರ್ಷದಂತೆ ೧೯೭೪ರಲ್ಲಿ ನವರಾತ್ರಿ ಮಹೋತ್ಸವಕ್ಕೆ ಅವಧಾನಿ ದಂಪತಿ ಶೃಂಗೇರಿಗೆ ಆಗಮಿಸಿ ಜಗದ್ಗುರುಗಳ ದರ್ಶನ ಪಡೆದಾಗ ಅವರು, ‘ಶ್ರೀ ಶಾರದಾ ಮಾತೆಯ ಆಜ್ಞೆಯಂತೆ ಸೀತಾರಾಮಾಂಜನೇಯಲುರನ್ನು ಮುಂದಿನ ಪೀಠಾಧಿಪತಿಗಳನ್ನಾಗಿ ಆರಿಸಿ ಸಂನ್ಯಾಸ ಸ್ವೀಕಾರ ದೀಕ್ಷೆಯನ್ನು
ಅನುಗ್ರಹಿಸಿದ್ದೇವೆ’ ಎಂದು ಹೇಳಿ ಆಶೀರ್ವದಿಸಿದರು. ಅವಧಾನಿ ದಂಪತಿ ಕೃತಜ್ಞತೆಗಳನ್ನು ಸಮರ್ಪಿಸಿದರು. ನವರಾತ್ರಿ ಮಹೋತ್ಸವ ಮುಗಿದ ತರುವಾಯ ಒಂದು ಶುಭ ದಿನ ಮುಂಜಾನೆ ಶ್ರೀ ಅಭಿನವ ವಿದ್ಯಾತೀರ್ಥರು ಶ್ರೀ ಶಾರದಾಂಬೆಯ ಪೂಜಾಕೈಂಕರ್ಯವನ್ನು ಮುಗಿಸಿ, ದೇವಸ್ಥಾನದಲ್ಲಿ ನೆರೆದಿದ್ದ ಭಕ್ತಗಣವನ್ನುದ್ದೇಶಿಸಿ, ‘ಶ್ರೀ ಶಾರದಾಂಬೆಯ ಅಪ್ಪಣೆಯಂತೆ ಶ್ರೀ ಸೀತಾ ರಾಮಾಂಜನೇಯಲುರವರನ್ನು ಮುಂದಿನ ಪೀಠಾಧಿಪತಿಗಳನ್ನಾಗಿ ಆರಿಸಿರುತ್ತೇವೆ.
ಶಿಷ್ಯಸ್ವೀಕಾರ ಸಮಾರಂಭ ನವೆಂಬರ್ ೧೧ರಂದು ನೆರವೇರಲಿದೆ’ ಎಂದು ಘೋಷಿಸಿದರು. ಭಕ್ತವೃಂದವು ಹರ್ಷ ವ್ಯಕ್ತಪಡಿಸಿತು. ಸಮಾರಂಭದ
ಶ್ರೀಮುಖವನ್ನು ಆಮ್ನಾಯ ಪೀಠಾಧಿಪತಿಗಳಿಗೆ, ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರಿಗೆ ಹಾಗೂ ಭಕ್ತವೃಂದಕ್ಕೆ ರವಾನಿಸಲಾಯಿತು. ಅಂದು ಆನಂದನಾಮ ಸಂವತ್ಸರದ ಆಶ್ವಯುಜ ಕೃಷ್ಣ ಏಕಾದಶಿ ರವಿವಾರ (೧೦.೧೧.೧೯೭೪). ಜಗದ್ಗುರು ಶ್ರೀ
ಚಂದ್ರಶೇಖರ ಭಾರತೀ ಸ್ವಾಮಿಗಳವರ ೮೩ನೇ ಜಯಂತಿ ಯಂದು, ಶ್ರೀ ಸೀತಾರಾಮಾಂಜನೇಯಲುರವರು ಗುರುವಂದನೆ ಸಲ್ಲಿಸಿ ಶುಭ ಸಮಾರಂಭದ ಕಾರ್ಯಗಳನ್ನು ಪ್ರಾರಂಭಿಸಿದರು. ಶ್ರೀ ಗಣಪತಿ ಹೋಮ, ಶ್ರೀ ಶಾರದಾ ಅಮ್ಮನವರಿಗೆ ವಿಶೇಷ ಪೂಜೆ, ನಂತರ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಮತ್ತು ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳ ಅಧಿಷ್ಠಾನದ ಪೂಜೆ ಸಲ್ಲಿಸಿ ಅಷ್ಟಶ್ರಾದ್ಧ ನೆರವೇರಿಸಿದರು.
