Friday, 13th December 2024

“ಮೂತ್ರಪಿಂಡಗಳು – ಪೂಜಿಸಿ, ಸಂರಕ್ಷಿಸಬೇಕಾದ ದೇವಾಲಯಗಳು’’

ಮೋಹನ್ ಕೇಶವಮೂರ್ತಿ, ನಿರ್ದೇಶಕರು, ಮೂತ್ರಪಿಂಡರೋಗಶಾಸ್ತ್ರ ಮತ್ತು ಮೂತ್ರ ರೋಗಶಾಸ್ತ್ರ, ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು

ಪ್ರಶ್ನೋತ್ತರ

ಪ್ರಶ್ನೆ : ಮೂತ್ರಪಿಂಡ ರೋಗ ಇರುವ ಜನರಿಗೆ ಕೋವಿಡ್‍ನಿಂದ ಉಂಟಾಗುವ ಪ್ರಮುಖ ಪರಿಣಾಮ ಏನು?
ಕೋವಿಡ್ ಪಾಸಿಟಿವ್ ಆಗಿದ್ದರೂ ಕೂಡ ತಾವು ಕೋವಿಡ್ ಪಾಸಿಟಿವ್ ಎಂಬುದನ್ನು ಅರಿತಿರದ ರೋಗಿಗಳಿಂದ ಇತರೆ ಸೋಂಕು ಪಡೆಯುವುದನ್ನು ತಪ್ಪಿಸಲು ಹಾಗೂ ಈ ರೋಗಿಗಳು ಡಯಾಲಿಸಿಸ್‍ಗೆ ಒಳಗಾಗಲು ನಿರ್ದಿಷ್ಟವಾದ ಶಿಷ್ಟಾಚಾರ ಮತ್ತು ನಿರ್ದಿಷ್ಟ ಪ್ರದೇಶವನ್ನು ರಚಿಸಲಾಗಿದೆ. ಮೂತ್ರಪಿಂಡ ಕಸಿಗೆ ಸಂಬಂಧಿಸಿದಂತೆ, ಇಂದಿಗೂ ಸುರಕ್ಷತೆಯ ಶಿಷ್ಟಾಚಾರಗಳೊಂದಿಗೆ ಮೂತ್ರ ಪಿಂಡ ಕಸಿ ಕ್ರಮಗಳನ್ನು ಮುಂದುವರಿಸಿ ರುವ ದೇಶದ ಕೆಲವೇ ಕೆಲವು ಕೇಂದ್ರಗಳಲ್ಲಿ ನಮ್ಮದು ಒಂದಾಗಿದೆ.

ನಮ್ಮ ಸುರಕ್ಷತಾ ಶಿಷ್ಟಾಚಾರದಲ್ಲಿ ಎರಡು ಅಂಶಗಳಿವೆ. ಮೊದಲನೆಯದಾಗಿ ನಮ್ಮಲ್ಲಿ ರುವ ವಿಶೇಷ ಉಪಕರಣ ಕೋವಿಡ್ ವೈರಸ್ ಅನ್ನು ಸೋಸಿ ಪ್ರತ್ಯೇಕಿಸುತ್ತದೆ. ರೋಗಿಗೆ ಸಬ್ ಕ್ಲಿನಿಕಲ್ ಕೋವಿಡ್ ಸೋಂಕು ಇದ್ದರೂ ಕೂಡ ಈ ಕ್ರಮ ನಡೆಯುತ್ತದೆ. ಇದರಿಂದ ವೈದ್ಯರು, ದಾದಿಯರು ಮತ್ತು ಇತರೆ ರೋಗಿಗಳಿಗೆ ಕೋವಿಡ್ ಸೋಂಕು ಉಂಟಾಗುವ ಸಾಧ್ಯತೆಯನ್ನು ತಡೆಯಲಾಗುತ್ತದೆ.

