ತನ್ನಿಮಿತ್ತ
ಕಿರಣಕುಮಾರ ವಿವೇಕವಂಶಿ
ಸ್ತ್ರೀ ವಿಷಯದಲ್ಲಿ ರಾಮಕೃಷ್ಣರ ದೃಷ್ಟಿ ಸ್ಪಷ್ಟ ವಾದುದು. ಅವರು ಸನ್ಯಾಸಿ, ಅದರಲ್ಲೂ ವಿವಾಹಿತರು. ಸತಿಯಾದ ವಳು ಪತಿಯ ಕಾಮದ ವಸ್ತುವಲ್ಲ ಎಂದು ಸಾರಿ ಹೇಳಿದ್ದು ಮಾತ್ರವಲ್ಲ, ತಮ್ಮ ಸತಿಯನ್ನೂ ಜಗನ್ಮಾತೆಯ ಸ್ಥಾನದಲ್ಲಿ ಕೂರಿಸಿ, ಪೂಜಿಸಿ, ಆಕೆಯ ಪದತಲದಲ್ಲಿ ಸಾಧನೆಯ ಸಕಲವನ್ನೂ ಸಮರ್ಪಿಸಿದವರು. ಅವರ ದೃಷ್ಟಿಯಲ್ಲಿ ಸಲ್ಲಬೇಕಾ ದದ್ದು ಸಮಾನತೆಯಲ್ಲ ಗೌರವ.
ಧರ್ಮ, ಅಧ್ಯಾತ್ಮ, ಭಗವಂತ ಈ ವಿಷಯಗಳಲ್ಲಿ ನಂಬಿಕೆ ಇರುವವರಾಗಲಿ, ಇಲ್ಲದಿರುವವರಾಗಲಿ ಶ್ರೀರಾಮಕೃಷ್ಣರಲ್ಲಿ
ಗೌರವ ತಾಳದೆ ಇರುವುದು ಅಸಾಧ್ಯ. ಏಕೆಂದರೆ ಅವರ ವ್ಯಕ್ತಿತ್ವವು ಅಷ್ಟು ಅಸಾಧಾರಣವಾದದ್ದು.
ತ್ಯಾಗ ಮತ್ತು ವೈರಾಗ್ಯಗಳ ದೃಷ್ಟಿಯಿಂದ ಅಂಥ ಅಸಮಾನವಾದ ಮತ್ತೊಬ್ಬ ವ್ಯಕ್ತಿಯನ್ನು ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಕಾಣುವುದು ಅಸಾಧ್ಯ. ದೇವರಿದ್ದರೆ, ಅವತಾರಗಳಿದ್ದರೆ ಆ ನಿಷ್ಠುರ ಶಿಲಾಮೂರ್ತಿಗಳಿಗಿಂಥ ಆ ನಗುವ, ಅಳುವ, ಜಗತ್ತಿನ
ಹಿತಕ್ಕಾಗಿ ತನ್ನ ತಪಸ್ಸನ್ನು ಧಾರೆಯೆರೆದ ಮುಗ್ಧ ಅನಕ್ಷರಸ್ಥ ಮಹಾಪುರುಷನು ಸಹಸ್ರಪಾಲು ಶ್ರೇಷ್ಠ ಎನ್ನುತ್ತಾರೆ ಪ್ರಭುಶಂಕರರು.
ದಕ್ಷಿಣೇಶ್ವರದ ದೇವಮಾನವರು ಎಂದೇ ಪ್ರಖ್ಯಾತರಾದ ಶ್ರೀರಾಮಕೃಷ್ಣ ಪರಮಹಂಸರ ವಿಚಾರದಲ್ಲಿ ಇದು ಸತ್ಯ. ಜಗತ್ತಿನ ಅಧ್ಯಾತ್ಮಿಕ ಇತಿಹಾಸದಲ್ಲಿ ಕೇವಲ ಒಂದು ವ್ಯಕ್ತಿಯಾಗಿ ಮಾತ್ರ ಕಾಣದೆ ಒಂದು ಅಮೋಘ ಘಟ್ಟವಾಗಿ ಪ್ರಕಾಶಿಸುತ್ತಿದ್ದಾರೆ.
