Monday, 14th October 2024

ಮನೆ ಹತ್ತಿರವೇ ಕಂಡ ಸೂರಕ್ಕಿ ಸಂಸಾರ

ಶಶಾಂಕಣ

shashidhara.halady@gmail.com

ಸೂರಕ್ಕಿಗಳು ಅಥವಾ ಸನ್‌ಬರ್ಡ್ ಗಳು ಸುಂದರ ಹೊಳೆಯುವ ದೇಹದ, ಉದ್ದ ಕೊಕ್ಕಿನ, ಚಟುವಟಿಕೆಯ ಪುಟಾಣಿ ಹಕ್ಕಿಗಳು. ಮನೆ ಸುತ್ತಮುತ್ತಲಿನ
ದಾಸವಾಳ ಮೊದಲಾದ ಹೂವುಗಳ ಮೇಲೆ ಕುಳಿತು, ತಮ್ಮ ಉದ್ದನೆಯ ಕೊಕ್ಕನ್ನು ಆ ಹೂವಿನ ಬುಡಕ್ಕೆ ತೂರಿಸಿ, ಮಕರಂದ ಹೀರುವುದು ಅವುಗಳ ನೆಚ್ಚಿನ ಹವ್ಯಾಸ. ಚಿಂವ್ ಚಿರ್ ಎಂದು ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಹೂವಿನಿಂದ ಹೂವಿಗೆ ಜಿಗಿಯುವ ಅವುಗಳ ನೋಟವು, ನೋಡುವವರ ಮನಸ್ಸಿನಲ್ಲಿ ಉಲ್ಲಾಸ ವನ್ನೂ ತುಂಬುತ್ತದೆ!

ನಮ್ಮ ನಾಡಿನಲ್ಲಿ ನಾಲ್ಕಾರು ಪ್ರಭೇದದ ಸೂರಕ್ಕಿಗಳು ಇವೆ. ಇವುಗಳ ಪೈಕಿ ನೇರಳೆ ಬಣ್ಣದ ಸೂರಕ್ಕಿ, ನೇರಳೆ ಪೃಷ್ಠದ ಸೂರಕ್ಕಿ, ಲೋಟೆನ್ಸ್ ಸೂರಕ್ಕಿಗಳು ನಮ್ಮ ರಾಜ್ಯದಲ್ಲಿ ಸಾಮಾನ್ಯ. ನಮ್ಮ ಹಳ್ಳಿಯ ಮನೆಯಲ್ಲಿ ಸೂರಕ್ಕಿಯೊಂದು ಗೂಡುಕಟ್ಟಿ, ಮರಿಮಾಡುವುದನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿತ್ತು. ಕೆಲವು ಹಕ್ಕಿ ಗಳಿಗೆ ಮನುಷ್ಯನ ಸಾಂಗತ್ಯ ಎಂದರೆ ಇಷ್ಟ. ಬಹುಶಃ, ಮನುಷ್ಯರ ಮನೆಯ ಸುತ್ತಮುತ್ತಲೇ ಗೂಡುಕಟ್ಟಿ ದರೆ ಭಯ ಕಡಿಮೆ ಎಂಬ ಅಭಿಮತವೂ ಅವುಗಳಲ್ಲಿರಬೇಕು!

