Friday, 13th December 2024

ವಿವೇಕಾನಂದ ಎಂಬ ಸನಾತನ ಸಿಂಹ

ವೀಕೆಂಡ್ ವಿತ್ ಮೋಹನ್

ಸ್ವಾಮಿ ವಿವೇಕಾನಂದರು ಶಿಕಾಗೊದಲ್ಲಿ ೧೮೯೩ ರಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ, ಸಭಾಂಗಣದಲ್ಲಿ ನೆರೆದಿದ್ದವರಿಗೆ ಜಗತ್ತಿನ ಪುರಾತನ ಸಂತರ ಸಮುದಾಯದ ಪರವಾಗಿ ಕೃತಜ್ಞತೆ ತಿಳಿಸಿದ್ದರು. ಭಾಷಣ ಮಾಡಲು ಕರೆಸಿದ್ದಕ್ಕೆ ನೆರೆದಿದ್ದ ಪಾಶ್ಚಿಮಾತ್ಯ ಸಭಿಕರಿಗೆ, ಜಗತ್ತಿನೆಲ್ಲೆಡೆ ಹಂಚಿಹೋಗಿರುವ
ಹಿಂದೂ ಧರ್ಮದ ಲಕ್ಷಾಂತರ ಅನುಯಾಯಿಗಳ ಪರವಾಗಿ ಕೃತಜ್ಞತೆಯನ್ನು ತಿಳಿಸಿದ್ದರು.

ಕೇವಲ ಸಮನ್ವಯವೊಂದೇ ಅಲ್ಲದೆ ಸ್ವೀಕಾರದ ಪಾಠವನ್ನೂ ಇಡೀ ವಿಶ್ವಕ್ಕೆ ಸಾರಿದ ಧರ್ಮಕ್ಕೆ ತಾವು ಸೇರಿದವರೆಂಬುದು ತಮ್ಮ ಪಾಲಿನ ಅಭಿಮಾನವೆಂದು ವಿವೇಕಾನಂದರು ಹೇಳಿದ್ದರು. ಈ ಭಾಷಣದಲ್ಲಿ ವ್ಯಕ್ತವಾಗಿದ್ದ ಹಿಂದೂಧರ್ಮದ ಸಹಿಷ್ಣುತೆಯ ವಿಚಾರಧಾರೆಯ ಆಳವನ್ನು ಮೆಚ್ಚಿ ಅಲ್ಲಿ ನೆರೆದಿದ್ದವರೆಲ್ಲ ಎದ್ದು ನಿಂತು ೨ ನಿಮಿಷಗಳ ಕಾಲ ಕರತಾಡನ ಮಾಡಿದ್ದರು. ಆದರೆ ಸನಾತನ ಧರ್ಮದ ವಿಚಾರಗಳನ್ನು ಹೀಗೆ ಪ್ರಬಲವಾಗಿ ಪ್ರತಿಪಾದಿಸಿದ್ದ ವಿವೇಕಾನಂದರ ಆದರ್ಶಗಳನ್ನು ಗಾಳಿಗೆ ತೂರಿದ ‘ಘಮಂಡಿಯ’ ಒಕ್ಕೂಟದ ಸದಸ್ಯರು, ಸನಾತನ ಧರ್ಮವನ್ನು ನಂಬದ ಟೊಳ್ಳು ಸಿದ್ಧಾಂತವನ್ನು ೫ ದಶಕಗಳಿಂದ ತಮಿಳುನಾಡಿನಲ್ಲಿ ಪ್ರಚುರಿಸುತ್ತ ಬಂದಿದ್ದಾರೆ.

