ವಿಚಾರ ವೇದಿಕೆ
ಡಾ.ಎ.ಜಯಕುಮಾರ ಶೆಟ್ಟಿ
ಅನಿವಾಸಿ ಭಾರತೀಯರು ತಮ್ಮ ಉದ್ಯಮಶೀಲತೆ, ಜ್ಞಾನ ವರ್ಗಾವಣೆ ಮತ್ತು ಸಾಮಾಜಿಕ ಪ್ರಭಾವದ ಮೂಲಕ ಭಾರತದ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆರ್ಥಿಕ ವೈವಿಧ್ಯೀಕರಣ, ನಾವೀನ್ಯ ಮತ್ತು ಜಾಗತಿಕ ಸಂಪರ್ಕಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅನನ್ಯ.
ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನವು ಶನಿವಾರ ಸಂಜೆ ಮುಕ್ತಾಯಗೊಳ್ಳುತ್ತಿದ್ದಂತೆ, ಚುನಾವಣೋತ್ತರ ಸಮೀಕ್ಷೆಗಳ
ಫಲಿತಾಂಶವು ಅನಾವರಣಗೊಂಡಿದೆ. ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಮಾರುಕಟ್ಟೆಯ ಮೇಲಿನ ಪ್ರಭಾವದ ದೃಷ್ಟಿಯಿಂದ, ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ದಕ್ಕುವ ಬಲವಾದ ಜನಾದೇಶವು ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯವು ಪ್ರಸ್ತುತ ಐದು ಟ್ರಿಲಿಯನ್ ಡಾಲರ್ಗೆ ವರ್ಧಿಸುವುದನ್ನು ಖಚಿತಪಡಿಸುತ್ತದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿ ಯಲ್ ಸರ್ವೀಸ್ನ ಅಧ್ಯಕ್ಷ ರಾಮದೇವ್ ಅಗರ್ವಾಲ್ ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ, ಇಲ್ಲಿ ವಿದೇಶಿ ಹೂಡಿಕೆದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.
ವಿದೇಶಿ ಖಾಸಗಿ ಹೂಡಿಕೆದಾರರು ಖರೀದಿಸಲು ಪ್ರಾರಂಭಿಸಿದರೆ, ಭಾರತೀಯ ಮಾರುಕಟ್ಟೆಯು ಬೃಹತ್ ಮತ್ತು ತ್ವರಿತ ಲಾಭವನ್ನು ದಾಖಲಿಸಬಹುದು.
ಹಣ ರವಾನೆಯಲ್ಲಿ ಹೆಚ್ಚಿದ ನಿರೀಕ್ಷೆಗಳು: ಉದ್ಯೋಗಕ್ಕಾಗಿ ವಿದೇಶಗಳಿಗೆ ವಲಸೆ ಹೋದ ಭಾರತೀಯರಿಂದ ೨೦೨೨ರ ವರ್ಷದಲ್ಲಿ ಬರೋಬ್ಬರಿ ೯.೨೬
ಲಕ್ಷ ಕೋಟಿ ರು (೧೧೧ ಬಿಲಿಯನ್ ಡಾಲರ್) ಹಣ ಹರಿದುಬಂದಿದ್ದು, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ರವಾನೆಯಾಗಿರುವ ಮೊತ್ತವೇ ಅತ್ಯಧಿಕ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಅಷ್ಟೇ ಅಲ್ಲದೆ, ರೆಮಿಟೆನ್ಸ್ (ವಿದೇಶದಿಂದ ಹಣ ರವಾನೆ) ಲೆಕ್ಕಾಚಾರದಲ್ಲಿ ೧೦೦ ಶತಕೋಟಿ ಡಾಲರ್ ಗಡುವು ದಾಟಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ.
