Tuesday, 17th September 2024

ಎಸ್‌ಎಸ್‌ಎಲ್‌ಸಿ ಫಲಿತಾಂಶ ಜೋಕ್ ಅಲ್ಲ !

ವಿಶ್ಲೇಷಣೆ

ಡಾ.ಆರ್‌.ಜಿ.ಹೆಗಡೆ

ವ್ಯವಸ್ಥೆ ಗಂಭೀರ ಆತ್ಮಾವಲೋಕನಕ್ಕೆ ಮುಂದಾಗಲೇಬೇಕು. ಅಂತಹ ಆತ್ಮಾವಲೋಕನವನ್ನು ಮೂರು ಅಂಶಗಳ ದ್ರಷ್ಟಿಕೋನಗಳಿಂದ ಮಾಡಿಕೊಳ್ಳ ಬಹುದಾಗಿದೆ: ಪಠ್ಯ, ಕಲಿಕೆಯ ಪ್ರಕ್ರಿಯೆ, ಪರೀಕ್ಷೆಯ ವ್ಯವಸ್ಥೆ. ಈ ಮೂರು ಅಂಶಗಳು ಆರೋಗ್ಯಕರವಾಗಿದ್ದರೆ ಹೆಚ್ಚುಕಡಿಮೆ ಫಲಿತಾಂಶ ಆರೋಗ್ಯಕರವಾಗಿರುತ್ತದೆ.

ಬೋನಸ್ ಕೃಪಾಂಕದೊಂದಿಗೆ ಹೊರಬಂದ ಈ ವರ್ಷದ ಎಸ್. ಎಸ್. ಎಲ್. ಸಿ. ಫಲಿತಾಂಶ ರಾಜ್ಯದ ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯ ಕುರಿತು
ಗಂಭೀರ ಮತ್ತು ಕಳವಳಕಾರಿ ವಿಷಯಗಳನ್ನು ಅನಾವರಣಗೊಳಿಸಿಬಿಟ್ಟಿದೆ. ಪರೋಕ್ಷವಾಗಿ, ಆದರೆ ಸ್ಪಷ್ಟವಾಗಿ, ಅದು ಸೂಚಿಸಿರುವುದೆಂದರೆ
ರಾಜ್ಯದಲ್ಲಿ ಒಟ್ಟಾರೆಯಾಗಿ ಮಾಧ್ಯಮಿಕ ಶಿಕ್ಷಣ ಒಳ್ಳೆಯ ಸ್ಥಿತಿಯಲ್ಲಿ ಇಲ್ಲ.

ಅದಕ್ಕೆ ಕೇವಲ ಪ್ರಸ್ತುತ ಸರಕಾರವನ್ನು ಅಥವಾ ವ್ಯವಸ್ಥೆಯನ್ನು ದೂಷಿಸಲಾಗದು. ಸಮಸ್ಯೆಗಳು ಆಳವಾದವು. ಹಲವು ಕಾರಣ ಗಳಿಂದ ದಶಕಗಳಿಂದ ಅದು ಕುಸಿಯುತ್ತಲೇ ಇತ್ತು. ಗುಣಮಟ್ಟದ ಅಧೋಮುಖ ಚಲನೆಗೆ ಬಹುಶಃ ಪ್ರಮುಖ ಕಾರಣಗಳೆಂದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಅಸ್ತವ್ಯಸ್ತವಾಗಿ ವಿಸ್ತಾರಗೊಂಡಿರುವುದು ಮತ್ತು ಬಹುಶಃ ಆ ವಿಸ್ತಾರಕ್ಕೆ, ಮತ್ತು ಸಮಾಜ ಬಯಸುವ ಶ್ರೇಷ್ಠತೆಯ ಮಟ್ಟದತ್ತ ಹೆಜ್ಜೆ ಹಾಕುವ ಉದ್ದೇಶಕ್ಕೆ
ಬೇಕಾಗುವ ಹಣಕಾಸು ಮತ್ತು ನಿರ್ವಹಣಾ ದಕ್ಷತೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು.

