Saturday, 23rd November 2024

ವಂದೇ ಭಾರತ್‌ನ ಪಿತಾಮಹ ಸುಧಾಂಶು ಮಣಿ

ವೀಕೆಂಡ್ ವಿತ್ ಮೋಹನ್

camohanbn@gmail.com

ಕುಟುಂಬದೊಂದಿಗೆ ನಾನು 2017ರಲ್ಲಿ ಯುರೋಪ್ ಪ್ರವಾಸಕ್ಕೆ ಹೋದಾಗ ಇಟಲಿಯ ರೋಮ್‌ನಿಂದ ವೆನಿಸ್‌ಗೆ ಹೋಗಬೇಕಿತ್ತು. ಎರಡೂ ನಗರಗಳ ನಡುವೆ ಸುಮಾರು 526 ಕಿ.ಮೀ. ಅಂತರ. ಇದನ್ನು ಕ್ರಮಿಸಲು ನಾವು ರೋಮ್ ನಗರದಿಂದ ಹತ್ತಿದ ರೈಲು ಸಂಜೆ ೪ ಗಂಟೆಗೆ ಹೊರಟು ಏಳೂವರೆಗೆಲ್ಲ ವೆನಿಸ್ ತಲುಪಿತ್ತು.

ಮೂರೂವರೆ ತಾಸಿನಲ್ಲಿ 526 ಕಿ.ಮೀ. ದೂರ ಕ್ರಮಿಸಿದ ಈ ರೈಲಿನ ಪ್ರಯಾಣ ರೋಮಾಂಚಕಾರಿ ಅನುಭವವನ್ನು ನೀಡಿತ್ತು. ‘ಭಾರತದಲ್ಲಿ ಈ ಮಾದರಿಯ ರೈಲಿನಲ್ಲಿ ಯಾವಾಗ ಓಡಾಡುತ್ತೇವೋ?’ ಎಂದು ನಾನು ಮತ್ತು ನನ್ನ ಹೆಂಡತಿ ಗೊಣಗಿಕೊಂಡಿ ದ್ದೆವು. ನೋಡನೋಡುತ್ತಲೇ ಕಳೆದ ೪ ವರ್ಷಗಳಲ್ಲಿ ‘ವಂದೇ ಭಾರತ್’ ರೈಲುಗಳು ಭಾರತೀಯ ಹಳಿಗಳ ಮೇಲೆ ಓಡಲು ಶುರುಮಾಡಿಯೇ ಬಿಟ್ಟವು.

1981ರಲ್ಲಿ ರೈಲ್ವೆ ಇಲಾಖೆಗೆ ಸೇರಿ, 1990ರ ದಶಕದಲ್ಲೇ ಭಾರತದಲ್ಲಿ ಹೈಸ್ಪೀಡ್ ರೈಲುಗಳನ್ನು ಓಡಿಸುವ ಕನಸು ಕಂಡು, ೨೦೧೯ರಲ್ಲಿ ಮೊಟ್ಟ ಮೊದಲ ವಂದೇ ಭಾರತ್ ರೈಲು ಓಡಿಸಿದ ಮಾಸ್ಟರ್‌ಮೈಂಡ್ ಚೆನ್ನೈನ ಸುಧಾಂಶು ಮಣಿ. ಮೂಲತಃ ಎಂಜಿನಿಯರ್ ಆಗಿರುವ ಮಣಿ, ಚೆನ್ನೈನ ಇಂಟಿಗ್ರಲ್ ಕೋಚ್ ಕಾರ್ಖಾನೆಯಲ್ಲಿ ನೌಕರಿಯಲ್ಲಿದ್ದರು. ತಮ್ಮ ಹೈಸ್ಪೀಡ್ ರೈಲಿನ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ವೃತ್ತಿಜೀವನದ ಕೊನೆಯ ತಿಂಗಳುಗಳನ್ನು ಮುಡಿಪಾಗಿಟ್ಟ ಮಣಿ, ತಮ್ಮ ನಿವೃತ್ತಿಯ ೨೦ ತಿಂಗಳ ಹಿಂದಷ್ಟೇ ವಂದೇ ಭಾರತ್ ರೈಲಿನ ವಿನ್ಯಾಸಕ್ಕೆ ಚಾಲನೆ ಕೊಟ್ಟಿದ್ದರು.

