Thursday, 12th December 2024

Srinivas Raghavendra Column: ಸ್ಥಿತಪ್ರಜ್ಞತೆಯ ಸಾಕಾರಮೂರ್ತಿ

ತನ್ನಿಮಿತ್ತ

ಶ್ರೀನಿವಾಸ ರಾಘವೇಂದ್ರ, ಮೈಸೂರು

ಸನಾತನ ಹಿಂದೂ ಧರ್ಮದಲ್ಲಿ ಸಮಾಜಜೀವಿ ಮನುಷ್ಯನಿಗೆ ಬರುವ ನಾಲ್ಕು ಅವಸ್ಥೆಗಳೆಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು
ಸನ್ಯಾಸ. ಇವನ್ನು ಆಶ್ರಮಗಳೆನ್ನುತ್ತಾರೆ. ಉಪನಯನ ಸಂಸ್ಕಾರ ಪಡೆದು ಗುರುಗಳ ಬಳಿ ಅಧ್ಯಯನದಲ್ಲಿ ತೊಡಗಿಕೊಳ್ಳುವುದು
ಬ್ರಹ್ಮಚರ್ಯ. ಅಧ್ಯಯನದ ಅಂತಿಮ ಹಂತದಲ್ಲಿ (ಅಂದರೆ ಇಂದಿನ ಗ್ರಾಜುಯೇಷನ್) ಗುರುಕುಲ ಜೀವನದಿಂದ ಹೊರ ಬಂದು ಯೋಗ್ಯಕನ್ಯೆಯನ್ನು ವಿವಾಹವಾಗಿ ಸಂಸಾರ ನಿರ್ವಹಿಸುವುದು ಗೃಹಸ್ಥ ಧರ್ಮ.

ಇದು ಅಸಹನೀಯ ಎನಿಸಿದಾಗ ಪುತ್ರ, ಮಿತ್ರ, ಕಳತ್ರ (ಹೆಂಡತಿ)ರನ್ನು ತೊರೆದು ಕಾಡಿಗೆ ಹೋಗಿ ಅಲ್ಲಿನ ಆಹಾರವನ್ನೇ ಅವಲಂಬಿಸಿ ಏಕಾಂತದ ಭಗವದ್ಧ್ಯಾನದಲ್ಲಿ ತೊಡಗುವುದು ವಾನಪ್ರಸ್ಥ ಜೀವನ. ಕಡೆಗೆ ಅದರಲ್ಲೂ ಬೇಸರಿಕೆ ಬಂದು ‘ತಾನಲ್ಲ ತನ್ನದಲ್ಲ ತರವಲ್ಲ’ ಎಂಬ ಭಾವನೆಯಿಂದ
ಎಲ್ಲವನ್ನೂ ತ್ಯಜಿಸಿ ಭಗವಂತನ ಧ್ಯಾನದಲ್ಲೇ ಏಕಮನಸ್ಕನಾಗಿ ತೊಡಗುವುದೇ ಸನ್ಯಾಸ. ಹುಟ್ಟಿದ ಮನುಷ್ಯ ಅಬ್ಬಬ್ಬಾ ಎಂದರೆ ಒಂದು
ಅಥವಾ ಎರಡು ಆಶ್ರಮ ದಲ್ಲಿರಬಹುದು, ಅಷ್ಟೇ!

ಎಲ್ಲಾ ನಾಲ್ಕೂ ಆಶ್ರಮಗಳನ್ನು ಗಟ್ಟಿಯಾಗಿ ಹಿಡಿದು ಸಾರ್ಥಕ ಜೀವನ ಸಾಧನೆ ಮಾಡುವವರು ಅತಿ ವಿರಳ! ಅಂಥವರಲ್ಲಿ ಒಬ್ಬರಾಗಿದ್ದರು ಕರ್ನಾಟಕದ ರಾಯಚೂರು ಜಿಲ್ಲೆಯ ಗಡಚಿಂತಿ ರಾಮಾಚಾರ್ಯರು. ಗಡಚಿಂತಿ ರಾಮಾಚಾರ್ಯರು ಜನಿಸಿದ್ದು 1930ರ ದಶಕದಲ್ಲಿ. ತಂದೆ ನರಸಿಂಹಾಚಾರ್ಯರು, ತಾಯಿ ಗಿರಿಜಾಬಾಯಿಯವರು.