ಅವರ ಪರಮಪ್ರಿಯ ಶಿಷ್ಯರೂ, ವಿಶ್ವ ವಿಜೇತ ಸಾರ್ವಭೌಮ ಸನ್ಯಾಸಿಯೂ ಆದ ವಿವೇಕಾನಂದರು ತಮ್ಮ ಮಹಾಗುರುಗಳನ್ನು ಅವತಾರ ವರಿಷ್ಠ ಎಂದು ಸಾರಿದ್ದಾರೆ. ಯಾವ ಕಾರಣಗಳಿಂದ ಶ್ರೀರಾಮಕೃಷ್ಣರ ಅಧ್ಯಾತ್ಮಿಕ ಜೀವನದಿಂದ ಉಜ್ವಲ ಸೂರ್ಯನಂತೆ ವಿರಾಜಿಸುತ್ತಿದ್ದಾರೆ, ಯಾವ ಅಂಶಗಳಿಂದ ಅವರು ಭೂಮಿಯಿಂದ ಆಕಾಶದವರೆಗೂ ಮಹಾ ಪ್ರತಿಮೆಯಂತೆ ಬೆಳೆದು ನಿಲ್ಲಲು ಕಾರಣವಾಗಿವೆ ಎಂದು ಆಲೋಚಿಸುವುದಾದರೆ ಅದಕ್ಕೆ ಉತ್ತರ ಇಲ್ಲಿದೆ.
ಶ್ರೀರಾಮಕೃಷ್ಣರು ಭಗವಂತನ ಬೇರೆ ಅವತಾರ ಗಳಂತೆ ದುಷ್ಟ ಶಿಕ್ಷಣ, ಶಿಷ್ಟರಕ್ಷಣಕ್ಕಾಗಿ ಅವತಾರ ಎತ್ತಿದವರಲ್ಲ. ಹಿಂದೆ ತ್ರೆತಾಯುಗದ ರಾಮಾವತಾರದಲ್ಲಿ ರಾವಣನ ಸಂಹರಿಸಿ, ದ್ವಾಪರಯುಗದ ಕೃಷ್ಣಾವತಾರದಲ್ಲಿ ಕಂಸ, ಕೌರವಾದಿಗಳ ಮರ್ದಿಸಿ
ಧರ್ಮ ಸಂಸ್ಥಾಪನೆ ಮಾಡಿದಂತೆ ಕಲಿಯುಗದಲ್ಲಿ ರಾಮಕೃಷ್ಣರು ಮಾಡಿದವರಲ್ಲ. ಅವರನ್ನು ಅವತಾರವೆಂದು ಕರೆಯುವವರೂ ಅವತಾರ ತತ್ತ್ವದ ಕಲ್ಪನೆಯನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ರಾಮಕೃಷ್ಣರು ಸೃಷ್ಟಿಸಿದರು.
ಯಾರು ದುಷ್ಟ – ಶಿಷ್ಟರೆನ್ನದೆ, ಸೀ-ಪುರುಷರೆನ್ನದೆ, ಬ್ರಾಹ್ಮಣ – ಅಂತ್ಯಜರೆನ್ನದೆ ಪ್ರತಿಯೊಬ್ಬನಿಗೂ ಅಧ್ಯಾತ್ಮದ ಪರಮಜ್ಞಾನ ವನ್ನು ನೀಡಿ ಬಹುಜನ ಹಿತಾಯಚಃ, ಬಹುಜನ ಸುಖಾಯಚಃ ಎನ್ನುವಂತೆ ಬಹುಜನರ ಹಿತವನ್ನೂ, ಬಹುಜನರ ಸುಖವನ್ನೂ ತನ್ನ ಕಾಲದಲ್ಲಿ ಮಾತ್ರವಲ್ಲದೆ ಮುಂಬರುವ ಕಾಲದಲ್ಲಿಯೂ ಸಾಧಿಸಲು ಕಾರಣನಾಗುತ್ತಾನೆಯೋ ಅವನೇ ಪರಮಾವತಾರಿ, ಪರಮಜ್ಞಾನಿ ಮತ್ತು ಸಮಸ್ತ ಲೋಕದ ಜನರ ಪೂಜೆಗೆ ಅರ್ಹನಾದವನು.
