Monday, 16th September 2024

ವನವನ್ನು ಗೌರವಿಸದೇ, ವನ್ಯಜೀವಿಗಳ ಫೋಟೋ ತೆಗೆಯಬಾರದು !

ನೂರೆಂಟು ವಿಶ್ವ

ನನ್ನ ಸ್ನೇಹಿತರೊಬ್ಬರು ಇತ್ತೀಚೆಗೆ ಅಮೆರಿಕದಿಂದ ಆಗಮಿಸಿದ್ದರು. ನಾವಿಬ್ಬರೂ ಕಬಿನಿ ಅಥವಾ ಬಂಡೀಪುರಕ್ಕೆ ಹೋಗುವುದೆಂದು ಮೊದಲೇ ನಿರ್ಧರಿಸಿದ್ದೆವು. ಅವರು ಸ್ವಯಂಘೋಷಿತ ವೈಲ್ಡ್ ಲೈಫ್ ಫೋಟೋ ಗ್ರಾಫರ್ ಬೇರೆ. ಆದರೆ ನನಗೆ ಏನೋ ತುರ್ತು ಕೆಲಸ ಬಂದಿದ್ದರಿಂದ ಅವರೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ನನಗೆ ಮತ್ತು ನನ್ನ ಸ್ನೇಹಿತರಿಗೆ ಪರಿಚಿತರಾಗಿರುವ ಮತ್ತೊಬ್ಬ ವ್ಯಕ್ತಿಯನ್ನು ಜತೆ ಮಾಡಿ, ಎರಡು ದಿನಗಳಿಗೆ ಬುಕಿಂಗ್ ಮಾಡಿಸಿ, ಅವರನ್ನು ಕಬಿನಿಗೆ ಕಳಿಸಿದೆ. ಅವರೊಂದಿಗೆ ಹೋಗದೇ ಇದ್ದುದಕ್ಕೆ ನನಗೆ ಅತೀವ ಬೇಸರವಾಯಿತು.

ಮೊದಲ ದಿನ ಅವರು ಕಬಿನಿ ತಲುಪುವ ಹೊತ್ತಿಗೆ ಮಧ್ಯಾಹ್ನ ಊಟದ ಸಮಯ. ಅದಾಗಿ ರೂಮು ಸೇರಿಕೊಂಡು ಒಂದು ತಾಸು ವಿಶ್ರಾಂತಿ ತೆಗೆದುಕೊಂಡ ಬಳಿಕ
ಸ-ರಿಗೆ ಬುಲಾವ್ ಬಂದಿತು. ಅವರಿಗಾಗಿಯೇ ವಿಶೇಷ ಸಫಾರಿ ವಾಹನ ಆಯೋಜಿಸಿದ್ದೆ. ಅವರು ಕಾಡಿನಲ್ಲಿ ಸುಮಾರು ಎರಡು ಗಂಟೆ ಸುತ್ತಾಡಿ ಸಾಯಂಕಾಲ ಆರೂವರೆ ಹೊತ್ತಿಗೆ ಮರಳಿದರು. ಅವರು ಅಲ್ಲಿಂದಲೇ ನನಗೆ ಫೋನ್ ಮಾಡಿ, ‘ನಾನು ಅಮೆರಿಕದಿಂದ ಹೊರಟ ಮುಹೂರ್ತವೇ ಸರಿ ಇಲ್ಲ ಅಂತ ಕಾಣುತ್ತೆ. ಇಷ್ಟೆಲ್ಲ ಅಲೆದಾಡಿದರೂ ಒಂದೇ ಒಂದು ಹುಲಿ ಕಣ್ಣಿಗೆ ಬೀಳಲಿಲ್ಲ’ ಎಂದು ತಮ್ಮ ಮೊದಲ ದಿನದ ಅನುಭವವನ್ನು ಹೇಳಿ ಬೇಸರ ವ್ಯಕ್ತಪಡಿಸಿದರು. ನಾನು
ಅವರಿಗೆ, ‘ನೀವು ಬಂದಿದ್ದು ಆ ಹುಲಿಗಳಿಗೆ ಗೊತ್ತಾಗಲಿಲ್ಲ. ನಾಳೆ ಬರುತ್ತವೆ ಬಿಡಿ. ಇಂದು ಆರಾಮವಾಗಿ ವಿಶ್ರಾಂತಿ ಮಾಡಿ’ ಎಂದು ತಮಾಷೆ ಮಾಡಿದೆ. ಅವರೂ ನಕ್ಕರು.