ಇಲ್ಲವಾದರೆ, ನಮ್ಮ ಮನೆಯ ಉಪ್ಪರಿಗೆ ಕಿಟಿಕಿಯ ಹತ್ತಿರವೇ, ಪ್ರತಿವರ್ಷವೂ ಗೂಡು ಕಟ್ಟುತ್ತಿದ್ದ ಆ ಸೂರಕ್ಕಿಯ ಧೈರ್ಯವನ್ನು ಹೇಗೆಂದು ವಿಶ್ಲೇಷಿಸುವುದು! ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮ ಮನೆಯಲ್ಲಿ ಹಳೆಯ ಕಾಲದ ಒಂದು ರೇಡಿಯೋ ಇತ್ತು. ಬ್ಯಾಟರಿ ಸೆಲ್ ಶಕ್ತಿಯಿಂದ ಮಧುರ ಗೀತೆಗಳನ್ನು ಕೇಳಿಸುತ್ತಿದ್ದ ಆ ರೇಡಿಯೋ ವನ್ನು ನಮ್ಮ ತಂದೆ, ಚಾವಡಿಯಲ್ಲಿ ಪ್ರತಿಷ್ಠಾಪಿಸಿದ್ದರು. ಆಗಿನ ಕಾಲದ ಆ ಡುಬ್ಬ ರೇಡಿಯೋಗಳಿಗೆ ಏರಿಯಲ್ ಎಂಬ ಸಂಪರ್ಕಬೇಕಿತ್ತು. ಅಂದರೆ, ಮನೆಯ ಉಪ್ಪರಿಗೆಯ ತುದಿಯಲ್ಲಿ, ಉದ್ದನೆಯ ವಯರಿನ ವಿನ್ಯಾಸವನ್ನು ಅಳವಡಿಸಿ, ಅದನ್ನು ಸಂಪರ್ಕಿಸುವ ವಯರನ್ನು ರೇಡಿಯೋದ ಹಿಂಭಾಗದಲ್ಲಿದ್ದ ರಂಧ್ರದಲ್ಲಿ ಅಳವಡಿಸಿದಾಗ ಮಾತ್ರ, ಅದು ದೂರದ ಭದ್ರಾವತಿ ಸ್ಟೇಷನ್‌ನ ತರಂಗಗಳನ್ನು ಗ್ರಹಿಸುತ್ತಿತ್ತು.

ಉಪ್ಪರಿಗೆ ಯಲ್ಲಿ ತೂಗುಹಾಕಿದ್ದ ಏರಿಯಲ್ ತಂತಿಗಳಿಗೆ ಸಂಪರ್ಕ ನೀಡುವ ಒಂದು ಕಪ್ಪನೆಯ ವಯರು ಉದ್ದಕ್ಕೂ ಇಳಿಬಂದು, ಚಾವಡಿಯಲ್ಲಿದ್ದ ರೇಡಿ
ಯೋಕ್ಕೆ ಸಿಕ್ಕಿಕೊಂಡಿತ್ತು. ಈ ಕಪ್ಪನೆಯ ವಯರನ್ನು ಕಂಡರೆ, ಆ ಸೂರಕ್ಕಿ ದಂಪತಿಗೆ ಅದೇನೋ ಪ್ರೀತಿ, ವಿಶ್ವಾಸ. ಹೊರಭಾಗದ ಗೋಡೆಯಿಂದ ಇಳಿಬಂದಿದ್ದ ಆ ವಯರಿಗೆ ತಮ್ಮ ಗೂಡನ್ನು ಅಂಟಿಸಿದ ಅವುಗಳ ಕೌಶಲ ವಿಶಿಷ್ಟ. ತರಗಲೆ, ಬೂರುಗದ ಹತ್ತಿಯ ಚೂರು, ಜೇಡರ ಬಲೆ ಮೊದಲಾದ ಚಿಕ್ಕಪುಟ್ಟ ಸಾಮಗ್ರಿಗಳಿಂದ
ತಯಾರಿಸಿದ ಆ ಗೂಡಿಗೆ ಒಂದು ಪ್ರವೇಶದ್ವಾರ. ನಮ್ಮ ಮನೆಯ ಎದುರಿನಲ್ಲಿ ಸದಾ ನೀರಿನಿಂದ ತುಂಬಿರುತ್ತಿದ್ದ ಅಗೇಡಿಯ ಮೇಲೆ ಜೋತಾಡುವಂತಿದ್ದ ಆ ಗೂಡಿನ ಪ್ರವೇಶ ದ್ವಾರವು, ಬಯಲಿನ ಕಡೆಗೆ ತೆರೆದುಕೊಂಡಿತ್ತು.

