ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಕರೋನಾ ಕಾಲದಲ್ಲಿ ಏನು ಮಾಡಿದರೂ ಅದಕ್ಕೊಂದು ಪ್ರತಿವಾದ ಇರುತ್ತದೆ. ಲಾಕ್ಡೌನ್ ಮಾಡಿದರೆ, ಮಾಡಬೇಡಿ ಎನ್ನುವ ವರು, ಮಾಡದಿದ್ದರೆ, ಲಾಕ್ ಡೌನ್ ಮಾಡಿ ಎನ್ನುವ ಗುಂಪಿನ ಹೋರಾಟ ಇದ್ದೇ ಇರುತ್ತದೆ. ಇದಕ್ಕೆ ಈಗ ಪರೀಕ್ಷೆ ಬೇಕು ಬೇಡ ಎನ್ನುವ ಗುಂಪಿನ ನಡುವಿನ ಹೋರಾಟವೂ ಶುರುವಾಗಿದೆ.
ಎರಡು ಬದಿಯಿಂದ ಕೇಳಿ ಬರುವ ವಾದವನ್ನು ಕೇಳಿಸಿಕೊಂಡಾಗ ಇಬ್ಬರದ್ದು ಸರಿಯಾಗಿಯೇ ಇದೆ ಎನಿಸು ತ್ತದೆ. ಆದರೆ ಕರೋನಾ ಸಾಂಕ್ರಾಮಿಕದ ನಡುವೆ ‘ಬೇಕು – ಬೇಡ’ಗಳ ನಡುವೆ ಮೂರನೇ ಮಾರ್ಗ ಕಂಡು ಹಿಡಿಯಬೇಕಿತ್ತು. ಈಗಾಗಲೇ ಕೇಂದ್ರ ಸರಕಾರ ಸಿಬಿಎಸ್ಸಿ ಪರೀಕ್ಷೆಯನ್ನು ಹಾಗೂ ಕರ್ನಾಟಕ ಸರಕಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಿದ ಬಳಿಕವೂ ಇನ್ಯಾವ ಮಾರ್ಗ ಎನ್ನುವ ಪ್ರಶ್ನೆ ಅನೇಕರಿಗೆ ಬರಬಹುದು. ಆದರೆ ರಾಜ್ಯ ಸರಕಾರ ದ್ವಿತೀಯ ಪಿಯುಸಿ ವಿಚಾರದಲ್ಲಿ ತಗೆದು ಕೊಂಡಿರುವ ನಿಲುವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಾನೇಕೆ ಈ ಬಗ್ಗೆ ಹೇಳುತ್ತಿದ್ದೇನೆ ಎನ್ನುವುದು ಅರ್ಥವಾಗಬಹುದು.
ಪರೀಕ್ಷೆ ರದ್ದು ಮಾಡಿ ಫಲಿತಾಂಶ ಘೋಷಣೆ ಎನ್ನುವುದು ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಾವೆಲ್ಲ ಕೇಳುತ್ತಿರುವುದು. ಕಳೆದ ವರ್ಷ ಕರೋನಾ ಸಮಯದಲ್ಲಿಯೂ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ಪರೀಕ್ಷೆಯನ್ನು ನಡೆಸಿದ್ದವು. ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ನಡೆಸಿದ್ದರಿಂದ, ಮತ್ತೊಮ್ಮೆ ಇದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಎಸ್ಎಸ್ಎಲ್ಸಿ ನಡೆಸುವ ಉತ್ಸಾಹದಲ್ಲಿಯೇ ಸುರೇಶ್ ಕುಮಾರ್ ಇದ್ದರು. ಆದರೆ ಕೇಂದ್ರ ಸರಕಾರ 12ನೇ ತರಗತಿ ರದ್ದುಪಡಿಸು ತ್ತಿದ್ದಂತೆ, ಇಲ್ಲಿಯೂ ಅದೇ ರೀತಿ ಮಾಡಿ ಎನ್ನುವ ಒತ್ತಡ ಶುರುವಾಯಿತು.
