Saturday, 23rd November 2024

ಅನೇಕರು ಚಮಚಾಗಳನ್ನು ಇಟ್ಟುಕೊಂಡರೆ, ಸುಧಾಮೂರ್ತಿ ಚಮಚಗಳನ್ನು ಇಟ್ಟುಕೊಂಡಿರುತ್ತಾರೆ, ಅಷ್ಟೇ ವ್ಯತ್ಯಾಸ !

ಇದೇ ಅಂತರಂಗ ಸುದ್ದಿ

vbhat@me.com

ಕಳೆದ ಒಂದು ವಾರದಿಂದ ಕೆಲವು ಕಿಡಿಗೇಡಿಗಳು, ಅವಿವೇಕಿಗಳು ಸುಧಾಮೂರ್ತಿಯವರು ಹೇಳಿದ ಒಂದು ಸಾಲನ್ನು ಸರಿಯಾಗಿ ಗ್ರಹಿಸದೇ, ಅವರನ್ನು
ಟೀಕಿಸುತ್ತಿದ್ದಾರೆ, ಟ್ರೋಲ್ ಮಾಡುತ್ತಿದ್ದಾರೆ. ಈ ಒಂದು ಕಾರಣಕ್ಕಾಗಿ ಅವರ ಜಾತಿ, ಶ್ರೀಮಂತಿಕೆ, ಲೋಕೋಪಕಾರಿ ಕಾರ್ಯಗಳ ಬಗ್ಗೆಯೂ ಟೀಕೆಗಳನ್ನು ಹರಿಬಿಡುತ್ತಿದ್ದಾರೆ. ಸುಧಾಮೂರ್ತಿಯವರಂಥ ವ್ಯಕ್ತಿಗಳನ್ನು ಟೀಕೆ ಮಾಡುವುದನ್ನು ನೋಡಿದರೆ ಇವರು ಮನುಷ್ಯರೊಂದೇ ಅಲ್ಲ, ಆ ಭಗವಂತ ಬಂದರೂ ಅವನನ್ನೂ ಟೀಕಿಸದೇ ಬಿಡುವವರಲ್ಲ ಎಂಬುದು ದಿಟ.

ತಾವು ಗಳಿಸಿದ್ದನ್ನು ಸಮಾಜ ಸೇವೆಗೆ ವ್ಯಯಿಸಬೇಕು ಎಂಬ ನಿಯಮವೇನಿಲ್ಲ. ಸುಧಾಮೂರ್ತಿಯವರು ಐಷಾರಾಮಿ, ವೈಭೋಗದ ಜೀವನಶೈಲಿ ರೂಢಿಸಿಕೊಂಡಿದ್ದರೆ ಅವರನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ತಮ್ಮ ಸರಳ ಜೀವನ ಶೈಲಿಯಿಂದಲೇ ಜನಮನ ಗೆದ್ದ ಅವರು ಮಾಡಿದ ಸಾಮಾಜಿಕ ಸೇವೆ ಲೆಕ್ಕಕ್ಕೆ ಸಿಗದು. ಅಶಕ್ತರಿಗೆ, ಅಸಹಾಯಕರಿಗೆ, ಶೋಷಿತರಿಗೆ, ಕಷ್ಟ ದಲ್ಲಿದ್ದವರಿಗೆ, ಸಂಘ-ಸಂಸ್ಥೆಗಳಿಗೆ, ಸಾಮಾಜಿಕ ಕಾರ್ಯ ಗಳಿಗೆ ಅವರು ನೀಡಿದ ಧನ ಸಹಾಯ ಸಾವಿರಾರು ಕೋಟಿ ರುಪಾಯಿಗೂ ಹೆಚ್ಚು. ಹಾಗೆಂದು ಆ ಬಗ್ಗೆ ಅವರಿಗೆ ಯಾವುದೇ ಬಿಗುಮಾನ ಇಲ್ಲ.

ಸಮಾಜ ಕೊಟ್ಟಿದ್ದನ್ನು ಸಮಾಜಕ್ಕೆ ಮರಳಿ ಕೊಟ್ಟಿದ್ದೇನೆ ಎಂಬ ಕೃತಾರ್ಥ ಭಾವ ಅಷ್ಟೇ. ಅದಿರಲಿ. ಅಷ್ಟಕ್ಕೂ ಸುಧಾಮೂರ್ತಿಯವರ ಸುತ್ತಲಿನ ಸದ್ಯದ ವಿವಾದ ಏನು? ಆಹಾರ ಲೇಖಕ, ಕಿರುತೆರೆ ನಟ, ಯೂ ಟ್ಯೂಬರ್ ಕುನಾಲ್ ವಿಜಯಕರ್ ತಮ್ಮ ಜನಪ್ರಿಯ ಯೂ ಟ್ಯೂಬ್ ಚಾನೆಲ್ ‘ಖಾನೇ ಮೇ ಕ್ಯಾ ಹೈ’ ಕಾರ್ಯಕ್ರಮಕ್ಕೆ ಕಳೆದ ವಾರ ಸುಧಾಮೂರ್ತಿ ಯವರನ್ನು ಆಹ್ವಾನಿಸಿದ್ದರು. ಕುನಾಲ್ ಅವರು ಗಣ್ಯವ್ಯಕ್ತಿಗಳನ್ನು ಆಹ್ವಾನಿಸಿ, ಅವರೊಂದಿಗೆ ಭೋಜನ ಸೇವಿಸುತ್ತಾ, ಅವರ ಊಟ-ಉಪಾಹಾರ, ರೀತಿ-ನೀತಿ, ಜೀವನಶೈಲಿ ಕುರಿತು ಲೋಕಾಭಿರಾಮ ಮಾತಾಡುವ, ಒಂದು ವಿಶಿಷ್ಟ ಸಂದರ್ಶನ ಕಾರ್ಯಕ್ರಮವಿದು. ಹಾಗೆ ಅವರು ಸುಧಾಮೂರ್ತಿಯವರನ್ನೂ ಆಹ್ವಾನಿಸಿದ್ದರು.