ಆ ಸಂಜೆ ಗೂಡು ಕಟ್ಟುವ ಕೆಲಸ ಮುಗಿದಿರಬೇಕು. ಆ ಪುಟಾಣಿ ಸೂರಕ್ಕಿ, ತನ್ನ ಉದ್ದನೆಯ ಕೊಕ್ಕನ್ನು ಹೊರಗೆ ಚಾಚಿಕೊಂಡು, ಆ ಗೂಡಿನಲ್ಲಿ ಹುದುಗಿ
ಕುಳಿತಿತ್ತು! ಮೊಟ್ಟೆಯಿಟ್ಟು, ಆ ಮೊಟ್ಟೆಗಳಿಗೆ ಕಾವು ಕೊಡಲು ಕುಳಿತಿತ್ತು ಎನಿಸುತ್ತದೆ. ಮನೆ ಮುಂಭಾಗದ ಜಗಲಿಯಲ್ಲಿ ನಿಂತರೆ, ಸುಮಾರು ಎಂಟು ಅಡಿ ದೂರದಲ್ಲಿ, ಆರೇಳು ಅಡಿ ಎತ್ತರದಲ್ಲಿ ಇದ್ದ ಆ ತೂಗಾಡುವ ಗೂಡು ನಮಗೆಲ್ಲಾ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಎಷ್ಟು ಸ್ಪಷ್ಟ ಎಂದರೆ, ಆ ಸೂರಕ್ಕಿ ಹೊರಗೆ ಚಾಚಿದ್ದ ಒಂದಿಂಚು ಉದ್ದದ ಕೊಕ್ಕಿನ ವಿನ್ಯಾಸ, ಆ ಕೊಕ್ಕಿನ ತುದಿಯಿಂದ ಆಗಾಗ ಹೊರಗೆ ಚಾಚುತ್ತಿದ್ದ ತೆಳ್ಳನೆಯ ನಾಲಗೆಯಂತಿರುವ ಹೀರು ಕೊಳವೆ ಕಾಣಿಸುವಷ್ಟು!

ಸೂರಕ್ಕಿ ಅಥವಾ ಸನ್‌ಬರ್ಡ್‌ಗಳಲ್ಲಿ ಹಲವು ಪ್ರಭೇದಗಳಿವೆ. ಪರ್ಪಲ್ ಸನ್‌ಬರ್ಡ್, ಪರ್ಪಲ್ ರಂಪ್‌ಡ್ ಸನ್‌ಬರ್ಡ್ ಇವೆರಡು ಸಾಮಾನ್ಯವಾಗಿ ಕಾಣಸಿಗುವ, ನಗರಗಳಲ್ಲೂ ಗೂಡುಕಟ್ಟಿ ಮರಿ ಮಾಡುವ ಸುಂದರ ಹಕ್ಕಿಗಳು. ನಮ್ಮ ಹಳ್ಳಿಯಲ್ಲಿ ಅಂದು ಗೂಡು ಕಟ್ಟಿದ್ದು ಲೋಟೆನ್ಸ್ ಸನ್‌ಬರ್ಡ್ ಅಥವಾ ಲೋಟೆನ್ಸ್ ಸೂರಕ್ಕಿ. ಈ ಹೆಸರನ್ನು ನಾನು ನಂತರದ ದಿನಗಳಲ್ಲಿ ಸಲೀಂ ಅಲಿಯವರ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕ ಓದಿ, ಪತ್ತೆ ಮಾಡಿದೆ. ಲೋಟೆನ್ಸ್ ಸನ್‌ಬರ್ಡ್ ಬಹುಮಟ್ಟಿಗೆ ಪರ್ಪಲ್ ಸನ್‌ಬರ್ಡ್ ರೀತಿಯೇ ಇದ್ದರೂ, ಗಾತ್ರದಲ್ಲಿ ತುಸು ದೊಡ್ಡದು. ಮಾಮೂಲಿ ಸೂರಕ್ಕಿಯ ಕೊಕ್ಕು ಅರ್ಧ ಇಂಚು ಉದ್ದನೆಯದಾಗಿದ್ದರೆ,
ಲೋಟೆನ್ಸ್ ಸೂರಕ್ಕಿಯ ಕೊಕ್ಕು ಸುಮಾರು ಮುಕ್ಕಾಲು ಇಂಚು ಉದ್ದ. ಮಿರಿಮಿರಿ ಹೊಳೆಯುವ ಅದರ ಕಪ್ಪನೆಯ ಮುಖದಲ್ಲಿ, ಈ ಕೊಕ್ಕೇ ದೊಡ್ಡದಾಗಿ ನೀಡಿಕೊಂಡಂತೆ ಕಾಣಿಸುತ್ತದೆ!

