Friday, 13th December 2024

ನಾಲಗೆಗಷ್ಟೇ ಅಲ್ಲ, ಪಂಚೇಂದ್ರಿಯಗಳಿಗೂ ಹಿತವಾಗುವ ’ಸಿಹಿ’ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ನನ್ನ ಉದ್ದೇಶ ಇಲ್ಲಿ ಚಿತ್ರಗೀತೆಗಳನ್ನು ಮೆಲುಕು ಹಾಕುವುದಲ್ಲ. ‘ಸಿಹಿ’ ನಮಗೆ ನಾಲಗೆಯ ರುಚಿ ಮಾತ್ರವಲ್ಲ, ಬೇರೆ ಇಂದ್ರಿಯಗಳಿಗೂ, ಅದರಿಂದಾಗಿ ಮಿದುಳಿಗೂ ಮನಸ್ಸಿಗೂ ಆಗುವ ಅನುಭವದ ಅಭಿವ್ಯಕ್ತಿ ಅಂತ ವ್ಯಾಖ್ಯಾನಿಸುವುದು ಅಷ್ಟೇ. ಇಂಗ್ಲಿಷ್‌ನಲ್ಲಿ ‘ಸ್ವೀಟ್’ ಪದ ಯಾವ್ಯಾವ ಸಂದರ್ಭಗಳಲ್ಲಿ ಬಳಕೆಯಾಗುತ್ತದೆಂದು ಗಮನಿಸಿದರೂ ಇದು ನಮಗೆ ಅರ್ಥವಾಗುತ್ತದೆ.

‘ಅಧರಂ ಮಧುರಂ ವದನಂ ಮಧುರಂ| ನಯನಂ ಮಧುರಂ ಹಸಿತಂ ಮಧುರಂ| ಹೃದಯಂ ಮಧುರಂ ಗಮನಂ ಮಧುರಂ| ಮಧುರಾಧಿಪತೇರಖಿಲಂ ಮಧುರಂ…’ ಅತ್ಯಂತ ಮಧುರವಾದ ಈ ಮಧುರಾಷ್ಟಕವನ್ನು ನೀವು ಕೇಳಿಯೇ ಇರುತ್ತೀರಿ. ಅದರಲ್ಲೂ ಎಂ. ಎಸ್.ಸುಬ್ಬುಲಕ್ಷ್ಮಿಯವರ ಧ್ವನಿಯಲ್ಲಿ ಕೇಳುತ್ತೀರಾ ದರೆ ಆ ಧ್ವನಿಯದೂ ಸೇರಿ ಮಾಧುರ್ಯದ ಅನುಭವ ದ್ವಿಗುಣವಾಗುತ್ತದೆ. ಅಕ್ಷರಶಃ ಜೇನುತುಪ್ಪವನ್ನೋ ಕಬ್ಬಿನ ಹಾಲನ್ನೋ ಮತ್ತ್ಯಾವುದೋ ಸಿಹಿಪದಾರ್ಥ ವನ್ನೋ ಸವಿದಂತೆ ಭಾಸವಾಗುತ್ತದೆ.

ಮಧುರಾಷ್ಟಕವು ಶ್ರೀಮದ್ ವಲ್ಲಭಾಚಾರ್ಯರು ರಚಿಸಿದ ಸರಳ ಸುಂದರ ಸಂಸ್ಕೃತ ರಚನೆ. ವಲ್ಲಭಾಚಾ ರ್ಯರು ಹದಿನೈದನೆಯ ಶತಮಾನದಲ್ಲಿ ಬಾಳಿದವರು; ಮೂಲತಃ ತೆಲುಗಿನವರಾಗಿದ್ದು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಆಸ್ಥಾನದಲ್ಲಿ ಕವಿಯಾಗಿ ದ್ದವರು ಎನ್ನುವುದು ಕನ್ನಡಿಗರಿಗೂ ಹೆಮ್ಮೆಯ ವಿಚಾರವೇ. ಮಧುರಾಷ್ಟಕವನ್ನು ಸರಳ ಸುಂದರ ರಚನೆ ಎಂದಿದ್ದೇಕೆಂದರೆ ಶ್ರೀಕೃಷ್ಣ ನ ಭಕ್ತಿಯಲ್ಲಿ ತಲ್ಲೀನ ರಾದರೆ ನಮಗೆ ಎಲ್ಲವೂ ಹೇಗೆ ಮಧುರವಾಗಿ ಭಾಸವಾಗುತ್ತದೆ ಎಂಬ ಬಣ್ಣನೆ ಅದರಲ್ಲಿರುವುದು.