ಎರಡನೇಯ ಮುಖ್ಯವಾದ ಅಂಶ ಎಂದರೆ ನಾವು ಇಮ್ಯುನೊಸೆಪ್ರಸೆಂಟ್(ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಔಷಧ)ಅನ್ನು ನಾವು ಯಾವ ರೀತಿ ಬದಲಾಯಿಸಿದ್ದೇವೆ ಅಂದರೆ ಇಂತಹ ವಾತಾವರಣದಲ್ಲಿಯೂ ಕೂಡ ರೋಗಿಗೆ ಕೋವಿಡ್-19 ಸೋಂಕಿನ ಯಾವುದೇ ಹಾನಿಕಾರಕ ಪರಿಣಾಮಗಳಿಂದ ಬಳಲುವುದಿಲ್ಲ.

ಪ್ರಶ್ನೆ : ದೀರ್ಘಕಾಲದ ಮೂತ್ರಪಿಂಡ ರೋಗದಿಂದ(ಸಿಕೆಡಿ) ಬಳಲುವ ರೋಗಿಗಳ ಆರೈಕೆ ಮಾಡುವುದು ಹೇಗೆ?
ದೀರ್ಘಕಾಲದ ಮೂತ್ರಪಿಂಡದ ರೋಗದಲ್ಲಿ ಮೂರು ಹಂತಗಳಿವೆ. ಮೊದಲ ಗುಂಪಿನವರಲ್ಲಿ ಅವರ ಮೂತ್ರಪಿಂಡ ಸಾಕಷ್ಟು ಉತ್ತಮವಾಗಿ ಕೆಲಸ ಮಾಡದಿದ್ದರೂ ಕೂಡ ಡಯಾಲಿಸಿಸ್ ಇಲ್ಲದೆ ಅವರು ಜೀವನವನ್ನು ನಿಭಾಯಿಸಿಕೊಂಡು ಹೋಗಬಹು ದಾಗಿರುತ್ತದೆ. ಎರಡನೇಯ ಗುಂಪಿನವರಲ್ಲಿ ಅವರು ಹಿಮೋಡಯಾಲಿಸಿಸ್ ಅಥವಾ ಪೆರಿಟೋನಿಯಲ್ ಡಯಾಲಿಸಿಸ್‍ಗೆ ಒಳಗಾಗುತ್ತಾರೆ. ಕೊನೆಯ ಗುಂಪಿನ ರೋಗಿಗಳಿಗೆ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳುವ ಅಗತ್ಯ ಇರುತ್ತದೆ. ಈ ಎಲ್ಲಾ ಮೂರು ಪ್ರಕರಣಗಳಲ್ಲಿ ನಾವು ಕೋವಿಡ್ ಸ್ಥಿತಿಗೆ ತಕ್ಕಂತೆ ಶಿಷ್ಟಾಚಾರಗಳನ್ನು ಬದಲಾಯಿಸಿಕೊಳ್ಳಬಹುದು. ಇದರಿಂದ ಕೋವಿಡ್ ವಾತಾವರಣದಲ್ಲಿಯೂ ಕೂಡ ನಿಗದಿತ ಸೇವೆಗಳನ್ನು ಪೂರೈಸಬಹುದಾಗಿದೆ.

ಪ್ರಶ್ನೆ : ಕರ್ನಾಟಕಕ್ಕೆ ಸಂಬಂಧಿಸಿದಂತೆ ಮೂತ್ರಪಿಂಡ ನಿರ್ವಹಣೆಯಲ್ಲಿ ಪ್ರಸ್ತುತ ಸ್ಥಿತಿ ಹೇಗಿದೆ?
ಕರ್ನಾಟಕದಲ್ಲಿ ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಅಗತ್ಯವಿರುವ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಇದಕ್ಕೆ ಪ್ರಾಥಮಿಕ ವಾಗಿ ಎಳೆಯ ವಯಸ್ಸಿನಲ್ಲಿಯೇ ಮಧುಮೇಹ ಹೊಂದಿರುವುದಾಗಿ ಪತ್ತೆ ಮಾಡಲಾದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಾರಣವಾಗಿದೆ. ಕರ್ನಾಟಕ ಮತ್ತು ನಮ್ಮ ದೇಶದಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಅತ್ಯಂತ ಸಾಮಾನ್ಯ ಕಾರಣ ಎಂದರೆ ಅದು ಮಧುಮೇಹವಾಗಿದೆ. ಮಧುಮೇಹ ಎಳೆಯ ವಯಸ್ಸಿನಲ್ಲಿ ಕಂಡುಬಂದಾಗ ಮೂತ್ರಪಿಂಡ ವೈಫಲ್ಯ ಉಂಟು ಮಾಡುತ್ತದೆ.

