ರಾಮರಥ
ಯಗಟಿ ರಘು ನಾಡಿಗ್
ವನವಾಸದ ವೇಳೆ ಪರ್ಣಕುಟಿಯಲ್ಲಿ ತಾನಿಲ್ಲದ ಹೊತ್ತಿನಲ್ಲಿ ರಾವಣನು ಕಪಟ ಸನ್ಯಾಸಿಯ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿಕೊಂಡು
ಹೋದ ಘಟನೆ ಶ್ರೀರಾಮನನ್ನು ಚಿಂತಾಕ್ರಾಂತನನ್ನಾಗಿಸಿತ್ತು. ಹಾಗಂತ ಅವನು ಕೈಕಟ್ಟಿ ಕೂರುವಂತಿರಲಿಲ್ಲ, ಪರಿಹಾರದ ಮಾರ್ಗವೊಂದನ್ನು ಕಂಡು ಕೊಳ್ಳಲೇಬೇಕಿತ್ತು. ಇದರ ಮೊದಲ ಭಾಗವಾಗಿ ಹನುಮಂತನನ್ನು ಲಂಕೆಗೆ ಶಾಂತಿದೂತನನ್ನಾಗಿ ಕಳಿಸಲಾಯಿತು. ಆದರೆ ಅವನ ಬಾಲಕ್ಕೆ ಬೆಂಕಿ
ಯಿಡಿಸುವ ಮೂಲಕ ಯುದ್ಧಕ್ಕೆ ಪರೋಕ್ಷ ಆಹ್ವಾನ ನೀಡಿದ ರಾವಣ. ಹೀಗಾಗಿ ರಾಮ-ಲಕ್ಷ್ಮಣರು ಕಪಿಸೇನೆಯ ಸಮೇತ ಲಂಕೆಗೆ ಲಗ್ಗೆಹಾಕದೆ ಅನ್ಯ ಮಾರ್ಗವಿರಲಿಲ್ಲ.
ಆದರೆ ತಾವು ನೆಲೆನಿಂತಿದ್ದ ಭೂಭಾಗ (ಆಂದರೆ ರಾಮೇಶ್ವರಂ) ಮತ್ತು ಲಂಕೆಯ ನಡುವೆ ಮೈಚೆಲ್ಲಿಕೊಂಡಿರುವ ಸಮುದ್ರವನ್ನು ದಾಟುವುದಾದರೂ ಹೇಗೆ? ಎಂಬ ಪ್ರಶ್ನೆ ಅವರೆದುರು ಪೆಡಂಭೂತವಾಗಿ ನಿಂತಿತು. ಲಂಕೆಗೆ ಸೇತುವೆ ನಿರ್ಮಿಸಲೇಬೇಕಿತ್ತು. ಕಪಿಸೇನೆಯಲ್ಲಿದ್ದ ನಳ ಮತ್ತು ನೀಲ ಎಂಬೆರಡು
ಕಪಿಗಳಿಗೆ ಈ ಕಾರ್ಯದಲ್ಲಿ ಪರಿಣತಿಯಿತ್ತು. ಅವುಗಳ ಮೇಲುಸ್ತುವಾರಿಯಲ್ಲಿ ಸೇತುನಿರ್ಮಾಣ ಶುರುವಾಗೇ ಬಿಟ್ಟಿತು. ಇದರ ಭಾಗವಾಗಿ ದೊಡ್ಡ ದೊಡ್ಡ ಬಂಡೆಗಳನ್ನು ಎತ್ತಿತ್ತಿ ತಂದು ಸಮುದ್ರದ ಮಡಿಲಿಗೆ ಎಸೆಯಬೇಕಿತ್ತು; ಆದರೆ ನೀರಿನ ಮೇಲೆ ಕಲ್ಲು ನಿಲ್ಲಬೇಕಲ್ಲ!
