ಮನಮಂಥನ
ಮಹಾದೇವ ಬಸರಕೋಡ
ಸುಮಾರು ಮೂರು ವರ್ಷದ ಮಗುವದು. ಅದರ ತಂದೆ-ತಾಯಿ ಸಾಫ್ಟ್ ವೇರ್ ಉದ್ಯೋಗಿಗಳು. ಮಗುವೊಂದು ಬೇಕು ಎಂಬ ತೀವ್ರ ಬಯಕೆಯಿದ್ದರೂ ಒಂದಷ್ಟು ಆರೋಗ್ಯದ ಸಮಸ್ಯೆಗಳಿಂದಾಗಿ ಮಗುವಾಗದೆ ತೊಳಲಾಡು ತ್ತಿದ್ದರು. ಇಂಥ ಸಾಕಷ್ಟು ಮಾಸಿಕ ಯಾತನೆಗಳ ನಂತರ ವೈದ್ಯಕೀಯ ತಂತ್ರಜ್ಞಾನದ ಮೊರೆ ಹೋಗಿ ವೈದ್ಯರ ಮಾರ್ಗದರ್ಶನ ಪಡೆದರು. ಕೆಲ ವರ್ಷದ ನಂತರ ಈ ಮಗು ಅವರ ಮಡಿಲು ಸೇರಿತ್ತು. ಮಗು ತೀರಾ ಅಪರೂಪ ದ್ದಾಗಿದ್ದರಿಂದ ಅದರ ಕುರಿತಾಗಿ ಹೆತ್ತವರಿಗೆ, ಅದರಲ್ಲೂ ನಿರ್ದಿಷ್ಟವಾಗಿ ಆ ತಾಯಿಗೆ ಎಲ್ಲಿಲ್ಲದ ಕಾಳಜಿ. ಮಗುವನ್ನು ಸಾಧ್ಯವಾದಷ್ಟು ಚೆನ್ನಾಗಿ ಬೆಳೆಸಬೇಕೆಂಬ ಸಹಜ ತುಡಿತ.
ಅವರು ತಮ್ಮ ಕುಟುಂಬದಿಂದ ದೂರವಿದ್ದರು. ಒಂದೊಮ್ಮೆ ಕುಟುಂಬದ ಸದಸ್ಯರು ಮಾರ್ಗದರ್ಶನ ನೀಡಿದರೂ ಅದು ಇವರಿಗೆ ಅಷ್ಟಾಗಿ ಸಹ್ಯವಾಗುತ್ತಿರಲಿಲ್ಲ. ಹೀಗಾಗಿ, ಯೂಟ್ಯೂಬ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿ, ಚೆನ್ನಾಗಿದೆಯೆಂದು ತಮಗೆ ತೋರಿದ ವಿಡಿಯೋ ಕ್ಲಿಪ್‌ಗಳಲ್ಲಿ ವಿವರಿಸುವ ವಿವಿಧ ವಿಧಾನಗಳನ್ನು ಅನುಸರಿಸಿ ಮಗುವಿನ ಊಟದ ಮೆನು ತಯಾರಿಸುತ್ತಿದ್ದರು. ಅದರಂತೆಯೇ ಉಣಿಸುವ ಪದ್ಧತಿಯನ್ನೂ ಅನುಸರಿಸುತ್ತಿದ್ದರು. ನಾನೊಮ್ಮೆ ಆಕಸ್ಮಿಕವಾಗಿ ಅವರ ಮನೆಗೆ ಹೋದಾಗ, ತಾಯಿ-ತಂದೆ ಇಬ್ಬರೂ ಮಗುವಿನ ಕೈಗೆ ಮೊಬೈಲ್ ಕೊಟ್ಟು ಉಣಿಸುತ್ತಿದ್ದರು. ಮಗು ಮೊಬೈಲ್ ವೀಕ್ಷಣೆಯಲ್ಲಿ ತಲ್ಲೀನ ವಾಗಿತ್ತೇ ವಿನಾ ಊಟದತ್ತ ಲಕ್ಷ್ಯವಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಊಟ ಬೇಡವೆಂದು ರಚ್ಚೆಹಿಡಿದು ಅಳುತ್ತಲೇ ಇತ್ತು.
