Saturday, 23rd November 2024

ಮಗಳು-ಅಳಿಯನ ಮನೆಗೆ ಹೋಗಲು ಅತ್ತೆಗೆ ಇನ್ನೂ ಸವುಡು ಸಿಕ್ಕಿಲ್ಲ !

ಇದೇ ಅಂತರಂಗ ಸುದ್ದಿ

vbhat@me.com

ಮೊನ್ನೆ ಸುಧಾಮೂರ್ತಿಯವರು ಮಾತಿಗೆ ಸಿಕ್ಕಿದ್ದರು. ತಮ್ಮ ಪತಿ ನಾರಾಯಣಮೂರ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ, ಮೊನ್ನೆ ರಾಷ್ಟ್ರಪತಿ ಭವನದಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರಷ್ಟೇ. ಮೈಸೂರು ಸೀರೆಯುಟ್ಟು (ಅವರ ಸಹೋದರಿ ಕೊಟ್ಟಿದ್ದಂತೆ) ಮಲ್ಲಿಗೆ ದಂಡೆ ಮುಡಿದು, ಪ್ರಶಸ್ತಿ ಸ್ವೀಕರಿಸಲು ಅವರು ಹೆಜ್ಜೆ ಹಾಕಿದಾಗ ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ಆನಂದಭಾಷ್ಪ ಹನಿಯಾಗಿದ್ದು ಸುಳ್ಳಲ್ಲ.

‘ನಾನು ಕುಳಿತ ಜಾಗದಿಂದ, ರಾಷ್ಟ್ರಪತಿ ಅವರ ತನಕ ಹೋಗಲು ಹದಿನೈದು ಹೆಜ್ಜೆಗಳನ್ನು ಹಾಕಿದೆ. ಅದಕ್ಕೂ ಮುನ್ನ ನಮಗೆ ರಿಹರ್ಸಲ್ ಮಾಡಿಸಿದ್ದರು. ಆದರೆ ನನ್ನ ಹೆಸರು ಕರೆದಾಗ, ಆಸನದಿಂದ ಎದ್ದು ರಾಷ್ಟ್ರಪತಿಗಳತ್ತ ಹೆಜ್ಜೆ ಹಾಕುವಾಗ ನನ್ನ ಬದುಕಿನ ಹದಿನೈದು ಮಜಲುಗಳು ನೆನಪಾದವು. ಆ ಪ್ರಶಸ್ತಿ ನನ್ನ ಸಾಧನೆಗೆ ಬಂತು ಅಂದುಕೊಳ್ಳುತ್ತೇವೆ. ಆದರೆ ನಮ್ಮ ಜೀವನದಲ್ಲಿ ಅಸಂಖ್ಯ ಜನ ಬಂದು ಹೋಗಿರುತ್ತಾರೆ. ಅವರೆಲ್ಲರಿಂದ ನಾವು ಸ್ವಲ್ಪ ಸ್ವಲ್ಪ ಅನುಭವಗಳನ್ನು ಪಡೆದು ಈಗಿನ ನಾವಾಗಿರುತ್ತೇವೆ.

ಹೀಗಾಗಿ ನಾನು, ನಾನೊಬ್ಬನೇ ಅಲ್ಲ. ಅಸಂಖ್ಯ ಜನರಿಂದ ಆದವನು ನಾನು’ ಎಂದು ಅತ್ಯಂತ ವಿನೀತ ಭಾವದಿಂದ ಹೇಳಿದರು. ಸುಧಾಮೂರ್ತಿಯವರ ಮಗಳು ಅಕ್ಷತಾ, ತಮ್ಮ ತಾಯಿ ಪ್ರಶಸ್ತಿ ಸ್ವೀಕರಿಸುವುದನ್ನು ಕಣ್ಣುಗಳಲ್ಲಿ ತುಂಬಿಸಿಕೊಳ್ಳ ಲೆಂದೇ ಲಂಡನ್‌ನಿಂದ ಬಂದಿದ್ದರು. ಅವರು ಹೇಳಿಕೇಳಿ, ಬ್ರಿಟನ್ ಪ್ರಧಾನಿ ಪತ್ನಿ. ಆದರೆ ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಆದರೆ ವಿದೇಶಾಂಗ ಸಚಿವ ಜೈಶಂಕರ, ಅಕ್ಷತಾ ಅವರನ್ನು ನೋಡಿ, ಶಿಷ್ಟಾಚಾರದಂತೆ ಮುಂದಿನ ಸಾಲಿಗೆ ಕರೆದರು.

ಅಕ್ಷತಾ ತೀರಾ ಸಂಕೋಚದಿಂದ ಮುಂದೆ ಹೋಗಿ ಕುಳಿತರು. ತಮ್ಮ ಮಗಳು (ಬ್ರಿಟನ್ ಪ್ರಧಾನಿ ಪತ್ನಿ) ಬರುವುದನ್ನು ಸಮಾರಂಭದ ಆಯೋಜಕರಿಗೆ ಸುಧಾಮೂರ್ತಿ ಮುಂಚೆಯೇ ತಿಳಿಸಿರಲಿಲ್ಲವೇನೋ ಅಥವಾ ತಿಳಿಸುವುದು ಬೇಡವೆಂದು ಸ್ವತಃ ಮಗಳೇ ಹೇಳಿರಬಹುದೇನೋ. ಇಂಥ ವಿಷಯದಲ್ಲಿ ಸುಧಾಮೂರ್ತಿಯವರಿಗೆ ಸಹಜ ಸಂಕೋಚ. ಇದು ಅವರನ್ನು ಬಲ್ಲವರಿಗೆಲ್ಲ ಗೊತ್ತಿರುವ ಸಂಗತಿಯೇ. ಅವರೆಂದೂ atention-seeker ಅಲ್ಲವೇ ಅಲ್ಲ.