ಎಲ್ಲವೂ ಸಿಹಿ ಅಂದರೆ ಅದೂ ಸಿಹಿ, ಇದೂ ಸಿಹಿ, ಕೃಷ್ಣನಿಗೆ ಸಂಬಂಧಿಸಿದ್ದೆಲ್ಲವೂ ಸಿಹಿ ಎಂಬ ಭಾವನೆ. ಪದಪದಕ್ಕೂ ಮಧುರಂ ಎಂದು ಬರುವುದು ಅದೇ ಕಾರಣಕ್ಕೆ. ಕೃಷ್ಣನ ತುಟಿಗಳು ಸಿಹಿ ಎಂಬಲ್ಲಿಂದ ಆರಂಭವಾಗುವ ಸಿಹಿತನದ ಆಸ್ವಾದನೆ ಕೃಷ್ಣನ ಮುಖವೂ ಸಿಹಿ, ನಕ್ಷತ್ರಗಳಂತೆ ಮಿನುಗುವ ಕಣ್ಣುಗಳು ಸಿಹಿ, ಮುಖದಲ್ಲಿ ಮೂಡುವ ತುಂಟ ನಗೆ ಸಿಹಿ, ಕೃಷ್ಣನ ಹೃದಯವೂ ಸಿಹಿ, ನಡೆನುಡಿಯೂ ಸಿಹಿ ಅಂತೆಲ್ಲ ಮುಂದುವರಿಯುತ್ತದೆ. ಆಮೇಲೆ ಕೃಷ್ಣನ ಮಾತು ಸಿಹಿ,
ಗುಣಸ್ವಭಾವ ಸಿಹಿ, ಅವನ ಉಡುಗೆ ತೊಡುಗೆ ಸಿಹಿ. ಹಾವ ಭಾವವೂ ಸಿಹಿ. ಕಳ್ಳ ಹೆಜ್ಜೆಗಳನ್ನಿಡುತ್ತ ನಡೆದಾಡುವ ಭಂಗಿಯೂ ಸಿಹಿ, ಅಲ್ಲಿ ಇಲ್ಲಿ ಓಡಾಡುತ್ತ ಕದ್ದುಮುಚ್ಚಿ ಮಾಡುವ ಚೇಷ್ಟೆಯೂ ಸಿಹಿ.

ಕೃಷ್ಣನ ಕೊಳಲಗಾನ ಸಿಹಿ, ಪಾದಧೂಳಿಯೂ ಸಿಹಿ. ಕೈಗಳು ಸಿಹಿ, ಪುಟ್ಟ ಪಾದಗಳೂ ಸಿಹಿ. ಆತನ ನಾಟ್ಯ ಸಿಹಿ, ಆತನೊಂದಿಗಿನ ಗೆಳೆತನವೂ ಸಿಹಿ. ಕೃಷ್ಣನ ಹಾಡು ಸಿಹಿ, ಆತ ಕುಡಿಯುವ ಹಾಲು ಸಿಹಿ. ಊಟವೂ ಸಿಹಿ, ನಿದ್ದೆಯೂ ಸಿಹಿ. ಕೃಷ್ಣನ ರೂಪ ಸಿಹಿ, ಹಣೆಯ ಮೇಲಿನ ತಿಲಕವೂ ಸಿಹಿ. ಅವನ ಚಟುವಟಿಕೆಗಳೆಲ್ಲ ಸಿಹಿ, ಪ್ರತಿಯೊಂದನ್ನೂ ಪ್ರತಿಯೊಬ್ಬರನ್ನೂ ಅವನು ಕಷ್ಟಗಳಿಂದ ಪಾರುಮಾಡುವುದೂ ಸಿಹಿ. ಚಿಕ್ಕಪುಟ್ಟ ಕಳ್ಳತನಗಳೆಲ್ಲ ಸಿಹಿ, ಪ್ರೀತಿಯ ಆಟಗಳೆಲ್ಲವೂ ಸಿಹಿ. ಬಾಯಿಯಿಂದೇನಾದರೂ ಹೊರಹಾಕಿದನೋ ಅದೂ ಸಿಹಿಯೇ. ಅಂತೆಯೇ ಅವನಿಂದ ಅಡಗಿಸಲ್ಪಟ್ಟದ್ದೆಲ್ಲವೂ ಸಿಹಿ. ಕೃಷ್ಣನು ಕೊರಳಲ್ಲಿ ಧರಿಸುವ ಮಣಿಗಳ
ಸರ ಮತ್ತು ಪುಷ್ಪಮಾಲೆ ಸಿಹಿ. ಅವನು ಈಜಾಡುವ ಯಮುನಾ ನದಿ ಸಿಹಿ.

ಅದರಲ್ಲೇಳುವ ಅಲೆಗಳೂ ಸಿಹಿ. ಯಮುನೆಯ ನೀರೂ ಸಿಹಿ, ಅಲ್ಲಿ ಬೆಳೆಯುವ ಕಮಲದ ಹೂವು ಕೂಡ ಸಿಹಿ. ಕೃಷ್ಣನಿಗೆ ಪ್ರಿಯರಾದ ಗೋಪಿಕೆಯರೆಲ್ಲ ಸಿಹಿ. ಅವರೊಡನೆ ಕೃಷ್ಣನ ರಾಸಲೀಲೆಯೂ ಸಿಹಿ. ಅವನನ್ನು ಭೇಟಿಯಾಗುವ ಕ್ಷಣಗಳು ಪ್ರತಿಯೊಬ್ಬರಿಗೂ ಸಿಹಿ. ಆ ಭೇಟಿಯಿಂದಾಗಿ ಮನಸ್ಸಿನ ಭಾರವನ್ನೆಲ್ಲ ಇಳಿಸಿ ಮುಕ್ತರಾಗುವುದು ಮತ್ತಷ್ಟು ಸಿಹಿ. ಅವನ ಕುಡಿನೋಟವೇ ಸಿಹಿ. ಅಂತೆಯೇ ಸೌಹಾರ್ದಯುತ ನಡವಳಿಕೆಯೂ ಸಿಹಿ. ನಂದಗೋಕುಲದಲ್ಲಿ ಕೃಷ್ಣನ ಓರಗೆಯ ಬಾಲಕರೆಲ್ಲ ಸಿಹಿ. ಅವರೆಲ್ಲ ಸೇರಿ ಮೇಯಿಸುವ ಹಸುಕರುಗಳೂ ಸಿಹಿ. ಅವುಗಳನ್ನು ನಿಯಂತ್ರಿಸಲು ಬಳಸುವ ಬಾರುಕೋಲು ಕೂಡ ಸಿಹಿ. ಕೃಷ್ಣನ ಸೃಷ್ಟಿಯೆಲ್ಲವೂ ಸಿಹಿಯೇ. ಆತನ ಗೆಲುವೆಲ್ಲ ಸಿಹಿ. ಅದರ ಫಲವೆಲ್ಲವೂ ಸಿಹಿ.

