Wednesday, 6th November 2024

Surendra Pai Column: ಚೆಂದದ ಪಾಠ ಹೇಳಿದ ಕಲಾಂ

ತನ್ನಿಮಿತ್ತ

ಸುರೇಂದ್ರ ಪೈ, ಭಟ್ಕಳ

ನಿದ್ರೆ ಮಾಡುವಾಗ ಬರುವುದು ಕನಸಲ್ಲ, ನಿದ್ರೆ ಮಾಡಲು ಬಿಡದಿರುವುದು ನಿಜವಾದ ಕನಸು ಎಂಬ ಸಾಲನ್ನು ಕೇಳಿದಾಕ್ಷಣ ನೆನಪಾಗುವ ಮಹಾನ್ ಚೇತನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ. ದೇಶದ ಯುವಪೀಳಿಗೆಯನ್ನು ಪ್ರೇರೇ
ಪಿಸಬಲ್ಲ ಪುಸ್ತಕ, ಕವನಗಳನ್ನು ಬರೆಯುತ್ತ, ಅಪ್ಪಟ ಮೇಷ್ಟ್ರಂತೆ ಪಾಠ ಹೇಳುತ್ತ, ಭೂಮಂಡಲದ ರಕ್ಷಣೆಯ ಸಂಕಲ್ಪವನ್ನು ಮಾಡಿಸುತ್ತ, ಪರಿಶ್ರಮ-ಪ್ರಾಮಾಣಿಕತೆಗಳಿಗೆ ಪರ್ಯಾಯ ರೂಪವಾಗಿದ್ದುಕೊಂಡು ನಮ್ಮೆಲ್ಲರ ಹೃದಯಗಳನ್ನು ಗೆದ್ದವರು ಡಾ.ಕಲಾಂ. ಅಕ್ಟೋಬರ್ 15 ಇವರ ಜನ್ಮದಿನ.

ಈ ದಿನವನ್ನು ದೇಶಾದ್ಯಂತ ‘ವಿಶ್ವ ವಿದ್ಯಾರ್ಥಿಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಅಬ್ದುಲ್ ಕಲಾಂ ಹೆಸರು ಕೇಳಿದರೆ ಈಗಲೂ ಅದೇನೋ ರೋಮಾಂಚನವಾಗುತ್ತದೆ, ಸ್ಪೂರ್ತಿ ದೊರಕುತ್ತದೆ. ಅಪಾರ ಜ್ಞಾನ, ಸರಳತೆ, ಮಾನವೀಯ ಮೌಲ್ಯಗಳ ಗಣಿಯಾಗಿದ್ದ ಅವರು ವಿಜ್ಞಾನಿಗಳ ಪಾಲಿಗೆ ‘ಮಿಸೈಲ್ ಮ್ಯಾನ್’, ವಿದ್ಯಾರ್ಥಿಗಳ ಪಾಲಿಗೆ ‘ಅತ್ಯುತ್ತಮ ಶಿಕ್ಷಕ’, ಸಾರಸ್ವತ ಲೋಕದವರಿಗೆ ‘ಅದ್ಭುತ ಲೇಖಕ’ ಹೀಗೆ ಏನೆಲ್ಲಾ ಆಗಿದ್ದವರು. ಎಲ್ಲ ಜಾತಿ, ಧರ್ಮ, ಪಂಥದವರಿಂದಲೂ ಗೌರವಿಸಲ್ಪಟ್ಟವರು ಕಲಾಂ. ಅವರ ಹತ್ತನೇ ವಯಸ್ಸಿನಲ್ಲಿ ವಿಜ್ಞಾನ ಶಿಕ್ಷಕರು ಪಕ್ಷಿಗಳ ಬಗ್ಗೆ ಪಾಠ ಮಾಡಲು ರಾಮೇಶ್ವರಂ ಬೀಚ್‌ಗೆ ಕರೆದುಕೊಂಡು ಹೋಗಿದ್ದರಂತೆ; ಅವರ ಬೋಧನೆಯಿಂದ ಪ್ರೇರೇಪಣೆ ಗೊಂಡ ಕಲಾಂ ಭವಿಷ್ಯದಲ್ಲಿ ತಾವೊಬ್ಬ ಏರೋನಾಟಿಕಲ್ ವಿಜ್ಞಾನಿಯಾಗಬೇಕೆಂದು ಕನಸು ಕಂಡು, ಅದನ್ನೇ ಬೆನ್ನತ್ತಿ ‘ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.‌