ಇನ್ನೊಂದು ಕಾರಣ ಶಿಕ್ಷಣದ ಗುರಿ ಅಕಾಡೆಮಿಕ್ ಶ್ರೇಷ್ಠತೆಯೊಂದೇ ಅಲ್ಲ, ‘ಸಾಮಾಜಿಕ ಸಮಾನತೆ’ ಮತ್ತು ‘ಒಳಗೊಳ್ಳುವಿಕೆ’ ಕೂಡ. ಈ ಗುರಿಗಳನ್ನು ‘ಶ್ರೇಷ್ಠತೆಯ’ ಗುರಿಯ ಜತೆ ಜೋಡಿಸುವುದು ಸುಲಭವಲ್ಲ. ಪರಿಸ್ಥಿತಿ ಪ್ರಸ್ತುತ ವರ್ಷ ಬಿಗಡಾಯಿಸಿ ಹೋಯಿತು. ಅದಕ್ಕೆ ಮಹತ್ವದ ಕಾರಣ ಕರೋನಾ ಹಾವಳಿಯಿಂದಾಗಿ ಎರಡು ವರ್ಷಗಳ ಶೈಕ್ಷಣಿಕ ಅಸ್ತವ್ಯಸ್ತತೆ ಎದುರಿಸಿದ ವಿದ್ಯಾರ್ಥಿಗಳನ್ನು ಪ್ರಸಕ್ತ ಬ್ಯಾಚ್ ಹೊಂದಿದ್ದು ಎನ್ನುವ ಮಾತಿಗೆ ಅರ್ಥವಿದೆ.

ಈ ವರ್ಷ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಯಿಂದಾಗಿ ವಿಧ್ಯಾರ್ಥಿಗಳು ‘ಭಯ’ ಗೊಂಡು ಬಿಟ್ಟರು ಎನ್ನುವ ಕಾರಣವೂ ಅಲ್ಪ ಮಟ್ಟದಲ್ಲಿ ಕೆಲಸಮಾಡಿರಬಹುದು. ಕೆಲವು ಕಡೆ ಪರೀಕ್ಷೆಯ ಹಾಲ್‌ನ ಒಳಗೆ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ‘ಸಹಾಯವಾಣಿ’ ಈ ವರ್ಷ ಸಿಸಿಟಿವಿ ಕಾರಣದಿಂದಾಗಿ
ಸಿಗದಿದ್ದುದಕ್ಕಾಗಿ ಪರಿಸ್ಥಿತಿ ಹೀಗೆ ಆದರೂ ಇರಬಹುದು. ಒಟ್ಟಾರೆ ಫಲಿತಾಂಶ ಕುಸಿದುಹೋಯಿತು. ಇಂತಹ ರಿಸಲ್ಟ್ ಅನ್ನು ‘ವ್ಯವಸ್ಥೆಯೂ’  ನಿರೀಕ್ಷಿಸಿರ ಲಿಲ್ಲ ಎಂದು ಕಾಣುತ್ತದೆ.

ಫಲಿತಾಂಶ ನೋಡಿ ಬಹುಶಃ ಅದೂ ದಂಗು ಬಡಿದು ಹೋಯಿತು. ಏನು ಮಾಡಬೇಕೆಂಬುದೇ ತಿಳಿಯದೆ ತೀವ್ರ ಒತ್ತಡಕ್ಕೆ ಒಳಗಾಯಿತು ಅನಿಸುತ್ತದೆ. ಅದರ ಮುಂದೆ ಬಂದ ಸವಾಲೆಂದರೆ ಫಲಿತಾಂಶವನ್ನು ಬಂದ ರೀತಿಯಲ್ಲೇ ಸಮಾಜದ ಮುಂದೆ ಇಡುವಂತಿಲ್ಲ. ಗದ್ದಲವಾಗುತ್ತದೆ. ಬಹುಶಃ ಈ
ಹಿನ್ನೆಲೆಯಲ್ಲಿಯೇ ಬಂದ ಆಲೋಚನೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ ನೀಡಿಬಿಡುವುದು. ಸಮಸ್ಯೆ ಸಂಕೀರ್ಣವಾದದ್ದು
ಇಲ್ಲಿ. ‘ಗ್ರೇಸ್’ ನೀಡಿಕೆ ಹಿಂದೆಯೂ ನಡೆದಿದ್ದರೂ ಇರಬಹುದು. ಆದರೆ ಈ ಬಾರಿ ‘ವ್ಯವಸ್ಥೆಯ’ ಒಳಗಿರುವ ಯಾರದೋ ಅಪ್ಪಟ ‘ಪ್ರಾಮಾಣಿಕತೆ’ ಯಿಂದಾಗಿ ವಿಷಯ ಸಾರ್ವಜನಿಕ ವಲಯಕ್ಕೆ ಬಂದು ಹೋಯಿತು.