ಇತರ ದೇಶಗಳಲ್ಲಿರುವ ಭಾರತೀಯರು ೨೦೧೦ರಲ್ಲಿ ೪.೪೬ ಲಕ್ಷ ಕೋಟಿ ರು., ೨೦೧೫ ರಲ್ಲಿ ೫.೭೫ ಲಕ್ಷ ಕೋಟಿ ರು., ೨೦೨೦ರಲ್ಲಿ ೬.೯೪ ಲಕ್ಷ ಕೋಟಿ
ರು.ಗಳನ್ನು ಭಾರತಕ್ಕೆ ಕಳುಹಿಸಿದ್ದರು ಎಂದು ವರದಿ ತಿಳಿಸಿದೆ. ದೊಡ್ಡ ಪ್ರಮಾಣದಲ್ಲಿ ತಾಯ್ನಾಡಿಗೆ ಹಣ ರವಾನಿಸುವ ವಿಷಯದಲ್ಲಿ ಮೆಕ್ಸಿಕನ್ನರು ಮತ್ತು ಚೀನಿಯರನ್ನು ಭಾರತೀಯರು ಹೀಗೆ ಹಿಂದಿಕ್ಕಿ ಪ್ರಗತಿ ಸಾಧಿಸಿದ್ದಾರೆ. ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ ಮುಂತಾದ ದೇಶಗಳಲ್ಲಿ
ಸುಮಾರು ೧ ಕೋಟಿ ೮೦ ಲಕ್ಷ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥವರು ತಂತಮ್ಮ ದೇಶಗಳಿಗೆ ವಾರ್ಷಿಕವಾಗಿ ಕಳುಹಿಸುವ ಹಣದ ಬಗ್ಗೆ ವಿಶ್ವಸಂಸ್ಥೆಯು ವಾರ್ಷಿಕವಾಗಿ ಪ್ರಕಟಿಸುವ ‘ವಿಶ್ವ ವಲಸೆ ವರದಿ’ಯಲ್ಲಿನ (೨೦೨೪) ಶ್ರೇಯಾಂಕದಲ್ಲಿ ಭಾರತ, ಮೆಕ್ಸಿಕೊ, ಚೀನಾ, ಫಿಲಿಪೈನ್ಸ್ ಮತ್ತು ಫ್ರಾನ್ಸ್ ಮೊದಲ ೫ ಸ್ಥಾನಗಳನ್ನು ಪಡೆದುಕೊಂಡಿವೆ.
ವಿದೇಶಿ ವಿನಿಮಯ ಮೀಸಲು ಹೆಚ್ಚಳ: ಭಾರತದ ಆರ್ಥಿಕತೆಯನ್ನು ವಿಶೇಷವಾಗಿ ತಮ್ಮ ರವಾನೆಗಳ ಮೂಲಕ ಬಲಪಡಿಸುವಲ್ಲಿ ಅನಿವಾಸಿ ಭಾರ
ತೀಯರ (ಎನ್ಆರ್ಐ) ಕೊಡುಗೆ ಅಮೂಲ್ಯವಾದುದು. ಈ ಹಣಕಾಸಿನ ವರ್ಗಾವಣೆಗಳು ಕುಟುಂಬಗಳಿಗೆ ನೀಡುವ ವಿತ್ತೀಯ ಬೆಂಬಲಕ್ಕಿಂತ ಹೆಚ್ಚಾಗಿ, ದೇಶದ ವಿದೇಶಿ ವಿನಿಮಯ ಮೀಸಲಿಗೆ ನೀಡುವ ಕೊಡುಗೆಯು ಗಮನಾರ್ಹವಾದುದು. ಇದು ವಿದೇಶಿ ಕರೆನ್ಸಿಯ ಒಳಹರಿವಿನ ಪ್ರಮುಖ ಮೂಲವಾಗಿದೆ. ಆರ್ಥಿಕ ಅನಿಶ್ಚಿತತೆಗಳು ಮತ್ತು ಜಾಗತಿಕ ಆರ್ಥಿಕ ಚಂಚಲತೆಯ ಸಮಯದಲ್ಲಿ ಈ ಮೀಸಲುಗಳು ಭಾರತದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಖಾತ್ರಿ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಷ್ಟ್ರದ ವಿದೇಶಿ ವಿನಿಮಯ ಮೀಸಲುಗಳಿಗೆ ಸುಮಾರು ಶೇ.೨೨-೨೩ರಷ್ಟು ಕೊಡುಗೆ ನೀಡುವ ಮೂಲಕ, ಭಾರತಕ್ಕೆ ಆಮದು ಮಾಡಲು ಈ ಹಣದ ಒಳಹರಿವು ಸಹಾಯ ಮಾಡುತ್ತಿದೆ.
