Sunday, 13th October 2024

ನಿಮ್ಮ ನವಜಾತ ಶಿಶುವಿನ ಆರೈಕೆ, ಪ್ರತಿಫಲ ನೀಡುವಂತಹ, ತೃಪ್ತಿ ತರುವಂತಹ ಅನುಭವ

ಲೇಖಕರು : ಡಾ. ದಿವ್ಯಾ ರಾಜ್ ಟಿ.ಜಿ.,

ಶಿಶು ರೋಗಶಾಸ್ತ್ರ ಮತ್ತು ನವಜಾತ ಶಿಶು ಶಾಸ್ತ್ರ ಸಲಹಾ ತಜ್ಞರು,

ಸ್ಪೆಷಲಿಸ್ಟ್ ಹಾಸ್ಪಿಟಲ್

ಶಿಶುವಿನ ಜನನ ಅದ್ಭುತ ಆನಂದದ ಸಮಯ, ಅದು ಮೊದಲ ಬಾರಿ ಪೋಷಕರಾಗುವವರಿಗೆ ಮಾಯೆಯ ಕ್ಷಣವಾಗಿರುತ್ತದೆ. ಇದೇ ಸಂದರ್ಭದಲ್ಲಿ ಅತ್ಯಂತ ಸವಾಲಿನ ಮತ್ತು ಸುಸ್ತು ಮಾಡುವಂತಹ ಸಮಯವೂ ಇದಾಗಿರುತ್ತದೆ. ಪೋಷಕರಿಗೆ ಈ ಸಂದರ್ಭದಲ್ಲಿ ಸದುದ್ದೇಶದ ಮಾಹಿತಿ ಮತ್ತು ಸಲಹೆ ಬಹಳಷ್ಟು ಲಭಿಸುತ್ತದೆ. ಇದು ಗೊಂದಲಕ್ಕೆ ಹಾಗೂ ನಿರ್ಣಯ ಕೈಗೊಳ್ಳಲು ಆಗದಿರುವುದಕ್ಕೆ ಕಾರಣವಾಗುತ್ತದೆ. ಮಕ್ಕಳು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಬೇಗನೆ ಚೇತರಿಸಿಕೊಳ್ಳುವ ಗುಣ ಹೊಂದಿರು ತ್ತವೆ. ಸರಿಯಾದ ಮಾರ್ಗದರ್ಶನದಿಂದ ಶಿಶುವಿನ ಆರೈಕೆ ನಿರ್ವಹಿಸುವುದು ಸುಲಭವಾಗುತ್ತದೆ. ಸಮಾಜದ ಎಲ್ಲಾ ವರ್ಗದ ಎಲ್ಲಾ ಪೋಷಕರಿಗೆ ಸರಿಯಾದ ಮಾಹಿತಿ ಲಭ್ಯವಾಗುವಂತೆ ಮಾಡುವುದು ಮುಖ್ಯವಾಗಿರುತ್ತದೆ.

ನಿಮ್ಮ ನವಜಾತ ಶಿಶುವಿನ ಆರೈಕೆ ಮಾಡುವಾಗ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಈ ಕೆಳಗಿನಂತಿವೆ : ಹಾಲುಣಿಸುವ ಕ್ರಮ ಮತ್ತು ವೇಳಾಪಟ್ಟಿ ಶಿಶುಗಳ ಬೇಡಿಕೆಗೆ ತಕ್ಕಂತೆ ಅವುಗಳಿಗೆ ಹಾಲುಣಿಸಬೇಕು. ರೂಟಿಂಗ್, ಬೆರಳು ಚೀಪುವುದು, ಮುಷ್ಠಿ ಬಾಯಿಗೆ ಇಟ್ಟುಕೊಳ್ಳುವುದು ಮುಂತಾದ ಸೂಚನೆಗಳ ಕಡೆಗೆ ಗಮನವಿಡಿ. ಅಳುವುದು, ಸಾಮಾನ್ಯವಾಗಿ ಕೊನೆಯ ಹಂತದ ಕ್ರಿಯೆಯಾಗಿರುತ್ತದೆ. ನವಜಾತ ಶಿಶುಗಳಿಗೆ ಸಾಮಾನ್ಯವಾಗಿ ಪ್ರತಿ 2ರಿಂದ 3 ಗಂಟೆಗಳಿಗೊಮ್ಮೆ ಹಾಲುಣಿಸ ಬೇಕು. ಶಿಶು ಬೆಳೆದಂತೆ ಇದನ್ನು 3ರಿಂದ 4 ಗಂಟೆಗಳಿಗೆ ಹೆಚ್ಚಿಸಬಹುದು. ಪದೇ ಪದೇ ಹಾಲುಣಿಸಿದ ನವಜಾತ ಶಿಶು ತೂಕ ಹೆಚ್ಚಿಸಿಕೊಳ್ಳುತ್ತದೆ ಮತ್ತು ಆರೋಗ್ಯಕರ ಹಾಗೂ ದೃಢಕಾಯವಾಗಿ ಬೆಳೆಯುತ್ತದೆ. ಸಾಧ್ಯವಾದರೆ ಬಾಟಲಿ ಹಾಲು ನೀಡುವು ದಕ್ಕಿಂತಲೂ ಎದೆ ಹಾಲು ಉಣಿಸುವುದು ಹೆಚ್ಚು ಉತ್ತಮವಾದ ಆಯ್ಕೆಯಾಗಿರುತ್ತದೆ.