ಗಂಡುಹಕ್ಕಿ ಪೂರ್ಣಕಪ್ಪು. ಹೆಣ್ಣುಹಕ್ಕಿ ತುಸು ಮಾಸಲುಬಣ್ಣ. ಈ ಹಕ್ಕಿಯನ್ನು ಗುರುತಿಸಲು ಹೆಚ್ಚು ಸಹಕಾರಿಯಾಗುವುದು ಅದರ ಕರ್ಕಶ ದನಿಯ ಕೂಗುವ ಶೈಲಿ.
ನಮ್ಮ ಮನೆಯ ಜಗಲಿಯ ಮೇಲಿದ್ದ ವಯರಿಗೆ ಗೂಡು ಕಟ್ಟಿ, ಆ ಸೂರಕ್ಕಿ ದಂಪತಿ ಮೊಟ್ಟೆಯಿಟ್ಟು ಮರಿ ಮಾಡಿ, ಮರಿಗಳಿಗೆ ಹಾರಲು ಕಲಿಸಿ ಕರೆದುಕೊಂಡು ಹೋದವು! ತಮ್ಮ ಮರಿಗಳಿಗೆ ಪ್ರತಿದಿನ ಅವು ಕೀಟಗಳನ್ನು ತಂದು ತಿನ್ನಿಸುವುದನ್ನು ಹತ್ತಿರದಿಂದ ನೋಡುವ ಅವಕಾಶ. ಜತೆಯಲ್ಲೇ, ಗೂಡಿನಲ್ಲಿದ್ದ ಕಲ್ಮಶಗಳನ್ನು ಸಹ ಕೊಕ್ಕಿನಲ್ಲಿ ಕಚ್ಚಿ ಹೊರಗೆ ಕೊಂಡೊಯ್ದು ದೂರದಲ್ಲಿ ಎಸೆದು, ಚೊಕ್ಕಟವಾಗಿಡುತ್ತಿದ್ದವು! ಅದನ್ನೆಲ್ಲಾ ಆ ಹಕ್ಕಿಗಳಿಗೆ ಹೇಳಿಕೊಟ್ಟವರಾದರೂ ಯಾರೋ? ಅಚ್ಚರಿ ಎಂದರೆ, ಮುಂದಿನ ವರ್ಷವೂ ಅದೇ ವಯರಿಗೆ ಆ ಸೂರಕ್ಕಿಗಳು ತಮ್ಮ ಗೂಡನ್ನು ಅಂಟಿಸಿ ದ್ದವು.

ಆದರೆ ಆ ವರ್ಷ ಒಂದು ಪುಟ್ಟ ಅನಾಹುತ ವಾಯಿತು. ಆಗಿನ್ನೂ ಗೂಡು ಶೇ.೯೦ರಷ್ಟು ಮುಗಿ ದಿತ್ತು ಅಥವಾ ಪೂರ್ತಿಯಾಗಿತ್ತೋ ಸರಿಯಾಗಿ ನೆನಪಿಲ್ಲ. ಅದೇ ಸಮಯದಲ್ಲಿ ದೀಪಾವಳಿ ಹಬ್ಬ ಬಂತು. ಆಗಿನ ದಿನಗಳಲ್ಲಿ ಪಟಾಕಿಗಳನ್ನು ಸುಡುವುದೆಂದರೆ ನಮ್ಮಪ್ಪನಿಗೆ ವಿಪರೀತ ಹುಚ್ಚು. ದೂರದ ಊರಿನಲ್ಲಿ ವೃತ್ತಿಯಲ್ಲಿದ್ದ ಅವರು, ದೀಪಾವಳಿಗೆ ಬರುವಾಗ ತಪ್ಪದೇ ಒಂದಿಷ್ಟು ಪಟಾಕಿಗಳನ್ನು ಉತ್ಸಾಹದಿಂದ ತರುತ್ತಿದ್ದರು. ಒಂದು ಡಜನ್ ಬಿರುಸು, ರಾಕೆಟ್, ಬಿಡಿಪಟಾಕಿ, ಆಟಂ ಬಾಂಬ್, ಲಕ್ಷ್ಮಿ ಪಟಾಕಿಗಳನ್ನು ತಂದು ಹಬ್ಬದ ರಾತ್ರಿ ಸುಡುವುದರಲ್ಲಿ ಅವರಿಗಿದ್ದ ಉತ್ಸಾಹ ಎಷ್ಟೆಂದರೆ, ಅಷ್ಟು ಉತ್ಸಾಹ ನನಗೂ ಇರಲಿಲ್ಲ! ದೀಪಾವಳಿಯ ರಾತ್ರಿ ಗದ್ದೆಗೆ ದೀಪ ಹಚ್ಚಿ ಬಂದು, ಹಲವು ಪಟಾಕಿ ಸುಟ್ಟು ನಂತರ, ಒಂದೆರಡು ಬಿರುಸುಗಳನ್ನು ಹಕ್ಕಿ ಗೂಡಿನ ಕೆಳಗೆ, ಜಗಲಿಯ ಮೇಲೆ ಇಟ್ಟು ಹಚ್ಚಿದರು ನಮ್ಮಪ್ಪ. ‘ಆ ಜಗಲಿಯ ಮೇಲೆ ಬಿರುಸನ್ನಿಟ್ಟು ಹಚ್ಚಬೇಡಿ, ಅಲ್ಲೇ ಮೇಲೆ ಸೂರಕ್ಕಿಯ ಗೂಡು ಇದೆ’ ಎಂದು ನಾನು ಕೂಗಿಕೊಂಡೆ.