ಕುನಾಲ್ ಅವರ ಪ್ರಶ್ನೆಗಳಿಗೆ ಸುಧಾಮೂರ್ತಿಯವರು ಹೀಗೆ ಹೇಳುತ್ತಾರೆ – ‘ನಾನು ನನ್ನ ಕೆಲಸ, ಓಡಾಟಗಳಿಂದಾಗಿ ಅಡುಗೆ ಮಾಡುವುದಕ್ಕೆ ಹೆಚ್ಚಿನ ಸಮಯ ನೀಡಲಿಲ್ಲ. ಅಡುಗೆ ಮಾಡುವ ಕಲೆ ನನಗೆ ಅಷ್ಟೇನೂ ಸಿದ್ಧಿಸಿಲ್ಲ. ಹಾಗಂತ ಅಡುಗೆ ಮಾಡುವುದು ನನಗೆ ಇಷ್ಟವಿಲ್ಲ ಅಂತ ಅಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ
ನಾನು ಊಟ-ತಿಂಡಿಗೆ ಹೋಟೆಲ್‌ಗೆ ಹೋಗುವುದಿಲ್ಲ. ನಾನು ಮನೆಯಲ್ಲಿ ಒಳ್ಳೆಯ ಅನ್ನ-ಸಾಂಬಾರು, ಪರೋಟ, ದಾಲ್, ಸಬ್ಜಿ ಮಾಡುತ್ತೇನೆ. ನನಗೆ ಪಾಕಶಾಸದ ಬಗ್ಗೆ ಗೊತ್ತಿಲ್ಲ ಎಂದಲ್ಲ, ಗೊತ್ತಿದೆ. ಆದರೆ ನನಗೆ ವಿಶೇಷ ಖಾದ್ಯ ತಯಾರಿಸುವುದು ಗೊತ್ತಿಲ್ಲ. ಸರಳ ಅಡುಗೆ ಮಾಡುವುದು ಗೊತ್ತು.’ ಒಂದು ಸಂದರ್ಭದಲ್ಲಿ ಕುನಾಲ್ ಕೇಳುತ್ತಾರೆ -‘ನೀವು ಜಗತ್ತು ಸಂಚಾರಿ. ವಿದೇಶಗಳಿಗೆ ಹೋದಾಗ ನಿಮ್ಮ ಊಟ-ತಿಂಡಿ ಹೇಗೆ?’ ಅದಕ್ಕೆ ಸುಧಾಮೂರ್ತಿಯವರು ಹೇಳುತ್ತಾರೆ – ‘ನಾನು ವಿದೇಶಗಳಿಗೆ ಹೋದಾಗ ನನ್ನ ಕೆಲಸ ಮತ್ತು ಸುತ್ತಾಟಗಳ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಊಟ-ಉಪಾಹಾರದ ಬಗ್ಗೆ ಅಲ್ಲ.

ನಾನು ಶುದ್ಧ (pure vegetarian) ಶಾಕಾಹಾರಿ. ನಾನು ಮೊಟ್ಟೆ ಸೇವಿಸುವುದಿಲ್ಲ. ಬೆಳ್ಳುಳ್ಳಿ ಹಾಕಿದ ಪದಾರ್ಥಗಳನ್ನೂ ತಿನ್ನುವುದಿಲ್ಲ. ಮಾಂಸಾಹಾರ ಮತ್ತು ಸಸ್ಯಾಹಾರ ಎರಡನ್ನೂ ಒಟ್ಟಿಗೆ ನೀಡುವ ವಿದೇಶಿ ಹೋಟೆಲುಗಳಲ್ಲಿ ಒಂದೇ ಚಮಚವನ್ನು ಬಳಸುತ್ತಾರೆಂಬ ಅಳುಕಿದೆ. ಹೀಗಾಗಿ ನಾನು ಸಸ್ಯಾಹಾರ ನೀಡುವ ಹೋಟೆಲಿಗೆ ಹೋಗುತ್ತೇನೆ. ಒಂದು ಬ್ಯಾಗಿನಲ್ಲಿ eating materials (ಆಹಾರ ಸೇವನೆ ಸಾಮಗ್ರಿ)ಗಳನ್ನು ಒಯ್ಯುತ್ತೇನೆ. ಸಾಮಾನ್ಯವಾಗಿ ೨೫-೩೦ ಚಪಾತಿ ಒಯ್ಯುತ್ತೇನೆ. ರವೆಯನ್ನು ಹುರಿದುಕೊಂಡು ಹೋಗುತ್ತೇನೆ. ಬಿಸಿ ನೀರು ಹಾಕಿದರೆ ಉಪ್ಪಿಟ್ಟು ಸಿದ್ಧ. ಹಾಗೆ ಅವಲಕ್ಕಿಯನ್ನೂ ತೆಗೆದುಕೊಂಡು ಹೋಗು ತ್ತೇನೆ.