1960ರಲ್ಲಿ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ (ಡಿಆರ್‌ಡಿಒ) ವೈಮಾನಿಕ ವಿಜ್ಞಾನ ಅಭಿವೃದ್ಧಿ ವಿಭಾಗದಲ್ಲಿ ವಿಜ್ಞಾನಿಯಾಗಿ ವೃತ್ತಿಜೀವನ ಆರಂಭಿಸಿದ ಕಲಾಂ, ತರುವಾಯದಲ್ಲಿ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಮೇಲ್ವಿಚಾರಣೆಯಿದ್ದ ‘ಇನ್ಕೋಸ್ಪಾರ್’ ಸಮಿತಿಯ ಭಾಗವಾಗಿದ್ದರು. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವಾದ ‘ಎಸ್‌ಎಲ್‌ವಿ-3’ರ ಅಭಿವೃದ್ಧಿಯ ಮೇಲ್ವಿಚಾರಣೆ ಮಾಡಿದರು.

1970ರ ದಶಕದಲ್ಲಿ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರಚನೆ-ಅಭಿವೃದ್ಧಿ, 1980ರಲ್ಲಿ ರೋಹಿಣಿ ಉಪಗ್ರಹವನ್ನು ಭೂಕಕ್ಷೆಗೆ ಸೇರಿಸುವಿಕೆ, ‘ಅಗ್ನಿ’ ಮತ್ತು ‘ಪೃಥ್ವಿ’ ಸೇರಿದಂತೆ 1982ರಲ್ಲಿ ಹಲವಾರು ಯಶಸ್ವಿ ಕ್ಷಿಪಣಿಗಳ ಅಭಿವೃದ್ಧಿ ಮುಂತಾದ ಮೈಲಿಗಲ್ಲುಗಳಲ್ಲಿ ಡಾ.ಕಲಾಂ ಅವರ ಯೋಗದಾನವಿತ್ತು. ಈ ಎಲ್ಲ ಸಾಧನೆಗಳ ಫಲವಾಗಿಯೇ ‘ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎಂಬ ಕೀರ್ತಿ ಅವರ ಹೆಗಲೇರಿತು. 1998ರಲ್ಲಿ ಪೋಖ್ರಾನ್‌ನಲ್ಲಿ ‘ಪರಮಾಣು ಪರೀಕ್ಷೆ’‌ ಯಶಸ್ವಿಯಾಗುವಲ್ಲಿ ಕಲಾಂ ಅವರ ಪರಿಶ್ರಮವಿತ್ತು ಮತ್ತು ಇದು ಭಾರತವು ವಿಶ್ವ ಮಟ್ಟದಲ್ಲಿ ಪರಮಾಣು ಶಕ್ತಿ ರಾಷ್ಟ್ರವಾಗಿ ಹೊಮ್ಮಲು ಕಾರಣವಾಯಿತು.

ರಾಜಕೀಯ ಹಿನ್ನೆಲೆಯಿಲ್ಲದ ಡಾ.ಕಲಾಂ ಅವರು 2002ರಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ, ಆ ಹೊಣೆಗಾರಿಕೆಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಸಾಕಷ್ಟು ಜನರಲ್ಲಿತ್ತು. ಆದರೆ ಆ ಹುದ್ದೆಯನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದನ್ನು ಕಂಡು ಮನಸೋತ ಜನರೇ ಕಲಾಂರನ್ನು ‘ಪೀಪಲ್ಸ್ ಪ್ರೆಸಿಡೆಂಟ್’ ಎಂದು ಕರೆದು ಶ್ಲಾಘಿಸಿದರು. ಆರೋಗ್ಯ ರಕ್ಷಣೆಯು ಡಾ.ಕಲಾಂ ಅವರ ಅಚ್ಚುಮೆಚ್ಚಿನ ಕ್ಷೇತ್ರಗಳಲ್ಲಿ ಒಂದಾಗಿತ್ತು.

