Wednesday, 11th December 2024

ಅಜ್ಜಿ ಮನೆಗೆ ಬಂದ ನಾಲ್ಕು ಮೊಮ್ಮಕ್ಕಳು…

ಸುಧಕ್ಕನ ಕತೆಗಳು

ಅಜ್ಜಿಯ ಕಥೆಗಳು

ನನ್ನ ಅಜ್ಜಿ ಕೃಷ್ಣಬಾಯಿಯನ್ನು ಎಲ್ಲರೂ ಕೃಷ್ಣಕ್ಕ ಎಂದು ಕರೆಯುತ್ತಿದ್ದರು. ಅವಳವು ಉದಾರವಾದ ವ್ಯಕ್ತಿತ್ವ ಶುದ್ಧವಾದ ಮನಸ್ಸು ನೇರ ನಡೆ-ನುಡಿ. ಅವಳ ಮಡಿಲಲ್ಲಿ ಬೆಳೆದ ನಾನು ಅವಳಿಂದ ಅನೇಕ ಗಟ್ಟಿಯಾದ ಮೌಲ್ಯಗಳನ್ನು ಕಲಿತೆ.
ಜೀವನದಲ್ಲಿ ಬರುವ ಕಷ್ಟಗಳನ್ನು ಉತ್ತಮ ಗುಣ ಮತ್ತು ಧೈರ್ಯದಿಂದ ಎದುರಿಸಬೇಕು ಎಂದು ಅವಳು ಹೇಳುತ್ತಿದ್ದಳು. ಅವಳು ಕಥೆಯ ರೂಪವಾಗಿ ಹೇಳಿದ ಕೇಳಿದ ಅನೇಕ ಕಥೆಗಳನ್ನು ನಾನೀಗ ಮುಂದಿನ ಪೀಳಿಗೆಗೆ ಹೇಳುತ್ತೇನೆ. ನನ್ನಂತೆ ನೀವೂ ಕೇಳಿ, ಓದಿ
ಆನಂದಿಸಿರಿ. ಅದರಲ್ಲಿಯ ಮೌಲ್ಯವನ್ನು ಅರಿಯಿರಿ. -ಸುಧಾಮೂರ್ತಿ

ಕಥೆಗಳ ಆರಂಭ
ಬೇಸಿಗೆಯ ರಜೆ ಬಂದುಬಿಟ್ಟಿದೆ. ಹೊರಗೆ ಉರಿ ಬಿಸಿಲು ಇದ್ದರೂ ಅಜ್ಜಿಗೆ ಆನಂದವೇ ಆನಂದ. ಅವಳಿಗೆ ನಾಲ್ಕು ಮೊಮ್ಮಕ್ಕಳು ಕೃಷ್ಣ, ಅನುಷ್ಕಾ, ರಘು ಮತ್ತು ಮೀನು. ಕೃಷ್ಣ, ಅನುಷ್ಕಾ ಮುಂಬೈಯಲ್ಲಿ ಇದ್ದಾರೆ. ರಘು ಮತ್ತು ಮೀನು ದೂರದ ದೆಹಲಿಯಲ್ಲಿ ಇರುತ್ತಾರೆ. ಅಜ್ಜಿಯ ಮಗಳು ಸುಭದ್ರ ಮುಂಬೈದಲ್ಲಿ ಇದ್ದರೆ, ಮಗ-ಸೊಸೆ ದಿಲ್ಲಿಯಲ್ಲಿ ಇದ್ದಾರೆ. ಅಜ್ಜಿ ಮತ್ತು ಅಜ್ಜ ಆಲದಹಳ್ಳಿಯಲ್ಲಿ ಇರುತ್ತಾರೆ.

