Saturday, 14th December 2024

ಸ್ವಾರಸ್ಯಕರ ಲೇಖನ

ಅಭಿಮತ

ಭಾರತಿ ಕೆ.ವಿ.  ಬೆಂಗಳೂರು 

ಶ್ರೀವತ್ಸ ಜೋಶಿ ಅವರ ಅಂಕಣದ (ವಿಶ್ವವಾಣಿ ಡಿ.೨೪) ‘ಪ್ರಖ್ಯಾತ ವಿಜ್ಞಾನಿಗಳೂ ಲೆಕ್ಕದಿ ಬರೀ ಸೊನ್ನೆ ಆದವರಿದ್ದರು!’ ಎಂಬ ಶೀರ್ಷಿಕೆಯನ್ನು ನೋಡಿ ಆಶ್ಚರ್ಯ
ಎನಿಸಿದರೂ ಆಸಕ್ತಿ, ಕೌತುಕದಿಂದ ಓದಿದೆ. ಬಹಳ ಇಷ್ಟವಾಯಿತು. ಕೆಲವು ಪ್ರಸಿದ್ಧ ವಿಜ್ಞಾನಿಗಳು ಗಣಿತ ವಿಷಯದಲ್ಲಿನ ತಮ್ಮ ದೌರ್ಬಲ್ಯವನ್ನು ತಾವೇ ನಿವೇದಿ ಸಿರುವ ರೀತಿಯಲ್ಲಿ ಸಹಜ ಮುಕ್ತತೆ ಇದೆ. ಲೇಖನದ ಕಡೆಯ ಭಾಗದಲ್ಲಿ, ಇಂದಿನ ತಂತ್ರಜ್ಞಾನದಿಂದಾಗಿ ಈಗಿನ ಜನ ಸರಳವಾಗಿ ಕೂಡಿಸುವ, ಕಳೆಯುವ, ಗುಣಿಸುವ, ಭಾಗಿಸುವ ಲೆಕ್ಕವನ್ನೂ ಮನಸ್ಸಲ್ಲೇ ಮಾಡಲಾರದಷ್ಟು ಸಾಮರ್ಥ್ಯ ಕಳೆದುಕೊಂಡಿರುವುದರ ಕುರಿತು ಅಂಕಣಕಾರರು ವಿಷಾದ ವ್ಯಕ್ತಪಡಿಸಿದ್ದಾರೆ.

ಅವರ ಮಾತು ಅಕ್ಷರಶಃ ನಿಜ. ಡಾ. ನಾ.ಸೋಮೇಶ್ವರ ಅವರು ನಿರ್ವಹಿಸುವ ‘ಥಟ್ ಅಂತ ಹೇಳಿ’ ದೂರದರ್ಶನ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ, ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳ ಗಣಿತ ಜ್ಞಾನ, ಚುರುಕುತನ ಏನೇನೂ ಸಾಲದು ಎನಿಸುತ್ತದೆ. ಇಷ್ಟಕ್ಕೂ ಅವರುಗಳಿಗೆ ಪೇಪರು, ಲೇಖನಿ, ಒಂದು ನಿಮಿಷದ ಸಮಯ ಬೇರೆ ನೀಡಲಾಗಿರುತ್ತದೆ. ಆದರೂ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸುತ್ತಾರೆ. ಸಾಮಾನ್ಯ ಜ್ಞಾನದ ಪ್ರಶ್ನೆಗಳ ವಿಷಯದಲ್ಲಿಯೂ ಅವರುಗಳ ‘ಐಕ್ಯೂ’ ಕಡಿಮೆ ಎಂದೇ ಹೇಳುತ್ತೇನೆ.