ಹೈಸ್ಪೀಡ್ ರೈಲುಗಳನ್ನು ಆಮದು ಮಾಡಿಕೊಳ್ಳೋಣವೆಂದು ಭಾರತೀಯ ರೈಲ್ವೆಯ ಸಭೆಯೊಂದರಲ್ಲಿ ಹಲವು ನಿರ್ದೇಶಕರು ಸಲಹೆ ನೀಡಿದಾಗ ಮಣಿ ಬಿಲ್‌ಕುಲ್ ಒಪ್ಪಲಿಲ್ಲ; ತಮ್ಮ ಕನಸಿನ ರೈಲಿನ ತಯಾರಿಕೆಯ ಮಾಹಿತಿಯನ್ನು ಇಲಾಖಾ
ಮುಖ್ಯಸ್ಥರಿಗೆ ಕಷ್ಟಪಟ್ಟು ಮನವರಿಕೆ ಮಾಡಿಕೊಟ್ಟು ಭಾರತದಲ್ಲೇ ಹೈಸ್ಪೀಡ್ ರೈಲಿನ ತಯಾರಿಕೆಗೆ ಒಪ್ಪಿಗೆ ಪಡೆದರು.
ಸಂಪೂರ್ಣ ಸ್ವದೇಶಿ ನಿರ್ಮಾಣದ ವಂದೇ ಭಾರತ್ ರೈಲಿನ ವಿನ್ಯಾಸವನ್ನು ಮೊದಲು ಮಾಡಲಾಯಿತು. ಇದಕ್ಕಾಗಿ
ಮೂವರು ಸಲಹೆಗಾರರನ್ನು ನೇಮಿಸಿದ ಮಣಿ ಸದರಿ ವಿನ್ಯಾಸವನ್ನು ಭಾರತೀಯ ರೈಲ್ವೆಯ ಆಸ್ತಿಯನ್ನಾಗಿಸಿದರು.

ನಂತರ, ರೈಲಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಯಿತು. ರೈಲಿನ ಬಹುತೇಕ ಕಚ್ಚಾವಸ್ತುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಕಾರ್ಖಾನೆಯಲ್ಲೇ ತಯಾರಿಸಲಾಗುತ್ತದೆ. ಮಿಕ್ಕ
ಕಚ್ಚಾವಸ್ತು ಗಳನ್ನು ಚೆನ್ನೈ, ಮುಂಬೈ ಮತ್ತು ಹೈದರಾಬಾದಿನ ಉತ್ಪಾದಕರಿಂದ ಖರೀದಿಸಲಾಗುತ್ತದೆ. ಕೆಲವು ಬಾಗಿಲುಗಳು,
ಆಸನಗಳು ಭಾರತದಲ್ಲಿ ಲಭ್ಯವಾಗದ ಕಾರಣ ಆಮದು ಮಾಡಿಕೊಳ್ಳಲಾಗುತ್ತದೆ.

‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಉಪಕ್ರಮಗಳಡಿಯಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ರೈಲು, ನಮ್ಮ ರೈಲ್ವೆ ಇಲಾಖೆಯ ಹಿರಿಮೆ. ಎಂಜಿನ್-ರಹಿತ ರೈಲುನಿರ್ಮಾಣದ ತಂತ್ರಜ್ಞಾನ ಭಾರತದಲ್ಲಿದೆಯೆಂಬುದನ್ನು ಇಡೀ ವಿಶ್ವಕ್ಕೆ ಸಾರುವ ವಿನ್ಯಾಸವನ್ನು ರೂಪಿಸಿದ ಕೀರ್ತಿ ಮಣಿಯವರಿಗೆ ಸಲ್ಲಬೇಕು. ಈ ರೈಲಿನ ಗರಿಷ್ಠವೇಗ ಗಂಟೆಗೆ 180 ಕಿ.ಮೀ. ಇದ್ದರೂ, ಪ್ರಸ್ತುತ ಭಾರತದ ಎಲ್ಲ ಹಳಿಗಳ ಮೇಲೂ ಅದು ಈ ವೇಗದಲ್ಲಿ ಚಲಿಸಲಾಗದು. ಈಗಾಗಲೇ ಹಲವು ರಾಜ್ಯಗಳಲ್ಲಿ ಹಳಿಗಳ ದುರಸ್ತಿ ನಡೆಯುತ್ತಿದ್ದು, ಈ ರೈಲಿನ ವೇಗಕ್ಕೆ ಅನುಕೂಲವಾಗುವಂತೆ ಅವನ್ನು ಅಭಿವೃದ್ಧಿಪಡಿಸ ಲಾಗುತ್ತಿದೆ.

