Friday, 13th December 2024

ನಮ್ಮ ಮಾತಿನ ವಿಷಯಗಳ ಅನುಕ್ರಮ ಬದಲಾದರೆ ಏನಾಗುತ್ತದೆ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಈ ಪ್ರಸಂಗವನ್ನು ಕಲ್ಪಿಸಿಕೊಳ್ಳಿ. ಸುಮಾರು ಇಪ್ಪತ್ತು ವರ್ಷಗಳ ನಂತರ, ನಿಮ್ಮ ಬಾಲ್ಯದ ಸ್ನೇಹಿತ ಫೋನ್ ಮಾಡುತ್ತಾನೆ. ನಿಮಗೆ
ಆಶ್ಚರ್ಯ ವಾಗುತ್ತದೆ. ನೀವಿಬ್ಬರೂ ಬಾಲ್ಯದ ದಿನಗಳಲ್ಲಿ ಆತ್ಮೀಯರಾಗಿದ್ದವರು. ಕಳೆದ ಇಪ್ಪತ್ತು ವರ್ಷಗಳಲ್ಲಿ ಇಬ್ಬರೂ ಅವರವರ ಕೆಲಸ, ಕುಟುಂಬ, ಜಂಜಾಟಗಳಲ್ಲಿ ನಿರತರಾಗಿದ್ದರಿಂದ ಸಂಪರ್ಕದಲ್ಲಿ ಇರಲಿಲ್ಲ. ಹೀಗಿರುವಾಗ ಒಂದು ದಿನ ಆ ಸ್ನೇಹಿತ ಇದ್ದಕ್ಕಿದ್ದಂತೆ ಫೋನ್ ಮಾಡಿದಾಗ ಸಂತೋಷವಾಗುವುದು ಸಹಜ. ಆತ ನಿಮ್ಮ ಹೆಂಡತಿ, ಮಕ್ಕಳ ಯೋಗಕ್ಷೇಮವನ್ನೆ ವಿಚಾರಿಸುತ್ತಾನೆ.

ಇಷ್ಟು ವರ್ಷಗಳಲ್ಲಿ ಆಗಾಗ ನಿಮ್ಮನ್ನು ನೆನಪಿಸಿಕೊಂಡಿರುವುದನ್ನು ತಿಳಿಸುತ್ತಾನೆ. ಆತ ತನ್ನ ಕುಟುಂಬ, ಮಕ್ಕಳ ಸಾಧನೆಯ ಬಗ್ಗೆಯೂ ಹೇಳುತ್ತಾನೆ. ನಿಮಗೂ ಸಂತೋಷ ವಾಗುತ್ತದೆ. ‘ನೀನು ಮುಂದಿನ ಸಲ ಮುಂಬೈಗೆ ಬಂದಾಗ ಮನೆಗೆ ಬರಲೇಬೇಕು’ ಅಂತಾನೆ. ‘ಬೆಂಗಳೂರಿಗೆ ಬಂದಾಗ ನೀನೂ ನಮ್ಮ ಮನೆಗೆ ಬರಬೇಕು’ ಅಂತೀರಿ. ‘ಈ ಇಪ್ಪತ್ತು ವರ್ಷಗಳಲ್ಲಿ ಸಂಪರ್ಕದಲ್ಲಿರದ ಕಾರಣ ನಾವು ಎಂಥ ಒಳ್ಳೆಯ ಕ್ಷಣಗಳನ್ನು ಕಳೆದುಕೊಂಡೆವು’ ಎಂದು ಆತ ಹೇಳುತ್ತಾನೆ. ಅದಕ್ಕೆ ನೀವೂ ಸಮ್ಮತಿಸುತ್ತೀರಿ. ಇನ್ನು ಮುಂದೆ ನಿರಂತರ ಸಂಪರ್ಕದಲ್ಲಿರೋಣ ಅಂತ ಆತನೂ ಹೇಳುತ್ತಾನೆ. ನೀವೂ ಅದಕ್ಕೆ ದನಿಗೂಡಿಸುತ್ತೀರಿ.