ಹೀಗಾಗಿ ಪ್ರತಿಯೊಂದು ಕಲ್ಲಿನ ಮೇಲೂ ‘ರಾಮ’ ಎಂದು ಬರೆದು ಎಸೆಯುತ್ತಿದ್ದಂತೆ ಅವು ನೀರಿನ ಮೇಲೆ ತೇಲುತ್ತಿದ್ದವು. ಸುಗ್ರೀವ, ಹನುಮಂತ ಸೇರಿದಂತೆ ಕಪಿಸೇನೆಯ ಪ್ರತಿ ಯೊಬ್ಬರೂ ತಂತಮ್ಮ ಶಕ್ತ್ಯಾನುಸಾರ ಬಂಡೆಗಳನ್ನು ಹೊತ್ತು ತಂದು ನೀರಿಗೆಸೆಯುತ್ತಿದ್ದರು. ಸೇತುವೆ ಬೇಗ ನಿರ್ಮಾಣಗೊಂಡು,
ಆದಷ್ಟು ಬೇಗ ಲಂಕೆಯನ್ನು ತಲುಪಿ, ರಾವಣ ನೊಂದಿಗೆ ಸೆಣಸಿ, ಸೀತಾಮಾತೆಯನ್ನು ಮರಳಿ ಕರೆತರಬೇಕು ಎಂಬ ಸಂಕಲ್ಪ ಅವರೆಲ್ಲರಲ್ಲೂ ಕೆನೆ ಗಟ್ಟಿದ್ದ ಪರಿಣಾಮ ಕಾರ್ಯದಲ್ಲಿ ಉತ್ಸಾಹದ ಜತೆಗೆ ವೇಗವೂ ಸೇರಿಕೊಂಡಿತ್ತು.
ಇದನ್ನೆಲ್ಲಾ ಕುತೂಹಲದಿಂದ ನೋಡುತ್ತಿದ್ದ ಪುಟ್ಟ ಅಳಿಲೊಂದು, ಈ ಸಾಹಸದಲ್ಲಿ ತನ್ನದೂ ಒಂದಿಷ್ಟು ಕೊಡುಗೆ ಯಿರಲಿ ಎಂದು ಭಾವಿಸಿ, ಎಲ್ಲಿಂದಲೋ ಸಣ್ಣ ಸಣ್ಣ ಕಲ್ಲು ಗಳನ್ನು ಹೆಕ್ಕಿತಂದು ಸೇತುನಿರ್ಮಾಣದ ತಾಣದ ಬಳಿ ಜಮೆ ಯಾಗಿಸಿ ತನ್ನಿಂದ ಸಾಧ್ಯವಾದಷ್ಟರ ಮಟ್ಟಿಗೆ ಸೇವೆ ಮಾಡುತ್ತಿತ್ತು. ಆದರೆ ಗಾತ್ರದಲ್ಲಿ ಚಿಕ್ಕದಾಗಿದ್ದ ಅಳಿಲಿನ ಸೇವೆ ಮತ್ತು ಅದು ತಂದು ಒಟ್ಟುತ್ತಿದ್ದ ಪುಟ್ಟ ಕಲ್ಲುಗಳ ರಾಶಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಆ ಬಗ್ಗೆ ಬೇಸರಿಸಿಕೊಳ್ಳದ ಅಳಿಲು, ತನ್ನ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುತ್ತಿತ್ತು.
ಈ ಮಧ್ಯೆ ಕಪಿಯೊಂದು ಕಾರ್ಯನಿರತ ಅಳಿಲಿನ ಕಡೆ ನೋಡಿ ಗಹಗಹಿಸಿ ನಗಲು ಶುರುಮಾಡಿ, ‘ಈ ಪುಟ್ಟಕಲ್ಲುಗಳು ಯಾವುದಕ್ಕೂ ಪ್ರಯೋಜನವಿಲ್ಲ ಅಳಿಲೇ; ದೊಡ್ಡವರು ಕೆಲಸ ಮಾಡುತ್ತಿರುವಾಗ ನಿನ್ನಂಥ ಕ್ಷುದ್ರಜೀವಿಗಳು ಬರಲೇ ಬಾರದು. ನೀನು ತಂದು ಒಟ್ಟುತ್ತಿರುವ ಪುಟ್ಟಕಲ್ಲುಗಳನ್ನು ಇಟ್ಟುಕೊಂಡೇ ಲಂಕೆಗೆ ಸೇತುವೆ ಕಟ್ಟುವುದಾದರೆ ಅದಕ್ಕೆ ಯುಗಗಳೇ ಹಿಡಿದೀತು! ನಿನ್ನ ಈ ಕೆಲಸವನ್ನು ಇಷ್ಟಕ್ಕೇ ನಿಲ್ಲಿಸಿ ಈ ದಾರಿಯಿಂದ ದೂರ ಸರಿ. ನೀನು ಯಾವುದೇ ಕೆಲಸ ಮಾಡದೆ ವಿಶ್ರಾಂತಿ ತೆಗೆದುಕೊಂಡರೂ ಆದೀತು!