‘ಭೂಮಿ ಮೇಲಿನ ಎಲ್ಲಾ ಧರ್ಮ, ಎಲ್ಲಾ ದೇಶಗಳ ಪೀಡಿತರು ಮತ್ತು ಅನಾಥರಿಗೆ ಆಶ್ರಯ ನೀಡಿದ ಧರ್ಮ ನಮ್ಮದು; ಸಹಾಯಹಸ್ತಕ್ಕಾಗಿ ಕೈಚಾಚಿ ಬಂದಂಥ ಹಲವು ಧರ್ಮಗಳಿಗೆ ಆಶ್ರಯ ನೀಡಿದ ದೇಶ ನಮ್ಮದು. ರೋಮನ್ನರ ಆಕ್ರಮಣಕ್ಕೆ ತುತ್ತಾಗಿ ತಮ್ಮ ನೆಲೆಯಿಂದ ಓಡಿಬಂದಂಥ ಯೆಹೂದಿಗಳಿಗೆ ಆಶ್ರಯ ನೀಡಿದ್ದು ಭಾರತ’ ಎಂದು ಸ್ವಾಮಿಗಳು ತಮ್ಮ ಭಾಷಣದಲ್ಲಿ ಹೇಳಿದ್ದರು. ೧೯೫೦ರ ದಶಕದಲ್ಲಿ ಟಿಬೆಟ್ ಮೇಲೆ ಚೀನಾದ ದಾಳಿ ಯಾದಾಗ ತಪ್ಪಿಸಿಕೊಂಡು ಬಂದಿದ್ದ ಬೌದ್ಧರಿಗೆ, ಟಿಬೆಟಿಯನ್ನರ ಪರಮೋಚ್ಚ ನಾಯಕ ದಲೈ ಲಾಮರಿಗೆ ಆಶ್ರಯ ನೀಡಿದ್ದು ಭಾರತ. ವಿಪರ್ಯಾಸವೆಂದರೆ ಭಾರತದ ವಿಭಜನೆಯ ವೇಳೆ ಪಾಕಿಸ್ತಾನಕ್ಕೆ ಹೋದ ಹಿಂದೂಗಳು ಅಲ್ಲಿಂದು ಅಲ್ಪಸಂಖ್ಯಾತರಾಗಿ ಜೀವವನ್ನು ಕೈಯಲ್ಲಿಟು ಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇಂಥ ನೊಂದವರನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡು ಭಾರತೀಯ ಪೌರತ್ವ ನೀಡುವ ಕಾನೂನನ್ನು ಜಾರಿ ಮಾಡಿದಾಗ ವಿರೋಧಿಸಿದವರು ‘ಘಮಂಡಿಯ’ ಒಕ್ಕೂಟದ ಸದಸ್ಯರು. ವಿವೇಕಾನಂದರು ಶಿಕಾಗೊ ಭಾಷಣದ ಮುಂದುವರಿದ ಭಾಗದಲ್ಲಿ, ‘ಮತ ಭೇದ, ಅಂಧಶ್ರದ್ಧೆ ಮತ್ತು ಅದರ ಭಯಾನಕ ಮೂಲಭೂತ
ವಾದಗಳು ಈ ಸುಂದರ ಪೃಥ್ವಿಯನ್ನು ತುಂಬಾ ಹಿಂದಿ ನಿಂದಲೇ ಆಕ್ರಮಿಸಿ, ತಮ್ಮ ಧಾರೆಯನ್ನು ಹಿಂಸಾಚಾರದ ವಿಷದಿಂದ ತುಂಬಿಸಿವೆ; ಮಾನವರಕ್ತದಿಂದ ಪದೇಪದೆ ತೋಯಿಸಿ ನಾಗರಿಕತೆಯನ್ನು ನಾಶಗೊಳಿಸಿವೆ, ದೇಶಗಳನ್ನೇ ಸರ್ವನಾಶಕ್ಕೆ ದೂಡಿವೆ’ ಎಂದಿದ್ದರು.