ಆರ್ಥಿಕತೆಯ ಮೇಲೆ ಪರಿಣಾಮ: ಅನಿವಾಸಿ ಭಾರತೀಯರ ಹಣದ ರವಾನೆ ಮತ್ತು ಆರ್ಥಿಕ ಬೆಳವಣಿಗೆಯ ನಡುವೆ ಧನಾತ್ಮಕ ಸಂಬಂಧಗಳಿರುವು ದನ್ನು ಅಧ್ಯಯನಗಳು ನಿರೂಪಿಸಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ರವಾನೆಯಲ್ಲಿನ ಶೇ.೧ರಷ್ಟು ಹೆಚ್ಚಳವು ದೀರ್ಘಾವಧಿಯಲ್ಲಿ ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ.೦.೨೨ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ರವಾನೆಯಲ್ಲಿನ ಶೇ.೧೦ರಷ್ಟು ಹೆಚ್ಚಳವು ಬಡತನ ದರಗಳಲ್ಲಿ ಶೇ.೧.೬ರಷ್ಟು ಇಳಿಕೆಗೆ ಕಾರಣವಾಗಬಹುದು ಎಂಬುದನ್ನು ಅಧ್ಯಯನಗಳು ತೋರಿಸುತ್ತವೆ. ಹಣದ ಒಳಹರಿವು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಬೇಡಿಕೆ ಮತ್ತು ಪೂರೈಕೆ ಎರಡಕ್ಕೂ ಉತ್ತೇಜನ ನೀಡುತ್ತದೆ. ಅನಿವಾಸಿ ಭಾರತೀಯರು ಭಾರತದ ಜನಸಂಖ್ಯೆಯ ಕೇವಲ ಶೇ.೧ರಷ್ಟಿದ್ದಾರೆ; ಅವರು ದೇಶದಲ್ಲಿ ವಾಸಿಸದೆ ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಶೇ.೩.೪ರಷ್ಟು ಕೊಡುಗೆ ನೀಡುತ್ತಾರೆ.
ವೇಗದ ಆರ್ಥಿಕ ಅಭಿವೃದ್ಧಿ: ಭಾರತವು ಅತ್ಯಂತ ವೇಗದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿದ್ದು, ಪಾಶ್ಚಾತ್ಯ ಕಂಪನಿಗಳಿಗೆ ಪರ್ಯಾಯ ಹೂಡಿಕೆ ಕೇಂದ್ರ ವಾಗಿ ಬದಲಾಗುತ್ತಿದೆ ಮತ್ತು ಚೀನಾದ ಕಡೆಗೆ ಹೋಗುತ್ತಿದ್ದ ವಿದೇಶಿ ಬಂಡವಾಳ ಭಾರತದಂಥ ದೇಶಗಳತ್ತ ಹರಿದುಬರುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ ೨೦೨೪ರಲ್ಲಿ ಭಾರತದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಪರಿಷ್ಕರಿಸಿ ಶೇ.೬.೯ಕ್ಕೆ ಹೆಚ್ಚಿಸಿದೆ (ಈ ಹಿಂದೆ ಜನವರಿಯಲ್ಲಿ ದೇಶದ
ಆರ್ಥಿಕ ಪ್ರಗತಿ ದರವನ್ನು ಶೇ.೬.೨ ಎಂದು ಅಂದಾಜಿಸಲಾಗಿತ್ತು). ಇದೇ ವೇಳೆ, ೨೦೨೫ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.೬.೬ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ಗ್ರಾಹಕ ಮಾರುಕಟ್ಟೆ ದ್ವಿಗುಣ: ಕಳೆದ ವಾರ ಜರುಗಿದ ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡುತ್ತಾ, ‘ಭಾರತದ ಗ್ರಾಹಕ ಮಾರುಕಟ್ಟೆಯು ೨೦೩೧ರ ವೇಳೆಗೆ ದ್ವಿಗುಣ ಗೊಳ್ಳುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ. ಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಸ್ವಾವಲಂಬನೆ ಸಾಧಿಸಲು ದೃಢವಾದ ಉತ್ಪಾದನೆಯು ನಿರ್ಣಾಯಕವಾಗಿದೆ. ಉತ್ಪಾದನೆ ಯನ್ನು ಬಲಪಡಿಸುವ ಮೂಲಕ ಭಾರತವು ದೇಶೀಯ ಬೇಡಿಕೆಯನ್ನು ಉತ್ತಮವಾಗಿ ಪೂರೈಸ ಬಹುದು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು.
