ಕ್ರಿಯಾಲೋಪ
ನಿತ್ಯಾನಂದ ಹೆಗಡೆ, ಮೂರೂರು
ಕರ್ನಾಟಕದಲ್ಲಿ ಬಹಳ ಹಿಂದೆ, ಅಂದರೆ ಗೋವಿಂದೇಗೌಡರು ಶಿಕ್ಷಣ ಮಂತ್ರಿಯಾಗಿದ್ದ ಕಾಲದಲ್ಲಿ ಪಿಯುಸಿ ವಿಭಾಗದ ಕಾಯಕಲ್ಪವಾದುದು ಪ್ರಾಯಶಃ ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ. ಅವರ ತರುವಾಯದಲ್ಲಿ ಹಲವರು ಶಿಕ್ಷಣ ಮಂತ್ರಿಗಳಾದರೂ, ಅವರ‍್ಯಾರೂ ಗಣನೀಯ ತಜ್ಞರು ಆಗಿಲ್ಲದವರು, ಅನುಭವ ವಿಲ್ಲದವರು ಎಂದರೆ ಸತ್ಯಕ್ಕೆ ದೂರವಾಗದು.
ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಧಾನ ಘಟ್ಟ ಎಂದರೆ ಎಸ್‌ಎಸ್ ಎಲ್‌ಸಿ. ಹತ್ತನೇ ತರಗತಿಯ ಅಂಕಪಟ್ಟಿಯೂ ಅಷ್ಟೇ ಮಹತ್ವದ್ದು. ವಿದ್ಯಾರ್ಥಿಯ ಹುಟ್ಟಿದ ದಿನಾಂಕದ ದೃಢೀಕರಣಕ್ಕೆ ಅದು ಮುಖ್ಯ ದಾಖಲೆಯಾಗಿರುತ್ತದೆ. ವಿದ್ಯಾರ್ಥಿಯು ಮುಂದೆ ಆಯ್ಕೆ ಮಾಡಿಕೊಳ್ಳುವುದು ವಿಜ್ಞಾನ ವಿಭಾಗವನ್ನೋ, ಕಲೆ ಅಥವಾ ವಾಣಿಜ್ಯ ವಿಭಾಗವನ್ನೋ ಎಂಬುದು ಇಲ್ಲಿನ ಅಂಕ ಹಾಗೂ ಆತನ ಆಸಕ್ತಿಯ ಆಧಾರದಲ್ಲಿರುತ್ತದೆ. ಇನ್ನು ಎರಡನೆಯ ಪ್ರಮುಖ ಘಟ್ಟವೆಂದರೆ ದ್ವಿತೀಯ ಪಿಯುಸಿ. ಆತ ವಿಜ್ಞಾನ ವಿದ್ಯಾರ್ಥಿಯಾಗಿದ್ದಲ್ಲಿ ಇಲ್ಲಿಂದಲೇ ಆಯ್ಕೆಯ ಕವಲನ್ನು ಹೊಂದಿ ನಡೆಯುತ್ತಾನೆ.
ಪ್ರಧಾನವಾಗಿ ಎಂಜಿನಿಯರಿಂಗ್ ಅಥವಾ ಮೆಡಿಕಲ್, ಆರ್ಕಿಟೆಕ್ಚರ್, ಬಿಎಸ್‌ಸಿ ಹೀಗೆ ಹಲವು ಮಜಲಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ ಅಥವಾ ಒಗ್ಗಿಸಿ
ಕೊಳ್ಳುತ್ತಾನೆ. ಇದರಲ್ಲೂ ಮುಖ್ಯವಾಗಿ ‘ಕಾಮನ್ ಎಂಟ್ರೆನ್ಸ್ ಟೆಸ್ಟ್’ (ಸಿಇಟಿ) ಬರೆದು, ಅದರ ಹಾಗೂ ಪಿಯುಸಿ ಆಧರಿತ ಅಂಕಗಳ ಬಲದಲ್ಲಿ ಮುಂದಿನ ಹಂತಕ್ಕೆ ತೆರಳುತ್ತಾನೆ. ಹೀಗಾಗಿ, ಹತ್ತನೆಯ ಮತ್ತು ಹನ್ನೆರಡನೆಯ ತರಗತಿಗಳು ವಿದ್ಯಾರ್ಥಿಯ ಬದುಕಿಗೆ, ಭವಿಷ್ಯಕ್ಕೆ ತಳಹದಿಯಾಗಿರುವಂಥವು.