ಜತೆಯಲ್ಲಿ ಸಣ್ಣ ಕುಕ್ಕರ್ ಒಯ್ದಿರುತ್ತೇನೆ. ನನ್ನ ಅಜ್ಜಿಯೂ ಹೀಗೆ ಮಾಡುತ್ತಿದ್ದಳು, ಹೊರಗೆ ಹೋಗುವಾಗ ಎಲ್ಲವನ್ನು ಕಟ್ಟಿಕೊಂಡು ಹೋಗುತ್ತಿದ್ದಳು. ಆಗ ನಾನು ಅವಳನ್ನು ಹಾಸ್ಯ ಮಾಡುತ್ತಿದ್ದೆ. ಹೋಟೆಲಿನಲ್ಲಿ ತಿನ್ನಬಾರದಾ ಎಂದು ಆಕೆಗೆ ಕೇಳುತ್ತಿದ್ದೆ. ನನಗೆ ರೂಢಿ ಆಗಿದೆ ಎಂದು ಅವಳು ಹೇಳುತ್ತಿದ್ದಳು. ಈಗ ನಾನು ನನ್ನ
ಅಜ್ಜಿಯಂತೆ ಆಗಿದ್ದೇನೆ. ಅವಳಂತೆ ನಾನೂ ನನ್ನ ಆಹಾರವನ್ನು ಒಯ್ಯುತ್ತೇನೆ.’ ಈ ಸಂದರ್ಶನವನ್ನು ಆಧರಿಸಿ, ದೆಹಲಿಯ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆ,’ Sudha Murty says she carries food from India while travelling abroad: I’m pure vegetarian, what if same spoon is used for non veg?’ಎಂಬ ಶೀರ್ಷಿಕೆಯಡಿ ಯಲ್ಲಿ ವರದಿ ಮಾಡಿತು.

ಆಗ ಚಾಲೂ ಆಯಿತು ಟ್ರೋಲ್ ಮಷೀನ್! ಸುಧಾಮೂರ್ತಿಯವರ ಇಡೀ ಸಂದರ್ಶನವನ್ನು ಕೇಳಿದ್ದಿದ್ದರೆ, ಓದಿದ್ದಿದ್ದರೆ ಯಾರೂ ತಪ್ಪು ಭಾವಿಸುತ್ತಿರಲಿಲ್ಲ. ಆದರೆ ಈ ಶೀರ್ಷಿಕೆಯಷ್ಟನ್ನೇ ಓದಿ ಜನ ಮನಸ್ಸಿಗೆ ಬಂದಂತೆ ಪ್ರತಿಕ್ರಿಯಿಸಲಾರಂಭಿಸಿದರು. ಅದು ‘ಸಸ್ಯಾಹಾರಿಗಳು ವರ್ಸಸ್ ಮಾಂಸಾಹಾರಿಗಳು’ ನಡುವಿನ ಯುದ್ಧವಾಗಿ ಮಾರ್ಪಟ್ಟಿತು.

ಮಾಂಸಾಹಾರಿಗಳು ಸೇವಿಸಿದ ಚಮಚದಲ್ಲಿ ಆಹಾರ ಸೇವಿಸುವುದಿಲ್ಲ ಅಂದ್ರೆ ಇವರಲ್ಲಿ ಮಾಂಸಾಹಾರಿಗಳು ಮನುಷ್ಯರಲ್ಲ ಎಂಬ ಭಾವನೆ ಇದೆ ಎಂದು ಕೆಲವರು ಊದಲಾರಂಭಿಸಿದರು. ಇದು ಸುಧಾಮೂರ್ತಿಯವರ ‘ಸನಾತನಿ ಬ್ರಾಹ್ಮಣಿಕೆಯ, ಮೇಲ್ಜಾತಿಯ ಅಹಮಿಕೆಯ ಪ್ರತೀಕ’ ಎಂದು ಇನ್ನು ಕೆಲವರು ವಾದಿಸಲಾ ರಂಭಿಸಿದರು. ‘ಮಾಂಸಾಹಾರಿಗಳು ಬಿಟ್ಟ ಉಸಿರನ್ನು ಸುಧಾಮೂರ್ತಿಯವರು ಸೇವಿಸುತ್ತಾರಾ?’ ಎಂದು ಕೆಲವರು ಕುಹಕವಾಡಿದರು. ಮೂರ್ನಾಲ್ಕು ದಿನ ಸಾಮಾಜಿಕ ಜಾಲತಾಣ ಗಳಲ್ಲಿ ಇದೇ ವಿಷಯ ಕುರಿತು ಬಿಸಿಬಿಸಿ ಚರ್ಚೆ.

ಸುಧಾಮೂರ್ತಿಯವರೊಂದೇ ಅಲ್ಲ, ವಿದೇಶಗಳಿಗೆ ಹೋಗುವಾಗ ತಮ್ಮ ಆಹಾರ, ಪ್ಲೇಟು, ಚಮಚಗಳನ್ನು ತೆಗೆದುಕೊಂಡು ಹೋಗುವ ಅನೇಕರನ್ನು ನಾನು ನೋಡಿದ್ದೇನೆ. ನಾನು ಆರ್ಥಿಕ ತಜ್ಞ ಡಿ.ಎಂ.ನಂಜುಂಡಪ್ಪ ಅವರೊಂದಿಗೆ ಶ್ರೀಲಂಕಾಕ್ಕೆ ಹೋಗಿದ್ದೆ. ಮೂರು ದಿನಗಳ ಕಾಲ ಅವರೊಂದಿಗಿದ್ದೆ. ಅವರು ಮೂರು ದಿನಗಳಿಗೆ ಆಗುವಷ್ಟು ರೊಟ್ಟಿ, ಪಲ್ಯ, ಚಟ್ನಿ ಪುಡಿ, ಗುರೆಳ್ಳು ಪುಡಿ, ಮೆಂತೆ ಚಟ್ನಿ, ಶೇಂಗಾ ಚಟ್ನಿ, ಉಪ್ಪಿನಕಾಯಿಯನ್ನು ಕಟ್ಟಿಕೊಂಡು ಬಂದಿದ್ದರು. ಜತೆಯಲ್ಲಿ ಎರಡು ತಾಟು, ಸೌಟು ಮತ್ತು ಚಮಚಗಳನ್ನೂ ತಂದಿದ್ದರು. ಯಾವ ಸಂದರ್ಭ ದಲ್ಲೂ ಅವರು ಹೊರಗಿನ ತಿಂಡಿ ಸೇವಿಸಲಿಲ್ಲ. ರೂಮಿನಲ್ಲಿಟ್ಟ ಸೇಬಿನ ಹಣ್ಣನ್ನು ಕತ್ತರಿಸುವಾಗಲೂ ತಮ್ಮ ಬಳಿಯಿದ್ದ ಚಾಕು ವನ್ನು ಉಪಯೋಗಿಸುತ್ತಿದ್ದರು.