ಒತ್ತಡಕ್ಕೆ ಮಣಿದು ದ್ವಿತೀಯ ಪಿಯುಸಿ ರದ್ದು ಮಾಡಿದರೂ, 10ನೇ ತರಗತಿ ಪರೀಕ್ಷೆಯನ್ನು ನಡೆಸುತ್ತೇವೆ ಎನ್ನುವ ಮಾತು ವಿವಾದಕ್ಕೆ ಕಾರಣವಾಗಿದ್ದು ಎಂದರೆ ಸುಳ್ಳಲ್ಲ. ಆದರೆ ಸರಕಾರ ಕೇವಲ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನೀಡುತ್ತಿರುವ ಕಾರಣಗಳನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಮೊದಲನೆಯದ್ದಾಗಿ, ಪಿಯುಸಿ ಪರೀಕ್ಷೆಯಾದ ಬಳಿಕ ಎಸ್ಎಸ್ಎಲ್ಸಿ ಅಂದರೆ ಜುಲೈನಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದರಿಂದ, ಆ ವೇಳೆಗೆ ಎರಡನೇ ಅಲೆ ತಗ್ಗಿರುತ್ತದೆ.
ಇದರಿಂದಾಗಿ ಪರೀಕ್ಷೆಯನ್ನು ಕಳೆದ ಬಾರಿ ಯಂತೆಯೇ ನಡೆಸಬಹುದು. ಎರಡನೇ ಕಾರಣವೆಂದರೆ, ದ್ವಿತೀಯ ಪಿಯುಸಿ ಮಕ್ಕಳಿಗೆ ನೀಡುವ ಗ್ರೇಡ್ ಅಥವಾ ಅಂಕವನ್ನು ಎಸ್ಎಸ್ಎಲ್ಸಿ ಅಥವಾ ಪ್ರಥಮ ಪಿಯುಸಿ ಅಂಕವನ್ನು ಆಧರಿಸಬಹುದು. ಆದರೆ ಎಸ್ಎಸ್ಎಲ್ಸಿ ಮಕ್ಕಳ ಅಂಕವನ್ನು ನೀಡಲು ಅವರು ಯಾವುದೇ ಪಬ್ಲಿಕ್ ಪರೀಕ್ಷೆಯನ್ನು ಎದುರಿಸಿರುವುದಿಲ್ಲ ಎನ್ನುವುದು.
ಕರೋನಾ ಎರಡನೇ ಅಲೆ ಇಳಿಯುತ್ತಾ ಬಂದಿದ್ದರೂ ಗ್ರಾಮೀಣ ಭಾಗದಲ್ಲಿ ಸೋಂಕಿನ ಸಂಖ್ಯೆ ಇನ್ನು ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ. ಇದರೊಂದಿಗೆ ಸೋಂಕಿತರ ಸಂಖ್ಯೆ ಇಳಿದರೂ ಸಾವಿನ ಸಂಖ್ಯೆ ಈಗಲೂ ಆತಂಕ ಹುಟ್ಟಿಸುತ್ತಿರುವುದರಿಂದ ಹಾಗೂ ಮೂರನೇ ಅಲೆಯ ಎಚ್ಚರಿಕೆಯನ್ನು ತಜ್ಞರು ನೀಡುತ್ತಿರುವು ದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸಿಬಿಎಸ್ಸಿ 12ನೇ ತರಗತಿಯ ಮಾರ್ಗದಲ್ಲಿಯೇ ರದ್ದುಪಡಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಘೋಷಣೆ ಮಾಡಿದರು. ಆದರೆ ಘೋಷಣೆ ಸಮಯದಲ್ಲಿ ನೀಡಿದ ಕೆಲವು ‘ಷರತ್ತು’ಗಳು ಇದೀಗ ವಿವಾದ ಮಾತ್ರವಲ್ಲದೇ, ಅನೇಕ ವಿದ್ಯಾರ್ಥಿ ಗಳನ್ನು ಗೊಂದಲಕ್ಕೀಡು ಮಾಡಿದೆ.