ಇಂದಿನವರು ಏಕೆ ಹೀಗೆ? ಎಂದು ವಿಚಾರಕ್ಕೆ ಬೀಳುತ್ತೇನೆ. ನಾನು ಗಣಿತಪ್ರಿಯೆ. ಈ ಇಳಿವಯಸ್ಸಿನಲ್ಲಿಯೂ ಲೆಕ್ಕದ ವಿಷಯದಲ್ಲಿ ಕ್ಯಾಲ್ಕ್ಯುಲೇಟರ್‌ಗೆ ಮೊರೆ ಹೋಗದೆ ಮಿದುಳಿಗೆ ಕೆಲಸ ನೀಡುತ್ತೇನೆ. ಇದು ಜಂಭದ ವಿಷಯವಲ್ಲ. ಚಿಕ್ಕಂದಿನಲ್ಲಿ ನಮ್ಮ ಶಾಲಾ ಶಿಕ್ಷಣ ಪದ್ಧತಿ ಬಹಳ ಚೆನ್ನಾಗಿತ್ತು. ಶಾಲಾ ಶಿಕ್ಷಣದಲ್ಲಿ ಭದ್ರ ತಳಹದಿ ಇತ್ತು. ಗಣಿತ ಪಾಠಕ್ಕೆ ಬಂದರೆ ಮಗ್ಗಿ ಕಂಠಪಾಠ ಮಾಡುತ್ತಿದ್ದೆವು. ಲೆಕ್ಕದ ಕಲಿಕೆಯಲ್ಲಿ ಉತ್ಸಾಹ ತೋರುತ್ತಿದ್ದೆವು. ಯಾವುದೇ ವಿಷಯ, ಆಟ, ಓದಿನಲ್ಲಿ ಸಹಪಾಠಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಇರುತ್ತಿತ್ತು.

ಡಿ.೧೮-೨೨ರವರೆಗೆ ಬೆಂಗಳೂರಿನ ಯಲಹಂಕದ ವಿಶ್ವ ವಿದ್ಯಾಪೀಠದ ತಕ್ಷಶಿಲಾ ಕ್ಯಾಂಪಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗಾಗಿ ‘ಗಣಿತಮೇಳ -೨೦೨೩’ ಜರುಗಿತು. ನಾನು ಭಾಗವಹಿಸಿರಲಿಲ್ಲ. ಈಗ ನಾನು ಹೆಚ್ಚು ಹೊರಗೆ ಓಡಾಡುವುದಿಲ್ಲ. ಕಾರ್ಯಕ್ರಮದ ಸ್ಥಳವು ನಾವಿರುವ ಪ್ರದೇಶದಿಂದ ದೂರವಿದ್ದ ರಂತೂ (ಅದೂ ಈ ಮಹಾನಗರದ ಟ್ರಾಫಿಕ್ ದಟ್ಟಣೆಯಲ್ಲಿ) ಹೋಗುವುದೇ ಇಲ್ಲ. ಈ ಗಣಿತಮೇಳದ ಸಂದರ್ಭದಲ್ಲಿ ಶ್ರೇಷ್ಠ ಗಣಿತಜ್ಞ ಡಾ. ಶ್ರೀನಿವಾಸ ರಾಮಾ ನುಜನ್ (ಜನ್ಮದಿನ: ೨೨ ಡಿಸೆಂಬರ್, ೧೮೮೭) ಅವರನ್ನು ಸ್ಮರಿಸಬೇಕು. ನಮ್ಮ ಮೈಸೂರು ಸ್ನೇಹಿತರಾದ ಸೀತಾರಾಮ್ ಅವರು ಗಣಿತದ ವಿಷಯದಲ್ಲಿ ಸ್ವಪ್ರೇರಣೆಯಿಂದ ಚೊಕ್ಕವಾದ, ಆಕರ್ಷಕವಾದ ಲೇಖನ ಬರೆದು ನನಗೆ ಕಳಿಸಿದ್ದರು. ಅದರ ಮುಖ್ಯ ಸಾರಾಂಶವನ್ನಷ್ಟೇ ಇಲ್ಲಿ ಮಂಡಿಸುವೆ. ಅದನ್ನು ಓದಿದ ಮೇಲೆ ನೀವು ಸಹ ಇಷ್ಟಪಡುವಿರಿ ಎಂದು ಭಾವಿಸುವೆ.

ಬದುಕು ಎಂಬುದೇ ಒಂದು ಬಗೆಯ ಗಣಿತ, ಅಂದರೆ ಲೆಕ್ಕಾಚಾರ. ಬೆಳಗ್ಗೆ ಏಳುವುದೇ ಸಮಯದ ಎಣಿಕೆಯ ಮೇಲೆ. ಆನಂತರ ದಿನಚರಿಯಲ್ಲಿ ಎಲ್ಲವೂ ಲೆಕ್ಕಾಚಾರವಾಗಿ ಸಾಗುತ್ತದೆ. ನಾವು ಸೇವಿಸುವ ಆಹಾರ, ಔಷಽ, ನಮ್ಮ ಎತ್ತರ-ತೂಕ-ಸುತ್ತಳತೆ, ಎದೆಮಿಡಿತ, ನಾಡಿಮಿಡಿತ, ಉಸಿರಾಟ, ರಕ್ತದೊತ್ತಡ, ನಮ್ಮ ದೇಹದ-ದೇಶದ ಉಷ್ಣಾಂಶ, ಶೀತಾಂಶ, ನಮ್ಮ ಮೋಟರು- ಮೀಟರು ಇಂಥಾ ಅಸಂಖ್ಯಾತ ಸರ್ವೇಸಾಮಾನ್ಯ ವಿಷಯಗಳಲ್ಲಿ ಗಣಿತ ಇಲ್ಲದೆ ಬದುಕೇ ಇಲ್ಲ. ಪರಿಮಾಣ ತಪ್ಪಿದರೆ ಪರಿಣಾಮವೇ ಬೇರೆ!