ಏಕೆಂದರೆ ಇದರಿಂದ ತಾಯಂದಿರಲ್ಲಿನ ಮುಖ್ಯವಾದ ಆ್ಯಂಟಿಬಾಡಿಗಳು ಶಿಶುವಿಗೆ ವರ್ಗಾವಣೆಗೊಳ್ಳುತ್ತವೆ. ಇದರಿಂದ ಮಗುವಿನ ರೋಗನಿರೋಧಕ ಶಕ್ತಿ ಅದರಲ್ಲೂ ಮುಖ್ಯವಾಗಿ ಅಸ್ವಸ್ಥತೆಯ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಶಿಶು ಬೆಳೆದಂತೆ ಹಾಲುಣಿಸುವ ಕ್ರಮದ ನಡುವಿನ ಅಂತರವನ್ನು ಪ್ರತಿ ಹಾಲುಣಿಸುವ ಅವಧಿಯನ್ನು ಆಧರಿಸಿ ಹೊಂದಿಸಿಕೊಳ್ಳುವ ಅಗತ್ಯ ವಿರುತ್ತದೆ. ಪ್ರತಿ ಬಾರಿ ಹಾಲುಣಿಸಿದ ನಂತರ ಮಗು ವಿಗೆ ತೇಗು ಬರುವಂತೆ ಮಾಡಬೇಕು. ಈ ರೀತಿ ಮಾಡುವುದರಿಂದ ಅದು ನುಂಗಿರುವ ಗಾಳಿ ಹೊರಗೆ ಹೋಗುತ್ತದೆ. ಸೂಕ್ತ ರೀತಿಯಲ್ಲಿ ತೇಗು ಬರುವಂತೆ ಮಾಡದಿದ್ದರೆ ಹಾಲು ವಾಂತಿಯಾಗುವುದು ಅಥವಾ ಕಾಲಿಕಿಪೇನ್ ತೊಂದರೆ ಉಂಟಾಗಬಹುದು.

ಕೆಲವೊಮ್ಮೆ ಮಗು ನೋಡಿಕೊಳ್ಳುವ ತಾಯಂದಿರುವ ತಮ್ಮ ಶಿಶು ಮೊಲೆಯನ್ನು ಸೂಕ್ತ ರೀತಿಯಲ್ಲಿ ಹಿಡಿದುಕೊಳ್ಳುವಂತೆ ಪ್ರೋತ್ಸಾಹಿಸಬಹುದು. ನಿಮಗೆ ತೊಂದರೆಯಾಗು ತ್ತಿದ್ದಲ್ಲಿ ವೈದ್ಯರು ಅಥವಾ ಹಾಲುಣಿಸುವ ವಿಷಯದಲ್ಲಿ ಪರಿಣತ ಸಲಹಾಕಾರರನ್ನು ಸಂಪರ್ಕಿಸಬಹುದು.