ಮರುದಿನ ಬೆಳಗ್ಗೆ ಐದು ಗಂಟೆಗೆ ಅವರು ತಮ್ಮ ಕೊಳವೆ ಯಾಕಾರದ ಕೆಮರಾ ಹಿಡಿದು ಸಫಾರಿಗೆ ಸಿದ್ಧವಾಗಿ ನಿಂತಿದ್ದರು. ಸಫಾರಿ ಮುಗಿಸಿ ಫೋನ್ ಮಾಡಬಹುದು, ಈಗ ಕಾಡಿನಲ್ಲಿ ಸಫಾರಿಯಲ್ಲಿರಬಹುದು ಎಂದು ನಾನು ಅವರಿಗೆ ಬೆಳಗ್ಗೆ ಫೋನ್ ಮಾಡಲಿಲ್ಲ. ಒಂಬತ್ತೂವರೆ ಹೊತ್ತಿಗೆ ಅವರ ಫೋನ್
ಬಂದಿತು. ‘ನಿನ್ನೆ ನಾನು ಹೇಳಲಿಲ್ಲವಾ? ಹಾಗೇ ಆಯಿತು’ ಎಂದರು. ನಾನು ‘ಏನಾಯಿತು? ನನಗೆ ಅರ್ಥ ಆಗ್ತಾ ಇಲ್ಲ’ ಎಂದೆ. ಅದಕ್ಕೆ ಅವರು, ‘ನಾನು ಅಮೆರಿಕದಿಂದ ಹೊರಟ ಗಳಿಗೆಯೇ ಸರಿ ಇಲ್ಲ ಅಂತ ಕಾಣುತ್ತೆ. ಇಂದು ಏನಿಲ್ಲವೆಂದರೂ ಮೂರು ತಾಸು ಕಾಡಿನಲ್ಲಿ ಅಲೆದಾಡಿರಬಹುದು. ಸಫಾರಿ ಡ್ರೈವರ್ ಕೂಡ ನಮ್ಮನ್ನು ಎಲ್ಲ ಕಡೆ ಸುತ್ತಾಡಿಸಿದ. ಒಂದೇ ಒಂದು ಹುಲಿ ಕಾಣಲಿಲ್ಲ. ನನಗೆ ಬಹಳ ಬೇಸರ ಆಗ್ತಿದೆ.

ನಾನು ಅಷ್ಟು ದೂರದಿಂದ ಬಂದರೂ, ಒಂದೇ ಒಂದು ಹುಲಿ ಕಾಣಲಿಲ್ಲ ಅಂದ್ರೆ ನನ್ನ ಬ್ಯಾಡ್‌ಲಕ್ ಅನ್ನದೇ ವಿಧಿಯಿಲ್ಲ’ ಎಂದು ವಿಚಿತ್ರ ಬಳಲಿಕೆ-ಹಳಹಳಿಕೆಯಲ್ಲಿ ಕೊರಗಿದರು. ನಾನು ಏನೂ ಹೇಳಲಿಲ್ಲ. ‘ಕಬಿನಿಯಲ್ಲಿರುವ ಆ ಹುಲಿ ಗಳಿಗೆ ನಿಮ್ಮನ್ನು ನೋಡುವ ನಸೀಬು ಇಲ್ಲ ಅಂತ ಅನಿಸುತ್ತಿದೆ. ಹೇಗಿದ್ದರೂ ಇಂದು ಕೂಡ ಮಧ್ಯಾಹ್ನ ಊಟವಾದ ಬಳಿಕ ಸಾಯಂಕಾಲ ಮತ್ತೊಮ್ಮೆ ಸಫಾರಿಗೆ ಕರೆದುಕೊಂಡು ಹೋಗ್ತಾರಲ್ಲ. ಆಗ ಸಿಗಬಹುದು’ ಎಂದು ಸಾಂತ್ವನ ಹೇಳಿದೆ. ಈ ಮಧ್ಯೆ ಅವರ ಜತೆಯಲ್ಲಿರುವ ನಮ್ಮಿಬ್ಬರ ಕಾಮನ್ ಫ್ರೆಂಡ್ ನನಗೆ ಫೋನ್ ಮಾಡಿ, ‘ಎಂಥ ಮನುಷ್ಯನನ್ನು ಗಂಟುಹಾಕಿದೆ ಮಾರಾಯ? ಹುಲಿ ಕಂಡಿಲ್ಲ ಎಂದು ಈತ ಒಂದೇ ಸಮನೆ ಹಲುಬುತ್ತಿದ್ದಾನೆ.. ಇವನ ಗೋಳನ್ನು ನೋಡಲು ಆಗುತ್ತಿಲ್ಲ. ಅಷ್ಟಾಗಿಯೂ ಹುಲಿಯನ್ನು ನೋಡಲೇಬೇಕು ಅಂದ್ರೆ ಬರುವಾಗ ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ, ಹುಲಿಯನ್ನು ತೋರಿಸಿಕೊಂಡು ಬರ್ತೇನೆ. ಈವಯ್ಯನಿಗೆ ಹುಲಿಯೇನಾದರೂ ಗೋಚರಿಸಿದರೆ, ಸಿಟ್ಟಿನಲ್ಲಿ
ಅದನ್ನು ಸಾಯಿಸಿಬಿಡಬಹುದು. ಆ ಥರ ಆಡ್ತಾ ಇದ್ದಾನೆ’ ಎಂದು ಅಲವತ್ತುಕೊಂಡ.