ಕೆಲದಿನಗಳ ಹಿಂದೆ ವಂದೇ ಭಾರತ್ ರೈಲಿಗೆ ಎಮ್ಮೆಯೊಂದು ಡಿಕ್ಕಿಹೊಡೆದ ಪರಿಣಾಮ ರೈಲಿನ ಮುಂಭಾಗ ಹಾನಿ ಯಾಗಿರುವ ಚಿತ್ರವೊಂದು ಎಲ್ಲೆಡೆ ವೈರಲ್ ಆದಾಗ ಕೆಲವು ಸಮಯಸಾಧಕರು ಇದನ್ನು ಕಂಡು ಗೇಲಿಮಾಡಿದರು. ಆದರೆ ಆ
ವಿಷಯಕ್ಕೆ ಮಣಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಅವರೇ ಹೇಳುವಂತೆ, ವಂದೇ ಭಾರತ್ ರೈಲಿನ ಮುಂಭಾಗಕ್ಕೆ ಕಬ್ಬಿಣದ
ತಡೆಯೊಂದನ್ನು ಜೋಡಿಸುವುದು ಕಷ್ಟವೇನಲ್ಲ; ಆದರೆ ಹಾಗೆ ಮಾಡಿದರೆ ರೈಲಿನ ಮೂಲವಿನ್ಯಾಸವೇ ಬದಲಾಗಿಬಿಡುತ್ತದೆ.
ಜತೆಗೆ, ಮುಂದಿನ ಹತ್ತಾರು ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ.

ಹಳಿ ಮೇಲೆ ಜಾನುವಾರುಗಳು ಬರುವುದನ್ನು ತಡೆಯಲು, ಹಳಿಗಳ ಅಕ್ಕಪಕ್ಕದಲ್ಲಿ ತಡೆಗೋಡೆ ನಿರ್ಮಿಸಿರುವ ಮಾರ್ಗಕ್ಕೆಂದು
ವಿನ್ಯಾಸಗೊಳಿಸಿರುವ ಗರಿಷ್ಠ ವೇಗದ ರೈಲು ಇದಾಗಿದೆ. ಮೊದಲ ವಂದೇ ಭಾರತ್ ರೈಲಿನ ನಿರ್ಮಾಣಕ್ಕೆ ಅಂದಾಜು 100 ಕೋಟಿ ರು. ವೆಚ್ಚವಾಗಿದೆ. ‘ಆತ್ಮನಿರ್ಭರ ಭಾರತ’ ಉಪಕ್ರಮದಡಿ ನಿರ್ಮಿಸಿರುವ ಕಾರಣ ಇದರ ವೆಚ್ಚ ಕಡಿಮೆಯಾಗಿದ್ದು, ಒಂದೊಮ್ಮೆ ಇದೇ ಮಾದರಿಯ ರೈಲನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರೆ ೩ ಪಟ್ಟು ಹೆಚ್ಚು ಖರ್ಚಾಗುತ್ತಿತ್ತು ಎನ್ನುತ್ತಾರೆ ಮಣಿ.