ನಿದ್ರೆಯ ಆವರ್ತನ ಮತ್ತು ಭಂಗಿ
ಶಿಶು ಮಲಗಲು ಬೆನ್ನಿನ ಮೇಲೆ ಮಲಗುವುದು ಅತ್ಯುತ್ತಮ ಭಂಗಿಯಾಗಿರುತ್ತದೆ. ಶಿಶುಗಳು ಯಾವಾಗಲೂ ಸಪಾಟಾಗಿರುವ ದೃಢವಾದ ಮೇಲ್ಮೈ ಮೇಲೆ ಮಲಗಬೇಕು. ಈ ಪ್ರದೇಶ ಹೊಗೆಯಿಂದ ಮುಕ್ತವಾದ ವಾತಾವರಣ ಹೊಂದಿರಬೇಕು. ಬೆನ್ನಿನ ಮೇಲೆ ಮಲಗುವುದರಿಂದ ದಿಢೀರನೆ ಶಿಶುಗಳು ಸಾವನ್ನಪ್ಪುವಂತಹ ಸಡನ್ ಇನ್‍ಫೆಂಟ್ ಡೆತ್ ಸಿಂಡ್ರೋಮ್(ಎಸ್‍ಐಡಿಎಸ್)ನಂತಹ ಅಪಾಯಗಳು ಅತ್ಯಂತ ಕಡಿಮೆ ಯಾಗುತ್ತವೆ. ಎದೆಹಾಲುಣಿಸಿ ಮಲಗಿಸಿದ ಮಕ್ಕಳನ್ನು ಬೆನ್ನಿನ ಮೇಲೆ ಮಲಗಿಸಿದ್ದಲ್ಲಿ ಅವುಗಳಿಗೆ ಎಸ್‍ಐಡಿಎಸ್‍ನ ಅಪಾಯ ಕಡಿಮೆ ಇರುತ್ತದೆ ಎಂದು ಸಂಶೋಧನೆ ತಿಳಿಸಿದೆ. ನಿಮ್ಮ ಶಿಶುವನ್ನು ನಿದ್ರೆ ಮಾಡುವಾಗ ಕಟೆಕಟೆಯಿರುವ ಕ್ರಿಬ್‍ನಲ್ಲಿ ಮಲಗಿಸಿ. ಎಂದಿಗೂ ನಿಮ್ಮ ಹಾಸಿಗೆಯ ಮೇಲೆ ಮಲಗಿಸಬೇಡಿ. ಹಾಸಿಗೆ, ಹಾಸಿಗೆಯ ಚೌಕಟ್ಟು ಮತ್ತು ಹೆಡ್‍ಬೋರ್ಡ್‍ಗಳ ನಡುವಿನ ಅಂತರದಲ್ಲಿ ಶಿಶುವಿಗೆ ಉಸಿರು ಕಟ್ಟಬಹುದು. ನವಜಾತ ಶಿಶುಗಳು ದಿನಕ್ಕೆ 18ರಿಂದ 20 ಗಂಟೆಗಳ ಕಾಲ ನಿದ್ರಿಸುತ್ತವೆ. ಅವುಗಳಿಗೆ ಪ್ರತಿ ಒಂದು ಅಥವಾ ಎರಡು ಗಂಟೆಗೊಮ್ಮೆ ಈ ನಿದ್ರೆಯಿಂದ ಎಚ್ಚರವೂ ಆಗುತ್ತದೆ. ತಾಯಂದಿರು ಮಕ್ಕಳು ಮಲಗಿರುವಾಗ ತಾವೂ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು.

ಏಕೆಂದರೆ ಹೊಸದಾಗಿ ಪೋಷಕ ರಾಗಿರುವವರು ಸಾಮಾನ್ಯವಾಗಿ ನಿದ್ರೆಯಿಂದ ವಂಚಿತ ರಾಗಿರುತ್ತಾರೆ. 3ರಿಂದ 4 ತಿಂಗಳ ಅವಧಿಯಲ್ಲಿ ಶಿಶುಗಳ ಮೆದುಳು ಪ್ರಬುದ್ಧಗೊಳ್ಳುತ್ತಿರು ವಂತೆ, ಶಿಶುಗಳಿಗೆ ನಿದ್ರೆಯನ್ನು ನಿಯಂತ್ರಿಸುವಂತಹ ಸರ್ಕೇಡಿಯನ್ ರಿದಮ್ ಅಭಿವೃದ್ಧಿಗೊಳ್ಳುತ್ತದೆ. ಮಕ್ಕಳಿಗೆ ನಿದ್ರೆಯ ಸಮಯದ ಅಭ್ಯಾಸ ಮಾಡಿಸಲು ತಾಯಂದಿ ರಿಗೆ ಈ ಸಮಯ ಅತ್ಯುತ್ತಮ ಮತ್ತು ಅನುಕೂಲಕರವಾಗಿರುತ್ತದೆ.