ತಮ್ಮನ್ನು ವೇದಿಕೆಗೆ ಕರೆಯದಿದ್ದರೇ ಸುರಕ್ಷಿತ ಎಂದು ಭಾವಿಸುವವರು ಅವರು. ಅವರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಯಾಗಿ ಕರೆದರೆ ಬರುವ ಸಾಧ್ಯತೆ ಕಮ್ಮಿ. ಅದೇ ಪ್ರೇಕ್ಷಕರಾಗಿ ಆಹ್ವಾನಿಸಿದರೆ ಆಗಮಿಸುವ ಸಾಧ್ಯತೆ ಹೆಚ್ಚು. ಸುಧಾಮೂರ್ತಿ ಯವರು ಎಂದೂ ಶ್ರೀಮಂತಿಕೆಯನ್ನು ಪ್ರದರ್ಶಿಸಿಕೊಂಡವರಲ್ಲ. ಅವರು ತಮ್ಮ ಸಜ್ಜನಿಕೆಯನ್ನೇ ಶ್ರೀಮಂತಿಕೆ ಎಂದು ಭಾವಿಸಿ ದವರು.

ಸುಧಾಮೂರ್ತಿ ಅದೆಂಥ ಸರಳ, ನಿಗರ್ವಿ ಮತ್ತು ಸಜ್ಜನಿಕೆ ಮೂರ್ತಿ ಅಂದ್ರೆ ಅವರ ಮಗಳ ಗಂಡ ಬ್ರಿಟನ್‌ನ ಪ್ರಧಾನಿ ಯಾಗಿ ಆರು ತಿಂಗಳುಗಳಾದವು. ಆದರೆ ಅಳಿಯ ಮತ್ತು ಮಗಳನ್ನು ನೋಡಲು ಇನ್ನೂ ಅವರಿಗೆ ಸವುಡು ಸಿಕ್ಕಿಲ್ಲ. ಬೇರೆಯವ ರಾಗಿದ್ದರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಿ, ಮಗಳ ಮನೆಯಲ್ಲಿ ಒಂದು ತಿಂಗಳು ಠಿಕಾಣಿ ಹೂಡಿ ಬಂದಿರು ತ್ತಿದ್ದರು.

ಪ್ರಧಾನಿ ಅಧಿಕೃತ ನಿವಾಸವಾದ ೧೦, ಡೌನಿಂಗ್ ಸ್ಟ್ರೀಟ್‌ನ ಬೀಡು ಬಿಟ್ಟಿರುತ್ತಿದ್ದರು. ಹಾಗೆ ಮಾಡಿದ್ದರೆ ಯಾರೂ ಕೇಳುತ್ತಿರ ಲಿಲ್ಲ. ಆದರೆ ತಮ್ಮ ಅಳಿಯ ಬ್ರಿಟನ್ನಿನ ಪ್ರಧಾನಿಯಾದರೂ, ಸುಧಾಮೂರ್ತಿಯವರಿಗೆ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ‘ಬಹಳ ಓಡಾಟ, ಕೈತುಂಬಾ ಕೆಲಸ. ಇನ್ನೂ ಅಲ್ಲಿಗೆ ಹೋಗಲು ಆಗಿಲ್ಲ. ಮೊನ್ನೆ ಮೂರ್ತಿ (ಪತಿ) ಯವರು ಹೋಗಿ ಅರ್ಧ ಗಂಟೆ ಇದ್ದು ಬಂದರು’ ಎಂದರು ಸುಧಾಮೂರ್ತಿ. ಅಂದರೆ ಪ್ರಧಾನಿಯಾದ ಬಳಿಕ ನಾರಾಯಣಮೂರ್ತಿ ಯವರು ಮೊದಲ ಬಾರಿಗೆ ಅಳಿಯ-ಮಗಳು ಮತ್ತು ಮೊಮ್ಮಕ್ಕಳನ್ನು ನೋಡಲು ೧೦, ಡೌನಿಂಗ್ ಸ್ಟ್ರೀಟ್ ನಿವಾಸಕ್ಕೆ ಹೋಗಿ ಕಳೆದಿದ್ದು ಕೇವಲ ಅರ್ಧ ಗಂಟೆ! ಈ ವಿಷಯದಲ್ಲಿ ನಾರಾಯಣಮೂರ್ತಿಯವರೂ ಹೊರತಲ್ಲ.

ಹೆಚ್ಚುವರಿ ಗಮನ ಸೆಳೆಯಲು ಪ್ರಯತ್ನಿಸದ ಅವರೂ ಸಂಕೋಚಕ್ಕೆ ಮುದುಡುವ ಗುಬ್ಬಿ ಮರಿ! ಬ್ರಿಟನ್ ಪ್ರಧಾನಿ ಅತ್ತೆಯಾದ ಸುಧಾಮೂರ್ತಿಯವರ ಜಾಗದಲ್ಲಿ ಬೇರೆಯವರನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿ. ನನ್ನ ಅಪ್ಪ ಶಾಸಕ, ನನ್ನ ತಂದೆ ಮಂತ್ರಿ, ನಾನು ಐಎಎಸ್ ಅಧಿಕಾರಿ ಮಗ ಎಂದು ಡೌಲು, ದರ್ಪ ಮೆರೆಯುವವರು ನಮ್ಮ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ‘ನಾನ್ಯಾರು ಗೊತ್ತಾ?’ ಎಂದು ಪೋಸು ಕೊಡುತ್ತಾರೆ.