ಒಮ್ಮೆ ನಾನು ವಿಜಯ್ ಮಲ್ಯ ಅವರ ಜತೆ ದಕ್ಷಿಣ ಆಫ್ರಿಕಾದಲ್ಲಿರುವ ಅವರ ಸಫಾರಿಗೆ ಹೋಗಿದ್ದೆ. ಹೇಳಿಕೇಳಿ ಅವರು ಮದ್ಯದ ದೊರೆ. ಹಾಗೆ ಮಾಂಸಾಹಾರಿ. ಆದರೆ ಅವರು ಹೊರಗಿನ ಚಮಚಗಳನ್ನು ಬಳಸುತ್ತಿರಲಿಲ್ಲ. ‘ನಾನು ಬಳಸಿ ಬಿಸಾಡುವ (Use and throw) ಚಮಚ ಅಥವಾ ನನ್ನ ಮನೆಯ ಚಮಚಗಳನ್ನು ಬಳಸುವುದನ್ನು ಇಷ್ಟಪಡುತ್ತೇನೆ’ಎಂದು ಹೇಳಿದ್ದರು. ಇದು ಶ್ರೀಮಂತಿಕೆ ಅಲ್ಲ. ಅವರು ಸ್ವಚ್ಛತೆಗೆ ನೀಡುತ್ತಿದ್ದ ರೀತಿ. ಅದು ಅವರು ರೂಢಿಸಿಕೊಂಡಿದ್ದು.

ಹೊರ ಊರುಗಳಿಗೆ, ವಿದೇಶಗಳಿಗೆ ಹೋಗುವಾಗ ತಮ್ಮದೇ ಬೆಡ್ ಶೀಟ್, ಚಾದರ, ಟವೆಲ್ಲು, ತಾಟು, ಚಮಚಗಳನ್ನು ಒಯ್ಯುವ ನನ್ನ ಅನೇಕ ಸ್ನೇಹಿತರಿದ್ದಾರೆ. ಅದು ಎಷ್ಟೇ ಕ್ಲೀನಾಗಿ ರಲಿ, ಇಂದಿಗೂ ನಾನು ಹೋಟೆಲ್ ಟವೆಲ್ ಬಳಸುವುದಿಲ್ಲ. ತಲೆದಿಂಬಿನ ಮೇಲೆ ಗೋಣು ಚೆಲ್ಲುವ ಮುನ್ನ ನನ್ನ ಮೆತ್ತನೆಯ ವಸ್ತ್ರವನ್ನು ಹಾಸಿಕೊಳ್ಳುತ್ತೇನೆ. ಚಾದರ ಸ್ವಚ್ಛವಾಗಿದೆ ಎಂಬುದನ್ನು ನಾಲ್ಕು ಸಲ ಖಾತ್ರಿಪಡಿಸಿಕೊಂಡು ಉಪಯೋಗಿಸುತ್ತೇನೆ.

ಇಲ್ಲದಿದ್ದರೆ ನನ್ನ ಚಾದರ ಹೊದ್ದು ಮಲಗುತ್ತೇನೆ. ಚಮಚ ಎಷ್ಟೇ ಶುದ್ಧ ವಾಗಿರಲಿ, ಅದನ್ನು ತೊಳೆಯದೇ, ಟಿಶ್ಯೂ ಕಾಗದದಲ್ಲಿ ಒರೆಸಿ ಕೊಳ್ಳದೇ ಬಾಯಿಗಿಡುವು ದಿಲ್ಲ. ಇದು ಶ್ರೀಮಂತಿಕೆ ಅಲ್ಲವೇ ಅಲ್ಲ. ಅಷ್ಟಕ್ಕೂ ಇದಕ್ಕೆ ಯಾವ ಖರ್ಚೂ ಆಗುವುದಿಲ್ಲ. ಇದು ನಾನು ರೂಢಿಸಿಕೊಂಡ ಅಭ್ಯಾಸ. ಧಾರವಾಡದಲ್ಲಿ ನಮಗೊಬ್ಬರು ಮೇಷ್ಟ್ರು ಇದ್ದರು. ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದುವಾಗ ಅಂತರರಾಜ್ಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಾಗಪುರಕ್ಕೆ ಹೋಗಿದ್ದೆ. ಆ ಮೇಷ್ಟ್ರು ನಮಗೆ ಲೀಡರ್. ಅವರು ಬರುವಾಗ ಕಬ್ಬಿಣದ ಟ್ರಂಕಿನಲ್ಲಿ ಅಡುಗೆ ಸಾಮಾನು, ಸರಂಜಾಮು, ಪಾತ್ರೆಗಳನ್ನೆಲ್ಲ ತಂದಿದ್ದರು. ಒಂದು ವಾರ ಕಾಲ ಅವರು ಹೊರಗೆ ಆಹಾರ ಸೇವಿಸಲಿಲ್ಲ.