ಹೃದ್ರೋಗ ತಜ್ಞ ಡಾ.ಸೋಮರಾಜು ಅವರ ಜತೆಗೂಡಿ ‘ಕಲಾಂ-ರಾಜು ಸ್ಟೆಂಟ್’ ಅಭಿವೃದ್ಧಿಪಡಿಸಿದ್ದು, 2012ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಆಡಳಿತ ನೀಡುವುದಕ್ಕೆ ಅನುವು ಮಾಡಿಕೊಡುವ ‘ಕಲಾಂ-ರಾಜು ಟ್ಯಾಬ್ಲೆಟ್ ಕಂಪ್ಯೂಟರ್’ಗೆ ಚಾಲನೆ, ನಗರ ಪ್ರದೇಶಗಳಲ್ಲಿರುವಂಥ ಮೂಲಸೌಕರ್ಯ ಮತ್ತು ಸೇವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲೂ ಒದಗಿಸುವ ಸಂಕಲ್ಪದಡಿ ರೂಪುಗೊಂಡ ‘ಪುರ ಯೋಜನೆ’ ಮುಂತಾದವು ಕಲಾಂ ಅವರಲ್ಲಿದ್ದ ‘ಜನಕಲ್ಯಾಣದ ದೂರದೃಷ್ಟಿ’ಗೆ ಒಂದಷ್ಟು ನಿದರ್ಶನಗಳು.

ಕನಸು ಕಾಣುವುದನ್ನು ಕಲಿಸಿದ್ದು ಮಾತ್ರವಲ್ಲದೆ, ಕಂಡ ಕನಸುಗಳನ್ನು ನನಸಾಗಿಸಿಕೊಳ್ಳುವ ಪರಿಯನ್ನೂ ತಮ್ಮ ಕಾರ್ಯಗಳ ಮೂಲಕ ತೋರಿಸಿದ್ದು ಡಾ.ಕಲಾಂ ಅವರ ಹೆಗ್ಗಳಿಕೆ. ಅವರು ಹುಟ್ಟಿದ್ದು ಇಸ್ಲಾಂ ಧರ್ಮದಲ್ಲಾದರೂ,
ಎಲ್ಲಾ ಧರ್ಮಗಳ ಆಚಾರ-ವಿಚಾರಗಳನ್ನು, ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ಅಪಾರ ಪಾಂಡಿತ್ಯವನ್ನು ಸಂಪಾದಿಸಿದ್ದರು. ಮಹಾಭಾರತದಲ್ಲಿ ಬರುವ ವಿದುರನ ಪಾತ್ರ ಕಲಾಂರಿಗೆ ಬಲು ಇಷ್ಟವಾಗಿತ್ತು. ಯಾರೊಬ್ಬರೂ ಕಲಾಂರನ್ನು ಧರ್ಮದ ಆಧಾರದ ಮೇಲೆ ಗುರುತಿಸಲಿಲ್ಲ, ಕಲಾಂ ಅವರು ಕೂಡ ಯಾವೊಂದು ಧರ್ಮದ/ಜನಾಂಗದ ವಿರೋಧವನ್ನು ಕಟ್ಟಿಕೊಳ್ಳಲಿಲ್ಲ. ಹೀಗಾಗಿ ಅವರು ನಿಜಾರ್ಥದಲ್ಲಿ ಒಬ್ಬ ‘ವಿಶ್ವಮಾನವ’ ಎಂದರೆ ಅತಿಶಯೋಕ್ತಿಯಲ್ಲ.

