Saturday, 14th December 2024

ಹಲೋ, ನಮಸ್ತೆ, ಸ್ಮೈಲ್, ಚಿಕ್ಕ ಸಂಭಾಷಣೆ

ಶಿಶಿರ ಕಾಲ

shishirh@gmail.com

ನಿನ್ನೆ ಬೆಂಗಳೂರಿನ ಮಾಲ್ ಒಂದರಲ್ಲಿ ಏನೋ ಒಂದನ್ನು ಖರೀದಿಸಲೆಂದು ಬೆಳ್ಳಂಬೆಳಗ್ಗೆ ಹೋಗಿದ್ದೆ. ಒಳಕ್ಕೆ ಹೋಗಿ ಪಕ್ಕದಲ್ಲಿದ್ದ ಲಿಫ್ಟಿನಲ್ಲಿ ನಾಲ್ಕನೇ ಫ್ಲೋರಿಗೆ ಹೋಗಬೇಕಿತ್ತು. ಮಾಲ್ ತೆರೆದು ಬಹಳ ಸಮಯವಾಗಿರಲಿಲ್ಲ. ಹಾಗಾಗಿ ಜನರ ಓಡಾಟ ಅಷ್ಟಾಗಿರಲಿಲ್ಲ. ಇದ್ದವರೆಲ್ಲ ಬಹುತೇಕ ಅಲ್ಲಿನ ಉದ್ಯೋಗಿಗಳೇ ಆಗಿದ್ದರು.

ಲಿಫ್ಟ್ ಒಳಕ್ಕೆ ಹೋದಾಗ ಅಲ್ಲೊಂದು ಚಿಕ್ಕ ಸ್ಟೂಲ್ ಇತ್ತು. ಲಿಫ್ಟ್ ಆಪರೇಟರ್ ಇನ್ನೂ ಬಂದಿರಲಿಲ್ಲ. ಕಂಡ ಹತ್ತಾರು ದೇಶ ಗಳಲ್ಲಿ ಎಲ್ಲಿಯೂ ಇಂಥದ್ದೊಂದು ವ್ಯವಸ್ಥೆ ನಾನಂತೂ ನೋಡಿಲ್ಲ. ಲಿಫ್ಟ್ ಆಪರೇಟರ್, ಇವರ ಅವಶ್ಯಕತೆ ಏನು ಎನ್ನುವುದು ನನಗಂತೂ ಇನ್ನೂ ಬಗೆಹರಿದಿಲ್ಲ. ಇದು ಐಶೋ ಆರಾಮಕ್ಕೋ ಅಥವಾ ಜನರಿಗೆ ಲಿಫ್ಟ್ ಆಪರೇಟ್ ಮಾಡಲು ಬರುವುದಿಲ್ಲ ಎಂಬ ಕಾರಣಕ್ಕೋ ಗೊತ್ತಿಲ್ಲ.

ಎರಡೂ ಕಾರಣವಿರಲಿಕ್ಕಿಲ್ಲ. ಏಕೆಂದರೆ ಇರುವ ಐದಾರು ಬಟನ್‌ಗಳಲ್ಲಿ ಒಂದನ್ನು ಒತ್ತುವುದು ಅದೇನು ಮಹಾ ಕೆಲಸ, ಬ್ರಹ್ಮ ವಿದ್ಯೆ? ಇಂದಿನ ದಿನದಲ್ಲಂತೂ ಸಂಖ್ಯೆಯನ್ನು ಓದಲು ಬಾರದವರು ಕೋಟಿಗೊಬ್ಬರೂ ಸಿಗಲಿಕ್ಕಿಲ್ಲ. ಅಂಥವರು ಇಂತಹ ಬಹುಮಹಡಿ ಕಟ್ಟಡದೊಳಕ್ಕೆ ಬರುವ ಸಾಧ್ಯತೆಯೂ ಕಡಿಮೆ. ಬಂದರೂ ಅವರು ಲಿಫ್ಟ್ ಉಸಾಬರಿಗೆ ಹೋಗಲಿಕ್ಕಿಲ್ಲ, ಇರಲಿ. ಒಂದಿಷ್ಟು ಸಮಯದ ನಂತರ ಅದೇ ಲಿಫ್ಟಿನಲ್ಲಿ ವಾಪಸ್ ಕೆಳಕ್ಕೆ ಬರುವಾಗ ಅಲ್ಲೊಬ್ಬರು ಕೂತಿದ್ದರು, ಯಾವ ಫ್ಲೋರ್ ಎಂದು ಕೇಳಿ ಬಟನ್ ಒತ್ತಿದರು.

ಅದಾಗಲೇ ಲಿಫ್ಟಿನೊಳಕ್ಕೆ ನಾಲ್ಕು ಮಂದಿ ಯಿದ್ದರು. ಆಪರೇಟರ್ ಕಾಲು ಊನವಿತ್ತು. ಇಡೀ ದಿನ ಒಂದೇ ಜಾಗದಲ್ಲಿ ಕೂರುವ ಕಾಯಕ. ಅವರು ಒಳಬಂದು ಹೋಗುವವರ ಮುಖವನ್ನು ನೋಡುವುದೂ ಕಡಿಮೆ. ಬಾಹ್ಯ ಪ್ರಪಂಚವನ್ನು ನೋಡದೇ ದಿನವಿಡೀ ಎದುರಿಗಿನ ಬಟನ್ನು ಗಳನ್ನು ನೋಡುವ, ಇಂತಹ ಫ್ಲೋರ್ ಎಂದು ರೆಕಾರ್ಡೆಡ್ ಕೇಳುವ ಉದ್ಯೋಗ ಎಲ್ಲಿಲ್ಲದಷ್ಟು ಬೋರಿಂಗ್. ಜೀವನದ ಅನಿವಾರ್ಯತೆ ಮಾತ್ರ ಈ ಕೆಲಸವನ್ನು ಒಪ್ಪುತ್ತದೆ. ಇನ್ನು ಲಿಫ್ಟಿನೊಳಕ್ಕೆ ಬರುವ ಜನರಿಗೂ ಆ ವ್ಯಕ್ತಿಯ ಇರುವಿಕೆ ಅನಿಸುವುದೇ ಇಲ್ಲ.