‘ಏನೂ ಆಗಲ್ಲ ಬಿಡು, ಗೂಡು ತುಂಬಾ ಮೇಲಿದೆ’ ಎಂದು, ಅಲ್ಲೇ ಇಟ್ಟು ಬಿರುಸಿಗೆ ಬೆಂಕಿ ಹಚ್ಚಿದರು. ಬರ್ ಎಂದು ಮೇಲಕ್ಕೆ ನೆಗೆದ ಬಿರುಸಿನ ಕಿಡಿಗಳು ಸೂರಕ್ಕಿಯ ಗೂಡಿಗೆ ತಗುಲಿ ದವು. ಒಂದೇ ಕ್ಷಣದಲ್ಲಿ ಸೂರಕ್ಕಿಯ ಗೂಡು ಭಸ್ಮ! ಪಾಪ, ಮರುದಿನ ಬೆಳಗ್ಗೆ ಅಲ್ಲೇ ಸುತ್ತಮುತ್ತ ಹಾರಾಡುತ್ತಿದ್ದ ಸೂರಕ್ಕಿಗಳು, ತಮ್ಮ ಉರಿದುಹೋದ ಗೂಡನ್ನು ಕಂಡು ಮರುಗಿದವೋ ಏನೋ. ಅವು ಗಳಿಗೆ ಭಯವಾಗಿರಬೇಕು, ಅವುಗಳ ಗೂಡೇ ಸುಟ್ಟು ಹೋಯಿತು, ಇನ್ನು ನಮ್ಮ ಮನೆಯ ಹತ್ತಿರ ಅವು ಗೂಡು ಕಟ್ಟುವುದಿಲ್ಲವೇನೋ ಎಂದುಕೊಂಡೆ ನಾನು! ಆದರೆ, ಸೂರಕ್ಕಿಗಳು ಯಾವುದೇ ಭಯ ವಿಲ್ಲದೇ, ಮರುವರ್ಷವೂ ಅದೇ ಜಾಗದಲ್ಲಿ ತಮ್ಮ
ಗೂಡು ಕಟ್ಟಿದವು. ನಮ್ಮ ಮನೆಯ ಪರಿಸರದ ಮೇಲೆ, ಆ ಕಪ್ಪನೆಯ ವಯರಿನ ಮೇಲೆ ಆ ಸೂರಕ್ಕಿಗಳಿಗಿದ್ದ ವಿಶ್ವಾಸ ಕಂಡು ನಮಗೆಲ್ಲಾ ಹೆಮ್ಮೆ, ಅಚ್ಚರಿ.