ಹೌದು, ಆರಂಭದಲ್ಲಿ ದ್ವಿತೀಯ ಪಿಯುಸಿ ರದ್ದು ಎಂದಷ್ಟೇ ಹೇಳಿದ ಅವರು, ಬಳಿಕ ಪ್ರಥಮ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಅಂಕಗಳ ಸರಾಸರಿಯಲ್ಲಿ ಅಂಕ ನೀಡಲಾಗುವುದು. ಒಂದು ವೇಳೆ ಆ ವಿದ್ಯಾರ್ಥಿಗೆ ಈ ಅಂಕ ಇಷ್ಟವಿಲ್ಲದಿದ್ದರೆ ಪರೀಕ್ಷೆ ಬರೆಯ ಬಹುದು ಎಂದರು. ಇನ್ನು ಪುನರಾವರ್ತಿಗಳಿಗೆ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ (ಇಂಡಿಪೆಂಡೆಟ್ ಅಭ್ಯರ್ಥಿ) ಈ ಕಟ್ಟುಪಾಡು ಅನ್ವಯಿಸುವುದಿಲ್ಲ. ಅವರು ಕಡ್ಡಾಯವಾಗಿ ಪರೀಕ್ಷೆ ಬರೆಯಲೇಬೇಕು. ಹಾಗಾದರೆ ಈ ಅಭ್ಯರ್ಥಿಗಳಿಗೆ ಕರೋನಾ ಸೋಂಕು ತಗಲುವುದಿಲ್ಲ ಎಂದು ಯಾರಾದರೂ ಹೇಳಿದ್ದು ಇದೆಯೇ? ರೀಪಿಟರ್ಸ್ ಹಾಗೂ ಇಂಡಿಪೆಂಡೆಟ್ ಅಭ್ಯರ್ಥಿಗಳಿಗೆ ಗ್ರೇಡ್ ಕೊಡು ವುದಕ್ಕೆ ತಾಂತ್ರಿಕವಾಗಿ ಕೆಲ ಸಮಸ್ಯೆಗಳಿವೆ ಎನ್ನುವುದನ್ನು ಒಪ್ಪಬೇಕು.
ಏಕೆಂದರೆ ಈಗಾಗಲೇ ಒಮ್ಮೆ ಅನುರ್ತೀಣಗೊಂಡಿರುತ್ತಾರೆ. ಆದರೆ ಎಸ್ಎಸ್ಎಲ್ಸಿ ಅಂಕದ ಆಧಾರದಲ್ಲಿ ಗ್ರೇಡ್ ನೀಡುವು ದಾದರೆ ರೀಪಿಟರ್ಸ್ ಅಂಕಗಳನ್ನು ಪರಿಗಣಿಸಬಹುದಲ್ಲವೇ? ಇನ್ನು ಪಿಯು ಇಲಾಖೆ ನೀಡುವ ಅಂಕಪಟ್ಟಿ ಒಪ್ಪಿತವಾಗದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗವಹಿಸಬಹುದು ಎನ್ನುವ ಅವಕಾಶ ವನ್ನು ನೀಡಲಾಗಿದೆ. ಆದರೆ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ಪರೀಕ್ಷೆ ನಡೆಸುವುದು ಯಾವಾಗ? ಅವರಿಗೆ ಫಲಿತಾಂಶ ನೀಡುವುದು ಯಾವಾಗ ಅವರು ತಮ್ಮಿಷ್ಟದ ಪದವಿಗೆ ಸೇರುವುದು ಯಾವಾಗ? ಒಟ್ಟಾರೆ ಶೈಕ್ಷಣಿಕ ವರ್ಷವೇ ಬುಡಮೇಲು ಮಾಡಿದರೆ, ಭವಿಷ್ಯದಲ್ಲಿ ಎಲ್ಲವೂ ಸಮಸ್ಯೆ ಯಾಗುವು ದಿಲ್ಲವೇ? ಈ ಎಲ್ಲ ಸಮಸ್ಯೆಗಳ ನಡುವೆ ಪರೀಕ್ಷೆ ನಡೆಸಬೇಕಿತ್ತೇ ಎನ್ನುವ ಪ್ರಶ್ನೆಗೆ ಈಗಲೂ ಪರ – ವಿರೋಧ ಚರ್ಚೆಗಳು ನಡೆಯು ತ್ತಲೇ ಇದೆ.
