Wednesday, 11th December 2024

ಆಕಾಶದಾಗೆ ಈತ ಮಾಯಗಾರನು

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್‌

ಕಳೆದ ವಾರದ ಅಂಕಣದಲ್ಲಿ ಟಾಕಾ ಏರ್‌ಲೈನ್ಸ್‌ನ ವಿಮಾನವೊಂದು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದ ಘಟನೆ ಹೇಳಿದ್ದೆ. ಕೊನೆಯಲ್ಲಿ, ಆ ವಿಮಾನ ನಡೆಸಿದ ಪೈಲಟ್ ಕ್ಯಾಪ್ಟನ್ ಕಾರ್ಲೋಸ್ ದರ್ದಾನೊಗೆ ಒಂದೇ ಕಣ್ಣು ಎಂದು ಹೇಳಿದ್ದೆ.

ಈ ವಿಷಯದ ಕುರಿತು ಕೆಲವು ತಮ್ಮ ಮನದಲ್ಲಿ ಮೂಡಿದ ಪ್ರಶ್ನೆಯನ್ನು ನನಗೆ ಬರೆದು ಕಳಿಸಿದ್ದರು. ಒಂದು ಕಣ್ಣಿರುವವರು ಕಾರು, ಬಸ್ಸು, ಲಾರಿಯಂಥ ವಾಹನ ನಡೆಸುವುದೇ ಕಷ್ಟ ವಾಗಿರುವಾಗ, ಒಂಟಿ ಕಣ್ಣಿನ ಒಬ್ಬ ವ್ಯಕ್ತಿ ವಿಮಾನ ಹಾರಿಸುತ್ತಾನೆ ಎಂದರೆ ಹೇಗೆ? ಅಷ್ಟಕ್ಕೂ ಅಂಥವರಿಗೆ ಪರವಾನಗಿ ಸಿಗುತ್ತದಾ? ಯಾರ ಮನಸ್ಸಿನದರೂ ಸ್ವಾಭಾವಿಕವಾಗಿ ಉದ್ಭವಿಸುವ ಪ್ರಶ್ನೆ ಇದು. ನಿಜವಾಗಿಯೂ ಕೇಳಲೇಬೇಕಾದ ಪ್ರಶ್ನೆಯೂ ಹೌದು.

ಸಾಮಾನ್ಯರು ಬಿಡಿ, ಕಾರ್ಲೋಸ್‌ನ ಕಥೆಯನ್ನು ಕೇಳಿದಾಗ ಅವನ ಮೊಮ್ಮಗಳೇ ಇದನ್ನು ನಂಬಿರಲಿಲ್ಲ. ಈ ವಿಷಯದಲ್ಲಿ ನನಗೆ ತಿಳಿದಷ್ಟನ್ನು ಹೇಳುತ್ತೇನೆ. ಏಕೆಂದರೆ ಘಟನೆ ನಡೆದದ್ದು ಅಮೆರಿಕದಲ್ಲಿ, ಅದೂ ಹೆಚ್ಚು ಕಮ್ಮಿ ಮೂರುವರೆ ದಶಕದ ಹಿಂದೆ, ಪೈಲಟ್ ಸೆಲ್ವಡೊರ್ ದೇಶದ ಪ್ರಜೆ! ಕ್ಯಾಪ್ಟನ್ ಕಾರ್ಲೋಸ್‌ನ ಜೀವನಗಾಥೆ ಮತ್ತು ಉತ್ತರ ಇಲ್ಲಿದೆ.

ಕಾರ್ಲೋಸ್ ಹುಟ್ಟಿದ್ದೇ ಪೈಲಟ್‌ಗಳ ಪರಿವಾರದಲ್ಲಿ. ಆತನ ಮುತ್ತಜ್ಜ, ಅಜ್ಜ, ಅಪ್ಪ ಎಲ್ಲರೂ ಪೈಲಟ್ ಆಗಿದ್ದವರು, ಅಂತಾ ರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಿಸಿದವರು. ಈಗ ಅವನ ಒಬ್ಬ ಮಗ ಮತ್ತು ಮಗಳೂ ಅದೇ ಕೆಲಸ ಮಾಡು ತ್ತಿದ್ದಾರೆ. ಈ ಪರಿವಾರಕ್ಕೆ ವಿಮಾನ ಹಾರಿಸುವುದು ಕುಲಕಸುಬಿನಂತೆ. ಕಾರ್ಲೋಸ್‌ಗೆ ಅದು ರಕ್ತಗತವಾಗಿ ಬಂದದ್ದು. ಆದರೆ ಯಾರೂ ಕಾರ್ಲೋಸ್‌ನಷ್ಟು ಹೆಸರು ಮಾಡಿದವರಲ್ಲ. ಉಳಿದವರಿಗೆ ಅಂಥ ಸಂದರ್ಭವೂ ಒದಗಿಬರಲಿಲ್ಲ. ಒಮ್ಮೆ ಬಂದಿದ್ದರೂ ಅವರು ಅಂಥ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಿದ್ದರು, ಸಂಕಷ್ಟದ ಸಮಯದಲ್ಲಿ ಕಾರ್ಲೋಸ್‌ನಷ್ಟೇ ಸಮರ್ಥವಾಗಿ ನಿಭಾಯಿಸು ತ್ತಿದ್ದರಾ? ಗೊತ್ತಿಲ್ಲ.