ಒಣಗಿದ ಎಲೆ, ಹುಲ್ಲು, ಬೂರುಗದ ಹತ್ತಿ ಚೂರು ಮೊದಲಾದವುಗಳನ್ನು ಕೊಕ್ಕಿನಿಂದಲೇ ತಂದು ಅಂಟಿಸಿ, ಗೂಡು ಕಟ್ಟಿ, ಮೊಟ್ಟೆಯಿಟ್ಟು, ಹೆಣ್ಣು ಸೂರಕ್ಕಿ ಕಾವು ಕೊಡತೊಡಗಿತು. ಆದರೆ ಈ ವರ್ಷ ಮತ್ತೊಂದು ಗಂಡಾಂತರ ಕಾದಿತ್ತು. ನಮ್ಮ ಹಳ್ಳಿ ಮನೆಯ ಉಪ್ಪರಿಗೆಯ ಮಾಡಿಗೆ ತಾಗಿಕೊಂಡಿದ್ದ ಒಂದು ದೊಡ್ಡ ಹಲಸಿನ
ಮರದ ಕೊಂಬೆಗಳು ಚಾಚಿಕೊಂಡಿರುವುದು ಮಾಮೂಲು. ಅವು ಚಾವಣಿಯ ಮೇಲೆ ಮುಚ್ಚಿಕೊಂಡಿದ್ದರೂ, ಆ ಕೊಂಬೆಗಳನ್ನು ಕಡಿದುಹಾಕುವ ಪದ್ಧತಿ ಅಂದು ಇರಲಿಲ್ಲ. ಮರಗಳು, ಮನೆಗಳು ಎಲ್ಲವೂ ಒಂದೇ ಎಂಬ ಭಾವ ನಮ್ಮ ಹಳ್ಳಿಯ ಜನರಿಗೆ. ನಮ್ಮ ಉಪ್ಪರಿಗೆಯ ತುದಿಯಲ್ಲಿ, ದೊಂಬೆ ಹೆಂಚಿನ ಉದ್ದನೆಯ ಸಂದಿಯಲ್ಲಿ ಇಲಿಗಳು ವಾಸಿಸುತ್ತಿದ್ದುದು ಸಹ ಸಾಮಾನ್ಯ ಸಂಗತಿ. ರಾತ್ರಿ ಹೊತ್ತು ಇಲಿಗಳು ಮಾಡಿನ ತುದಿಯಲ್ಲಿ ಅತ್ತಿಂದಿತ್ತ ಓಡಾಡುವ ಸದ್ದು ಕೇಳುತ್ತಾ ನಿದ್ದೆ ಮಾಡುತ್ತಿದ್ದೆವು ನಾವು! ಆ ಇಲಿಗಳನ್ನು ಹುಡುಕಿಕೊಂಡು ಹಗಲಿನ ಹೊತ್ತಿನಲ್ಲಿ ನಾಗರಹಾವುಗಳು ಸಹ ಬರುತ್ತಿದ್ದವು!