ಆದ್ದರಿಂದಲೇ, ಕೃಷ್ಣನಿಗೆ ಸಂಬಂಧಿಸಿದ ಎಲ್ಲವೂ ಸಿಹಿ! ಮಧುರಾಷ್ಟಕದ ಸಾಲುಗಳನ್ನು ನಾನಿಲ್ಲಿ ಹೀಗೆ ಕನ್ನಡಕ್ಕೆ ಭಾಷಾಂತರಿಸಿ ‘ಸಿಹಿ’ಗಳ ಪಟ್ಟಿ ಮಾಡಿರುವುದು ನಿಮ್ಮ ತಲೆಯಲ್ಲೊಂದು ಚಿಂತನೆಯ ಕಿಡಿ ಹಚ್ಚಲಿಕ್ಕೆ. ಅದೇನೆಂದರೆ ‘ಸಿಹಿ’ ಎಂಬುದನ್ನು ನಾವು ನಾಲಗೆಯ ಅನುಭವಕ್ಕೆ ಬರುವ ರುಚಿಗಷ್ಟೇ ಬಳಸುವುದಲ್ಲ. ಕಣ್ಣುಗಳಿಂದ ನೋಡಿದ್ದೂ ಸಿಹಿಯಾಗಿ ಇರಬಹುದು. ಕಿವಿಗಳಿಂದ ಕೇಳಿದ್ದೂ ಸಿಹಿಯಾಗಿ ಇರಬಹುದು. ಮೂಗಿನಿಂದ ಆಘ್ರಾಣಿಸಿದ್ದೂ ಸಿಹಿಯಂತೆ ಭಾಸವಾಗ ಬಹುದು. ಸ್ಪರ್ಶಾನುಭವವೂ ಅನೇಕ ಸಲ ಸಿಹಿಯೇ ಆಗಬಲ್ಲದು. ಮೇಲೆ ವಿವರಿಸಿದ ಮಧುರಾಷ್ಟಕದ್ದೇ ಉದಾಹರಣೆ ತಗೊಳ್ಳಿ. ಅದರಲ್ಲಿ ಪಟ್ಟಿ ಮಾಡಿರುವ ಸಿಹಿಗಳಲ್ಲಿ ಹೆಚ್ಚಿನವೆಲ್ಲ ಬಾಯಿಯಿಂದ ಚಪ್ಪರಿಸುವ ಅಂದರೆ ನಾಲಗೆಗೆ ಅನುಭವವಾಗುವ ಸಿಹಿಗಳು ಅಲ್ಲವೇ ಅಲ್ಲ. ಆದರೂ ಅವೆಲ್ಲ ಸಿಹಿಯೇ!

ಮಧುರಾಷ್ಟಕವೇ ಆಗಬೇಕಂತಿಲ್ಲ, ಜನಪ್ರಿಯ ಕನ್ನಡ ಚಿತ್ರಗೀತೆಗಳನ್ನು ಉಲ್ಲೇಖಿಸಿ ಕೂಡ ಈ ತರ್ಕವನ್ನು ಪುಷ್ಟೀಕರಿಸಬಹುದು. ಮಧುರ ಎಂಬ ಪದ ಬರುವ ಒಂದಿಷ್ಟು ಚಿತ್ರಗೀತೆಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ. ಸತೀ ಸುಕನ್ಯಾ ಚಿತ್ರದ ‘ಮಧುರ ಮಧುರವೀ ಮಂಜುಳಗಾನ ಹೃದಯ ತಣಿಸುವ ಹೊಸ ತಾನ…’ ಅಲ್ಲಿ ಮಧುರವಾಗಿರುವುದು ಏನು? ಕಿವಿಗಳಿಗೆ ಅನುಭವವಾಗುವ ಮಂಜುಳ ಗಾನ. ಕಿವಿಗಳಿಗೆ ಆಗುವ ಆ ಹಿತಾನುಭವದಿಂದ ಹೃದಯವೂ ತಣಿಯುತ್ತದಂತೆ. ಸ್ಕೂಲ್
ಮಾಸ್ಟರ್ ಚಿತ್ರದ ‘ಅತಿ ಮಧುರ ಅನುರಾಗ ಜೀವನ ಸಂಧ್ಯಾರಾಗ ಸಮರಸದ ವೈಭೋಗ ಸಂಗ ಸಮಾಗಮ ರಾಗ…’ ಅಲ್ಲಿ ಮಧುರವಾಗಿರುವುದು ಜೀವನದ ಸಂಧ್ಯಾರಾಗವಾಗಿ ಬರುವ ಅನುರಾಗ. ಅನುರಾಗ ಚಿಗುರಿ ಅರಳತೊಡಗಿದ ಮೇಲೆ ಪ್ರೇಮಿಗಳಿಬ್ಬರ ಸಂಭಾಷಣೆ ಯಾವಾಗಲೂ ಮಧುರವಾಗಿಯೇ ಇರುವುದು.