ಇವರನ್ನು ದಂಡಪಿಂಡದಂತೆ ಕಾಣುವವರೂ ಇದ್ದಾರೆ. ಇಂಥವರನ್ನು ಮಾತನಾಡಿಸುವವರು, ಹೇಗಿದ್ದೀರಿ ಎಂದು ಕೇಳುವವರು ಬಹಳ ಕಡಿಮೆ. ನಮಸ್ಕಾರ, ನಿಮ್ಮ ಹೆಸರೇನೆಂದು ಮಾತನಾಡಿಸಿದೆ. ಅವರು ಮತ್ತು ಲಿಫ್ಟಿನಲ್ಲಿದ್ದ ಇನ್ನುಳಿದವರು ನನ್ನೆಡೆಗೆ ಇದ್ಯಾವ ವಿಚಿತ್ರ ಪ್ರಾಣಿ ಎಂಬಂತೆ ನೋಡಿದರು. ನನಗೆ ಅದೆಲ್ಲ ಕಂಡರೂ ನನ್ನೆದುರಿಗೆ ಇದ್ದವರು ಆ ಲಿಫ್ಟ್ ಆಪರೇಟರ್ ಎಂಬ ಒಬ್ಬ ವ್ಯಕ್ತಿ. ಅವರು ಮುಖ ಅರಳಿಸಿ ಮಾತನಾಡಿದರು. ಅದೇ ಸಮಯದಲ್ಲಿ ಎಲೆಕ್ಟ್ರಿಸಿಟಿ ವ್ಯತ್ಯಯವಾಗಿ ಲಿಫ್ಟ್ ಮಧ್ಯದಲ್ಲಿ ನಿಂತಿತು.

ತಕ್ಷಣ ಆಪರೇಟರ್ ನಮ್ಮನ್ನೆಲ್ಲ ಸಮಾಧಾನಿಸಿದರು. ಇನ್ನೊಂದು ನಿಮಿಷದೊಳಗೆ ಜನರೇಟರ್ ಚಾಲುವಾಗುತ್ತದೆ, ಹೆದರಬೇಡಿ
ಎಂದರು. ನಮ್ಮ ಮಾತುಕತೆ ಮುಂದುವರಿಯಿತು. ಅವರು ಇಂಡಿಯನ್ ಆರ್ಮಿಯಲ್ಲಿ ಜವಾನರಾಗಿ ಕೆಲಸ ಮಾಡಿದವರು, ಕಾಲಿಗೆ ಏಟು ಬಿದ್ದು ರಿಟೈರ್ಡ್ ಆದವರು. ಅವರ ಹೆಸರು ಮಂಜುನಾಥ್. ಎಕ್ಸ್ ಆರ್ಮಿ ಎಂದಿದ್ದೇ ಅಲ್ಲಿರುವ ಎರಡು ಮಂದಿ ಅವರನ್ನು ಖುಷಿಯಿಂದ ಮಾತನಾಡಿಸಿದರು, ಉಳಿದಿಬ್ಬರು ಮಂದಸ್ಮಿತ ಬೀರಿದರು. ಇದೆಲ್ಲ ನಡೆದದ್ದು ಎರಡು ಮೂರು ನಿಮಿಷದಲ್ಲಿ.

ಒಳ ಹೊಕ್ಕಾಗ ನಾವೆಲ್ಲಾ ಅಪರಿಚಿತರಾಗಿದ್ದೆವು. ಆದರೆ ಕೆಲವೇ ನಿಮಿಷದ ನಂತರ, ಹೊರಬರುವ ವೇಳೆ ನಮ್ಮೆಲ್ಲರ ನಡುವೆ ಅಲ್ಲಿ ಒಂದು ಮಾನವೀಯ ಸಂಬಂಧವೇರ್ಪಟ್ಟಿತ್ತು. ಅದಕ್ಕೆ ಕಾರಣ ಆ ಲಿಫ್ಟ್ ಆಪರೇಟರ್, ಒಂದು ಚಿಕ್ಕ ಮಾತುಕಥೆ, ಕುಶಲೋಪರಿ. ಅಮೆರಿಕಾದಲ್ಲಿ ಒಂದು ವಯಸ್ಸಿನ ನಂತರ ವೃದ್ಧರು ಓಲ್ಡ್ ಏಜ್ ಹೋಮ್‌ಗೆ ಸ್ಥಳಾಂತರವಾಗುತ್ತಾರೆ. ಓಲ್ಡ್ ಏಜ್
ಹೋಮ್ ಎಂದರೆ ಭಾರತದ ವೃದ್ಧಾಶ್ರಮಕ್ಕೆ ಹೋಲಿಸಬಾರದು. ಅಲ್ಲಿನ ವೃದ್ಧಾಶ್ರಮಕ್ಕೂ ಇಲ್ಲಿನದಕ್ಕೂ ಬಹಳಷ್ಟು ವ್ಯತ್ಯಾಸ ವಿದೆ.