ಕಳೆದ ಕೆಲ ವರ್ಷಗಳಿಂದ, ಒಂದೋ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಬಹಿರಂಗವಾಗುವುದು ಅಥವಾ ನಿಗದಿತ ವಿಷಯದ ಪಠ್ಯಕ್ರಮದ ಹೊರತಾದ ಪ್ರಶ್ನೆಗಳು ಎದುರಾಗುವುದು ಪದೇಪದೆ ಕೇಳಿಬರುತ್ತಿರುವ ಸಂಗತಿಯಾಗಿವೆ.
ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದರಿಂದ ಮೊದಲ್ಗೊಂಡು ಪರೀಕ್ಷಾ ಕೇಂದ್ರದ ಮುಖ್ಯಸ್ಥನಾಗುವ ಮತ್ತು ಮೌಲ್ಯ ಮಾಪಕನಾಗುವವರೆಗಿನ ವಿವಿಧ ಹಂತಗಳಲ್ಲಿ ನಾನೊಬ್ಬ ಅನುಭವಿಯಾಗಿರುವುದರಿಂದ, ಈ ಹಿನ್ನೆಲೆಯಲ್ಲಿ ಸಹಜ ವಾಗಿಯೇ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆ ಕುರಿತಾಗಿ ಇಲ್ಲಿ ಅವಲೋಕಿಸೋಣ. ಮೊದಲಿಗೆ, ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದು. ಇಲ್ಲಿ ಯಾವನೋ ದಿಢೀರಂತ ಎಲ್ಲಿಂದ ಲೋ ಒಂದು ಪ್ರಶ್ನೆಪತ್ರಿಕೆ ತಂದು, ಮುದ್ರಿಸಲು ಒಗೆದು ಹೋಗುವುದಿಲ್ಲ.
ಆಯಾ ಜಿಲ್ಲೆಯ ಪ್ರಮುಖ/ಆಯ್ದ ಪರಿಣತ ಉಪನ್ಯಾಸಕರನ್ನು ಕರೆದು, ಅವರಲ್ಲಿಯೂ ಅನುಭವವುಳ್ಳ ಮೂವರನ್ನು ಗೌಪ್ಯವಾಗಿ ಕೂರಿಸಿ, ಬಿಗಿ ಬಂದೋಬಸ್ತಿನಲ್ಲಿ ಮೊದಲು ಒಂದು ಪ್ರಶ್ನೆಪತ್ರಿಕೆಯ ಬ್ಲೂಪ್ರಿಂಟ್ ತಯಾರಿಸುತ್ತಾರೆ. ಅದಕ್ಕೂ ಮೊದಲೇ ಅದಕ್ಕೊಂದು ಕಾರ್ಯಾಗಾರವೂ ಆಗಿರು ತ್ತದೆ. ಈ ಬ್ಲೂಪ್ರಿಂಟ್‌ಗಳಲ್ಲಿ ಇಡೀ ಸಿಲಬಸ್ ಒಳಗೊಳ್ಳುವ ಹಾಗೆ ಪ್ರಶ್ನೆಗಳ ಆಯ್ಕೆ, ಅದರಲ್ಲೂ ಕಠಿಣ ಪ್ರಶ್ನೆಗಳೆಷ್ಟು, ಸಾಧಾರಣ ಪ್ರಶ್ನೆಗಳೆಷ್ಟು, ಸುಲಭವಾದ ಪ್ರಶ್ನೆಗಳೆಷ್ಟನ್ನು ಕೇಳಬೇಕು ಎಂಬ ಸೂಚನೆಯೊಂದಿಗೆ ಕಳೆದ ಆರೆಂಟು ವರ್ಷಗಳ (ಇದೇ ಪಠ್ಯ ಕ್ರಮದ) ವಾರ್ಷಿಕ ಪ್ರಶ್ನೆಪತ್ರಿಕೆಗಳನ್ನು ಕ್ರೋಡೀಕರಣ ಮಾಡಿ, ಪ್ರಶ್ನೆಗಳ ಪುನರಾವರ್ತನೆಯಾಗದ ರೀತಿಯಲ್ಲಿ ಅವಲೋಕಿಸಿ ಮೂರು ಪ್ರಶ್ನೆಪತ್ರಿಕೆಗಳನ್ನು ಬೇರೆ ಬೇರೆಯಾಗಿ ತಯಾರಿಸಿ
ಮೇಲಧಿಕಾರಿಗೆ ಒಪ್ಪಿಸಲಾಗುತ್ತದೆ.
ಅಲ್ಲಿಗೆ, ಆಯಾ ಉಪನ್ಯಾಸಕರಿಗೆ ಅವರವರ ಪ್ರಶ್ನೆಪತ್ರಿಕೆಯ ವಿಚಾರವಷ್ಟೇ ತಿಳಿದಿರುತ್ತದೆಯೇ ವಿನಾ, ಉಳಿದವರ ಪ್ರಶ್ನೆಗಳು ಗೊತ್ತಿರುವುದಿಲ್ಲ.