ಸ್ನಾನ ಮಾಡಿಸುವುದು ಮತ್ತು ಸ್ವಚ್ಛತೆ
ಹೊಕ್ಕಲುಬಳ್ಳಿಯ ಚೂರು ಉದುರಿಹೋಗುವವರೆಗೆ ನವಜಾತ ಶಿಶುಗಳಿಗೆ ಸ್ನಾನ ಮಾಡಿಸುವುದನ್ನು ತಪ್ಪಿಸಿ. ಅದುವರೆಗೆ ಮೃದು ವಾಗಿ ಒದ್ದೆ ಬಟ್ಟೆಯಿಂದ ಒರೆಸುವುದು ಅಥವಾ ಮೃದುವಾದ ಸ್ಪಂಜ್‍ನಿಂದ ಒರೆಸುವುದು ಸೂಕ್ತವಾಗಿರುತ್ತದೆ. ಹೊಕ್ಕಲಬಳ್ಳಿಯ ಉಳಿದ ಚೂರು ಬಿದ್ದು ಹೋದ ನಂತರ ಶಿಶುಗಳಿಗೆ ಸೂಕ್ತ ರೀತಿಯ ಆಯಿಲ್ ಮಸಾಜ್ ಹಾಗೂ ಸ್ನಾನ ಆರಂಭಿಸಬಹುದು.

ಶಿಶುಗಳು ಚಲನೆ ಆರಂಭಿಸುವವರೆಗೆ ಅವುಗಳಿಗೆ ದಿನ ಬಿಟ್ಟು ದಿನ ಸ್ನಾನ ಮಾಡಿಸಲು ಶಿಫಾರಸ್ಸು ಮಾಡಲಾಗುತ್ತದೆ. ಪದೇ ಪದೇ ಶಿಶುಗಳಿಗೆ ಸ್ನಾನ ಮಾಡಿಸುವುದರಿಂದ ತ್ವಚೆ ಒಣಗಿ ಕೆರೆತ, ಎಕ್ಸಿಮಾ ಅಥವಾ ಗುಳ್ಳೆಗಳಿಗೆ ದಾರಿಯಾಗಬಹುದು. ಸ್ನಾನವಾದ ನಂತರ ಶಿಶುವಿಗೆ ಒಣ ತ್ವಚೆ ಉಂಟಾಗುವುದನ್ನು ತಡೆಯಲು ಮಾಯಿಶ್ಚರೈಸರ್ ಅಥವಾ ಬೇಬಿ ಆಯಿಲ್ ಹಚ್ಚುವುದನ್ನು ಪರಿಗಣಿಸಿ. ಸ್ನಾನ ಮಾಡಿಸುವ ಮುನ್ನ ನಿಮಗೆ ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವುದರ ಖಾತ್ರಿ ಮಾಡಿಕೊಳ್ಳಿ. ಇದರಿಂದ ನೀವು ನಿಮ್ಮ ಶಿಶುವಿನ ಮೇಲೆ ಯಾವಾಗಲೂ ಗಮನವಿಟ್ಟಿರಬಹುದು ಜೊತೆಗೆ ಒಂದು ಸೆಕೆಂಡ್ ಕೂಡ ಶಿಶು ಗಮನವಿಲ್ಲದೆ ಉಳಿಯುವುದಿಲ್ಲ. ಸಾಬೂನು ಹಚ್ಚಿದ ದೇಹಗಳು ಕೈಯಿಂದ ಜಾರುತ್ತವೆ. ನಿಮ್ಮ ಶಿಶುವನ್ನು ದೃಢವಾಗಿ ಹಿಡಿದುಕೊಳ್ಳಿ. ಬೆನ್ನು ಮತ್ತು ಕುತ್ತಿಗೆಗೆ ದೃಢವಾದ ಬೆಂಬಲ ಇರುವಂತೆ ನೋಡಿಕೊಳ್ಳುವಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ನೀರು ಅತಿಯಾಗಿ ಬಿಸಿಯಾಗಿರುವುದು ಅಥವಾ ಅತಿಯಾಗಿ ತಣ್ಣಗಿರುವುದನ್ನು ತಪ್ಪಿಸುವ ಖಾತ್ರಿ ಮಾಡಿಕೊಳ್ಳಲು ಯಾವಾಗಲೂ ನೀರಿನ ತಾಪಮಾನವನ್ನು ಪರೀಕ್ಷಿಸಿ.