ಅಲ್ಲಿ ಅದೊಂದು ಅಪಾರ್ಟ್ಮೆಂಟ್ ರೀತಿಯ ವ್ಯವಸ್ಥೆ. ಅಲ್ಲಿ ವೃದ್ಧರಿಗೆ ಬೇಕಾದ ರೀತಿಯಲ್ಲಿ ಆ ಮನೆಗಳನ್ನು, ವ್ಯವಸ್ಥೆಯನ್ನು ನಿರ್ಮಿಸಿಡಲಾಗುತ್ತದೆ. ಬಾತ್ರೂಮ್‌ನಲ್ಲಿ ಕುಳಿತು ಸ್ನಾನ ಮಾಡುವಂತೆ ವ್ಯವಸ್ಥೆಯಿರುತ್ತದೆ. ಅಡುಗೆ ಮಾಡಲು ಶಕ್ಯವಿಲ್ಲದಿದ್ದಲ್ಲಿ ಕಡಿಮೆ ಶುಲ್ಕಕ್ಕೆ ಬೇಕಾದ ರೀತಿಯ ಆಹಾರ ಒದಗಿಸುವ ವ್ಯವಸ್ಥೆಯಿರುತ್ತದೆ. ಮನೆಯ ಎಲ್ಲೆಡೆ ರೆಡ್ ಬಟನ್‌ಗಳನ್ನು ಹಾಕಿಡ ಲಾಗುತ್ತದೆ. ಏನಾದರು ಎಮರ್ಜೆನ್ಸಿ ಸ್ಥಿತಿ ನಿರ್ಮಾಣವಾದರೆ ಈ ಬಟನ್ ಒತ್ತಿದರೆ ಎರಡು ನಿಮಿಷದೊಳಗೆ ಅವರನ್ನು ವೈದ್ಯರು ಬಂದು ನೋಡುತ್ತಾರೆ.

ಅಪಾರ್ಟ್ಮೆಂಟಿನ ಡೂಪ್ಲಿಕೇಟ್ ಕೀಲಿ ಅವರ ಬಳಿ ಇರುತ್ತದೆ. ಇದು ಬಿಟ್ಟು ರೆಡ್ ಬಟನ್ ಇರುವ ಸರ ಅವರ ಕುತ್ತಿಗೆಯಲ್ಲಿ ಧರಿಸಲು ಕೊಡಲಾಗುತ್ತದೆ. ಒಂದೊಮ್ಮೆ ಹೊರಗಡೆ ಹೋದಲ್ಲಿ ಅಂತಹ ಸ್ಥಿತಿ ನಿರ್ಮಾಣವಾದರೆ ತಕ್ಷಣ ಅವರು ಆ ಕುತ್ತಿಗೆ ಯಲ್ಲಿರುವ ಬಟನ್ ಒತ್ತುತ್ತಾರೆ. ಅದು ಆ ವೃದ್ಧರ ಜಿಪಿಎಸ್ ಲೊಕೇಶನ್ ಅನ್ನು ಹತ್ತಿರದ ಪೊಲೀಸ್ ಸ್ಟೇಷನ್ ಮತ್ತು ಆಂಬ್ಯು ಲೆನ್ಸ್ ವ್ಯವಸ್ಥೆಗೆ ರವಾನಿಸುತ್ತದೆ, ೩ ನಿಮಿಷದಲ್ಲಿ ಅವರಿಗೆ ಸಹಾಯ ಸಿಕ್ಕಿಬಿಡುತ್ತದೆ. ಇದು ಅಲ್ಲಿನ ಅದ್ಭುತ ವ್ಯವಸ್ಥೆ. ಆದರೆ ಈ ವೃದ್ಧರಿಗೆ ಕಾಲಹರಣ ಕಷ್ಟ. ಅಲ್ಲದೆ ಮನುಷ್ಯ ಸಂಪರ್ಕ ಕೂಡ. ಇವರು ಟೈಮ್ ಪಾಸಿಗೆ ಅಥವಾ ವಸ್ತುಗಳನ್ನು ಕೊಳ್ಳಲು ವಾಲ್ಮಾರ್ಟ್ ಮೊದಲಾದ ಅಂಗಡಿಗಳಿಗೆ ಬರುತ್ತಾರೆ. ನಮ್ಮ ಮನೆಯ ಹತ್ತಿರವೇ ಇಂತಹ ಒಂದು ದೊಡ್ಡ ಓಲ್ಡ್ ಏಜ್ ಹೋಮ್ ಇದೆ. ಹಾಗಾಗಿ ಮನೆಯ ಹತ್ತಿರದ ಅಂಗಡಿಗಳಲ್ಲಿ ವಾರದ ದಿನಗಳಲ್ಲಿ ಈ ರೀತಿ ಒಂಟಿಯಾಗಿ ಅಥವಾ ಜೋಡಿಯಾಗಿ ಇರುವ ವೃದ್ಧರು ಅಲ್ಲಿಗೆ ಬರುವುದು ಸಾಮಾನ್ಯ.

ಅವರು ಬಹಳ ಸೌಜನ್ಯದವರು, ಕೆಲವರಂತೂ ದೊಡ್ಡ ಸಾಧಕರು ಇಲ್ಲವೇ ಆಗರ್ಭ ಶ್ರೀಮಂತರು. ಶಾಪಿಂಗ್ ಮಾಡುವಾಗ ಅವರೇ ಬಂದು ಕೆಲವೊಮ್ಮೆ ಮಾತನಾಡಿಸುತ್ತಾರೆ, ಇಲ್ಲ ನಾನೇ ಮುಂದಾಗಿ ಅವರನ್ನು ಮಾತನಾಡಿಸಿರುತ್ತೇನೆ. ಈ ಸಂಧಿಸುವಿಕೆ ಕೆಲವೇ ನಿಮಿಷಗಳದ್ದು. ಅವರಿಗೂ ಮಾತನಾಡಿದ ಖುಷಿ, ನಿರಾಳತೆ. ನನಗೆ ಇದು ಅತ್ಯಂತ ಖುಷಿ ಕೊಡುವ ಕೆಲಸ. ತೀರಾ ಪ್ರೀತಿಯಿಂದ ನಾನು ಮಾಡುವ ಕೆಲಸ. ಅಮೆರಿಕಾದಲ್ಲಿ ಅಪರಿಚಿತರ ಜೊತೆ ಮಾತಿಗಿಳಿಯುವುದು ವೃದ್ಧರ ವಿಷಯಕ್ಕಷ್ಟೇ ಸೀಮಿತವಲ್ಲ. ಅಲ್ಲಿ ನೀವು ರಸ್ತೆಯಲ್ಲಿ ನಡೆದು ಹೋಗುವಾಗ ಎದುರಿಗೆ ಸಿಕ್ಕವರನ್ನು ಕಣ್ಣೆತ್ತಿ ನೋಡದೇ ಹೋಗುವ ಪ್ರಮೇಯ ಇಲ್ಲವೇ ಇಲ್ಲ. ಕಣ್ಣಿಗೆ ಕಣ್ಣು ಸೇರಿದಾಗಲಂತೂ ಹಲೋ, ಹೇಗಿದ್ದೀರಿ ಎಂದು ಕೇಳದೇ ಮುಂದೆ ಹೋಗುವುದು ಅಲ್ಲಿ ಅಸಭ್ಯತೆ.