ಎರಡನೇಯ ಪ್ರಮುಖ ಅಂಶ ಎಂದರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾಂ ಮುಂತಾದ ಮೆಟ್ರೊ ನಗರಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆ ಹಾಗೂ ಒತ್ತಡದ ಕಾರಣಗಳಿಂದ ಎಳೆಯ ವಯಸ್ಸಿನವರಲ್ಲಿ ಅತಿಯಾದ ರಕ್ತದೊತ್ತಡ ಕಾಣಿಸಿಕೊಳ್ಳುತ್ತಿದೆ. ಎಳೆಯ ವಯಸ್ಸಿನಲ್ಲಿ ರಕ್ತದೊತ್ತಡ ಮೂತ್ರಪಿಂಡ ವೈಫಲ್ಯಕ್ಕೆ ಕೊಡುಗೆ ನೀಡಬಹುದು. ಮೂರನೇಯ ಮುಖ್ಯವಾದ ಅಂಶ ಎಂದರೆ, ಮೂತ್ರಪಿಂಡ ಕಾರ್ಯಲೋಪ ಉಂಟು ಮಾಡುವ ಮೂತ್ರಪಿಂಡ ರೋಗ ಜನ್ಮಜಾತ ಕಾರಣಗಳಿಂದ ಉಂಟಾಗಬಹುದಾಗಿದೆ. ಈಗ ನಾವು ಜನ್ಮಜಾತ ತೊಂದರೆಗಳನ್ನು ಎಳೆಯ ವಯಸ್ಸಿನಲ್ಲಿ ಶೀಘ್ರವಾಗಿ ಗುರುತಿಸಿ ಅವುಗಳನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು ಇಂದು ಸಾಧ್ಯವಿದೆ. ಈ ಮಕ್ಕಳು ಹಿಂದಿನ ದಶಕದಲ್ಲಿ ಪ್ರಾಣ ಕಳೆದುಕೊಂಡು ಬಿಡುತ್ತಿದ್ದರು. ಏಕೆಂದರೆ ಅವರ ರೋಗನಿರ್ಣಯ ಸಾಧ್ಯವಾಗುತ್ತಿರಲಿಲ್ಲ.

ರೋಗನಿರ್ಣಯ ಕೈಗೊಳ್ಳುವ ಸೌಲಭ್ಯಗಳು ಸುಧಾರಣೆಗೊಂಡಂತೆ ಜನ್ಮಜಾತ ಮೂತ್ರಪಿಂಡ ತೊಂದರೆಗಳುಳ್ಳ ಮಕ್ಕಳನ್ನು ಗುರುತಿಸಿ ಅವರನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಒಟ್ಟಾರೆಯಾಗಿ ಅದು ಜನ್ಮಜಾತ ಮೂತ್ರಪಿಂಡ ವೈಫಲ್ಯವಾಗಿರಲಿ ಅಥವಾ ಜೀವನಶೈಲಿಯಿಂದ ಉಂಟಾಗುವ ಮೂತ್ರಪಿಂಡ ವೈಫಲ್ಯವಾಗಿರಲಿ ಅಥವಾ ಮಧುಮೇಹದಿಂದ ಉಂಟಾಗುವ ಮೂತ್ರಪಿಂಡ ವೈಫಲ್ಯವಾಗಿರಲಿ ಗಮನಾರ್ಹ ಪ್ರಮಾಣದಲ್ಲಿ ಮೂತ್ರಪಿಂಡ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇವರ ಜೀವನವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅವರಿಗೆ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವಿರುವ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ.