ಆ ಕಾಲದಲ್ಲಿ ಇಂಟರ್‌ಮೀಡಿಯೆಟ್ ವರೆಗೆ ಓದಿದ ರಾಮಾಚಾರ್ಯರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೆಲಕಾಲ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದೂ ಇದೆ. ಅದು ಹೈದರಾಬಾದ್‌ನ ನಿಜಾಮನ ಕಾಲ. ಮುಂದೆ ಇವರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ರಾಮಾಚಾರ್ಯರ ದೇಹದಾರ್ಢ್ಯವೂ ಹಾಗೇ ಇತ್ತು ಎನ್ನಿ- ಆರಡಿ ಎತ್ತರ, ಜತೆಗೆ ಹೊಂದಿಕೆಯಾಗುವ ಕಟ್ಟುಮಸ್ತು ಶರೀರ. ಒಟ್ಟಿನಲ್ಲಿ, ಕಳ್ಳರಿಗೆ, ಸಮಾಜಘಾತುಕರಿಗೆ ಸಿಂಹಸ್ವಪ್ನ ಎನಿಸುವಂಥ ಚರ್ಯೆ!

ಹೈದರಾಬಾದ್ (ಹಿಂದಿನ ಭಾಗ್ಯನಗರ), ಗುಲ್ಬರ್ಗ, ರಾಯಚೂರು ಪ್ರಾಂತ್ಯಗಳಲ್ಲಿ ಕೆಲಸದಲ್ಲಿ ತೊಡಗಿ, ‘ದುಷ್ಟ ಶಿಕ್ಷಣೆ, ಶಿಷ್ಟದಿ ರಕ್ಷಣೆ’ ಮಾಡುತ್ತಾ ಖಡಕ್ ಪೊಲೀಸ್ ಅDiಕಾರಿ ಎನಿಸಿಕೊಂಡಿದ್ದರು! ಒಮ್ಮೆ, ರಾಮಾಚಾರ್ಯರಿಂದ ಬಂಧನಕ್ಕೊಳಗಾಗಬೇಕಾಗಿ ಬಂದ ಕೊಲೆಗಡುಕನೊಬ್ಬ ಇವರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಇದುದಿ ಆಚಾರ್ಯರ ವೃತ್ತಿಜೀವನದ ಮೇಲೆ ಬಹಳ ಪರಿಣಾಮ ಬೀರಿತು. “ನನ್ನಿಂದಾಗಿ ಒಬ್ಬ
ಜೀವ ಕಳೆದುಕೊಳ್ಳಬೇಕಾಗಿ ಬಂತಲ್ಲಾ…”ದಿ ಎಂದು ಪರಿತಪಿಸಿ ವೃತ್ತಿಗೆ ರಾಜೀನಾಮೆ ನೀಡಿ ಹೊರಬಂದರು!

ಹೆಂಡತಿ-ಮಕ್ಕಳನ್ನು ತೊರೆದು ಹಿಮಾಲಯದತ್ತ ಮುಖ ಮಾಡಿದರು. ಒಂದು ದಶಕಕ್ಕೂ ಹೆಚ್ಚು ಕಾಲ ಹಿಮಾಲಯದ ಒಡನಾಟ, ಮಾನಸ
ಸರೋವರ ಯಾತ್ರೆಯ ಸಾಂಗತ್ಯ ಒದಗಿತು. ಹೀಗೆ ಉತ್ತರ ಭಾರತದಲ್ಲಿ ಸಂಚರಿಸುತ್ತಿದ್ದಾಗ ಇವರಿಗೆ ಉಡುಪಿಯ ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರ ಸಂಪರ್ಕ ಒದಗಿತು. ಹಿಂದಿನ ವೃತ್ತಿಜೀವನದಲ್ಲಿ ಅಮರಿಕೊಂಡ ‘ತಪ್ಪಿತಸ್ಥ ಪ್ರಜ್ಞೆ’ಯಿಂದ ನೊಂದಿದ್ದ ಆಚಾರ್ಯರು, ಅಧ್ಯಾತ್ಮ ವಿದ್ಯೆಯನ್ನು ಪಡೆಯುವ ಹಂಬಲದಲ್ಲಿ ಶ್ರೀಗಳಿಗೆ ಶರಣಾದರು. ರಾಮಾಚಾರ್ಯರನ್ನು ಪರೀಕ್ಷಿಸಿದ ಶ್ರೀಗಳು ಅವರ ನಿಸ್ಪೃಹತೆ, ಭಕ್ತಿ, ಅಧ್ಯಾತ್ಮದ ಹಂಬಲ ಕಂಡು, ತಾವು ವಿದ್ಯಾರ್ಥಿಗಳಿಗೆ ಪಾಠ ಹೇಳುವ ವೇಳೆ ಇವರಿಗೂ ಪಾಠಕ್ಕೆ ಕೂರುವುದಕ್ಕೆ ಅವಕಾಶ ಮಾಡಿಕೊಟ್ಟರು.