ಅಂದು ರಾತ್ರಿ ಪೂರ್ಣ ಜಾಗರಣೆ ಮಾಡುತ್ತಾ ಅಗ್ನಿಕಾರ್ಯ ವನ್ನು ನೆರವೇರಿಸಿದರು. ಮಾರನೆಯ ದಿನ ಮುಂಜಾನೆ ಸಂಧ್ಯಾವಂದನೆ ಮುಗಿಸಿ, ನಂತರ ಪುರುಷಸೂಕ್ತ ಹೋಮ, ವಿರಜಾಹೋಮವನ್ನು ನೆರವೇರಿಸಿ ಪವಿತ್ರ ತುಂಗಾ ತಟಕ್ಕೆ ತೆರಳಿದರು. ಶಿಷ್ಯನ ಆಗಮನಕ್ಕೆ ಮಹಾಸ್ವಾಮಿಗಳವರು ಎದುರು ನೋಡುತ್ತಿದ್ದರು. ಮುಂದಿನ ಪೀಠಾಧಿಪತಿಗಳಾಗಿ ಧರ್ಮದೀಕ್ಷೆ ಪಡೆಯಲು ಅನುವಾಗುವ ಕ್ಷಣ ಸಮೀಪಿಸಿತು.
ತುಂಗೆಯನ್ನು ಬಲಗೈಯಲ್ಲಿ ಸ್ಪರ್ಶಿಸಿ ಆಶೀರ್ವಾದ ಪಡೆದು ನಿಧಾನವಾಗಿ ಇಳಿದರು, ತುಂಗೆಯು ಕಂಠದವರೆಗೂ ಬಂದಳು. ಆಗ ಒಂದೊಂದಾಗಿ ತಮ್ಮ ವಸಗಳನ್ನು ಕಳಚಿ ತುಂಗೆಯಲ್ಲಿ ವಿಸರ್ಜಿಸಿದರು. ಸೊಂಟಕ್ಕೆ ಕಟ್ಟಿದ್ದ ದಾರ, ಧರಿಸಿದ್ದ ಯಜ್ಞೋಪವೀತವನ್ನು ವಿಸರ್ಜಿಸಿ, ಪ್ರೈಷೋಚ್ಚಾರವನ್ನು ಉಚ್ಚರಿಸಿದರು. ಹಿಂದಿನ ಬಂಧನದಿಂದ ಮುಕ್ತರಾದರು. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ಸಂನ್ಯಾಸಿಯ ಸರ್ವಸ್ವವಾದ ಶುಭ್ರ ಕಾವಿಯ ವಸ, ದಂಡ-ಕಮಂಡಲವನ್ನು ನೀಡಿದರು. ಎಲ್ಲೆಡೆ ಘಂಟಾನಾದ ಮಾರ್ದನಿಸುತ್ತಿತ್ತು.
ವೇದಮಂತ್ರದ ಘೋಷ, ಭಕ್ತವೃಂದದ ಜಯಕಾರ ಮುಗಿಲುಮುಟ್ಟಿತು. ನಂತರ ಪ್ರಣವ ಮಂತ್ರ, ವೇದಗಳನ್ನು ಉಪದೇಶಿಸಿ ಪೂರ್ಣವಾಗಿ ಸಂನ್ಯಾಸ ನೀಡಿ ಆಶೀರ್ವದಿಸಿದರು. ಎಲ್ಲಾ ಭಕ್ತವೃಂದವು ಕಾತುರದಿಂದ ಕಾಯುತ್ತಿದ್ದ ಶುಭವೇಳೆಯಲ್ಲಿ ‘ಶ್ರೀ ಭಾರತೀತೀರ್ಥ’ ಎಂದು ನಾಮಕರಣ ಮಾಡಿ ಯೋಗಪಟ್ಟವನ್ನು ಘೋಷಿಸಿದರು. ಶ್ರೀ ಭಾರತೀ ತೀರ್ಥ ಸ್ವಾಮಿಗಳು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ೩೬ನೇ ಜಗದ್ಗುರುಗಳಾಗಿ, ಅಲ್ಲಿನ ಶಿಷ್ಯ ಪರಂಪರೆಗೆ ಅನುಗ್ರಹಿಸಿರುವ ವ್ಯಾಖ್ಯಾನ ಪೀಠದ ಆರೋಹಣ ಮಾಡಿದರು. ಅವರ ಶಿರದ ಮೇಲೆ ಜಗದ್ಗುರುಗಳವರು ಸಾಲಿಗ್ರಾಮವನ್ನಿರಿಸಿ ವಿಧಿ ಪೂರ್ವಕವಾಗಿ ಪೂಜೆ ಸಲ್ಲಿಸಿದರು. ಇದು ಮಾನವತ್ವದಿಂದ ದೈವತ್ವಕ್ಕೆ ಏರಿಸುವ ಪೂಜೆಯಾಗಿತ್ತು. ಶ್ರೀ ಭಾರತೀತೀರ್ಥ ಸ್ವಾಮಿಗಳು ತಮ್ಮ ಗುರು ದೇವರ ಪೂಜೆಯನ್ನು ಭಕ್ತಿಯಿಂದ ನೆರವೇರಿಸಿದರು. ನೆರೆದಿದ್ದ ಭಕ್ತಸಮೂಹ ಉಭಯ ಜಗದ್ಗುರುಗಳ ದರ್ಶನದಿಂದ ಪುನೀತವಾಯಿತು.
(ಲೇಖಕರು ಬಿಇಎಂಎಲ್ ಮಾಜಿ ಅಧಿಕಾರಿ)