ಬೇಕಿದ್ದರೆ ಧರ್ಮಸೆರೆ ಚಿತ್ರದ ಪ್ರೇಮಿಗಳನ್ನು ಕೇಳಿ: ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ…’ ಆದರೆ ಮಾತು ಬೆಳ್ಳಿ ಮೌನ ಬಂಗಾರ ಎಂಬಂತೆ ಸಂಭಾಷಣೆಯೊಂದೇ ಅಲ್ಲ, ಪ್ರೇಮಿಗಳಿಬ್ಬರ ನಡುವಿನ ಮೌನವೂ ಮಧುರವಾಗಬಲ್ಲದು! ‘ನಗುವ ನಯನ ಮಧುರ ಮೌನ… ಮಿಡಿವ ಹೃದಯ ಇರೆ ಮಾತೇಕೆ… ಹೊಸ ಭಾಷೆ ಇದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ?’ ಎಂದು ಕೇಳುತ್ತಾರೆ ಪಲ್ಲವಿ ಅನುಪಲ್ಲವಿ ಚಿತ್ರದ ಪ್ರೇಮಿಗಳು. ಇವೆಲ್ಲ ಹಾಡುಗಳು ತತ್‌ಕ್ಷಣಕ್ಕೆ ನೆನಪಾದವುಗಳು ಅಷ್ಟೇ.

ಹುಡುಕುತ್ತ ಹೋದರೆ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಮಧುರ ಎಂಬ ಪದ ಇದೆಯೆಂಬ ಕಾರಣಕ್ಕಲ್ಲ ಆ ಕಾಲದ ಚಿತ್ರಗೀತೆಗಳೆಲ್ಲ ಮಧುರವಾಗಿಯೇ ಇರುತ್ತಿದ್ದವು ಎನ್ನುವವರೂ ಇದ್ದಾರೆ. ಹತ್ತಿಪ್ಪತ್ತು ವರ್ಷಗಳ ಹಿಂದಿನವರೆಗೂ ‘ವಿವಿಧಭಾರತಿ’ಯಲ್ಲಿ ಸಂಜೆ ನಾಲ್ಕೂಕಾಲರಿಂದ ಐದೂವರೆತನಕ ಕನ್ನಡ, ತೆಲುಗು,
ತಮಿಳು, ಮಲಯಾಳಂ ಚಿತ್ರಗೀತೆಗಳ ಕಾರ್ಯಕ್ರಮ ಇರುತ್ತಿತ್ತು, ಅದರ ಹೆಸರಿದ್ದದ್ದೇ ‘ಮಧುರಗೀತಂ’ ಎಂದು!

ಮಧುರದಂತೆಯೇ ‘ಸಿಹಿ’ ಎಂಬ ಪದ ಬರುವ ಚಿತ್ರಗೀತೆಗಳನ್ನು ಬೇಕಾದರೂ ತೆಗೆದುಕೊಳ್ಳಿ. ಅಲ್ಲೆಲ್ಲ ಇರುವುದು ತಿನ್ನುವ ಸಿಹಿ ಅಲ್ಲವೇ ಅಲ್ಲ. ಪಂಚೇಂದ್ರಿಯ ಗಳೂ, ಜತೆಯಲ್ಲೇ ಮನಸ್ಸೂ ಮೆಲ್ಲುವ ಸಿಹಿ. ‘ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು… ಕೆನ್ನೆಗೆ ಗಲ್ಲಕೆ ಮತ್ತೊಂದು… ಕಂದಾ ಕೊಡುವೆಯಾ… ಚಿನ್ನದ ತೋಳಲಿ ನನ್ನ ಬಳಸುತಾ…’ ಎಂದು ನಾ ನಿನ್ನ ಮರೆಯಲಾರೆ ಚಿತ್ರದ ಹಾಡಿನಲ್ಲಿ, ‘ಸಿಹಿಮುತ್ತ ನೀಡಿ ಏನೋ ಮೋಡಿ ಮಾಡಿ ಅಂಗಾಂಗ ಝುಮ್ಮೆಂದು ಉನ್ಮಾದ ತಂದೇ…’ ಎಂದು ಅಜೇಯ ಚಿತ್ರದ ಹಾಡಿನಲ್ಲಿ, ‘ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ…’ ಎಂದು ಆ ದಿನಗಳು ಚಿತ್ರದ ಹಾಡಿನಲ್ಲಿ ಬರುವ ಸಿಹಿ ತಿನ್ನುವಂಥದ್ದೇ? ಖಂಡಿತ ಅಲ್ಲ.

ಅದು ಪ್ರೀತಿ-ಒಲವಿನ ಸಿಹಿ. ‘ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ… ಪ್ರೇಮವೇ ಕವನಾ ಮರೆಯದಿರು’ ಎನ್ನುವ ಒಲವಿನ ಉಡುಗೊರೆಯ ಸಿಹಿ. ಇದು ಕನ್ನಡಕ್ಕಷ್ಟೆ ಸೀಮಿತವೇನಲ್ಲ. ಹಿಂದೀ ಚಿತ್ರಗೀತೆಗಳಲ್ಲೂ ‘ತೇರೆ ಮೇರೆ ಹೋಟೊಂಪೆ ಮಿಠೆ ಮಿಠೆ ಗೀತ್ ಮಿತವಾ…’ದಂಥವುಗಳಿಕೆ ಲೆಕ್ಕವಿಲ್ಲ. ಬಿನಾಕಾ ಗೀತ್‌ಮಾಲಾದಲ್ಲಿ ಅಮೀನ್ ಸಯಾನಿ ಅದೆಷ್ಟು ಹಿಂದೀ ಹಾಡುಗಳನ್ನು ‘ಮೀಠೆ ಸುರೋಂ ಮೇ ಮೀಠೇ ಮೀಠೇ ಬೋಲ್ ಮೀಠಾ ಸಾ ಗಾನಾ’ ಎಂದು ಕೊಂಡಾಡಿಲ್ಲ!