ಇದರಿಂದ ಸೇತುಬಂಧ ಕಾರ್ಯಕ್ಕೆ ಯಾವ ತೊಂದರೆಯೂ ಆಗುವುದಿಲ್ಲ’ ಎಂದು ಗೇಲಿಮಾಡಿತು. ಅಳಿಲು ತನ್ನನ್ನು ಸಮರ್ಥಿಸಿಕೊಳ್ಳಲು ಮುಂದಾ ದರೂ ಮಿಕ್ಕ ಕಪಿಗಳೂ ಮತ್ತಷ್ಟು ಲೇವಡಿಗೆ, ಕಿತಾಪತಿಗೆ ಮುಂದಾಗಿದ್ದರಿಂದ ಅತೀವವಾಗಿ ನೊಂದುಕೊಂಡಿತು, ಅನ್ಯಮಾರ್ಗವಿಲ್ಲದೆ ರಾಮನ ಬಳಿಗೆ ತೆರಳಿ ಪಾದವನ್ನೊಮ್ಮೆ ಸ್ಪರ್ಶಿಸಿ ತಲೆಯೆತ್ತಿ ಅಬೋಧ ಕಣ್ಣುಗಳಿಂದ ರಾಮನನ್ನೊಮ್ಮೆ ನೋಡಿತು.
‘ರಾಜನಿಗೆ ಅಹವಾಲು ಸಲ್ಲಿಸಿ ಪರಿಹಾರ ಕೋರಲು ಬರುವ ಪ್ರಜೆ’ಯ ನೋವು ಆ ಕಣ್ಣುಗಳಲ್ಲಿ ಮಡುಗಟ್ಟಿದ್ದನ್ನು ಗುರುತಿಸಿದ ರಾಮ, ಆಪ್ಯಾಯತೆ ಯಿಂದ ಅದನ್ನು ನೆಲದಿಂದ ಎತ್ತಿ ತನ್ನ ಅಂಗೈಯಲ್ಲಿರಿಸಿಕೊಂಡ. ಗಾತ್ರದಲ್ಲಿ ನಗಣ್ಯ ವಾಗಿರುವ ಕಾರಣಕ್ಕೆ ಅಳಿಲಿನ ಸೇವೆಯನ್ನು ನಿರ್ಲಕ್ಷಿಸಿದ್ದರ
ಜತೆಗೆ ಅದನ್ನು ಅವಮಾನಿಸಿರುವ ಸಂಗತಿಯೂ ರಾಮನಿಗೆ ಮನವರಿಕೆಯಾಯಿತು. ಹೀಗಾಗಿ, ಸೇತುವೆ ನಿರ್ಮಾಣ ಕಾರ್ಯದಲ್ಲಿ ವ್ಯಸ್ತರಾಗಿದ್ದ ಸಮಸ್ತ ಕಪಿಗಳನ್ನೂ ಒಂದೆಡೆ ಸೇರುವಂತೆ ರಾಮ ಸೂಚಿಸಿದ. ಅವನ ಅಂಗೈಯಲ್ಲಿ ‘ಪಿಳಿಪಿಳಿ’ ಕಣ್ಣು ಬಿಟ್ಟುಕೊಂಡು ಕೂತಿರುವ ಅಳಿಲನ್ನು ಕಂಡ ಕಪಿಗಳು, ‘ತನ್ನನ್ನು ಗೇಲಿಮಾಡಿದ್ದಕ್ಕೆ ಈ ಅಳಿಲು ಪ್ರಭು ಶ್ರೀರಾಮನಿಗೆ ದೂರಿತ್ತಿದೆ ಎನಿಸುತ್ತದೆ; ನಮಗೆ ಅದೇನು ಶಿಕ್ಷೆ ಕಾದಿದೆಯೋ?’ ಎಂದು ಕಲ್ಪಿಸಿಕೊಳ್ಳುತ್ತ ಒಳಗೊಳಗೇ ನಡುಗತೊಡಗಿದವು.
ಆದರೆ ರಾಮ ಯಾವುದೇ ಉಗ್ರಶಿಕ್ಷೆಗೆ ಮುಂದಾಗದೆ ಅಥವಾ ಕಠೋರ ನುಡಿಗಳನ್ನಾಡದೆ, ನಿರ್ಮಾಣ ಹಂತ ದಲ್ಲಿದ್ದ ಸೇತುವೆಯ ಕಡೆಗೆ ಮೌನವಾಗಿಯೇ ತನ್ನ ಬಲಗೈ ತೋರುಬೆರಳನ್ನು ತೋರಿಸಿದ. ಮೊದಲಿಗೆ ಇದೇನಾಗುತ್ತಿದೆ ಎಂದು ಯಾರಿಗೂ ಅರ್ಥವಾಗಲಿಲ್ಲ; ರಾಮನೂ ತುಟಿಬಿಚ್ಚಿ ಮಾತಾಡದೆ, ಸಂಕಲ್ಪ ಮಾಡಿರುವವನಂತೆ ಸೇತುವೆಯ ಕಡೆಗೇ ಬೆರಳು ತೋರಿಸುತ್ತಿದ್ದ. ಕೊನೆಗೆ ಸೂಕ್ಷ್ಮವಾಗಿ ಗಮನಿಸಲಾಗಿ, ದೊಡ್ಡ ಗಾತ್ರದ ಒಂದಷ್ಟು ಕಲ್ಲುಗಳು ತಾವಿರಬೇಕಾದ ಜಾಗದಿಂದ ಜಾರಿ ಕೆಳಗೆ ಬಿದ್ದಿರುವುದು ಗೋಚರಿಸಿತು.