ಆದರೆ ಕಾರ್ಲೋಸ್ ಮಾತ್ರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ, ಅಂಥ ಪರಿಸ್ಥಿತಿಯನ್ನು ಎದುರಿಸಿ ಬಚಾವಾಗಿಯೂ ಬಂದಿದ್ದ. ಅದೂ ಒಂದಲ್ಲ, ಎರಡಲ್ಲ, ಮೂರು ಸಲ! ಅದಕ್ಕಾಗಿಯೇ ಇಂದಿಗೂ ಸೆಲ್ವಡೊರ್‌ನ ಜನರಿಗೆ ಆತ ‘ರಾಷ್ಟ್ರೀಯ ಖಜಾನೆ.’ ನಮ್ಮಲ್ಲಿ ಕೆಲವು ತಾತಂದಿರು, ಅಪ್ಪಂದಿರು ಕಾರು, ಬೈಕು ನಡೆಸುವಾಗ ಮೊಮ್ಮಕ್ಕಳನ್ನು, ಮಕ್ಕಳನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳುವುದನ್ನು ನೋಡಿರುತ್ತೀರಿ. ಆಗಾಗ ಅವರು ಮಕ್ಕಳ ಕೈಯಲ್ಲಿ ಸ್ಟೇರಿಂಗ್ ಕೊಡುವುದೂ ಇದೆ. ಅದೇ ರೀತಿ
ಕಾರ್ಲೋಸ್ ಮಗುವಾಗಿದ್ದಾಗ ಅವನ ಅಜ್ಜ, ಅಪ್ಪ ಅವನನ್ನು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಿದ್ದರು.

ಆಗಾಗ ಅವನ ಕೈಗೂ ಯೋಕ್ (ಇದನ್ನು ಕಂಟ್ರೋಲ್ ವ್ಹೀಲ, ಕಂಟ್ರೋಲ್ ಕಾಲಂ ಎಂದೂ ಕರೆಯುತ್ತಾರೆ. ಇದು ವಿಮಾನದ ಸ್ಟೇರಿಂಗ್!) ಕೊಡುತ್ತಿದ್ದರು. ಅಂದ ಹಾಗೆ ಇವೆಲ್ಲ ಸಣ್ಣ ವಿಮಾನ, ಗ್ಲೈಡರ್, ಸರಕು ಸಾಗಿಸುವ ವಿಮಾನಗಳಾಗಿರುತ್ತಿದ್ದವೇ ವಿನಾ
ಪ್ರಯಾಣಿಕರ ವಿಮಾನವಲ್ಲ. ಸುಮಾರು ಐದು ದಶಕದ ಹಿಂದೆ ನಿಯಮಗಳೂ ಅಷ್ಟೊಂದು ಕಠಿಣವಾಗಿರಲಿಲ್ಲ. ಆದರೂ
ವಿಮಾನವೆಂದರೆ ವಿಮಾನ ತಾನೆ. ಕಾರ್ಲೋಸ್‌ಗೆ ಇದು ವರವಾಯಿತು. ಉಳಿದ ಮಕ್ಕಳಂತೆ ಆತ ಸಣ್ಣ ಪುಟ್ಟ ಆಟಿಕೆಯ ವಸ್ತು ಗಳೊಂದಿಗೆ, ಮೂರು ಚಕ್ರದ ಸೈಕಲ, ಪೆಡಲ್ ತುಳಿಯುವ ಪ್ಲಾಸ್ಟಿಕ್ ಕಾರ್ನೊಂದಿಗೆ ಆಡಲೇ ಇಲ್ಲ.

ಆತನ ಆಟ, ಪಾಠ, ಪ್ರಯೋಗ ಏನಿದ್ದರೂ ವಿಮಾನದೊಂದಿಗೆ, ವಿಮಾನದಲ್ಲಿ. ತಾನು ಮುಂದೆ ಏನಾಗಬೇಕೆಂಬುದನ್ನು ಆತ ಆಗಲೇ ನಿರ್ಧರಿಸಿದ್ದ. ವಿಮಾನ ಹಾರಿಸುವುದರ ಹೊರತಾಗಿ ಆತನ ತಲೆಯಲ್ಲಿ ಬೇರೆ ಏನೂ ಸುಳಿಯುತ್ತಿಲಿಲ್ಲ. ಎಲ್ಲರಿಗೂ ಮನೆಯೇ ಮೊದಲ ಪಾಠಶಾಲೆಯಾದರೆ ಆತನಿಗೆ ವಿಮಾನವೇ ಮೊದಲ ಪ್ರಯೋಗಶಾಲೆ. ಈ ವಿಷಯದಲ್ಲಿ (ಮುಂದೆಯೂ) ಆತ
ಅದೃಷ್ಟವಂತನೇ ಸರಿ. ಕಾರ್ಲೋಸ್ ತನ್ನ ಜೀವನದಲ್ಲಿ ಮೊದಲು ಪಡೆದ ಪರವಾನಗಿಯೇ ವಿಮಾನ ನಡೆಸಲು. ಕಾರು ಬೈಕಿನ
ಲೈಸನ್ಸ್ ಆತ ಪಡೆದದ್ದು ನಂತರವೇ. ವಿಮಾನ ನಡೆಸಲು ಪರವಾನಗಿ ಪಡೆದಾಗ ಆತನಿಗಿನ್ನೂ ಹದಿನಾರು ವರ್ಷ.