ಆ ದಿನ ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿ ತೆಗೆದು ಕೊಳ್ಳದೇ ನನ್ನ ಅಮೆರಿಕ ಸ್ನೇಹಿತರು ಸಾಯಂಕಾಲದ ಸಫಾರಿಗೆ ಸನ್ನದ್ಧನಾಗಿದ್ದರು. ಮಧ್ಯಾಹ್ನ ಮೂರೂವರೆ ಆಗುತ್ತಿದ್ದಂತೆ, ಸಫಾರಿ ವಾಹನ ಬಂತು. ಅದರಲ್ಲಿ ಅವರು ಕುಳಿತುಕೊಂಡ ವರೇ ಡ್ರೈವರ್‌ಗೆ, ‘ಈಗಲಾದರೂ ಹುಲಿಯನ್ನು ತೋರಿ
ಸ್ತೀರೋ, ಇಲ್ಲವೋ?’ ಎಂದು ಕೇಳಿದರು. ಅದಕ್ಕೆ ಡ್ರೈವರ್, ‘ಹುಲಿಯನ್ನು ನಾವು ಅಡಗಿಸಿ ಇಟ್ಟುಕೊಂಡಿರುವುದಿಲ್ಲ. ಒಮ್ಮೊಮ್ಮೆ ಅವು ಸೈಟ್ ಆಗುವುದಿಲ್ಲ. ಈ ಕಾಡಿನಲ್ಲಿ ನೂರಾರು ಹುಲಿಗಳಿವೆ. ಸಾಮಾನ್ಯವಾಗಿ ಅವು ದಿನವೂ ಕಾಣುತ್ತವೆ. ಒಮ್ಮೊಮ್ಮೆ ಮೂರ್ನಾಲ್ಕು ದಿನಗಳಾದರೂ ಕಾಣದೇ ಹೋಗಬಹುದು. ಈ ವಿಶಾಲ ಕಾಡಿನಲ್ಲಿ ಅವು ಸ್ವತಂತ್ರ. ಎಲ್ಲಿ ಬೇಕಾದರೂ ಅಲೆದಾಡಬಹುದು. ಒಮ್ಮೊಮ್ಮೆ ಕಾಣುತ್ತವೆ, ಒಮ್ಮೊಮ್ಮೆ ಕಾಣುವುದಿಲ್ಲ. ಕೆಲವು ಸಲ ಐದಾರು ಹುಲಿಗಳು ಎದುರಾಗಬಹುದು. ಆಹಾರ ಹುಡುಕಿಕೊಂಡು ಎಲ್ಲೆಲ್ಲಿಗೋ ಹೋಗುತ್ತವೆ. ಅವು ಎಲ್ಲಿಗೇ ಹೋದರೂ ನೀರು ಕುಡಿಯಲು ಕಾಡಿನಲ್ಲಿರುವ ಕೆರೆಗಳಿಗೆ ಬರುತ್ತವೆ. ನೋಡಿ, ಇಲ್ಲಿ ಅವುಗಳ ಹೆಜ್ಜೆ ಗುರುತುಗಳಿವೆ’ ಎಂದು ಸಮಾಧಾನದಿಂದ ವಿವರಿಸಿದ.

ಆದರೆ ನನ್ನ ಸ್ನೇಹಿತರಿಗೆ ಸಮಾಧಾನವಾಗಲಿಲ್ಲ. ‘ನಾವು ಅಷ್ಟು ದೂರದಿಂದ ಬಂದಿರುವುದು ಹುಲಿಗಳನ್ನು ನೋಡಲು. ಹುಲಿಯ ಹೆಜ್ಜೆ ಗುರುತುಗಳನ್ನು ನೋಡಲು ಅಲ್ಲ’ ಎಂದು ನನ್ನ ಸ್ನೇಹಿತರು ತುಸು ಒರಟಾಗಿಯೇ ಹೇಳಿದರು. ಅದಕ್ಕೆ ಸಫಾರಿ ಡ್ರೈವರ್ ಏನೂ ಹೇಳಲಿಲ್ಲ. ಅಂತೂ ಆ ದಿನ ಸಾಯಂಕಾಲವೂ ಹುಲಿ ದರ್ಶನ ಆಗಲಿಲ್ಲ. ನನ್ನ ಸ್ನೇಹಿತರ ಸಹನೆ ಕಟ್ಟೆಯೊಡೆದಿತ್ತು. ಸಾಯಂಕಾಲ ಏಳು ಗಂಟೆಗೆ ವಾಪಸ್ ಬರುತ್ತಿದ್ದಂತೆ, ‘ಇದೆಂಥ ದರಿದ್ರ ವ್ಯವಸ್ಥೆ? ಇವರು ಜನರ ಸುಲಿಗೆ ಮಾಡ್ತಾ ಇದ್ದಾರೆ. ನೂರಾರು ಹುಲಿಗಳಿವೆ ಅಂತಾರೆ, ಆದರೆ ಒಂದೇ ಒಂದು ಹುಲಿ ಕೂಡ ಕಾಣಲಿಲ್ಲ.