ಆತ ಫೋನ್ ಇಡುವ ಮುನ್ನ ಕೇಳುತ್ತಾನೆ – ‘ನಿನ್ನ ಹತ್ತಿರ ನಮ್ಮ ಕ್ಲಾಸ್ ಮೇಟ್ ರಣಜಿತ್‌ನ ನಂಬರ್ ಇದೆಯಾ? ಇದ್ದರೆ ಕೊಡ್ತೀಯಾ? ನನಗೆ ತುರ್ತಾಗಿ ಅವನ ನಂಬರ್ ಬೇಕಿತ್ತು, ಅವನಿಂದ ಒಂದು ಸಹಾಯ ಕೇಳಬೇಕಿತ್ತು.’ ನೀವು ರಣಜಿತ್‌ನ ನಂಬರನ್ನು ವಾಟ್ಸಾಪ್ ಮಾಡುತ್ತೀರಿ. ಆಗ ನಿಮಗೆ ಅನಿಸುತ್ತದೆ, ಅಷ್ಟಕ್ಕೂ ಸ್ನೇಹಿತ ಫೋನ್ ಮಾಡಿದ್ದು ಏಕೆ? ನನ್ನ ಕುಶಲೋಪರಿ ವಿಚಾರಿಸಲಾ? ರಣಜಿತ್‌ನ ಫೋನ್ ನಂಬರ್ ಪಡೆಯಲಾ? ಆರಂಭದಲ್ಲಿ ಆತ ಕೇಳಿದ್ದು – ನಿನ್ನ ಹೆಂಡತಿ ಹೇಗಿದ್ದಾಳೆ.. ಮಕ್ಕಳು ಹೇಗಿದ್ದಾರೆ.. ನಿನ್ನನ್ನು ನೆನಪಿಸಿಕೊಳ್ಳದ ದಿನಗಳಿಲ್ಲ…ಹೀಗೆ ಹೇಳಿದ್ದೇ ಕೃತಕವಾ?

ನಿಮಗೆ ಆತನ ಆಶಯದ ಬಗ್ಗೆಯೇ ಅನುಮಾನಗಳು ಏಳಲಾರಂಭಿಸುತ್ತವೆ. ಆತ ಆರಂಭದಲ್ಲಿ ಹೇಳಿದ ಒಳ್ಳೆಯ ಮಾತುಗಳೆಲ್ಲ ಕಾಟಾಚಾರಕ್ಕೆ ಹೇಳಿದ್ದು ಎಂದು ನಿಮಗೆ ಅನಿಸಲಾರಂಭಿಸುತ್ತದೆ. ಆತ ಫೋನ್ ಮಾಡಿದ ಉದ್ದೇಶ ನನ್ನ ಬಗ್ಗೆ ವಿಚಾರಿಸುವುದಕ್ಕೆ ಅಲ್ಲ, ಅದರ ಬದಲು ರಣಜಿತ್‌ನ ಫೋನ್ ನಂಬರ್ ಪಡೆಯಲಿದ್ದಿರಬಹುದು ಎಂದು ಬಲವಾಗಿ ಅನಿಸುತ್ತದೆ. ಒಂದು ವೇಳೆ ನಿಮ್ಮ ಸ್ನೇಹಿತನ ಬದಲು, ನೀವೇ ಫೋನ್ ಮಾಡಿ ಈ ರೀತಿ ಕೇಳಿದ್ದರೂ ನಿಮ್ಮ ಸ್ನೇಹಿತ ಹೀಗೆಯೇ ಯೋಚಿಸುತ್ತಿದ್ದ.

ಇದು ಸರಿಯಾದ ‘ಬ್ಯಾಟಿಂಗ್ ಆರ್ಡರ್’ ಅಲ್ಲ. ಅದೇ ನಿಮ್ಮ ಸ್ನೇಹಿತ ಫೋನ್ ಮಾಡಿದ ಆರಂಭದಲ್ಲಿಯೇ, ರಣಜಿತ್‌ನ ಫೋನ್ ನಂಬರ್ ಕೇಳಿ, ನಂತರ ಉಭಯಕುಶಲೋಪರಿ ಸಾಂಪ್ರತ ವಿಚಾರಿಸಿಕೊಂಡಿದ್ದರೆ, ನಿಮಗೆ ಏನೂ ಅನಿಸುತ್ತಿರಲಿಲ್ಲ. ಆಗ ಆತ ಯಾಕೆ ಫೋನ್ ಮಾಡಿದ್ದು ಎಂದು ನಿಮಗೆ ಗೊತ್ತಾಗುತ್ತಿತ್ತು. ಆತನ ಉದ್ದೇಶದ ಬಗ್ಗೆ ನಿಮಗೆ ಸಂದೇಹಗಳು ಮೂಡುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಫೋನ್ ನಂಬರ್ ಕೇಳಲೆಂದೇ ಫೋನ್ ಮಾಡಿದ್ದರೂ, ನಂತರ ಉಭಯಕುಶಲೋಪರಿ ವಿಚಾರಿಸಿದ್ದಕ್ಕೆ ನಿಮಗೆ ಆತನ ಬಗ್ಗೆ ಅಭಿಮಾನ
ಮೂಡುತ್ತಿತ್ತು.