ಆಗ ಆತ ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿ. ನಿಮಗೆ ತಿಳಿದಿರಬಹುದು, ವಿಮಾನ ಚಾಲಕರ ಅನುಭವ ಅಳೆಯುವುದು ಅವರ
ವಯಸ್ಸಿನಿಂದಲ್ಲ. ಅವರಿಗೆ ಎಷ್ಟು ಗಂಟೆ ವಿಮಾನ ಹಾರಿಸಿ ಅನುಭವವಿದೆ ಎನ್ನುವುದರ ಮೇಲೆ. ಅವರ ಭಾಷೆಯಲ್ಲಿ ಅದನ್ನು ಫ್ಲೈಯಿಂಗ್ ಅವರ್ಸ್ (flying hours) ಎನ್ನುತ್ತಾರೆ. ತನ್ನ ಪ್ರೌಢ ಶಿಕ್ಷಣ ಮುಗಿಸುವ ಹೊತ್ತಿಗೆ ಕಾರ್ಲೋಸ್ ಯಾರ ಸಹಾಯವೂ ಇಲ್ಲದೇ, ಒಬ್ಬಂಟಿಯಾಗಿ ವಿಮಾನ ಹಾರಿಸುತ್ತಿದ್ದ.

ಅಷ್ಟೇ ಅಲ್ಲ, ಮುನ್ನೂರ ಐವತ್ತಕ್ಕೂ ಹೆಚ್ಚು ಗಂಟೆಗಳ ವಿಮಾನ ಹಾರಿಸಿದ ಅನುಭವವನ್ನು ತನ್ನ ಜೋಳಿಗೆಯಲ್ಲಿ = ಇಳಿಸಿ ಕೊಂಡಿದ್ದ. ಈ ನಡುವೆ ಕಾರ್ಲೋಸ್ ತನ್ನ ಜೀವನದ ಮೊದಲ ಪರೀಕ್ಷೆ ಎದುರಿಸಿದ್ದ. ಆಗಲೇ ಆತ ಸಣ್ಣ ಸಂಸ್ಥೆಯೊಂದರಲ್ಲಿ ಪೈಲಟ್ ಕೆಲಸಕ್ಕೆ ಸೇರಿಕೊಂಡಿದ್ದ. ಸಂಸ್ಥೆ ಕೃಷಿಗೆ ಸಂಬಂಧಪಟ್ಟ ವಸ್ತುಗಳನ್ನು ರಾಜಧಾನಿಯಿಂದ ಬೇರೆ ಹಳ್ಳಿಗಳಿಗೆ ಪೂರೈಸುವ ಕೆಲಸ ಮಾಡುತ್ತಿತ್ತು. ಎಂದಿನಂತೆಯೇ ಅಂದೂ ಕೂಡ ಕೃಷಿಗೆ ಬೇಕಾದ ವಸ್ತುಗಳನ್ನು ತುಂಬಿಕೊಂಡು ಹೊರಟ ಕಾರ್ಲೋಸ್ ತನ್ನ ತಾಣ ತಲುಪುವುದರಲ್ಲಿದ್ದ. ಅಷ್ಟರಲ್ಲಿ ಆತನಿಗೆ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ತೊಂದರೆ ಉಂಟಾದದ್ದು ತಿಳಿಯಿತು. ಕಾರ್ಲೋಸ್ ಧೃತಿಗೆಡಲಿಲ್ಲ.

ಆ ಪರಿಸ್ಥಿತಿಯಲ್ಲಿ, ತನ್ನಷ್ಟೇ ವಯಸ್ಸಿನ (ಹದಿನಾರು ಹದಿನೇಳು ವರ್ಷ ಹಳೆಯದಾದ!) ವಿಮಾನವನ್ನು ಸರಿಯಾಗಿ ಭೂಮಿ ಗಿಳಿಸುವುದು ಅಸಾಧ್ಯ ಎಂದು ಅರಿತ ಆತ ವಿಮಾನವನ್ನು ಆದಷ್ಟು ಭೂಮಿಗೆ ಹತ್ತಿರ ತಂದು, ತಾನು ವಿತರಿಸಬೇಕಾಗಿದ್ದ ವಸ್ತು ಗಳನ್ನೆಲ್ಲ ಒಂದೊಂದಾಗಿ ಕೆಳಗೆ ಎಸೆದಿದ್ದ. ನಂತರವೂ ಆತ ವಿಮಾನವನ್ನು ಕ್ರ್ಯಾಶ್ ಲ್ಯಾಂಡಿಂಗ್ (ಆಪತ್ಕಾಲದಲ್ಲಿ ವಿಮಾನ ವನ್ನು ಇಳಿಸುವುದಕ್ಕೆ ಬಳಸುವ ಪದ) ಮಾಡಲಿಲ್ಲ.