ಈ ವಿಷಯದಲ್ಲಿ ‘ವ್ಯವಸ್ಥೆ’ಯ ಕುರಿತಾಗಿ ಮಾನ್ಯ ಮುಖ್ಯಮಂತ್ರಿ ಗಳ ಕೋಪ ಸರಿಯಾಗಿಯೇ ಇದೆ. ಏಕೆಂದರೆ ಹಿರಿಯ, ಅನುಭವಿ ರಾಜಕಾರಣಿಯಾದ ಅವರಿಗೆ ಗೊತ್ತಿದೆ. ಏನೆಂದರೆ ಶೈಕ್ಷಣಿಕ ವಿಷಯಗಳು ಕಾಣುವಂತೆ ಕ್ಲಾಸ್ ರೂಮಿಗೆ ಸಂಬಂಧಿಸಿದವಾದರೂ ಕೂಡ ಅವಕ್ಕೆ ವ್ಯಾಪಕವಾಗಿ ಸಮಾಜವನ್ನೇ ಮುಟ್ಟಬಲ್ಲ, ತಟ್ಟಬಲ್ಲ ಸೃಷ್ಟಿಸಬಲ್ಲ, ಅಥವಾ ಕೆಡವಬಲ್ಲ ಶಕ್ತಿ ಇದೆ. ಶಿಕ್ಷಣದ ಸ್ಥಿತಿ ಗತಿಯ ಮಾಪಕವಾದ ಫಲಿತಾಂಶ ಗಂಭೀರ ವಿಷಯ.

ಏಕೆಂದರೆ ಹೀಗೆಲ್ಲ ಆಗಿಹೋದರೆ ಅರೆಬೆಂದ ಮಾನವ ಸಂಪನ್ಮೂಲ ಸ್ರಷ್ಟಿಯಾಗುತ್ತದೆ. ಅಂತಹ ಯುವಜನತೆ ದೇಶಕ್ಕೆ ದೊಡ್ಡ ಹೊರೆಯಾಗಿ ಹೋಗು ತ್ತದೆ. ಅಲ್ಲದೆ ಒಂದು ವರ್ಷ ಮಾನವೀಯತೆಯ ಆಧಾರದಲ್ಲಿ ಗ್ರೇಸ್ ನೀಡಿದರೆ ನಂತರದ ವರ್ಷಗಳಲ್ಲಿ ಪುಕ್ಕಟೆಯಾಗಿ ಪಾಸು ಮಾಡಿ ಎನ್ನುವ ಒತ್ತಡ ಮುಂದೆ ಬರುತ್ತದೆ.ಅದರಲ್ಲಿ ರಾಜಕೀಯವೂ ಸೇರಿಕೊಳತ್ತದೆ. ಈ ವರ್ಷದ ಉದಾಹರಣೆ ಇಟ್ಟುಕೊಂಡು ಜನ ಮುಂದೆ ನ್ಯಾಯಾಲಯಗಳಿಗೆ ಹೋದರೂ ಅಚ್ಚರಿಯಿಲ್ಲ. ಈಗ ವ್ಯವಸ್ಥೆ ಗಂಭೀರ ಆತ್ಮಾವಲೋಕನಕ್ಕೆ ಮುಂದಾಗಲೇಬೇಕು. ಅಂತಹ ಆತ್ಮಾವಲೋಕನವನ್ನು ಮೂರು ಅಂಶಗಳ ದ್ರಷ್ಟಿಕೋನ ಗಳಿಂದ ಮಾಡಿಕೊಳ್ಳಬಹುದಾಗಿದೆ: ಪಠ್ಯ, ಕಲಿಕೆಯ ಪ್ರಕ್ರಿಯೆ, ಪರೀಕ್ಷೆಯ ವ್ಯವಸ್ಥೆ.