ರೈಲು ತಯಾರಿಗೆ ಒಪ್ಪಿಗೆ ಸಿಕ್ಕಮೇಲೆ ಮಣಿಯವರ ದೊಡ್ಡ ತಂಡವೊಂದು ಸಿದ್ಧವಾಯಿತು. ಮಣಿ ನಿವೃತ್ತಿಗೆ ಬಾಕಿಯಿರುವ ೨೦ ತಿಂಗಳಲ್ಲಿ ರೈಲನ್ನು ಹಳಿಮೇಲೆ ಓಡಿಸಲಾಗುವುದೋ ಇಲ್ಲವೋ ಎಂಬ ಭಯ ಆ ತಂಡವನ್ನು ಕಾಡುತ್ತಿತ್ತು. ಏಕೆಂದರೆ, ವಿದೇಶದಲ್ಲಿ ಹೊಸದೊಂದು ರೈಲನ್ನು ವಿನ್ಯಾಸಗೊಳಿಸಿ, ನಂತರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಉತ್ಪಾದಿಸಿ ಓಡಿಸಲು ಕನಿಷ್ಠವೆಂದರೂ 33-36 ತಿಂಗಳು ಬೇಕಾಗುತ್ತವೆ. ಜತೆಗೆ ಮಣಿಯವರ ನಿವೃತ್ತಿಗಿಂತ ಮೊದಲು ರೈಲಿನ ಸಂಪೂರ್ಣ ಉತ್ಪಾದನೆ ಸಾಧ್ಯವಾಗದಿದ್ದರೆ ಮುಂದೇನು ದಾರಿ? ಎಂಬ ದೊಡ್ಡಚಿಂತೆಯೂ ಅವರ ತಂಡವನ್ನು ಕಾಡುತ್ತಿತ್ತು.

ಅದರೆ ‘ತಂಡಪ್ರಯತ್ನ’ ಕೈಕೊಡಲಿಲ್ಲ; ತಾವೇ ಹಾಕಿಕೊಂಡಿದ್ದ 20 ತಿಂಗಳ ಗಡುವಿಗಿಂತ ೨ ತಿಂಗಳು ಮೊದಲೇ
ಈ ಕನಸನ್ನು ನನಸಾಗಿಸುವಲ್ಲಿ ಮಣಿ ಮತ್ತು ತಂಡದವರು ಯಶಸ್ವಿಯಾದರು. ರೈಲ್ವೆ ಸುರಕ್ಷತಾ ನಿಗಮದ ಅಧ್ಯಕ್ಷರಾಗಿದ್ದ ಖ್ಯಾತ ವಿಜ್ಞಾನಿಯೊಬ್ಬರು 2012ರಲ್ಲಿ, ಇಂಟಿಗ್ರಲ್ ಕೋಚ್ ಕಾರ್ಖಾನೆಯಲ್ಲಿ ತಯಾರಾದ ರೈಲುಬೋಗಿಗಳನ್ನು ‘ಸಾವಿನ
ಬೋಗಿ’ಗಳೆಂದು ಕರೆದಿದ್ದರು.