ಕಾರಣ, ಹೊರಡುವುದಕ್ಕೆ ಮುಂಚೆ ವಿಮಾನದಲ್ಲಿ ಭರ್ತಿ ಇಂಧನ ತುಂಬಿಸಲಾಗಿತ್ತು. ಅಷ್ಟು ಇಂಧನ ಇರುವಾಗ ಅಸಹಜ ರೀತಿಯಲ್ಲಿ ವಿಮಾನ ಭೂ ಸ್ಪರ್ಶ ಮಾಡಿದರೆ ಅವಘಡಗಳಾಗುವುದೇ ಹೆಚ್ಚು. ಅದನ್ನು ಅರಿತ ಆತ ಬರೊಬ್ಬರಿ ಆರು ತಾಸು ವಿಮಾನವನ್ನು ಗಾಳಿಯಲ್ಲಿಯೇ ಸುತ್ತು ಹಾಕಿಸಿ, ಇಂಧನ ಮುಗಿಯುತ್ತಿದೆ ಎನ್ನುವಾಗ ಒಂದು ಹುಲ್ಲುಗಾವಲಿನಲ್ಲಿ ಇಳಿಸಿದ್ದ. ಆತನ ಸಮಯಪ್ರಜ್ಞೆ ಎಲ್ಲವನ್ನೂ ಉಳಿಸಿತ್ತು.

ತಲುಪಿಸಬೇಕಾದ ವಸ್ತುಗಳನ್ನೂ ತಲುಪಿಸಿ, ವಿಮಾನಕ್ಕೂ ಯಾವುದೇ ಹಾನಿ ಉಂಟಾಗದಂತೆ, ತಾನೂ ಬಚಾವಾಗಿ ಬಂದ
ಕಾರ್ಲೋಸ್ ಅಂದು ಹೀರೋ ಆಗಿದ್ದ. ಆತನ ಸಂಸ್ಥೆ, ಆ ಉದ್ಯಮದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಕಾರ್ಲೋಸ್
ಪರಿಚಿತನಾದ. ಮೊದಲ ಬಾರಿ ರಾಷ್ಟ್ರವ್ಯಾಪಿ ಆತನ ಕುರಿತು ಚರ್ಚೆಯಾಯಿತು. ನೆನೆಪಿರಲಿ, ಆಗಿನ್ನೂ ಆತನಿಗೆ ಹದಿನೆಂಟು
ವರ್ಷ! ತನ್ನ ಮಗನ ಸಾಹಸದ ಕತೆಯನ್ನು ಬೇರೆಯವರ ಬಾಯಿಂದ ಕೇಳಿದ ಕಾರ್ಲೋಸ್‌ನ ತಂದೆಯ ಎದೆ ಹಿಗ್ಗಿತ್ತು.

ಅಲ್ಲಿಯವರೆಗೂ ಸಣ್ಣ, ಖಾಸಗಿ ವಿಮಾನಗಳನ್ನು ಹಾರಿಸುತ್ತಿದ್ದ ಕಾರ್ಲೋಸನ್ನು ಆತನ ತಂದೆ ವಾಣಿಜ್ಯ ವಿಮಾನ ನಡೆಸುವ ಪರವಾನಗಿ (ಎ-ಎಎ) ಪಡೆಯಲು ಅಮೆರಿಕದ ಫ್ಲೋರಿಡಾಕ್ಕೆ ಕಳುಹಿಸಿದರು. ಅಗಾಧ ಆಸಕ್ತಿ, ಉತ್ಸಾಹ ಮತ್ತು ಪರಿಶ್ರಮದಿಂದ ಐದು ತಿಂಗಳಿಗೇ ತನ್ನ ಕಲಿಕೆಯನ್ನು ಮುಗಿಸಿದ್ದ ಕಾರ್ಲೋಸ್ ತನ್ನ ಹತ್ತೊಂಬತ್ತನೆಯ ವರ್ಷಕ್ಕೇ ವಾಣಿಜ್ಯ, ಪ್ರಯಾಣಿಕರ ವಿಮಾನ ಹಾರಿಸಲು ಸಿದ್ಧನಾಗಿ ನಿಂತಿದ್ದ. ಅಷ್ಟಕ್ಕೂ ಅವನಿಗೆ ಬೇಕಾದದ್ದು ಅಧಿಕೃತವಾಗಿ ವಿಮಾನ ಹಾರಿಸಲು ಬೇಕಾದ ಪರವಾನಗಿ ಎಂಬ ಕಾಗದದ ತುಂಡು. ಎಲ್ಲಕ್ಕೂ ಮಿಗಿಲಾಗಿ ಇರಬೇಕಾದ ವಿದ್ಯೆ, ಜ್ಞಾನ ಅವನಲ್ಲಿ ಆಗಲೇ ಹೆಮ್ಮರವಾಗಿ ಬೆಳೆದು ನಿಂತಿತ್ತು. ವಿಮಾನ ಹಾರಿಸುವುದೆಂದರೆ ಆತನಿಗೆ ಮಕ್ಕಳಾಟಿಗೆಯಷ್ಟು ಸಲೀಸಾಗಿತ್ತು.

ಹಿಂತಿರುಗಿ ಬಂದ ಕಾರ್ಲೋಸ್ ಸರಕು ಸಾಗಿಸುವ ಸಂಸ್ಥೆಯಲ್ಲಿ ಪೈಲಟ್ ಆಗಿ ಕೆಲಸಕ್ಕೆ ಸೇರಿಕೊಂಡ. ಆ ಸಂಸ್ಥೆಯಲ್ಲಿ ಹೆಚ್ಚಿನ ಕೆಲಸವೇನೂ ಇರುತ್ತಿರಲಿಲ್ಲ. ವಾರಕ್ಕೆ ಎರಡು ಮೂರು ದಿನ ಬಿಡುವಿರುತ್ತಿತ್ತು. ಒಂದೆರಡು ದಿನವೂ ಖಾಲಿ ಕುಳಿತುಕೊಳ್ಳುವ ಜಾಯಮಾನ ಅವನದ್ದಲ್ಲ. ಆತ ತಾನು ಮೊದಲು ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಸಂಪರ್ಕಿಸಿದ. ಆತನಿಗೆ ಬಿಡುವಿದ್ದಾಗ ಅಲ್ಪಾವಽಯ ಕೆಲಸ ಮಾಡಲು ಆ ಸಂಸ್ಥೆಯವರೂ ಒಪ್ಪಿದರು.

