Sunday, 13th October 2024

’ಸ್ವಾಮಿನಾಥನ್’ವರದಿ ಅನುಷ್ಠಾನ: ರೈತರ ಹೇಳಿಕೆಗಳು ಎಷ್ಟು ಸರಿ ?

ವೀಕೆಂಡ್ ವಿಥ್‌ ಮೋಹನ್

ಮೋಹನ್ ವಿಶ್ವ

ದೆಹಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯು ಮುಗಿಯುವ ಹಂತಕ್ಕೆ ತಲುಪುತ್ತಿದೆ ಯೆಂಬ ಅಂಶಗಳು ಕಂಡುಬರುತ್ತಿದೆ. ಪ್ರತಿಭಟನಾಕಾರರು ಯಾವಾಗ ಜನವರಿ ೨೬ರಂದು ದೆಹಲಿಯ ಕೆಂಪುಕೋಟೆಯ ಮೇಲಿದ್ದ ತ್ರಿವರ್ಣ ಧ್ವಜವನ್ನು ಕಿತ್ತು ಹಾಕಿ ‘ಖಲೀಸ್ತಾನ್’ ಧ್ವಜವನ್ನು ನೆಟ್ಟರೋ, ಅಂದೇ ಪ್ರತಿಭಟನಾಕಾರು ತಮ್ಮ ಮೇಲಿದ್ದಂತಹ
ಅನುಕಂಪವನ್ನು ಕಳೆದುಕೊಂಡರು.

ಇಡೀ ದೇಶವೇ ಇವರ ಅಟ್ಟಹಾಸವನ್ನು ನೋಡುತಿತ್ತು, ವಿದೇಶಿ ಶಕ್ತಿಗಳಿಂದ ಪ್ರೇರಿತರಾಗಿ ಇವರು ಪ್ರತಿಭಟನೆ ನಡೆಸುತ್ತಿzರೆಂದು ಪ್ರತಿಯೊಬ್ಬ ಭಾರತೀಯನಿಗೂ ಅಂದೇ ಅನಿಸಿತ್ತು. ಈಗ ಫೆಬ್ರವರಿ ರಂದು ಮತ್ತದೇ ರೈತ ಸಂಘಟನೆಗಳು ದೆಹಲಿಯಲ್ಲಿ ಮೊತ್ತೊಮ್ಮೆ ಪ್ರತಿಭಟನೆ ನಡೆಸುತ್ತೇವೆಂದು ಹೇಳಿವೆ. ಪ್ರತಿಭಟನೆಯು ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ದೆಹಲಿ ಪೊಲೀಸರು ಮುಳ್ಳುಗಳಿಂದ ಕೂಡಿದ ಬೃಹತ್ ತಡೆಗೋಡೆಯನ್ನು ಅಡ್ಡಲಾಗಿ ನಿರ್ಮಿಸಿದ್ದಾರೆ.

ಈ ತಡೆಗೋಡೆಯ ವಿಚಾರವಾಗಿ ಹಲವರು ಹಲವು ಮಾತುಗಳನ್ನಾಡಿದರು. ಆದರೆ ಕೆಂಪುಕೋಟೆಯ ಮೇಲೆ ಖಲಿಸ್ತಾನ ಧ್ವಜವನ್ನು ಹಾರಿಸಿದಾಗ ಇದೇ ಜನರು ಪೊಲೀಸರ ವೈಫಲ್ಯವೆಂದು ಜರಿದಿದ್ದರು. ಜನವರಿ ೨೬ರಂದು ನಡೆದದ್ದು ಪೊಲೀಸರ ವೈಫಲ್ಯವಾದರೆ ಫೆಬ್ರವರಿ ರಂದು ಪೊಲೀಸರು ಮಾಡುತ್ತಿರುವುದು ‘ಕರ್ತವ್ಯ’ವಷ್ಟೆ. ಇಷ್ಟು ದಿನಗಳಾದರೂ ರೈತರೆಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವವರ ಉದ್ದೇಶವೇ ಸ್ಪಷವಾಗಿಲ್ಲ, ಉದ್ದೇಶ ಸ್ಪಷ್ಟವಾಗಿಲ್ಲದ ಪ್ರತಿಭಟನೆಯು ಇಂದಿಗೂ ರೈತರ ಪರವಾಗಿರುವುದಿಲ್ಲ.

ನೂತನ ತಿದ್ದುಪಡಿ ಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದೊಂದೇ ಅವರ ಬೇಡಿಕೆಯಾಗಿದ್ದರೆ ಸಂವಿಧಾನಾತ್ಮಕವಾಗಿ
ಚುನಾಯಿತವಾಗಿರುವ ಸರಕಾರ ಕೈಕಟ್ಟು ಕೂರಬೇಕೇ? ತಮ್ಮ ಬೇಡಿಕೆಗಳಲ್ಲಿ ಯಾವಾಗ ‘ಬುದ್ಧಿ ಜೀವಿಗಳ’ ಬಿಡುಗಡೆಗೆ
ಒತ್ತಾಯಿಸಿದರೋ ಅಂದೇ ಇವರ ಚಳುವಳಿಯ ಉದ್ದೇಶ ಸ್ಪಷ್ಟವಾಗಿತ್ತು. ರೈತನಾಯಕರನ್ನು ನೂತನ ತಿದ್ದುಪಡಿ ಯಲ್ಲಿರುವ
ಲೋಪದೋಷಗಳನ್ನು ಕೇಳಿದರೆ, ಯಾವುದಾದರೊಂದು ನೆಪವೊಡ್ಡಿ ಚರ್ಚೆಯನ್ನು ಉದ್ದೇಶಪೂರ್ವಕವಾಗಿ ಬೇರೆಡೆ
ತಿರುಗಿಸುತ್ತಾರೆ.