ಇವರಿಬ್ಬರು ಮಾತ್ರ ಆ ಬಗ್ಗೆ ಯೋಚಿಸದೇ, ಹೇಗಾದರೂ ಮಾಡಿ ಊಟ ಮಾಡಿಸಲೇಬೇಕೆಂಬ ‘ಭೀಷ್ಮ ಪ್ರತಿಜ್ಞೆ’ ತೊಟ್ಟವರಂತೆ ವರ್ತಿಸುತ್ತಿದ್ದರು. ನನಗೆ ತಿಳಿದ ಒಂದಷ್ಟು ವಿಸಯಗಳನ್ನು ಅವರ ಗಮನಕ್ಕೆ ತರಲು ಯತ್ನಿಸಿದೆನಾದರೂ, ಅದನ್ನು ಕಿವಿಗೆ ಹಾಕಿಕೊಳ್ಳುವ ವ್ಯವಧಾನ ಅವರಲ್ಲಿರಲಿಲ್ಲ. ಹೀಗಾಗಿ ಅಸಹಾಯಕತೆ ಯಿಂದ ಸುಮ್ಮನಾದೆ. ಮಗುವಿನ ಸ್ಥಿತಿ ಕಂಡು ‘ಅಯ್ಯೋ’ ಎನ್ನಿಸಿದರೂ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.
ನಾವು ಮಗುವನ್ನು ತುಂಬಾ ಪ್ರೀತಿಸುತ್ತೇವೆ ಎಂಬ ಭ್ರಾಮಕತೆಯಲ್ಲಿ, ಮಗುವಿಗೆ ಇಷ್ಟವಿದೆಯೇ? ಅದಕ್ಕೆ ಹಸಿವಾಗಿದೆಯೋ ಇಲ್ಲವೋ? ಅದಕ್ಕೆ ಯಾವ ರೀತಿಯ ಆಹಾರ ಇಷ್ಟ? ಎಂಬೆಲ್ಲ ಸಂಗತಿಗಳನ್ನು ಯೋಚಿಸದೇ, ನಮಗೆ ತಿಳಿದ ಎಲ್ಲವನ್ನೂ ಸರಿಯೆಂದು ಭಾವಿಸಿ ಮಗುವಿನ ಮೇಲೆ ಒತ್ತಡ ಹೇರುತ್ತೇವೆ. ಇದು ನಿಜಕ್ಕೂ ಸಮ್ಮತ ಸಂಗತಿಯಲ್ಲ ಎಂಬುದು ಕೆಲವೊಮ್ಮೆ ಅರಿವಿಗೆ ಬರುವುದಿಲ್ಲ. ಇಲ್ಲೂ ಅದೇ ಆಗಿತ್ತು. ನಾವು ಸಮಯಕ್ಕೆ ಸರಿಯಾಗಿ ಪುಷ್ಟಿದಾಯಕ ಆಹಾರವನ್ನು ಉಣಿಸಬೇಕು, ಅದುವೇ ಪ್ರೀತಿ-ಕಾಳಜಿ- ಕರ್ತವ್ಯ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.