ಇತರ ಕೆಲ ಧರ್ಮ ದಂತೆ ಸನಾತನ ಧರ್ಮದಲ್ಲಿ, ಧರ್ಮದ ವಿರುದ್ಧ ಮಾತನಾಡಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂಬ ನಿಯಮವಿಲ್ಲ. ಪಾಕಿಸ್ತಾನದಲ್ಲಿ ಅಮಾಯಕ ಮುಸ್ಲಿಮರ ಮೇಲೆ ಎರಗುವ ಉಗ್ರಸಂಘಟನೆಗಳ ನಾಯಕರೂ ಮುಸ್ಲಿಮರೇ. ವಿವೇಕಾನಂದರು ಹೇಳಿದಂತೆ, ಧರ್ಮದ ಅಮಲಿಗೆ ಬಿದ್ದ ಅದೆಷ್ಟೋ
ದೇಶಗಳು ಸರ್ವನಾಶವಾಗಿವೆ. ಹಿಂದೂಧರ್ಮದ ಮೇಲೆ ಆಕ್ರಮಣ ಮಾಡಿದ ಆಫ್ಘಾನ್ ದಾಳಿಕೋರರಿಗೆ ಭಾರತವನ್ನು ಸರ್ವನಾಶ ಮಾಡಲಾಗಲಿಲ್ಲ. ಸೊಂಟಕ್ಕೆ ಬಾಂಬ್ ಕಟ್ಟಿಕೊಂಡು ಸತ್ತರೆ ಸ್ವರ್ಗದಲ್ಲಿ ೭೨ ಕನ್ಯೆಯರು ಸಿಗುತ್ತಾರೆಂಬ ಮೂಢನಂಬಿಕೆ ಹಿಂದೂಧರ್ಮದಲ್ಲಿಲ್ಲ.

ತಾವು ಕೇರಳಕ್ಕೆ ಭೇಟಿ ನೀಡಿದ್ದಾಗ ಕಂಡುಬಂದ ಅಸ್ಪೃಶ್ಯತೆಯ ಬಗ್ಗೆ ಕಿಡಿಕಾರಿದ್ದ ವಿವೇಕಾನಂದರು ಕೇರಳವನ್ನು ಹುಚ್ಚರ ರಾಜ್ಯವೆಂದು ಕರೆದಿದ್ದರು. ಹಿಂದೂಧರ್ಮದಲ್ಲಿದ್ದಂಥ ಅಸ್ಪೃಶ್ಯತೆಯನ್ನು ಖಂಡಿಸಿದ್ದು ಹಿಂದೂಗಳೇ ಹೊರತು ಅನ್ಯಧರ್ಮೀಯರಲ್ಲ. ಹಿಂದೆ ಇದ್ದಂಥ ಸಾಮಾಜಿಕ ಅಸಮಾನತೆಯ ವಿರುದ್ಧ ನಿಂತ ಹಿಂದೂ ಸಮಾಜ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಯತ್ನಿಸಿದೆ. ವಿವೇಕಾನಂದರು ತಮ್ಮ ಭಾಷಣದಲ್ಲಿ ಮುಂದುವರಿದು, ‘ಒಂದು ಧರ್ಮದ ದಿಗ್ವಿಜಯ ಉಳಿದ ಧರ್ಮದ ಸರ್ವನಾಶ ಆಗುತ್ತದೆಯೆಂದು ಭಾವಿಸುವವರಿಗೆ ನನ್ನದೊಂದು ಕಿವಿಮಾತು: ಸೋದರರೇ, ನಿಮ್ಮದು ಅಸಂಭವನೀಯ ನಂಬಿಕೆ.

ಕ್ರೈಸ್ತನೊಬ್ಬ ಹಿಂದೂ ಆಗಲೆಂದು ನಾನು ಬಯಸಲೇ? ಹಿಂದೂ ಅಥವಾ ಬೌದ್ಧನೊಬ್ಬ ಕ್ರೈಸ್ತನಾಗಬೇಕೆಂದು ಬಯಸಲೇ? ಹಾಗೆ ಮಾಡಿದರೆ ದೇವರು ನನ್ನನ್ನು ತಡೆಯಲಿ. ಬೀಜವೊಂದು ಗಾಳಿ-ಬೆಳಕಿಗೆ ಸಿಲುಕಿ ಬದಲಾಗದೆ, ತನ್ನದೇ ಬೆಳವಣಿಗೆಯ ನಿಯಮದಂತೆ ಸಸ್ಯವಾಗಿಯೇ ಬೆಳೆಯುತ್ತದೆ. ಕ್ರೈಸ್ತನು ಹಿಂದುವಾಗಿ,
ಹಿಂದುವು ಕ್ರೈಸ್ತನಾಗಿ ಬದಲಾಗಬೇಕಿಲ್ಲ. ಪ್ರತಿಯೊಬ್ಬರೂ ಇತರರ ಶಕ್ತಿಯನ್ನು ಗುರುತಿಸಿ ಸ್ವಂತಿಕೆಯನ್ನು ಉಳಿಸಿ ಕೊಂಡು ತಮ್ಮದೇ ಬೆಳವಣಿಗೆಯ ನಿಯಮ ದಂತೆ ವೃದ್ಧಿಸ ಬೇಕು’ ಎಂದಿದ್ದಾರೆ. ವಿವೇಕಾನಂದರು ಹಿಂದೂಧರ್ಮವನ್ನು ಗಟ್ಟಿಯಾಗಿ ಬೋಽಸುತ್ತಿದ್ದುದರ ಜತೆಗೆ, ಪರಧರ್ಮೀಯರು ಹಿಂದೂ ಧರ್ಮದ ಮೇಲೆ ದಾಳಿಮಾಡುವುದನ್ನು ಸಹಿಸುತ್ತಿರಲಿಲ್ಲ.

ಆದರೆ ಅವರದೇ ನಾಡಿನಲ್ಲಿ ಲಕ್ಷಾಂತರ ಹಿಂದೂಗಳ ಮತಾಂತರಕ್ಕೆ ಚಾಲನೆ ಸಿಕ್ಕಿದ್ದು ವಿಪರ್ಯಾಸದ ಪರಮಾವಧಿ. ಯುರೋಪಿನಲ್ಲಿ ಹುಟ್ಟಿ ಕೋಲ್ಕತ್ತಾದಲ್ಲಿ
ನೆಲೆಸಿ ಕ್ರಿಸ್ತಸೇವೆಯ ಹೆಸರಲ್ಲಿ ಕ್ರೈಸ್ತಧರ್ಮಕ್ಕೆ ಹಿಂದೂಗಳನ್ನು ಮತಾಂತರಿಸಿದ ಮದರ್ ತೆರೇಸಾರನ್ನು ವಿಜೃಂಭಿಸಲಾಯಿತು. ವಿವೇಕಾನಂದರು ೧೮೯೭ರಲ್ಲಿ ಚೀನಾ, ಜಪಾನ್, ಅಮೆರಿಕ, ಕೆನಡ ಮತ್ತು ಬ್ರಿಟನ್ ಪ್ರವಾಸ ಮುಗಿಸಿ ಹಡಗಿನಲ್ಲಿ ಭಾರತಕ್ಕೆ ಮರಳುತ್ತಿರುವಾಗ, ಇಬ್ಬರು ಕ್ರೈಸ್ತ ಮಿಷನರಿಗಳೊಂದಿಗೆ ಹಿಂದೂಧರ್ಮದ ಬಗ್ಗೆ ಚರ್ಚಿಸುತ್ತಿದ್ದರು. ಆ ವೇಳೆ ಮಿಷನರಿಗಳು ಹಿಂದೂಧರ್ಮವನ್ನು ಕ್ರೂರವಾಗಿ ಟೀಕಿಸಿದಾಗ ಸ್ವಾಮೀಜಿ ಅವರಲ್ಲೊಬ್ಬರ ಕಾಲರ್ ಹಿಡಿದು, ‘ಹಿಂದೂಧರ್ಮದ ಬಗ್ಗೆ ಅಪಪ್ರಚಾರ ಮಾಡಿದರೆ ಹಡಗಿನಿಂದ ಹೊರೆಗೆಸೆಯುವೆ’ ಎಂದು ಅಬ್ಬರಿಸಿದಾಗ ಭಯಗೊಂಡ ಆ ಮಿಷನರಿ ಕ್ಷಮೆಯಾಚಿಸಿ, ಮತ್ತೆ ಹೀಗೆ
ಮಾಡುವುದಿಲ್ಲ ಎಂದು ಭರವಸೆಯಿತ್ತಿದ್ದ.

ಸ್ವಾಮಿ ನಿಖಿಲಾನಂದರ ‘ವಿವೇಕಾನಂದ: ಎ ಬಯೋಗ್ರಫಿ’ ಪುಸ್ತಕದಲ್ಲಿ ಈ ಘಟನೆ ವಿವರವಾಗಿ ದಾಖಲಾಗಿದೆ. ಅದರಲ್ಲಿನ ಮತ್ತಷ್ಟು ಸಂಗತಿಗಳು ಹೀಗಿವೆ: ಭಾರತಕ್ಕೆ ಹಿಂದಿರುಗಿದ ನಂತರ ಕೋಲ್ಕತ್ತಾದಲ್ಲಿ ಶಿಷ್ಯರೊಂದಿಗೆ ಮಾತನಾಡುತ್ತಿದ್ದ ವಿವೇಕಾನಂದರು, ‘ಯಾರಾದರೂ ನಿಮ್ಮ ತಾಯಿಯನ್ನು ಅವಮಾನಿ
ಸಿದರೆ ಏನು ಮಾಡುತ್ತೀರಿ?’ ಎಂದು ಕೇಳಿದರು. ‘ಅವನ ಮೇಲೆ ಬಿದ್ದು ಅವನಿಗೆ ಒಳ್ಳೆಯ ಪಾಠ ಕಲಿಸುತ್ತೇನೆ’ ಎಂದುತ್ತರಿಸಿದ ಶಿಷ್ಯನೊಬ್ಬ. ಆಗ ವಿವೇಕಾ ನಂದರು, ‘ನಿಮ್ಮ ತಾಯಿಯ ಮೇಲಿರುವಂತೆಯೇ ನಿಮ್ಮ ಧರ್ಮದ ಬಗ್ಗೆಯೂ ಸಕಾರಾತ್ಮಕ ಭಾವನೆಯಿದ್ದರೆ, ಯಾವುದೇ ಹಿಂದೂ ಸೋದರ ಕ್ರೈಸ್ತಧರ್ಮಕ್ಕೆ ಮತಾಂತರಗೊಳ್ಳುವುದನ್ನು ನೀವೆಂದೂ ನೋಡಲಾಗುವುದಿಲ್ಲ.

ಆದರೂ ಇದು ಪ್ರತಿದಿನ ಸಂಭವಿಸುವುದನ್ನು ನೀವು ನೋಡುತ್ತಿದ್ದೀರಿ ಮತ್ತು ಅದರಿಂದ ಸಾಕಷ್ಟು ಉದಾಸೀನರಾಗಿದ್ದೀರಿ. ಎಲ್ಲಿದೆ ನಿಮ್ಮ ನಂಬಿಕೆ, ದೇಶಭಕ್ತಿ? ಮಿಷನರಿಗಳು ನಿಮ್ಮ ಮುಂದೆಯೇ ಹಿಂದೂಧರ್ಮವನ್ನು ನಿಂದಿಸುತ್ತಾರೆ, ಹಾಗಾದರೆ ಧರ್ಮದ ರಕ್ಷಣೆಗೆ ನಿಲ್ಲುವವರು ಯಾರು?’ ಎಂದು ಪ್ರಶ್ನಿಸಿದರು.
ಸನಾತನತೆಯ ನಿರ್ಮೂಲನವಾಗಬೇಕೆಂದ ಉದಯನಿಧಿ ಸ್ಟಾಲಿನ್ ತಾವೊಬ್ಬ ಮತಾಂತರಗೊಂಡ ಹೆಮ್ಮೆಯ ಕ್ರಿಶ್ಚಿಯನ್ ಎಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳ ಬೇಕು. ಹಿಂದೂ ಧರ್ಮದ ರಕ್ಷಣೆಗಾಗಿ ವಿವೇಕಾನಂದರು ಮಿಷನರಿಗಳ ಮತಾಂತರವನ್ನು ವಿರೋಧಿಸಿದ್ದರೆ, ಇತ್ತ ‘ಘಮಂಡಿಯ’ ಒಕ್ಕೂಟವು ‘ಮತಾಂತರ ನಿಷೇಧ ಕಾಯ್ದೆ’ಯನ್ನೇ ವಿರೋಧಿಸುತ್ತದೆ, ಹಿಂದೂಧರ್ಮಕ್ಕೆ ಮಾರಕವಾಗಿರುವ ಮತಾಂತರವನ್ನು ಬಹಿರಂಗವಾಗಿ ಪೋಷಿಸುವ ಕೆಲಸವನ್ನು ಅದು ತನ್ನ
ರಾಜ್ಯಗಳಲ್ಲಿ ಮಾಡಿಕೊಂಡು ಬರುತ್ತಿದೆ. ಮಿಷನರಿಗಳ ಮತಾಂತರವನ್ನು ಬಲವಾಗಿ ವಿರೋಧಿಸಿದ್ದ ವಿವೇಕಾನಂದರು, ಅಬ್ರಹಾಮಿಕ್ ನಂಬಿಕೆಗಳ ಗ್ರಂಥಗಳಿ ಗಿಂತ ವೇದೋಪನಿಷತ್ತುಗಳ ಶ್ರೇಷ್ಠತೆಯನ್ನು ಹೆಚ್ಚು ನಂಬಿದ್ದರು, ‘ಸನಾತನ ಧರ್ಮದ ಆಳವಾದ ಅಧ್ಯಾತ್ಮಿಕತೆಯು ಅಬ್ರಹಾಮಿಕ್ ಗ್ರಂಥಗಳಲ್ಲಿಲ್ಲ’ ಎಂದು ಆಗಾಗ ಹೇಳುತ್ತಿದ್ದರು.

ಹಿಂದೂಗಳು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬೇಕೆಂದ ವಿವೇಕಾನಂದರ ನಂಬಿಕೆ, ಕಾರ್ಯ, ಹೇಳಿಕೆ ಮತ್ತು ಬೋಧನೆಗಳು, ಅವರ ಬಗ್ಗೆ ಪ್ರಕಟವಾಗಿದ್ದ ಹೆಚ್ಚಿನ
ಪುಸ್ತಕಗಳಲ್ಲಿ ಕಂಡುಬರುವುದಿಲ್ಲ. ಸ್ವಾತಂತ್ರ್ಯಾನಂತರ ಕಮ್ಯುನಿಸ್ಟರ ತೆಕ್ಕೆಗೆ ಸಿಕ್ಕಂಥ ಪುಸ್ತಕ ಪ್ರಕಟಣೆಗಳಲ್ಲಿ, ಸನಾತನ ಧರ್ಮದ ಬಗೆಗಿನ ವಿವೇಕಾನಂದರ ಬೋಧನೆಗಳನ್ನು ಮರೆಮಾಚಲಾಯಿತು. ಹಿಂದೂಧರ್ಮದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಆಳ ಅಧ್ಯಯನ ನಡೆಸಿ, ಅದರ ವಿಚಾರ ಧಾರೆಗಳನ್ನು ಜಗತ್ತಿನ ಮುಂದೆ ಮಂಡಿಸಿದ್ದ ವಿವೇಕಾನಂದರ ದೇಶದಲ್ಲೇ ಸನಾತನ ಧರ್ಮದ ನಿರ್ಮೂಲನೆಯ ಕೂಗು ಕೇಳಿಬರುತ್ತಿದೆ.