ಆಗಾಗ ಆತ ಆ ಸಂಸ್ಥೆಯ ಏರ್ ಟ್ಯಾಕ್ಸಿ ನಡೆಸುತ್ತಿದ್ದ. ಇಂತಿರ್ಪ ಕಾಲದಲ್ಲಿ ಒಂದು ದಿನ ರಾಜಧಾನಿಯಿಂದ ಸುಮಾರು ಇಪ್ಪತ್ತೈದು ನಿಮಿಷ ದೂರದಲ್ಲಿರುವ ಹೈಡ್ರೋಲಿಕ್ ಡೋಮ್ ನಿರ್ಮಾಣದ ಸ್ಥಳಕ್ಕೆ ಹೋಗಿ ಬರಬೇಕಾಗಿತ್ತು. ಆ ಯೋಜನೆಯ ಪ್ರಮುಖ ಅಧಿಕಾರಿಯೊಬ್ಬರನ್ನು ಅಲ್ಲಿ ಬಿಟ್ಟು ಬರಬೇಕಾಗಿತ್ತು. ಇಟಲಿ ಪ್ರಜೆಯಾದ ಅಧಿಕಾರಿಯ ಜೊತೆಯಲ್ಲಿ ಅಧಿಕಾರಿಯ ಪತ್ನಿ ಮತ್ತು ಆರು ವರ್ಷದ ಮಗಳೂ ಇದ್ದಳು. ಅವರು ಸ್ಥಳ ತಲುಪಿದಾಗ ಅಧಿಕಾರಿಯನ್ನು ಕರೆದುಕೊಂಡು ಹೋಗಲು
ಸ್ಥಳದಲ್ಲಿ ಯಾರೂ ಬಂದಿರಲಿಲ್ಲ. ಅವರ ಕಚೇರಿ, ಮನೆ ಇರುವ ಸ್ಥಳಕ್ಕೂ ವಿಮಾನ ಇಳಿದ ಸ್ಥಳಕ್ಕೂ ಸ್ವಲ್ಪ ದೂರವಿದ್ದ ಕಾರಣ
ಮುಂದಿನ ಪ್ರಯಾಣ ಸುಲಭವಾಗಿರಲಿಲ್ಲ.

ವಿಮಾನವನ್ನು ತಮ್ಮ ಕಚೇರಿಯ ಸ್ಥಳದೆಡೆಗೆ ಹಾರಿಸುವಂತೆ ಅಧಿಕಾರಿ ಕೇಳಿಕೊಂಡರು. ಕಚೇರಿಯ ಮೇಲೆ ವಿಮಾನ ಹಾರುವುದ ನ್ನು ನೋಡಿದಾಗ ಅಲ್ಲಿರುವವರಿಗೆ ತಮ್ಮ ಅಧಿಕಾರಿ ಬಂದಿದ್ದಾರೆ, ಅವರನ್ನು ಕರೆದುಕೊಂಡು ಬರಲು ಯಾರಾದರೂ ಹೋಗಬೇಕು ಎಂದು ತಿಳಿಸುವುದು ಅದರ ಉದ್ದೇಶವಾಗಿತ್ತು. ಪುನಃ ಹಾರುವುದಕ್ಕೂ ಮೊದಲು ಅಧಿಕಾರಿಯ ಮಗುವಿಗೆ ಮೂತ್ರ ವಿಸರ್ಜನೆ ಮಾಡಬೇಕಿತ್ತು. ಕಾರ್ಲೋಸ್ ಬಾಗಿಲು ತೆಗೆದು ಕೆಳಗೆ ಇಳಿದು ನಿಂತಿದ್ದನಷ್ಟೇ.

ಆತನ ಹಿಂದಿನಿಂದ ಬಂದ ಒಂದು ಗುಂಡು ಆತನ ಎಡ ಕಿವಿಯ ಬದಿಯಿಂದ ಕೆನ್ನೆಯೊಳಕ್ಕೆ ನುಗ್ಗಿ ಕಣ್ಣಿನ ಹತ್ತಿರದಿಂದ ಹೊರ ಚಿಮ್ಮಿತು. ಕೂಡಲೇ ವಿಮಾನದೊಳಕ್ಕೆ ಸೇರಿಕೊಂಡ ಕ್ಯಾಪ್ಟನ್ ಎಂಜಿನ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ. ಗ್ರಹಚಾರ ಕೆಟ್ಟರೆ ಎಲ್ಲ ಒಟ್ಟೊಟ್ಟಿಗೇ ಬರುತ್ತದಂತೆ ಎಂಬಂತೆ ಮೊದಲು ವಿಮಾನ ಸ್ಟಾರ್ಟ್ ಆಗಲೇ ಇಲ್ಲ. ಕೆಲವು ಸಲ ಪ್ರಯತ್ನಿಸಿದ ನಂತರ ವಿಮಾನ ಸ್ಟಾರ್ಟ್ ಆಯಿತು. ಅಷ್ಟರಲ್ಲಿ ನಾಲ್ಕೆ ದು ಗುಂಡುಗಳು ವಿಮಾನವನ್ನು ತಾಗಿದ್ದವು.