ಕೇವಲ ಫೋನ್ ನಂಬರ್ ಕೇಳಲಿಕ್ಕಾಗಿ ಫೋನ್ ಮಾಡಿಲ್ಲ, ನಂತರ ಹೆಂಡತಿ, ಮಕ್ಕಳು, ಕುಟುಂಬದ ಬಗ್ಗೆ ಕೇಳುವಷ್ಟು ವ್ಯವಧಾನ ತೋರಿದನಲ್ಲ ಎಂದು ಸಮಾಧಾನವಾಗುತ್ತಿತ್ತು. ಈ ರೀತಿಯ ತಪ್ಪುಗಳನ್ನು ನಾವೆಲ್ಲರೂ ಮಾಡುತ್ತೇವೆ. ಮಾತಿನ ವಿಷಯಗಳ ಅನುಕ್ರಮ (ಸಿಕ್ವೆ) ಹಿಂದೆ-ಮುಂದೆ ಆದರೆ, ಬದಲಾದರೆ, ನಮ್ಮ ಬಗೆಗಿನ ಅಭಿಪ್ರಾಯವೇ ಬದಲಾಗುತ್ತದೆ. ಅವಸರದಲ್ಲಿ, ಯಾವುದೋ ಯೋಚನೆ ಯಲ್ಲಿ, ನಾವೆಲ್ಲರೂ ಈ ರೀತಿಯ ಕ್ಷುಲ್ಲಕ ತಪ್ಪುಗಳನ್ನು ಮಾಡಿ ನಮ್ಮ ಬಗೆಗಿನ ಅಭಿಪ್ರಾಯವನ್ನೇ ಹಾಳುಗೆಡವಿಕೊಳ್ಳುತ್ತೇವೆ.

ನನ್ನ ಮೆಚ್ಚಿನ ಲೇಖಕ ಪ್ರಕಾಶ ಅಯ್ಯರ್ ಹೇಳಿದ ಈ ವಿಷಯ ಕೇಳಿ, ಇಂಥ ತಪ್ಪುಗಳನ್ನು ನಾನು ಮಾಡಿದರೆ ಬೇರೆಯವರಿಗೆ ನನ್ನ ಬಗ್ಗೆ
ಒಳ್ಳೆಯ ಅಭಿಪ್ರಾಯ ನೆಲೆಸುವುದಿಲ್ಲ ಎನಿಸಿತು.

ಸಂಪಾದಕರ ಟೇಬಲ್ ಅಂದ್ರೆ 
ಇಡೀ ಜಗತ್ತೇ ತನ್ನ ಟೇಬಲ್ ಮೇಲೆ ಕುಳಿತಿದೆ ಎಂದು ಭಾವಿಸುವವನೇ ‘ಪತ್ರಿಕಾ ಸಂಪಾದಕ’ ಎಂಬುದು ವಕ್ರತುಂಡೋಕ್ತಿ ಅಲ್ಲ. ಅದು ಅಪ್ಪಟ ವಾಸ್ತವ ಕೂಡ. ಯಾವ ಸಂಪಾದಕನ ಟೇಬಲ್ ನೀಟಾಗಿ ಇರುವುದೋ ಆತ ತನ್ನ ಡ್ಯೂಟಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದರ್ಥ. ಪತ್ರಿಕಾ ಸಂಪಾದಕನ ಆಫೀಸ್ ಅಂದ್ರೆ ಟೇಬಲ್. ಬೇಕಾಗಿದ್ದು ಬೇಡವಾಗಿದ್ದು ಎಲ್ಲವೂ ಅಲ್ಲಿರುತ್ತವೆ. ಕಾಲಿನ ಪಕ್ಕದಲ್ಲಿ ದೊಡ್ಡ ಕಸದ ಬುಟ್ಟಿಯಿದ್ದರೂ, ಟೇಬಲ್ ಮಾತ್ರ ತುಂಬಿ ತುಳುಕುತ್ತಿರುತ್ತದೆ.

ಸಂಪಾದಕನಿಗೆ ಯಾವ ಕಾಗದವನ್ನೂ ಬಿಸಾಡಲು ಮನಸ್ಸಾಗುವುದಿಲ್ಲ. ಏನಾದರೂ ಪ್ರಯೋಜನಕ್ಕೆ ಬಂದೀತು ಎಂದು ಅದು ಟೇಬಲ್ ಮೇಲೆಯೇ ಆಶ್ರಯ ಪಡೆಯುತ್ತದೆ. ನಂತರ ಕೊಳೆಗೇರಿಗಳಲ್ಲಿನ ಮನೆಗಳಂತೆ ಅಲ್ಲಿಯೇ ತಲೆಯೆತ್ತಲಾರಂಭಿಸುತ್ತವೆ. ಅದಕ್ಕಾಗಿಯೇ ಸಂಪಾದಕರಾದವರು ಆಗಾಗ ತಮ್ಮ ಟೇಬಲ್ ಮೇಲಿನ ಫೈಲುಗಳ ಕಡತ ಯಜ್ಞ ಮಾಡುತ್ತಿರಬೇಕು ಎಂದು ಹೇಳುತ್ತಾರೆ. ಒಮ್ಮೆ ಸಂಪಾದಕರು ತಮ್ಮ ಟೇಬಲ್ ಮೇಲೆ ಆಹ್ವಾನ ಪತ್ರಿಕೆಯೊಂದನ್ನು ನೋಡಿದರು. ಓದುಗರೊಬ್ಬರು ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬದ ನಿಮಿತ್ತ ಕಳಿಸಿದ ಆಹ್ವಾನ ಅದಾಗಿತ್ತು. ಅದೇ ದಿನ ಬೇರೊಂದು ಮೀಟಿಂಗ್ ಇದ್ದುದರಿಂದ ಆ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಅನಿಸಿತು.