ಅನುಮಾನವೇ ಬೇಡ, ಮತ್ತೊಮ್ಮೆ ಬರಲಿ ಎಂಬ ಕಾರಣಕ್ಕೆ ಹುಲಿ ಇರುವ ಕಡೆ ನಮ್ಮನ್ನು ಕರೆದುಕೊಂಡು ಹೋಗ ಲಿಲ್ಲ. ಇಂಡಿಯಾದಲ್ಲಿ ಈ ರೀತಿ ಮೋಸ ಮಾಡ್ತಾರೆ ಎಂದು ಗೊತ್ತಿರಲಿಲ್ಲ. ಹತ್ತಿಪ್ಪತ್ತು ಸಾವಿರ ರುಪಾಯಿ ಖರ್ಚು ಮಾಡಿ ಜನ ಇಲ್ಲಿಗೆ ಹುಲಿಗಳನ್ನು ನೋಡಲು ಬರ್ತಾರೆ. ಆದರೆ ಇಲ್ಲಿ ಬಂದು
ನಿರಾಸೆಯಿಂದ ಮರಳುತ್ತಾರೆ. ಇದು ಇನ್ನೊಂದು ಸಲ ಬರಲಿ ಎಂಬ ಮಾರ್ಕೆಟಿಂಗ್ ಟ್ರಿಕ್ ಇರಬಹುದು ಎನಿಸುತ್ತದೆ’ ಎಂದು ಬಡಬಡಿಸಿದರು. ನಾನು ಅವರ ಬಳಿ
ಹೆಚ್ಚು ವಾದ ಮಾಡಲಿಲ್ಲ. ಅವರ ಪ್ಯಾಕೇಜ್ ಮುಗಿದಿತ್ತು. ಆದರೂ ಕಬಿನಿ ಜಂಗಲ್ ಲಾಡ್ಜ್ ಮ್ಯಾನೇಜರ್‌ಗೆ ಫೋನ್ ಮಾಡಿ, ನಾಳೆ ಬೆಳಗ್ಗೆಯೂ ಪ್ರತ್ಯೇಕ ವಾಹನದಲ್ಲಿ, ನುರಿತ ಡ್ರೈವರ್ ಜತೆ ಮಾಡಿ ನನ್ನ ಸ್ನೇಹಿತರನ್ನು ಸಫಾರಿಗೆ ಕರೆದುಕೊಂಡು ಹೋಗು ವಂತೆ ಬಿನ್ನವಿಸಿದೆ. ಆ ದಿನ ಸಾಯಂಕಾಲ ಮ್ಯಾನೇಜರ್ ಎಲ್ಲ ಡ್ರೈವರ್‌ಗಳನ್ನು ಕರೆದು, ‘ಹುಲಿ ಎಲ್ಲಾದರೂ ಸೈಟ್ ಆಗಿದೆಯಾ?’ ಎಂದು ವಿಚಾರಿಸಿದರು.

‘ಎರಡು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ’ ಎಂದು ಅವರು ಹೇಳಿದರು. ಸರಿ, ಮೂರನೇ ದಿನ ಬೆಳಗಿನ ಜಾವ ನನ್ನ ಅಮೆರಿಕ ಸ್ನೇಹಿತರು ಕೊನೆಯ ಪ್ರಯತ್ನವಾಗಿ, ಹುಲಿ ನೋಡಲು ಸಜ್ಜಾದರು. ಆ ದಿನ ಸುಮಾರು ಮೂರೂವರೆ ಗಂಟೆ ಕಾಡಿನಲ್ಲಿ ಅಲೆದಾಡಿ ವಾಪಸ್ ಬಂದರು. ‘ಅಜ್ಜಿಪಿಂಡ… ಉಹುಂ… ಹುಲಿ
ಕಾಣಲೇ ಇಲ್ಲ!’ ಹಾಗಂತ ಅಮೆರಿಕನ್ ಸ್ನೇಹಿತರ ಜತೆಗಿದ್ದ ನಮ್ಮಿಬ್ಬರ ಕಾಮನ್ ಫ್ರೆಂಡ್ ಹೇಳಿದ.. ಅವರು ಸ್ವಾಟೆ ಉದ್ದ ಮಾಡಿಕೊಂಡು, ಮೂಡು ಕೆಡಿಸಿ ಕೊಂಡು ಕುಳಿತಿರುತ್ತಾರೆ ಎಂಬುದು ನನಗೆ ಗೊತ್ತಿತ್ತು. ವಾಪಸ್ ಬೆಂಗಳೂರಿಗೆ ಬರಲಿ, ಮಾತಾಡಿದರಾಯಿತು, ಸಮಾಧಾನ ಹೇಳಿದರಾಯಿತು ಎಂದು ಅಂದುಕೊಂಡೆ. ಹೀಗಾಗಿ ಅವರನ್ನು ಸಂಪರ್ಕಿಸಲು ಹೋಗಲಿಲ್ಲ. ಅವರು ಅದೇ ದಿನ ಅಲ್ಲಿಂದ ಹೊರಟು ಸಾಯಂಕಾಲದ ಹೊತ್ತಿಗೆ ಬೆಂಗಳೂರಿಗೆ ಮರಳಿ ತಮ್ಮ ಮನೆ ಸೇರಿಕೊಂಡಿದ್ದರು.