ಆಗಲೂ ಕಪಿಗಳ ಗೊಂದಲ ಪರಿಹಾರವಾಗಲಿಲ್ಲ. ಆಗ ಮಾತಿಗೆ ಮುಂದಾದ ರಾಮ, ‘ಎಲ್ಲರೂ ಅತ್ತ ಒಮ್ಮೆ ನೋಡಿ. ಆ ದೊಡ್ಡ ಕಲ್ಲುಗಳ ಮೇಲೆ ನನ್ನ ಹೆಸರನ್ನೇನೋ ಬರೆದು ನೀರಿಗೆಸೆದಿರಿ, ನಿಮ್ಮ ಸಂಕಲ್ಪದಂತೆಯೇ ಅವು ನೀರಲ್ಲಿ ತೇಲಲಾರಂಭಿಸಿದವು. ಆದರೆ ಸಣ್ಣ ಸಣ್ಣ ಕಲ್ಲುಗಳ ಆಧಾರವಿಲ್ಲದೆಯೇ ಆ ಕಲ್ಲುಗಳನ್ನು ನಿಲ್ಲಿಸಲಾಗಿತ್ತು. ಈ ಪುಟ್ಟ ಅಳಿಲು ತನ್ನ ಸಾಮರ್ಥ್ಯಕ್ಕೂ ಮೀರಿ ಅಂಥ ಸಣ್ಣ ಸಣ್ಣ ಕಲ್ಲುಗಳನ್ನು ಎಲ್ಲೆಲ್ಲಿಂದಲೋ ಹೆಕ್ಕಿ ತಂದು ನಿರ್ಮಾಣ ತಾಣದಲ್ಲಿ ಒಟ್ಟುಮಾಡಿದೆ. ಸೇತುಬಂಧವು ಗಟ್ಟಿಯಾಗಿರಲು ಇವನ್ನೂ ಬಳಸಬೇಕಲ್ಲವೇ? ಜತೆಗೆ ತನ್ನದೇ ಆದ ರೀತಿಯಲ್ಲಿ ಹೀಗೆ ನಿರ್ಮಾ ಣಕ್ಕೆ ನೆರವಾಗಿರುವ ಈ ಪುಟ್ಟ ಅಳಿಲನ್ನೂ ನಾವೆಲ್ಲರೂ ಶ್ಲಾಸಬೇಕಲ್ಲವೇ?’ ಎಂದ.
ಅಳಿಲನ್ನು ಗೇಲಿಮಾಡಿ ನಿಕೃಷ್ಟವಾಗಿ ಕಂಡು, ಕಾರ್ಯಸ್ಥಳ ದಿಂದ ಅದನ್ನು ದೂರವಿರಿಸಿದ್ದ ಕಪಿಗಳಿಗೆ ತಮ್ಮ ತಪ್ಪಿನ ಅರಿವಾಗಿತ್ತು. ರಾಮನಿಗೆ ನಮ ಸ್ಕರಿಸಿ ಅವು ಕ್ಷಮೆ ಕೋರಿದವು. ಆಗ ಮಾತು ಮುಂದುವರಿಸಿದ ರಾಮ, ‘ಕೆಲಸದಲ್ಲಿ ದೊಡ್ಡದು ಅಥವಾ ಸಣ್ಣದು ಎಂದೇನೂ ಇರುವುದಿಲ್ಲ. ಶ್ರದ್ಧೆ,
ಉತ್ಸಾಹ, ಪ್ರಾಮಾಣಿಕತೆ ಮತ್ತು ಸದುದ್ದೇಶದಿಂದ ಮಾಡುವ ಯಾವುದೇ ಕಾರ್ಯವೂ ಉತ್ತಮ ಫಲವನ್ನೇ ನೀಡುತ್ತದೆ. ಹೀಗಾಗಿ ಕಾರ್ಯಭಾರದಲ್ಲಿ ಮೇಲು-ಕೀಳು ಎಂಬುದು ಸಲ್ಲ’ ಎಂದ. ರಾಮನ ನ್ಯಾಯದಾನದಿಂದ ಅಳಿಲಿಗೆ ಖುಷಿಯಾಗಿ ಹಿರಿಹಿರಿ ಹಿಗ್ಗಿತು.