ಅಂಥವರ ಹಿನ್ನೆಲೆಯಲ್ಲಿ ಮೂರ್ತಿ ದಂಪತಿಗಳನ್ನಿಟ್ಟು ನೋಡಿದರೆ ಅವರ ದೊಡ್ಡತನ ಗೊತ್ತಾಗುತ್ತದೆ. ನನಗೆ ತಿಳಿದಂತೆ, ಅಳಿಯ ಬ್ರಿಟನ್ ಪ್ರಧಾನಿ ಆದ ನಂತರ ಸುಧಾಮೂರ್ತಿಯವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೂ ಸ್ವಲ್ಪ ಕಡಿಮೆ ಮಾಡಿದ್ದಾರೆ. ಹೋದ ‘ಬ್ರಿಟನ್ ಪ್ರಧಾನಿ ಅತ್ತೆ’ ಎಂದು ಸಂಬೋಧಿಸುತ್ತಾರೆಂಬ ಸಂಕೋಚ.

ಅಳಿಯ ಪ್ರಧಾನಿಯಾದ ಬಳಿಕ ಅವರು ಮಗಳಿಗೆ ಹೇಳಿದ ಕಿವಿಮಾತೆಂದರೆ, ‘ರಿಷಿ ನಿನ್ನ ಪತಿಯೇ ಆಗಿರಬಹುದು, ಆತ ಬ್ರಿಟನ್ ಪ್ರಧಾನಿ. ಆತ ಇಡೀ ದೇಶಕ್ಕೆ ಸೇರಿದವನು. ಅವನ ಮುಂದೆ ಯಾವ ಸಮಸ್ಯೆಗಳನ್ನೂ ಹೇಳಿಕೊಳ್ಳಬೇಡ. ಅವನಿಗೆ ಅವನದೇ ಆದ ಸಾವಿರಾರು ಸಮಸ್ಯೆಗಳಿರುತ್ತವೆ. ಯಾವತ್ತೂ ನಗುತ್ತಲೇ ಇರು. ಅವನಿಗೆ ಶಕ್ತಿಮೀರಿ ಸಹಕಾರ ನೀಡು. ಆತನ ಗೆಲುವಿನಲ್ಲಿ ನಿನ್ನ ದೊಡ್ಡ ಪಾತ್ರ ಇದೆ ಎಂಬುದನ್ನು ಮರೆಯಬೇಡ. ಆತನ ರಾಜಕಾರಣದಲ್ಲಿ ಎಂದೂ ಪ್ರವೇಶಸಿಸಬೇಡ. ಆದರೆ ಆತನ ಕಾರ್ಯದಲ್ಲಿ ಅಗತ್ಯಬಿದ್ದರೆ ನೆರವಾಗು.

ಆತನ ನಿಲುವಿಗೆ ವ್ಯತಿರಿವಾಗಿ ನಿನ್ನ ಅನಿಸಿಕೆಯನ್ನು ಪ್ರಕಟಿಸಬೇಡ. ಅದು ಅವನ ನಿಲುವಿನ ಮೇಲೆ ಪರಿಣಾಮವನ್ನುಂಟು ಮಾಡಬಹುದು.’ ಒಬ್ಬ ತಾಯಿಯಾಗಿ ಮಗಳಿಗೆ ಹೇಳಬಹುದಾದ ಜವಾಬ್ದಾರಿಯ ಹಿತನುಡಿಗಳಿವು. ಮಗಳಾಗಿಯೇ ಫೋನ್ ಮಾಡಿದರೆ, ಸುಧಾಮೂರ್ತಿ ಮಾತಾಡುತ್ತಾರೆ. ಇವರಾಗಿಯೇ ಮಗಳಿಗೆ ಫೋನ್ ಮಾಡುವುದು ಕಮ್ಮಿ.

ಸುಧಾಮೂರ್ತಿಯವರು ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ನೆಟ್ಟಗೆ ನಾಲ್ಕು ದಿನ ಒಂದು ಊರಲ್ಲಿ ಇರುವವರಲ್ಲ. ಸದಾ ಪ್ರವಾಸ, ಕಾರ್ಯಕ್ರಮ, ಬರವಣಿಗೆ, ಅಧ್ಯಯನ, ಮೀಟಿಂಗ್.. ಹೀಗೆ ಸದಾ ಕಾರ್ಯಶೀಲ. ಅವರು ನಮ್ಮ ದೇಶದ ಜನಪ್ರಿಯ ಇಂಗ್ಲಿಷ್ ಬರಹಗಾರರಲ್ಲಿ ಒಬ್ಬರು. ಅವರ ಒಂದೊಂದು ಕೃತಿಯ ಐದಾರು ಲಕ್ಷ ಪ್ರತಿಗಳು ಮಾರಾಟವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸುಧಾಮೂರ್ತಿಯವರಂತೆ ಬರೆದ ಮತ್ತೊಬ್ಬ, ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ, ಲೇಖಕಿ ಇಲ್ಲ. ಎಲ್ಲವೂ ಗಟ್ಟಿಕಾಳುಗಳೇ. ಅಂತಃಕರಣ, ಭಾವಸಂವೇದನೆಗಳಲ್ಲಿ ಅದ್ದಿದ ಅಕ್ಷರಗಳೇ.

ಬಡವರಿಗೆ ಸಾಲ ಹೇಗೆ?