ನಾನು ಮರುದಿನ ಬನಶಂಕರಿಯಲ್ಲಿರುವ ಅವರ ಮನೆಗೆ ಹೋದೆ. ಸ್ನೇಹಿತರ ಸ್ವಾಟೆ ಸರಿಹೋಗಿರಲಿಲ್ಲ. ‘ಯಾರ ಮುಖ ನೋಡಿ ಹೊರಟೆನೋ ಗೊತ್ತಿಲ್ಲ. ಬಹಳ ನಿರಾಸೆ ಆಗಿ ಹೋಯ್ತು. ಮೂರು ದಿನ ವೇಸ್ಟ್ ಆಗಿಹೋಯ್ತು. ಒಂದೇ ಒಂದು ಹುಲಿ ಕಾಣಿಸಲಿಲ್ಲ. ನನಗೆ ಅನಿಸ್ತಾ ಇದೆ, ಇದೊಂದು racket ಇರಬಹುದಾ ಅಂತ. ಜನರನ್ನು ಈ ಥರ ಮೋಸ ಮಾಡ್ತಾರೆ ಅಂತ ಗೊತ್ತಿರಲಿಲ್ಲ’ ಎಂದು ಅತೀವ ಬೇಸರದಿಂದ ಹೇಳಿದರು. ಅಷ್ಟು ಹೊತ್ತು ಸುಮ್ಮನಿದ್ದ ನಾನು, ಇನ್ನು ಮೌನ ಸಲ್ಲ ಎಂದು ತೀರ್ಮಾನಿಸಿದೆ. You missed a golden opportunity ಎಂದೆ. ಅವರು ನನ್ನತ್ತ ದುರುಗುಟ್ಟಿ ನೋಡಿದರು.

‘ಅಲ್ಲಾರಿ, ಪ್ರತಿದಿನ ನೂರಾರು ಜನ ಕಬಿನಿಗೆ ಹೋಗು ತ್ತಾರೆ. ನಿಮ್ಮ ಹಾಗೆ ಯಾರೂ ಆಪಾದನೆ ಮಾಡಿದ್ದನ್ನು ನಾನು ನೋಡಿಲ್ಲ, ಕೇಳಿಲ್ಲ. ನಾನು ಅನೇಕ ಸಲ ಅಲ್ಲಿಗೆ ಹೋಗಿ ಹುಲಿ ನೋಡದೇ ವಾಪಸ್ ಬಂದಿದ್ದೇನೆ. ಆದರೆ ಒಮ್ಮೆಯೂ ನನಗೆ ಬರಿಗೈಲಿ ಬಂದಿದ್ದೇನೆ ಎಂದು ಅನಿಸಿಲ್ಲ. ಕಾರಣ ನಾನು ಅಲ್ಲಿಗೆ ಹೋಗುವುದು ಹುಲಿಯೊಂದನ್ನೇ ನೋಡಲು ಅಲ್ಲ. ನಾನು ಅಲ್ಲಿಗೆ ಹೋಗುವುದು ಕಾಡನ್ನು ನೋಡಲು. ಕಾಡಿನಲ್ಲಿರುವ ನೂರಾರು ಅಂಶಗಳಲ್ಲಿ ಹುಲಿಯೂ ಒಂದು. ಹುಲಿಯೇ
ಸರ್ವಸ್ವ ಅಲ್ಲ. ಒಂದು ಕ್ಷಣ ಅದನ್ನು ಪಕ್ಕಕ್ಕೆ ಇಡಿ. ಕಬಿನಿ ನಮ್ಮ ರಾಜ್ಯದ ಅಪರೂಪದ ಅಭಯಾರಣ್ಯಗಳಲ್ಲೊಂದು. ಅದರಲ್ಲಿ ಅಸಂಖ್ಯ ಸಸ್ಯ ಪ್ರಭೇದಗಳಿವೆ. ನೂರಾರು ವರ್ಷಗಳ ಮರ ಗಳಿವೆ, ಗಿಡಮೂಲಿಕೆಗಳಿವೆ. ಜಿಂಕೆ, ಕಾಡೆಮ್ಮೆ, ಸಾಂಬಾರ, ನರಿ, ತೋಳ, ಚಿರತೆ, ಬ್ಲ್ಯಾಕ್ ಪ್ಯಾಂಥರ್, ಆನೆ ಸೇರಿದಂತೆ
ಅಸಂಖ್ಯ ವನ್ಯಜೀವಿಗಳಿವೆ. ನೂರಾರು ಪಕ್ಷಿ ಸಂಕುಲಗಳಿವೆ.