ಪರಮಹಂಸರು ಬೇರೆ ಎಲ್ಲ ಅವತಾರಗಳಿಗಿಂತ ಭಿನ್ನರಾಗಿ, ಜನರ ಅಂತರಂಗವನ್ನು ಬೆಳಗುವ ಮಹತ್ತಾದ, ಸ್ತುತ್ಯವಾದ ಕಾರ್ಯವನ್ನು ಕೈಗೊಂಡಿದ್ದು ಇಂದು ಜಗತ್ತಿನ ಅಧ್ಯಾತ್ಮಿಕ ಇತಿಹಾಸ ದಲ್ಲಿ ಅವಿಭಾಜ್ಯ ಅಂಗವಾಗಿದೆ. ರಾಮಕೃಷ್ಣರ ಬೋಧನಾ ವಿಧಾನ ಅತ್ಯಂತ ವಿಶಿಷ್ಟವಾದದ್ದು. ಅಷ್ಟೇನೂ ಓದಿಲ್ಲದ, ಶಾಸ್ತ್ರದ ಪರಿಚಯವಿಲ್ಲದ, ಕುಗ್ರಾಮದ ಸಾಮಾನ್ಯ ವ್ಯಕ್ತಿಯಾದ ಅವರು ಆಧುನಿಕ ಮನೋವಿಜ್ಞಾನಿ ಯಂತೆ ಜ್ಞಾನಾಪೇಕ್ಷೆಯಲ್ಲಿ ಒಬ್ಬೊಬ್ಬನೂ ಬೇರೆ ಬೇರೆಯೇ ಎಂದು ಕಂಡುಕೊಂಡು, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಗೆ ಮುಂದುವರಿಯಲು ಹೇಳಿದರು.
ಒಬ್ಬನ ಆಹಾರ ಇನ್ನೊಬ್ಬನಿಗೆ ವಿಷವಾಗಬಹುದು. ಒಬ್ಬನಿಗೆ ಒಳ್ಳೆಯ ಉಪದೇಶ ವಾಗಬಹುದಾಗಿದ್ದು ಇನ್ನೊಬ್ಬನಿಗೆ ಮನೋವೈಕಲ್ಯಕ್ಕೆ ಕಾರಣವಾಗಬಹುದೆಂದು ಜ್ಞಾನಮಾರ್ಗ, ಭಕ್ತಿಮಾರ್ಗ, ಕರ್ಮಮಾರ್ಗ, ರಾಜಮಾರ್ಗ ಹೀಗೆ ಒಬ್ಬೊಬ್ಬನಿಗೆ ಒಂದೊಂದು ಮಾರ್ಗದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು ಗುರುದೇವ.
ಒಂದು ಇರುವೆ ಸಕ್ಕರೆಯ ರಾಶಿಯನ್ನು ನೋಡಿತು. ಅದರಲ್ಲಿ ಒಂದು ಕಣವನ್ನು ಕಷ್ಟಪಟ್ಟು ಸಾಗಿಸುತ್ತಾ ಹೇಳಿತು.‘ಮುಂದಿನ ಸಲ ಸಕ್ಕರೆಯ ಬೆಟ್ಟವನ್ನೇ ಸಾಗಿಸಿಬಿಡುತ್ತೇನೆ!’ ಎಂದು. ಈ ಉಪಮೇಯದ ಮೂಲಕ ಪರಮ ಸತ್ಯದ ವಿಷಯದಲ್ಲಿ ಮಾನವನ ಜ್ಞಾನ ಅತ್ಯಂತ ಪರಿಮಿತ ವಾದದ್ದು ಎಂದು ಹೇಳಿ ರಾಮಕೃಷ್ಣರು ಆಧುನಿಕ ವಿಜ್ಞಾನದ ನಿರ್ಣಯ ಮತ್ತು ಉಪನಿಷತ್ತಿನ
ಉಖಗಳ ಮೇಲೆ ತಮ್ಮ ಅಧ್ಯಾತ್ಮಿಕ ಅನುಭೂತಿಯ ಮುದ್ರೆಯನ್ನು ಅಚ್ಚಿಸಿದ್ದಾರೆ.