ಆಲದಹಳ್ಳಿ ಒಂದು ರೀತಿ ಪ್ರಶಾಂತವಾದ ಅಪರಿಚಿತ ಊರು. ಹುಬ್ಬಳ್ಳಿಯಿಂದ 15ಕಿ.ಮೀ ದೂರದಲ್ಲಿದ್ದರೂ ಇನ್ನು ಶಹರದ ಪಟ್ಟಣದ ಝಳ ತಾಕಿಲ್ಲ. ಅಲ್ಲಿ ಇನ್ನೂ ಕೆರೆ ಇದೆ, ಕಾಡಿದೆ, ಮಾವಿನ ತೋಪಿದೆ. ಮಲೆನಾಡ ಸೆರಗಿನಲ್ಲಿ ಇರುವುದರಿಂದ ಹವೆ ತಂಪಾಗಿದೆ. ಹುಬ್ಬಳ್ಳಿಯಂತೆ ಗಜಿಬಿಜಿ ಇಲ್ಲ. ಅದೊಂದು ಹಳ್ಳಿಯ ದೊಡ್ಡಮನೆ. ಅವರ ಹಿರಿಯರಿಂದ ಬಂದಿದ್ದು. ಹಿತ್ತಲಲ್ಲಿ ದನಕರುಗಳಿವೆ. ಮನೆಯ ಕಾಂಪೌಡಿನಲ್ಲಿ ಹಲಸಿನ, ಮಾವಿನ, ಹುಣಸೆಯ ಮರಗಳಿವೆ. ಅಜ್ಜಿಯ ತರಕಾರಿಯ ಕೈತೋಟವಿದೆ. ಅಜ್ಜನ ಹೂವಿನ, ತುಳಸಿಯ ಪ್ಲಾಟ್ ಇದೆ. ಅಜ್ಜಿಯ ಮುಖದಲ್ಲಿ ಮಂದಹಾಸ, ಸಂತೋಷ ಎದ್ದು ಕಾಣುತ್ತಿತ್ತು. ಎರಡು
ದಿನಗಳ ಹಿಂದೆ ಅವರ ಸೊಸೆ ಸುಷ್ಮ ಬಂದು ರಘು ಮತ್ತು ಮೀನುರನ್ನು ಇಲ್ಲಿ ಇಳಿಸಿ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದಾಳೆ. ಹಾಗೆಯೇ ಅಲ್ಲಿಂದಲೇ ದಿಲ್ಲಿಗೆ ಹೋಗುತ್ತಾಳೆ.

ಪ್ರತಿವರ್ಷ ನಾಲ್ಕೂ ಮೊಮ್ಮಕ್ಕಳು, ಆಲದಹಳ್ಳಿಯ ಅಜ್ಜಿಯ ಮನೆಗೆ ಬರುವುದು ವಾಡಿಕೆ. ರಘು, ಮೀನು ಇವರಿಗೆ ಅಜ್ಜಿ ಎಷ್ಟು ಹೇಳಿದರೂ ಕೇಳದೆ ಅಜ್ಜನೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕೃಷ್ಣ ಮತ್ತು ಅನುಷ್ಕಾ ಅಜ್ಜನೊಂದಿಗೆ ಹೋಗಿದ್ದಾರೆ. ಬಹುಶಃ ಈಗ ವಿಮಾನ ಮುಂಬೈದಿಂದ ಬಂದು ಇಳಿದಿರಬಹುದು. ಈಗ ಟ್ಯಾಕ್ಸಿಯಲ್ಲಿ ಮಕ್ಕಳು ಕುಳಿತು ಗದ್ದಲ ಮಾಡುತ್ತಿರ ಬಹುದು, ಈಗ ಟ್ಯಾಕ್ಸಿ ಹೈವೇ ದಾರಿಯನ್ನು ಹಿಡಿದಿರಬಹುದು ಎಂದು ಅಜ್ಜಿ ಲೆಕ್ಕ ಹಾಕಿ ಬಾಗಿಲ ಬಳಿಯಲ್ಲಿಯೇ ಬಂದು ನಿಂತಳು.