ಅಳಿಲಿನ ಸೇವೆಗೆ ಪ್ರಶಂಸಾಪೂರ್ವಕ ವಾಗಿ ಶ್ರೀರಾಮ ಅದರ ಬೆನ್ನಿನ ಮೇಲ್ಭಾಗದಿಂದ ಕೆಳಭಾಗ ದವರೆಗೂ ಅತೀವ ಮಮತೆಯಿಂದ ಕೈಯಾಡಿಸಿದ. ಆಗ
ಅದರ ಬೆನ್ನ ಮೇಲೆ ನಾಮದ ರೀತಿಯಲ್ಲಿ ಮೂರು ಬೆರಳಿನ ಗುರುತು ಮೂಡಿದವು. ಇಂದಿಗೂ ಅಳಿಲಿನ ಬೆನ್ನಮೇಲೆ ಕಾಣಬರುವ ಮೂರು ಗೆರೆಗಳಿಗೆ ಇರುವ ಪೌರಾಣಿಕ ಕಾರಣ ವಿದು. ‘ಅಳಿಲುಸೇವೆ’ ಎಂಬ ಪರಿಕಲ್ಪನೆ ಶುರುವಾಗಿದ್ದೇ ಅಂದಿನಿಂದ! ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ಅಳಿಲನ್ನು ಗೇಲಿ ಮಾಡಿ ಅದರ ಸೇವೆಯನ್ನು ನಿಕೃಷ್ಟವಾಗಿ ಕಂಡಿದ್ದ ಕಪಿಗಳಿಗೆ ರಾಮ ತೀವ್ರದಂಡನೆಯನ್ನೇ ವಿಧಿಸಬಹುದಿತ್ತು, ಕಠೋರವಾಗಿ ನಿಂದಿಸಬಹುದಿತ್ತು.
ಆದರೆ ಹಾಗೆ ಮಾಡದೆ, ‘ತಪ್ಪಿತಸ್ಥ’ ಕಪಿಗಳಿಗೆ ತನ್ನದೇ ಆದ ರೀತಿಯಲ್ಲಿ ಪಾಠ ಹೇಳಿದ್ದ, ‘ಸಂತ್ರಸ್ತ’ ಅಳಿಲಿಗೆ ನ್ಯಾಯ ದೊರಕಿಸಿಕೊಟ್ಟಿದ್ದ. ಪರಿಶ್ರಮದ ಅಥವಾ ಕಾರ್ಯಭಾರದ ಸ್ತರಗಳು ಬೇರೆ ಬೇರೆಯಾಗಿದ್ದರೂ, ಒಂದೊಂದು ಕೆಲಸಕ್ಕೂ ಅದರದ್ದೇ ಆದ ಮಹತ್ವವಿದೆ ಎಂಬುದನ್ನು ರಾಮ ‘ಪ್ರಾತ್ಯಕ್ಷಿಕೆ’ ಯಾಗಿ ತೋರಿಸಿಕೊಟ್ಟಿದ್ದ. ‘ಯಾವುದೇ ವ್ಯಕ್ತಿಯು ತನಗಿಂತ ಚಿಕ್ಕ ವರನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದನ್ನು ಕಂಡುಕೊಳ್ಳಲು, ಅವನ ಕೈಗೆ ಅಧಿಕಾರ ಕೊಟ್ಟು ನೋಡಬೇಕು’ ಎಂಬುದೊಂದು ಮಾತಿದೆ.
ಕಾರ್ಯಕ್ಷೇತ್ರ ಯಾವುದೇ ಇರಲಿ, ಅದರ ಒಂದೊಂದು ಅಂಗಕ್ಕೂ ಅದರದ್ದೇ ಆದ ಮಹತ್ವವಿದೆ, ಅದನ್ನು ನಿರ್ಲಕ್ಷಿಸ ಬಾರದು ಎಂಬ ಗ್ರಹಿಕೆಯು ಮನ ಈ ‘ವ್ಯವಸ್ಥಾಪನಾ ಕೌಶಲ’ದಲ್ಲಿ ಕೆನೆಗಟ್ಟಿದೆ, ಅಲ್ಲವೇ?
(ಲೇಖಕರು ಪತ್ರಕರ್ತರು)