ನನ್ನ ಉದ್ದೇಶ ಇಲ್ಲಿ ಚಿತ್ರಗೀತೆಗಳನ್ನು ಮೆಲುಕು ಹಾಕುವುದಲ್ಲ. ‘ಸಿಹಿ’ ನಮಗೆ ನಾಲಗೆಯ ರುಚಿ ಮಾತ್ರವಲ್ಲ, ಬೇರೆ ಇಂದ್ರಿಯಗಳಿಗೂ, ಅದರಿಂದಾಗಿ  ಮಿದುಳಿಗೂ ಮನಸ್ಸಿಗೂ ಆಗುವ ಅನುಭವದ ಅಭಿವ್ಯಕ್ತಿ ಅಂತ ವ್ಯಾಖ್ಯಾನಿಸುವುದು ಅಷ್ಟೇ. ಇಂಗ್ಲಿಷ್‌ನಲ್ಲಿ ‘ಸ್ವೀಟ್’ ಪದ ಯಾವ್ಯಾವ ಸಂದರ್ಭಗಳಲ್ಲಿ ಬಳಕೆ ಯಾಗುತ್ತದೆಂದು ಗಮನಿಸಿದರೂ ಇದು ನಮಗೆ ಅರ್ಥವಾಗುತ್ತದೆ. ಯಾವ ವಾಸನೆಯಿಂದ ಮೂಗಿಗೂ ಮನಸ್ಸಿಗೂ ಹಿತಾನುಭವವಾಗುತ್ತದೆಯೋ ಅದು ಸ್ವೀಟ್ ಸ್ಮೆಲ್. ಅದು ಬೇಕಿದ್ದರೆ ಶಾಂಪೂ ಪರಿಮಳವಿರಲಿ ಅಥವಾ ಮೊದಲ ಮಳೆಯ ಮಣ್ಣಿನ ಪರಿಮಳವೇ ಇರಲಿ. ಯಾವ ಧ್ವನಿಯು ಕಿವಿಗಳಿಗೂ ಮನಸ್ಸಿಗೂ ಹಿತವೆನಿಸುತ್ತದೆಯೋ ಅದು ಸ್ವೀಟ್ ವಾಯ್ಸ್ ಆಗುತ್ತದೆ. ಲತಾ ಮಂಗೇಶ್ಕರ್‌ದಾದರೂ ಸರಿ, ‘ಐ ಲವ್ ಯೂ ರಸ್ನಾ’ ಎನ್ನುತ್ತಿದ್ದ ಜಾಹೀರಾತಿನ ಅಂಕಿತಾ ಝವೇರಿಯದಾದರೂ ಸರಿ.

ಅಂದಹಾಗೆ ಅಂತಹ ಪುಟ್ಟ ಹೆಣ್ಮಕ್ಕಳನ್ನು ಇಂಗ್ಲಿಷ್‌ನಲ್ಲಿ ‘ಸ್ವೀಟ್ ಲಿಟ್ಲ್ ಗರ್ಲ್’ ಎನ್ನುವುದಿದೆ. ಆಕೆ ಷೋಡಶಿಯಾದಾಗಿನ ಸಂಭ್ರಮ ಸಮಾರಂಭಕ್ಕೆ ‘ಸ್ವೀಟ್ ಸಿಕ್ಸ್‌ಟೀನ್’ ಎನ್ನುವುದಿದೆ. ಹೈಸ್ಕೂಲ್‌ನಲ್ಲಿರುವಾಗಲೇ ಪ್ರೇಮಾಂಕುರವಾಗಿ ಮುಂದೆ ಮದುವೆಯಾದರೆ ‘ಹೈಸ್ಕೂಲ್ ಸ್ವೀಟ್‌ಹಾರ್ಟ್’ ಎನ್ನುವುದಿದೆ.
ಗುಡ್‌ನೈಟ್‌ ನೊಂದಿಗೆ ಹಾರೈಕೆಯಲ್ಲಿ ‘ಸ್ವೀಟ್ ಡ್ರೀಮ್ಸ್’ ಸೇರಿಕೊಳ್ಳುತ್ತದೆ. ಎಲ್ಲವೂ ನೆನಪಿನ ಸುರುಳಿಯಲ್ಲಿ ಸೇರಿಕೊಂಡಾಗ ‘ಸ್ವೀಟ್ ಮೆಮರೀಸ್’ ಆಗುತ್ತದೆ. ಇವ್ಯಾವುವೂ ತಿನ್ನುವ ಸ್ವೀಟ್ ಅಲ್ಲವೆಂಬುದನ್ನು ನಾವು ಗಮನಿಸಬೇಕು. ಸಿಹಿತಿಂಡಿ ಇಷ್ಟವುಳ್ಳವರನ್ನು ‘ಸ್ವೀಟ್ ಟೂಥ್’ ಎನ್ನುವಾಗಿನ ಸ್ವೀಟ್ ಕೂಡ ಅದೇ
ರೀತಿಯದು ಎಂದು ತಿಳಿಯಬೇಕು.