1950ರ ದಶಕದಲ್ಲಿ, ವಿದೇಶಿ ವಿನ್ಯಾಸಗಳನ್ನು ಬಳಸಿ ಉತ್ಪಾದಿಸಲಾಗುತ್ತಿದ್ದ ಬೋಗಿಗಳು ಹಲವು ಅಪಘಾತಗಳಿಗೆ ಕಾರಣ ವಾಗಿದ್ದು ನಿಜವಾದರೂ, ಅವುಗಳ ಬಳಕೆ ನಿಲ್ಲಿಸಿ ಹೊಸ ತಂತ್ರಜ್ಞಾನದೆಡೆಗೆ ಗಮನವೀಯುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ‘ಸಾವಿನ ಬೋಗಿ’ಗಳನ್ನು ನಿರ್ಮಿಸುತ್ತಿದ್ದ (!) ಕಾರ್ಖಾನೆಯಲ್ಲಿ ನೂತನ ತಂತ್ರಜ್ಞಾನದ ವಂದೇ ಭಾರತ್
ರೈಲುಗಳನ್ನು ನಿರ್ಮಿಸುವುದು ಕಷ್ಟದ ಕೆಲಸವಾಗಿತ್ತು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಅಂದುಕೊಂಡಂತೆ 18 ತಿಂಗಳಲ್ಲೇ
ಕನಸು ಸಾಕಾರಗೊಂಡಿತ್ತು; ನಕಾಶೆಯ ಫಲಕದಲ್ಲಿ ವಿನ್ಯಾಸದ ರೂಪದಲ್ಲಿದ್ದುದು, ಹಳಿಗಳ ಮೇಲೆ ವೇಗವಾಗಿ ಓಡುವ
ಉತ್ಪನ್ನವಾಗಿ ರೂಪುಗೊಂಡಿತ್ತು…. ರೈಲ್ವೆ ಇಲಾಖೆಯಲ್ಲಿನ ಆಂತರಿಕ ರಾಜಕೀಯ, ಆಮದಿನೆಡೆಗೇ ಹೆಚ್ಚು ಆಸಕ್ತಿ ತೋರುವ ಅಽಕಾರಿವರ್ಗ, ಹೊಟ್ಟೆ ಉರಿಯ ಜನರ ನಡುವೆಯೇ ನೂತನ ರೈಲಿನ ಉತ್ಪಾದನಾ ಕಾರ್ಯವನ್ನು ಇಲಾಖಾ ಮುಖ್ಯಸ್ಥರಿಗೆ ಒಪ್ಪಿಸುವಲ್ಲಿ ಮಣಿ ಯಶಸ್ವಿಯಾಗಿದ್ದರು.

ಮುಂಬೈ ಮಹಾನಗರಿಯಲ್ಲಿರುವ ಉದ್ಯಮಿ ಅಂಬಾನಿಯವರ ಮನೆಗೆ ಆಗಿರುವ ವೆಚ್ಚದ ಶೇ. 10ರಷ್ಟು ಹಣದಲ್ಲಿ ಮಂಗಳ ಯಾನ ಪೂರ್ಣಗೊಳಿಸುವ ಸಾಮರ್ಥ್ಯವಿರುವ ಭಾರತಕ್ಕೆ ಸ್ವದೇಶಿ ರೈಲೊಂದನ್ನು ಉತ್ಪಾದಿಸುವ ತಾಕತ್ತಿಲ್ಲವೇ? ಎಂದು ಕಾಡಿದ ಪ್ರಶ್ನೆಯೇ ಮಣಿಯವರಿಗೆ ವಂದೇ ಭಾರತ್ ಉತ್ಪಾದನೆಗೆ ಸೂರ್ತಿಯಾಯಿತು ಎಂಬುದು ಉಲ್ಲೇಖನೀಯ. ರೈಲ್ವೆ ಇಲಾಖೆಯಲ್ಲಿ ಕಳೆದ 8 ವರ್ಷಗಳಿಂದ ಆಗಿರುವ ಬದಲಾವಣೆಗಳು ನಮ್ಮ ಕಣ್ಣಮುಂದಿವೆ. ಒಂದು ಕಾಲದಲ್ಲಿ ವಾರಕ್ಕೊಮ್ಮೆ ಮಾಧ್ಯಮಗಳಲ್ಲಿ ರೈಲು ಅಪಘಾತದ ಸುದ್ದಿಕೇಳುವುದು ಮಾಮೂಲಾಗಿತ್ತು.

ಹೀಗಾಗಿ ಮೂಲಸಮಸ್ಯೆಗಳತ್ತ ಗಮನಹರಿಸಿದ ಕೇಂದ್ರ ಸರಕಾರ, ದೇಶದ ಸಾವಿರಾರು ಮಾನವರಹಿತ ರೈಲ್ವೆ ಕ್ರಾಸಿಂಗ್‌ ಗಳಲ್ಲಿ ಸುರಕ್ಷತಾ ಗೇಟುಗಳ ಅಳವಡಿಕೆಗೆ ಅದ್ಯತೆ ನೀಡಿ, ಅಪಘಾತಗಳ ಸಂಖ್ಯೆಯನ್ನು ತಗ್ಗಿಸಿತು. ನಂತರ ನೂತನ ತಂತ್ರಜ್ಞಾನಗಳನ್ನು ಬಳಸಿ ರೈಲುಗಳ ನಡುವಿನ ಮುಖಾಮುಖಿ ಅಪ್ಪಳಿಕೆಗಳನ್ನು ತಗ್ಗಿಸಲಾಯಿತು. ಹೀಗೆ ಮೂಲ ಸೌಕರ್ಯಗಳನ್ನು ಸುಧಾರಿಸಿದ ನಂತರ ಹೈಸ್ಪೀಡ್ ರೈಲುಗಳ ಬಳಕೆಯೆಡೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.