ಕೆಲಸದಿಂದ ಹಿಂದೆ, ಮ್ಯಾನೇಜ್ಮೆಂಟ್ ಗುರು ರಘುರಾಮನ್ ಹೇಳಿದ ಈ ಪ್ರಸಂಗ ಮತ್ತು ವಿಚಾರವನ್ನು ನಿಮಗೂ ಹೇಳಬೇಕು. ೧೯೮೨ ರಲ್ಲಿ ರಾಜು ಜೇಬಿನಲ್ಲಿ ೪೬೦ ರುಪಾಯಿ ಇಟ್ಟುಕೊಂಡು ತಮಿಳುನಾಡಿನ ತಿರುನಲ್ವೇಲಿ ಬಿಟ್ಟು ಉದ್ಯೋಗಾವಕಾಶ ಅರಸಿ ಮುಂಬಯಿ ನಗರವನ್ನು ಸೇರಿದ. ಮನೆಯಿಂದ ಹೊರಡುವಾಗ ನಾಲ್ಕು ದಿನಕ್ಕಾಗುವಷ್ಟು ಆಹಾರವನ್ನು ಪೊಟ್ಟಣ ಕಟ್ಟಿಕೊಂಡಿದ್ದ.

ಎರಡು ದಿನ ರೈಲಿನಲ್ಲಿ ಕಳೆಯಿತು. ಮುಂಬಯಿ ನಗರದ ಡೊಂಬಿವಿಲಿಯಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಮಾರಿ ಬದುಕ ಬೇಕೆಂಬುದು ಅವನ ಇಚ್ಛೆಯಾಗಿತ್ತು. ಮುಂಬೈ ತಲುಪಿನದ ಒಂದು ವಾರದಲ್ಲಿ ದುಡ್ಡೆಲ್ಲ ಖಾಲಿಯಾಯಿತು. ಅಲ್ಲಿ ಸ್ನೇಹಿತ ನಾಗಿದ್ದ ಒಬ್ಬಾತ ಸಾಹುಕಾರನೊಬ್ಬನ ಬಳಿ ರಾಜುನನ್ನು ಕರೆದುಕೊಂಡು ಹೋದ. ಸಾಹುಕಾರ ಈತನಿಗೆ ದಿನಕ್ಕೆ ಐವತ್ತು ರುಪಾಯಿ ಬಡ್ಡಿಯ ಮೇಲೆ ೫೦೦ ರುಪಾಯಿ ಸಾಲ ಕೊಡಲು ಒಪ್ಪಿದ. ಬಡ್ಡಿದರ ವಾರ್ಷಿಕ ಶೇ.೩೬೫೦ ರಷ್ಟಾಯಿತು. ವಸೂಲಿಗಾರರು ದಿನವೂ ಬರುತ್ತಿದ್ದರು. ಅವರ ಕಣ್ತಪ್ಪಿಸಿ ಓಡಾಡುವುದು ಅಸಾಧ್ಯವೆಂಬುದು ರಾಜೂಗೂ ಗೊತ್ತಿತ್ತು. ಹೀಗಾಗಿ ಆದಷ್ಟು ಬೇಗ ಸಾಲ ಚುಕ್ತಾ ಮಾಡಬೇಕೆನ್ನುವ ಉದ್ದೇಶವಿಟ್ಟು ವ್ಯಾಪಾರದಲ್ಲಿ ಹೆಚ್ಚು ಗಮನ ಕೊಟ್ಟ.

ಪ್ರತಿದಿನ ಬಡ್ಡಿಗೆಂದು ಐವತ್ತು ರುಪಾಯಿ ಕೈಬಿಡುತ್ತಿತ್ತು. ಎಂಟನೇ ದಿನ ಮತ್ತೆ ಐದು ನೂರು ಸಾಲ ಪಡೆದು ವ್ಯಾಪಾರ ಶುರು ಮಾಡಿದ. ಇವತ್ತು ರಾಜು ಎರಡು ದೊಡ್ಡ ಅಂಗಡಿಗಳ ಮಾಲೀಕ. ಆತನಿಗೆ ಸ್ವಂತzದ ದೊಡ್ಡ ಮನೆಯೂ ಇದೆ. ಇಬ್ಬರು ಮಕ್ಕಳು ಎಂಜಿನಿಯರಿಂಗ್ ಓದುತ್ತಿದ್ದಾರೆ.

ಕಳೆದ ನಲವತ್ತು ವರ್ಷಗಳಲ್ಲಿ ಅನೇಕ ಸಾಲಗಳ ಸುಳಿಯಲ್ಲಿ, ವಿಷಚಕ್ರದಲ್ಲಿ ಸಿಲುಕಿ ರಾಜು ಸಾಕಷ್ಟು ಅನುಭವಿಸಿದ್ದಾನೆ. ಅವನ ಪ್ರಕಾರ ಬಡ್ಡಿಗೆ ಸಾಲ ಕೊಡುವವರು ಬ್ಯಾಂಕುಗಳಿಗೆ ಸಮಾನಾಂತರವಾದ ವ್ಯಾಪಾರ ಜಾಲ ನಿರ್ವಹಿಸುತ್ತಿದ್ದಾರೆ.

ಯಾರಲ್ಲಿ ವ್ಯಾಪಾರಾನುಭವ ಇಲ್ಲವೋ, ಯಾರಲ್ಲಿ ಬ್ಯಾಂಕಿಗೆ ತೋರಿಸಲು ಕಾಗದಪತ್ರಗಳಿಲ್ಲವೋ ಅಂಥವರಿಗೆ ಬ್ಯಾಂಕುಗಳ ಸಾಲ ಕೊಡುವುದಿಲ್ಲ. ಅವರೆಲ್ಲ ಖಾಸಗಿಯವರ ಬಳಿ ಹೋಗುತ್ತಾರೆ. ಎಲ್ಲೋ ಕೆಲವರು ಈ ಸಾಲದಿಂದ ಮೇಲಕ್ಕೆ ಬರುತ್ತಾರೆ, ಹಲವು ಮಂದಿ ಸಾಲದ ಸುಳಿಗೆ ಸಿಕ್ಕು ಸತ್ತೇ ಹೋಗುತ್ತಾರೆ.