ಕೇಳಿದ ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡಲು ತಯಾರಿರುವುದಿಲ್ಲ. ನರೇಂದ್ರ ಮೋದಿ ಯನ್ನು ಜರಿಯುವುದನ್ನು ಬಿಟ್ಟು ಮತ್ತೇನನ್ನೂ ಮಾಡುವುದಿಲ್ಲ. ರೈತ ಮಸೂದೆಗಳ ಬಗ್ಗೆ ಕೇಳಿದರೆ ‘ಸಾಲ ಮನ್ನಾ’ ಬಗ್ಗೆ ಮಾತನಾಡುವುದು ಅಥವಾ ‘ಸ್ವಾಮಿನಾಥನ್ ಆಯೋಗದ ವರದಿ’ಯ ಬಗ್ಗೆ ಮಾತನಾಡುವುದು, ವಿಷಯಾಂತರ ಮಾಡುವುದಲ್ಲಿಯೇ ನಿರತರಾಗಿರುತ್ತಾರೆ. ‘ಸ್ವಾಮಿನಾಥನ್ ಆಯೋಗದ’ ವರದಿಯನ್ನು ಅತಿ ಹೆಚ್ಚು ಅನುಷ್ಠಾನ ಗೊಳಿಸಿರುವುದು ‘ನರೇಂದ್ರ ಮೋದಿ’ ಮಾತ್ರವೆಂದು ಸ್ವತಃ
‘ಸ್ವಾಮಿನಾಥನ್ ಪತ್ರಿಕೆಯೊಂದರಲ್ಲಿ ಬರೆದಿದ್ದಾರೆ.’. ಸ್ವಾಮಿನಾಥನ್ ಆಯೋಗದ ವರದಿಯನ್ನು ಯಥಾವತ್ತಾಗಿ ಒಮ್ಮೆಲೇ ಅನುಷ್ಠಾನಗೊಳಿಸುವುದು ಅಷ್ಟು ಸುಲಭವಲ್ಲ, ನಿಧಾನವಾಗಿ ಒಂದೊಂದನ್ನೇ ಅನುಷ್ಠಾನ ಗೊಳಿಸಬೇಕಿದೆ.

‘ಸ್ವಾಮಿನಾಥನ್ ಆಯೋಗ’ದ ವರದಿಯ ಪ್ರಕಾರ ರೈತನು ಬೆಳೆದ ಬೆಳೆಯ ಖರ್ಚಿನ ಮೇಲೆ ಶೇ.೫೦ ಲಾಭವನ್ನು ಸೇರಿಸಿ ‘ಕನಿಷ್ಠ ಬೆಂಬಲ ಬೆಲೆ’ಯನ್ನು ನಿಗದಿ ಪಡಿಸಬೇಕು. ಜಗತ್ತಿನಲ್ಲಿ ಶೇ.೫೦ ಲಾಭವಿರುವ ವ್ಯವಹಾರಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಶೇ.೫೦ರಷ್ಟು ಲಾಭ ವನ್ನಿರಿಸಿದರೆ ಸಾಮಾನ್ಯ ಜನರು ಹೇಗೆ ತಾನೇ ಖರೀದಿ ಮಾಡಿ ಜೀವನ ಸಾಗಿಸಬೇಕೆಂಬುದು ಗ್ರಾಹಕ ವಲಯದ ವಾದ. ಇದರಿಂದ ದಿನನಿತ್ಯದ ಆಹಾರ ವಸ್ತುಗಳ ಬೆಲೆಗಳು ಗಗನಕ್ಕೇರುವುದು ನಿಶ್ಚಿತ, ಹಣದುಬ್ಬರ ದರವು ಏರಿಕೆ ಯಾಗುವುದು ನಿಜ.

‘ಸ್ವಾಮಿನಾಥನ್ ಆಯೋಗ’ದ ವರದಿ ಯಲ್ಲಿ ರೈತನು ಬೆಳೆದ ಖರ್ಚನ್ನು ಹೇಗೆ ಲೆಕ್ಕಾಚಾರ ಮಾಡಬೇಕೆಂಬುದನ್ನು ಹೇಳಲಾಗಿದೆ. ರೈತನ ಬೆಳೆಗೆ ತಗಲುವ ನೇರ ವೆಚ್ಚಗಳಾದ ಬೀಜ, ಗೊಬ್ಬರ, ಕೂಲಿ, ಸಾರಿಗೆಯು ಒಂದು ಭಾಗವಾದರೆ, ತನ್ನದೇ ಹೊಲದಲ್ಲಿ ರೈತ ಹಾಗೂ ಆತನ ಕುಟುಂಬಸ್ಥರು ದುಡಿಯುವ ಸಮಯದ ಕೂಲಿಯನ್ನೂ ಸೇರಿಸಲಾಗಿದೆ (ತನ್ನದೇ ಕುಟುಂಬಸ್ಥರಿಗೆ ಕೂಲಿಯನ್ನು ನೀಡುವುದಿಲ್ಲ), ತನ್ನದೇ ಜಮೀನಿಗೆ ತಗಲುವ ಬಾಡಿಗೆಯನ್ನೂ ಸೇರಿಸಲಾಗಿದೆ (ತನ್ನದೇ ಜಮೀನಿಗೆ ಬಾಡಿಗೆಯನ್ನು ನೀಡ ಬೇಕಿಲ್ಲ), ಬ್ಯಾಂಕಿನಿಂದ ಅಥವಾ ಖಾಸಗಿಯಾಗಿ ತಂದಿರುವ ಸಾಲದ ಮೇಲಿನ ಬಡ್ಡಿಯನ್ನೂ ಸೇರಿಸಲಾಗಿದೆ.

ಇವೆಲ್ಲವನ್ನೂ ಸೇರಿಸಿದ ಮೇಲೆ ತಗಲುವ ವೆಚ್ಚದ ಮೇಲೆ ಶೇ.೫೦ ಲಾಭವನ್ನು ಸೇರಿಸಿ ‘ಕನಿಷ್ಠ ಬೆಂಬಲ ಬೆಲೆ’ಯನ್ನು
ನೀಡಬೇಕಂತೆ. ಈ ವರದಿಯು ಹಾಳೆಯ ಮೇಲೆ ಚೆನ್ನಾಗಿದ್ದರೂ ಸಹ, ನೆಲ ಮಟ್ಟದಲ್ಲಿ ಒಮ್ಮೆಲೇ ಅನುಶತನಗೊಳಿಸಲು ಸಾಧ್ಯ ವಿಲ್ಲ. ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿನ ಹಳ್ಳಿಗಳಲ್ಲಿನ ದಿನಗೂಲಿ ವೇತನ ಹಾಗೂ ಮೈಸೂರಿನ ಗ್ರಾಮಾಂತರ ಪ್ರದೇಶದಲ್ಲಿನ ಹಳ್ಳಿಗಳಲ್ಲಿನ ದಿನಗೂಲಿ ವೇತನ ಒಂದೇ ಆಗಿರುವುದಿಲ್ಲ.

ಗುಲ್ಬರ್ಗದಲ್ಲಿನ ದಿನಗೂಲಿ ವೇತನ ಹಾಗೂ ಹುಬ್ಬಳ್ಳಿಯಲ್ಲಿನ ದಿನಗೂಲಿ ವೇತನ ಒಂದೇ ಆಗಿರುವುದಿಲ್ಲ. ಜಮೀನಿನ ಬಾಡಿಗೆಯೂ ಅಷ್ಟೇ ಕರ್ನಾಟಕ ಹಾಗೂ ಉತ್ತರ ಪ್ರದೇಶ ದಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಮಲೆನಾಡಿನಲ್ಲಿ ಕೆಲಸ ಮಾಡಲು ಉತ್ತಮ ಕೂಲಿಯಾಳುಗಳು ಸಿಕ್ಕರೆ, ರಾಜಸ್ತಾನದ ಅಜ್ಮೀರ್‌ನಲ್ಲಿ ಉತ್ತಮ ಕೂಲಿಯಾಳುಗಳು ಸಿಗುವುದಿಲ್ಲ. ಕರ್ನಾಟಕದಲ್ಲಿರುವ ಖಾಸಗೀ ಸಾಲದ ಬಡ್ಡಿದರವನ್ನು ಬಿಹಾರದಲ್ಲಿ ಸಿಗುವ ಖಾಸಗೀ ಸಾಲದ ಬಡ್ದಿದರಕ್ಕೆ ತಾಳೆ ಮಾಡಲಾಗುತ್ತದೆಯೇ? ಇಷ್ಟೆ
ವ್ಯತ್ಯಾಸಗಳಿರುವಾಗ ಹೇಗೆ ತಾನೇ ಒಮ್ಮೆಲೇ ‘ಸ್ವಾಮಿನಾಥನ್ ವರದಿ’ಯನ್ನು ದೇಶದಾದ್ಯಂತ ಅನುಷ್ಠಾನಗೊಳಿಸಲು ಸಾಧ್ಯ?
ಆದರೆ ಮಾಡಲು ಸಾಧ್ಯವಿಲ್ಲವೆಂದಿಲ್ಲ, ಸಂಪೂರ್ಣ ವರದಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದಿದ್ದರೂ ಅತೀ ಹೆಚ್ಚಿನ
ಅಂಶಗಳನ್ನು ನರೇಂದ್ರ ಮೋದಿ ಅನುಷ್ಠಾನಗೊಳಿಸಿದ್ದಾರೆಂದು ಸ್ವತಃ ‘ಸ್ವಾಮಿನಾಥನ್’ ಹೇಳಿದ್ದಾರೆ.

೨೦೦೪ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಅಂದಿನ ಕೃಷಿ ಸಚಿವರಾಗಿದ್ದಂತಹ ‘ರಾಜನಾಥ್ ಸಿಂಗ್’ ನೇತೃತ್ವದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ‘ರಾಷ್ಟ್ರೀಯ ಆಯೋಗ’ ವೊಂದನ್ನು ಸ್ಥಾಪಿಸಲಾಯಿತು. ಈ ಆಯೋಗವು ರೈತರ ಸಮಸ್ಯೆ ಗಳನ್ನು ಆಳವಾಗಿ ಪರಿಶೀಲನೆ ಮಾಡಿ ಅಲ್ಲಿರುವ ಸಮಸ್ಯೆಗಳಿಗೆ ಸಂಭವನೀಯ ಪರಿಹಾರವನ್ನು ೨೦೦೬ರಲ್ಲಿ ತನ್ನ ವರದಿ ಯಲ್ಲಿ ತಿಳಿಸಿತ್ತು. ಈ ವರದಿಯಲ್ಲಿ ಕೇವಲ ಕೃಷಿ ಸಂಬಂಧಿತ ಸಮಸ್ಯೆಗಳ ಪರಿಹಾರಗಳಲ್ಲದೆ, ರೈತರ ಆರ್ಥಿಕ ಪರಿಸ್ಥಿತಿ ಯನ್ನು ಉತ್ತಮ ಗೊಳಿಸುವ ಬಗ್ಗೆಯೂ ಉಲ್ಲೇಖವಾಗಿತ್ತು.

ಕೃಷಿ, ಹೈನುಗಾರಿಕೆ, ಮೀನುಗಾರಿಕೆಯಲ್ಲಿರುವ ಮೂಲ ಸಮಸ್ಯೆಗಳು ಆ ಸಮಸ್ಯೆಗಳಿಗೆ ಪರಿಹಾರಗಳು, ಅಲ್ಲಿನ ಕೃಷಿಕರನ್ನು ಹೇಗೆ ಆರ್ಥಿಕವಾಗಿ ಮೇಲೆತ್ತಬೇಕೆಂಬ ಅಂಶ ವನ್ನೂ ಹೇಳಲಾಗಿತ್ತು. ನಶಿಸಿಹೋಗುತ್ತಿದ್ದಂತಹ ನೈಸರ್ಗಿಕ ಕೃಷಿಯನ್ನು ಪುನಃ ಹೇಗೆ ಉತ್ತೇಜಿಸಬೇಕು, ನೀರನ್ನು ಹೇಗೆ ಮಿತವಾಗಿ ಬಳಕೆ ಮಾಡಬೇಕು, ಕಡಿಮೆ ಖರ್ಚಿನಲ್ಲಿ ಉತ್ತಮ ಕೃಷಿಯನ್ನು ಹೇಗೆ ಉತ್ತೇಜಿಸಬೇಕೆಂದು ಹೇಳಲಾಗಿತ್ತು.

ಕಾಂಗ್ರೆಸ್ ನೇತೃತ್ವದ ಸರಕಾರವು ಈ ಉತ್ತಮ ವರದಿಯನ್ನು ಅನುಷ್ಠಾನಗೊಳಿಸಿದ್ದರೆ ೨೦೦೮ರಲ್ಲಿ ರೈತರ ಸಾಲಮನ್ನಾ ಮಾಡುವ ಪ್ರಸಂಗವೇ ಬರುತ್ತಿರಲಿಲ್ಲ. ಈ ವರದಿಯನ್ನು ಪಕ್ಕಕ್ಕೆ ಸರಿಸಿ, ಐವತ್ತು ಪುಟಗಳ ‘ಬಯೋ ಡೇಟಾ’ವಿರುವ ಪ್ರಧಾನಿ ‘ಮನ್ ಮೋಹನ್ ಸಿಂಗ್’ ತಮ್ಮ ಅಧಿನಾಯಕಿ ‘ಅಂಟೋನಿಯೋ ಮೈನೋ’ ಮಾತುಗಳನ್ನು ಕೇಳಿ ಚುನಾವಣೆಯ ದೃಷ್ಟಿಯಿಂದ ‘ಸಾಲಮನ್ನಾ’ವೆಂಬ ಹಳೆಯ ದಾರಿಗೆ ಮರಳಬೇಕಾಯಿತು.

ಈ ಆಯೋಗದ ವರದಿಗೆ ೨೦೦೪ರಲ್ಲಿ ಮತ್ತೆ ಜೀವ ಬಂತು, ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದಮೇಲೆ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿತು. ವರದಿಯ ಪ್ರತಿಯೊಂದು ಅಂಶವನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬ ಯೋಜನೆಗಳು ಒಂದೊಂದೇ ಜಾರಿ ಯಾದವು. ಇದು ನಾನು ಹೇಳಿದ ಮಾತುಗಳಲ್ಲ, ಸ್ವತಃ ಸ್ವಾಮಿನಾಥನ್ ೨೦೧೮ರಲ್ಲಿ ‘Times of India’ ಪತ್ರಿಕೆಯಲ್ಲಿ ಬರೆದಿದ್ದಾರೆ.

ಹನಿ ನೀರಾವರಿ ಪದ್ಧತಿಯನ್ನು ಅನುಷ್ಠಾನ ಗೊಳಿಸಿ ಕಡಿಮೆ ಖರ್ಚಿನಲ್ಲಿ ನೀರಿನ ಬಳಕೆಯನ್ನು ಮಾಡಲು ‘ಪ್ರಧಾನ್ ಮಂತ್ರಿ ಕೃಷಿ ಸಿಂಚಯ’ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಗೆಂದು ಸಾವಿರಾರು ಕೋಟಿಯಷ್ಟು ಹಣವನ್ನು ಕೇಂದ್ರ ‘ಬಜೆಟ್’ನಲ್ಲಿ ಮೀಸಲಿಡಲಾಯಿತು. ದೇಸಿ ಜಾನುವಾರುಗಳ ತಳಿಗಳನ್ನು ಸಂರಕ್ಷಿಸಿಸಲು ‘ರಾಷ್ಟ್ರೀಯ ಗೋಕುಲ್ ಮಿಷನ್’
ಯೋಜನೆಗೆ ಚಾಲನೆ ನೀಡಲಾಯಿತು.

೧೯೯೦ರ ಕಾಲಘಟ್ಟ ದಲ್ಲಿ ವಿದೇಶಿ ‘ಜೆರ್ಸಿ’ ತಳಿಗಳನ್ನು ಭಾರತಕ್ಕೆ ಪರಿಚಯಿಸಿ ಸ್ವದೇಶಿ ತಳಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ದೇಸಿ ಜಾನುವಾರುಗಳ ಹಾಲು, ಮೊಸರು, ತುಪ್ಪಕ್ಕೆ ಈಗ ಅದೆಷ್ಟು ಬೇಡಿಕೆ ಬಂದಿದೆಯೆಂದರೆ ಬಹುತೇಕ ಗ್ರಾಹಕರು ದೇಸಿ ತಳಿಗಳ ಉತ್ಪನ್ನವನ್ನೇ ಖರೀದಿಸಲು ಶುರುಮಾಡಿzರೆ. ಕೃಷಿ ಮಂಡಿಗಳಲ್ಲಿ ನಡೆಯುತ್ತಿದ್ದಂತಹ ಭ್ರಷ್ಟಾಚಾರವನ್ನು ತಡೆಗಟ್ಟಲು ‘ಈ – ನಾಮ’ ಗಳ ಸ್ಥಾಪನೆಯನ್ನು ಮಾಡಲಾಗಿದೆ.

ಸ್ವಾಮಿನಾಥನ್ ಆಯೋಗದ ವರದಿಯ ಅಂಶಗಳನ್ನು ಒಂದೊಂದಾಗಿ ಪರಿಶೀಲಿತ್ತಾ ಹೋದರೆ, ಕೆಳಮಟ್ಟದಲ್ಲಿ ಎಷ್ಟರ ಮಟ್ಟಿಗೆ ಮೋದಿ ನೇತೃತ್ವದ ಸರಕಾರ ಅನುಷ್ಠಾನ ಗೊಳಿಸಿದೆಯೆಂಬ ಅಂಶ ತಿಳಿಯುತ್ತದೆ. ರೈತನ ಒಟ್ಟಾರೆ ಖರ್ಚಿನಲ್ಲಿ ‘ರಸಗೊಬ್ಬರ’ದ
ಪ್ರಮಾಣ ಹೆಚ್ಚಿರುತ್ತದೆ. ನರೇಂದ್ರ ಮೋದಿ ಅಽಕಾರಕ್ಕೆ ಬರುವ ಮೊದಲು ಇಡೀ ದೇಶದಲ್ಲಿ ರಸಗೊಬ್ಬರದ ಕೊರತೆಯಿತ್ತು.
‘ಯೂರಿಯ’ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ, ಕಾಳಸಂತೆಯಲ್ಲಿ ಹಾಲಿನ ಮಿಶ್ರಣ, ಪೈಂಟ್ ಮಿಶ್ರಣದಲ್ಲಿ
ಯೂರಿಯ ಬಳಕೆಯಾಗುತ್ತಿತ್ತು.

ಅಷ್ಟೇ ಯಾಕೆ ಕರ್ನಾಟಕದಲ್ಲಿಯೇ ರಸಗೊಬ್ಬರದ ವಿಚಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೋಲಿಬಾರ್ ಆಗಿತ್ತು. ಯೂರಿಯಾಗೆ ಬೇವು ಲೇಪನೆ ಮಾಡುವ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗುತ್ತಿದಂತಹ ಯೂರಿಯಾಗೆ ಕಡಿವಾಣ ಬಿತ್ತು, ಬೇವು ಲೇಪಿತ ಯೂರಿಯಾವನ್ನು ಹಾಲಿನ ಕಲಬೆರಕೆಯಲ್ಲಿ ಬಳಸಿದರೆ ಏನಾಗುತ್ತದೆಯೆಂದು ನಾನು ಹೇಳಬೇಕಿಲ್ಲ. ‘ಬೇವು ಲೇಪಿತ ಯೂರಿಯ’ ಬಳಸಿದ ರೈತನ ಇಳುವರಿಯು ಹೆಚ್ಚಾಯಿತು, ಭೂಮಿಯಿಂದ ಆವಿಯಾಗುತ್ತಿದ್ದಂತಹ ಸಾರದ ಪ್ರಮಾಣ ಕಡಿಮೆಯಾಯಿತು. ರೈತನು ಒಂದು ಎಕರೆಗೆ ಬಳಸುವಂತಹ ರಸಗೊಬ್ಬರದ ಪ್ರಮಾಣ ಕಡಿಮೆ ಯಾಯಿತು.

ಬಳಕೆ ಕಡಿಮೆಯಾದಂತೆ ರೈತನ ಖರ್ಚು ಕಡಿಮೆ ಯಾಯಿತು, ರಸಗೊಬ್ಬರದ ಪೂರೈಕೆ ಸರಾಗವಾಗಿ ಸಾಗಿತು. ಕೇಂದ್ರ ಸರಕಾರವು ‘ರಸಗೊಬ್ಬರ’ದ ಮೇಲಿನ ‘ಸಬ್ಸಿಡಿ’ಯನ್ನು ನೇರವಾಗಿ ರೈತನ ಖಾತೆಗೆ ಜಮಾ ಮಾಡುವ ಮೂಲಕ ರೈತನ ಖರ್ಚನ್ನು ಮತ್ತಷ್ಟು ಕಡಿಮೆ ಮಾಡಿತು. ಹಾಗಾದರೆ ರಸಗೊಬ್ಬರದ ವಿಚಾರದಲ್ಲಿ ‘ರಾಷ್ಟ್ರೀಯ ಕೃಷಿ ಆಯೋಗ’ ಹಾಗೂ ‘ಸ್ವಾಮಿನಾಥನ್ ಆಯೋಗ’ದ ವರದಿಯನ್ನು ಅನುಷ್ಠಾನ ಮಾಡಿಯಾಯಿತಲ್ಲ.

ಖಾಸಗೀ ವ್ಯಕ್ತಿಗಳಿಂದ ಸಾಲ ಮಾಡಿ ಕೃಷಿ ಚಟುವಟಿಕೆಗಳಿಗೆ ಹಣವನ್ನು ಬಳಸುತ್ತಿದ್ದ ರೈತ ಬಡ್ಡಿಯನ್ನು ಕಟ್ಟಲಾಗದೆ ಹೈರಾಣಾಗಿ ಹೋಗಿದ್ದ. ಇಂತಹ ರೈತನಿಗೆ ‘ಪ್ರಧಾನ ಮಂತ್ರಿ ಕೃಷಿ ಸಮ್ಮಾನ್’ ಯೋಜನೆಯಡಿಯಲ್ಲಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ೬,೦೦೦ ರುಪಾಯಿಯನ್ನು ನೇರವಾಗಿ ರೈತನ ಖಾತೆಗೆ ವರ್ಗಾವಣೆ ಮಾಡುವ ಮೂಲಕ ರೈತನ ಸಾಲದ ಹೊರೆ ಯನ್ನು ಕಡಿಮೆ ಮಾಡಲಿಲ್ಲವೇ? ರೈತನ ಸಾಲದ ಹೊರೆಯನ್ನು ಕಡಿಮೆ ಮಾಡಿದರೆ ಆತನ ಒಟ್ಟಾರೆ ಖರ್ಚು ಕಡಿಮೆಯಾಗಲಿ ಲ್ಲವೇ? ಒಟ್ಟಾರೆ ಖರ್ಚು ಕಡಿಮೆಯಾದರೆ ಗ್ರಾಹಕನಿಗೂ ಉಪಯೋಗವಲ್ಲವೇ? ಸ್ವಾಮಿನಾಥನ್ ಆಯೋಗದ ಒಟ್ಟಾರೆ ಖರ್ಚಿನ ಲೆಕ್ಕಾಚಾರದಲ್ಲಿ ಬಡ್ಡಿಯ ಖರ್ಚನ್ನೂ ಸೇರಿಸಲಾಗಿತ್ತು.

ಅದೇ ವರದಿಯಲ್ಲಿ ರೈತನಿಗೆ ತಗಲುವ ಮತ್ತೊಂದು ದೊಡ್ಡ ಖರ್ಚಾದ ಸಾರಿಗೆ ವೆಚ್ಚದ ಬಗ್ಗೆ ಉಲ್ಲೇಖವಾಗಿದೆ. ಸಾರಿಗೆಯ ವೆಚ್ಚವು ಕಡಿಮೆಯಾದರೆ ರೈತನಿಗೂ ಲಾಭ, ಗ್ರಾಹಕನಿಗೂ ಲಾಭ. ಈ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರಕಾರದ ಮತ್ತೊಂದು ಯೋಜನೆಯಾದಂತಹ ‘ಕಿಸಾನ್ ರೈಲು’ಗಳನ್ನು ಪರಿಚಯಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮೊದಮೊದಲು ವಾರಕ್ಕೊಮ್ಮೆ ಪ್ಯಾಸೆಂಜರ್ ರೈಲುಗಳಿಗೆ ಒಂದು ಹೆಚ್ಚುವರಿ ಭೋಗಿಯನ್ನು ಅಳವಡಿಸಿ ಅದರಲ್ಲಿ ಶೀತಲೀಕರಣದ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.

ಹಲವು ರೈತರು ಇದರ ಸದುಪಯೋಗ ಪಡಿಸಿಕೊಂಡು ಹತ್ತಿರದ ಮಂಡಿಗಳಿಗೆ ತಾವು ಬೆಳೆದ ಬೆಳೆಯನ್ನು ಅತ್ಯಂತ ಕಡಿಮೆ ಮೊತ್ತದಲ್ಲಿ ಸಾಗಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ೧೬೭ ಕಿಸಾನ್ ರೈಲುಗಳಿವೆ. ಇದರ ಬೇಡಿಕೆ ಹೆಚ್ಚಾದಂತೆ ವಾರದಲ್ಲಿ ಮೂರು ಬಾರಿ ಈ ರೈಲುಗಳನ್ನು ಓಡಿಸಲು ಸೂಚಿಸಲಾಗಿದೆ. ಹಾಗಾದರೆ ‘ಸ್ವಾಮಿನಾಥನ್ ಆಯೋಗ’ದ ವರದಿಯ ಮತ್ತೊಂದು ಪ್ರಮುಖ ಅಂಶವನ್ನು ನರೇಂದ್ರ ಮೋದಿ ಅನುಷ್ಠಾನ ಗೊಳಿಸಲಿಲ್ಲವೇ? ನಾನು ಆಗಲೇ ಹೇಳಿದ ಹಾಗೆ ವಿವಿಧ
ರಾಜ್ಯಗಳಲ್ಲಿ ವಿವಿಧ ದರಗಳಿರುವ ಕಾರಣ ‘ಸ್ವಾಮಿನಾಥನ್ ಆಯೋಗ’ದ ವರದಿಯನ್ನು ಅಷ್ಟು ಸುಲಭವಾಗಿ ಒಮ್ಮೆಲೇ
ಅನುಷ್ಠಾನಗೊಳಿಸಲಾಗುವುದಿಲ್ಲ.

ವರದಿಯ ಒಂದೊಂದೇ ಅಂಶವನ್ನು ಸರಕಾರಿ ಪ್ರಾಯೋಜಿತ ಯೋಜನೆಗಳ ಮೂಲಕ ನರೇಂದ್ರ ಮೋದಿ ಅನುಷ್ಠಾನ ಗೊಳಿಸುವಲ್ಲಿ ಯಶಸ್ವಿಯಾಗಿದೆಯೆಂದು ತಮ್ಮ ೨೦೧೮ರ ಅಂಕಣದಲ್ಲಿ ಸ್ವತಃ ಸ್ವಾಮಿನಾಥನ್ ಬರೆದಿದ್ದಾರೆ. ರೈತನು ತನ್ನ ದಿನನಿತ್ಯದ ಕೃಷಿ ಚಟುವಟಿಕೆಗಳ ಜತೆಗೆ ಇತರೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ, ಬಿದಿರಿನ ಉತ್ಪನ್ನಗಳ ಮಾರುಕಟ್ಟೆ, ಅಣಬೆ ಕೃಷಿ, ಜೇನು ಕೃಷಿ, ಎರೆಹುಳುವಿನ ಗೊಬ್ಬರ ತಯಾರಿಕೆಯಂತಹ ಚಟುವಟಿಕೆ
ಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳೆಲ್ಲವೂ ರೈತನ ಆದಾಯವನ್ನು ದ್ವಿಗುಣಗೊಳಿಸುವ
ನಿಟ್ಟಿನಲ್ಲಿ ಸಹಕಾರಿಯಾಗಲಿದೆ.

ಕೇವಲ ಹೊಲದಲ್ಲಿ ದುಡಿದು ಆರ್ಥಿಕವಾಗಿ ಸದೃಢನಾಗುವುದರ ಜತೆಗೆ ಇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ರೈತನನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿದೆ. ಹಿಂದಿನ ಯಾವ ಸರಕಾರವೂ ನೀಡದಂತಹ ಹೆಚ್ಚಿನ ‘ಕನಿಷ್ಠ ಬೆಂಬಲ ಬೆಲೆ’ಯನ್ನು ಮೋದಿ ಸರಕಾರ ನೀಡಿದೆ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ‘ಕನಿಷ್ಠ ಬೆಂಬಲ ಬೆಲೆ’ಯ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದೆ. ಅವರು ಹೇಳಿದ ಹಾಗೆ ‘ಕನಿಷ್ಠ ಬೆಂಬಲ ಬೆಲೆ’ಯನ್ನು ಕಾಯಿದೆಯಲ್ಲಿ ಸೇರಿಸಿದರೆ, ಯಾವ ಬೆಳೆಗೆ ಹೆಚ್ಚಿನ ‘ಕನಿಷ್ಠ ಬೆಂಬಲ ಬೆಲೆ’ ಇರುತ್ತದೆಯೋ ಆ ಬೆಳೆಯನ್ನೇ ಎಲ್ಲರೂ
ಬೆಳೆಯಲು ಶುರುಮಾಡುವ ಸಂಭವವಿದೆ.

ಆಗ ಆ ಬೆಳೆಯ ಪೂರೈಕೆಯ ಪ್ರಮಾಣ ಹೆಚ್ಚಾಗಿ ಇತರ ಬೆಳೆಗಳ ಬೆಲೆಯ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಇತರ ಬೆಳೆಗಳ ಬೆಲೆಯು ಗಗನಕ್ಕೇರುತ್ತದೆ, ಉದಾಹರಣೆಗೆ ಎಲ್ಲರೂ ಬತ್ತವನ್ನು ಬೆಳೆಯಲು ಶುರು ಮಾಡಿದರೆ ತರಕಾರಿ, ಹಣ್ಣುಗಳ ಬೆಲೆಯು ಹೆಚ್ಚಾಗುತ್ತದೆ. ಇಷ್ಟಾದರೂ ಕೇಂದ್ರ ಸರಕಾರವು ಲಿಖಿತ ರೂಪದಲ್ಲಿ ‘ಕನಿಷ್ಠ ಬೆಂಬಲ ಬೆಲೆ’ಯ ಭರವಸೆಯನ್ನು ನೀಡಲು ಮುಂದಾಗಿದೆ.

ನೂತನ ಕೃಷಿ ಕಾಯಿದೆಯಲ್ಲಿ ಮುಕ್ತ ಮಾರುಕಟ್ಟೆಯನ್ನು ಕಲ್ಪಿಸುವ ಸಲುವಾಗಿ, ‘ಎ.ಪಿ,ಎಂ.ಸಿ’ಯ ಹೊರಗೂ ರೈತನು ತನ್ನ ಉತ್ಪನ್ನಗಳನ್ನು ಮಾರುವ ಅವಕಾಶವನ್ನು ಕಲ್ಪಿಸಿದೆ. ಇದರಿಂದ ದಳಿಗಳಿಗೆ ನೀಡುತ್ತಿದ್ದಂತಹ ಶೇ.೧೦ ಕಮಿಷನ್ ಉಳಿತಾಯವಾಗಲಿದೆ. ‘ಸ್ವಾಮಿನಾಥನ್ ಆಯೋಗದ’ ಬೆಳೆಯ ಮೇಲಿನ ಖರ್ಚನ್ನು ಲೆಕ್ಕಾಚಾರ ಮಾಡುವಾಗ ದಳಿಗಳಿಗೆ ನೀಡುತ್ತಿದಂತಹ ಕಮಿಷನ್ ಬಗ್ಗೆ ಎಲ್ಲಿಯೂ ಸಹ ಉಖವಾಗಿಲ್ಲ, ಹಾಗಾದರೆ ಇದರರ್ಥ ಏನು? ಸ್ವತಃ ‘ಸ್ವಾಮಿನಾಥನ್’ಗೆ ದಳಿಗಳು ರೈತರ ಬಳಿ ಬರುವುದು ಇಷ್ಟವಿರಲಿಲ್ಲವೆಂದಾಯಿತಲ್ಲ.

ಸ್ವಾಮಿನಾಥನ್ ವರದಿಯ ಅನುಷ್ಠಾನದ ಬಗ್ಗೆ ಮಾತನಾಡುವ ರೈತ ನಾಯಕರಿಗೆ ಈ ವಿಷಯ ತಿಳಿದಿಲ್ಲವೇ ಅಥವಾ ತಿಳಿದಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿದ್ದಾರೆ. ಮತ್ತೊಮ್ಮೆ ರೈತನ ಸಾಲದ ಬಗ್ಗೆ ಮಾತನಾಡುವುದಾದರೆ, ಖಾಸಗೀ ವ್ಯಕ್ತಿಗಳ ಬಡ್ಡಿ ಹಾವಳಿಯನ್ನು ತಪ್ಪಿಸುವ ಸಲುವಾಗಿ ನರೇಂದ್ರ ಮೋದಿ ಸರಕಾರ ‘ಕಿಸಾನ್ ಕಾರ್ಡ್’ಗಳನ್ನು ಜಾರಿಗೆ ತಂದಿದೆ. ಇದರಡಿಯಲ್ಲಿ ಬಡ್ಡಿ ಇಲ್ಲದೆ ಸಾಲ ಸಿಗುತ್ತಿದೆ, ಕೆಲವು ಕಡೆ ಬಡ್ಡಿ ವಿಧಿಸಿದರೂ ಸಹ ಅದರ ದರ ಶೇ ರಷ್ಟು ದಾಟಿಲ್ಲ. ಇಷ್ಟೊಂದು ಕಡಿಮೆ ದರದಲ್ಲಿ ಸಾಲ ಸಿಕ್ಕಾಗ ಯಾವ ರೈತ ತಾನೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾನೆ? ಇವೆಲ್ಲವೂ ಕೇವಲ ಪುಸ್ತಕದ ಹಾಳೆಗಳಲಿಲ್ಲ, ಮಲೆನಾಡಿನ ಹಲವೆಡೆ ಹೋಗಿ ವಿಚಾರಿಸಿದರೆ ರೈತರೇ ತಮ್ಮ ಅನುಭವದ ಬಗ್ಗೆ ಹೇಳುತ್ತಾರೆ.

ಉತ್ತರ ಭಾರತದ ಹಲವು ಜಿಗಳಲ್ಲಿ ರೈತ ಇದರ ಲಾಭ ಪಡೆಯುತ್ತಿದ್ದಾನೆ. ದೇಶದಾದ್ಯಂತ ಈ ಯೋಜನೆಗಳನ್ನು ನೆಲಮಟ್ಟದಲ್ಲಿ ಅನುಷ್ಠಾನ ಮಾಡಿದರೆ, ರೈತನ ಒಟ್ಟಾರೆ ಖರ್ಚು ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರೈತ ನಾಯಕರು ಹಾಗು ಕಾಂಗ್ರೆಸ್ ಪಕ್ಷವು ಕೇವಲ ‘ಸಾಲಮನ್ನಾ’ಬಗ್ಗೆಯೇ ಯೋಚಿಸುತ್ತಿರುತ್ತಾರೆ. ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಪ್ರಯತ್ನವನ್ನು ಮಾಡೇಯಿಲ್ಲ.

ರೈತರ ಆದಾಯವನ್ನು ದ್ವಿಗುಣಗೊಳಿಸುವುದೆಂದರೆ ಕೇವಲ ‘ಕನಿಷ್ಠ ಬೆಂಬಲ ಬೆಲೆ’ಯನ್ನು ಏರಿಸುವುದಲ್ಲ, ಒಟ್ಟಾರೆ ರೈತನ ಇಳುವರಿಯನ್ನು ಹೆಚ್ಚು ಮಾಡಬೇಕಿದೆ. ಹೆಚ್ಚು ಮಾಡಬೇಕೆಂದರೆ ಕೃಷಿ ಚಟುವಟಿಕೆಯ ಪ್ರತಿಯೊಂದು ಹಂತದಲ್ಲಿಯೂ ಸುಧಾರಣೆ ಗಳನ್ನು ತರುವ ಕೆಲಸವನ್ನು ನರೇಂದ್ರ ಮೋದಿ ಸರಕಾರ ಮಾಡಿದೆ. ಕೃಷಿ ಬೀಜ, ರಸಗೊಬ್ಬರ, ಸಾರಿಗೆ ವ್ಯವಸ್ಥೆ, ನೀರಿನ ಬಳಕೆ, ಮಾರುಕಟ್ಟೆ ಎಲ್ಲಾ ವಿಭಾಗದಲ್ಲಿಯೂ ಜಾರಿಗೆ ತಂದಿರುವ ಒಂದೊಂದೇ ಯೋಜನೆಯನ್ನು ಮೇಲೆ ಆಳವಾಗಿ ಚರ್ಚಿಸಲಾಗಿದೆ.

ಇಷ್ಟಾದರೂ ಸಹ ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ನಿಜವಾಗಿಯೂ ರೈತರೇ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಕೆಂಪು ಕೋಟೆಯ ಮೇಲೆ ಯಾವಾಗ ‘ಖಲೀಸ್ತಾನ್ ಧ್ವಜ’ವನ್ನು ಹಾರಿಸಿದರೋ ಆಗಲೇ ಇವರು ರೈತರಲ್ಲವೆಂಬ ವಿಷಯ ಇಡೀ ದೇಶಕ್ಕೆ ತಿಳಿಯಿತು. ಭೂ ಸುಧಾರಣಾ ವ್ಯವಸ್ಥೆಯ ಬಗ್ಗೆಯೂ ತಮ್ಮ ಅಂಕಣದಲ್ಲಿ ಚರ್ಚೆ ಮಾಡಿರುವ ‘ಸ್ವಾಮಿನಾಥನ್’ ಭೂ ಸುಧಾರಣಾ ಕಾಯಿದೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತರಲು ಮುಂದಾದಾಗ ರೈತ ಮುಖಂಡರು ವಿರೋಧಿಸಿದ್ದರು. ಆದರೆ ಅದೇ ರೈತ ಮುಖಂಡರು ಇಂದು ‘ಸ್ವಾಮಿನಾಥನ್ ಆಯೋಗ’ದ ವರದಿಯ ಅನುಷ್ಠಾನದ ಬಗ್ಗೆ ಮಾತನಾಡುತ್ತಾರೆ. ರೈತ ನಾಯಕರು ಕೇಳುತ್ತಿರುವ ‘ಸ್ವಾಮಿನಾಥನ್ ಆಯೋಗ’ದ ವರದಿಯ ಜಾರಿಯನ್ನು ಅತಿಹೆಚ್ಚು ಅನುಷ್ಠಾನಗೊಳಿಸಿರುವ ಕೀರ್ತಿ ‘ನರೇಂದ್ರ ಮೋದಿ’ಯವರಿಗೆ ಸಲ್ಲಬೇಕೆಂದು ಸ್ವತಃ ‘ಸ್ವಾಮಿನಾಥನ್’ ಹೇಳಿರುವಾಗ ಇವರ ಮಾತುಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.