ಹೀಗಾಗಿ ಓದುಗರ ಪ್ರಭುವಿಗೆ ಒಂದು ಪತ್ರ ಬರೆಯಲು ನಿರ್ಧರಿಸಿದರು. ‘ನಿಮ್ಮ ಮಗಳ ಪ್ರಥಮ ಹುಟ್ಟುಹಬ್ಬಕ್ಕೆ ಬರಲು ಸಾಧ್ಯವಾಗ ದಿರುವುದಕ್ಕೆ ವಿಷಾದಿಸುತ್ತೇನೆ. ನಿಮ್ಮ ಮಗಳಿಗೆ ಈ ಮೂಲಕ ಶುಭಾಶಯಗಳನ್ನು ಹೇಳುತ್ತಾ, ಅವಳ ಬದುಕು ಉಜ್ವಲವಾಗಲಿ ಎಂದು  ಹಾರೈಸುತ್ತೇನೆ’ ಎಂದು ಪತ್ರ ಬರೆದರು.

ಆ ಪತ್ರ ಆಹ್ವಾನಪತ್ರಿಕೆ ಕಳಿಸಿದ ಓದುಗರ ಕೈಸೇರಿತು. ಸ್ವತಃ ಸಂಪಾದಕರೇ ಪತ್ರ ಬರೆದಿದ್ದಕ್ಕೆ ಅತೀವ ಸಂತಸವಾಯಿತು. ಅದಕ್ಕೆ ಅವರು ಉತ್ತರ ಬರೆದರು – ‘ಪ್ರಿಯ ಸಂಪಾದಕರೇ, ನಮ್ಮ ಆಹ್ವಾನ ಪತ್ರಕ್ಕೆ, ನೀವು ಬರೆದ ಪತ್ರವನ್ನು ನೋಡಿ, ಖುದ್ದು ನೀವೇ ಬಂದಷ್ಟು
ಸಂತೋಷವಾಯಿತು. ಎಷ್ಟೆಂದರೂ ನೀವು ಬರುವುದಿಲ್ಲ ಎಂಬ ಕಾರಣಕ್ಕೆ ನಾವು ನಿಮಗೆ ಆಹ್ವಾನಪತ್ರಿಕೆ ಕಳಿಸುವುದನ್ನು ಬಿಟ್ಟುಬಿಟ್ಟಿ ದ್ದೇವೆ.

ಕೊನೆಯದಾಗಿ, ನಿಮಗೊಂದು ಸಲಹೆ ನೀಡಬಯಸುವೆ. ನಿಮ್ಮ ಟೇಬಲ್ ಮೇಲಿರುವ ಅನಗತ್ಯ ಕಾಗದ-ಪತ್ರಗಳನ್ನು ಆಗಾಗ ತೆಗೆದು
ಸ್ವಚ್ಛ ಮಾಡುತ್ತೀರಿ. ಯಾಕೆಂದರೆ, ಮೊನ್ನೆ ತಾನೇ ನಾವು ನಮ್ಮ ಮಗಳ ಆರನೇ ಹುಟ್ಟುಹಬ್ಬವನ್ನು ಆಚರಿಸಿದೆವು. ಇಂತಿ ನಿಮ್ಮ ವಿಶ್ವಾಸದ ಓದುಗ...’

ಸ್ವಾತಂತ್ರ್ಯದ ಬೆಲೆ 
ಇತ್ತೀಚೆಗೆ ದಾಲ್ಮಿಯಾ ಗ್ರುಪ್ ಅಧ್ಯಕ್ಷ ಗೌರವ್ ದಾಲ್ಮಿಯಾ ಒಂದು ಟ್ವೀಟ್ ಮಾಡಿದ್ದರು. ಬಹುತೇಕರು ಸ್ವಾತಂತ್ರ್ಯ ಅಂದ್ರೆ ಉಚಿತವಾಗಿ ಸಿಗುವಂಥದ್ದು ಎಂದು ಭಾವಿಸುತ್ತಾರೆ. ಇಂಗ್ಲಿಷಿನಲ್ಲಿ ಒಂದು ಮಾತಿದೆ – When anything is free, your freedom is the price. ಅನೇಕರಿಗೆ ನಮ್ಮ ಸ್ವಾತಂತ್ರ್ಯಕ್ಕೂ ಬೆಲೆ ಇದೆ ಎಂಬುದು ಗೊತ್ತಿರುವುದಿಲ್ಲ.