ಎಲ್ಲಿಯೇ ಇರಲಿ, ಒಂದೆರಡು ನಿಮಿಷ ಜೊತೆಯಲ್ಲಿದ್ದೀರಿ ಎಂದರೆ ಜನರು ಒಬ್ಬರನ್ನೊಬ್ಬರು ಮಾತನಾಡಿಸುವುದು, ಹೇಗಿದ್ದೀರಿ, ಏನು ಎತ್ತ ಎಂದು ಉಭಯ ಕುಶಲೋಪರಿ ಸರ್ವೇ ಸಾಮಾನ್ಯ. ಹಾಗಂತ ಈ ಮಾತುಕತೆ ಯಾವತ್ತೂ ತೀರಾ ವೈಯಕ್ತಿಕ
ವಿಚಾರ ಕ್ಕಿಳಿಯುವುದಿಲ್ಲ. ಯಾರೂ ಒಬ್ಬರಿಗೊಬ್ಬರು ಜೀವನ ಪಾಠ ಮಾಡುವ ಮಾತನಾಡುವುದಿಲ್ಲ. ಅಥವಾ ನಿಮ್ಮ ಮನೆ
ಎಲ್ಲಿ, ವಯಸ್ಸೆಷ್ಟು, ಉದ್ಯೋಗವೇನು ಎಂಬ ತೀರಾ ಖಾಸಗಿ ಹಂತಕ್ಕೆ ಇಳಿಯುವುದಿಲ್ಲ. ಯಾರೂ ಈ ಕೆಲ ಲಕ್ಷ್ಮಣ ರೇಖೆಯನ್ನು ಮೀರುವುದಿಲ್ಲ. ಇದು ಅಮೆರಿಕಾದ ಸಾರ್ವಜನಿಕ ಮರ್ಯಾದಿ, ಅಭ್ಯಾಸ. ನೀವು ಅದ್ಯಾವುದೇ ಬಣ್ಣದ ಚರ್ಮ
ದವರಾಗಿರಬಹುದು, ನಿಮ್ಮ ಪೋಷಾಕು, ಅಪೀಯರೆನ್ಸ್ ಹೀಗೆಯೇ ಇರಬಹುದು, ಎದುರಿಗಿರುವ ಒಬ್ಬರನ್ನೊಬ್ಬರು
ಮಾತನಾಡಿಸದೇ ಇರುವ ಮಾತೇ ಇಲ್ಲ.

ಅಮೆರಿಕಾದಲ್ಲಿ ವಲಸಿಗರೇ ಜಾಸ್ತಿ ಎಂಬುದು ನಿಮಗೆ ಗೊತ್ತು. ಯಾರೇ ಇರಲಿ, ಅಲ್ಲಿನ ಗಾಳಿ ಅವರಿಗೆಲ್ಲ ಇದನ್ನು ಕಲಿಸಿ ಬಿಡುತ್ತದೆ. ಇದೊಂದು ಬಹಳ ಒಳ್ಳೆಯ ಸಾಮಾಜಿಕ ರೂಢಿ. ಇದು ಅಭ್ಯಾಸವಾದರೆ ಇದನ್ನು ಅನ್ ಲರ್ನ್ ಮಾಡುವುದು ಬಹಳ
ಕಷ್ಟ. ಇದನ್ನು ಅಲ್ಲಿ ಸಲ್ಲಬೇಕೆಂದರೆ ಪಾಲಿಸಲೇ ಬೇಕು, ಪಾಲಿಸಿಯೇ ಇರುತ್ತಾರೆ. ಆದರೆ ಇದಕ್ಕೊಂದು ಅಪವಾದವಿದೆ. ಇಬ್ಬರು ಭಾರತೀಯರೇ ಎದುರು ಬದುರು ಬಂದರೆ ಈ ಮಾತನಾಡಿಸುವ ಸಾಮಾಜಿಕ ಸೌಜನ್ಯ ಪಾಲನೆಯ ಸಾಧ್ಯತೆ ಫಿಫ್ಟಿ-ಫಿಫ್ಟಿ.