ಕೆಲವರಿಗೆ ಕೈಗೊಂದಿಷ್ಟು ಅಧಿಕಾರ ಸಿಕ್ಕರೆ ಸಾಕು ಅಹಂಕಾರವೂ ಹೆಗಲೇರಿ ಬಿಡುತ್ತದೆ. ‘ನಮ್ಮ ಹಿಂದೆ-ಮುಂದೆ ಸದಾ ಹತ್ತಾರು ಜನರಿರಬೇಕು, ವಾಸಿಸಲು ದೊಡ್ಡ ಬಂಗಲೆ ಬೇಕು, ಸಾಕಷ್ಟು ಹಣ ಮಾಡಬೇಕು’ ಎಂಬಿತ್ಯಾದಿ ಆಲೋಚನೆಗಳು ಇಂಥವರಲ್ಲಿ ಸುಳಿಯುವುದು ಸಾಮಾನ್ಯ. ಆದರೆ ಡಾ.ಕಲಾಂ ಇದಕ್ಕೆ ಅಪವಾದವಾಗಿದ್ದರು. ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ಕೂಡ ಆಡಂಬರಕ್ಕೆ ಮೊರೆಹೋಗದೆ ಸರಳತೆ-ಸಜ್ಜನಿಕೆಯನ್ನು ಕಾಯ್ದುಕೊಂಡಿದ್ದರು.

“ನನಗೆ ಯಾರಾದರೂ ಕೊಡುಗೆ ನೀಡಿದರೆ ಅದನ್ನು ಮ್ಯೂಸಿಯಂಗೆ ಕಳುಹಿಸಿ, ನನ್ನ ಕೊಠಡಿಗೆ ತರಬೇಡಿ” ಎನ್ನುತ್ತಿದ್ದ ಕಲಾಂ ತಮ್ಮ ಅಂಗರಕ್ಷಕರಿಂದ ಮೊದಲ್ಗೊಂಡು ಹೂದೋಟದಲ್ಲಿ ಕೆಲಸ ಮಾಡುವ ಮಾಲಿಯವರೆಗೆ ಪ್ರತಿಯೊಬ್ಬರನ್ನೂ ಪ್ರೀತ್ಯಾದರಗಳೊಂದಿಗೆ ಮಾತನಾಡಿಸುತ್ತಿದ್ದರು. “ಅಧಿಕಾರವೆಂಬುದು ಭಗವಂತನ ಕೃಪಾ ಕಟಾಕ್ಷ, ಅದನ್ನು ಜನಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು” ಎನ್ನುತ್ತಿದ್ದ ಕಲಾಂ, ತಮಗಿರುವ ವಿಶೇಷ ಭದ್ರತೆಯ (ಝಡ್ ಪ್ಲಸ್) ಬಗ್ಗೆ ಹಲವು ಸಲ ಬೇಸರ ವ್ಯಕ್ತಪಡಿಸುತ್ತಿದ್ದುದುಂಟು. ರಾಷ್ಟ್ರಪತಿ ಭವನದ ಸಿಬ್ಬಂದಿಯೊಬ್ಬರ
ತಾಯಿಯ ಸಾವಿನ ವಿಚಾರ ತಿಳಿದು ಸ್ವತಃ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದು, ಸಭೆಯಲ್ಲಿನ ಕೇಳುಗರೊಂದಿಗೆ ಸಂವಾದ ನಡೆಸುವಾಗ ತಲ್ಲೀನರಾಗಿ ಎಷ್ಟೋ ಸಲ ಆಸನವನ್ನು ಬಿಟ್ಟು, ವೇದಿಕೆಯ ಕೆಳಗಡೆ ಬಂದು ಕುಳಿತಿದ್ದು
ಮುಂತಾದ ಘಟನೆಗಳು ಅವರ ಸರಳತೆಗೆ ದ್ಯೋತಕ.