ಇನ್ನು ಕೆಲವು ಬಾರಿ ನಮಗೆ ನಮ್ಮ ಕೆಲಸ, ಅಧಿಕಾರ, ಅಂತಸ್ತು, ವೈಭವಪೂರಿತ ಬದುಕು ಪ್ರಧಾನವಾಗುತ್ತವೆ. ‘ಇನ್ನೂ ಬೇಕು’ ಎಂಬ ಸಂಗ್ರಹ ಪ್ರವೃತ್ತಿಯನ್ನು ಬೆನ್ನಿಗೇರಿಸಿಕೊಂಡೇ ಬದುಕುತ್ತೇವೆ, ತನ್ಮೂಲಕ ಬದುಕಿನಲ್ಲಿ ಒತ್ತಡಕ್ಕೆ ಒಳಗಾಗುತ್ತಲೇ ಹೋಗುತ್ತೇವೆ. ಕೆಲಸದಲ್ಲಿ ಬ್ಯುಸಿಯಾಗಿ ಮಕ್ಕಳ ಕುರಿತಾಗಿ ಯೋಚಿಸುವ ವ್ಯವಧಾನವನ್ನೇ ಕಳೆದು ಕೊಂಡುಬಿಡುತ್ತೇವೆ. ಮಕ್ಕಳ ಯಾವುದೇ ವರ್ತನೆಗೂ ಪ್ರತಿಕ್ರಿಯಿಸದೆ ನಿರ್ಲಕ್ಷ್ಯದ ಭಾವ ತೋರುತ್ತೇವೆ. ನಮ್ಮ ಇಂಥ ಧೋರಣೆಯಿಂದಾಗಿ ಮಕ್ಕಳಲ್ಲಿ ಸರಿ-ತಪ್ಪುಗಳ ಪರಿಕಲ್ಪನೆಯೇ ಮೂಡುವುದಿಲ್ಲ. ಹೀಗಾಗಿ ಅವು ವಿವೇಚನಾ ರಹಿತವಾಗಿ ತಮಗೆ ಬೇಕಾದ ಹಾದಿಯನ್ನು ತುಳಿಯುತ್ತವೆ.
ಇದರಿಂದಾಗಿ ಕ್ರಮೇಣ ಅವರಲ್ಲಿ ಅವಿಧೇಯತೆ, ಅಶಿಸ್ತು ಹೆಚ್ಚುತ್ತಲೇ ಹೋಗುತ್ತದೆ, ಶೈಕ್ಷಣಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ. ಹೆತ್ತವರ ಮತ್ತು ಮಕ್ಕಳ ನಡುವಿನ ಕಂದಕ ಹಿರಿದಾಗುತ್ತಲೇ ಹೋಗುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಹಣವನ್ನು ಮಾನದಂಡವಾಗಿ ಇಟ್ಟುಕೊಂಡು, ಅವರಿಗೆ ಎಲ್ಲವನ್ನೂ ಕೊಡುವ ಸಲ್ಲದ ದಾರಿಯನ್ನು ತುಳಿಯುತ್ತೇವೆ. ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಅವರ ಬೇಡಿಕೆ ಗಳನ್ನೆಲ್ಲ ಪೂರೈಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಭ್ರಮಿಸುತ್ತೇವೆ. ನಮ್ಮಂತೆ ಅವರು ಒಂದಿನಿತೂ ಕಷ್ಟ ಅನುಭವಿಸಕೂಡದು ಎಂಬ ಪೂರ್ವಗ್ರಹಿಕೆಯಲ್ಲಿ ವಿವೇಚನೆ ಯಿಲ್ಲದೆ ಅವರು ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುತ್ತೇವೆ, ‘ನಮ್ಮ ಮಕ್ಕಳಿಗೆ ಯಾವುದಕ್ಕೂ ಕೊರತೆ ಮಾಡಿಲ್ಲ’ ಎಂದು ಬೀಗುತ್ತೇವೆ.
ನಮ್ಮ ಇಂಥ ತರ್ಕವಿಲ್ಲದ ನಡೆಗಳು ಮುಂದೊಮ್ಮೆ ಅವರ ಭವಿಷ್ಯವನ್ನೇ ಹಾಳುಮಾಡುತ್ತವೆ. ಅವರು ಬಯಸಿದ ಸಂಗತಿಗಳಿಗೆ ಸಮ್ಮತಿ ದೊರೆಯದೇ ಹೋದಾಗ ಅವರು ತೀರಾ ಹತಾಶೆಗೊಂಡು ಖಿನ್ನತೆಗೂ ಒಳಗಾಗಬಹುದು. ಇದರ ಅತಿರೇಕದ ರೂಪ ಎಂಬಂತೆ, ಅವರು ಆಕ್ರಮಣಶೀಲರಾಗುವ ಇಲ್ಲವೇ ಅವಘಡಗಳಿಗೆ ಕಾರಣರಾಗುವ ಸಾಧ್ಯತೆ ಯನ್ನೂ ತಳ್ಳಿಹಾಕಲಾಗದು.