ಇಷ್ಟೂ ಸಾಲದೆಂಬಂತೆ, ಅವರು ಕೊಡ, ತಂಬಿಗೆ, ಬಕೆಟ್ ಮತ್ತು ಬಾವಿ ಹಗ್ಗವನ್ನೂ ತಂದಿದ್ದರು. ಬೇರೆಯವರು ಬಳಸಿದ ಯಾವ ವಸ್ತುವನ್ನೂ ಅವರು ಬಳಸುತ್ತಿರ ಲಿಲ್ಲ. ಇದು ಅವರ ಅಭ್ಯಾಸ. ಹಾಗೆ ಮಾಡಿದರೆ ಅವರಿಗೆ ಸಮಾಧಾನ. ಅದು ಅವರ ವೈಯಕ್ತಿಕ. ಅದರಿಂದ ಬೇರೆಯವರಿಗೆ ತೊಂದರೆ ಏನೂ ಆಗಲಿಲ್ಲ. ತನ್ನ ಹಾಗೆ ನೀವೂ ಮಾಡಿ ಎಂದು ಅವರು ಹೇಳುತ್ತಿರಲಿಲ್ಲ. ಆದರೆ ನನಗೆ ಹಾಗೆ ಮಾಡಬೇಡಿ ಎಂದು ಹೇಳಲು ನಿಮಗೆ ಅಧಿಕಾರವಿಲ್ಲ ಎಂದು ಹೇಳುತ್ತಿದ್ದರು. ಅಷ್ಟಕ್ಕೂ ಅವರು ಬ್ರಾಹ್ಮಣರೇನೂ ಅಲ್ಲ.

ಇಂದಿಗೂ ಮನೆಯಲ್ಲಿ ಮಾತ್ರ ಆಹಾರ ಸೇವಿಸುವ, ಮನೆ ಯಿಂದ ಹೊರಬಿದ್ದರೆ ಹೋಟೆಲ್‌ಗೆ ಹೋಗದೇ, ಹಸಿವು- ಬಾಯಾರಿಕೆಯಾದರೆ ಎಳನೀರು ಸೇವಿಸಿ, ರಾತ್ರಿ ಮನೆಗೇ ಬಂದು ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಂಡ ಲಕ್ಷಾಂತರ ಜನರಿದ್ದಾರೆ. ಶಾಕಾಹಾರ ಮತ್ತು ಮಾಂಸಾಹಾರ ಎರಡನ್ನೂ ತಯಾರಿ ಸುವ ಹೋಟೆಲಿಗೆ ಹೋಗದೇ, ಕೇವಲ ಶಾಕಾಹಾರ ಮಾತ್ರ ನೀಡುವ ಹೋಟೆಲಿನಲ್ಲಿ ಆಹಾರ ಸೇವಿಸುವವರಿದ್ದಾರೆ. ನನ್ನ ಸ್ನೇಹಿತರಾದ ನಂಜನಗೂಡು ಮೋಹನ್ ಅವರ ಜತೆ ನೇಪಾಳಕ್ಕೆ ಹೋದಾಗ, ಒಂದು ರಾತ್ರಿ ಕಟ್ಮಂಡು ನಗರದಲ್ಲಿ ಎಲ್ಲಾ ಹುಡುಕಿದರೂ ಬರೀ ಶಾಕಾಹಾರ ನೀಡುವ ಹೋಟೆಲ್ ಸಿಗದೇ,
ಕೊನೆಗೆ ಅವರು ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಸೇವಿಸಿ ಮಲಗಿದ್ದು ನೆನಪಾಗುತ್ತದೆ.

ಸಸ್ಯಾಹಾರ ಸಿಗದಿದ್ದರೆ ಒಂದು ವಾರ ಮಸ್ಕತ್ ಪ್ರವಾಸದಲ್ಲಿ ಹಣ್ಣು ಸೇವಿಸಿ ಇರಬ ಎಂಬ ಧೈರ್ಯದಿಂದ ಅವರು ನಮ್ಮೊಂದಿಗೆ ಬಂದಿದ್ದರು. ಈ ವಿಷಯದಲ್ಲಿ
ಅವರ ಮನಪರಿವರ್ತನೆ ಮಾಡುವಂತಿಲ್ಲ. ಅದು ಅವರು ರೂಢಿಸಿಕೊಂಡು ಬಂದ ಅಭ್ಯಾಸ. ಬದಲಿಸಿಕೊಳ್ಳಿ ಎಂದು ಹೇಳಲು ನಾವ್ಯಾರು? ಅದು ಅವರ ತೀರಾ ಖಾಸಗಿ ವಿಷಯ. ಮೂರನೆಯವರೇಕೆ ಮೂಗು ತೋರಿಸಬೇಕು? ಸುಧಾಮೂರ್ತಿಯವರಿಗೆ ತಮ್ಮದೇ ವಿಮಾನದಲ್ಲಿ ಹೋಗುವುದು, ವಿದೇಶಗಳಿಗೆ ಹೋದಾಗಲೂ ಬಡಿಸಲು ಬಾಣಸಿಗನನ್ನು ಇಟ್ಟುಕೊಳ್ಳುವುದು, ಬೇಕಾದರೆ ಚಿನ್ನದ ಚಮಚಗಳನ್ನೇ ಬಳಸುವುದು ಕೈಗೆಟುಕದ ಗಗನಕುಸುಮ ಅಲ್ಲ. ಆದರೆ ಅವರು ಎಂದೂ ಆ ರೀತಿಯ ದೌಲತ್ತು, ದರ್ಪ ಮೆರೆದವರಲ್ಲ.