ಒಟ್ಟಿನಲ್ಲಿ ವಿಷಯ ಏನೆಂದರೆ, ನಿಜವಾಗಿ ನಾಲಗೆಗೆ ಸಿಹಿ ರುಚಿಯಾದಾಗ ನಮ್ಮ ಮಿದುಳಿನಲ್ಲಿ ಯಾವ ಚೋದಕಗಳು ಸ್ರವಿಸುತ್ತವೆಯೋ- ಅದು ಡೋಪಮಿನ್ ಇರಬಹುದು ಅಥವಾ ಅದರಂಥ ಬೇರಾವುದೇ ಹಾರ್ಮೋನ್ ಇರಬಹುದು- ನಾವು ಮಧುರ, ಸಿಹಿ, ಸ್ವೀಟ್ ಅಂತೆಲ್ಲ ಬಣ್ಣಿಸುವ ಅನುಭೂತಿಯ ವೇಳೆಯೂ ಅವೇ ಚೋದಕಗಳು ಸ್ರವಿಸುತ್ತವೆ. ಹಾಗಾಗಿಯೇ ಮನಸ್ಸು ಅದನ್ನು ಮಧುರ, ಸಿಹಿ, ಸ್ವೀಟ್ ಅಂತಲೇ ಗುರುತಿಸುತ್ತದೆ.

ಅದೇನೂ ಐಹಿಕ ಸುಖಭೋಗವೇ ಆಗಬೇಕಂತಿಲ್ಲ, ಪಾರಮಾರ್ಥಿಕವಾಗಿ ದೇವರ ನಾಮವೇ ಅತ್ಯಂತ ಸಿಹಿ ಅಂತನಿಸುವ ಹಂತವನ್ನೂ ನಾವು ತಲುಪುತ್ತೇವೆ. ‘ಅಮೃತಾಹುನೀ ಗೋಡ ನಾಮ ತುಝೇ ದೇವಾ…’ ಸಂತ ನಾಮದೇವರ ಮರಾಠಿ ಅಭಂಗ ನನಗಿಲ್ಲಿ ನೆನಪಾಗುತ್ತಿದೆ. ‘ಅಮೃತಕ್ಕು ತಾ ರುಚಿ ನಾಮ ನಿನ್ನ
ದೇವಾ…’ ಎಂದು ಅದು ಕನ್ನಡ ಚಿತ್ರಗೀತೆಯಾಗಿಯೂ ಬಂದಿದೆ. ‘ಕೇಶವಾ ಮಾಧವಾ ತುಝ್ಯಾ ನಾಮಾತ ರೇ ಗೋಡವಾ’ ಇನ್ನೊಂದು ಜನಪ್ರಿಯ ಮರಾಠಿ ಭಕ್ತಿಗೀತೆ, ಕೇಶವ ಮಾಧವ ಎಂಬ ಹೆಸರುಗಳೇ ಅತ್ಯಂತ ಸಿಹಿ ಎನ್ನುವಂಥದ್ದು. ಮರಾಠಿಯಲ್ಲಿ ಗೋಡ ಅಂದರೆ ಸಿಹಿ. ‘ತೀಳ್-ಗೂಡ್ ಘ್ಯಾ, ಗೋಡ ಗೋಡ
ಬೋಲಾ’ ಅನ್ನೋದು ಸಂಕ್ರಾಂತಿಯಂದು ಎಳ್ಳುಬೆಲ್ಲ ಹಂಚುವಾಗ.

ಬೆಲ್ಲ ಎಂದಾಗ ನೆನಪಾಯ್ತು, ಪುರಂದರದಾಸರೆನ್ನುತ್ತಾರೆ: ‘ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ| ಬಿಲ್ಲಾಗಿ ಇರಬೇಕು ಬಲ್ಲವರೊಳಗೆ| ಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕು| ಬೆಲ್ಲವಾಗಿರಬೇಕು ಬಂಧುಜನರೊಳಗೆ…’ ಇಲ್ಲಿ ದಾಸರು ಬೆಲ್ಲ ಎಂದಿದ್ದು ನಮ್ಮ ಸ್ವಭಾವ ಗುಣನಡತೆ ಯಾವಾಗಲೂ ಇನ್ನೊಬ್ಬರಿಗೆ ಸಿಹಿ ಆಗಿರಬೇಕು ಎಂಬ ಅರ್ಥದಲ್ಲಿ.

ಮಧುರ ಅಥವಾ ಸಿಹಿ ಎಂಬ ಅನುಭೂತಿಯ ವೇಳೆ ನಮ್ಮ ಮಿದುಳಿನಲ್ಲಿ ಯಾವ ಚೋದಕಗಳು ಸ್ರವಿಸುತ್ತವೆ, ನರಮಂಡಲದಲ್ಲಿ ಯಾವ ಪ್ರಕ್ರಿಯೆ ನಡೆಯುತ್ತದೆ ಅಂತೆಲ್ಲ ಜೀವವಿಜ್ಞಾನಿಗಳೂ, ಮನಃಶಾಸ್ತ್ರಜ್ಞರೂ ಸಂಶೋಧನೆಗಳಿಂದ ತಿಳಿದುಕೊಂಡಿದ್ದಾರೆ. ಆದರೆ ಅವರಿಗಿಂತಲೂ ಮುಂಚೆ ಕವಿಕುಲಗುರು ಕಾಳಿದಾಸನು ಅಭಿeನ ಶಾಕುಂತಲಮ್ ನಾಟಕದ ಒಂದು ಪದ್ಯದಲ್ಲಿ ಇದನ್ನು ವಿವರಿಸಿದ್ದಾನೇನೋ ಅಂತನಿಸುತ್ತದೆ. ಅದು ನಾಟಕದ ಐದನೆಯ ಅಂಕದಲ್ಲಿ ಬರುವ ಒಂದು ಪದ್ಯ. ‘ರಮ್ಯಾಣಿ ವೀಕ್ಷ್ಯ ಮಧುರಾಂಶ್ಚ ನಿಶಮ್ಯ ಶಬ್ದಾನ್| ಪರ್ಯುತ್ಸುಕೋ ಭವತಿ ಯತ್ಸುಖಿತೋಧಿಪಿ ಜಂತುಃ| ತಚ್ಚೇತಸಾ ಸ್ಮರತಿ ನೂನಮ ಬೋಧಪೂರ್ವಂ| ಭಾವಸ್ಥಿರಾಣಿ ಜನನಾಂತರಸೌಹೃದಾನಿ’ ಎಂದು ಬರುತ್ತದೆ.