ನಿಮ್ಮ ಶಿಶುವಿನೊಂದಿಗಿನ ಅನುಬಂಧ
ನಿಮ್ಮ ಶಿಶುವನ್ನು ಅದು ನಿದ್ರೆ ಮಾಡುವುದಕ್ಕಾಗಿ ತೂಗುವುದು ಅಥವ ಅದರ ಬೆನ್ನು ತಟ್ಟುವುದರಿಂದ ತಾಯಿ ಮತ್ತು ಮಗುವಿನ ನಡುವೆ ವಿಶೇಷ ಅನುಬಂಧ ಉಂಟಾಗುತ್ತದೆ. ತಮ್ಮ ಶಿಶುವಿನೊಂದಿಗೆ ಇರುವುದನ್ನು ಪೋಷಕರು ಅಭ್ಯಾಸ ಮಾಡಿಕೊಳ್ಳಬೇಕು. ತಾಯಂದಿರು ಮತ್ತು ಶಿಶು ಒಂದೇ ಕೋಣೆಯಲ್ಲಿ ಮಲಗಲು ಅವಕಾಶ ಮಾಡಿಕೊಡಬೇಕು. ಅವಧಿಗೆ ಮುನ್ನ ಜನಿಸಿದ ಮತ್ತು ಕಡಿಮೆ ತೂಕದ ಮಕ್ಕಳಿಗೆ ಕಾಂಗ್ರೊ ಮದರ್‍ಕೇರ್ ಅನ್ನು ಅಭ್ಯಾಸ ಮಾಡಿಕೊಳ್ಳಬಹುದು. ಈ ಆರೈಕೆಯನ್ನು ಸಾಮಾನ್ಯ ಅವಧಿಗೆ ಜನಿಸಿದ ಮಕ್ಕಳಿಗೂ ಅಭ್ಯಾಸ ಮಾಡಿಸಬಹುದು. ಸಮಯ ಕಳೆದಂತೆ ಪೋಷಕರು ತಮ್ಮ ಶಿಶುವಿನ ಅಗತ್ಯಗಳು, ಇಚ್ಛೆಗಳು ಮತ್ತು ಅವುಗಳ ಕಾರ್ಯಕ್ರಮ ಪಟ್ಟಿಯನ್ನು ಅರ್ಥ ಮಾಡಿಕೊಳ್ಳಲು ಕಲಿಯುತ್ತಾರೆ.

ಅಸ್ವಸ್ಥತೆಯ ಲಕ್ಷಣಗಳನ್ನು ಗಮನಿಸಿ
ತಮ್ಮ ಶಿಶುಗಳು ತೊಂದರೆಯಲ್ಲಿದ್ದಾಗ ಅದನ್ನು ಅರ್ಥ ಮಾಡಿಕೊಳ್ಳಲು ಮತ್ತು ಅರಿತುಕೊಳ್ಳಲು ಪೋಷಕರು ಕಲಿತುಕೊಳ್ಳ ಬೇಕಲ್ಲದೆ, ಈ ಕುರಿತು ಜಾಗೃತಿ ಹೊಂದಿರಬೇಕಾದ ಅಗತ್ಯ ಇರುತ್ತದೆ. ತ್ವಚೆಯಲ್ಲಿ ಹಳದಿ ಅಥವಾ ನೀಲಿ ಬಣ್ಣ ಕಾಣಿಸುವುದು, ಅವಸರದ ಮತ್ತು ಸದ್ದಾಗುವ ಉಸಿರಾಟ, ಅತಿಯಾದ ಮಕ್ಕಳು ನಿಯಂತ್ರಿಸಲಾಗದ ಅಳು, ಆಹಾರ ಸೇವನೆ ರೀತಿಯಲ್ಲಿ ಬದಲಾ ವಣೆ, ರಕ್ತಸ್ರಾವ, ಜ್ವರ, ವಾಂತಿ ಮತ್ತು ಬೇಧಿ ಮುಂತಾದವುಗಳನ್ನು ಗಮನಿಸುತ್ತಿರಬೇಕು. ನಿಮ್ಮ ಮಗುವಿಗೆ ಈ ಅಸ್ವಸ್ಥತೆಗಳ ಲಕ್ಷಣಗಳು ಯಾವುದಾದರೂ ಕಂಡುಬಂದಲ್ಲಿ ನೀವೇ ಸ್ವಯಂ ವೈದ್ಯಕೀಯ ಮಾಡಬೇಡಿ. ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ನವಜಾತ ಶಿಶುವಿನ ಆರೈಕೆ ಮಾಡುವುದು ಪ್ರತಿಫಲಾತ್ಮಕ ಮತ್ತು ಸಂಪೂರ್ಣ ತೃಪ್ತಿ ನೀಡುವ ವಿಷಯವಾಗಿರುತ್ತದೆ. ಸರಿಯಾದ ಬೆಂಬಲ ಮತ್ತು ಸಲಹೆ ಇದ್ದರೆ ಇದು ಎಲ್ಲರೂ ನಿಮಗೆ ಹೇಳುವಷ್ಟು ಘಾಸಿಗೊಳ್ಳುವ ಅನುಭವ ಆಗಿರುವ ಅಗತ್ಯ ಇರುವುದಿಲ್ಲ.