ನಂತರದಲ್ಲಿ ಇನ್ನೊಂದು ಗುಪ್ತವಾದ ಕಮಿಟಿಯು, ಇನ್ನೂ ಅರಿವು-ಅನುಭವವುಳ್ಳ ಹಿರಿಯ ಉಪನ್ಯಾಸಕರನ್ನು ಕೂರಿಸಿ, ಹಿಂದೆ ಉಪನ್ಯಾಸಕರು ನೀಡಿದ ಮೂರೂ ಪ್ರಶ್ನೆಪತ್ರಿಕೆಗಳನ್ನು ಕ್ರೋಡೀಕರಿಸಿ ಯೋಗ್ಯವಾದುದು ಯಾವುದು ಅಂತ ಚರ್ಚಿಸಿ, ಸಿಲಬಸ್‌ಗಳ ಆಧಾರದಲ್ಲಿ ಕೊನೆಯ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ. ನಂತರ ಅದನ್ನು ಕಟ್ಟುನಿಟ್ಟಿನ ಭದ್ರತೆಯಲ್ಲಿ ಆಯುಕ್ತರ ಕಚೇರಿಗೆ ತಲುಪಿಸಲಾಗುತ್ತದೆ. ಅಲ್ಲಿಂದ ಅತಿಗೌಪ್ಯದಲ್ಲಿ ಮುದ್ರಣಕ್ಕೆ ಕಳಿಸಲ್ಪಟ್ಟು, ಮುದ್ರಕನು ಯಾವುದೇ ವಿಷಯ ತಜ್ಞನಾಗಿಲ್ಲ ಎಂಬುದನ್ನು ಖಾತ್ರಿಪಡಿಸಿ ಮುದ್ರಿಸಲಾಗುತ್ತದೆ.
ಅಲ್ಲಿಗೆ ಒಂದು ಹಂತದ ಕೆಲಸ ಮುಗಿಯುತ್ತದೆ. ಈ ನಡುವೆ, ಇಲ್ಲಿನ (ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ) ಯಾವ ಉಪನ್ಯಾಸಕರಿಂದಲೂ ತಪ್ಪುನಡೆ ನಡೆವ ಸಾಧ್ಯತೆಗಳಿರುವುದಿಲ್ಲ. ಎಲ್ಲರೂ ಮೂರ‍್ನಾಲ್ಕು ಹಂತದಲ್ಲಿ ಸಿಲಬಸ್‌ಗಳ ಪರಿಧಿಯೊಳಗೇ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿರುತ್ತಾರೆ. ಇವು ಎಸ್‌ಎಸ್ ಎಲ್‌ಸಿ, ಪಿಯುಸಿ ಹಾಗೂ ಸಿಇಟಿ ಮೊದಲಾದ ಪ್ರಮುಖ ಪ್ರಶ್ನೆಪತ್ರಿಕೆಗಳ ವ್ಯವಹಾರದಲ್ಲೂ ಇರುವ ನಡಾವಳಿಗಳು. ಎಲ್ಲಿಯೂ ಪಿಯುಸಿ ಪಠ್ಯದ ಹೊರತಾದ ಪ್ರಶ್ನೆಗಳು ಬರುವ ಸಾಧ್ಯತೆಗಳಿರುವುದಿಲ್ಲ. ಸಿಇಟಿ ಪ್ರಶ್ನೆಪತ್ರಿಕೆಗಳಂತೂ ಬಹುತೇಕ ಪಿಯುಸಿ ಪಠ್ಯಕ್ರಮ ಹಾಗೂ ಕೆಲ ಎಸ್‌ಎಸ್‌ಎಲ್‌ಸಿ ಪಠ್ಯಗಳ ಮೇಲೆ ಕೇಂದ್ರೀಕೃತ ವಾಗಿರುತ್ತವೆ. ಈಗ ನೋಡಿದರೆ, ಸಿಇಟಿಯಲ್ಲಿ ಹತ್ತು ಹನ್ನೆರಡು ಅಂಕಗಳು ಪಠ್ಯಕ್ರಮದ ಹೊರತಾಗಿ ಬರುತ್ತವೆಂದರೆ, ಅದು ಹೇಗೆ ಮತ್ತು ಯಾವ ಹಂತದಲ್ಲಿ ಸಾಧ್ಯ ಅಂತ ತಿಳಿಯ ಬೇಕಾಗುತ್ತದೆ.