ಕೆಲವರು ಜ್ಞಾನಿಗಳು ಎನಿಸಿಕೊಂಡವರು ಕಂಡಿರುವುದೇ ಪರಮ ಸತ್ಯವೆಂದೂ, ತಮ್ಮ ಮತವೊಂದೇ ಸತ್ಯಕ್ಕೆ ದಾರಿಯೆಂದೂ ಹೇಳಿದ ಅನೇಕರ ವೈಖರಿಯನ್ನು ನೋಡಿ ಈ ಮಾತನ್ನು ಆಡಿzರೆ. ಅಧ್ಯಾತ್ಮಿಕ ಸುದೀರ್ಘ ಇತಿಹಾಸದಲ್ಲಿ ಶ್ರೀರಾಮಕೃಷ್ಣ ರೊಬ್ಬರೇ ಜಗತ್ತಿನ ವಿವಿಧ ಧರ್ಮ ಗಳನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿ ಅವೆಲ್ಲವೂ ಒಂದೇ ಸತ್ಯಕ್ಕೆ(ಭಗವಂತನೆಡೆಗೆ)
ಕೊಂಡೊಯ್ಯುವ ಪಥಗಳು ಎಂದು ಘೋಷಿಸಿದ್ದು.
ನಾನು ಪ್ರತಿಯೊಂದು ಧರ್ಮವನ್ನೂ- ಹಿಂದೂ ಧರ್ಮ, ಮಹಮ್ಮದೀಯ ಧರ್ಮ, ಕ್ರಿಸ್ತಧರ್ಮ ಎಂದು ಅನುಸರಿಸಿ ನೋಡಬೇಕಾಯಿತು. ಭಗವಂತ ಒಬ್ಬನೇ – ಆತನಕಡೆ ಎಲ್ಲರೂ ಬರುತ್ತಿದ್ದಾರೆ; ಆದರೆ ವಿವಿಧ ಮಾರ್ಗಗಳಿಂದ ಅಷ್ಟೇಎಂದು ನುಡಿಯುತ್ತಾರೆ. ಹೀಗಾಗಿ ಅವರು ಅನುಭಾವಿ ದಾರ್ಶನಿಕರ ಪರಂಪರೆಯಲ್ಲಿ ಅತ್ಯುಚ್ಛಸ್ಥಾನದಲ್ಲಿ ನಿಲ್ಲುತ್ತಾರೆ. ಸ್ತ್ರೀ ವಿಷಯದಲ್ಲಿ ರಾಮಕೃಷ್ಣರ ದೃಷ್ಟಿ ಸ್ಪಷ್ಟವಾದುದು. ಅವರು ಸನ್ಯಾಸಿ, ಅದರಲ್ಲೂ ವಿವಾಹಿತರು.
ಸತಿಯಾದವಳು ಪತಿಯ ಕಾಮದ ವಸ್ತುವಲ್ಲ ಎಂದು ಸಾರಿ ಹೇಳಿದ್ದು ಮಾತ್ರವಲ್ಲ, ತಮ್ಮ ಸತಿಯನ್ನೂ ಜಗನ್ಮಾತೆಯ ಸ್ಥಾನದಲ್ಲಿ ಕೂರಿಸಿ, ಪೂಜಿಸಿ, ಆಕೆಯ ಪದತಲದಲ್ಲಿ ಸಾಧನೆಯ ಸಕಲವನ್ನೂ ಸಮರ್ಪಿಸಿದವರು. ಅವರ ದೃಷ್ಟಿಯಲ್ಲಿ
ಸಲ್ಲಬೇಕಾದದ್ದು ಸಮಾನತೆಯಲ್ಲ ಗೌರವ. ಹೌದು ಹೀಗಾಗಿಯೇ ಭರತ ಭೂಮಿಯ ಸಕಲ ಶ್ರೇಷ್ಠ ವಿಚಾರದಲ್ಲೂ ಸ್ತ್ರೀಯನ್ನು ಕಂಡು ಗೌರವಿಸಿದ್ದು ಪ್ರಕೃತಿಯನ್ನು, ಭೂಮಿಯನ್ನು, ನದಿಯನ್ನು, ಜೀವಪ್ರದಾಯಕವಾಗಿ ಎಲ್ಲವನ್ನೂ ಮಾತೆ ಎಂದು
ಸಂಬೋಧಿಸಿದ್ದು.