ಪ್ರಶ್ನೆ: ದಕ್ಷಿಣ ರಾಜ್ಯಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ದೀರ್ಘಕಾಲದ ಮೂತ್ರಪಿಂಡ ರೋಗ ಪ್ರಕರಣಗಳ ಹೆಚ್ಚಳ ಕುರಿತು ಬೆಳಕು ಚೆಲ್ಲಬಲ್ಲ ಕೆಲವು ಅಂಕಿಅಂಶಗಳನ್ನು ನೀವು ಹಂಚಿಕೊಳ್ಳಬಲ್ಲಿರಾ?
ಶೀಘ್ರವಾಗಿ ಗುರುತಿಸಲಾದ ಮೂರು ಜನ್ಮಜಾತ ತೊಂದರೆಗಳ ಪ್ರಕರಣಗಳಲ್ಲಿ ಸರಿಸುಮಾರು ಒಂದು ಪ್ರಕರಣ ಮೂತ್ರಪಿಂಡ ವೈಫಲ್ಯಕ್ಕೆ ಸಂಬಂಧಿಸಿರುತ್ತದೆ. ಎರಡನೇಯದಾಗಿ ನಾಲ್ಕು ಮಧುಮೇಹಿಗಳಲ್ಲಿ ಒಬ್ಬರು 25 ವರ್ಷಗಳಿಗೂ ಹೆಚ್ಚಿನ ಕಾಲ ಮಧುಮೇಹ ಹೊಂದಿದ್ದರೆ ಅವರಿಗೆ ಕೊನೆಗೆ ಮೂತ್ರಪಿಂಡ ಕಾರ್ಯಲೋಪ ಕಾಡುತ್ತದೆ. ಅತಿಯಾದ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ಏಷಿಯನ್ನರ ಪೈಕಿ ಮೂರರಲ್ಲಿ ಒಬ್ಬರಿಗೆ ಯಾವುದಾದರೊಂದು ರೀತಿಯ ಮೂತ್ರಪಿಂಡ ಕಾರ್ಯ ಲೋಪ ಕಾಡುತ್ತದೆ. ಕರ್ನಾಟಕದಲ್ಲಿ ಆರು ಕೋಟಿ ಜನಸಂಖ್ಯೆ ಇದೆ ಎಂದರೆ ಪ್ರತಿ ವರ್ಷ ಸುಮಾರು 2000 ಹೊಸದಾಗಿ ಡಯಾ ಲಿಸಿಸ್ ಅಗತ್ಯವಿರುವ ರೋಗಿಗಳು ಮತ್ತು ಸುಮಾರು 400 ರೋಗಿಗಳಿಗೆ ಮೂತ್ರಪಿಂಡ ಕಸಿ ಪ್ರತಿ ವರ್ಷ ಅಗತ್ಯವಿರುತ್ತದೆ.

ಪ್ರಶ್ನೆ: ದೀರ್ಘಕಾಲೀನ ಮೂತ್ರಪಿಂಡ ರೋಗದಿಂದ ಬಳಲುತ್ತಿರುವ ರೋಗಿಗಳ ಕುಟುಂಬದವರು ಎದುರಿಸುವ ಆತಂಕಗಳು ಮತ್ತು ಸವಾಲುಗಳನ್ನು ಹೇಗೆ ಗಮನಿಸಬಹುದು?
ಪ್ರಮುಖವಾಗಿ ರೋಗಿಯ ಗ್ರಹಿಕೆಯಲ್ಲಿ ತಮಗೆ ಮೂತ್ರಪಿಂಡ ರೋಗ ಇದೆ ಎಂದು ಅರ್ಥ ಮಾಡಿಕೊಳ್ಳುವುದನ್ನು ಗಮನಿಸ ಬೇಕು. ಭಾವನಾತ್ಮವಾಗಿ ಯಾರಿಗೆ ಆಗಲಿ ಈ ವಿಷಯವನ್ನು ಸ್ವೀಕರಿಸುವುದು ಕಷ್ಟಕರವಾಗಿರುತ್ತದೆ. ರೋಗಿ ತನಗೆ ಮೂತ್ರಪಿಂಡ ವೈಫಲ್ಯ ಇದೆ ಎಂದು ಒಪ್ಪಿಕೊಂಡು ಅದನ್ನು ಸ್ವೀಕರಿಸುವಂತೆ ಮಾಡುವಲ್ಲಿ ಕುಟುಂಬದ ಬೆಂಬಲ ಮುಖ್ಯವಾಗಿರುತ್ತದೆ. ಎರಡನೇಯ ಅಂಶ ಎಂದರೆ ತಮಗೆ ಸರಿಪಡಿಸಬಹುದಾದ ಮೂತ್ರಪಿಂಡ ತೊಂದರೆ ಇದೆಯೇ ಅಥವಾ ಸರಿಪಡಿಸಲಾಗದ ಮೂತ್ರಪಿಂಡ ತೊಂದರೆ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಮೂತ್ರಪಿಂಡ ರೋಗಶಾಸ್ತ್ರ ತಜ್ಞರು ಅಥವಾ ಮೂತ್ರ ರೋಗಶಾಸ್ತ್ರ ತಜ್ಞರನ್ನು ಭೇಟಿ ಮಾಡುವುದಾಗಿರುತ್ತದೆ.