ಯುವಶಕ್ತಿಯಲ್ಲಿ ಅಪಾರ ನಂಬಿಕೆಯಿಟ್ಟಿದ್ದ ಕಲಾಂ, ಯುವಕರ ಸಬಲೀಕರಣಕ್ಕೆ ಪ್ರೋತ್ಸಾಹಿಸುತ್ತಿದ್ದರು. 2020ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ‘ವಿಷನ್ 2020’ ಎಂಬ ಪರಿಕಲ್ಪನೆಯ ನೀಲಿನಕ್ಷೆಯನ್ನು ಸಜ್ಜುಗೊಳಿಸಿದ ದೂರದೃಷ್ಟಿಯ ನಾಯಕ ಡಾ.ಕಲಾಂ, ಈ ಗುರಿಯನ್ನು ಸಾಧಿಸುವಲ್ಲಿ ಶಿಕ್ಷಣ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಗಿರುವ ಮಹತ್ವವನ್ನು ಒತ್ತಿಹೇಳಿದ್ದರು. ಮಕ್ಕಳೊಂದಿಗೆ ಸಂವಾದ ನಡೆಸುವುದು ಅವರಿಗೆ ಬಲು ಇಷ್ಟದ ಬಾಬತ್ತಾಗಿತ್ತು. ಹೀಗೆ ಪ್ರತಿಬಾರಿ ಮಕ್ಕಳೊಂದಿಗೆ ಮಾತಿಗಿಳಿದಾಗಲೂ, “ನಿಮ್ಮ
ಕನಸೇನು? ನೀವು ಏನಾಗಬೇಕೆಂದಿರುವಿರಿ?” ಎಂದು ಪ್ರಶ್ನಿಸುತ್ತಿದ್ದರು. ಅದಕ್ಕೆ ಮಕ್ಕಳಿಂದ ಬರುವ ಉತ್ತರವನ್ನು ಕೇಳಲು ಉತ್ಸುಕರಾಗಿರುತ್ತಿದ್ದರು.

“ಕನಸು, ನಿರಂತರ ಜ್ಞಾನ ಸಂಪಾದನೆ, ಕಠಿಣ ಪರಿಶ್ರಮ ಹಾಗೂ ಸವಾಲುಗಳಿಗೆ ಸೋಲದೆ ಹೋರಾಡುವ ಛಲ ಈ ನಾಲ್ಕು ಅಂಶಗಳೇ ಯಶಸ್ಸಿನ ಸೂತ್ರಗಳು” ಎಂದು ಮಕ್ಕಳಿಗೆ ತಿಳಿಹೇಳುತ್ತಿದ್ದ ಕಲಾಂ, ಆ ಸಾಲನ್ನು ಮಕ್ಕಳು ಪುನರುಚ್ಚರಿಸುವಂತೆ ಮಾಡುತ್ತಿದ್ದರು. ಹೀಗೆ ಮಾಡಿದರೆ ಯಶಸ್ಸಿನ ಆ ಸೂತ್ರಗಳು ಮಕ್ಕಳ ಮನಸ್ಸಿನಲ್ಲಿ
ಆಳವಾಗಿ ನೆಲೆಯೂರುತ್ತವೆ ಎಂಬುದು ಕಲಾಂ ಅವರ ನಂಬಿಕೆಯಾಗಿತ್ತು. “ನನಗೆ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚು ತೃಪ್ತಿ ನೀಡಿದ್ದು ಬೋಧನೆ ಮತ್ತು ಸಂಶೋಧನೆ; ಮನುಷ್ಯನಲ್ಲಿ ಹುದುಗಿರುವ ಜ್ಞಾನವೇ ಅವನಿಗೆ ಧೈರ್ಯವನ್ನು
ನೀಡುತ್ತದೆ; ಯಾವ ವ್ಯಕ್ತಿ ಅಸಾಧ್ಯವಾದುದನ್ನು ಸಾಧಿಸುವ ಛಲವನ್ನು ಹೊಂದಿರುತ್ತಾನೋ ಅವನು ಮಾತ್ರವೇ ಸಾಧನೆಯ ಎಲ್ಲಾ ಮಿತಿಗಳನ್ನೂ ದಾಟಬಲ್ಲ” ಎಂಬುದು ಕಲಾಂ ಅವರು ಹರಿಸುತ್ತಿದ್ದ ಜ್ಞಾನಧಾರೆಯ ಒಂದಷ್ಟು ಹನಿಗಳಾಗಿದ್ದವು.