ಜಾತಿಯ ವಿಚಾರಕ್ಕೆ ಬಂದರೆ ರಾಮಕೃಷ್ಣರು ನಿಷ್ಕಳಂಕರು. ಜನಿವಾರವು ‘ನಾನು ಬ್ರಾಹ್ಮಣ, ಸಕಲರಿಗಿಂತ ಉಚ್ಚ’ ಎಂಬ ಅಭಿಮಾನದ ಚಿಹ್ನೆ ಹಾಗೂ ಅದೊಂದು ಪಾಶದ ಸಂಕೇತವೆಂದು ಸಾಧನೆಯ ಸಮಯದಲ್ಲಿ ಅದನ್ನು ಕಳಚಿ ಕೂತು
ತಾಯಿಯನ್ನು ಕರೆಯುವಾಗ ಈ ಎಲ್ಲ ಪಾಶಗಳನ್ನೂ ಕಿತ್ತೊಗೆದು ಒಂದೇ ಮನಸ್ಸಿನಿಂದ ಕರೆಯಬೇಕು. ಆದ್ದರಿಂದ ಇದನ್ನು ತೆಗೆದುಹಾಕಿದ್ದೇನೆ ಎಂದವರು. ಅಷ್ಟೇ ಅಲ್ಲದೆ ತಮ್ಮ ಜಾತ್ಯಾಭಿಮಾನ ಪೂರ್ಣವಾಗಿ ಹೋಗಲಿ ಎಂದು ಅಂತ್ಯಜ ಭಕ್ತನೊಬ್ಬನ ಮನೆಯ ನೆಲವನ್ನು ಉಜ್ಜಿ ಶುದ್ಧಿಗೊಳಿಸಿದ್ದರು. ತಮ್ಮ ಕೊನೆಯ ಕಾಲದಲ್ಲಿ ಅಧ್ಯಾತ್ಮಿಕ ಅನುಭೂತಿಗಾಗಿ ಕಾಲಿಗೆರಗಿದ ಜಾಡಮಾಲಿ ಒಬ್ಬನಿಗೆ ಅಧ್ಯಾತ್ಮಿಕ ಅನುಭವ ಮಾಡಿಸಿ ಆತನ ಮುಕ್ತಿಗೆ ಕಾರಣರಾದವರು ರಾಮಕೃಷ್ಣರು.
ಭರತ ಖಂಡದ ಸಾಮಾಜಿಕ ಜೀವನದ ಕಳಂಕ ಎನಿಸಿದ ಜಾತಿ ಪದ್ಧತಿ, ಅಸ್ಪೃಶ್ಯತೆ, ಸ್ತ್ರೀ ಸಮಾನತೆ ಕುರಿತು ತಾಳಿದ ನಿಲುವು ಅನುಕರಣೀಯ. ಅವರ ಅಧ್ಯಾತ್ಮಿಕ ಬೋಧನೆ, ಭಗವತ್ ಸಾಕ್ಷಾತ್ಕಾರದ ಮಾರ್ಗ, ಜೀವನ ಔನ್ನತ್ಯದ ಸೇವೆಯೇ ಶಿವನ ಸೇವೆ
ಎಂದ ಶ್ರೀರಾಮಕೃಷ್ಣರ ಆದರ್ಶಗಳು ಇಂದಿನ ಜಗತ್ತಿಗೆ ಅತ್ಯಂತ ಹತ್ತಿರವಾದ ಹಾಗೂ ಅಗತ್ಯ ಅಂಶಗಳು. ಅವರ ಅದ್ವೈತದ ವಿಶ್ಲೇಷಣೆ ಮಾರ್ಮಿಕವಾದುದು. ಯಾವುದೇ ಪ್ರತ್ಯೇಕ ವರ್ಗಕ್ಕೆ ಸೇರದೆ ಎಲ್ಲರಿಗೂ ಅಧ್ಯಾತ್ಮಿಕ ಜ್ಞಾನದ ಬಾಗಿಲು ತೆರೆಸಲು ಅತ್ಯಂತ ಸರಳ ಮಾರ್ಗ ಒದಗಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಹಾಗೂ ಈಗಿನ ಸಮಾಜದ ಔನ್ನತ್ಯಕ್ಕೆ ಅತ್ಯಂತ ಅವಶ್ಯಕ.