ಇಂದಿಗೂ ಅವರು ಅಪ್ಪಟ ಮಧ್ಯಮವರ್ಗದ ಹೆಣ್ಣುಮಗಳ ಜೀವನಶೈಲಿಯನ್ನು ಅನುಸರಿಸುತ್ತಿರುವವರು. ಅಂಥವರನ್ನೂ ನಿಂದಿಸಲು, ಟೀಕಿಸಲು ಹೇಗೆ ಮನಸ್ಸು ಬರುತ್ತದೋ? ಸುಧಾಮೂರ್ತಿಯವರಿಗಿಂತ ಶ್ರೀಮಂತರಾದವರು ಬೆಂಗಳೂರಿನಲ್ಲಿ ಸಾಕಷ್ಟು ಜನರಿದ್ದಾರೆ. ಆದರೆ ಅವರಾರೂ ಇವರ ಹಾಗೆ ಇಲ್ಲ. ಊಟ ಮಾಡ
ಲೆಂದು ದುಬೈಗೆ ಹೋಗುವವರು, ಮಧ್ಯಾಹ್ನ ಊಟಕ್ಕೆ ಸಿಂಗಪುರಕ್ಕೆ, ಶಾಪಿಂಗ್‌ಗೆ ಲಂಡನ್‌ಗೆ ಹೋಗುವವರಿದ್ದಾರೆ. ಅಂಥವರನ್ನು ಯಾರೂ ಪ್ರಶ್ನಿಸುವುದಿಲ್ಲ. ಹಣ್ಣು ಬಿಡುವ ಮಾವಿನ ಮರಕ್ಕೆ ಎಲ್ಲರೂ ಕಲ್ಲುಗಳನ್ನು ಎಸೆಯುತ್ತಾರೆ.

ಅನೇಕರು ತಮ್ಮ ಜತೆ ‘ಚಮಚಾ’ಗಳನ್ನು ಇಟ್ಟುಕೊಂಡಿರುತ್ತಾರೆ. ಸುಧಾಮೂರ್ತಿಯವರು ‘ಚಮಚ’ಗಳನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೇ ವ್ಯತ್ಯಾಸ! ಸುಧಾಮೂರ್ತಿಯವರೇ ವಾಸಿ. ಪ.ರಾಮಕೃಷ್ಣ ಶಾಸಿ ಎಂಬ ಸೋಜಿಗ ನಾನು ಪತ್ರಿಕೆಗಳನ್ನು (ಕಳೆದ ಐವತ್ತು ವರ್ಷಗಳಿಂದ) ಮೊದಲ ಬಾರಿಗೆ ಓದಲಾರಂಭಿ ಸಿದಂದಿನಿಂದ ಇಂದಿನವರೆಗೂ ಅವರ ಹೆಸರನ್ನು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ನಿರಂತರವಾಗಿ ಓದುತ್ತಲೇ ಬಂದಿದ್ದೇನೆ. ಪ್ರಾಯಶಃ ಅವರ ಲೇಖನ, ವ್ಯಕ್ತಿಚಿತ್ರ, ನುಡಿಚಿತ್ರ ಅಥವಾ ಬರಹಗಳನ್ನು ಪ್ರಕಟಿಸದ ಪತ್ರಿಕೆಗಳೇ ಇರಲಿಕ್ಕಿಲ್ಲ.

ಪುಟಾಣಿಗಳಿಗೆ ಮೀಸಲಾದ ಪತ್ರಿಕೆಗಳಲ್ಲೂ ಇವರು ಕಾಣಿಸಿಕೊಳ್ಳುತ್ತಾರೆ. ಹಿರಿಯರ ಪತ್ರಿಕೆಗಳಲ್ಲೂ ಇವರಿರುತ್ತಾರೆ. ಇನ್ನು ಕನ್ನಡದ ರಾಜ್ಯಮಟ್ಟದ ಪತ್ರಿಕೆ ಗಳಿಂದ, ಜಿಲ್ಲಾ ಪತ್ರಿಕೆ ಗಳಲ್ಲೂ ಇವರ ಲೇಖನ ಇರಲೇಬೇಕು. ಕೆಲವೊಮ್ಮೆ ವಾರಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಇವರ ಒಂದಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿದ್ದಿದೆ. ಗದಗ, ಗೋಕಾಕದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ, ದಿನಪತ್ರಿಕೆ ಗಳಲ್ಲೂ ಇವರ ಲೇಖನ ನೋಡಿ ನಾನು ಅಚ್ಚರಿಪಟ್ಟಿದ್ದುಂಟು. ನಂತರ ನಾನು ಪತ್ರಿಕೋದ್ಯಮ ಅಭ್ಯಾಸ ಮಾಡಿ, ಪತ್ರಿಕಾ ಕಚೇರಿ ಸೇರಿ, ನಂತರ ಸಂಪಾದಕನಾದೆ. ಈ ಅವಽಯಲ್ಲೂ ನಾನು ಇವರ ಲೇಖನಗಳನ್ನು ಓದಿ ಅಭಿಮಾನದಿಂದ ಮಾತಾಡಿದ್ದುಂಟು.