ಈ ಮೂರು ಅಂಶಗಳು ಆರೋಗ್ಯಕರವಾಗಿದ್ದರೆ ಹೆಚ್ಚು ಕಡಿಮೆ ಫಲಿತಾಂಶ ಆರೋಗ್ಯಕರವಾಗಿರುತ್ತದೆ. ಒಂದನೆಯದು. ವಿಪರೀತ ಕಠಿಣವಾದ
ಸಿಲಬಸ್ ಅಥವಾ ವಿದ್ಯಾರ್ಥಿಗಳ ಗಂಟಲಲ್ಲಿ ಇಳಿಯದ ಕಡುಬಿನಂತಹ ಪಠ್ಯ. ಈ ವರ್ಷ ಅಂತಹ ಪಠ್ಯಗಳಿದ್ದವೇ? ವಿಶೇಷವಾಗಿ ಗಣಿತ ಮತ್ತು ಇಂಗ್ಲೀಷ್‌ನಲ್ಲಿ ಅಂತಹ ಸಮಸ್ಯೆ ಇತ್ತೇ? ನೋಡಿಕೊಳ್ಳಬೇಕು. ಆದರೆ ಸಾಮಾನ್ಯವಾಗಿ ಪಠ್ಯದಲ್ಲಿ ಅಂತಹ ಸಮಸ್ಯೆಗಳಿದ್ದರೆ ಕಲಿಸಬೇಕಾದ ಸಂದರ್ಭ ದಲ್ಲಿ ಅದು ಹೊರ ಬಂದು ಬಿಡುತ್ತದೆ. ಮತ್ತು ತಿಳಿದಂತೆ ಅಂತಹ ಸಂದರ್ಭದಲ್ಲಿ ನೇರವಾಗಿ ಅಂತಹ ಪಠ್ಯಗಳನ್ನು ಕೈಬಿಡಲಾಗುತ್ತದೆ. ಅಥವಾ ಅಂತಹ ಪಠ್ಯಗಳಿಂದ ಪ್ರಶ್ನೆಗಳನ್ನು ಕೈಬಿಡಲಾಗುತ್ತದೆ.

ಈ ವರ್ಷ ಅಂತಹ ದೂರುಗಳು ಬಂದಿದ್ದವೇ? ಎರಡನೆಯ ವಿಷಯ ಕ್ಲಾಸ್ ರೂಂ ಶಿಕ್ಷಣ. ತಿಳಿದಿರುವಂತೆ ಇಲ್ಲಿ ಆಳವಾದ ಸಮಸ್ಯೆಗಳಿವೆ. ಹಲವು ವರ್ಷಗಳಿಂದಲೇ ಟೀಚಿಂಗ್‌ನ ಗುಣಮಟ್ಟ ಕುಸಿದಿದೆ ಅಥವಾ ಸತತವಾಗಿ ಕುಸಿಯುತ್ತಿದೆ ಎಂಬ ಸಂದೇಹಗಳಿವೆ. ಶಿಕ್ಷಕರ ಮೋಟಿವೇಶನ್ ಅಥವಾ ಕಲಿಸುವಲ್ಲಿನ ಆಸಕ್ತಿ ಕುರಿತು ಪ್ರಶ್ನೆಗಳೆದ್ದಿವೆ. ಜತೆಗೇ ಶಿಕ್ಷಕರನ್ನು ಬೇರೆ ಬೇರೆ ರೀತಿಯ ಆಡಳಿತಾತ್ಮಕ ಕೆಲಸಕ್ಕೆ ತೊಡಗಿಸುವುದರಿಂದ, ಹಾಗೂ ಅವೈಜ್ನಾನಿಕ ಟ್ರೇನಿಂಗ್ ವ್ಯವಸ್ಥೆಯೇ ಶಿಕ್ಷಕರ ಸಮಯ ಕಸಿದುಬಿಡುವುದರಿಂದ ಅವರಿಗೆ ನಿಧಾನವಾಗಿ, ಆಳವಾಗಿ ಕಲಿಸಲು ಸಮಯವೇ ಇಲ್ಲ ಎಂಬ ಮಾತುಗಳೂ ಬಂದಿವೆ.