ರಾಜು ಕಳೆದ ಇಪ್ಪತ್ತು ವರ್ಷಗಳಿಂದ ತನ್ನೂರಿನ ಬಡಜನರಿಗೆ ಸಣ್ಣ ವ್ಯಾಪಾರ ಮಾಡಲು ಸಹಾಯ ಮಾಡುತ್ತಿದ್ದಾನೆ. ಕಡಿಮೆ ಅವಧಿಗೆ ಪ್ರಾರಂಭಿಕ ಬಂಡವಾಳ ಕೇಳುವವರಿಗೆ ಅವರು ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಘಟನೆ ನೆನಪಿಗೆ ಬರುವು ದಕ್ಕೂ ಒಂದು ಕಾರಣವಿದೆ.

ಇತ್ತೀಚೆಗೆ ಆರ್.ಬಿ.ಐ ಯುಪಿಐ ಮೂಲಕ ಜನರಿಗೆ ಸಾಲ ಕೊಡಲು ಅನುಮತಿ ನೀಡಿದೆ. ಇದರಿಂದ ಸಣ್ಣ ಆದಾಯವುಳ್ಳ ಸುಮಾರು ಮೂವತ್ತು ಕೋಟಿ ಯುಪಿಐ ಬಳಕೆದಾರರಿಗೆ ಪ್ರಯೋಜನವಾಗಲಿದೆ. ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಕಡಿಮೆ ಅವಧಿಗೆ ಸಾಲ ಕೊಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದೂ ಆರ್ .ಬಿ.ಐ. ಸಲಹೆ ಕೊಟ್ಟಿದೆ. ಮೂವತ್ತು ದಿನಗಳಲ್ಲಿ ಚುಕ್ತಾ ಆಗುವಂತಹ ಸಾಲ ನೀಡುವುದು ಇದರ ವೈಶಿಷ್ಟ್ಯ.

ಮೀಟರ್ ಬಡ್ಡಿಗೆ ಖಾಸಗಿ ಧಣಿಗಳಿಂದ ಹಣ ಪಡೆಯುವ ಅನಿವಾರ್ಯ ಇರುವ ಎಷ್ಟೋ ಮಂದಿಗೆ ಇದೊಂದು ವರದಾನ. ಬಡವರಿಗೆ ಆರ್ಥಿಕ ನೆರವು ಸುಲಭರೂಪದಲ್ಲಿ ಸಿಗುವುದು ಸಾಧ್ಯವಾದರೆ ಆರ್ಥಿಕತೆ ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ. ರಾಜು ತನ್ನ ಊರಿನ ಮಂದಿಗೆ ಇದೇ ರೀತಿಯ ನೆರವು ಕೊಡುತ್ತಾ ಬಂದಿದ್ದಾನೆ. ದೇಶದಲ್ಲಿ ಸರ್ವಾಂಗೀಣ ಪ್ರಗತಿ ಸಾಧ್ಯವಾಗ ಬೇಕಾದರೆ ಆರ್ಥಿಕ ನೆರವಿನ ಅಗತ್ಯವಿರುವ ಬಡಜನರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತಾಗಬೇಕು.

ಹೀಗೊಂದು ಸಂದರ್ಶನ!

ಇದನ್ನು ಕಳಿಸಿದವರು ಯಾರು, ಓದಿದ್ದು ಎಲ್ಲಿ ಎಂಬುದು ಮುಖ್ಯವಲ್ಲ. ಈ ಪ್ರಸಂಗವನ್ನು ಓದಿದರೆ ನಮ್ಮ ಎಷ್ಟೋ ಆಫೀಸು ಗಳು, ಕಂಪನಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಗೊತ್ತಾದೀತು. ಆ ಆಫೀಸಿನಲ್ಲಿ ಸಂದರ್ಶನ ನಡೆಯುತ್ತಿತ್ತು. ಯುವಕನೊಬ್ಬ ಮೆಲ್ಲಗೆ ಬಾಗಿಲನ್ನು ಬಡಿದ. ‘ನಾನು ಒಳಗೆ ಬರಬಹುದೇ?’ ಎಂದು ಕೇಳಿದ. ಸಂದರ್ಶನಕರಬ್ಬ ‘ದಯವಿಟ್ಟು ಒಳಗೆ ಬಾರಪ್ಪ’ ಎಂದರು. ಆತ ಏನನ್ನೋ ಹೇಳಬೇಕು ಎನ್ನುವಷ್ಟರಲ್ಲಿ, ಸಂದರ್ಶಕರೆಲ್ಲರೂ, ‘ಕುಳಿತುಕೋ, ಕುಳಿತುಕೋ’ ಎಂದರು. ಆತ ಕುಳಿತುಕೊಂಡ.

‘ಈ ರೂಮನ್ನು ನೋಡಿದರೆ ನಿನಗೆ ಏನನಿಸುತ್ತದೆ?’ ಎಂದು ಒಬ್ಬ ಕೇಳಿದ. ಅದಕ್ಕೆ ಆ ಯುವಕ, ‘ಈ ರೂಮು ಬಹಳ ಸುಂದರ ವಾಗಿದೆ, ಒಳ್ಳೆಯ ಕಾರ್ಪೆಟ್, ಒಳ್ಳೆಯ ಪರದೆ, ಸುಂದರವಾದ ಫರ್ನಿಚರ್, ಪ್ರೊಜೆಕ್ಟರ್, ವೈಟ್ ಸ್ಕ್ರೀನ್, ವ್ಯವಸ್ಥಿತವಾಗಿ ಇಟ್ಟ ಕಂಪ್ಯೂಟರ್.. ತುಂಬಾ ನೀಟಾದ ಆಫೀಸ್, ಇಲ್ಲಿ ಕೆಲಸ ಮಾಡಲು ಅದೃಷ್ಟ ಮಾಡಿರಬೇಕು ಸರ್..’ ಎಂದ ಯುವಕ.