ದಕ್ಷಿಣ ಆಫ್ರಿಕಾದ ಖ್ಯಾತ ಆರ್ಚಬಿಷಪ್ ಮತ್ತು ನೊಬೆಲ್ ಪುರಸ್ಕೃತ ಡೆಸ್ಮಂಡ್ ಟುಟು ಅವರು ಹೇಳಿದ ಒಂದು ಮಾತು ಪ್ರಸಿದ್ಧವಾಗಿದೆ. ಅವರು ಹೇಳಿದ್ದರು – ‘ಮಿಷನರಿಗಳು ಆಫ್ರಿಕಾಕ್ಕೆ ಬಂದಾಗ, ಅವರ ಕೈಯಲ್ಲಿ ಬೈಬಲ್ ಇತ್ತು. ನಮ್ಮಲ್ಲಿ ಭೂಮಿಯಿತ್ತು. ನಾವೆ ಸೇರಿ ಕಣ್ಮುಚ್ಚಿ ಪ್ರಾರ್ಥನೆ ಮಾಡೋಣ ಎಂದು ಮಿಷನರಿಗಳು ಹೇಳಿದರು. ನಾವು ಅವರು ಹೇಳಿದಂತೆ ಮಾಡಿದೆವು. ಕಣ್ಣುಗಳನ್ನು ಬಿಟ್ಟಾಗ, ನಮ್ಮ ಕೈಯಲ್ಲಿ ಬೈಬಲ್ ಇದ್ದವು ಮತ್ತು ನಮ್ಮ ಭೂಮಿಯಲ್ಲಿ ಅವರಿದ್ದರು.’

ಇದೇ ಮಾತನ್ನು ಸೋಷಿಯಲ್ ಮೀಡಿಯಾಕ್ಕೂ ಅನ್ವಯಿಸಬಹುದು. ಹೇಗೆ ಅಂತೀರಾ? ಅವರ ಬಳಿ ವಾಟ್ಸಾಪ್, ಟ್ವಿಟರ್, ಫೇಸ್‌ಬುಕ್ ಮತ್ತು ಇನ್ಸ್ಟಾ ಗ್ರಾಂ ಗಳಿದ್ದವು. ನಮ್ಮ ಬಳಿ ಸ್ವಾತಂತ್ರ್ಯವಿತ್ತು. ಇವೆಲ್ಲವನ್ನೂ ಉಚಿತವಾಗಿ ಕೊಡ್ತೇವೆ ಎಂದರು. ನಾವು ನಮ್ಮ ನಮ್ಮ ಕಣ್ಣು ಗಳನ್ನು ಮುಚ್ಚಿದೆವು. ಆನಂತರ ನಾವು ಕಣ್ಣುಗಳನ್ನು ತೆರೆದಾಗ, ನಮ್ಮಲ್ಲಿ ವಾಟ್ಸಾಪ್, ಟ್ವಿಟರ್, ಫೇಸ್‌ಬುಕ್ ಮತ್ತು ಇನ್ಸ್ಟಾ ಗ್ರಾಂ
ಗಳಿದ್ದವು ಮತ್ತು ನಮ್ಮ ಸ್ವಾತಂತ್ರ್ಯ ಅವರ ಪಾಲಿಗಿದ್ದವು.

ಯಾರಾದರೂ ನಿಮಗೆ ನಾವು ಉಚಿತವಾಗಿ ಕೊಡ್ತೇವೆ ಅಂದ್ರೆ, ನಮ್ಮ ಸ್ವಾತಂತ್ರ್ಯವೇ ಅದರ ಬೆಲೆ ಎಂಬುದನ್ನು ನಾವು ಮರೆಯುತ್ತೇವೆ. ನಮ್ಮ ಸಮಯ ಮತ್ತು ಸ್ವಾತಂತ್ರ್ಯಕ್ಕಿರುವ ಬೆಲೆಯ ಮುಂದೆ ಉಚಿತವಾಗಿ ಸಿಗುವಂಥzಲ್ಲ ಜುಜುಬಿ ಎಂಬುದು ನಮಗೆ ಗೊತ್ತೇ ಆಗುವು ದಿಲ್ಲ.

ಹಿಂದಿ ರಾಷ್ಟ್ರಭಾಷೆ ಏಕೆ?