ನಮ್ಮೂರಿನವರು ಆ ಹಾವಿಗೆ ಅದೆಷ್ಟು ಗೌರವ, ಭಯ, ಭಕ್ತಿ ತೋರುತ್ತಿದ್ದರೆಂದರೆ, ಅದನ್ನು ದೇವರ ಹಾವು ಎಂದು ಕರೆದು, ಅದಕ್ಕೆ ಯಾವುದೇ ಅಪಾಯ
ವಾಗದಂತೆ ನೋಡಿಕೊಳ್ಳುತ್ತಿದ್ದರು! ಮನೆಯ ಮಾಡಿನ ಮೇಲೆ ಹಾವು ನಿಧಾನವಾಗಿ ಸಂಚರಿಸುತ್ತಾ, ಇಲಿಗಳ ವಾಸನೆಯನ್ನು ಗ್ರಹಿಸಲು ತನ್ನ ನಾಲಗೆ
ಯನ್ನು ಝಳಪಿಸುತ್ತಾ ಓಡಾಡುವುದನ್ನು ನಾನು ಹಲವು ಬಾರಿ ಕಂಡಿದ್ದೆ. ‘ಅದು ಅದರ ಪಾಡಿಗೆ ಬಂದು ಹೋಗುತ್ತದೆ, ನಮಗೆ ಏನೂ ಮಾಡುವುದಿಲ್ಲ’ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ! ಆ ವರ್ಷ ಮಾತ್ರ, ಆ ರೀತಿ ಉಪ್ಪರಿಗೆಯ ಮಾಡಿನ ಮೇಲೆ ಇಲಿಗಳನ್ನು ಹುಡುಕುತ್ತಾ ಬಂದ ಒಂದು ನಾಗರಹಾವು, ನಿಧಾನವಾಗಿ ಸೂರಕ್ಕಿಯ ಗೂಡಿನ ಕಡೆ ಚಲಿಸಿತು. ಆ ನಾಗರಹಾವಿಗೆ ಅದೆಂಥ ಕೌಶಲವಿತ್ತೆಂದರೆ, ಗೂಡಿನ ಕಡೆ ನಿಧಾನವಾಗಿ ಚಲಿಸಿ, ವಯರಿಗೆ ಅಂಟಿಕೊಂಡಿದ್ದ ಸೂರಕ್ಕಿಯ ಗೂಡನ್ನು ಪತ್ತೆ ಮಾಡಿಯೇಬಿಟ್ಟಿತು. ವಯರನ್ನು ಮತ್ತು ಗೋಡೆಯನ್ನೇ ಆಧಾರ ಮಾಡಿಕೊಂಡು, ಆ ಹಾವು ಹಕ್ಕಿಗೂಡಿನ ಬಾಯನ್ನು ಗುರುತಿಸಿ, ಅದರೊಳಗೆ ಇಣುಕಿತು! ಹತ್ತಿರದಲ್ಲೇ ಇದ್ದ ಸೂರಕ್ಕಿಗಳು ಜೋರಾಗಿ ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಆರ್ತನಾದ ಮಾಡುತ್ತಿದ್ದವು.

ಆ ನಾಗರಹಾವು ಸೂರಕ್ಕಿಯ ಗೂಡಿಗೆ ಭೇಟಿ ಇತ್ತಾಗ, ಅಲ್ಲಿ ಮೊಟ್ಟೆ ಇತ್ತೋ ಇಲ್ಲವೋ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ; ಹಾವು ಮೊಟ್ಟೆಯನ್ನು ನುಂಗಿದ್ದನ್ನು ಸಹ ನಾನು ಕಣ್ಣಾರೆ ನೋಡಿರ ಲಿಲ್ಲ. ಆದರೆ, ಆ ಎರಡು ಹಕ್ಕಿಗಳು ಅತ್ತಿಂದಿತ್ತ ಹಾರಾಡುತ್ತಾ, ಸನಿಹದ ಮಾವಿನ ಮರದ ಟೊಂಗೆಯ ಮೇಲೆ ಒಮ್ಮೊಮ್ಮೆ ಕುಳಿತು, ಮತ್ತೆ ಇತ್ತ ಹಾರಿ ಬರುತ್ತಾ, ಕೂಗುತ್ತಿದ್ದ ಪರಿಯನ್ನು ಕಂಡರೆ ಮಾತ್ರ, ಏನೋ ದೊಡ್ಡ ಅನಾಹುತ ಆಗಿರಲೇಬೇಕು ಎನಿಸಿತು. ಕೆಲವು ನಿಮಿಷಗಳ ನಂತರ ಹಾವು ಕೆಳಗಿಳಿದು, ತನ್ನ ಪಾಡಿಗೆ ಬಿಲವನ್ನು ಹುಡುಕಿ ಕೊಂಡು ಹೊರಟಿತು.