‘ಈ ರೂಮಿನ ನೆಲದ ಮೇಲೆ ಕಾಗದವನ್ನು ಸುರುಳಿ ಕಟ್ಟಿ ಬಿಸಾಡಿರುವುದನು ಗಮನಿಸಿದ್ದೀಯಾ? ಅದರಿಂದ ಈ ರೂಮಿನ ಸೌಂದರ್ಯಕ್ಕೆ ಧಕ್ಕೆಯಾಗಿದೆ ಎಂದು ಅನಿಸುತ್ತಿದೆಯಾ?’ ಎಂದು ಒಬ್ಬ ಸಂದರ್ಶಕ ಕೇಳಿದಾಗ, ಆ ಯುವಕ, ‘ಹೌದು ಸರ್, ನಾನು ಈ ರೂಮಿನೊಳಗೆ ಪ್ರವೇಶಿಸುವಾಗಲೇ ಗಮನಿಸಿದೆ. ನೆಲದ ಮೇಲೆ ಬಿಸಾಡಿದವರು ಯಾರು ಎಂಬುದು ನನಗೆ ಗೊತ್ತು.

ಅವರ ಬಳಿ ಹೇಳಿದರೆ ಮುಜುಗರವಾಗಬಹುದು ಎಂದು ಅನಿಸಿತು. ಇದನ್ನು ಬಿಸಾಡಿದವರು ಎಡದಿಂದ ಕುಳಿತ ಎರಡನೆ ಯವರು. ಅವರ ಮುಂದಿರುವ ಸ್ಕ್ರಿಬ್ಲಿಂಗ್ ಪ್ಯಾಡ್ ನೋಡಿದರೆ ಗೊತ್ತಾಗಬಹುದು. ಅದರಲ್ಲಿನ ಕಾಗದ ಅರ್ಧಂಬರ್ಧ ಹರಿದು ಹೋಗಿದೆ’ ಎಂದು ಹೇಳಿದ. ‘ಬಹಳ ಚೆನ್ನಾಗಿ ಗಮನಿಸಿದ್ದೀಯಾ. ವೆರಿ ಗುಡ್. ಈ ರೂಮಿನ ಹೊರಗಡೆಯಿರುವ ಕಸ ಗುಡಿಸು ವವಳನ್ನು ಕರೆದು ರೂಮನ್ನು ಕ್ಲೀನ್ ಮಾಡುವಂತೆ ಹೇಳುತ್ತೀಯಾ?’ ಎಂದು ಒಬ್ಬ ಸಂದರ್ಶಕ ಹೇಳಿದ. ‘ಆಗಬಹುದು ಸಾರ್, ಅವಳ ಹೆಸರೇನು?’ ಎಂದು ಕೇಳಿದ.

ಇಡೀ ರೂಮಿನಲ್ಲಿ ಒಂದು ಕ್ಷಣ ಮೌನ. ಯಾರಿಗೂ ಅವಳ ಹೆಸರು ಗೊತ್ತಿರಲಿಲ್ಲ. ‘ಪರವಾಗಿಲ್ಲ, ಇಲ್ಲಿರುವವರಿಗೆ ಆಕೆಯ ಹೆಸರೇನು ಎಂಬುದು ಗೊತ್ತಿಲ್ಲ ಬಿಡಿ. ಆದ್ರೂ ನಾನು ಅವಳನ್ನು ಕರೆದು ಕ್ಲೀನ್ ಮಾಡುವಂತೆ ಹೇಳುತ್ತೇನೆ’ ಎಂದವನೇ ಹೊರಗಡೆ ಹೋಗಿ, ಮೆಟ್ಟಿಲ ಮೇಲೆ ಕುಳಿತ ಮಹಿಳೆಯನ್ನು ಕರೆದು ‘ಏನಮ್ಮಾ ನಿನ್ನ ಹೆಸರು?’ ಎಂದು ಕೇಳಿದ. ಆಕೆ ‘ನನ್ನ ಹೆಸರು ಗೌರಿ’ ಎಂದಳು. ಆತ ಅವಳನ್ನು ಸಂದರ್ಶನ ನಡೆಯುವ ರೂಮಿಗೆ ಕರೆದುಕೊಂಡು ಹೋಗಿ, ‘ಗೌರಿ, ಆ ರೂಮಲ್ಲಿ ಬಿದ್ದ ಕಾಗದಗಳನ್ನೆ ಹೆಕ್ಕಿ ರೂಮನ್ನು ಕ್ಲೀನ್ ಮಾಡುತ್ತೀಯಾ?’ ಎಂದು ಕೇಳಿದ. ಆಕೆ ಆಯಿತು ಎಂದು ಹೇಳಿ, ಅದನ್ನು ಕ್ಲೀನ್ ಮಾಡಿದಳು.