ಕೆಲ ತಜ್ಞರ ಪ್ರಕಾರ ದ್ವಿತೀಯ ಪಿಯುಸಿ ಪರೀಕ್ಷೆಯ ಮಟ್ಟಿಗಾದರೂ ಶಿಕ್ಷಣ ಇಲಾಖೆ ಆನ್ ಲೈನ್ ಪರೀಕ್ಷೆ ಎನ್ನುವ ಯೋಜನೆ ಯನ್ನು ಆರು ತಿಂಗಳ ಹಿಂದೆಯೇ ಯೋಚಿಸಿದ್ದರೆ, ಸಾಧ್ಯವಾಗುತ್ತಿತ್ತೇನೋ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಈಗಾಗಲೇ ಹಲವು ಎಂಜಿನಿಯರಿಂಗ್ ಕಾಲೇಜುಗಳು ಆನ್ಲೈನ್ ಪರೀಕ್ಷೆ ನಡೆಸಿರುವ ಅನುಭವ ಹೊಂದಿರುವುದರಿಂದ ಅದನ್ನೇ ಬಳಸಿಕೊಂಡು ಪರೀಕ್ಷೆ ಮಾಡಬಹುದಾಗಿತ್ತು. (ಎಲ್ಲ ತಂತ್ರಜ್ಞಾನ ಮೀರಿ ಕಾಪಿ ಹೊಡೆಯುವವರಿಗೆ ಏನು ಮಾಡಲು ಸಾಧ್ಯವಿಲ್ಲ.)
ದ್ವಿತೀಯ ಪಿಯುಸಿ ಅಂಕದ ಬಗ್ಗೆ ಮತ್ತೊಂದು ತಕರಾರು ಇದೆ. ಅದೇನೇಂದರೆ ಈಗೇನೋ ಪರೀಕ್ಷೆ ರದ್ದು ಮಾಡಿರುವುದರಿಂದ ಕರ್ನಾಟಕದ ಮಟ್ಟಿಗೆ ಸಿಇಟಿ ಅಂಕದ ಆಧಾರದಲ್ಲಿಯೇ ಸಿಇಟಿ ರ್ಯಾಂಕಿಂಗ್ ಪ್ರಕಟಿಸಿ, ಎಂಜಿನಿಯರಿಂಗ್, ಮೆಡಿಕಲ್ಗೆ ಪ್ರವೇಶಾತಿ ನೀಡಲಾಗುವುದು. ಆದರೆ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯದಲ್ಲಿ ದ್ವಿತೀಯ ಪಿಯುಸಿ ಅಂಕದ ಮಾನದಂಡ ಬಂದಾಗ ಇದನ್ನು ಯಾವ ರೀತಿ ನಿಭಾಯಿಸುತ್ತೀರಾ? ಕೋವಿಡ್ ಬ್ಯಾಚ್ ಎಂದು ಇವರಿಗೆ ವಿನಾಯಿತಿ ನೀಡುವುದರಿಂದ ಇತರ ಅಭ್ಯರ್ಥಿಗಳಿಗೆ ಅನ್ಯಾಯವಾಗುವು ದಿಲ್ಲವೇ? ಈ ಎಲ್ಲ ಸಮಸ್ಯೆಯಿರುವುದರಿಂದಲೇ ಅನೇಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಕೊಠಡಿ 10 ವಿದ್ಯಾರ್ಥಿಗಳನ್ನು ಕೂರಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಮಾಡುವುದು ಕಾರ್ಯಸಾಧು ಎನ್ನುವುದು ಶಿಕ್ಷಣ ಇಲಾಖೆಯ ವಾದ ಎನ್ನುವುದಾದರೆ, ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸ ಬಹುದಲ್ಲವೇ? ಇನ್ನು ಪಿಯು ರಿಪೀಟರ್ಸ್ ಗಳಿಗೆ ಪರೀಕ್ಷೆ ನಡೆಸುವಾಗಲೇ, ಈ ರೆಗ್ಯುಲರ್ ವಿದ್ಯಾರ್ಥಿಗಳಿಗೂ ಇದೇ ರೀತಿಯ ಅವಕಾಶ ನೀಡಬಹುದಾಗಿತ್ತಲ್ಲವೇ ಎನ್ನುವುದು ಪ್ರಶ್ನೆಗೆ ಉತ್ತರವಿಲ್ಲ.