ಮಹಾತ್ಮ ಗಾಂಧೀಜಿಯಂತೆ ಇವರದ್ದೂ ಮೊಣಕಾಲಿನವರೆಗಿನ ಪಂಚೆ, ಒಂದು ಹೊದೆಯುವ ವಸ್ತ್ರ. ಇಷ್ಟೇ ವೇಷಭೂಷಣ! ಶ್ರೀಗಳವರ ಪರಿಚರ್ಯೆ ಮಾಡುತ್ತಾ ಅವರನ್ನು ನೆರಳಿನಂತೆ ಹಿಂಬಾಲಿಸಿದ ರಾಮಾಚಾರ್ಯರಿಗೆ ಶ್ರೀ ಮಧ್ವಶಾಸದ ಉದ್ಗ್ರಂಥಗಳ ಸರ್ವಮೂಲ ಪರಿಚಯ ವಾಯಿತು. ಹಿತಮಿತ ಆಹಾರ ಪ್ರವೃತ್ತಿ, ಏಕಾಂಗಿತನ ಕೆನೆಗಟ್ಟಿದ್ದ ಆಚಾರ್ಯರ ಹಿಂದಿ ಮತ್ತು ಉರ್ದು ಭಾಷಾ ಪ್ರೌಢಿಮೆ ಶ್ರೀಗಳನ್ನು
ಆಕರ್ಷಿಸಿತ್ತು. 15 ವರ್ಷಗಳ ಕಾಲ ಶ್ರೀಗಳ ಬಳಿ ಅಧ್ಯಯನ ನಡೆಯಿತು.

ರಾಮಾಚಾರ್ಯರ ವಿರಕ್ತ ಜೀವನವನ್ನು ಗಮನಿಸಿದ್ದ ಶ್ರೀಗಳು ಮುಂದೊಂದು ದಿನ ಅವರಿಗೆ ‘ಪ್ರಣವ ಮಂತ್ರ’ವನ್ನು ಉಪದೇಶಿಸಿ, ‘ಶ್ರೀ
ವಿದ್ಯಾವಲ್ಲಭ ತೀರ್ಥ’ರೆಂದು ನಾಮಕರಣ ಮಾಡಿ ಸನ್ಯಾಸಾಶ್ರಮ ಕೊಟ್ಟರು. ಶ್ರೀ ಮಧ್ವಾಚಾರ್ಯರ ತತ್ತ್ವಗಳನ್ನು ಉತ್ತರ ಭಾರತದಲ್ಲಿ ಪ್ರಸಾರ ಮಾಡುವಂತೆ ಆಜ್ಞಾಪಿಸಿದರು. ಶ್ರೀಗಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಶ್ರೀ ವಿದ್ಯಾವಲ್ಲಭ ತೀರ್ಥರು, ಉತ್ತರ ಪ್ರದೇಶದ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಪ್ರದೇಶವಾದ, ಪುರಾಣ ಪ್ರಸಿದ್ಧ ಪ್ರಯಾಗ ಕ್ಷೇತ್ರದಲ್ಲಿ ನೆಲೆ ನಿಂತರು.