ಕೇಸರಿಬಣ್ಣ ಕಂಡೊಡನೆ ಕೋಮುವಾದವೆನ್ನುವ ‘ಘಮಂಡಿಯ’ ಒಕ್ಕೂಟದ ಸದಸ್ಯ ಪಕ್ಷಗಳು, ವಿವೇಕಾನಂದರು ಕೇಸರಿವಸ ಧರಿಸಿಯೇ ಶಿಕಾಗೊ ಸಮ್ಮೇಳನ ದಲ್ಲಿ ಹಿಂದೂಧರ್ಮದ ಮಹತ್ವವನ್ನು ಜಗತ್ತಿನ ಮುಂದೆ ಪ್ರತಿಪಾದಿಸಿದ್ದು ಎಂಬುದನ್ನು ಮರೆಯಬಾರದು. ವಿವೇಕಾನಂದರ ಆದರ್ಶ ಪಾಲಿಸುವವರು ಹಿಂದೂ ಧರ್ಮವನ್ನು ಸಾಂಕ್ರಾಮಿಕ ರೋಗಗಳಿಗೆ ಹೋಲಿಸುವುದಿಲ್ಲ. ಇತರ ಕೆಲ ಧರ್ಮದಂತೆ ಹಿಂದೂಧರ್ಮವು ಖಡ್ಗದ ಮೂಲಕ ಜಗತ್ತಿನ ಇತರ ದೇಶಗಳಿಗೆ ವಿಸ್ತರಿಸಲಿಲ್ಲ. ಜಗತ್ತಿನ ದಿಗ್ಗಜರು ಹಿಂದೂ ಧರ್ಮದ ಆಳ-ಅಗಲವನ್ನರಿತು ಸ್ವೀಕರಿಸಿದ್ದಾರೆ. ಒಂದು ಕಾಲದಲ್ಲಿ ಹಿಂದೂಧರ್ಮದಲ್ಲಿದ್ದ ಸಮಾಜ-ವಿರೋಧಿ
ಆಚರಣೆಗಳನ್ನು ಖಂಡಿಸಿ, ಕಾಲಕ್ಕೆ ತಕ್ಕಂತೆ ಬದಲಾಗಿ ಆಧುನಿಕ ಜಗತ್ತಿನೊಂದಿಗೆ ಬೆರೆತು ಇತರ ಧರ್ಮಕ್ಕೆ ಮಾದರಿ ಯಾಗಿರುವವರು ಹಿಂದೂಧರ್ಮದ ಪರಿಪಾಲಕರು.

ಬ್ರಿಟಿಷರ ಶಿಕ್ಷಣ ಪದ್ಧತಿಯಲ್ಲಿ ‘ಬ್ರೇನ್‌ವಾಷ್’ ಆದಂಥ ವರು, ಹಿಂದೂಗಳು ಸಹಿಷ್ಣುಗಳು ಎನ್ನುವ ಒಂದೇ ಕಾರಣಕ್ಕೆ ಹಿಂದೂ ಧರ್ಮದ ವಿರುದ್ಧ ಮಾತನಾಡು ತ್ತಿದ್ದಾರೆ. ಹಿಂದೂ ಧರ್ಮದ ಪ್ರಚಾರದಿಂದ ನಾಶವಾದಂಥ ಒಂದೇ ಒಂದು ನಾಗರಿಕತೆಯ ಉದಾಹರಣೆ ಜಗತ್ತಿನಲ್ಲಿಲ್ಲ. ‘ವಸುಧೈವ ಕುಟುಂಬಕಂ’ ಎಂಬ ಧ್ಯೇಯವಿಟ್ಟುಕೊಂಡು, ಇಡೀ ಜಗತ್ತನ್ನೇ ನಮ್ಮ ಕುಟುಂಬವೆಂದು ನಂಬಿ ಭಾರತದಲ್ಲಿ ಆಶ್ರಯ ಬಯಸಿದವರಿಗೆ ಕೆಂಪುಹಾಸಿನ ಸ್ವಾಗತ ಕೋರಿದ್ದು ಸನಾತನ ಹಿಂದೂಧರ್ಮ. ೧೯೪೭ರಲ್ಲಿ ಅಖಂಡ ಭಾರತವು ಧರ್ಮದ ಆಧಾರದ ಮೇಲೆ ವಿಭಜನೆಯಾಗಿದ್ದನ್ನು ‘ಘಮಂಡಿಯ’ ಒಕ್ಕೂಟದ ಸದಸ್ಯರು ಮರೆಯಬಾರದು.

ತದನಂತರವೂ ಭಾರತದಲ್ಲಿ ಉಳಿದುಕೊಂಡ ಸರ್ವಧರ್ಮದವರ ಜತೆ ಸಹಿಷ್ಣುಗಳಾಗಿ ಬದುಕುತ್ತಿರುವ ಜಗತ್ತಿನ ಏಕೈಕ ದೇಶ ಭಾರತ. ಇದರ ಹಿಂದಿನ ಮೂಲಕಾರಣ ‘ಸನಾತನ ಹಿಂದೂಧರ್ಮ’.