ಸೂರಕ್ಕಿಗಳಿಗೆ ತಮ್ಮ ಗೂಡಿಗೆ ಭೇಟಿಕೊಟ್ಟ ಆ ನಾಗರಹಾವನ್ನು ಕಂಡು ಏನು ಅನಿಸಿತೋ, ಎಷ್ಟು ಭಯಪಟ್ಟವೋ! ಆ ದಿನದ ಅವುಗಳ ಕೂಗು ನಿಜಕ್ಕೂ
ಆರ್ತನಾದ, ಕೋಪದ ಆಕ್ರೋಶ, ಅಸಹಾಯಕರು ಹೊರಡಿಸುವ ದೀರ್ಘ ನಿಟ್ಟುಸಿರು, ಬಲಾಢ್ಯರು ಹಿಂಸಿಸುವಾಗ ಏನೂ ಮಾಡಲಾಗದೆ ಕೂಗುವ ಹತಾಶತನ ಎಲ್ಲವನ್ನೂ ಒಳಗೊಂಡಿತ್ತು. ಆದರೆ ನಾಗರಹಾವಿನ ಶಕ್ತಿಯ ವಿರುದ್ಧ ದುರ್ಬಲ ಸೂರಕ್ಕಿ ಗಳು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ತಮ್ಮ ಗೂಡಿನ ಬಳಿ ಆ ನಾಗರಹಾವು ಚಲಿಸುತ್ತಾ ಇದ್ದ ಆ ೧೦-೧೫ ನಿಮಿಷದುದ್ದಕ್ಕೂ ಆ ಹಕ್ಕಿಗಳು ಅರಚುತ್ತಿದ್ದುದನ್ನು ನಾನು ನೋಡುತ್ತಲೇ ಇದ್ದೆ; ಆ ಹೃದಯ ವಿದ್ರಾವಕ ಘಟನೆಯು ನನ್ನನ್ನು ಬಹಳ ದಿನ ಕಾಡಿದ್ದು ಸುಳ್ಳಲ್ಲ.

ಅದಾದ ನಂತರ ಇನ್ನೊಂದು ವಿದ್ಯಮಾನವೂ ನಡೆಯಿತು. ನಾಗರಹಾವು ತಮ್ಮ ಗೂಡನ್ನು ಪರಿವೀಕ್ಷಣೆ ಮಾಡಿದ ದಿನ ತಮ್ಮ ಗೂಡನ್ನೇ ಬಿಟ್ಟು ಹೋದ ಆ ಹಕ್ಕಿಗಳು ಮತ್ತೆ ಅಲ್ಲೆಲ್ಲೂ ಕಾಣಿಸಲಿಲ್ಲ. ಮಾತ್ರವಲ್ಲ, ಮುಂದೆಂದೂ ಆ ಕಪ್ಪನೆಯ ವಯರಿಗೆ ಅಂಟಿದಂತೆ ತಮ್ಮ ಗೂಡನ್ನು ಆ ಸೂರಕ್ಕಿ ದಂಪತಿ ಕಟ್ಟಲೇ ಇಲ್ಲ. ಹಿಂದಿನ ವರ್ಷ ದೀಪಾವಳಿ ದಿನ ಬೆಂಕಿ ತಗುಲಿ ಗೂಡು ಭಸ್ಮವಾದರೂ, ಅವು ಬೆದರಲಿಲ್ಲ; ಬಹುಶಃ ಕಾಡಿನ ಬೆಂಕಿಯಂಥ ಘಟನೆಗಳು ಅಂಥ ಜೀವಿಗಳಿಗೆ ಸಾಮಾನ್ಯ ಇದ್ದರೂ ಇರಬಹುದು, ಆದ್ದರಿಂದಲೇ ಗೂಡು ಸುಟ್ಟುಹೋದರೂ, ಮರು ವರ್ಷ ನಮ್ಮ ಮನೆ ಪಕ್ಕದ ಅದೇ ಜಾಗದಲ್ಲಿ ಗೂಡು ಕಟ್ಟಿದವು. ಆದರೆ ನಾಗರಹಾವು ತಮ್ಮ ಗೂಡಿಗೆ ಭೇಟಿಕೊಟ್ಟದ್ದನ್ನು ಕಂಡು ಬೆದರಿದವು, ಹೆದರಿದವು, ಕಂಗಾಲಾದವು, ಧೃತಿಗೆಟ್ಟವು. ನಂತರದ ವರ್ಷಗಳಲ್ಲಿ ನಮ್ಮ ಮನೆಯ ಸುತ್ತಮುತ್ತ ಲೋಟೆನ್ಸ್ ಸೂರಕ್ಕಿಗಳು ಮತ್ತು ಇತರ ಪ್ರಭೇದದ ಸೂರಕ್ಕಿಗಳು ಹಾರಾಡು ವುದನ್ನು ಕಂಡಿದ್ದೆನಾದರೂ, ಆ ಜಾಗದಲ್ಲಿ ಇನ್ನೆಂದೂ ಗೂಡು ಕಟ್ಟಲಿಲ್ಲ.