ನಾನು ಸಂಪಾದಕನಾದ ಪತ್ರಿಕೆಗಳಲ್ಲೂ ಇವರು ಅಷ್ಟೇ ಶ್ರದ್ಧೆಯಿಂದ ಬರೆಯುತ್ತಿರುವುದನ್ನು ನೋಡುತ್ತಿದ್ದೇನೆ. ನನ್ನ ಜತೆ ಯಲ್ಲಿರುವವರು ಬರೆಯದಿದ್ದರೆ, ಆಲಸಿಗಳಾದಾಗ, ಅವೆಷ್ಟೋ ಸಲ ನಾನು ಇವರ ಉದಾಹರಣೆ ನೀಡಿದ್ದುಂಟು. ಅಂದ ಹಾಗೆ, ಪಟ್ಟಾಗಿ ಕುಳಿತು ಬರೆದವರ ಹೆಸರು ಪಟಿಕ್ಕಲ್ಲು ರಾಮಕೃಷ್ಣ ಶಾಸ್ತ್ರಿ ಅರ್ಥಾತ್ ಪ.ರಾಮಕೃಷ್ಣ ಶಾಸ್ತ್ರಿ! ಪ್ರಾಯಶಃ ಶಾಸಿಯವರ ಹಾಗೆ ಪತ್ರಿಕೆಗಳಿಗೆ ನಿರಂತರ ಬರೆದವರು ತೀರಾ ವಿರಳ. ಹೀಗೆ ಬರೆಯುವುದನ್ನೇ ಕಾಯಕ ಮಾಡಿಕೊಂಡವರೂ. ಪತ್ರಿಕೋದ್ಯಮವನ್ನೇ ವೃತ್ತಿಯಾಗಿಸಿ ಕೊಂಡವರು, ಸುದ್ದಿಮನೆಗಳಲ್ಲಿ ಬದುಕು ಸವೆಸಿದವರು ಕೂಡ ಶಾಸ್ತ್ರಿಯವರ ಹಾಗೆ ಬರೆಯಲಿಲ್ಲ. ಹಾಗೆ ನೋಡಿದರೆ,ಶಾಸ್ತ್ರಿಯವರು ಪತ್ರಿಕೆಗಳಿಗೆ ಲೇಖನ ಬರೆದು, ಅವು ಕೊಡುವ ಗೌರವ ಸಂಭಾವನೆ ಹಣದಿಂದಲೇ ಬದುಕು ಕಟ್ಟಿಕೊಂಡ ನಿಜವಾದ ‘ಅಕ್ಷರಜೀವಿ’. ಅವರು ಬರವಣಿಗೆ ಆರಂಭಿಸಿದಾಗ, ‘ಪ್ರಜಾವಾಣಿ’ ದೈನಿಕ, ‘ಕಸ್ತೂರಿ’ ಮಾಸಿಕಗಳು ಒಂದು ಲೇಖನಕ್ಕೆ ಐದು-ಹತ್ತು ರುಪಾಯಿ ಸಂಭಾವನೆ ಕೊಡುತ್ತಿದ್ದವು. ಆ ದಿನಗಳಿಂದ ಬರೆಯಲಾರಂಭಿಸಿದ ಅವರು, ಆ ಹಣವನ್ನೇ ಸಂಸಾರ ನಿರ್ವಹಣೆಗೆ ನೆಚ್ಚಿಕೊಂಡಿದ್ದರು. ಅಂದರೆ ಶಾಸ್ತ್ರಿಯವರಿಗೆ ಬರಹ-ಬದುಕು ಬೇರೆ ಬೇರೆ ಆಗಿರಲಿಲ್ಲ. ಉತ್ಕಟವಾಗಿ ಬರೆದು, ಉಮ್ಮೇದಿಯಿಂದ ಬದುಕಿದವರು.

ಶಾಸ್ತ್ರಿಯವರು ಓದಿದ್ದು ಆರನೇ ಕ್ಲಾಸಿನ ತನಕ. ಆದರೆ ಅವರು ಬರೆದ ಲೇಖನಗಳ ಸಂಖ್ಯೆ ಹನ್ನೆರಡು ಸಾವಿರಕ್ಕಿಂತ ಹೆಚ್ಚು. ಬರೆದ ಪುಸ್ತಕಗಳ ಸಂಖ್ಯೆ ೧೦೪. ಕೃಷಿಕರ ಕುಟುಂಬದಲ್ಲಿ ಜನಿಸಿದ ಶಾಸ್ತ್ರಿಯವರು, ಸಾಹಿತ್ಯಿಕ ವಾತಾವರಣದಲ್ಲಿಯೇ ಬೆಳೆದವರು. ಆರಂಭದ ದಿನಗಳಲ್ಲಿ ತಮ್ಮ ಪರಿಸರ, ಸುತ್ತಮುತ್ತಲಿನ ಜನ, ಅವರ ಸಾಧನೆ, ವಿಶೇಷ ಪ್ರತಿಭೆ, ವೈಶಿಷ್ಟ್ಯಗಳನ್ನೇ ಲೇಖನ- ನುಡಿಚಿತ್ರಗಳಿಗೆ ವಸ್ತುವಾಗಿಸಿಕೊಂಡರು. ಯಾವುದೇ ವ್ಯಕ್ತಿಯಲ್ಲಿ ಒಂದು ಸಾಧನೆ, ವಿಶೇಷ ಗುಣವಿದ್ದರೂ ಅವರನ್ನು ಪರಿಚಯಿ ಸದೇ ಬಿಟ್ಟವರಲ್ಲ. ಅದಕ್ಕಾಗಿ ಅವರನ್ನು ಹುಡುಕಿಕೊಂಡು ಹೋಗಿ, ಭೇಟಿಯಾಗಿ, ಅವರನ್ನು ಸಂದರ್ಶಿಸಿ ಬರೆಯುತ್ತಿದ್ದರು.
ಶಾಸಿಯವರಿಗೆ ಲೇಖನ ಬರೆದು, ಅದರಿಂದ ಸಿಗುವ ಗೌರವ ಧನದಿಂದ ಸಂಸಾರ ತೂಗಿಸಿಕೊಳ್ಳುವುದಕ್ಕಿಂತ ಎಲ್ಲ ಪತ್ರಿಕೆಗಳಲ್ಲೂ ತಮ್ಮ ಲೇಖನ ಪ್ರಕಟವಾಗ ಬೇಕು ಎಂಬ ಆಸೆಯೇ ಅವರಿಂದ ಕೈ ಹಿಡಿದು ಬರೆಯಿಸಿತು.