2021ರ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ, ‘75 ವಾರಗಳಲ್ಲಿ 75 ವಂದೇ ಭಾರತ್ ರೈಲುಗಳನ್ನು ನಿರ್ಮಿಸಲಾಗುವುದು’
ಎಂದು ಪ್ರಧಾನಿ ಮೋದಿ ಘೋಷಿಸಿದ್ದರು; ಅದಕ್ಕೆ ತಕ್ಕಂತೆ ಇಂಟಿಗ್ರೇಟೆಡ್ ಕೋಚ್ ಕಾರ್ಖಾನೆಯಲ್ಲಿ ಅಗತ್ಯ ಬದಲಾವಣೆ ಗಳನ್ನು ಮಾಡಲಾಯಿತು. ೨೦೧೯ರಲ್ಲಿ ಮೊದಲ ವಂದೇ ಭಾರತ್ ರೈಲಿನ ಓಡಾಟ ಶುರುವಾದಾಗ, ಕೆಲ ಅತೃಪ್ತ ಆತ್ಮಗಳು ಮಣಿಯವರ ಕೆಲಸವನ್ನು ಗೇಲಿಮಾಡತೊಡಗಿದವು. ಇದಕ್ಕೆ ಧೃತಿಗೆಡದ ಮಣಿ ತಮ್ಮ ಮೊಬೈಲ್ ಸಂಖ್ಯೆಯನ್ನು ಟ್ವೀಟ್ ಮಾಡಿ, ವಂದೇ ಭಾರತ್ ಬಗೆಗಿನ ಎಲ್ಲ ಅನುಮಾನಗಳಿಗೂ ಉತ್ತರಿಸಲು ತಾವು ಸಿದ್ಧವೆಂದು ಆತ್ಮವಿಶ್ವಾಸದಿಂದ ಹೇಳಿದ್ದರು.

ಬೆಂಗಳೂರಿನ ವೈದ್ಯಕೀಯ ಕ್ಷೇತ್ರದ ದಿಗ್ಗಜ ವ್ಯವಹಾರಸ್ಥರೊಬ್ಬರು ವಂದೇ ಭಾರತ್‌ನ ಪ್ರಾಯೋಗಿಕ ಸಂಚಾರದ ವೇಳೆ
ಕಾಣಿಸಿಕೊಂಡ ತಾಂತ್ರಿಕ ದೋಷದ ಬಗ್ಗೆ ಟ್ವೀಟ್ ಮಾಡಿ, ಭಾರತೀಯ ರೈಲ್ವೆಯಲ್ಲಿನ ತಂತ್ರಜ್ಞಾನದ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ತಮ್ಮ ಸಂಸ್ಥೆಯಲ್ಲಿ ತಯಾರಾಗುವ ಔಷಧಿಗಳ ಪ್ರಾಯೋಗಿಕ ಬಳಕೆ ಮತ್ತು ಪರಿಣಾಮ ಜಗತ್ತಿಗೆ ಕಾಣಿಸದ ಕಾರಣ ಜನರು ಮಾತಾಡುವುದಿಲ್ಲ ಎಂಬುದು ತಿಳಿದಿದ್ದರೂ ಅವರು ವಂದೇ ಭಾರತ್ ರೈಲಿನ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ್ದರು.