ಅವೆಲ್ಲ ಲಗೇಜ್ ಕಂಪಾರ್ಟ್ಮೆಂಟ್ ಭಾಗಕ್ಕೆ ತಾಗಿದ್ದರಿಂದ ಯಾವ ನಷ್ಟವೂ ಆಗಲಿಲ್ಲ. ಆ ಸಂದರ್ಭದಲ್ಲಿ ಯಾರು, ಏಕೆ, ಎಲ್ಲಿಂದ ಗುಂಡು ಹಾರಿಸುತ್ತಿದ್ದಾರೆ ಎಂದು ಯಾರಿಗೂ ಅರ್ಥವಾಗಲಿಲ್ಲ. ಆದರೂ ಅವರ ಕಣ್ಣಿಗೆ ಬೀಳದೇ ಪಾರಾಗುವುದು ಅವಶ್ಯ ವಾಗಿತ್ತು. ಆದ್ದರಿಂದ ಸಾಧ್ಯವಾದಷ್ಟೂ ಕೆಳಗೆ, ಮರಗಳ ನಡುವೆ ವಿಮಾನ ಹಾರಿಸಿದ ಕಾರ್ಲೋಸ್. ಸ್ವಲ್ಪ ದೂರ ಹೋದ ನಂತರ ತನ್ನ ಅಂಗಿ ರಕ್ತದಿಂದ ಸಂಪೂರ್ಣ ತೋಯ್ದು ಕೆಂಪಾಗಿದ್ದನ್ನು ಗಮನಿಸಿದ. ಆತನ ಕೆನ್ನೆಯ ಭಾಗ ಛಿದ್ರವಾಗಿತ್ತು.

ಯಾವುದಾದರೂ ಬಟ್ಟೆ ಕೊಡುವಂತೆ ದಂಪತಿಗಳನ್ನು ಕೇಳಿದ. ಅವರಂತೂ ಭಯದಲ್ಲಿ ಗರಬಡಿದು ಹೋಗಿದ್ದರು. ಅಂತೂ ಅವರಿಂದ ಒಂದು ಬಟ್ಟೆ ಪಡೆದು, ಕೆನ್ನೆಗೆ ಅದುಮಿಟ್ಟುಕೊಂಡು ತಿರುಗಿ ರಾಜಧಾನಿಯ ಕಡೆ ಹೊರಟ. ಆತನ ಸ್ಥಿತಿಯನ್ನು ನೋಡಿದ ಅಧಿಕಾರಿ ತೀರಾ ಗಾಬರಿಗೊಂಡಿದ್ದ. ಆತನ ಪತ್ನಿ ಹೆದರಿ ಮಗುವಿನೊಂದಿಗೆ ಸೀಟಿನ ಅಡಿಯಲ್ಲಿ ಬಗ್ಗಿ ಕುಳಿತುಕೊಂಡಿ ದ್ದಳು. ಅವರಲ್ಲಿ ಧೈರ್ಯ ತುಂಬಿ, ಇಪ್ಪತ್ತೈದರಿಂದ ಮೂವತ್ತು ನಿಮಿಷದಲ್ಲಿ ನಿಲ್ದಾಣ ತಲುಪಿದ.

ಅಧಿಕಾರಿಯ ಕುಟುಂಬದವರನ್ನು ಸುರಕ್ಷಿತವಾಗಿ ಇಳಿಸಿ, ತಾನು ಆಂಬ್ಯಲೆನ್ಸ್‌ನಲ್ಲಿ ಮಲಗುವ ಹೊತ್ತಿಗೆ ಆತ ಅರೆ ಪ್ರಜ್ಞಾವಸ್ಥೆ  ಯಲ್ಲಿದ್ದ. ಅಷ್ಟಕ್ಕೂ ಗುಂಡು ಹಾರಿಸಿದ್ದು ಯಾರು ಗೊತ್ತಾ? ಆಗಷ್ಟೇ ಸೆಲ್ವಡೊರ್ ದೇಶದಲ್ಲಿ ಅಂತರ್ಯುದ್ಧ ಆರಂಭವಾಗಿತ್ತು. ಆ ಯುದ್ಧದಲ್ಲಿ ಅವರು ಮೊದಲು ಹಾರಿಸಿದ ಗುಂಡೇ ಅದು!

ಈ ಘಟನೆ ನಡೆಯುವಾಗ ಕಾರ್ಲೋಸ್‌ಗೆ ಇಪ್ಪತ್ತ್ಮೂರು ವರ್ಷ! ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆದ ಮೂರನೆಯ ದಿನಕ್ಕೇ ಕೆಲಸಕ್ಕೆ ಹಾಜರಾಗಿದ್ದ ಕಾರ್ಲೋಸ್. ಆದರೆ ಆತ ತನ್ನ ಎಡಗಣ್ಣನ್ನು ಕಳೆದುಕೊಂಡಿದ್ದ. ತಾನು ಇನ್ನು ಮುಂದೆ ವಿಮಾನ ಹಾರಿಸ ಬಹುದಾ? ತಿಳಿಯುವುದು ಹೇಗೆ? ಘಟನೆ ನಡೆದು ಮೂರು ದಿನವಾಗಿತ್ತಷ್ಟೇ, ಅದೇ ಸಂಸ್ಥೆಯ ಏರ್ ಟ್ಯಾಕ್ಸಿಯಲ್ಲಿ ತನ್ನ ಮಿತ್ರ ನೊಂದಿಗೆ ಆತ ಬಾನಿಗೆ ಜಿಗಿದಿದ್ದ. ತಾನು ಮುಂಚೆ ಮಾಡುತ್ತಿದ್ದ ಎಲ್ಲಾ ಕಸರತ್ತುಗಳನ್ನೂ ಮಾಡಿಯೇ ಆತ ಕೆಳಗಿಳಿದಿದ್ದ. ಆತನ ಮೇಲೆ ಅಷ್ಟು ಭರವಸೆಯನ್ನು ಆ ಸಂಸ್ಥೆಯವರೂ ಇಟ್ಟಿದ್ದರು. ಆದರೆ ನಿಜವಾದ ಸವಾಲು ಪರವಾನಗಿ ನವೀಕರಣದ್ದಾಗಿತ್ತು. ಒಂದು ಕಣ್ಣಿಲ್ಲದವನಿಗೆ ವಿಮಾನ ನಡೆಸಲು ಪರವಾನಗಿ ಸಿಗಬಹುದಾ ಅಥವಾ ಇದ್ದ ಪರವಾನಗಿ ಉಳಿಸಿಕೊಳ್ಳಬಹುದಾ? ಆತ ಮೊದಲು ಮಾಡಿದ ಕೆಲಸ, ತಪಾಸಣೆಗೊಳಗಾಗಿ ವೈದ್ಯರಿಂದ ಶಿಫಾರಸು ಪಡೆದು ಮುಂದಿನ ಪರೀಕ್ಷೆಗೆ ಅವಕಾಶ ಒದಗಿಸಿ ಕೊಡುವಂತೆ ಕೇಳಿಕೊಂಡದ್ದು.

ಅದಕ್ಕೆ ಸಮ್ಮತಿಸಿದ ನಂತರ ತಜ್ಞ ವೈದ್ಯರ ಮತ್ತು ಪೈಲಟ್‌ಗಳ ಸಮ್ಮುಖದಲ್ಲಿ ಆತ ಮೂರು ಬಾರಿ ಪರೀಕ್ಷೆ ಎದುರಿಸಿದ. ಯಾವ ಪರೀಕ್ಷೆಯಲ್ಲೂ ಆತನನ್ನು ಯಾವ ಕಾರಣದಿಂದಲೂ ತೆಗೆದುಹಾಕುವಂತಿರಲಿಲ್ಲ. ಒಂದೇ ವಿಷಯವೆಂದರೆ ಆತನಿಗೆ ಒಂದು ಕಣ್ಣಿರಲಿಲ್ಲ. ಉಳಿದಂತೆ ಎರಡು ಕಣ್ಣಿರುವವರಿಗಿಂತ ಆತ ಯಾವುದಕ್ಕೂ ಕಮ್ಮಿ ಇರಲಿಲ್ಲ. ಬದಲಾಗಿ, ಕಾರ್ಯಕ್ಷಮತೆಯಲ್ಲಿ ಅವರಿಗಿಂತ ಹೆಚ್ಚೇ ಇದ್ದ. ಘಟನೆ ನಡೆದ ಮೂರು ತಿಂಗಳ ಒಳಗೆ ಪುನಃ ವಿಮಾನ ಹಾರಿಸುವ ಪರವಾನಗಿ ಪಡೆದಿದ್ದ ಕಾರ್ಲೋಸ್. ಆದರೆ ಸಂಸ್ಥೆಯವರು ಅವನಿಗೆ ಪೈಲಟ್ ಅಲ್ಲ, ಕೋ ಪೈಲಟ್ (ಸಹಾಯಕ) ಆಗಿ ಕೆಲಸ ಮಾದಲು ಸೂಚಿಸಿದ್ದರು. ಅದಕ್ಕೆ ಆತ ಒಪ್ಪಿದ್ದ.

ಅದಾಗಿ ಮೂರು ವರ್ಷದ ನಂತರ, ನಿರಂತರ ಕಾರ್ಯಕ್ಷಮತೆ ತೋರಿ, ತನ್ನ ಇಪ್ಪತ್ತೇಳನೆ ವರ್ಷಕ್ಕೆ ಪುನಃ ಪ್ರಮುಖ ಪೈಲಟ್
ಹುದ್ದೆ ಪಡೆದ. ಆಗ ಆತ ಟಾಕಾ ಸಂಸ್ಥೆಯಲ್ಲಿದ್ದ. ಬೋಯಿಂಗ್ ವಿಮಾನ ಹಾರಿಸಲು ತರಬೇತಿ ಪಡೆದ, ಸಶಕ್ತನಾಗಿ ತನ್ನ ಕೆಲಸ
ಮಾಡುತ್ತಿದ್ದ. ಅದಾಗಿ ಎರಡು ವರ್ಷದ ನಂತರದ ಘಟನೆಯೇ ಕಳೆದ ವಾರದ ಅಂಕಣದಲ್ಲಿ ಬರೆದದ್ದು. ಇಲ್ಲಿ ಗಮನಿಸಬೇಕಾದ
ವಿಷಯವೆಂದರೆ ಕಾರ್ಲೋಸ್‌ಗೆ ತನ್ನ ಕೆಲಸಲ್ಲಿದ್ದ ಶ್ರದ್ಧೆ, ಆಸಕ್ತಿ, ಭರವಸೆ ಮತ್ತು ಪ್ರೀತಿ. ಅದೇ ಅವನನ್ನು ಕಾಪಾಡಿತಾ? ಗೊತ್ತಿಲ್ಲ.