ಪಿಯುಸಿಯದ್ದು ಈ ಸಮಸ್ಯೆಯಾದರೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುತ್ತಿರುವುದು ಮತ್ತೊಂದು ಸಮಸ್ಯೆಯಾಗುತ್ತದೆ. ಪ್ರಮುಖವಾಗಿ ಜುಲೈ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದು ಸಚಿವರು ಹೇಳಿದ್ದಾರೆ (ಅದು ಎರಡನೇ ಅಲೆ ನಿಯಂತ್ರಣದಲ್ಲಿದ್ದರೆ ಮಾತ್ರ). ಎರಡು ದಿನದಲ್ಲಿ ಪರೀಕ್ಷೆ ನಡೆಸಿದರೂ, ಒಂದು ದಿನ ಭಾಷಾ ವಿಷಯ ಹಾಗೂ ಇನ್ನೊಂದು ದಿನ ಕೋರ್ ವಿಷಯ ಎಂದರೂ ಈ ಪ್ರಕ್ರಿಯೆ ಆರಂಭಗೊಂಡು, ಮುಗಿಯುವುದಕ್ಕೆ ಕನಿಷ್ಠ 15 ರಿಂದ 20 ದಿನ ಅಗತ್ಯವಿರುತ್ತದೆ.
ಅಂದರೆ ಆಗಸ್ಟ್ ಎರಡನೇ ವಾರದಲ್ಲಿ ಫಲಿತಾಂಶ ಬರುತ್ತದೆ. ಬಳಿಕ ಪ್ರವೇಶ ಪ್ರಕ್ರಿಯೆ ಆರಂಭಗೊಂಡು ಶೈಕ್ಷಣಿಕ ವರ್ಷ ಆರಂಭ ವಾಗುವುದು ಯಾವಾಗ? ಆದರೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಆಗುವ ಸಮಸ್ಯೆಯ ಬಗ್ಗೆಯೂ ಪರಾಮರ್ಶೆ ನಡೆಸಬೇಕಿದೆ. ಆದರೆ ಸುರೇಶ್ಕುಮಾರ್ ಅವರು ಈ ಬಾರಿ ಎಸ್ಎಸ್ ಎಲ್ಸಿ ಪರೀಕ್ಷೆ ಬರೆದ ಎಲ್ಲರೂ ಪಾಸ್ ಎನ್ನುವ ಮಾತನ್ನು ಹೇಳಿರುವುದು ಇದೀಗ ಪದವಿಪೂರ್ವ ಶಿಕ್ಷಣ ಇಲಾಖೆ ಮೇಲೆ ಒತ್ತಡ ಬೀಳುವುದರಲ್ಲಿ ಅನುಮಾನವಿಲ್ಲ.