ಇದಕ್ಕೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಮಣಿಯವರು, ವಸ್ತುವೊಂದನ್ನು ಉತ್ಪಾದಿಸಿದ ನಂತರ ‘ಟ್ರಯಲ್ ರನ್’ ಮಾಡಿದರಷ್ಟೇ ಅದರಲ್ಲಿರಬಹುದಾದ ಸಮಸ್ಯೆಗಳನ್ನು ಬಗೆಹರಿಸಬಹುದೆಂಬ ಸಾಮಾನ್ಯಜ್ಞಾನ ಇಲ್ಲದವರ ಟ್ವೀಟ್‌ಗೆ ತಾವು ಪ್ರತಿಕ್ರಿಯಿಸುವು ದಿಲ್ಲ ಎಂದಿದ್ದರು. ೨೦೧೬ರ ಆಗಸ್ಟ್‌ನಲ್ಲಿ ಇಲಾಖೆಯಲ್ಲಿ ಪ್ರಧಾನ ವ್ಯವಸ್ಥಾಪಕರಾದ ದಿನವೇ, ವಂದೇ ಭಾರತ್ ರೈಲನ್ನು ಸಂಪೂರ್ಣ ಸ್ವದೇಶಿ ಕಚ್ಚಾವಸ್ತುಗಳಿಂದಲೇ ನಿರ್ಮಿಸಬೇಕೆಂದು ನಿರ್ಧರಿಸಿದ್ದರು ಮಣಿ.

ತಮ್ಮ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಬೆಂಬಲಿಸಿ ೨ ರೈಲುಗಳ ಉತ್ಪಾದನೆಗೆ ಅವಕಾಶವಿತ್ತ ರೈಲ್ವೆ ಇಲಾಖೆಯ ಅಧ್ಯಕ್ಷ ರನ್ನು ಮಣಿ ಇಂದಿಗೂ ನೆನೆಯುತ್ತಾರೆ. ಗಂಟೆಗೆ 180 ಕಿ.ಮೀ. ಓಡುವ ಹೈಸ್ಪೀಡ್ ರೈಲಿನ ಉತ್ಪಾದನಾ ವಿನ್ಯಾಸದ ಬಗ್ಗೆ ಭಾರತದಲ್ಲಿ ಹಿಂದೆಂದೂ ಚರ್ಚೆಯಾಗಿರಲಿಲ್ಲ; ವರ್ಷಕ್ಕೊಮ್ಮೆ ಬರುವ ರೈಲ್ವೆ ಆಯವ್ಯಯದಲ್ಲಿ ನೂತನ ರೈಲುಗಳ ಪಟ್ಟಿಯನ್ನು ಓದಬೇಕಿತ್ತಷ್ಟೇ!

ಆದರೆ ಇಂಥ ವೇಗದ ರೈಲಿನ ತಯಾರಿಕೆಗೆ ಸಹಾಯಕವಾಗುವಂತೆ ಗುಣಮಟ್ಟದ ಸಲಹೆಗಾರರನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಣಿ, ತಂತ್ರಜ್ಞಾನದ ಬಳಕೆ, ಬೋಗಿಗಳ ಬಾಹ್ಯ ಮತ್ತು ಆಂತರಿಕ ವಿನ್ಯಾಸ ಸೇರಿದಂತೆ ರೈಲಿನ ಒಟ್ಟಾರೆ ಪ್ರಸ್ತುತಿ, ರೂಪಣೆಯು ಈ ಎಲ್ಲ ಸಲಹೆಗಾರರಿಂದ ಕಾರ್ಯಸಾಧ್ಯವಾಯಿತು, ಈ ಪಡೆಯ ಪರಿಶ್ರಮ ಮತ್ತು ಕಾರ್ಯಕ್ಷಮತೆ ಯನ್ನು ಮರೆಯಲಾಗದು ಎನ್ನುತ್ತಾರೆ.

ನಿವೃತ್ತಿಯ ದಿನಗಳನ್ನು ಆರಾಮಾಗಿ ಕಳೆಯಬಯಸುವವರ ನಡುವೆ, ಅಂಥ ಕಾಲಾವಧಿಯನ್ನು ವಿಶ್ವದರ್ಜೆಯ ವಂದೇ ಭಾರತ್ ಹೈಸ್ಪೀಡ್ ರೈಲಿನ ತಯಾರಿಗೆ ಬಳಸಿದ ಮಣಿಯವರ ಬದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಭಾರತೀಯರೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು.