Wednesday, 11th December 2024

ಪರೀಕ್ಷಾ ಪದ್ಧತಿ ವ್ಯವಸ್ಥಿತವಾಗಬೇಕಿದೆ

ಚರ್ಚಾ ವೇದಿಕೆ

ಪ್ರಸಾಸ್ ಜಿ.ಎಂ.

ಸ್ಪರ್ಧಾತ್ಮಕ ಪರೀಕ್ಷಾ ಪ್ರಪಂಚದಲ್ಲಿನ ಒಂದು ಸಮಸ್ಯೆಯೆಂದರೆ, ಒಂದೇ ದಿನ ಎರಡು ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡುವುದು. ಈ ವಿಷಯದಲ್ಲೂ ಯುಪಿಎಸ್‌ಸಿ ಭಿನ್ನ. ಕಾರಣ, ಒಂದು ವರ್ಷದಲ್ಲಿ ನೇಮಕ ಮಾಡಿಕೊಳ್ಳುವ ಪರೀಕ್ಷೆಗಳಿಗೆ ದಿನಾಂಕವನ್ನು ೬ ತಿಂಗಳು ಮೊದಲೇ ವೆಬ್‌ಸೈಟ್‌ನಲ್ಲಿ ಯುಪಿಎಸ್‌ಸಿ ಪ್ರಕಟಿಸುತ್ತದೆ.

ಎರಡು ವರ್ಷಗಳ ಹಿಂದೆ ಪಿಎಸ್‌ಐ ನೇಮಕ ಹಗರಣ ಬೆಳಕಿಗೆ ಬಂದಾಗ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕಾರಣ, ಆಗಿನ ದಿನಮಾನದಲ್ಲಿ ಕರ್ನಾಟಕ ರಾಜ್ಯದ ಪೊಲೀಸ್ ನೇಮಕ ವ್ಯವಸ್ಥೆಯು ಇಡೀ ದೇಶಕ್ಕೆ ಮಾದರಿಯಾಗಿತ್ತು. ನೇಮಕ ಪ್ರಕ್ರಿಯೆಯು ಅತಿ ಶೀಘ್ರವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿತ್ತು. ಬೇರೆ
ನೇಮಕ ಪ್ರಾಧಿಕಾರಗಳು ಸದಾ ಒಂದಿಲ್ಲೊಂದು ಸಮಸ್ಯೆ ಗಳಿಂದ ಸುದ್ದಿಯಲ್ಲಿದ್ದವು. ಯಾವಾಗ ಪಿಎಸ್‌ಐ ನೇಮಕ ಹಗರಣ ಬೆಳಕಿಗೆ ಬಂತೋ, ಸಾಕಷ್ಟು ಅಭ್ಯರ್ಥಿಗಳು ಸರಕಾರಿ ಹುದ್ದೆಯನ್ನು ಪಡೆಯಬೇಕೆಂಬ ತಮ್ಮ ಆಸೆಗೆ ತಿಲಾಂಜಲಿ ನೀಡಿದ್ದುಂಟು. ಆ ಮಟ್ಟಿಗೆ ಈ ಪಿಎಸ್‌ಐ ನೇಮಕ ಹಗರಣವು ಅಪಖ್ಯಾತಿಯನ್ನು ಗಳಿಸಿತ್ತು.

ಮತ್ತೊಂದೆಡೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ನೇಮಕ ಪರೀಕ್ಷೆಯೊಂದರಲ್ಲಿ ಕೆಲವು ಅಭ್ಯರ್ಥಿಗಳು ವಾಮಮಾರ್ಗ ಬಳಸಿ ಪರೀಕ್ಷೆಗೆ ಹಾಜರಾಗಿದ್ದನ್ನು, ಕೈಚಳಕ ತೋರಿಸಲು ಯತ್ನಿಸಿದ್ದನ್ನು ನಾವೆಲ್ಲ ಇತ್ತೀಚೆಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇವೆ. ಮೇಲಿನ ಈ ಎರಡೂ ಬೆಳವಣಿಗೆಗಳನ್ನು
ಸೂಕ್ಷ್ಮವಾಗಿ ಅವಲೋಕಿಸಿದಾಗ, ಸರಕಾರಿ ಹುದ್ದೆಗಳಿಗೆ ನೇಮಕ ಪರೀಕ್ಷೆ ನಡೆಸುವ ಸಂಸ್ಥೆಗಳು ಆಮೂಲಾಗ್ರವಾಗಿ ಬದಲಾಗಬೇಕಾಗಿದೆ ಮತ್ತು ಅದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂಬ ಅಭಿಪ್ರಾಯ ಹೊಮ್ಮಿದರೆ ಅಚ್ಚರಿಯಿಲ್ಲ.

ಕಾರಣ ಒಂದು ಕಾಲಕ್ಕೆ ಕರ್ನಾಟಕ ಪೊಲೀಸ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ನೇಮಕ ಪರೀಕ್ಷೆಗಳು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಲ್ಲಿ ಆ ಮಟ್ಟಿಗಿನ ನಂಬಿಕೆ ಗಳಿಸಿದ್ದವು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಅಖಿಲ ಭಾರತ ಮಟ್ಟದಲ್ಲಿನ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್ ಎಸ್ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಪ್ರತಿವರ್ಷ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳು ತ್ತದೆ. ಪಾರದರ್ಶಕತೆ, ನೇಮಕ ಪ್ರಕ್ರಿಯೆಯು ಕ್ಷಿಪ್ರವಾಗಿ ಸಂಪನ್ನಗೊಳ್ಳುವುದೂ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಕೇಂದ್ರ ಲೋಕಸೇವಾ ಆಯೋಗವು
ಇಡೀ ದೇಶದಲ್ಲಿ ಇಂದಿಗೂ ಒಳ್ಳೆಯ ಹೆಸರು ಪಡೆದುಕೊಂಡಿದೆ.

ಯುಪಿಎಸ್‌ಸಿ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸಂವಿಧಾನಕ್ಕೆ ಅಪಚಾರ ಮಾಡುವ ಒಂದೇ ಒಂದು ತಪ್ಪನ್ನೂ ಅದು ಮಾಡಿಲ್ಲವೆನ್ನುವುದು ಅದರ ಹೆಗ್ಗಳಿಕೆ. ರಾಜ್ಯ ಮಟ್ಟದಲ್ಲೂ ಈ ರೀತಿಯ ನೇಮಕ ಮಾಡಿಕೊಳ್ಳಲು ಸಂವಿಧಾನವೇ ರಾಜ್ಯ ಲೋಕಸೇವಾ ಆಯೋಗಗಳನ್ನು ಪ್ರತಿರಾಜ್ಯದಲ್ಲೂ ಸ್ಥಾಪಿಸಿದೆ. ಆದರೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕರ್ಮಕಾಂಡ ಹೇಳತೀರದು. ರಾಜ್ಯದಲ್ಲಿ ಈ ಹಿಂದೆ ಕೆಪಿಎಸ್‌ಸಿ ನಡೆಸುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆದುದನ್ನು ನಾವೆಲ್ಲಾ ಮಾಧ್ಯಮಗಳಲ್ಲಿ ಗಮನಿಸಿದ್ದೇವೆ.

ಇಂದಿಗೂ ಕೆಪಿಎಸ್‌ಸಿ ನಡೆಸುವ ನೇಮಕ ಪರೀಕ್ಷೆಗಳ ವಿಷಯದಲ್ಲಿ, ಅಧಿಸೂಚನೆ ಪ್ರಕಟಗೊಂಡ ದಿನದಿಂದ ಅಂತಿಮ ಆಯ್ಕೆಪಟ್ಟಿ ಪ್ರಕಟಿಸುವವರೆಗೆ ಹಲವು ವರ್ಷಗಳು ಕಳೆದುಹೋಗಿರುತ್ತವೆ. ಆಮೆಗತಿಯ ಈ ಪ್ರಕ್ರಿಯೆಯಿಂದಾಗಿ, ಯಾವುದಾದರೊಂದು ಸರಕಾರಿ ಹುದ್ದೆ ಪಡೆಯಬೇಕೆಂದು ಹಂಬಲಿಸುವ ಅಭ್ಯರ್ಥಿ
ಗಳ ಪಾಡು ಹೇಳತೀರದಂತಾಗುತ್ತದೆ. ಆದರೆ ಯುಪಿಎಸ್‌ಸಿ ವ್ಯವಸ್ಥೆ ಇದಕ್ಕಿಂತ ಭಿನ್ನವಾಗಿದೆ. ಕಾರಣ, ನೇಮಕದ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಒಂದರಿಂದ ಒಂದು ವರ್ಷ ಮೂರು ತಿಂಗಳೊಳಗೆ ಇಡೀ ಪ್ರಕ್ರಿಯೆಯನ್ನು ಅದು ಮುಗಿಸಿಬಿಡುತ್ತದೆ. ಹೀಗೆಯೇ ಶೀಘ್ರವಾಗಿ ಮತ್ತು ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ಮುಗಿಸುವ ವ್ಯವಸ್ಥೆಯಾಗಿ ಈಗಿರುವ ಕೆಪಿಎಸ್‌ಸಿ ಹಾಗೂ ಇನ್ನಿತರೆ ಸಂಸ್ಥೆಗಳು ರೂಪುಗೊಳ್ಳಬೇಕು.

ಸ್ಪರ್ಧಾತ್ಮಕ ಪರೀಕ್ಷಾ ಪ್ರಪಂಚದಲ್ಲಿನ ಮತ್ತೊಂದು ಸಮಸ್ಯೆಯೆಂದರೆ, ಒಂದೇ ದಿನ ಎರಡು ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡುವುದು. ಈ ವಿಷಯದಲ್ಲೂ
ಯುಪಿಎಸ್‌ಸಿ ಭಿನ್ನ. ಕಾರಣ, ಒಂದು ವರ್ಷದಲ್ಲಿ ನೇಮಕ ಮಾಡಿಕೊಳ್ಳುವ ಪರೀಕ್ಷೆಗಳಿಗೆ ದಿನಾಂಕವನ್ನು ೬ ತಿಂಗಳು ಮೊದಲೇ ವೆಬ್‌ಸೈಟ್‌ನಲ್ಲಿ ಯುಪಿಎಸ್‌ಸಿ ಪ್ರಕಟಿಸುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ದಿನ ೨ ಪರೀಕ್ಷೆಗಳನ್ನು ನಿಗದಿಮಾಡಿರುವುದು ಬೆಳಕಿಗೆ ಬಂದಿದೆ. ಈ ರೀತಿ ಮಾಡುವುದರಿಂದ ಅಸಂಖ್ಯಾತ ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷೆಯಿಂದ ವಂಚಿತರಾಗುತ್ತಾರೆ. ಒಂದೇ ದಿನ ಎರಡೂ ಪರೀಕ್ಷೆಗಳು
ನಡೆಯುವುದರಿಂದ ಯಾವ ಪರೀಕ್ಷೆಗೆ ಹಾಜರಾಗಬೇಕೆಂಬ ಗೊಂದಲದಲ್ಲಿ ಸಿಲುಕುತ್ತಾರೆ.

ಯಾವುದಾದರೊಂದು ಸರಕಾರಿ ಹುದ್ದೆ ಪಡೆಯಬೇಕೆಂಬ ಗುರಿಯಿಂದ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಪಾಸು ಮಾಡಬೇಕೆಂದು ತಯಾರಿ ನಡೆಸುತ್ತಿರುವರಿಗೆ, ಒಂದೇ ದಿನ ಎರಡೆರಡು ಪರೀಕ್ಷೆಗಳ ದಿನಾಂಕ ನಿಗದಿಯಾದರೆ ಹೀಗೆ ಗೊಂದಲವಾಗುವುದು ಸಹಜ. ಇದರಿಂದಾಗಿ, ಓದಿ ಮನನ
ಮಾಡಿಕೊಂಡ ವಿಷಯಗಳು ಮರೆತುಹೋಗುವ ಆತಂಕವೂ ಇರುತ್ತದೆ. ನೇಮಕ ಪ್ರಾಧಿಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಈ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡುವ ನಿಟ್ಟಿನಲ್ಲಿ ಅಖಿಲ ಭಾರತ ಮಟ್ಟದ ಏಕೀಕೃತ ವ್ಯವಸ್ಥೆಯೊಂದನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ.

ಇಲ್ಲವಾದಲ್ಲಿ, ಹಲವು ವರ್ಷಗಳಿಂದ ಕಷ್ಟಪಟ್ಟು ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳ ಶ್ರಮ ವ್ಯರ್ಥವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಸಂಬಂಧ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸ ಬೇಕು. ಈಗಾಗಲೇ ಪರೀಕ್ಷಾ ಹಗರಣ, ಪರೀಕ್ಷಾ ಅಕ್ರಮ ನಡೆದು, ಒಳ್ಳೆಯ ದಾರಿಯಲ್ಲಿ ತಯಾರಿ ನಡೆಸುವ ಅಭ್ಯರ್ಥಿ ಗಳ ಮಾನಸಿಕ ಸ್ಥೈರ್ಯ ಕುಗ್ಗಿ ಹೋಗಿದೆ. ಹೀಗಿರುವಾಗ ಒಂದೇ ದಿನ ಎರಡು ಪರೀಕ್ಷೆ ಬಂದರೆ, ಆ ಸಮಸ್ಯೆಯು ಅಭ್ಯರ್ಥಿಗಳನ್ನು ಮತ್ತಷ್ಟು ಸಮಸ್ಯೆಗಳಿಗೆ ತಳ್ಳುತ್ತದೆ.

(ಲೇಖಕರು ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಪ್ರೂಫ್ ರೀಡರ್)