ಹಾಗೆಯೇ ಮೊದಲು ಎಸ್.ಎಸ್. ಎಲ್ ಸಿ. ಗೆ ಏಪ್ರಿಲ್‌ನಲ್ಲಿ ಒಂದೇ ಪರೀಕ್ಷೆ ಇತ್ತು. ಕೆಲವು ವರ್ಷಗಳಿಂದ ಒಂದು ಸಪ್ಲಿಮೆಂಟರಿ ಪರೀಕ್ಷೆ ಜೂನ್, ಜುಲೈನಲ್ಲಿ ಬಂದಿದೆ. ಈ ವರ್ಷದಿಂದ ಎರಡು ಸಪ್ಲಿಮೆಂಟರಿಗಳು (ಅಂದರೆ ವಿದ್ಯಾರ್ಥಿ ಮೂರರಲ್ಲಿಯೂ ಕುಳಿತು ಯಾವುದರಲ್ಲಿ ಹೆಚ್ಚು ಅಂಕ ಬರುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು). ಅಂದರೆ ಒಟ್ಟಾರೆ ಶಿಕ್ಷಕರು ಮೂರು ಪರೀಕ್ಷೆ ನಡೆಸಬೇಕು. ನಂತರ ಮೌಲ್ಯ ಮಾಪನ ಕಡ್ಡಾಯ.
ಹೀಗೆ ಶಿಕ್ಷಕರ ಸುಮಾರು ಅರ್ಧ ವರ್ಷ ಪರೀಕ್ಷೆ ನಡೆಸುವುದರಲ್ಲೇ ಹೋಗಿಬಿಡುತ್ತದೆ. ಮಧ್ಯ ಮಧ್ಯದಲ್ಲಿ ತರಬೇತಿಗಳು, ಚುನಾವಣೆ, ಗಣತಿ ಇತ್ಯಾದಿ ಕೆಲಸಗಳು ಇವುಗಳ ನಡುವೆ ಶಿಕ್ಷಕರಿಗೆ ಕಲಿಸಲು ಸಮಯವೇ ಇಲ್ಲ ಎಂಬ ವಾದಗಳಿವೆ.

ನುರಿತ ಶಿಕ್ಷಕರ ಅಲಭ್ಯತೆ ಕೂಡ ಪ್ರಮುಖ ಕಾರಣವೇ! ಏಕೆಂದರೆ ಇತ್ತೀಚೆಗೆ ಸೇರಿದ ಯುವ ಶಿಕ್ಷಕರು ಇದೇ ವ್ಯವಸ್ಥೆಯ ಪ್ರಾಡಕ್ಟಗಳು. ಅವರನ್ಬು
ದೂರುವಂತಿಲ್ಲ. ವಿದ್ಯಾರ್ಥಿಗಳ ಗುಣಮಟ್ಟವೂ ತೀವ್ರವಾಗಿ ಕುಸಿದಿದೆ ಎಂಬ ಮಾತನ್ನೂ ಅಲ್ಲಗಳೆಯಲಾಗದು. ಏಕೆಂದರೆ ಅವರು ದಾಟಿ ಬಂದ ಪ್ರಾಥಮಿಕ ಶಿಕ್ಷಣದಲ್ಲಿಯೂ ಸಮಸ್ಯೆಗಳಿವೆ. ಬ್ರಹತ್ ಸಮಸ್ಯೆಗಳು. ಅಭಿಪ್ರಾಯಗಳ ಪ್ರಕಾರ ಅಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದೊಂದೇ ಆದ್ಯತೆ ಯಲ್ಲ. ಪ್ರಧಾನವಲ್ಲ. ಸಾಮಾಜಿಕ ಒಳಗೊಳ್ಳುವಿಕೆ ಮುಖ್ಯ. (ಅದು ಸರಿಯಾದದ್ದು ಕೂಡ ಹೌದು).