ಕಣ್ಣಿಗೆ ಕಾಣುವ ಮತ್ತು ಕಾಣದ ಇನ್ನೂ ಅವೆಷ್ಟು ಜೀವಿಗಳಿವೆಯೋ ಗೊತ್ತಿಲ್ಲ… ‘ಆ ಕಾಡು ಒಂದು ಅದ್ಭುತ ಜಗತ್ತು. ಲಕ್ಷಾಂತರ ಜೀವಿಗಳಿಗೆ ಆಶ್ರಯ ನೀಡಿದ ಪವಿತ್ರ ತಾಣ. ಅಂಥ ಒಂದು ಕಾಡು ಸಾವಿರಾರು ವರ್ಷಗಳ ನೈಸರ್ಗಿಕ ಕ್ರಿಯೆಗಳಿಂದ ಅವತರಿಸಿರುವಂಥದ್ದು. ಆ ಕಾಡಿನ ಮಧ್ಯೆ ನಿಂತು ಮೌನವನ್ನು ಧೇನಿಸು
ವುದು ಸಹ ಒಂದು ದಿವ್ಯ ಅನುಭೂತಿ. ಹಕ್ಕಿ-ಪ್ರಾಣಿಗಳ ಸಂವಹನವನ್ನು ಆಲಿಸುವುದು ಒಂದು ಅನೂಹ್ಯ ಅನುಭವ. ಸಮುದ್ರಕ್ಕೆ ಹೋಗುವವರು ತಮ್ಮ ತಮ್ಮ ಸಾಮರ್ಥ್ಯಕ್ಕನು ಗುಣವಾಗಿ ನೀರನ್ನು ಮೊಗೆದು ತರುವಂತೆ, ಕಾಡಿಗೆ ಹೋದ ವರೂ ತಮ್ಮ ಅನುಭವಕ್ಕೆ ನಿಲುಕುವಷ್ಟನ್ನು ತೆಗೆದುಕೊಂಡು ಬರುತ್ತಾರೆ. ಬರೀ ಜೀರುಂಡೆಗಳ ಸದ್ದನ್ನು ಕೇಳಲು, ಮಳೆ ಹುಳು, ಮುಂಗುಸಿಯನ್ನು ನೋಡಲು ಕಾಡಿಗೆ ಹೋಗುವವರಿದ್ದಾರೆ.

ಅಲ್ಲಿಂದ ಬರುವಾಗ ಯಾರೂ ಖಾಲಿ ಅನುಭವದಿಂದ ಬರುವುದಿಲ್ಲ. ಕಾಡಿನಲ್ಲಿ ಬಿದ್ದ ಆನೆ ಲದ್ದಿ ನೂರು ವಿಷಯಗಳನ್ನು ಹೇಳುತ್ತದೆ. ಹುಲಿ ಹೆಜ್ಜೆಗಳು ಅನೇಕ ಪಾಠಗಳನ್ನು ಕಲಿಸುತ್ತವೆ…. ‘ಕಾಡಿನಲ್ಲಿ ಹುತ್ತವನ್ನು ನೋಡಿದರೆ ಸುತ್ತಮುತ್ತ ನೀರಿನ ಪಸೆ ಇದೆ ಎಂಬುದು ಗೊತ್ತಾಗುತ್ತದೆ, ನೀರಿನ ಪಸೆ ಕಂಡರೆ ಹಸುರು ಹುಲ್ಲುಗಳಿವೆ ಎಂಬುದು ತಿಳಿಯುತ್ತದೆ, ಹುಲ್ಲುಗಳಿರುವೆಡೆ ಜಿಂಕೆಗಳಿವೆ ಎಂದು ಅಂದಾಜು ಮಾಡಬಹುದು, ಜಿಂಕೆಗಳಿದ್ದರೆ ಅಲ್ಲಿ ಹುಲಿಗಳಿವೆ ಎಂದು ತೀರ್ಮಾನಿಸ
ಬಹುದು. ಕಾಡಿನಲ್ಲಿ ನಾವು ನೋಡುವುದೆಲ್ಲ ಹೊಸತು.

ಪ್ರತಿ ಕ್ಷಣವೂ ವಿನೂತನ. ಲಕ್ಷಾಂತರ ಜೀವಿಗಳಿದ್ದರೂ ಅಲ್ಲೊಂದು ಸುವ್ಯವಸ್ಥೆ (ಆರ್ಡರ್) ಇರುವುದನ್ನು ಕಾಣಬಹುದು. ಅಲ್ಲಿ ಸರಕಾರ ಇಲ್ಲ. ಆದರೂ ಪ್ರಾಣಿ(ಪ್ರಜಾ)ಪ್ರಭುತ್ವ ಇದೆ. ಗ್ಯಾರಂಟಿ ಸ್ಕೀಮುಗಳು ಇಲ್ಲದಿದ್ದರೂ ಅಲ್ಲಿ ಯಾರೂ ಉಪವಾಸ ಬಿದ್ದು ಸಾಯುವುದಿಲ್ಲ. ಕಾಡಿನಂಥ ಲೋಕ ಮತ್ತೊಂದಿಲ್ಲ. ಇರುವೆಗಳು, ಗೆದ್ದಲುಗಳು, ಕಣಜ ಗಳು, ಕೆಂಪಿರುವೆಗಳು, ಕಟ್ಟಿರುವೆಗಳು, ಗೊರವಂಟಗಳು ಇರುವಂತೆ ಹುಲಿಗಳೂ ಇವೆ…