ಇಂದು ಬೆಳಗ್ಗೆೆಯೇ ಬೇಗನೆ ಅಡುಗೆ ಮಾಡಿ ಮುಗಿಸಿದ ಅಜ್ಜಿ, ಬೆವರನ್ನು ಒರೆಸುತ್ತಿದ್ದಂತೆಯೇ ಮನೆಯ ಮುಂದೆ ಟ್ಯಾಕ್ಸಿ ಬಂದು ನಿಂತಿತು. ಮಕ್ಕಳು ತಮ್ಮ ಸಾಮಾನನ್ನು ತೆಗೆದುಕೊಳ್ಳದೇ ಹೊರಗೆ ಓಡಿ ಅಜ್ಜಿಯನ್ನು ತಬ್ಬಿಕೊಂಡರು. ‘ಮಕ್ಕಳೇ ನಿಧಾನ, ನಿಧಾನ ನಾನು ಬಿದ್ದು ಬಿಟ್ಟೇನು ಬನ್ನಿ ಒಳಗೆ, ಗಡಿಬಿಡಿ ಮಾಡಬೇಡಿ. ಹೇಗಾದ್ರು ಬೇಸಿಗೆ ರಜೆ ಇನ್ನೂ ಆರುವಾರ ಇದೆಯಲ್ಲಾ ! ನಾನೂ, ಅಜ್ಜ ನಿಮ್ಮ ಜತೆ ಇಲ್ಲೇ ಇರುತ್ತೇವೆ’ ಎನ್ನುತ್ತ ಅಜ್ಜಿ ಆನಂದದಿಂದ ಮೊಮ್ಮಕ್ಕಳೊಡನೆ ಒಳ ಬಂದಳು. ಅಜ್ಜಿ ಮಾಡಿದ ವಿವಿಧ ಅಡುಗೆಯನ್ನು ನೋಡಿ ಮಕ್ಕಳ ಸಂತೋಷಕ್ಕೆ ಪಾರವೇ ಇಲ್ಲ. ಅಲ್ಲದೆ ರಜೆಯು ತಾಯಿ, ತಂದೆಯವರೊಂದಿಗೆ ಇಲ್ಲ. ಕೇವಲ ಅಜ್ಜ ಮತ್ತು ಅಜ್ಜರೊಡನೆ ಎಂಬ ಕಲ್ಪನೆ ಅವರಿಗೆ ಅಪಾರ ಸಂತಸ ತಂದಿತ್ತು. ಊಟ ಮುಗಿದ ಮೇಲೆ ಅಜ್ಜಿ ತನ್ನ ಕಾಟನ್ ಸೀರೆ ಸೆರಗಿನಲ್ಲಿ ಮುಖವರೆಸುತ್ತಾ ಎತ್ತರವಾದ ಸೀಲಿಂಗ್ ಫ್ಯಾನ್ ಕೆಳಗೆ ಗುಡಾರ ಹಾಸಿದಳು. ಮಕ್ಕಳು ಕೂಡ ದಿಂಬು
ತಂದಿತ್ತರು. ಎಲ್ಲರೂ ಒಕ್ಕೂರಲಿನಿಂದ ಅಜ್ಜಿ ಕಥೆ, ಕಥೆ ಹೇಳು ಎಂದರು.

ಬನ್ನಿ ಮಕ್ಕಳೇ ನಾವೂ ಅವರೊಂದಿಗೆ ಸೇರಿ ತಂಪಾದ ಗಾಳಿಯಲ್ಲಿ ಪ್ರೀತಿಯ ಅಜ್ಜಿಯ ಕಥೆ ಕೇಳೋಣವೇ. ನನಗೂ, ನಿಮಗೂ ಇದು ಸೇರುತ್ತದೆ ಅಲ್ಲವೇ? ಡಾಕ್ಟರ್ ಡಾಕ್ಟರ್ ‘ಅಜ್ಜೀ, ನಿನ್ನದೊಂದು ಕಥೆಯ ಚೀಲ ಇರಲೇಬೇಕು. ಯಾವಾಗಲೂ ಬಂದಿಲ್ಲ ಒಂದು ಕಥೆ ನಿನಗೆ ಗೊತ್ತೇ ಇರತ್ತದೆ ಅದು ಹೇಗೆ?’ ನಸುನಗುತ್ತ ಅಜ್ಜಿ ಹೇಳಿದಳು ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳಂ ನೋಡುತಂ, ಕೆಲವಂ ಮಾಳ್ವರಂ ಕಂಡು….