ಅಲ್ಲಿ ಗುಣಮಟ್ಟದ ಸಾಧನೆಗೆ ಬೇಕಾಗುವ, ಹಾಜರಾತಿ ಯನ್ನು ಕಠಿಣವಾಗಿ ಹಿಡಿಯುವಂತಿಲ್ಲ. ಅಲ್ಲಿ ಮೊದಲನೆ ಪೀಳಿಗೆಯ ಕಲಿಕೆಯ ಮಕ್ಕಳು,
ಮಾನಸಿಕವಾಗಿ ಒಳ್ಳೆಯ ಹಿನ್ನೆಲೆಯಿಂದ ಬರದ ಮಕ್ಕಳು ಎಲ್ಲರನ್ನೂ ಸುಧಾರಿಸಬೇಕು. ಮತ್ತು ಕಲಿಕೆಯ ಹಕ್ಕು ಕಾನೂನಿನ ಅಡಿ ಎಂಟನೆಯ
ಇಯತ್ತೆಯವರಗೂ -ಲ್ ಮಾಡುವಂತಿಲ್ಲ. ಮಕ್ಕಳ ಮೇಲೆ ಒತ್ತಡ ಹಾಕುವಂತಿಲ್ಲ. ಮಾಧ್ಯಮಿಕ ಶಾಲೆಗಳಿಗೆ ಸೇರುವ ಮಕ್ಕಳಲ್ಲಿ ಇಂತವರ ಸಂಖ್ಯೆಯೂ ಅಧಿಕವಾಗಿರಬಹುದು. ನಮ್ಮ ದೇಶದಲ್ಲಿ ಎಂತಹ ಪ್ರಾಥಮಿಕ ಶಾಲೆಗಳಿವೆಯೆಂದರೆ ಜಾಗತಿಕ ಗುಣಮಟ್ಟದವುಗಳಿಂದ ಹಿಡಿದು, ಅತ್ಯಂತ ದುರವಸ್ಥೆ ಯಲ್ಲಿರುವ, ಶಿಕ್ಷಕರಿಗೆ ತಿಂಗಳ ಸಂಬಳ ಸಿಗುವುದು ಕೂಡ ಅನುಮಾನವಿರುವ ಶಾಲೆಗಳೂ ಇವೆ.

ಹೈಸ್ಕೂಲಿಗೆ ಬಂದ ಹಲವು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಗಣಿತ, ಇಂಗ್ಲೀಷು ಹೋಗಲಿ, ಮಾತ್ರ ಭಾಷೆಯ ಅಕ್ಷರ ಜ್ನಾನ ಕೂಡ ಇರುವುದಿಲ್ಲ ಎಂಬ ವಾದಗಳಿವೆ. ಫಲಿತಾಂಶ ಹೇರಾ ಫೆರಿಯಾಗಲು ಮೂರ ನೆಯ ಕಾರಣ ಪರೀಕ್ಷೆಯ ವ್ಯವಸ್ಥೆ. ಅತಿ ಕಠಿಣ ಅಥವಾ ಸಿಲಬಸ್‌ನ ಹೊರಗಿನಿಂದ ಪ್ರಶ್ನೆಗಳು
ಬಂದು ಹೋಗಿ ಸಮಸ್ಯೆ ಆಗಬಹುದು. ಇಂತಹ ಸಂದರ್ಭದಲ್ಲಿ ಅಂದರೆ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಬಂದ ಸಂದರ್ಭದಲ್ಲಿ ಗ್ರೇಸ್ ಮಾರ್ಕ್ಸ್ ಕೊಡುವುದು ಸರಿ. ಸುಮಾರಾಗಿ ಪಿಯುಸಿಯಲ್ಲಿ, ಸಿಇಟಿಯಲ್ಲಿ ಇದು ಪ್ರತಿವರ್ಷವೂ ನಡೆದುಹೋಗುತ್ತದೆ. ಆದರೆ ಅಂತಹ ಸಂದರ್ಭದಲ್ಲಿ ‘ಗ್ರೇಸ್’ ಒಂದು ಸಮಸ್ಯೆಯಾಗುವುದಿಲ್ಲ.