ಏಕೆಂದರೆ ಪ್ರತಿವರ್ಷ ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ, ಅದರಲ್ಲಿ ಕನಿಷ್ಠ ಎರಡರಿಂದ ಮೂರು ಲಕ್ಷ ವಿದ್ಯಾರ್ಥಿ ಗಳು ಅನುತೀರ್ಣವಾಗುತ್ತಿದ್ದರು. ಯಾವ ಕಾರಣಕ್ಕೆ ಫೇಲ್ ಆಗುತ್ತಿದ್ದರು ಎನ್ನುವುದು ಬೇರೆ. ಆದರೆ ಈಗ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್ ಆದರೆ ಎಲ್ಲರೂ ಪದವಿ ಪೂರ್ವ ಕಾಲೇಜು ಸೇರುವುದು ಖಚಿತ. ಆದರೆ ಎಲ್ಲರನ್ನು ಸೇರಿಸಿಕೊಳ್ಳುವಷ್ಟು ಶಕ್ತಿ ರಾಜ್ಯ ದಲ್ಲಿರುವ ಪಿಯು ಕಾಲೇಜುಗಳಿಗೆ ಇಲ್ಲ. ಈಗ ಎಲ್ಲ ವಿದ್ಯಾರ್ಥಿಗಳಿಗೆ ಸೀಟು ನೀಡಬೇಕು ಎಂದರೆ, ಒಂದು ಇರುವ ಕಾಲೇಜುಗಳ ಸೀಟಿನ ಪ್ರಮಾಣವನ್ನು ಹೆಚ್ಚಿಸಬೇಕು ಇಲ್ಲವೇ, ಹೊಸದಾಗಿ ಕಾಲೇಜುಗಳನ್ನು ಆರಂಭಿಸಬೇಕು.
ಹೊಸದಾಗಿ ಕಾಲೇಜು ಆರಂಭಿಸಿದರೆ, ಭವಿಷ್ಯದಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ, ಈ ಕಾಲೇಜುಗಳ ಗತಿ ಯೇನು? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಹಾಗೆ ನೋಡಿದರೆ ಈ ರೀತಿಯ ವಿಷಯ ಪರಿಸ್ಥಿತಿ ಕಳೆದ ಐದಾರು ದಶಕದಿಂದ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹೆಚ್ಚೆಂದರೆ ಪರೀಕ್ಷೆ ಸಮಯದಲ್ಲಿ ಯಾವುದೇ ಒಂದು ಭಾಗದಲ್ಲಿ ಪ್ರವಾಹ ಅಥವಾ ಯಾವುದಾದರೂ ಕಾಯಿಲೆ ಕಾಣಿಸಿಕೊಂಡಿರಬಹುದು.
ಅದನ್ನು ಬಿಟ್ಟರೆ ಇಡೀ ದೇಶವೇ ನಲುಗಿರುವ ರೋಗ ಕಾಣಿಸಿಕೊಂಡಿರಲಿಲ್ಲ. ಈ ಹಿಂದೆ ಅನೇಕ ಬಾರಿ ಸರಕಾರಗಳೇ ಅನುಕಂಪದ ಆಧಾರದಲ್ಲಿ ‘ಗ್ರೇಸ್ ಮಾರ್ಕ್ಸ್’ ನೀಡಿರುವ ಅಥವಾ ಗ್ರಾಮೀಣ ಕೃಪಾಂಕ ಎಂದು ಐದು ಅಂಕ ಹೆಚ್ಚು ನೀಡಿರುವ ಉದಾಹರಣೆ ಗಳಿವೆ. ಅದನ್ನು ಬಿಟ್ಟರೆ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ 1971ರಲ್ಲಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ರದ್ದು ಮಾಡಿರುವ ಉದಾಹರಣೆಯಿದೆ (ಆ ಪರೀಕ್ಷೆ ರದ್ದಿಗೆ ಕಾರಣ ತಿಳಿದಿಲ್ಲ). ಇದನ್ನು ಬಿಟ್ಟರೆ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಿರುವ ಯಾವುದೇ ನಿರ್ದಶನ ನಮ್ಮ ಮುಂದಿಲ್ಲ.