‘ಅಂದರೇನು ಅಜ್ಜಿ? ’ ಮಕ್ಕಳು ಅಚ್ಚರಿಪಟ್ಟರು. ‘ಅದೆಲ್ಲ ಇರಲಿ ನೀವು ದೊಡ್ಡವರಾದ ಮೇಲೆ ಏನು ಮಾಡಬೇಕಂತೀರಿ? ಅಜ್ಜನ ಥರ ಟೀಚರ್ ಆಗ್ತೀರಾ, ಅಮ್ಮನ ಥರಾ ಬ್ಯಾಾಂಕಿನಲ್ಲಿ ಕೆಲ್ಸ ಮಾಡ್ತೀರಾ…? ಅಪ್ಪನ ಥರಾ ಬಿಸಿನೆಸ್ ಮಾಡ್ತೀರಾ…?’ ನಾನು ಫ್ಯಾಷನ್ ಡಿಸೈನ್ ಮಾಡ್ತೀನಿ ಎಂದಳು ಕೃಷ್ಣ. ನಾನು ಪೈಲೆಟ್ ಆಗ್ತೀನಿ ಅಂದಳು ಅನುಷ್ಕಾ. ನಾನು ಮಿಲ್ಟ್ರಿ ಸೇರಿ ದೇಶಸೇವೆ ಮಾಡ್ತೀನಿ ಅಂದ ರಘು. ನಾನು ಇನ್ನೂ ಯಾವುದಕ್ಕೂ ನಿರ್ಧಾರನೇ ಮಾಡಿಲ್ಲ ಎಂದಳು ಮೀನು.

‘ಸರಿ ಹಾಗಿದ್ರೆ ನಾನೊಂದು ಕಥೆ ಹೇಳ್ತೀನಿ ಡಾಕ್ಟರ್ ಬಗ್ಗೆ ಯಾವುದೇ ಕೆಲಸ ಮಾಡಿದ್ರೂ ಅದು ಎಲ್ಲರಿಗೂ ಉಪಯೋಗ ಆಗಬೇಕ್ ಅಂತಾ ನನಗೆ ಅನಿಸಿದೆ’ ‘ಅಜ್ಜಿ ಬೇಗ ಹೇಳು’ ಮಕ್ಕಳು ದುಂಬಾಲು ಬಿದ್ದರು. ಮಧ್ಯಾಹ್ನದ ಬಿಸಿಲು ತಲೆ ಒಡೆಯುವ ಥರ ಇತ್ತು. ಭೂಮಿ ಕಾದ ಕಾವಲಿಯಾಗಿತ್ತು. ರವಿ ತನ್ನ ಚಿಕ್ಕದಾದ ಗೂಡಂಗಡಿಯಲ್ಲಿ ಯಾವುದೇ ಗೂಡಂಗಡಿಯಲ್ಲಿ ಯಾವುದೇ ಗಿರಾಕಿಗಳಿಲ್ಲದೇ ಸುಮ್ಮನೇ ಕುಳಿತಿದ್ದ. ಅಂಗಡಿ ಮುಂದಿರುವ ಕುರ್ಚಿಗಳು ನೀರಸವಾಗಿ ಜನರಿಗೆ ಹಾದಿ ಕಾಯುತ್ತಿದ್ದವು. ಡಬ್ಬಿ ತೆಗೆದ. ಮಣ್ಣಿನ ಹೂಜಿಯಲ್ಲಿ ಒಂದು ಲೋಟ ಮಾತ್ರವೇ ನೀರಿತ್ತು. ಅಷ್ಟರಲ್ಲಿ ಮುಪ್ಪಿನ ಮುದುಕ ಕೈಗೋಲು ಹಿಡಿದು
ಅಂಗಡಿಯ ಹತ್ತಿರ ಬಂದ. ದಣಿವಿನಿಂದ ಕುರ್ಚಿಯ ಮೇಲೆ ಕುಳಿತು ಹತ್ತಿರವೇ ಇದ್ದ ಬೀಸಣಿಕೆಯಿಂದ ಗಾಳಿಬೀಸಿಕೊಂಡ. ರವಿಯ ನೋಡಿ ‘ಮಗು ತುಂಬಾ ಬಾಯಾರಿದೆ. ಒಂದು ಲೋಟ ನೀರಿದ್ರೆ ಕೊಡ್ತೀಯಾ?’ ಎಂದು ಅಂಗಲಾಚಿದ.

ರವಿ ಮತ್ತೆ ಮಣ್ಣಿಿನ ಹೂಜಿಯ ಕಡೆಗೆ ನೋಡಿದ. ಒಂದೇ ಒಂದು ಲೋಟದಷ್ಟು ನೀರಿತ್ತು. ಮತ್ತೆ ಮುದಕನನ್ನು ನೋಡಿದ. ಪಾಪ ವಯಸ್ಸಾಗಿದೆ. ಮತ್ತೆಲ್ಲಿಗೆ ಹೋಗುತ್ತಾನೆ? ಈ ಬಿರುಬಿಸಿಲಿನಲ್ಲಿ? ಮತ್ತೆ ತನ್ನ ನೆನಪಾಯಿತು. ತನಗೆ ಕುಡಿಯಲು ನೀರು ಬೇಕಾದರೆ? ಒಂದು ಕ್ಷಣ ಯೋಚಿಸಿ ‘ತಾತ ಒಂದೇ ಲೋಟ ನೀರಿದೆ. ಅಷ್ಟು ಮಾತ್ರ ಕೊಡಬಲ್ಲೇ. ಸುತ್ತಲೂ ಎಲ್ಲಿಯೂ ನೀರಿಲ್ಲ… ‘ಅಷ್ಟೇ ಕೊಡಪ್ಪ, ಪ್ರಾಣ ಹೋದಂತಾಗಿದೆ’ ಎಂದ ಮುದುಕ.

ಹೂಜಿಯನ್ನು ಬಗ್ಗಿಸಿ ತಂಪಾದ ನೀರನ್ನು ಲೋಟದಲ್ಲಿ ಹಾಕಿ ನೀಡಿದ ರವಿ. ಮುದುಕ ಕೈಚಾಚಿದ. ಸ್ವಲ್ಪಹೊತ್ತು ಸುಧಾರಿಸಿಕೊಂಡು ಮುದುಕ ಹೊರಟುಹೋದ. ರವಿ ತನ್ನ ಊಟದ ಡಬ್ಬಿಯಿಂದ ನಿಧಾನವಾಗಿ ಊಟ ಆರಂಭಿಸಿದ. ಅವನು ಅಂದುಕೊಂಡಂತೆ ಅವನಿಗೆ ಬಿಕ್ಕಳಿಕೆ ಬಂದಿತು. ನೀರು ಕೂಡಲೇ ಕುಡಿಯಬೇಕು ಎನಿಸಿತು. ಹೂಜಿಯಲ್ಲಿ ಒಂದೆರಡು ಹನಿ ನೀರಿದ್ದರೆ ನೋಡೋಣ ಎಂದು ನಿರಾಸೆಯಿಂದ ಲೋಟಕ್ಕೆ ಬಗ್ಗಿಸಿದ. ಅವನಿಗೆ ಅಚ್ಚರಿ ಕಾದಿತ್ತು. ಧಾರಾಕಾರವಾಗಿ ಖಾಲಿ
ಯಾದ ಹೂಜಿಯಿಂದ ತಂಪಾದ ನೀರು ಲೋಟ ತುಂಬುವಷ್ಟು ಬಂದಿತು. ರವಿಗೆ ಅಚ್ಚರಿಯೋ ಅಚ್ಚರಿ. ಮತ್ತೆ ನೋಡಿದ. ಬಗ್ಗಿ ನೋಡಿದ. ಹೂಜಿಯಲ್ಲಿ ನೀರಿಲ್ಲ. ಇದೇನು ಅನ್ನುತ್ತ ನೀರು ಕುಡಿದ. ತಂಪಾದ ತೆಂಗಿನಕಾಯಿಯ ಎಳೆನೀರಿನಂತೆ ಇತ್ತು ಅದರ ರುಚಿ. ಅವನಿಗೆ ಅರ್ಥವೇ ಆಗಲಿಲ್ಲ. ಅಷ್ಟರಲ್ಲಿ ಚಿಕ್ಕ ಹುಡುಗಿ ಜುಲೇಕ ಬಂದಳು. ‘ಅಣ್ಣ ಒಂದು ನಾಲ್ಕು ಅನಾಸಿನ್ ಮಾತ್ರೆ ಬೇಕಂತೆ. ಅಮ್ಮನಿಗೆ, ನನಗೆ ಇಬ್ಬರಿಗೂ ತಲೆನೋವು’ ಅರ್ಜೆಂಟ್ ಎಂದು ರವಿ ಅನಾಸಿನ್ ಮಾತ್ರೆ ಇಟ್ಟ ಬೀರುವಿನ ಬಾಗಿಲು ತೆಗೆಯುವಾಗ ಜಿಲೇಕ ‘ ಅಣ್ಣ ತುಂಬಾ ಬಿಸಿಲು, ಸ್ವಲ್ಪ ನೀರಿದೆಯಾ? ಎಂದು ಹೂಜಿಯನ್ನು ನೋಡುತ್ತಾ ಕೇಳಿದಳು.