‘ಹುಲಿಯೇ ಅಲ್ಲಿನ ಸರ್ವಸ್ವವಲ್ಲ. ಇವೆಲ್ಲವುಗಳನ್ನೂ ಕೆಮರಾದಲ್ಲಿ ಸೆರೆ ಹಿಡಿಯಬಹುದು. ಹುಲಿ ಫೋಟೋ ಕ್ಲಿಕ್ಕಿಸಿದರೆ ಮಾತ್ರ ವೈಲ್ಡ್ ಲೈಫ್ ಫೋಟೋಗ್ರಾಫರ್ ಎಂದು ಭಾವಿಸಬೇಕಿಲ್ಲ. ಕಾಡಿನಲ್ಲಿರುವ ಯಾವ ಪ್ರಾಣಿ-ಪಕ್ಷಿ- ಮರ-ಗಿಡಗಳ ಫೋಟೋ ತೆಗೆದರೂ ನೀವು ವೈಲ್ಡ್ ಲೈಫ್ ಫೋಟೋಗ್ರಾಫರ್ ಎಂದು ಕರೆಯಿಸಿಕೊಳ್ಳುತ್ತೀರಿ. ಕಾಡು ಮತ್ತು ವನ್ಯಪ್ರಾಣಿಗಳನ್ನು ನಾವು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು. ಕಾಡನ್ನು ಅರಿಯದೇ, ಅಲ್ಲಿನ ಸಂರಚನೆ
ಯನ್ನು ಅರ್ಥ ಮಾಡಿಕೊಳ್ಳದೇ ಹುಲಿ ಫೋಟೋ ತೆಗೆಯಬಾರದು. ಅದರ ಬದಲು ಝೂಗೆ ಹೋಗಿ ಹುಲಿ ಚಿತ್ರ ಸೆರೆಹಿಡಿಯಬಹುದಲ್ಲ?’ ಹಾಗಂತ ಒಂದು ಸಣ್ಣ ಬೌದ್ಧಿಕ್ ಕೊಟ್ಟೆ.

ಯಾಕೋ ಸ್ವಲ್ಪ harsh ಆಯಿತೇನೋ ಎಂದು ನನಗೇ ಅನಿಸಿತು. ನನ್ನ ಸ್ನೇಹಿತರು ಮಾತಾಡಲಿಲ್ಲ. ಅದಕ್ಕಿಂತ ಅವರಿಗೆ ಹುಲಿ ಸಿಗದಿದ್ದರೇನಾಯಿತು ಎಂಬ ಸಮಾಧಾನವೂ ನೆಲೆಸಲಾರಂಭಿಸಿರಬೇಕು ಎಂದೆನಿಸಿತು. ಆದರೂ ನಾನು ಅವರಿಗೆ Cushion effect ನೀಡಲೆಂದು ಆಫ್ರಿಕಾದ ರವಾಂಡಾದ ಕಾಡಿನಲ್ಲಿ ನನಗಾದ ಅನುಭವವನ್ನು ಹೇಳಿದೆ. ‘ನನಗೂ ನಿಮ್ಮ ಹಾಗೆ ಆಗಿತ್ತು. ಸುಮಾರು ಐವತ್ತು ಸಾವಿರ ರುಪಾಯಿ ತೆತ್ತು, ರವಾಂಡಾದ ಕಾಡಿಗೆ ಗೊರಿಲ್ಲಾಗಳನ್ನು ನೋಡಲು ಮೊದಲ ಸಲ ಹೋಗಿದ್ದೆ. ಬೆಳಗ್ಗೆ ನಾಲ್ಕೂವರೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆ ತನಕ ಆ ದಟ್ಟ ಅರಣ್ಯದಲ್ಲಿ ನಡೆದಾಡಿದರೂ ಗೊರಿಲ್ಲಾಗಳು ಕಂಡಿರಲಿಲ್ಲ.

ಆದರೆ ನನಗೆ ಗೊರಿಲ್ಲಾಗಳನ್ನು ನೋಡಲಿಲ್ಲ ಎಂಬ ನಿರಾಸೆ ಆಗಲಿಲ್ಲ. ಕಾರಣ ಆ ಕಾಡು ಭಯಂಕರವಾಗಿತ್ತು. ನನ್ನ ಜೀವನದಲ್ಲಿ ಐನೂರು ವರ್ಷಗಳ ಪ್ರಾಯದ ಮರಗಳಿಂದ ಆವೃತವಾದ, ಭೀಕರ ಮೌನ ಆವರಿಸಿರುವ ಕಾಡನ್ನು ನೋಡಿರಲೇ ಇಲ್ಲ. ಆ ಮರಗಳ ಕೆಳಗಿನ ಸಸ್ಯಗಳು ಸೂರ್ಯನನ್ನೇ ನೋಡಿರಲಿಕ್ಕಿಲ್ಲ. ಅಂಥ ಗೊಂಡಾರಣ್ಯ! ಅಲ್ಲಿ ನಾನೆಲ್ಲಿದ್ದೇನೆ, ಎಲ್ಲಿಗೆ ಹೋಗುತ್ತಿದ್ದೇನೆ, ಎಲ್ಲಿಂದ ಬಂದೆ.. ಯಾವುದೂ ಗೊತ್ತಾಗುತ್ತಿರಲಿಲ್ಲ. ಗೈಡ್ ಇಲ್ಲದೇ ಒಂದು ಹೆಜ್ಜೆ ಇಡುವುದೂ ಅಸಾಧ್ಯವಾದ ಕಾಡು. ಅದು ಅಂಥ ಭೀತಿ ಹುಟ್ಟಿಸುವ ಕಾಡು. ಅಲ್ಲಿ ನಿಮಗೇ ನಾದರೂ ಆದರೆ, ಕಾಡುಪ್ರಾಣಿಯೇನಾದರೂ ಛಂಗನೆ ಎಳೆದುಕೊಂಡು ಹೋದರೆ,
ನಿಮ್ಮ ಸುಳಿವೂ ಸಿಗಲಿ ಕ್ಕಿಲ್ಲ. ಹೊರ ಜಗತ್ತಿಗೆ ಗೊತ್ತಾಗುವ ಹೊತ್ತಿಗೆ ಒಂದು ವಾರ ಕಳೆದಿರುತ್ತದೆ.