ಇನ್ನೊಬ್ಬ ಭಾರತೀಯ ಎದುರಿಗೆ ಬಂದರೆ ಅವರೇ ತೀರಾ ಭಾರತೀಯರಾಗಿಬಿಡುತ್ತಾರೆ. ಈ ರೀತಿ ತೀರಾ ವೈಯಕ್ತಿಕ ಆದರೆ ಸಮಾನಾಂತರ ಸಾಮಾಜಿಕ ಜೀವನ ನಮ್ಮಲ್ಲಿನ ಪೇಟೆಗಳಲ್ಲಿ ಸಾಮಾನ್ಯ. ನಾನು ಕಂಡಂತೆ ಈ ರೀತಿ ಐಸೋಲೇಟ್ ಆಗಿ ಬದುಕುವ ಪೇಟೆಗಳಲ್ಲಿ ಮುಂಬೈ ಬದುಕು ಮೊದಲ ಪಂಕ್ತಿಯದು. ಅಲ್ಲಿ ಸೌಜನ್ಯಕ್ಕೆ ಮಾತನಾಡುವುದು ಬಿಡಿ, ಪಕ್ಕದಲ್ಲಿಯೇ ಪೆಟ್ಟಾಗಿ ಬಿದ್ದವರನ್ನು ಕಣ್ಣೆತ್ತಿಯೂ ನೋಡದ ಅಮಾನವೀಯತೆ ಹಲವು ಬಾರಿ ಒಂದೇ ದಿನದಲ್ಲಿ ಗೋಚರಿಸುತ್ತದೆ. ಈಗಿನ ಬೆಂಗಳೂರಿನ ಬದುಕೂ ಇದೆಲ್ಲದಕ್ಕೆ ಹೊರತಾಗಿದೆ ಎಂದೆನಿಸುತ್ತಿಲ್ಲ. ಈಗೀಗ ಬೆಂಗಳೂರು ಕೂಡ ಮುಂಬೈ ಹಾದಿಯನ್ನೇ ಹಿಡಿದಿದೆ. ಇದೇಕೆ ಹೀಗೆ ಎಂದು ಪ್ರಶ್ನಿಸಿದರೆ ಪೇಟೆ ಮಂದಿ ಇದು ಬ್ಯುಸಿ ಬದುಕಿನ ಒಂದು ಅಂಗ, ಇದು ಸೂಪರ್ ಫಾಸ್ಟ್ ಬದುಕಿನ ಒಂದು ಭಾಗ ಎಂದು ಸಮಜಾಯಿಷಿ ಕೊಡುತ್ತಾರೆ. ತನ್ನೆದುರಿಗಿರುವ ಇನ್ನೊಬ್ಬ ಮನುಷ್ಯನ ಇರುವಿಕೆಯನ್ನು ಗುರುತಿಸದ ಸ್ಥಿತಿ.

ಅಮೆರಿಕಾದಲ್ಲಿ ಈಗೀಗ ಅಲ್ಲಿನವರು ಭಾರತೀಯರನ್ನು ಕಂಡರೆ ನಮಸ್ತೆ ಎಂದು ಸಂಬೋಽಸುವುದು ಹಲವು ಬಾರಿ ಅನುಭವಕ್ಕೆ ಬರುತ್ತದೆ. ಇದು ಕೆಲವರಲ್ಲಿ ನೀವು ಭಾರತೀಯರು ಎಂದು ಅವರು ಗುರುತಿಸುವುದು ಎನ್ನುವ ಅನಿಸಿಕೆಯಿದೆ. ಆದರೆ ಅಸಲಿಗೆ ನಮಸ್ತೆ ಎನ್ನುವುದರ ಗೂಢಾರ್ಥ ಯೋಗ ಮೊದಲಾದವುಗಳ ಟ್ರೆಂಡ್ ಅಲ್ಲಿ ಹೆಚ್ಚಿರುವುದರಿಂದ ಆದ ಬದಲಾವಣೆ ಇದು. ನಮ್ಮೆದುರಿಗಿನ ಜೀವವನ್ನು, ಆತ ನೊಳಗಿನ ದೈವತ್ವವನ್ನು ಗುರುತಿಸುವುದು. ಇದು ನಿಜವಾದ ಭಾರತೀಯತೆ. ಅದನ್ನು ಇಂದು ಪಾಶ್ಚಾತ್ಯರು, ಕಲಿತು ನಮಗೇ ಮರುಪಾಠ ಮಾಡುವಂತಾಗಿದೆ. ಒಮ್ಮೆ ಅಮೆರಿಕನ್ ಸ್ನೇಹಿತ ಡೇನಿಯಲ್ ಗೋಲ್ಡ್ ಸ್ಟೈನ್ ನನಗೆ ನಮಸ್ತೆ ಎನ್ನುವ ನಮ್ಮ ಒಂದು ಶಬ್ದದ ವಿವರವನ್ನು ಸುಮಾರು ಅರ್ಧಗಂಟೆ ಪಾಠ ಒಪ್ಪಿಸಿದಂತೆ ವಿವರಿಸಿದ್ದ. ಆತ ಹೇಳಿದ ಕೆಲ ವಿಚಾರ ನನಗೂ ಹೊಸತಾಗಿತ್ತು.

ಆತ ವಾರಣಾಸಿ ಮೊದಲಾದ ಟೂರಿಸ್ಟ್ ಜಾಗಕ್ಕೆ ಹೋದಾಗ ಆತನನ್ನು ನಮಸ್ತೆ ಎಂದು ವಿಶ್ ಮಾಡುವುದನ್ನು ಕೊಂಡಾಡಿದ್ದ. ಆದರೆ ಇಲ್ಲಿ ಅಸಲಿಯತ್ತು ಬೇರೆಯದೇ ಇದೆ ಎಂದು ಹೇಳಲು ನನಗೆ ಮನಸ್ಸಾಗಲಿಲ್ಲ. ಅಸಲಿಗೆ ಭಾರತೀಯರೇ ಇಬ್ಬರು ಸಂಧಿಸಿ ದಲ್ಲಿ ಈ ರೀತಿ, ಇಡೀ ಭಾವವನ್ನಿಟ್ಟು ನಮಸ್ತೆ ಎನ್ನುವುದು ಈಗೀಗ ಕಡಿಮೆಯಾಗುತ್ತಿದೆ ಎನ್ನುವುದನ್ನು ಹೇಳಲು ನನಗೆ ಹಿಂಜರಿಕೆಯಾಯಿತು. ಅದೇಕೋ ನಾವು ಇದೆಲ್ಲ ಇಟ್ಟುಕೊಂಡು ಎಲ್ಲವನ್ನೂ ಮರೆತಂತಿದೆ. ಹಾಗಂತ ಎಲ್ಲ ಕಡೆ ಹೀಗೆಂದೇನೂ ಅಲ್ಲ.

ಹಳ್ಳಿಗಳಲ್ಲಿ ಈ ರೀತಿ ಅಜ್ಞಾತರನ್ನು ಮಾತನಾಡಿಸುವ ಪರಿಪಾಠ ಇನ್ನೂ ಉಳಿದುಕೊಂಡಿದೆ. ನಮ್ಮೂರ ಕಡೆ ಎದುರಿಗೆ ಬಂದವರು ಪರಿಚಯವಿರಲಿ, ಇಲ್ಲದಿರಲಿ ಹೊಯ್ ಎಂದು ಹೇಳದೆ ಜನ ಮುಂದಕ್ಕೆ ಹೋಗುವುದಿಲ್ಲ. ಆದರೆ ಪೇಟೆ ಸೇರಿದರೆ
ಅದೆಲ್ಲ ಮಾಯವಾಗಿಬಿಡುತ್ತದೆ. ನಿರ್ಜನ ರಸ್ತೆಯಲ್ಲಿ ಎದುರು ಬದುರು ಬಂದರೆ ಪೇಟೆಯಲ್ಲಿ ಅಲ್ಲೊಬ್ಬ ಜೀವ, ವ್ಯಕ್ತಿ ಹೋಗು ತ್ತಿದ್ದಾನೆ ಎನ್ನುವುದನ್ನೇ ಗುರುತಿಸುವುದಿಲ್ಲ. ನಿಜ ಹೇಳಬೇಕೆಂದರೆ ಈ ರೀತಿ ಇಗ್ನೋರ್ ಮಾಡಿ ನಡೆಯುವುದೇ ಕಷ್ಟದ್ದು. ಆ ರೀತಿ ನೋಡಿಯೂ ನೋಡದಂತೆ ಇರುವುದು ಒಂದು ಹಿಡಿ ಹಿಂಸೆಯನ್ನು ಇಬ್ಬರಲ್ಲಿಯೂ ಹುಟ್ಟುಹಾಕದೆ ಹೋಗುವುದಿಲ್ಲ. ಆದರೂ ಇದು ಇಂದಿನ ನಮ್ಮ ಪೇಟೆಯ ರೂಢಿಯಾಗಿದೆ.

ಯಾರಾದರೂ ಅದನ್ನು ಮೀರಿ ನಮಸ್ಕಾರ ಎಂದರೆ ಅವರನ್ನೇ ವಿಚಿತ್ರವಾಗಿ, ಇಲ್ಲಿನ ಪೇಟೆಯ ಜೀವನಕ್ಕೆ ಹೊಂದಿಕೊಳ್ಳದ ಪರಕೀಯರಂತೆ ನೋಡುತ್ತೇವೆ. ಏಕೆಂದರೆ ಇದು ಪೇಟೆಯ ಶಿಷ್ಟಾಚಾರಕ್ಕೆ ವಿರುದ್ಧವಾದದ್ದು. ನಾವು ನಿತ್ಯ ಸಂಧಿಸುವ, ಅದೇ ಬಸ್ ಸ್ಟಾಪಿನಲ್ಲಿ ಪ್ರತಿದಿನ ಸಿಗುವ, ಅದೇ ಮೆಟ್ರೋದಲ್ಲಿ ಒಟ್ಟಿಗೇ ಓಡಾಡುವ ಅದೆಷ್ಟೋ ಮುಖಗಳು ಕೇವಲ ಮುಖ ಪರಿಚಯ ವಾಗಿಯೇ ಉಳಿದು ಬಿಡುತ್ತದೆ. ಕಾಣುತ್ತ ಇರುವವರೆಗೆ ಅವರ ಇರುವಿಕೆ ಅಜ್ಞಾತದಲ್ಲಿಯೇ ಅನುಭವಿಸುತ್ತಿರುತ್ತೇವೆಯೇ ವಿನಃ
ಸಂಬಂಧ ಮಾತಿಗೆ ಏರುವುದೇ ಇಲ್ಲ. ಒಂದು ವೇಳೆ ಅವರು ಒಂದು ದಿನ ಅಥವಾ ವಾರ ಬರದಿದ್ದರೆ ಅದು ನಮ್ಮ ಗ್ರಹಿಕೆಗೆ
ಬಂದಿರುತ್ತದೆ. ಒಂದು ವೇಳೆ ಒಂದಿಷ್ಟು ದಿನ ಬಿಟ್ಟು ಅವರು ಮತ್ತೆ ಕಂಡರೆ ಅವ್ಯಕ್ತ ಸಮಾಧಾನವೂ ನಮಗಾಗುತ್ತದೆ.

ಆದರೆ ಅದನ್ನು ನಾವು ಗುರುತಿಸುವುದಿಲ್ಲ, ಬಾಹ್ಯದಲ್ಲಿ ಒಪ್ಪುವುದಿಲ್ಲ. ಒಳಗೆ ಅದುಮಿಕೊಂಡಿರುವ, ಅಜ್ಞಾತವಾಗಿಯೇ
ಉಳಿಸಿಕೊಳ್ಳುವ ಸಂಬಂಧಗಳು ಅವು. ಈ ಹಿಂಜರಿಕೆ, ಒಂದು ನಾಚಿಕೆ ಅಥವಾ ಅದುವೇ ಶಿಷ್ಟಾಚಾರ, ಹಾಗೆಯೇ ಪೇಟೆಯಲ್ಲಿ ಬದುಕಬೇಕು ಎನ್ನುವ ನಮ್ಮ ಗಟ್ಟಿ ನಂಬಿಕೆಯನ್ನು ನಾವು ಯಾವತ್ತೂ ಪ್ರಶ್ನಿಸುವುದೇ ಇಲ್ಲವಲ್ಲ. ಅದೇಕೆ? ನಾನೇನು ಕಂಡ ಕಂಡವರನ್ನು ಡೆಸ್ಪರೇಟ್ ಆಗಿ ಮಾತನಾಡಿಸಬೇಕು ಎಂದೇನೂ ಹೇಳುವುದಿಲ್ಲ. ಆದರೆ ಒಂದು ಸೌಜನ್ಯದ ಹಲೋ, ನಮಸ್ತೆ, ಹೇಗಿದ್ದೀರಿ, ನಿಮ್ಮ ಹೆಸರು ಏನು ಈ ಎಲ್ಲ ಸ್ಮಾಲ್ ಟಾಕ್ ಮಾಡುವುದಿಲ್ಲ ಏಕೆ? ಈ ಕಾರಣದಿಂದಾಗಿ ಪೇಟೆಯಲ್ಲಿನ ಬದುಕು ಸಂತೆಯಲ್ಲಿ ಒಬ್ಬಂಟಿಯಾದ ಭಾವವನ್ನು ನಮಗೆ ಕೊಡುತ್ತದೆ.