ಓದು ಬರುವ ಅತ್ಯಂತ ಸಾಮಾನ್ಯನೂ ರಾಮಕೃಷ್ಣರನ್ನು ಓದಿದಮೇಲೆ ಯಾವ ಪಂಡಿತ – ಪಾಮರನಿಗೂ ಬಾಗುವ ಅವಶ್ಯಕತೆ ಇಲ್ಲ. ಯಾವ ವಿದ್ವತ್ ಪೂರ್ಣವಾದ ತತ್ತ್ವಜ್ಞಾನಿಯೂ ಕೀಳೆಂದು ನಾಚಬೇಕಿಲ್ಲ. ಅದಕ್ಕಿಂತ ಭಗವಂತನ ಕೃಪೆಯಿಂದ
ತನಗಿಂತಲೂ ಪುನೀತರಿಲ್ಲ ಎಂದು ನಿರ್ಮಮ ನಾಗಬಹುದು, ಶಾಂತನಾಗಬಹುದು ಮತ್ತು ಪರಿಪೂರ್ಣನಾಗಬಹುದು. ಆತನಿಗೆ ಗಗನದ ವೈಶಾಲ್ಯ, ಹಿಮಾಲಯದ ಔನ್ನತ್ಯ, ಅಂಬುಧಿಯ ಗಾಂಭಿರ್ಯ ಎಲ್ಲವೂ ಸಿದ್ಧಿಸುತ್ತವೆ.
ರಾಮಕೃಷ್ಣರನ್ನು ಒಮ್ಮೆ ಓದಿದವನು ಪರಮ ಪಾವನನಾಗುವುದು ಖಂಡಿತ. ವಚನ ವೇದದಲ್ಲೂ ಈ ಮಾತನ್ನು ಹೇಳಲಾಗಿದೆ. ಒಟ್ಟಿನಲ್ಲಿ ಸಾಕ್ಷಾತ್ಕಾರದ ಉತ್ಕಟತೆ ಇರುವವರು, ಶ್ರೇಷ್ಠ ಜೀವನ ಬದುಕಲು ಇಚ್ಛಿಸುವವರು, ಸಾಧಾರಣವಾದನ್ನು ಅಸಾಧಾರಣವಾಗಿಸ ಬಯಸುವವರು ರಾಮಕೃಷ್ಣರನ್ನು ಓದಿಕೊಳ್ಳಬೇಕು. ಒಮ್ಮೆ ವಿದೇಶಿ ಪತ್ರಕರ್ತ ಯಾರು ರಾಮಕೃಷ್ಣ? ಎಂದು ಸ್ವಾಮಿಜಿಗೆ ಪ್ರಶ್ನಿಸಿದಾಗ ವಿವೇಕಾನಂದರೇ ಹೇಳಿದಂತೆ ಯಾರ ಪಾದಧೂಳಿನ ಒಂದು ಕಣದಿಂದ ಲಕ್ಷಾಂತರ ವಿವೇಕಾನಂದರು ಉದಿಸುವರೋ ಅಂತಹ ಪರಮ ಶ್ರೇಷ್ಠ ಪುರುಷ ನನ್ನ ಗುರು ರಾಮಕೃಷ್ಣರು.
ನೋಡಿ ಈ ಮಾತು ಸತ್ಯವೆನಿಸುವುದಾದರೆ ತಾವೂ ಏಕೆ ಈ ಪ್ರಯತ್ನಿಸಬಾರದು?