ಸಂದರ್ಶನ ಮುಂದುವರಿಯಿತು. ‘ಬಹಳ ಸಂತೋಷ. ನಿನ್ನ ವರ್ತನೆ ನಮಗೆ ಹಿಡಿಸಿತು’ ಎಂದ ಸಂದರ್ಶಕರಬ್ಬ, ‘ನಮ್ಮ ಪೈಕಿ ಯಾರು ಬಾಸ್ ಎಂಬುದನ್ನು ಹೇಳುತ್ತೀಯಾ?’ ಎಂದು ಕೇಳಿದ. ಅದಕ್ಕೆ ಆ ಯುವಕ, ‘ಖಂಡಿತವಾಗಿಯೂ ಹೇಳುವೆ. ನಿಮ್ಮ ಪೈಕಿ ಇಬ್ಬರು ಮಧ್ಯೆ ಬಾಯಿ ಹಾಕದೇ ಸುಮ್ಮನೆ ಗಮನಿಸುತ್ತಿದ್ದೀರಿ ಅಂದ್ರೆ ಆ ಪೈಕಿ ಒಬ್ಬ -ನಾ ಮುಖ್ಯಸ್ಥ ಮತ್ತು ಮತ್ತೊಬ್ಬ ಎಚ್.ಆರ್. ವಿಭಾಗದ ಮುಖ್ಯಸ್ಥ ಆಗಿರಲೇಬೇಕು. ಕೊನೆಯಲ್ಲಿ ಕುಳಿತವರು ಮುಗುಳ್ನಗುತ್ತಿದ್ದಾರೆ ಮತ್ತು ಆಗೊಂದು ಈಗೊಂದು ಮಾತಾಡುತ್ತಿದ್ದಾರೆ. ಅವರು ಬಾಸ್ ಆಗಿರಲೇಬೇಕು. ಮಧ್ಯದಲ್ಲಿ ಕುಳಿತವರು ಎಲ್ಲರಿಗಿಂತ ಹೆಚ್ಚು ಮಾತಾಡು ತ್ತಿದ್ದಾರೆ. ಅವರೇ ಬಾಸ್ ಇದ್ದಿರಬಹುದಾ ಎಂಬ ಗೊಂದಲ ಮೂಡಬಹುದು. ಆದರೆ ಅವರು ಬಾಸ್ ಅಲ್ಲ’ ಎಂದ.

ಆ ಯುವಕನ ಮಾತು ಕೇಳಿ, ಎಲ್ಲರೂ ಭೇಷ್ ಎಂದು ಉದ್ಗರಿಸಿದರು. ‘ನೀನು ನಮ್ಮ ಎಲ್ಲ ನಿರೀಕ್ಷೆಗಳನ್ನು ಪೂರ್ಣಗೊಳಿಸಿ ದ್ದೀಯಾ. ನಿನ್ನನ್ನು ನಾವು ಆಯ್ಕೆ ಮಾಡಿದ್ದೇವೆ. ಸ್ವಲ್ಪ ಹೊತ್ತು ಈ ರೂಮಿನ ಹೊರಗಡೆ ಇರು. ಈ ಮಧ್ಯೆ ನಾವು ಅಪಾಯಿಂಟ ಮೆಂಟ್ ಲೆಟರನ್ನು ಸಿದ್ಧಗೊಳಿಸಿ ನಿನಗೆ ಇ ಡುತ್ತೇವೆ’ ಎಂದು ಒಬ್ಬ ಸಂದರ್ಶಕ ಹೇಳಿದಾಗ, ಆ ಯುವಕ, ‘ಹೌದಾ? ಇಲ್ಲಿಗೆ ಸಂದರ್ಶನ ಮುಗಿಯಿತಾ? ನಾನು ಆಯ್ಕೆ ಆಗಿದ್ದೇನಾ? ಸರ್ದಾರ್ ಪಟೇಲ್ ಪ್ರತಿಮೆ ಎಷ್ಟು ಎತ್ತರವಿದೆ, ರಾಷ್ಟ್ರಪತಿ ಮುರ್ಮು ಎಷ್ಟು ಸಲ ಶಾಸಕಿಯಾಗಿ ಆಯ್ಕೆಯಾಗಿದ್ದರು ಮಾದರಿಯ ಪ್ರಶ್ನೆಗಳನ್ನು ಕೇಳುವುದಿಲ್ಲವಾ?’ ಎಂದು ಹೇಳಿ ನಕ್ಕ.

‘ಇಲ್ಲ.. ಇಲ್ಲ.. ನಿನ್ನ ಹೆಸರೇನು ಎಂಬುದನ್ನಷ್ಟೇ ಖಾತ್ರಿಪಡಿಸಿಕೊಳ್ಳಬೇಕಿದೆ. ಅಂದ ಹಾಗೆ ನಿನ್ನ ಹೆಸರು ಮುರಳೀಧರ ಅಲ್ಲವೇ?’ ಎಂದ ಸಂದರ್ಶಕ. ‘ಸಾರಿ ಸರ್, ಮುರಳೀಧರ ಹೊರಗೆ ಕಾಯುತ್ತಿದ್ದಾನೆ’ ಎಂದ ಆ ಯುವಕ. ‘ಹಾಗಾದ್ರೆ ನಿನ್ನ ಹೆಸರೇನು?’ ಎಂದು ಸಂದರ್ಶಕ ಕೇಳಿದ, ತುಸು ಪೆಚ್ಚಾಗಿ.