ಆತ ತನ್ನ ಕೆಲಸವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನಾ? ಇಲ್ಲ ಎನ್ನುವುದಕ್ಕೆ ಪುರಾವೆ ಸಾಲದು. ಏಕೆ ಗೊತ್ತಾ? ತನ್ನ
ಅರವತ್ತೆರಡನೆಯ ವಯಸ್ಸಿನಲ್ಲಿರುವ ಆತ ಈಗಲೂ ವಿಮಾನ ಹಾರಿಸುತ್ತಾನೆ. ಕೇವಲ ಹಾರಿಸುವುದಲ್ಲ, ಅದರಲ್ಲಿ ಕಸರತ್ತು
(ಏರೋಬ್ಯಾಟಿಕ್ಸ್) ಮಾಡುತ್ತಾನೆ, ಕಸರತ್ತು ಮಾಡುವುದನ್ನು ಕಲಿಸುತ್ತಾನೆ. ಆತ ವಿಮಾನವೇರಿ ಆಕಾಶಕ್ಕೆ ನೆಗೆದರೆ ಯಾವ
ಮಾಯಗಾರನಿಗೂ ಕಮ್ಮಿ ಇಲ್ಲ. ಆದ್ದರಿಂದಲೇ ಆತ ಆ ದೇಶದ ಕಣ್ಮಣಿ. ವಿಮಾನ ನಡೆಸುವ ನಿಜವಾದ ತರಬೇತಿ ನೀಡಬೇಕಾ ದದ್ದು ಭೂಮಿಯ ಮೇಲಲ್ಲ, ಆಕಾಶದ ಮಧ್ಯದಲ್ಲಿ ಎಂದು ಬಲವಾಗಿ ನಂಬಿದವ ಆತ.

ಒಂದು ವಿಷಯ ತಿಳಿದಿರಲಿ, ಒಂದು ಕಾಲದಲ್ಲಿ ಜಿಪಿಎಸ್ ಇರಲಿಲ್ಲ, ದಿಕ್ಸೂಚಿ, ನೇವಿಗೇಶನ್‌ಗಳು ಸುಮಾರಾಗಿ ಸಹಕರಿಸುತ್ತಿದ್ದ ವಾದರೂ ನೂರಕ್ಕೆ ನೂರರಷ್ಟು ಅವುಗಳನ್ನು ನಂಬುವಂತಿರಲಿಲ್ಲ. ಆದ್ದರಿಂದ ಪೈಲಟ್‌ಗಳು ನಕಾಶೆಯನ್ನೂ ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಆ ಕಾಲದಲ್ಲಿ ಹೆಚ್ಚಿನ ಅಪಘಾತಗಳಾಗುತ್ತಿದ್ದುದು ಮಾನವ ಪೈಲಟ್‌ಗಳಿಂದ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆಟೊ ಪೈಲಟ್ ಮೋಡ್‌ಗೆ ಹಾಕಿ ಕುಳಿತರೆ, ಟೀ, ಕಾಫಿ ಕುಡಿಯುವುದು ಬಿಟ್ಟು ತಾಸುಗಟ್ಟಲೆ ಪೈಲಟ್‌ಗೆ ಹೇಳಿ ಕೊಳ್ಳುವಂತಹ ಯಾವ ದೊಡ್ಡ ಕೆಲಸವೂ ಇರುವುದಿಲ್ಲ. ಆದರೆ ಈ ದಿನಗಳಲ್ಲಿ ತಂತ್ರಜ್ಞಾನದ ನ್ಯೂನತೆಯಿಂದ ವಿಮಾನ ಅಪಘಾತಗಳು ಆಗುವುದು ಹೆಚ್ಚು.

ತಂತ್ರಜ್ಞಾನ ಕೈಕೊಟ್ಟರೆ ಏನು ಮಾಡಬೇಕೆಂಬ ಸರಿಯಾದ ಮಾಹಿತಿ ಪೈಲಟ್‌ಗಳಿಗೂ ಇರುವುದಿಲ್ಲ. ಎಷ್ಟೋ ಸಲ ಚಾಲಕರ ಸಮಯಪ್ರಜ್ಞೆಯಿಂದ ಅವಘಡಗಳು ತಪ್ಪಿದ್ದಿವೆ ಅಥವಾ ತೀವ್ರತೆ ಕಮ್ಮಿಯಾದ ಉದಾಹರಣೆಗಳಿವೆ. ಆದ್ದರಿಂದ ಚಾಲಕರಿಗೆ ಪರವಾನಗಿ ಚತುರ ಮತಿಯೂ ಅವಶ್ಯಕ. ಇದಕ್ಕೆ ಮೂರು ಅನಾಹುತಗಳನ್ನು ತಪ್ಪಿಸಿದ ಕ್ಯಾಪ್ಟನ್ ಕಾರ್ಲೋಸ್ ದರ್ದಾನೊ ಅತ್ಯುತ್ತಮ ಉದಾಹರಣೆ.