ಆದ್ದರಿಂದ ಅಧಿಕಾರದಲ್ಲಿರುವವರಿಗೂ, ಈ ಪರಿಸ್ಥಿತಿಯನ್ನು ಮಕ್ಕಳ ಅಂಕವನ್ನು ಯಾವ ರೀತಿ ನಿರ್ಧರಿಸಬೇಕು ಎನ್ನುವ ಗೊಂದಲದಲ್ಲಿಯೇ ಇದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರ ಈ ಕರೋನಾ ಪರಿಸ್ಥಿತಿಯಲ್ಲಿ ಪರೀಕ್ಷೆಯನ್ನು ಮುಂದೂಡದೇ ಬೇರೆ ದಾರಿಯಿಲ್ಲ ಎಂದು ರದ್ದು ಮಾಡಿದ್ದಾರೆ. ಕರೋನಾ ಸೋಂಕಿಗೆ ಮಕ್ಕಳು ತಗುಲದಿರಲಿ ಎನ್ನುವ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಕರ್ನಾಟಕ ದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಅಥವಾ ರೀಪೀಟರ್ಸ್ ಹಾಗೂ ಇಂಡಿಪೆಂಡೆಟ್ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಕರೋನಾ ಅಡ್ಡಿಯಾಗುವುದಿಲ್ಲ ಎನ್ನುವುದೇ ಸರಕಾರದ ವಾದವಾದರೆ, ಬಾಕಿ ಉಳಿದ ಮಕ್ಕಳಿಗೆ ಮಾತ್ರ ಏಕೆ ಈ ವಾದ ಅನ್ವಯಿಸುತ್ತದೆ? ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 12ನೇ ತರಗತಿ ಸಿಬಿಎಸ್ಸಿ ಪರೀಕ್ಷೆ ರದ್ದು ಮಾಡಿದ್ದನ್ನು ಫಾಲೋ ಮಾಡಬೇಕು ಎನ್ನುವ ಮಾತ್ರಕ್ಕೆ ರಾಜ್ಯ ಸರಕಾರ ಈ ತೀರ್ಮಾನ ಕೈಗೊಂಡಿ ದ್ದರೆ, ಈ ಎಲ್ಲ ಗೊಂದಲ ಗೋಜಲುಗಳ ನಡುವೆ ಶಿಕ್ಷಣ ಇಲಾಖೆ ಇದೀಗ ತನ್ನದೇಯಾದ ತೀರ್ಮಾನವನ್ನು ಕೈಗೊಂಡಿದೆ.
ಅನಿವಾರ್ಯ ಸಮಯದಲ್ಲಿ ಕೈಗೊಂಡಿರುವ ಈ ನಿರ್ಧಾರ ಕೆಲವರಿಗೆ ಅನ್ಯಾಯವಾದರೂ ಸಮೂಹದ ದೃಷ್ಟಿಯಿಂದ ಒಪ್ಪಿ ಕೊಳ್ಳಲೇಬೇಕು. ಆದರೆ ಅನ್ಯಾಯವಾಗುತ್ತದೆ ಎನ್ನುವವರಿಗೆ ನ್ಯಾಯ ಕೊಡಿಸಲು ಈಗ ಎಂಜಿನಿಯರ್ ಹಾಗೂ ಮೆಡಿಕಲ್ ಸೇರಿ ದಂತೆ ಕೆಲ ಪದವಿಗಳಿಗೆ ಇರುವ ಪ್ರವೇಶ ಪರೀಕ್ಷೆಯನ್ನು ಎಲ್ಲ ಪದವಿಗಳಿಗೂ ವಿಸ್ತರಿಸಿ ಸರಕಾರದ ವತಿಯಿಂದಲೇ ಈ ಪರೀಕ್ಷೆ ನಡೆಸಿ, ರ್ಯಾಂಕಿಂಗ್ ನೀಡುವ ಕೆಲಸ ಈ ವರ್ಷದ ಮಟ್ಟಿಗಾದರೂ ಆಗಬೇಕಿದೆ.