ರವಿಗೆ ಈ ಚಮತ್ಕಾರದ ನೆನಪಾಯಿತು. ಲೋಟಕ್ಕೆ ನೀರು ಹೂಜಿಯಿಂದ ಬಗ್ಗಿಸಿದ. ಸರಸರನೇ ನೀರು ಇಳಿದು ಬಂದು ಲೋಟ ತುಂಬಿತು. ಜುಲೇಕ ಆ ನೀರನ್ನು ಕುಡಿದು ಕೆಲನಿಮಿಷದಲ್ಲಿ ‘ಅಣ್ಣಾ ಎರಡೇ ಮಾತ್ರೆ ಸಾಕು. ನನಗೆ ತಲೆ ನೋವಿಲ್ಲ’ ಎಂದಳು.
‘ ಈಗತಾನೇ ತಲೆನೋವು ಅಂದಿದ್ದೆ..’ ಎಂದ ರವಿ. ‘ಹೌದು ಆಗ ಇತ್ತು. ಈಗಿಲ್ಲ’ ಎನ್ನುತ್ತ ಎರಡು ಮಾತ್ರೆ ತೆಗೆದುಕೊಂಡು ಜುಲೇಕ ಚಿಗರೆಯಂತೆ ಉತ್ಸಾಹದಿಂದ ಓಡಿದಳು. ರವಿ ತಬ್ಬಿಬ್ಬಾದ. ಕೂಡಲೇ ಜುಲೇಕಾಳ ತಾಯಿ ಫಾತಿಮಾ ಬರುವುದು ಅವನಿಗೆ ಕಾಣಿಸಿತು. ‘ರವಿ ನೀನು ಜುಲೇಕಳಿಗೆ ಔಷಧಿ ನೀರೂ ಕೊಟ್ಟೆಯಂತೆ, ಅವಳಿಗೆ ಈಗ ತಲೆನೋವಿಲ್ಲ. ನಾನೂ ಮಾತ್ರೆ ತೆಗೆದುಕೊಂಡಿಲ್ಲ. ನನಗೂ ಆ ಮಂತ್ರದ ನೀರು ಕೊಡು’ ಎಂದು ಕೈಯಲ್ಲಿ ಮಾತ್ರೆ ಹಿಡಿದುಕೊಂಡು ಫಾತಿಮಾ ಕೇಳಿದಳು.
‘ಅದು ಮಂತ್ರದ ನೀರೂ ಅಲ್ಲ ಔಷಧಿಯ ನೀರೂ ಅಲ್ಲ. ಬರೀ ನೀರು. ನೀ ಆ ಹುಡುಗಿಯ ಮಾತು ಕೇಳಿ ಬಂದೆಯಾ?’ ಎಂದ ರವಿ. ‘ಅದೇನೆ ಇರಲಿ ಆ ನೀರು ನನಗೂ ಕೊಡು ಎಂದು ಫಾತಿಮಾ ಬೆನ್ನುಹತ್ತಿದಳು.

ರವಿ ಮುಂಚಿನಂತೆಯೇ ಹೂಜಿ ಬಗ್ಗಿಸಿದ. ಒಂದು ಲೋಟದ ತುಂಬ ನೀರು ಬಂದಿತು. ಫಾತಿಮಾ ಕುಡಿದಳು. ಮುಂದೆ ಒಂದೇ ನಿಮಿಷದಲ್ಲಿ ಸಂತೋಷದಿಂದ ‘ರವಿ ನಿಜವಾಗಿಯೂ ನನಗೆ ತಲೆ ನೋವಿಲ್ಲ ಎಂದು ಹೇಳಿದಳು. ಊರಿನಲ್ಲಿ ಸುದ್ದಿ ಹಬ್ಬಿತು. ರವಿಯ ಬಳಿ ಮಣ್ಣಿನ ಹೂಜಿಯಲ್ಲಿ ವಿಶೇಷವಾದ ಔಷಧದ ನೀರಿದೆಯಂತೆ. ಆದ್ದರಿಂದ ಕಾಯಿಲೆ ಕೂಡಲೇ ಗುಣವಾಗುವು ದಂತೆ. ಕೂಡಲೇ ಕಾಯಿಲೆಯವರೆಲ್ಲ ಬಂದು ಅಂಗಡಿ ಹತ್ತಿರ ನಿಂತುಕೊಂಡರು. ರವಿ ಹೂಜಿಯಿಂದ ನೀರು ಕೊಡುತ್ತಲೇ ಹೋದ. ಅವರು ನಗುತ್ತ ತಿರುಗಿ ಹೋಗುತ್ತಿದ್ದರು. ಮರುದಿನ ರವಿ ಅಂಗಡಿ ಬಾಗಿಲು ತೆರೆಯುವಾಗ ಬೇರೆ ಬೇರೆ ಊರಿನಿಂದ ಬಂದ ಜನರ ಸರದಿ ಸಾಲು ನಿಂತಿತ್ತು.