ಟ್ವೀಟ್ ಒಂದನ್ನೇ ಓದಬಾರದು. ಟ್ವೀಟ್‌ಗಿಂತ ಅದಕ್ಕೆ ಬಂದ ಕಾಮೆಂಟುಗಳು ಅಥವಾ ಪ್ರತಿಕ್ರಿಯೆಗಳು ಹೆಚ್ಚು ತೀಕ್ಷ್ಣವಾಗಿರುತ್ತವೆ, ಮಾರ್ಮಿಕವಾಗಿರುತ್ತವೆ. ಕಾರಣ ಟ್ವೀಟ್ ಮಾಡುವವರು ಒಬ್ಬರು, ಅದಕ್ಕೆ ಪ್ರತಿಕ್ರಿಯಿಸು ವವರು ನೂರಾರು. ಒಂದು ತಲೆಗಿಂತ ನೂರಾರು ತಲೆಗಳೇ ವಾಸಿ.

ಮೊನ್ನೆ ಅನಿತಾ ಎನ್ನುವವರು ಒಂದು ಟ್ವೀಟ್ ಮಾಡಿದ್ದರು – ‘ಭಾರತದಲ್ಲಿ ಶೇ. ನಲವತ್ತರಷ್ಟು ಮಂದಿ ಹಿಂದಿ ಭಾಷೆಯನ್ನು ಮಾತಾಡು ತ್ತಾರೆ. ಶೇ. ಏಳರಷ್ಟು ಮಂದಿ ತಮಿಳು ಮತ್ತು ಶೇ.ನಾಲ್ಕರಷ್ಟು ಮಂದಿ ಕನ್ನಡ ಮಾತಾಡುತ್ತಾರೆ. ಈಗ ನನಗೆ ಹೇಳಿ, ಹಿಂದಿ ಮಾತಾಡಿ ಅಂದ್ರೆ ಮತ್ತು ರಾಷ್ಟ್ರಭಾಷೆ ಮಾಡಿ ಅಂದ್ರೆ ಅದು ತಪ್ಪಾ? ನಾವು ವಾಸ್ತವವೇನು ಎಂಬುದನ್ನು ಯೋಚಿಸಬೇಕಲ್ಲವೇ? ನಮ್ಮ ನಮ್ಮ ನಡುವೆ ವ್ಯವಹರಿಸುವುದಕ್ಕೆ ರಾಷ್ಟ್ರಭಾಷೆ ಬೇಕು. ಅದನ್ನು ನಿರ್ಧರಿಸಲು ಇದು ಸೂಕ್ತ ಕಾಲ.’ ಅದಕ್ಕೆ ಕಂಸ ಎನ್ನುವವರು ಪ್ರತಿಕ್ರಿಯಿ ಸಿದ್ದರು – ಭಾರತದಲ್ಲಿ ನವಿಲುಗಳಿಗಿಂತ ಕಾಗೆ ಜಾಸ್ತಿ ಇದೆ. ಹಾಗಾದರೆ ಕಾಗೆಯನ್ನು ರಾಷ್ಟ್ರಪಕ್ಷಿಯನ್ನಾಗಿ ಮಾಡಲು ಆಗುತ್ತಾ?’

ಕೆಲಸ ಕೆಡಿಸಿದ ಇಮೇಲ್
ಬಹುರಾಷ್ಟ್ರೀಯ ಕಂಪನಿಯ ಎಚ್.ಆರ್. ಮುಖ್ಯಸ್ಥ ತನ್ನ ಕಚೇರಿಯ ಶಾಖೆಗಳಿರುವ ದೇಶಗಳ ಎಚ್.ಆರ್. ಮುಖ್ಯಸ್ಥರಿಗೆ ಒಂದು ಸಮೀಕ್ಷೆ (ಸರ್ವೇ)ಯ ನಮೂನೆ ಕಳಿಸಿ, ಹದಿನೈದು ದಿನಗಳೊಳಗೆ ಸಂಸ್ಥೆಯ ಸಿಬ್ಬಂದಿಯಿಂದ ಅದನ್ನು ಭರ್ತಿ ಮಾಡಿ ಕಳಿಸುವಂತೆ ಸೂಚಿಸಿದ. ಬಹುತೇಕ ಎಲ್ಲಾ ದೇಶಗಳ ಎಚ್. ಆರ್.ಗಳಿಂದ ಭರ್ತಿಯಾದ ನಮೂನೆಗಳು ಬಂದಿದ್ದವು. ಇನ್ನು ಒಂದು ವಾರವಷ್ಟೇ ಇತ್ತು, ಭಾರತದ ಸಿಬ್ಬಂದಿಯಲ್ಲಿ ಕೆಲವೇ ಮಂದಿ ಸಮೀಕ್ಷೆಯ ನಮೂನೆಯನ್ನು ತುಂಬಿದ್ದರು. ಅನೇಕರು ತುಂಬಿರಲಿಲ್ಲ.