ಕುಂಭಮೇಳ ಸಮಯದಲ್ಲಿ ಇವರು ಮಾಡುತ್ತಿದ್ದ ಭಗವದ್ಗೀತಾ ಪ್ರವಚನವು ಅಲ್ಲಿಯ ಜನರನ್ನು ಬಹಳವಾಗಿ ಆಕರ್ಷಿಸಿತು. ಸರಕಾರವು ಇವರಿಗಾಗಿ ಮಾಘಮೇಳ, ಕುಂಭಮೇಳದ ವೇಳೆಯಲ್ಲಿ ನದಿದಡದಲ್ಲಿ ಒಂದು ಡೇರೆಯನ್ನು ಕೊಡುತ್ತಿತ್ತು. ಅಲ್ಲಿ ನಿರಂತರ ಪಾಠ-ಪ್ರವಚನಗಳಲ್ಲಿ
ತೊಡಗಿಸಿಕೊಂಡಿದ್ದರ ಫಲವಾಗಿ ಸಾಕಷ್ಟು ಜನರೂ ಇವರ ಶಿಷ್ಯರಾದರು. ಅದು ಸಮಾಜಸೇವೆಗೆ ಮುನ್ನುಡಿ ಬರೆದು, ಪ್ರಯಾಗದ ದಾರಾಗಂಜ್ ಪ್ರದೇಶದಲ್ಲಿ ಭವ್ಯವಾದ ‘ಶ್ರೀ ಮಧ್ವಭವನ’ ನಿರ್ಮಾಣವಾಯಿತು. ಗಂಗಾಸ್ನಾನ, ತ್ರಿವೇಣಿ ದಾನಕ್ಕೆಂದು ಪ್ರಯಾಗಕ್ಕೆ ಹೋಗುವ ಕರ್ನಾಟಕದ ಯಾತ್ರಾರ್ಥಿಗಳಿಗೆ ತಂಗಲು ಈ ಭವನವು ಅನುಕೂಲಕರವಾಗಿದೆ.

ಶ್ರೀ ವಿದ್ಯಾವಲ್ಲಭ ತೀರ್ಥರ ದಿವ್ಯಸಾಂಗತ್ಯದ ಕ್ಷಣವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.

1989ರಲ್ಲಿ ಮೈಸೂರಿನ ಕೃಷ್ಣಮೂರ್ತಿ ಪುರಂನ ಶ್ರೀರಾಯರ ಮಠದಲ್ಲಿ ಶ್ರೀಗಳು ಚಾತುರ್ಮಾಸ್ಯ ವ್ರತ ಕೈಗೊಂಡರು. ಶ್ರೀಗಳು ‘ಶ್ರೀ ಭಗವದ್ಗೀತಾ’ ಪ್ರವಚನವನ್ನು ಮಾಡುತ್ತಿದ್ದರು. ಮಧ್ಯಾಹ್ನ 1.30ರ ವೇಳೆಗೆ ಭಿಕ್ಷೆ ಸ್ವೀಕರಿಸುತ್ತಿದ್ದ ಶ್ರೀ ವಿದ್ಯಾವಲ್ಲಭರು ತರುವಾಯ ಸ್ವಲ್ಪ ಹೊತ್ತು
ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದುದು ವಾಡಿಕೆ. ಆ ವೇಳೆಯಲ್ಲಿ ನಾನು ಅವರನ್ನು ಭೇಟಿಯಾಗುತ್ತಿದ್ದೆ. ಅವರಿಗೆ ಲೋಕವಾರ್ತೆಯನ್ನು ತಿಳಿಸುವ ಸಲುವಾಗಿ ಪ್ರತಿನಿತ್ಯವೂ ‘ಪ್ರಜಾವಾಣಿ’ ಪತ್ರಿಕೆಯನ್ನು ಅವರ ಮುಂದೆ ಹಿಡಿದು ಶೀರ್ಷಿಕೆಗಳನ್ನು ಮಾತ್ರ ಓದುತ್ತಿದ್ದೆ. ಶ್ರೀಗಳಿಗೆ ಇಷ್ಟವಾದ
ಶೀರ್ಷಿಕೆಗೆ ಸಂಬಂಧಿಸಿದ ಸಮಾಚಾರವನ್ನು ವಿಶದವಾಗಿ ಓದಿ ಹೇಳುತ್ತಿದ್ದೆ.