ಅದು ನಾವು ಬಯಸಿದ್ದಲ್ಲ, ಆದರೆ ನಮ್ಮದೊಂದು ಸಾಮಾಜಿಕ ರೂಢಿಯಿಂದ ನಾವೇ ಮಾಡಿಕೊಂಡ ಒಂದಿಷ್ಟು ಬೌಂಡರಿಗಳು. ಅದನ್ನು ಯಾರೇ ಮೀರಿದರೆ ಅವನಿಗೇನೋ ಬೇಕಾಗಿದೆ, ಅವನ ಅವಶ್ಯಕತೆ ಬೇರೆಯದೇ ಇದೆ, ಆತ ಇನ್ಶೂರೆನ್ಸ್ ಏಜೆಂಟ್ ಇರಬಹುದು ಇತ್ಯಾದಿಯಾಗಿ ಅನುಮಾನಿಸುವುದೇ ಜಾಸ್ತಿ. ಈ ರೀತಿಯ ಅಜ್ಞಾತ ವ್ಯಕ್ತಿಗಳ ಜೊತೆಗಿನ ಚಿಕ್ಕ ಮಾತುಕತೆ ರೂಢಿಸಿ ಕೊಳ್ಳಬೇಕು ಎನ್ನುವುದು ನನ್ನ ಗಟ್ಟಿ ನಂಬಿಕೆ. ಇದರಿಂದ ನಮಗೆಲ್ಲರಿಗೆ ಸಾಮೂಹಿಕವಾಗಿ ಒಂದೇ ಎನ್ನುವ ಭಾವ ಬೆಳೆಸಿ ಕೊಳ್ಳಲು ಸಾಧ್ಯವಾಗುತ್ತದೆ.

ಇಂದಿನ ಪೇಟೆಯ ಬದುಕಿನಲ್ಲಿ sense of community and belonging ನಾನು ಕಂಡಂತೆ ತೀರಾ ಕಡಿಮೆಯಾಗುತ್ತಿದೆ. ಇಂದು ಈ ಏಕ ಭಾವ ನಮ್ಮೆಲ್ಲರ ಅವಶ್ಯಕತೆ. ಒಂದು ಚಿಕ್ಕ ನಗು, ಒಂದೆರಡು ಕುಶಲ ವಿಚಾರಿಸುವ ಮಾತು ಇಬ್ಬರಲ್ಲಿಯೂ ಒಂದಿಷ್ಟು ನಿರಾಳತೆ ಹುಟ್ಟಿ ಹಾಕುತ್ತದೆ. ಇದನ್ನು ಎಲ್ಲರೂ ಮಾಡಿದರೆ ಎಷ್ಟು ಚೆನ್ನಾಗಿರುತ್ತದೆ ಎನ್ನುವುದು ನನಗೆ ಅಮೆರಿಕಾದಲ್ಲಿ ಸಿಕ್ಕ ಅನುಭವ.

ಈ ರೀತಿ ಅಪರಚಿತರನ್ನು ಮಾತನಾಡಿಸುವುದು ಸುಲಭದ ಕೆಲಸವಲ್ಲ. ಮನುಷ್ಯ ಸ್ವಾಭಾವಿಕವಾಗಿ ಇಂತಹ ವಿಚಾರಗಳಲ್ಲಿ
ತಟಸ್ಥ. ಆದರೆ ಮನುಷ್ಯ ಸಹಜವಾಗಿ ಸಾಮಾಜಿಕ ಜೀವಿ. ಸಾಮಾಜಿಕ ಭಾವ ಮನುಷ್ಯನಲ್ಲಿದ್ದಷ್ಟು ಇನ್ನೊಂದು ಜೀವಿಯಲ್ಲಿಲ್ಲ. ಅದುವೇ ನಮ್ಮನ್ನು ಅನ್ಯ ಪ್ರಾಣಿಗಳಿಂದ ಪ್ರತ್ಯೇಕಿಸಿದ್ದು, ಇಲ್ಲಿಯವರೆಗೆ ತಂದು ನಿಲ್ಲಿಸಿದ್ದು. ಆದರೆ ಅದೆಲ್ಲದಕ್ಕೆ ಕಾರಣವಾದ ಮೂಲ ಕಾರಣವನ್ನೇ ಇಂದು ನಾವು ಬಿಟ್ಟು ಮುನ್ನಡೆಯುತ್ತಿದ್ದೇವೆ. ಆ ಕಾರಣಕ್ಕೆ ನಮಗೆ ಬದುಕಿನಲ್ಲಿ ಏನೋ ಒಂದು ಮಿಸ್ ಹೊಡೆಯುತ್ತಿದೆ ಅನ್ನಿಸುವುದು. ನಾವು ಎದುರಿಗಿನ ಮನೆಯ, ಅಪಾರ್ಟ್ಮೆಂಟಿನ ವ್ಯಕ್ತಿಯನ್ನು ಅದೆಷ್ಟೋ ವರ್ಷ ನೋಡು ತ್ತಿದ್ದರೂ ಮಾತನಾಡಿಸುವುದೇ ಇಲ್ಲ.