ಇದರಿಂದ ಭಾರತದ ಎಚ್.ಆರ್. ಮುಖ್ಯಸ್ಥ ತುಸು ಕಳವಳಕ್ಕೊಳಗಾದಳು. ಬೇಗನೆ ತಮ್ಮ ತಮ್ಮ ಅಭಿಪ್ರಾಯವನ್ನು ಭರ್ತಿ ಮಾಡಿ ಕಳಿಸುವಂತೆ ಎಲ್ಲಾ ಸಿಬ್ಬಂದಿಗೆ ಚೆಂದವಾದ ಒಕ್ಕಣಿಕೆಯೊಂದಿಗೆ ಒಂದು ಇಮೇಲ್ ಕಳಿಸಿದಳು. ಸಮೀಕ್ಷೆಯಲ್ಲಿ ಭಾಗವಹಿಸದ ಸಿಬ್ಬಂದಿ ಆ ಇಮೇಲ್ ನೋಡಿದರು. ಅವರೆಲ್ಲ ಸಮಾಧಾನದ ನಿಟ್ಟುಸಿರು ಬಿಟ್ಟರು. ತಾವು ಮಾತ್ರ ಅಲ್ಲ ಸಮೀಕ್ಷೆಯ ನಮೂನೆಯನ್ನು ತುಂಬದೇ
ಇರುವವರು, ನನ್ನ ಹಾಗೆ ಏನೂ ಅನೇಕರು ಭರ್ತಿ ಮಾಡಿಲ್ಲ ಎಂದು ಅವರಿಗೆ ಅನಿಸಿತು. ಇಂದೇ ಕಳಿಸಬೇಕು ಎಂದು ಅಂದು
ಕೊಂಡವರೂ, ಎಚ್.ಆರ್. ಇಮೇಲ್ ನೋಡಿದ ಬಳಿಕ, ಇನ್ನೂ ಒಂದೆರಡು ದಿನ ವಿಳಂಬ ಮಾಡಿದರೆ ಏನೂ ಆಗುವುದಿಲ್ಲ, ನನ್ನ
ಹಾಗೆ ಇನ್ನೂ ಅನೇಕರು ಭರ್ತಿ ಮಾಡಿಲ್ಲ ಎಂದು ಅಂದುಕೊಂಡರು.

ಭರ್ತಿ ಮಾಡಿ ಕಳಿಸಿದವರಿಗೆ, ನಾವು ಮಾತ್ರ ಅಷ್ಟು ಬೇಗ ಕಳಿಸುವ ಅಗತ್ಯವೇನಿತ್ತು, ಇತರರ ಹಾಗೆ ಆರಾಮವಾಗಿ ಕಳಿಸಬಹುದಿತ್ತಲ್ಲ, ಮುಂದಿನ ಸಲ ಇಂಥ ಸಮೀಕ್ಷೆ ನಮೂನೆ ಕಳಿಸಿದರೆ, ಈ ಸಲದಂತೆ ಬೇಗ ಕಳಿಸುವುದು ಬೇಡ ಎಂದು ಅಂದುಕೊಂಡರು. ಕಚೇರಿಯಲ್ಲಿ ನಿಯತ್ತಾಗಿ ಕೆಲಸ ಮಾಡುವವರೂ ಎಚ್. ಆರ್. ಅವರ ಒಂದು ಇಮೇಲ್‌ನಿಂದಾಗಿ ಪ್ರೇರಣಾ ಹೀನರಾದರು. ಕೆಲಸ ಮಾಡದವರು ಇನ್ನಷ್ಟು ಜಡವಾದರು. ಇದು ಒಂದು ಇಮೇಲ್ ಇಡೀ ಕಚೇರಿಯ ವಾತಾವರಣವನ್ನು ಹೇಗೆ ಕೆಡಿಸಬಹುದು ಎಂಬುದಕ್ಕೆ ಪುಟ್ಟ ನಿದರ್ಶನ.

ತಂದೆ ಮತ್ತು ಮಗನ ಯೋಚನೆ

ತಂದೆ ಮತ್ತು ಮಗ ಹೇಗೆ ಯೋಚಿಸುತ್ತಾರೆ ಅನ್ನೋದನ್ನು ನೋಡೋಣ. ಇಲ್ಲಿ ತಂದೆ ಅಂದರೆ ಜೀವನ ಅನುಭವ ಇರುವವನು ಮತ್ತು ಮಗ ಅಂದ್ರೆ ಆ ಅನುಭವ ಕಡಿಮೆ ಇರುವವನು ಎಂದು ಅಂದುಕೊಳ್ಳಬಹುದು.

ಒಮ್ಮೆ ಒಂದು ಫ್ಯಾಕ್ಟರಿ ಸ್ಥಾಪಿಸುವಾಗ ದೊಡ್ಡ ಯಂತ್ರವೊಂದನ್ನು ಸುಮಾರು ಹತ್ತು ಅಡಿ ಆಳದ ಗುಂಡಿಯಲ್ಲಿ ಇಳಿಸಬೇಕಿತ್ತು. ಅದನ್ನು ಆ ಗುಂಡಿಯಲ್ಲಿ ಇಳಿಸುವುದು ಹೇಗೆ ಎಂದು ಕೆಲವರು ಯೋಚಿಸುತ್ತಿದ್ದರು. ಅಲ್ಲಿಗೆ ಫ್ಯಾಕ್ಟರಿ ಮುಖ್ಯಸ್ಥನ ಮಗ ಬಂದು, ‘ಒಂದು ದೊಡ್ಡ ಕ್ರೇನ್ ತೆಗೆದುಕೊಂಡು ಬನ್ನಿ’ ಎಂದು ಆದೇಶಿಸಿದ.