ಅದರ ಅರ್ಥ: ‘ರಮ್ಯವಾದ ದೃಶ್ಯಗಳನ್ನು ನೋಡಿ, ಮಧುರವಾದ ಶಬ್ದಗಳನ್ನು ಕೇಳಿ, ಸುಖದಿಂದ ಇರುವ ಮನುಷ್ಯನು ಕೂಡ ಒಂದೊಮ್ಮೆ ಉತ್ಕಂಠಿತನಾಗು ತ್ತಾನೆ. ಪ್ರಾಯಶಃ ಜನ್ಮಾಂತರದ ಸಂಬಂಧಗಳು ಮನಸ್ಸಿನಲ್ಲಿ ನೆಲೆಯೂರಿ ಆತನಿಗೆ ನೆನಪಾಗುತ್ತವೆ. ತನಗೆ ಈ ಮೊದಲು ಅನುಭವಕ್ಕೆ ಬಾರದೇ ಇರತಕ್ಕಂಥ ವಿಷಯಗಳನ್ನು ಆತ ಮನಸ್ಸಿನಲ್ಲಿ ಸ್ಮರಿಸಿಕೊಳ್ಳುತ್ತಾನೆ.’ ಅದು ದುಷ್ಯಂತನೇ ಹೇಳಿಕೊಳ್ಳುವ ಪದ್ಯ. ಆಗ ಅವನು ಶಕುಂತಲೆಯನ್ನು ಸಂಪೂರ್ಣವಾಗಿ ಮರೆತ ಸ್ಥಿತಿಯಲ್ಲಿರುತ್ತಾನೆ.

ಹಾಗಿದ್ದರೂ ಏನೋ ಒಂದು ಅನಿರ್ವಚನೀಯ ಚಡಪಡಿಕೆ ಆತನನ್ನು ಬಾಧಿಸುತ್ತಲೇ ಇರುತ್ತದೆ. ಅದಕ್ಕೆ ಸರಿಯಾಗಿ ಒಮ್ಮೆ ಅಶರೀರವಾಣಿಯೊಂದು ‘ಮಾವಿನ ಚಿಗುರನ್ನು ಯಥೇಚ್ಛ ಚುಂಬಿಸಿ ಈಗ ಕಮಲದೊಳಗೆ ನೆಲೆಸಿರುವ ದುಂಬಿಯೇ, ಅದು ಹೇಗೆ ನೀನು ಮಾವಿನ ಚಿಗುರನ್ನು ಮರೆತೆ?’ ಎಂಬ ಅರ್ಥ ಬರುವ
ಶ್ಲೋಕವನ್ನು ದುಷ್ಯಂತನನ್ನು ಕೆಣಕಲಿಕ್ಕೆಂದೇ ಹೇಳಿತೇನೋ ಎಂಬಂತೆ ಹೇಳಿರುತ್ತದೆ. ಆಗ ದುಷ್ಯಂತನ ಬಾಯಿಯಿಂದ ಬರುವ ಪದ್ಯವದು. ನಾವಾದರೂ ಅಷ್ಟೇ. ಮಧುರ, ಸಿಹಿ, ಸ್ವೀಟ್ ಅಂತ ಏನೇನನ್ನು ಗುರುತಿಸುತ್ತೇವೋ ಅವೆಲ್ಲದರೊಡನೆ ಹಳೆಯ ದಿನಗಳದು- ಹೆಚ್ಚಾಗಿ ಬಾಲ್ಯದ್ದೇ- ಏನೋ ಒಂದು ನೆನಪು
ಅಂಟಿಕೊಂಡದ್ದಿರುತ್ತದೆ. ಅದು ಜಾಗೃತವಾಗಿ ಆ ನೋಟ, ಆ ಧ್ವನಿ, ಆ ಪರಿಮಳ, ಆ ಸ್ಪರ್ಶ ಮಧುರಾತಿಮಧುರ ಅಂತನಿಸುತ್ತದೆ.

ಈ ಮಾಧುರ್ಯವನ್ನು ನಮ್ಮ ಸನಾತನ ಋಷಿಮುನಿಗಳು ಯಾವ ಔನ್ನತ್ಯಕ್ಕೇರಿಸಿದ್ದಾರೆ ಎಂದು ಅರಿಯಬೇಕಾದರೆ ಋಗ್ವೇದದ ಮಹಾನಾರಾಯಣೋ ಪನಿಷತ್‌ನಲ್ಲಿ ಬರುವ ‘ತ್ರಿಸುಪರ್ಣ ಸೂಕ್ತ’ದ ಕೆಲವು ಭಾಗಗಳನ್ನು ಗಮನಿಸಬೇಕು. ತ್ರಿಸುಪರ್ಣ ಸೂಕ್ತ ವನ್ನು ಸಾಮಾನ್ಯವಾಗಿ ಭೋಜನಕ್ಕಿಂತ ಮೊದಲು ಪಠಿಸುವುದು ವಾಡಿಕೆಯಾಗಿ ಬಂದಿದೆ.