ಅದು ಸರಿಪಡಿಸಲಾಗದ ತೊಂದರೆ ಎಂದು ತಿಳಿದುಕೊಂಡ ನಂತರ ಡಯಾಲಿಸಿಸ್ ಮಾಡಿಸಿಕೊಳ್ಳುವುದನ್ನು ಆದಷ್ಟು ದೂರವಾ ಗಿರಿಸುವುದಕ್ಕಾಗಿ ಆಹಾರಕ್ರಮ ಮತ್ತು ಔಷಧಗಳ ಕಡೆಗೆ ಗಮನಹರಿಸಬೇಕಾಗುತ್ತದೆ. ಡಯಾಲಿಸಿಸ್ ಅನಿವಾರ್ಯವಾದ ನಂತರ ಸಿಸ್ತಿಲಾ ಅಥವಾ ಪೆರಿಟೋನಿಯಲ್ ಡಯಾಲಿಸಿಸ್ ಕ್ರಮವನ್ನು ಯೋಜಿಸಬೇಕಾಗುತ್ತದೆ. ಅದಕ್ಕಾಗಿ ಕ್ಯಾಥೆಟರ್ ಸೃಷ್ಟಿಸ ಬೇಕಾ ಗುತ್ತದೆ. ನಂತರ ರೋಗಿಗೆ ಹಿಮೋಡಯಾಲಿಸಿಸ್ ಅಗತ್ಯವಿದ್ದರೆ ಅವರಿಗೆ ಹತ್ತಿರವಾದ ಸ್ಥಳದಲ್ಲಿಯೇ ಈ ಸೌಲಭ್ಯ ಕಲ್ಪಿಸಬೇಕು.

ರೋಗಿಗೆ ಪೆರಿಟೋನಿಯಲ್ ಡಯಾಲಿಸಿಸ್ ಅಗತ್ಯವಿದ್ದಲ್ಲಿ ರೋಗಿಯೊಂದಿಗೆ ಕುಟುಂಬ ಸದಸ್ಯರೊಬ್ಬರು ಈ ಡಯಾಲಿಸಿಸ್ ಕ್ರಮವನ್ನು ಮನೆಯಲ್ಲಿಯೇ ನಡೆಸುವುದನ್ನು ಕಲಿತುಕೊಳ್ಳಬೇಕು. ರೋಗಿಯ ವಯಸ್ಸು ಚಿಕ್ಕದಾಗಿದ್ದಲ್ಲಿ ಅಥವಾ ಎಷ್ಟೇ ವಯಸ್ಸಿನವ ರಾಗಿದ್ದರೂ ಕೂಡ ರೋಗಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮತ್ತು ಕುಟುಂಬದ ಸದಸ್ಯರೊ ಬ್ಬರು ಮೂತ್ರ ಪಿಂಡ ದಾನ ಮಾಡಲು ಸಿದ್ಧರಾಗಿದ್ದಲ್ಲಿ ಮೂತ್ರಪಿಂಡ ಕಸಿ ಸಾಧ್ಯವಿರುತ್ತದೆ.