ಒಮ್ಮೆ, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಠದ ಬಯಲು ಬಾವಿಯ ದಡದಲ್ಲಿ ಕುಳಿತ, ಚಿತ್ತಸ್ಥಿಮಿತ ಕಳೆದುಕೊಂಡ ತಾಯಿಯೊಬ್ಬಳು ತನ್ನ
ಇಬ್ಬರು ಮಕ್ಕಳನ್ನು ನೀರಿಗೆ ತಳ್ಳಿ ಕೊಂದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಹೆಣ್ಣುಮಗಳು ಯಾರ ಹೆಂಡತಿ ಎಂಬ ವಿವರವೂ ಅದರಲ್ಲಿತ್ತು. ಎಂದಿನಂತೆ ನಾನು ಸುದ್ದಿಶೀರ್ಷಿಕೆಯನ್ನಷ್ಟೇ ಓದಿ ಹೇಳಿದಾಗ, ಆ ಸುದ್ದಿಯನ್ನು ವಿಶದವಾಗಿ ಓದುವಂತೆ ಶ್ರೀಗಳು ನನಗೆ ಹೇಳಿದರು. ಓದಿದ್ದನ್ನು
ಕೇಳಿಸಿಕೊಂಡ ನಂತರ ಅವರ ಮುಖದಲ್ಲಿ ಯಾವ ವಿಕಾರತೆಯೂ ನನಗೆ ಕಾಣಲಿಲ್ಲ, ಅಲ್ಲಿ ಸ್ಥಿತಪ್ರಜ್ಞತೆ ಕೆನೆಗಟ್ಟಿತ್ತು. ಆದರೆ ನನಗೋ
ತಡೆಯಲಾಗದ ಕುತೂಹಲ, ಶ್ರೀಗಳನ್ನು ಕೇಳಿಯೇಬಿಟ್ಟೆ!

ಆಕೆ ಯಾರೆಂದು ಶ್ರೀಗಳು ಹೇಳಿದಾಗ ನನಗೆ ಬರಸಿಡಿಲು ಬಡಿದಂತಾಗಿತ್ತು! ಕಾರಣ, ಹಾಗೆ ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಆ ತಾಯಿ ಬೇರಾರೂ ಆಗಿರದೆ ಶ್ರೀಗಳವರ ಪೂರ್ವಾಶ್ರಮದ ಪುತ್ರಿಯಾಗಿದ್ದರು! ಆದರೆ ಶ್ರೀ ವಿದ್ಯಾವಲ್ಲಭ ತೀರ್ಥರು ಈ ಪ್ರಸಂಗವನ್ನು ಕೇಳಿ ತಿಳಿದು ಕಿಂಚಿತ್ತೂ ವಿಚಲಿತರಾಗಿರಲಿಲ್ಲ. ಈ ಪ್ರಸಂಗವನ್ನು ನೆನಪಿಸಿಕೊಂಡಾಗಲೆಲ್ಲಾ ನನಗೆ ಮೈ ‘ಜುಂ’ ಎನ್ನುತ್ತದೆ. ಅಂದು ಸಾಯಂಕಾಲ ಶ್ರೀಗಳು
ಎಂದಿನಂತೆ ಪ್ರವಚನ ಮಾಡಿದರು. ಇದು ನಾನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ ಶ್ರೀಗಳವರ ವೈರಾಗ್ಯಭಾವ.

ತಮ್ಮ ಜೀವನವನ್ನು ಸನ್ಯಾಸದಲ್ಲಿ ಸಮಾಪನೆ ಮಾಡಿಕೊಂಡ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ೨೦೦೧ರ ವರ್ಷದ ಕಾರ್ತಿಕ
ಮಾಸದ ಕೃಷ್ಣಪಕ್ಷ ಏಕಾದಶಿಯಂದು (ಇದಕ್ಕೆ ಉತ್ಪತ್ತಿ ಏಕಾದಶಿ ಅಥವಾ ಉತ್ಪನ್ನ ಏಕಾದಶಿ ಎಂದೂ ಕರೆಯುವುದುಂಟು) ಇಹಲೋಕ
ತ್ಯಜಿಸಿದರು. ಇಂದು (ನ.28) ಅವರ 24ನೆಯ ಆರಾಧನೆ. ಅವರ ಬಹುಸಂಖ್ಯಾತ ಶಿಷ್ಯರು ಈ ಬಾರಿ ಹೊಸಪೇಟೆಯ ಶ್ರೀ ಉತ್ತರಾದಿ ಮಠದಲ್ಲಿ, ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಈ ಆರಾಧನೆಯನ್ನು ನೆರವೇರಿಸುತ್ತಿರುವುದು ಹೆಮ್ಮೆಯ ಸಂಗತಿ. ಅದು ಭಕ್ತಗಣದಲ್ಲಿ ಕೃತಾರ್ಥಭಾವ ಮೂಡಿಸುವ ಘಟ್ಟವೂ ಹೌದು.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Kannadacolumn