ಆತನ ಮಾತುಗಳನ್ನು ಕೇಳಿಸಿಕೊಂಡ ಅಪ್ಪ, ‘ಅಷ್ಟು ಸಣ್ಣ ಕೆಲಸಕ್ಕೆ ಕ್ರೇನನ್ನು ಯಾಕೆ ತರಿಸುತ್ತೀಯಾ. ಯಾವ ಖರ್ಚಿಲ್ಲದೇ ಆ ಗುಂಡಿ ಯೊಳಗೆ ಈ ಮಷೀನನ್ನು ಇಳಿಸಬಹುದಲ್ಲ?’ಎಂದ. ಅದಕ್ಕೆ ಮಗ, ‘ಡ್ಯಾಡಿ, ಏನು ಹೇಳ್ತಾ ಇದ್ದೀರಿ? ಯಾವ ಖರ್ಚಿಲ್ಲದೇ ಹೇಗೆ ಇಳಿಸುತ್ತೀರಿ?’ ಎಂದ. ತಂದೆ ಸುಮ್ಮನೆ ಮುಗುಳ್ನಕ್ಕ.

‘ಒಂದು ಮಂಜುಗಡ್ಡೆ ಸ್ಲ್ಯಾಬ್ ಮತ್ತು ಪಂಪ್ ಸೆಟ್ ತೆಗೆದುಕೊಂಡು ಬನ್ನಿ’ ಎಂದ ತಂದೆ. ಮಗನಿಗೆ ತಕ್ಷಣ ಅರ್ಥವಾಗಲಿಲ್ಲ. ಅಷ್ಟರೊಳಗೆ ಕೆಲಸದವರು ಮಂಜುಗಡ್ಡೆ ಸ್ಲ್ಯಾಬ್ ತಂದು ಗುಂಡಿಯೊಳಗೆ ಇಟ್ಟರು. ಅದರ ಮೇಲೆ ಯಂತ್ರವನ್ನು ಇಟ್ಟರು. ಮಂಜುಗಡ್ಡೆ ನಿಧಾನವಾಗಿ ಕರಗಲಾರಂಭಿಸಿತು. ಅದು ಕರಗಿದಂತೆ ಯಂತ್ರ ಕೆಳಕ್ಕೆ ಇಳಿಯುತ್ತಾ ಹೋಯಿತು. ಮಂಜುಗಡ್ಡೆಯಿಂದ ಕರಗಿದ ನೀರನ್ನು ಪಂಪ್ ಸೆಟ್ ಮೂಲಕ ಮೇಲಕ್ಕೆ ಎಳೆಯಲಾಯಿತು. ಮಗ ಅಪ್ಪನನ್ನು ಅಭಿಮಾನದಿಂದ ನೋಡುತ್ತಿದ್ದ.

ಅವರವರ ಭಾವಕ್ಕೆ
ಕಾರು ತೆಗೆದುಕೊಂಡಾಗ ಯಾರು ಯಾವ ರೀತಿ ಯೋಚಿಸುತ್ತಾರೆ ?
ತಂದೆ – ಒಂದು ಲೀಟರ್‌ಗೆ ಎಷ್ಟು ಕಿ.ಮೀ. ಮೈಲೇಜ್ ಕೊಡಬಹುದು?
ಹೆಂಡತಿ – ಆ ಕಲರ್ ಅಂದ್ರೆ ನನಗೆ ಇಷ್ಟ, ಅದಕ್ಕಾಗಿ ಅದನ್ನೇ ಖರೀದಿ ಮಾಡಿದ್ದು!
ಮಗಳು – ಮಿರರ್ ಚೆನ್ನಾಗಿದೆ!
ಮಗ – ನೂರಾ ನಲವತ್ತು ಕಿ.ಮೀ. ಹೋದ್ರೂ ಗೊತ್ತೇ ಆಗೊಲ್ಲ!
ಆಫೀಸಿನ ಸಹೋದ್ಯೋಗಿ – ಈ ಸಂಬಳದಲ್ಲಿ ಹೇಗೆ ಕಂತು ಕಟ್ಟುತ್ತಾನೋ ಏನೋ?!
ಪಕ್ಕದ ಮನೆಯವ – ಯಾರ ತಲೆ ಒಡೆದು ಇಷ್ಟೊಂದು ಹಣ ಪಡೆದನೋ ಏನೋ?!