ಇನ್ನು ಫೋನ್ ನಂಬರು, ಬ್ಯಾಂಕ್ ಖಾತೆಯ ನಂಬರು, ಆಧಾರ್ ನಂಬರು… ಇವುಗಳ ಮಾರುದ್ದ, ಮೈಲುದ್ದ ನಂಬರು ಗಳಲ್ಲಿ ಎಲ್ಲಾದರೂ ಎಡವಟ್ಟಾದರೆ ಜೀವನದ ಮೆಂಬರುಗಿರಿ ಯಿಂದಲೇ ವಜಾ. ಪ್ರತಿ ನಾಗರಿಕನೂ ಈಗ ‘ಕೇವಲ ಸಂಖ್ಯೆ’ ತಾನೇ?! ಸಂಬಳ, ಪರೀಕ್ಷೆ ಅಂಕಗಳು, ವೋಟು, ನೋಟು, ವ್ಯಾಪಾರ, ವ್ಯವಹಾರ ಎಲ್ಲವೂ ಸಂಖ್ಯಾಮಯ. ಸಂಗೀತ, ನೃತ್ಯ… ಎಲ್ಲವೂ ಲೆಕ್ಕಮಯವೇ. ಗಣಿತವು ಕುಣಿತದಂತೆ ಮನೋರಂಜನೆ ನೀಡುವುದು. ಬರವಣಿಗೆಗೆ ಕಾಗುಣಿತವು ಎಷ್ಟು ಮುಖ್ಯವೋ, ಗಣಿತ ವಿಜ್ಞಾನಕ್ಕೆ ಅಂಕಗಣಿತವೂ ಅಷ್ಟೇ ಮುಖ್ಯ. ಲೆಕ್ಕ ಎಂದರೆ ಕಕ್ಕಾಬಿಕ್ಕಿ ಏಕೆ? ‘ಲೆಕ್ಕಂ ದುಃಖಮಯಂ’… ‘ಲೆಕ್ಕವೇ ದುಕ್ಕಕ್ಕೆ ಕಾರಣ’ ಎಂದು ದೂರದೆ, ದೂರ ಮಾಡದೆ ‘ಸರ್ವಂ ಗಣಿತಮಯಂ’ ಎಂದು ಹಾಡುವುದೇ ಸರಿ. ‘ಲೆಕ್ಕ-ಗಿಕ್ಕ ನನಗೆ ದಕ್ಕದ್ದು’ ಎಂದು ಬಿಕ್ಕುವುದು ನಿಲ್ಲಬೇಕು.

ಕೊನೆಯದಾಗಿ: ನಮ್ಮ ಬಾಳತನದಲ್ಲಿ ನಡೆದಿರುವ ‘ಸೊನ್ನೆ ಮತ್ತು ಒಂದು’ ಕೂಡಿದ ಅದ್ಭುತ ‘ಸಾಥ್‌ಮ್ಯಾಟಿಕ್ಸ್’ ಆಟೋಟವನ್ನು ಗಮನಿಸಿ ನಮ್ಮ ಜೀವವಿರೋಽ ಗುಣಗಳು ‘ಸೊನ್ನೆ’ ಆಗಿ, ಜೀವಪರ ಶಕ್ತಿಗಳೆಲ್ಲವೂ ‘ಒಂದು’ ಆಗುವಂತೆ ಒಮ್ಮನದಿಂದ ನಡೆಯೊಣ. ಹೊಸ ವರುಷದಲ್ಲಿ ಎಲ್ಲರಿಗೂ ಶುಭವಾಗಲಿ. ಎಲ್ಲರಲ್ಲೂ ನವಚೈತನ್ಯ ಉಂಟಾಗಲಿ.

(ಲೇಖಕಿ ಹವ್ಯಾಸಿ ಬರಹಗಾರ್ತಿ)