ಹೀಗಾಗಿ ಅವರು ಜನಪ್ರಿಯ ವಾರಪತ್ರಿಕೆ ಗಳಲ್ಲದೇ, ಜನಪ್ರಗತಿ, ಪ್ರಪಂಚ, ನವಯುಗ, ಪ್ರಕಾಶ ಮುಂತಾದ ಪತ್ರಿಕೆಗಳಿಗೂ ಬರೆಯುತ್ತಿದ್ದರು. ಸಾಮಾನ್ಯ ವಾಗಿ ಒಂದು ವಾರ ಬರೆದವರ ಇನ್ನೊಂದು ಲೇಖನವನ್ನು ಮೂರ್ನಾಲ್ಕು ವಾರ ಬಿಟ್ಟು ಪ್ರಕಟಿಸುವುದು ವಾಡಿಕೆ. ಒಬ್ಬರದೇ ಲೇಖನವನ್ನು ಪ್ರತಿವಾರವೂ ಪ್ರಕಟಿಸುವು ದಿಲ್ಲ. ಆದರೆ ‘ತರಂಗ’ ವಾರಪತ್ರಿಕೆಯಲ್ಲಿ ಒಂದೇ ಸಂಚಿಕೆಯಲ್ಲಿ ಶಾಸ್ತ್ರಿಯವರ ಒಂಬತ್ತು ಲೇಖನಗಳು ಪ್ರಕಟವಾಗಿದ್ದವು. ಇದು ಒಂದು ದಾಖಲೆಯೇ. ಶ್ಯಾಮ, ರಾಧಾಕೃಷ್ಣ, ಮಾಧವ, ಲಕ್ಷ್ಮಣ, ಮಾಲಿನಿ, ಶಾರದೆ, ಕೃಪಾಕರ, ವೆಂಕಟೇಶ, ಲಕ್ಷ್ಮಿ ಎಂ., ಶ್ರೀಪ್ರಿಯ, ಪ್ರಣಮ್ಯ, ಪಟಿಕಲ್ಲು, ಶಿವಶಕ್ತಿ, ಪಿಆರ್, ಮುಂತಾದ
ಹೆಸರುಗಳಲ್ಲಿ ಅವರು ಬರೆಯುತ್ತಿದ್ದರು.

ತಮ್ಮ ಹೆಸರೊಂದೇ ಅಲ್ಲ, ಮಗ, ಮೊಮ್ಮಕ್ಕಳ ಹೆಸರಿನಲ್ಲೂ ಅವರು ಬರೆಯುತ್ತಿದ್ದರು. ಅಷ್ಟೊಂದು ಲೇಖನಗಳನ್ನು ಬರೆದರೂ, ಇಂದಿಗೂ ಅವರಿಗೆ ಎಂಥ ಸಣ್ಣ-ಪುಟ್ಟ ಸಂಗತಿಗಳೇ ಇರಲಿ, ಅವುಗಳಲ್ಲಿರುವ ವಿಶೇಷ ಅಂಶ ಶಾಸ್ತ್ರಿಯವರನ್ನು ಆಕರ್ಷಿಸುತ್ತದೆ. ಅವರು ಅದಕ್ಕೆ ಒಂದು ಲೇಖನ ಅಥವಾ ನುಡಿಚಿತ್ರದ ರೂಪ ಕೊಟ್ಟು, ಪತ್ರಿಕೆಗಳಿಗೆ ಕಳಿಸಿಕೊಡುತ್ತಾರೆ. ಪ.ರಾಮಕೃಷ್ಣ ಶಾಸ್ತ್ರಿ ಅವರು ಬರೆದಿದ್ದಾರೆಂದ ಮೇಲೆ ಪತ್ರಿಕೆಯವರೂ ಅದನ್ನು ಪ್ರಕಟಣೆಗೆ ನೇರವಾಗಿ ಸ್ವೀಕರಿಸು ತ್ತಾರೆ. ಅವರ ಮೇಲೆ ಅಂಥ ವಿಶ್ವಾಸ! ಎಲ್ಲ ಪತ್ರಿಕೆಗಳಿಗೂ ಅವರ ಲೇಖನಗಳು ಬೇಕು.

ಶಾಸ್ತ್ರಿಯವರ ಒಬ್ಬ ಮಗ ಲಕ್ಷ್ಮಿ ನರಸಿಂಹ ಶಾಸ್ತ್ರಿ (ಲಕ್ಷ್ಮೀ ಮಚ್ಚಿನ ಎಂದೇ ಪ್ರಸಿದ್ಧ) ನನ್ನ ಜತೆ ‘ವಿಜಯ ಕರ್ನಾಟಕ’ದಲ್ಲಿದ್ದರು. ನಂತರ ಅವರು ‘ಉದಯವಾಣಿ’ ಸೇರಿ, ಈಗ ಆ ಪತ್ರಿಕೆಯ ಉಪ ಮುಖ್ಯವರದಿಗಾರರಾಗಿದ್ದಾರೆ. ಶಾಸ್ತ್ರಿಯವರು ಬರೆದ ಹನ್ನೆರಡು ಸಾವಿರ ಲೇಖನಗಳ ಪೈಕಿ, ಅತ್ಯುತ್ತಮವಾದ ಲೇಖನ
ಅಂದ್ರೆ ‘ಲಕ್ಷ್ಮೀ ಮಚ್ಚಿನ’ ಎಂದು ನಾನು ಆಗಾಗ ತಮಾಷೆ ಮಾಡುವುದುಂಟು. ಇತ್ತೀಚೆಗೆ ಶಾಸ್ತ್ರಿಯವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ, ಅವರ ಕುರಿತು ಮೈಸೂರಿನ ‘ರೂಪ ಪ್ರಕಾಶನ ಬದುಕು -ಬರಹ-ಬವಣೆ : ಪ.ರಾಮಕೃಷ್ಣ ಶಾಸಿ ಹೆಜ್ಜೆ ಗುರುತುಗಳು’ ಎಂಬ ಪುಸ್ತಕವನ್ನು ಹೊರ ತಂದಿದೆ.

ಶಾಸ್ತ್ರಿಯವರ ಭಾವನೆಗಳಿಗೆ ಲಕ್ಷ್ಮೀ ಮಚ್ಚಿನ ಅಕ್ಷರ ರೂಪ ಕೊಟ್ಟಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರು, ಶಾಸ್ತ್ರಿಯವರ ಲೇಖನಗಳನ್ನು
ಓದಿ ಅವರ ಅಭಿಮಾನಿಯಾದವರು ಈ ಕೃತಿಯನ್ನು ಓದಬೇಕು.