ಶ್ರೀಮಂತ ವ್ಯಕ್ತಿಯೊಬ್ಬ ತುಂಬಾ ದುಡ್ಡು ಕೊಟ್ಟು ತಂದಿದ್ದ ಭರ್ಜರಿ ತಳಿಯ ನಾಯಿಯೊಂದನ್ನು ಸಾಕಿದ್ದ. ಅದನ್ನವನು ಅತಿಯಾಗಿ ಪ್ರೀತಿಸುತ್ತಿದ್ದ. ಒಮ್ಮೆ ಅದು ಯಾವುದೋ ರೋಗಕ್ಕೆ ತುತ್ತಾದ ಕಾರಣ ಈತನಿಗೆ ತುಂಬಾ ಚಿಂತೆಯಾಯಿತು. ತನಗೆ ತಿಳಿದ ಎಲ್ಲ ಪ್ರಯತ್ನವನ್ನು ಮಾಡಿದರೂ ನಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಕೊನೆಗೊಮ್ಮೆ ಸಮೀಪದ ನಗರ ಪ್ರದೇಶದಲ್ಲಿದ್ದ ಪಶುವೈದ್ಯರ ಬಳಿ ಒಯ್ದು ಅದನ್ನು ತೋರಿಸಿದ. ಅವರು ಅದನ್ನು ಆಮೂಲಾಗ್ರವಾಗಿ ಪರೀಕ್ಷಿಸಿ ಒಂದಷ್ಟು ಔಷಽ ಬರೆದುಕೊಟ್ಟು ಅದನ್ನು ಕುಡಿಸುವಂತೆ ತಿಳಿಸಿದರು. ಮನೆಗೆ ಬಂದ ಶ್ರೀಮಂತ ಆ ನಾಯಿಗೆ ಔಷಧಿ ಕುಡಿಸಲು ಮುಂದಾದ, ಎಷ್ಟು ಯತ್ನಿಸಿ ದರೂ ಅದು ಕುಡಿಯಲು ಸುತರಾಂ ಒಪ್ಪಲಿಲ್ಲ. ಕೊನೆಗೆ ಸಿಟ್ಟುಗೊಂಡ ಶ್ರೀಮಂತ ಆ ಔಷಽಯ ಬಾಟಲಿಯನ್ನು ತೆಗೆದೆಸೆದಾಗ ನೆಲದ ಮೇಲೆ ಅದು ಬಿದ್ದು ಔಷಧಿ ಹರಡಿಕೊಂಡಿತು. ಆಗ ನಾಯಿ ಅದನ್ನು ನೆಕ್ಕತೊಡಗಿತು. ನಾಯಿಯ ಸ್ವಭಾವ ಅರಿಯದೇ ಹೋಗಿದ್ದು ತನ್ನದೇ ತಪ್ಪು ಎಂಬ ಸತ್ಯದ ಅರಿವು ಅವನಿಗಾಗಿತ್ತು!