ಪರಿಸರ ಮತ್ತು ಭೂಮಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಕಲಾಂ ಅವರ ಕೊನೆಯ ಭಾಷಣವು ‘ವಾಸಯೋಗ್ಯ ಭೂಮಿಯನ್ನು ರೂಪಿಸುವುದು’ ಎಂಬ ವಿಷಯದ ಕುರಿತಾಗಿತ್ತು. “ಪರಿಸರ ಮಾಲಿನ್ಯದಷ್ಟೇ
ಮಾನವನು ಕೂಡ ವಾಸಯೋಗ್ಯ ಭೂಮಿಗೆ ದೊಡ್ಡ ಅಪಾಯವಾಗಿದ್ದಾನೆ. ಅವನ ಹಿಂಸಾಚಾರ ಮತ್ತು ಅಜಾಗರೂಕ ಪ್ರವೃತ್ತಿಗಳು ಹೀಗೆಯೇ ಮುಂದುವರಿದರೆ, ಮುಂದಿನ ಮೂವತ್ತು ವರ್ಷಗಳಲ್ಲಿ ಈ ಭೂಮಿಯನ್ನು ತೊರೆಯಬೇ ಕಾಗುತ್ತದೆ” ಎಂಬ ಕಳವಳವನ್ನು ಆ ಭಾಷಣದಲ್ಲಿ ಕಲಾಂ ವ್ಯಕ್ತಪಡಿಸಿದ್ದರು.

‘ಭಾರತ ರತ್ನ’ ಸೇರಿದಂತೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾದ ಕಲಾಂ, “ಇವೆಲ್ಲವೂ ಸಾಧ್ಯವಾಗಿದ್ದು ಜ್ಞಾನ ಸಂಪಾದನೆಯಿಂದ ಮಾತ್ರವೇ” ಎನ್ನುತ್ತಿ ದ್ದುದುಂಟು. “ವಿದ್ಯಾರ್ಥಿ ಸಮುದಾಯಕ್ಕೆ ನಿಮ್ಮ ಸಂದೇಶವೇನು?”
ಎಂದು ಕೇಳಿದಾಗ, “ಕನಿಷ್ಠ ಪಕ್ಷ ಐವರು ಅನಕ್ಷರಸ್ಥರಿಗೆ ಅಕ್ಷರಗಳನ್ನು ಹೇಳಿ ಕೊಡಿ, ತಲಾ ಎರಡು ಸಸಿಗಳನ್ನು ನೆಡಿ, ಅಧ್ಯಯನದತ್ತ ಗಮನಹರಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ನಿಮ್ಮ ಗೆಳೆಯ ರೊಂದಿಗೆ ಸೇರಿ ಕೆಲಸ ಮಾಡಿ” ಎಂದಿದ್ದು ಕಲಾಂ ಅವರ ಹೆಗ್ಗಳಿಕೆ. ಆತ್ಮಕಥನ ಸೇರಿದಂತೆ ಹಲವು ಪುಸ್ತಕ ಗಳು, ಕವಿತೆಗಳನ್ನು ಬರೆದಿರುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬೋಧನೆಗಳು ಮತ್ತು ವಿಚಾರ ಧಾರೆಗಳು ಕೋಟ್ಯಂತರ ಮಂದಿಗೆ ಸೂರ್ತಿಯ ಸೆಲೆಯಾಗಿವೆ. ಒಟ್ಟಾರೆಯಾಗಿ, ಅಂದದ ಬದುಕು ಕಟ್ಟಿಕೊಳ್ಳಲು ಚೆಂದದ ಪಾಠ ಹೇಳಿಕೊಟ್ಟ ಮಾಸ್ತರರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕರು ಶಿಕ್ಷಕರು)

ಇದನ್ನೂ ಓದಿ: Surendra Pai Column: ಎಲ್ಲಿಗೆ ಹೋದವು ಕಾಗೆಗಳು ?