‘ನನ್ನ ಹೆಸರು ಚಂದ್ರಶೇಖರ್. ಎಲ್ಲರೂ ಚಂದ್ರು ಅಂತಾರೆ. ನಾನು ಇದೇ ಆಫೀಸಿನ ಕ್ಯಾಂಟೀನಿನಲ್ಲಿದ್ದೇನೆ. ನಾನು ಈ ರೂಮಿಗೆ, ಟೀ ಮತ್ತು ಕಾಫಿಯನ್ನು ಸಪ್ಲೈ ಮಾಡಲು ಬಂದಿದ್ದೆ. ಯಾವ ಸ್ನ್ಯಾಕ್ ಕೊಡಲಿ ಎಂದು ಕೇಳಲು ಬಂದಿದ್ದೆ. ಅಷ್ಟರೊಳಗೆ ನೀವೆ ಕುಳಿತುಕೋ .. ಕುಳಿತುಕೋ ಎಂದು ನನ್ನನ್ನು ಸಂದರ್ಶನಕ್ಕೆ ಕುಳ್ಳಿರಿಸಿಬಿಟ್ಟಿರಿ. ನನಗೂ ಖುಷಿಯಾಯ್ತು. ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದೆ’ ಎಂದ ಯುವಕ, ‘ಸಾರ್, ಈಗ ಹೇಳಿ, ನಾನು ನಿಮಗೆ ಟೀ ಕೊಡಲಾ, ಕಾಫಿ ಕೊಡಲಾ, ನಿಮಗೆ ಯಾವ ಸ್ನ್ಯಾಕ್ಸ್ ಕೊಡಲಿ?’ ಎಂದು ಕೇಳಿದ. ಅಲ್ಲಿದ್ದವರೆಲ್ಲ ಮುಖಮುಖ ನೋಡಿಕೊಂಡರು.

ಜೀವನದಲ್ಲಿ ಏನನ್ನು ಬಿಡಬೇಕು?

ಮೊನ್ನೆ ಯೋಗಿ ದುರ್ಲಭಜೀ ಮಾತಾಡುತ್ತಾ, ‘ಅನೇಕರಿಗೆ ಜೀವನದಲ್ಲಿ ಏನು ಬಿಡಬೇಕು ಎಂಬುದು ಗೊತ್ತಿರುವುದಿಲ್ಲ. ತಾವು ಅದನ್ನು ಬಿಟ್ಟಿದ್ದೇವೆ, ಇದನ್ನು ಬಿಟ್ಟಿದ್ದೇವೆ ಎಂದು ಹೇಳುತ್ತಾರೆ. ಬಿಡುವುದು ಮುಖ್ಯವಲ್ಲ, ಆದರೆ ಏನನ್ನು ಬಿಟ್ಟಿದ್ದೇವೆ ಎಂಬುದು ಬಹಳ ಮುಖ್ಯ’ ಎಂದು ಹೇಳುತ್ತಾ ಒಂದು ಹಾಸ್ಯ ಪ್ರಸಂಗವನ್ನು ಹೇಳಿದರು.

ಬಲ್ಯ ಜೀವನದಲ್ಲಿ ಎಂದೂ ಮದ್ಯ (ಗುಂಡು) ಸೇವಿಸಿದವನೇ ಅಲ್ಲ. ಆ ಕಾರಣಕ್ಕೆ ಅವನ ಸ್ನೇಹಿತರು ದೂರವಿಟ್ಟಿದ್ದರು. ‘ನೀನು ಪ್ರಯೋಜನಕ್ಕೆ ಬಾರದವ’ ಎಂದು ಹೀಯಾಳಿಸುತ್ತಿದ್ದರು. ಈ ಮಾತನ್ನು ಅನೇಕ ಸಲ ಕೇಳಿಸಿಕೊಂಡು ಬಲ್ಯನಿಗೆ ಬಹಳ ಬೇಸರ ವಾಗಿತ್ತು. ಒಂದು ದಿನ, ಗುಂಡು ಹಾಕಲೇಬೇಕು ಎಂದು ನಿರ್ಧರಿಸಿದ.

ಬಾರಿಗೆ ಹೋಗಿ ವಿಸ್ಕಿಗೆ ಸೋಡಾ ಸೇರಿಸಿ ಕುಡಿದ. ತಲೆ ಗಿರ್ರ‍ೆಂದಿತು. ಮರುದಿನ ಬಾರಿಗೆ ಹೋಗಿ ವೋಡ್ಕಾಗೆ ಸೋಡಾ ಸೇರಿಸಿ ಕುಡಿದ. ಆಗಲೂ ತಲೆ ಗಿರ್ರ‍ೆಂದಿತು. ಮಾರನೇ ದಿನ ರಮ್‌ಗೆ ಸೋಡಾ ಬೆರೆಸಿ ಕುಡಿದ. ಆಗಲೂ ತಲೆ ಗಿರ್ರ‍ೆಂದಿತು. ಅದರ ಮರುದಿನ ಸ್ಕಾಚ್‌ಗೆ ಸೋಡಾ ಬೆರೆಸಿ ಕುಡಿದ. ಆಗಲೂ ಅದೇ ಅನುಭವ.

ಬಲ್ಯನಿಗೆ ತಲೆ ಕೆಟ್ಟುಹೋಯಿತು. ಇದೇನು ವಿಸ್ಕಿ, ರಮ, ವೋಡ್ಕಾ, ಸ್ಕಾಚ್‌ಗೆ ಸೋಡಾ ಬೆರೆಸಿ ಕುಡಿದರೆ ತಲೆ ಗಿರ್ರ‍ೆನ್ನುತ್ತದಲ್ಲ ಎನಿಸಿತು. ಮಾರನೇ ದಿನ ನಿರ್ಧರಿಸಿದ, ಇನ್ನು ಮುಂದೆ ಜೀವನದಲ್ಲಿ ಸೋಡಾವನ್ನು ಬೆರೆಸಿ ಕುಡಿಯಬಾರದೆಂದು. ಅದಾದ ಬಳಿಕ ಆತ ಜೀವನದಲ್ಲಿ ಸೋಡಾವನ್ನು ಮುಟ್ಟಲೇ ಇಲ್ಲ, ಬಿಟ್ಟುಬಿಟ್ಟ.