ಹಣಕಾಸಿನ ಕೊಡುಗೆಗಳನ್ನು ಮೀರಿ ಅನಿವಾಸಿ ಭಾರತೀಯರು ತಮ್ಮ ಉದ್ಯಮಶೀಲತೆ, ಜ್ಞಾನ ವರ್ಗಾವಣೆ ಮತ್ತು ಸಾಮಾಜಿಕ ಪ್ರಭಾವದ ಮೂಲಕ ಭಾರತದ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜಾಗತಿಕ ರಾಯಭಾರಿಗಳಾಗಿ ಆರ್ಥಿಕ ವೈವಿಧ್ಯೀಕರಣ, ನಾವೀನ್ಯ ಮತ್ತು ಜಾಗತಿಕ ಸಂಪರ್ಕ ಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅನನ್ಯ.
ಆರ್ಥಿಕ ಅನಿಶ್ಚಿತತೆಯ ಏರಿಕೆಯು ಜಾಗತಿಕ ಉತ್ಪಾದನೆಯನ್ನು ನಿಧಾನಗೊಳಿಸಿದಾಗಲೂ ತನ್ನ ದೇಶೀಯ ಬೇಡಿಕೆಯ ದೃಢತೆಯ ಮೇಲೆ ಬೆಳೆಯುವ ಭಾರತೀಯ ಆರ್ಥಿಕತೆಯ ಸಾಮರ್ಥ್ಯವನ್ನು, ಜಿಡಿಪಿ ಪ್ರಗತಿ ದರದ ಅಂದಾಜು, ಗ್ರಾಹಕ ಮಾರುಕಟ್ಟೆ ದ್ವಿಗುಣದ ನಿರೀಕ್ಷೆ ಹಾಗೂ ಏರುತ್ತಿರುವ ಹಣದ ಒಳಹರಿವು ಪುನರುಚ್ಚರಿಸುತ್ತವೆ. ಜನಸಂಖ್ಯಾ ಪರಿವರ್ತನೆಯು, ಕಡಿಮೆ ಶಿಶುಮರಣ ಪ್ರಮಾಣ ಮತ್ತು ಸಾಕ್ಷರತೆಯ ದರಗಳಲ್ಲಿನ ಸ್ಥಿರವಾದ ಬೆಳವಣಿಗೆ ಯಿಂದ ಗುರುತಿಸಲ್ಪಟ್ಟಿದೆ. ಇದು ಭಾರತದ ಅನುಕೂಲಕರ ಸ್ಥಾನವನ್ನು ಇನ್ನಷ್ಟು ಹೆಚ್ಚಿಸಲಿದೆ. ಇದರೊಂದಿಗೆ, ಚುನಾವಣೋತ್ತರ ಸಮೀಕ್ಷೆಗಳು ಕೂಡ ಆರ್ಥಿಕತೆಯ ಗರಿಗೆದರಿಸುವತ್ತ ನಿರ್ಣಾಯಕ ಪಾತ್ರವನ್ನು ವಹಿಸಲಿವೆ ಮತ್ತು ನಿರೀಕ್ಷೆಗಳಿಗೆ ಬಣ್ಣ ತುಂಬಿಸಲಿವೆ.
(ಲೇಖಕರು ನಿವೃತ್ತ ಪ್ರಾಂಶುಪಾಲರು)