ರವಿ ಯಾರಿಗೂ ಇಲ್ಲ ಎನಲಿಲ್ಲ. ಬಂದವರಿಗೆ ನೀರು ಕೊಡುತ್ತಲೇ ಹೋದ. ನೀರು ಕುಡಿದವರು ಅಲ್ಲಿಯೇ ಇದ್ದ ಒಂದು ಡಬ್ಬಕ್ಕೆ ತಮಗೆ ತಿಳಿದಷ್ಟು ಹಣ ಹಾಕುತ್ತಿದ್ದರೆ ರವಿ ದುಡ್ಡು ಎಣಿಸಲೂ ಇಲ್ಲ. ಹೀಗೆ ದಿನಗಳು ಉರುಳಿದವು. ರವಿ ಅಂಗಡಿಯನ್ನು ಸರಿಪಡಿಸಿಕೊಂಡ. ಮನೆ ಮಾಡಿಕೊಂಡ. ಒಂದು ದಿನ ಒಬ್ಬ ಅಪರಿಚಿತ ವ್ಯಕ್ತಿ ಯಾರೂ ಇಲ್ಲದಾಗ ರವಿಯ ಅಂಗಡಿಗೆ ಬಂದ.
‘ನಮ್ಮ ಯಜಮಾನರು ತುಂಬಾ ಶ್ರೀಮಂತರು. ಅವರಿಗೆ ಕಾಯಿಲೆಯಾಗಿದೆ, ನಿಮ್ಮ ನೀರು ಬೇಕು’ ‘ನನ್ನ ನೀರಿಗೆ ಅವರೇ ಬರಬೇಕು’ ಬೇರೆಯವರ ಕಡೆಯಿಂದ ಕಳುಹಿಸಿದರೆ ಸರಿ ಆಗುವುದಿಲ್ಲ.

‘ನಮ್ಮ ಯಜಮಾನರು ತುಂಬಾ ಶ್ರೀಮಂತರು. ಅವರಿಗೆ ಇಂಥಲ್ಲಿ ಬರಲಾಗುವುದಿಲ್ಲ. ನೀವು ಹೂಜಿಯೊಂದಿಗೆ ಬಂದರೆ ನೂರು ಚಿನ್ನದ ನಾಣ್ಯ ಕೊಡುತ್ತಾರೆ. ರವಿಗೆ ದಿಗ್ಭ್ರಮೆಯಾಯಿತು. ಇದುವರೆಗೆ ಯಾರೂ ಇಂಥಾ ದೊಡ್ಡ ಮೊತ್ತದ ಮಾತೇ ಆಡಿರಲಿಲ್ಲ. ಬಂದವರೆಲ್ಲ ಬಡವರೇ, ಅವರು ಕೊಡುವ ದುಡ್ಡು ಅಷ್ಟೇ, ಪುಡಿಗಾಸು. ಕೆಲವರು ಔಷಧಿಯ ನೀರಿಗೆ ಬಂದವರು. ಅಂಗಡಿಯಿಂದ ಕೆಲ ಸಾಮಾನು ಖರೀದಿ ಮಾಡುತ್ತಿದ್ದರು. ಆದರೆ ಈ ನೂರು ಚಿನ್ನದ ನಾಣ್ಯ ! ಅವನ ಬಾಯಲ್ಲಿ ನೀರು
ಬಂದಿತು. ಇನ್ನೇನು ರವಿ ಹೊರಡಬೇಕು ಅನ್ನುವಾಗ ಒಬ್ಬ ಮುದುಕ ಬಂದ.