ಏಕೆಂದರೆ ಕಾರಣ ವಿರುತ್ತದೆ. ಎಷ್ಟು ಗ್ರೇಸ್ ಮಾರ್ಕ್ಸ್ ಕೊಡಬೇಕು ಎನ್ನುವುದಕ್ಕೂ ಸ್ಪಷ್ಟತೆ ಇರುತ್ತದೆ. ಅದಿರಲಿ. ಕಳಪೆ ಫಲಿತಾಂಶ ಬಂದು ಬಿಟ್ಟಿದೆ ಯೆಂದು ‘ವ್ಯವಸ್ಥೆ’ ಯನ್ನು ಹೀಗಳೆಯುತ್ತ, ಹಾಸ್ಯ ಮಾಡುತ್ತ ಕುಳಿತುಕೊಳ್ಳುವ ಸಂದರ್ಭ ಇದಲ್ಲ. ಹಾಗೆಯೇ ಯಾವುದೋ ಒಂದು ಕ್ಷಣದಲ್ಲಿ ಬಹುಶಃ ತೀವ್ರ ಒತ್ತಡದಲ್ಲಿ ’ವ್ಯವಸ್ಥೆ’ ಗ್ರೇಸ್ ಮಾರ್ಕ್ಸ ನೀಡಿಬಿಟ್ಟಿದೆಯೆಂಬುದನ್ನೇ ಪದೇ ಪದೇ ಚರ್ಚಿಸುತ್ತ, ಅಣಕವಾಡುತ್ತ, ಜೋಕ್‌ ಮಾಡುತ್ತ ಕುಳಿತು ಕೊಳ್ಳುವ ಸಂದರ್ಭವೂ ಇದಲ್ಲ. ಈಗ ಮಾಡಬೇಕಿರುವುದು, ನಡೆದುಹೋದ ವಿಷಯದ ಹಿನ್ನೆಲೆ ಯಲ್ಲಿ ‘ಸಾಮಾಜಿಕ ಸಮಾನತೆ’ ಒಳಗೊಳ್ಳುವಿಕೆ ಮತ್ತು ಶ್ರೇಷ್ಠತೆಯನ್ನು ಜತೆ ಜತೆಯಾಗಿ ಹೇಗೆ ಕೊಂಡೊಯ್ಯಬಹುದು ಎನ್ನುವುದರ ಕುರಿತಾದ ಗಂಭೀರ ಚರ್ಚೆ.

ಹಾಗೆಯೇ ‘ವ್ಯವಸ್ಥೆಯನ್ನು’ ಮತ್ತು ಕಲಿಕಾ ವ್ಯವಸ್ಥೆಯನ್ನು, ಅದರಲ್ಲಿಯೂ ವಿಶೇಷವಾಗಿ ಎಲ್ಲಿ ಫಲಿತಾಂಶ ತೀವ್ರ ಹಿನ್ನಡೆ ಅನುಭವಿಸುತ್ತ ಬಂದಿದೆ ಯೋ ಅಲ್ಲಿ ಹೇಗೆ ಸುಧಾರಿಸುವುದು ಎನ್ನುವ ಕುರಿತು ಕ್ರಮಗಳನ್ನು ಕೈಗೊಳ್ಳುವುದು. ಬಹುಶಃ ಈ ಎಲ್ಲ ಪ್ರಕ್ರಿಯೆ ಯಲ್ಲಿ ಪಾಲಕರನ್ನು ತೊಡಗಿಸುವುದು ಹೇಗೆ ಎನ್ನುವ ಕುರಿತೂ ಗಂಭೀರವಾಗಿ ಯೋಚಿಸ ಬೇಕು. ಏಕೆಂದರೆ ಪ್ರಕ್ರಿಯೆಯಲ್ಲಿ ಅವರೂ ಮಹತ್ವದ ಪಾಲುದಾರರು. ಮಕ್ಕಳ ಕಲಿಕೆಯ ಪ್ರಗತಿ ಹಾಗೂ ನಿರಂತರ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇದೆ. ಒಟ್ಟಾರೆಯಾಗಿ ಇರುವ ಸಮಸ್ಯೆಗಳ ಕುರಿತ ಅರಿವು ಅವರಿಗೂ ಇರಬೇಕು. ಸಮಾಜಕ್ಕೂ ಇರಬೇಕು. ಸರಕಾರ, ಶಿಕ್ಷಕರು, ಪಾಲಕರು, ಸಮಾಜ ಸೇರಿ ಕೆಲಸಮಾಡಿದಾಗ ಮಾತ್ರ ಒಳ್ಳೆಯ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು ಸಾಧ್ಯವಾಗುತ್ತದೆ.

ಎಸ್.ಎಸ್.ಎಲ್.ಸಿ.ಅಥವಾ ಯಾವುದೇ ಹಂತದ ಶೈಕ್ಷಣಿಕ ಫಲಿತಾಂಶ ನಗುವ ವಿಷಯವಲ್ಲ.

(ಲೇಖಕರು: ನಿವೃತ್ತ ಪ್ರಾಂಶುಪಾಲರು)

Leave a Reply

Your email address will not be published. Required fields are marked *