ಅದೇ ರೀತಿ ಅಲ್ಲೆಲ್ಲಿಯೋ ಸಿಕ್ಕ ಒಬ್ಬ ಅಜ್ಞಾತನನ್ನು ಮಾತನಾಡಿಸಿ ಏನಾಗಬೇಕಿದೆ ಎಂದು ಬಿಗುವಾಗಿ ಬದುಕುತ್ತೇವೆ. ಆದರೆ ಪ್ರತಿಯೊಬ್ಬರೂ ಬಯಸುವುದು ಮಾತ್ರ ಅದನ್ನೇ. ಎಲ್ಲರಿಗೂ ತಾನು ಸಮಾಜದಲ್ಲಿ ಸಲ್ಲಬೇಕು, ತನ್ನ ಇರುವಿಕೆಯನ್ನು ಉಳಿದ ವರು ಗುರುತಿಸಬೇಕು. ಇದೇನು ಹಪಾಹಪಿಯಲ್ಲ, ಇದು ತೀರಾ ಮನುಷ್ಯನ ಅವಶ್ಯಕತೆ, ಸಹಜ. ಆದರೆ ಅದೇಕೋ ನಮ್ಮಲ್ಲಿ ಒಂದು ನಾಚಿಕೆ, ನಾವೇ ಕಟ್ಟಿಕೊಂಡ ವ್ಯವಸ್ಥೆ ಅಡ್ಡಬರುತ್ತದೆ.

ಅಪರಿಚಿತರನ್ನು ಮಾತನಾಡಿಸುವಾಗ ಒಂದನ್ನು ಗಮನ ದಲ್ಲಿರಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಜಗತ್ತು, ನೌಕರಿ, ಕುಟುಂಬ, ಕಾಯಿಲೆ, ಕಿರಿಕಿರಿ, ತಾಪತ್ರಯ ಇವೆಲ್ಲ ಇರುತ್ತದೆ. ಹಾಗಾಗಿ ಈ ಮಾತುಕತೆಗಳು ತೀರಾ ವೈಯಕ್ತಿಕ ಹಂತಕ್ಕೆ ಹೋಗಬೇಕಾಗಿಲ್ಲ, ಅದು ಅನಿವಾರ್ಯವಲ್ಲ. ಹಂತ ಮೀರಿದರೆ ಇಬ್ಬರಿಗೂ ರಗಳೆಯೆನಿಸುತ್ತದೆ. ಒಬ್ಬರನ್ನು ಪರಿಚಯದ ವರ್ತುಲಕ್ಕೆ ತರುವುದು ಒಂದು ಕಲೆ. ಹಗ್ಗದ ಮೇಲೆ ನಡೆದಂತೆ, ಒಮ್ಮೆ ಕಲಿತರೆ ಆಮೇಲೆ ಸುಲಭ. ಅದನ್ನು ಹೀಗೆಯೇ ಮಾಡಿ ಎಂದು ಸಿದ್ಧ ಸೂತ್ರಗಳನ್ನು ನಾನು ಉಪದೇಶ ಮಾಡುವುದಿಲ್ಲ.

ಇದಕ್ಕೆ ಒಂದು ಚಿಕ್ಕ ಸಾತ್ವಿಕ ಪ್ರಯತ್ನಬೇಕು. ಇದು ಕ್ರಮೇಣ ಬಹಳ ಖುಷಿ ಕೊಡಲು ಶುರುವಾಗುತ್ತದೆ, ಅನ್ಯ ಲಾಭಗಳಿಗೆ ದಾರಿಯಾಗುತ್ತದೆ, ಒಂದಿಷ್ಟು ಸಮಾಧಾನ, ನಾವೆಲ್ಲ ಈ ಸಮಾಜಕ್ಕೆ, ವ್ಯವಸ್ಥೆಗೆ ಸೇರಿದವರೆಂಬ ಭಾವನೆಯನ್ನು ಹುಟ್ಟು ಹಾಕುತ್ತದೆ, ನಿತ್ಯವೂ ಚಂದವೆನಿಸುತ್ತದೆ. ಇದು ತಕ್ಷಣ ಅನುಭವಕ್ಕೆ ಬರುತ್ತದೆ. ಅಲ್ಲದೆ ನಮ್ಮಲ್ಲಿ ನಾವೇ ಗುರುತಿಸದ ಐಡೆಂಟಿಟಿ ಕ್ರೈಸಿಸ್ ಕ್ರಮೇಣ ನಶಿಸುತ್ತದೆ.

ಬದುಕಿನ ಪೂರ್ಣತೆಯ ಅನುಭವವಾಗುವುದೇ ಅಪರಿಚಿತರನ್ನು ಮಾತನಾಡಿಸಿದಾಗ, ಒಂದು ಸ್ಮೈಲ್ ಕೊಟ್ಟಾಗ, ನಮಸ್ತೆ
ಎಂದಾಗ, ಉಳಿದ ಮನುಷ್ಯ ಜೀವಗಳನ್ನು ಗುರುತಿಸಿದಾಗ, ಅವರ ಬಗ್ಗೆ ಒಂದಿಷ್ಟು ಸಹಾನುಭೂತಿ ಬೆಳೆಸಿಕೊಂಡಾಗ.
ಇಲ್ಲದಿದ್ದರೆ ನಾವು ಹುಟ್ಟಿದ್ದು, ಬದುಕಿದ್ದು, ಸತ್ತದ್ದು ಯಾರಿಗೂ ಗೊತ್ತೇ ಆಗುವುದಿಲ್ಲ. Cheers to the life.