‘ಮಗು ನನಗೆ ನೀರಡಿಕೆ. ನಿನ್ನ ಔಷಧಿ ನೀರು ಬೇಕು’ ‘ತಾತ ಈಗ ಈ ನೀರು ಕುಡಿ. ನಾನು ಹೀಗೆ ಹೋದೆ ಹೀಗೆ ಬಂದೆ. ಬಂದು ನಿನಗೆ ಔಷಧಿ ನೀರು ಕೊಡುವೆ ಎನ್ನುತ್ತಾ ರವಿ ಮತ್ತೆ ಬೇರೆ ನೀರು ಕೊಟ್ಟು ಹೊರಟ. ಸಿರಿವಂತರ ಮನೆ ಮುಟ್ಟಿದಾಗ ಆತ ಕಾಯಿಲೆಯಿಂದ ನರಳುತ್ತಿದ್ದ. ರವಿ ನೀರು ಬಗ್ಗಿಸಿದ. ನೀರು ಬರಲೇ ಇಲ್ಲ. ಮತ್ತೆ ಮತ್ತೆ ನೀರು ಬಗ್ಗಿಸಲು ಪ್ರಯತ್ನಿಸಿದ. ನೀರು ಬರಲೇ ಇಲ್ಲ. ಸಿರಿವಂತನಿಗೆ ಕೋಪ ಬಂದಿತು. ‘ನನ್ನ ಹತ್ತಿರ ನಾಟಕ ಆಡ್ತೀಯಾ? ನಡೀ ಹೊರಗೆ’  ಎಂದು ಕೋಪದಿಂದ ಹೊರದೂಡಿದ.

ನಿರಾಶನಾಗಿ ರವಿ ತನ್ನ ಅಂಗಡಿಗೆ ಬಂದ. ಹೋದಾಗ ಇರುವ ಉತ್ಸಾಹ ತಗ್ಗಿಹೋಗಿತ್ತು. ಅಂಗಡಿಯ ಮುಂದೆ ತಾತ ಇರಲೇ ಇಲ್ಲ. ರವಿಗೆ ತನ್ನ ತಪ್ಪಿನ ಅರಿವಾಯಿತು. ತಾನು ಆ ಔಷಧಿಯ ನೀರಿನಿಂದ ಬಡವರನ್ನು ರಕ್ಷಿಸದೆ ಸಿರಿವಂತರ ಹಿಂದೆ ಹೋಡಿದೆನೋ ಅಂದೆ ಆಶಕ್ತಿ ಮಾಯವಾಯಿತು. ವೈದ್ಯನಲ್ಲದಿದ್ದರೂ ಆ ವಿಶೇಷವಾದ ನೀರು ಅವನನ್ನು ವೈದ್ಯನನ್ನಾಗಿ ಮಾಡಿತ್ತು. ಮತ್ತೆ ರವಿ ಹಿಂದಿನಂತೆಯೇ ಅಂಗಡಿ ನಡೆಸುತ್ತಾ ಆ ತಾತನಿಗಾಗಿ ದಾರಿಕಾಯುತ್ತ ಕುಳಿತ.

ಅಜ್ಜಿ ಈ ಕಥೆಯನ್ನು ಹೇಳಿ ‘ಮಕ್ಕಳೇ ನೀವು ಯಾವುದೇ ಕೆಲಸದಲ್ಲಿ ಇರಲಿ, ಬಡವರಿಗಾಗಿ, ಬೇರೆಯವರಿಗಾಗಿ ಸಹಾಯ ಮಾಡಲೇ
ಬೇಕು. ಎಂದು ನೀವು ಆ ಕೆಲಸವನ್ನು ಮಾಡುವುದಿಲ್ಲವೋ ಅಂದಿನಿಂದ ದೇವರು ಸಹಿತ ನಿಮಗೆ ಸಹಾಯ ಮಾಡುವುದಿಲ್ಲ’ ಎಂದಳು. ಕೂಡಲೇ ಮೀನು ‘ ಅಜ್ಜಿ ನಾನೂ ಡಾಕ್ಟರ್ ಆಗ್ತೇನಿ. ಬಡವರಿಗೆ ಸಹಾಯ ಮಾಡ್ತೀನಿ. ರವಿ ಥರ ಆಗೋದಿಲ್ಲ’ ಎಂದಳು. ಉಳಿದ ಮಕ್ಕಳು ಡಾಕ್ಟರ್ ಡಾಕ್ಟರ್ ಎಂದು ಮೀನುಗೆ ಚುಡಾಯಿಸಿದರು.