‘ಓಂ ಬ್ರಹ್ಮಮೇತು ಮಾಮ್| ಮಧುಮೇತು ಮಾಮ್| ಬ್ರಹ್ಮಮೇವ ಮಧುಮೇತು ಮಾಮ್…’ ಎಂದು ಆರಂಭವಾಗುವ ಸೂಕ್ತದಲ್ಲಿ ಮಧು ಅಂದರೆ ಮಧುರ
ಅಥವಾ ಸಿಹಿ ಎಂದೇ ಅರ್ಥ. ಭೋಜನದಲ್ಲಿ ನಾಲಗೆಗೆ ಸಿಗುವ ಸಿಹಿ ಅಲ್ಲ! ಮತ್ತೇನು? ಮುಂದೆ ಸೂಕ್ತದಲ್ಲಿ ಬರುತ್ತದೆ: ‘ಮಧುವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ| ಮಾಽರ್ನಃ ಸಂತ್ವೋಷಧಿಃ| ಮಧುನಕ್ತಮುತೋಷಸಿ ಮಧುಮತ್‌ಪಾರ್ಥಿವಂರಜಃ| ಮಧುದ್ಯೌರಸ್ತುನಃ ಪಿತಾ| ಮಧುಮಾನ್ನೋ ವನಸ್ಪತಿ ರ್ಮಧುಮಾನ್ ಅಸ್ತು ಸೂರ್ಯಃ| ಮಾಧಿರ್ಗಾವೋ ಭವಂತು ನಃ|’ ಅದರ ಅರ್ಥ: ‘ಮಧುರವಾದ ಅಂದರೆ ಹಿತವಾದ ಗಾಳಿಯು ಬೀಸಲಿ. ನದಿಗಳಲ್ಲಿ ಮಧುರವಾದ ನೀರು ಹರಿಯಲಿ.

ವನಸ್ಪತಿಗಳೆಲ್ಲ ನಮಗೆ ಮಾಧುರ್ಯವನ್ನುಂಟು ಮಾಡಲಿ. ರಾತ್ರಿಯೂ ಮಧುರವಾಗಿರಲಿ, ಉಷಃಕಾಲವೂ ಮಧುರವಾಗಿರಲಿ. ಭೂಮಿಯಿಂದ ಮೇಲಕ್ಕೆ ಬರುವ ಧೂಳು ಸಹ ಧುರವಾದದ್ದೇ ಇರಲಿ. ಪರಮಾತ್ಮನೇ, ಆಕಾಶವೂ ಶುಭ್ರವಾಗಿದ್ದು, ಸೂರ್ಯನ ಹಿತವಾದ ಬೆಳಕು ಮಧುರಭಾವವನ್ನು ನೀಡಲಿ. ವೃಕ್ಷಗಳು ಫಲ ಪುಷ್ಪಗಳಿಂದ ಸಮೃದ್ಧವಾಗಿ ನಮಗೆ ಮಾಧುರ್ಯ ಒದಗಲಿ. ಧೇನುಗಳು ನಮಗೆ ಮಧುರವಾದ ಹಾಲನ್ನು ಕೊಡುವಂತಾಗಲಿ…’ ಎಂದು. ವೇದಾರ್ಥ ಜ್ಞಾನ ದಿಂದ, ಮಧುಶಬ್ದಿತ ಆನಂದರೂಪ ಭಗವಜ್ಜ್ಞಾನದಿಂದ ಮತ್ತು ಬ್ರಹ್ಮಸಂಬಂಧಿಯಾದ ಜ್ಞಾನದಿಂದ ನಮ್ಮೆಲ್ಲರನ್ನೂ ಶಕ್ತಿವಂತರನ್ನಾಗಿಸು.

ನಮಗೆಲ್ಲರಿಗೂ ಸೌಭಾಗ್ಯವನ್ನು ನೀಡು. ದುಃಸ್ವಪ್ನಸಂಬಂಧಿಯಾದ ಅನಿಷ್ಟವನ್ನು ದೂರ ಮಾಡು. ನಮಗೆ ಮಂಗಲ ಉಂಟಾಗುವಂತೆ ಮಾಡು ಎಂದು ಭಗವಂತನಲ್ಲಿ ಮಾಡುವ ಪ್ರಾರ್ಥನೆ. ಹೀಗೆ ಲೋಕಕ್ಕೆಲ್ಲ ಸಿಹಿಯನ್ನೇ ಬಯಸುವ ಮನಸ್ಸಿಗಿಂತ, ಸಂಸ್ಕಾರಕ್ಕಿಂತ, ಧರ್ಮಕ್ಕಿಂತ, ಜೀವನಪದ್ಧತಿಗಿಂತ, ಅಂದರೆ
ಒಟ್ಟಾರೆಯಾಗಿ ಸನಾತನ ಭಾರತೀಯ ಸಂಸ್ಕೃತಿಗಿಂತ ಹೆಚ್ಚಿನ ‘ಸಿಹಿ’ ಇನ್ನೇನು ಬೇಕು!?