ಒಂದೋ ಕೊನೆಯ ಪ್ರಶ್ನೆಪತ್ರಿಕೆ ಕ್ರೋಡೀಕರಣ ಮಾಡುವವ ಸಿಲಬಸ್ ನೋಡದೆ ಕ್ರೋಡೀಕರಿಸಿರಬೇಕು, ಅದಕ್ಕೂ ಮೊದಲು ಮೊದಲಿನವರು ಕಣ್ಣು ಮುಚ್ಚಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರಬೇಕು ಅಂತಾಯಿತು. ಪ್ರತಿಯೊಬ್ಬ ಅಧಿಕಾರಿಯೂ ಪ್ರಾರಂಭಿಕ ಹಂತದಿಂದ ಕೊನೆಯವರೆಗೂ ಹೇರಳ ಸಂಭಾವನೆ
ಪಡೆದು, ಉಳಿಯಲು-ಉಣ್ಣಲು ಸವಲತ್ತು ಪಡೆದೂ ಇಂಥ ಹೇಯಕೆಲಸ ಮಾಡಿದರಷ್ಟೇ ಇಂಥ ತಪ್ಪಾಗಿರಲು ಸಾಧ್ಯ. ಇಲ್ಲಿ ಇನ್ನೊಂದೆರಡು ಪ್ರಶ್ನೆಗಳು ಉದ್ಭವಿಸುತ್ತವೆ- ಸಿಲಬಸ್ ಹೊರಗಿನ ಪ್ರಶ್ನೆ ಹೇಗೆ ನುಸುಳಿತೆಂಬ ಬಗ್ಗೆ ತನಿಖೆಯೂ ಆಗುವುದಿಲ್ಲವೇ? ಆಗಿ ಅವರ ಮೇಲೆ ಕಠಿಣವಾದ ಶಿಕ್ಷೆಯೂ
ಆಗುವುದೇ ಇಲ್ಲವೇ? ಈ ತಪ್ಪು ಘಟಿಸಿದ್ದೆಲ್ಲಿ ಅಂತ ವಿದ್ಯಾರ್ಥಿ ಗಳಿಗೆ, ಪಾಲಕರಿಗೆ ತಿಳಿಯುವುದೇ ಇಲ್ಲವೇ? ಮರುಪರೀಕ್ಷೆ ಮಾಡಲು ಅದೆಷ್ಟು ಹಣ ಖರ್ಚಾಗುವುದು ಅಥವಾ ಸುಮ್ಮನೇ ಗ್ರೇಸ್ ಮಾರ್ಕ್ಸ್ ಕೊಡುವುದರಿಂದ, ನಿಜವಾಗಿ ಓದಿದ ವಿದ್ಯಾರ್ಥಿಗೆ ಅದೆಷ್ಟು ಅನ್ಯಾಯವಾಗುವುದು ಎಂಬುದರ
ಸಾಮಾನ್ಯ ಪ್ರಜ್ಞೆಯೂ ಇವರಿಗಿರುವುದಿಲ್ಲವೇ? ಇಲ್ಲಿ ಕಾನೂನು ಕಠಿಣವಾಗಿಲ್ಲ. ಎಲ್ಲೋ ಯಾರೋ ತಪ್ಪು ಮಾಡಿ ಒಂದಷ್ಟು ದಂಡತೆತ್ತು ಪರಾರಿಯಾ ಗುತ್ತಾರೆ.
ಇನ್ನು ಮುಂದಾದರೂ ಇಂಥ ಬೇಜವಾಬ್ದಾರಿ ನಡೆಯ ದಂಥ, ಪ್ರಶ್ನೆಪತ್ರಿಕೆ ಬಹಿರಂಗಗೊಳ್ಳ ದಂಥ, ಒಮ್ಮೆ ಹಾಗಾದಲ್ಲಿ ಅವರ ವಿರುದ್ಧ ಕೈಗೊಂಡ ಕ್ರಮ ಏನೆಂಬುದು ಸಾರ್ವಜನಿಕರಿಗೆ ತಿಳಿಯುವಂಥ ವ್ಯವಸ್ಥೆಯಾಗ ಬೇಕಿದೆ. ಅಕ್ಷಮ್ಯ ಅಪರಾಧವನ್ನು ಕ್ಷಮಿಸುವ ಕೆಲಸವು ಯಾವ ಹಂತದಲ್ಲೂ ಆಗದಿರ ಲೆಂಬ ಆಶಯ ನನ್ನಂಥ ಲಕ್ಷಾಂತರ ಪಾಲಕರಿಗೆ ಇಲ್ಲದಿರದು, ಅಲ್ಲವೇ?
(ಲೇಖಕರು ಪದವಿಪೂರ್ವ ಶಿಕ್ಷಣ
ಇಲಾಖೆಯ ನಿವೃತ್ತ ಪ್ರಾಚಾರ್ಯರು)