ತದನಂತರ ಮೂತ್ರಪಿಂಡ ಕಸಿ ಕುರಿತು ಯೋಜನೆ ಕೈಗೊಳ್ಳಲು ನಮ್ಮ ಫೋರ್ಟಿಸ್ ಆಸ್ಪತ್ರೆಯಂತಹ ದೊಡ್ಡ ಆಸ್ಪತ್ರೆಯನ್ನು ಅವರು ಸಂಪರ್ಕಿಸಬೇಕಾಗುತ್ತದೆ. ರೋಗಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಬಯಸಿದ್ದರೂ ಅವರಿಗೆ ಕುಟುಂಬದ ದಾನಿ ಅಥವಾ ಇತರೆ ಜೀವಂತ ದಾನಿಗಳು ಯಾರೂ ಲಭ್ಯವಿಲ್ಲದಿದ್ದರೆ ಅವರು ಸರ್ಕಾರ ಜೀವನ ಸಾರ್ಥಕತೆ ಏಜೆನ್ಸಿ ನಡೆಸುವ ಪಟ್ಟಿ ಯಲ್ಲಿ ರೋಗಿಯ ಹೆಸರನ್ನು ಸೇರಿಸಬೇಕಾಗುತ್ತದೆ. ರೋಗಿಯ ರಕ್ತದ ಗುಂಪಿಗೆ ಹೊಂದುವ ಸೂಕ್ತ ಮೂತ್ರಪಿಂಡ ಲಭ್ಯವಾಗುವು ದನ್ನು ಆಧರಿಸಿ ಅದು ದೊರಕಿದ ನಂತರ ಮೂತ್ರಪಿಂಡ ಕಸಿ ಕ್ರಮವನ್ನು ಯೋಜಿಸಬಹುದು. ಇವುಗಳು ರೋಗಿಗೆ ಇರುವ ಆಯ್ಕೆ ಗಳಾಗಿರುತ್ತವೆ.

ಮೊದಲನೆಯದಾಗಿ ಮೂತ್ರಪಿಂಡ ವೈಫಲ್ಯ ಕುರಿತಂತೆ ಮಾನಸಿಕ ಶಕ್ತಿ ಹೊಂದಿರುವುದು, ಎರಡನೇಯದಾಗಿ ಮೂತ್ರಪಿಂಡ ರೋಗತಜ್ಞರು ಅಥವಾ ಮೂತ್ರ ರೋಗ ತಜ್ಞರನ್ನು ಭೇಟಿ ಮಾಡಿ ಮೂತ್ರಪಿಂಡ ತೊಂದರೆಯನ್ನು ಸರಿಪಡಿಸುವ ಕಾರಣ ಕುರಿತು ಚರ್ಚಿಸುವುದು ನಂತರ ಅದು ಸರಿಪಡಿಸಲಾಗದು ಎಂಬುದು ತಿಳಿದುಬಂದ ನಂತರ ಡಯಾಲಿಸಿಸ್ ಯೋಜನೆ ಕೈಗೊಳ್ಳುವುದು, ಇದಕ್ಕಾಗಿ ಹಿಮೋ ಡಯಾಲಿಸಿಸ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ ಎರಡರಲ್ಲಿ ಯಾವುದು ಸೂಕ್ತ ಎಂದು ನಿರ್ಧರಿಸುವುದು, ನಂತರ ಮೂತ್ರಪಿಂಡ ಕಸಿ ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು, ಜೀವಂತ ದಾನಿ ಲಭ್ಯವಿದ್ದರೆ ನಮ್ಮ ಆಸ್ಪತ್ರೆಯಂತಹ ದೊಡ್ಡ ಆಸ್ಪತ್ರೆಯನ್ನು ಸಂಪರ್ಕಿಸುವುದು, ದಾನಿಗಳು ಯಾರೂ ಇಲ್ಲದಿದ್ದರೆ ಜೀವನ ಸಾರ್ಥಕತೆ ಪೋರ್ಟಲ್‍ನಲ್ಲಿ ಮೂತ್ರಪಿಂಡ ಪಡೆಯುವುದಕ್ಕಾಗಿ ಪಟ್ಟಿಯಲ್ಲಿ ಹೆಸರು ಸೇರಿಸುವುದು, ಇವೆಲ್ಲಾ ಸಾಧ್ಯತೆಗಳು ಇರುತ್ತವೆ. ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆಹಾರ ಕ್ರಮದಲ್ಲಿ ನಿರ್ಬಂಧಗಳು, ಸೂಕ್ತ ಪ್ರಮಾಣದ ನೀರು ಸೇವಿಸುವುದು ಮತ್ತು ಔಷಧ ಸೇವನೆಗಳು ಮುಂತಾದವುಗಳು ರೋಗಿಗೆ ನೆರವಾಗುತ್ತವೆ.