ಆ ಕಾಡಿನಲ್ಲಿ ಕಳೆಯುವ ಕ್ಷಣ ಕ್ಷಣವೂ ಅಮೂಲ್ಯ, ಅನೂಹ್ಯ. ಗೊರಿಲ್ಲಾ ಕಂಡರೆಷ್ಟು, ಬಿಟ್ಟರೆಷ್ಟು? ನನ್ನ ಜತೆಗೆ, ಗೊರಿಲ್ಲಾಗಳ ಬಗ್ಗೆ ಮೂವತ್ತೈದು ವರ್ಷಗಳ
ಕಾಲ ಅಧ್ಯಯನ ಮಾಡಿದ ಅಮೆರಿಕನ್ ದಂಪತಿಯಿದ್ದರು. ಅವರನ್ನು ಭೇಟಿ ಮಾಡಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಆ ಕಾಡಿನಲ್ಲಿ ಸಿಂಗಳೀಕ ನಮ್ಮನ್ನು ಬೆನ್ನಟ್ಟಿ ಬಂದ ಪ್ರಸಂಗ ನೆನಪಿಸಿಕೊಂಡರೆ ಮೈಚಳಿ ಹುಟ್ಟುತ್ತದೆ. ಇವೆಲ್ಲವನ್ನೂ ಅನುಭವಿಸದೇ ಬರೀ ಗೊರಿಲ್ಲಾಗಳ ಹಿಂದೆ ಬಿದ್ದರೆ ಏನು ಬಂತು? ಗೊರಿಲ್ಲಾ ಒಂದು ನೆಪ. ಆ ನೆಪ ಮುಂದಿಟ್ಟುಕೊಂಡು ನಾನು ಆಫ್ರಿಕಾದ ಕಾಡಿನ ದಟ್ಟ ಅನುಭವ ಪಡೆದುಕೊಂಡೆ. ಮರುದಿನ ಅಲ್ಲಿಗೆ ಹೋದಾಗ ಗೊರಿಲ್ಲಾಗಳ ದರ್ಶನ ವಾಯಿತು ಅದು ಬೇರೆ ಮಾತು…’ ಹಾಗಂತ ನನ್ನ ಸ್ನೇಹಿತರಿಗೆ ಹೇಳಿದೆ. ಅವರ ಮುಖದಲ್ಲಿ ಸಮಾಧಾನದ ಸೆಳಕುಗಳು ಕಾಣಿಸಿಕೊಂಡವು.

‘ಕಾಡನ್ನು ನೋಡಲು, ವನ್ಯಪ್ರಾಣಿಗಳನ್ನು ಕೆಮರಾದಲ್ಲಿ ಸೆರೆ ಹಿಡಿಯಲು ಒಂದು ಮನಸ್ಥಿತಿ ಬೇಕು. ಕಾಡಿನ ಮೇಲೆ ಪ್ರೀತಿ ಇಟ್ಟುಕೊಳ್ಳದೇ, ಕಾಡನ್ನು ಗೌರವಿ ಸದೇ, ಅದರಲ್ಲಿ ಮನೆ ಮಾಡಿಕೊಂಡಿರುವ ವನ್ಯಜೀವಿಗಳ ಫೋಟೋ ತೆಗೆಯಬಾರದು. ವನ್ಯಜೀವಿಗಳ ಫೋಟೋ ತೆಗೆಯುವುದೆಂದರೆ, ಅವುಗಳ ಸಂರಕ್ಷಣೆಗೆ ಬದ್ಧನಾಗಿದ್ದೇನೆ ಎಂದು ಪ್ರಮಾಣ ಮಾಡಿದಂತೆ. ಈ ಭಾವನೆ ಇಲ್ಲದಿದ್ದರೆ, ಅದೊಂದು ಶುಷ್ಕಕ್ರಿಯೆ ಆಗುತ್ತದೆ. ಅಂಥ ಫೋಟೋಗಳಿಗೆ ಮಾನ್ಯತೆ ಇಲ್ಲ. ಅಂಥ ಫೋಟೋಗ್ರಾಫರ್, ಹಕ್ಕಿಗಳಿಗೆ ಕಲ್ಲಿನಲ್ಲಿ ಹೊಡೆದು, ಅವು ಹಾರುವ ದೃಶ್ಯವನ್ನು ಸೆರೆ ಹಿಡಿವ ಪಡಪೋಶಿಯಂತೆ ಕಾಣುತ್ತಾನೆ’ ಎಂದೆ. ನನ್ನ ಸ್ನೇಹಿತರು ಮಾತಾಡಲಿಲ್ಲ. ನಾನೂ ಮುಂದುವರಿಸಲಿಲ್ಲ.

Leave a Reply

Your email address will not be published. Required fields are marked *