ಪ್ರಶ್ನೆ : ವಿಶ್ವ ಮೂತ್ರಪಿಂಡ ದಿನದ ಕಾರ್ಯಕ್ರಮ ಕುರಿತು ಕೆಲವು ಒಳನೋಟಗಳನ್ನು ಹಂಚಿಕೊಳ್ಳಲು ನೀವು ಇಚ್ಛಿಸುತ್ತೀರಾ?
ನಾವು ಹೊಂದಿರುವ ಮೂತ್ರಪಿಂಡಗಳ ಸಾಮಥ್ರ್ಯ ನಮ್ಮ ಜನ್ಮದೊಂದಿಗೆ ಬಂದಿರುತ್ತದೆ. ಅದನ್ನು ನವೀಕರಿಸಲು ಸಾಧ್ಯವಿರುವು ದಿಲ್ಲ. ಪಿತ್ತಜನಕಾಂಗದಂತೆ ಇದು ಪುನರುಜ್ಜೀವನಗೊಳ್ಳುವುದಿಲ್ಲ. ಆದ್ದರಿಂದ ನಿಮ್ಮ ಮೂತ್ರಪಿಂಡಗಳನ್ನು ಸಂರಕ್ಷಿಸಿಕೊಳ್ಳಿ. ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ಎರಡನೇಯದಾಗಿ ನಿಗದಿತವಾಗಿ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಿ.

ಮಧುಮೇಹಿಗಳಿಗೆ ಎರಡು ಸೂಚನೆಗಳು – ನೀವು ಮಧುಮೇಹಗಳಾಗಿದ್ದಲ್ಲಿ ಅಥವಾ ಮಧುಮೇಹಿ ಕುಟುಂಬದವರಾಗಿದ್ದಲ್ಲಿ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿ. ಅತಿಯಾದ ರಕ್ತದೊತ್ತಡ ತಪ್ಪಿಸುವ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳಿ. ದೇವರು ನಮಗೆ ನೀಡಿರುವ ಮೂತ್ರಪಿಂಡಗಳನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳಿರಿ. ಅವು ಜೀವನದುದ್ದಕ್ಕೂ ನಮ್ಮ ದೇಹದ ತ್ಯಾಜ್ಯವನ್ನು ಹೊರಹಾಕುವಂತೆ ನೋಡಿಕೊಳ್ಳಿರಿ. ಅವು ಪೂಜೆ ಮಾಡಿ ಸಂರಕ್ಷಿಸಬೇಕಾದ ದೇವಾಲಯಗಳಂತೆ.

ಮೂತ್ರಪಿಂಡಗಳು ಜೀವನದುದ್ದಕ್ಕೂ ಅಗತ್ಯವಾಗಿರುತ್ತವೆ ಎಂಬುದನ್ನು ನಾನು ಅಂತಿಮವಾಗಿ ಹೇಳಲು ಇಚ್ಛಿಸುತ್ತೇನೆ.

ಎಲ್ಲರೊಳಗೊಂದಾಗು ಮಂಕುತಿಮ್ಮ