ಮಕ್ಕಳ ವಿಷಯದಲ್ಲಿ ಹೆತ್ತವರು ತೋರುವ ಎರಡು ಬಗೆಯ ಅತಿರೇಕಗಳನ್ನು ಇಲ್ಲಿ ಗಮನಿಸಬೇಕು. ಮಕ್ಕಳನ್ನು ಪ್ರೀತಿಸುವುದರ ಜತೆಜತೆಗೆ ಅವರನ್ನು ಹದ್ದುಬಸ್ತಿನಲ್ಲೂ ಇಟ್ಟುಕೊಳ್ಳುವ, ಜೀವನದ ಕಷ್ಟಗಳ ಅರಿವನ್ನು ಅವರಲ್ಲಿ ಮೂಡಿಸುವ ನಡವಳಿಕೆಯನ್ನೂ ನಾವು ರೂಢಿಸಿಕೊಳ್ಳಬೇಕು. ಹದ್ದು ಬಸ್ತು ಎಂಬುದು ಸುಖಾಸುಮ್ಮನೆ ಅವರ ಮೇಲೆ ಒತ್ತಡ ಹೇರಿದಂತಾಗಬಾರದು. ಇಂಥ ಒತ್ತಾಯದಲ್ಲಿ ನಮ್ಮ ಸರ್ವಾಧಿಕಾರಿ ಧೋರಣೆಯು ಅಡಗಿ ಕೂತಿರುತ್ತದೆ. ಹಾಗೆಂದ ಮಾತ್ರಕ್ಕೆ ಅವರ ನಿರ್ಲಕ್ಷ್ಯ ಸಲ್ಲ; ಮಕ್ಕಳ ಸಹಜ ಸಮಸ್ಯೆ ಗಳನ್ನು ಹೆತ್ತವರು ಸಹಾನುಭೂತಿಯಿಂದ ಆಲಿಸುವಂತಾಗಬೇಕು, ಅವರ ಸ್ವಭಾವನ್ನು ಗಮನಿಸುತ್ತಿರ ಬೇಕು. ಆಗ ಮಕ್ಕಳಲ್ಲಿ ‘ನಮ್ಮ ರಕ್ಷಣೆಗೆ ಇವರು ಇದ್ದಾರೆ’ ಎಂಬ ಸುರಕ್ಷತಾ ಭಾವ ಮೂಡುತ್ತದೆ.
ಹಾಗಂತ ಮಕ್ಕಳಲ್ಲಿ ತೋರುವ ಅತಿರೇಕದ ಪ್ರೀತಿಯು ತನ್ನ ಮಹತ್ವವನ್ನು ಕಳೆದುಕೊಂಡು ಅವರಿಗೆ ‘ಸದರ’ ಎನ್ನಿಸಿಬಿಡಬಹುದು ಅಥವಾ ಅವರನ್ನು
ಸದಾ ಅತಿರೇಕದ ಅಂಕೆಯಲ್ಲಿಟ್ಟುಕೊಂಡರೆ ಮಕ್ಕಳ ಸಹಜ ಸಾಮರ್ಥ್ಯ ಆಚೆಗೇ ಬರದೆ ಭಯದಲ್ಲೇ ಅವರು ದಿನದೂಡು ವಂತಾಗಬಹುದು. ಒಟ್ಟಿನಲ್ಲಿ, ಮಕ್ಕಳ ನಿಗಾವಣೆಯಲ್ಲಿ ನಮ್ಮಲ್ಲಿರುವ ಹಲವು ತಪ್ಪುಗ್ರಹಿಕೆಗಳು ಮತ್ತು ಭ್ರಮೆಗಳನ್ನು ತೊಡೆದುಕೊಂಡು ‘ಸಮತೋಲಿತ ವಿಧಾನ’ವನ್ನು ರೂಢಿಸಿ ಕೊಂಡರೆ ಅದು ನಮಗೂ ನಮ್ಮ ಮಕ್ಕಳಿಗೂ ಒಳಿತು.
ಕೆಲವು ದಶಕಗಳ ಹಿಂದೆ ಅವಿಭಕ್ತ ಕುಟುಂಬವು ಭಾರತದ ಸಾಮಾಜಿಕ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿತ್ತು. ಇತ್ತೀಚಿನ ದಿನಗಳಲ್ಲಿ ‘ನಾನು, ನನ್ನದು ಮಾತ್ರ’ ಎನ್ನುವ ಸ್ವಾರ್ಥ ಮೂಲದ ಪ್ರವೃತ್ತಿಯನ್ನು ನಾವೆಲ್ಲ ಧ್ಯಾನಿಸುತ್ತಿರುವುದರಿಂದ, ವಿಭಕ್ತ ಕುಟುಂಬಗಳು ರೂಪುಗೊಳ್ಳುತ್ತಿವೆ. ಇಂಥ ಬೆಳವಣಿಗೆ ಯಿಂದಾಗಿ ಪಾರಂಪರಿಕವಾಗಿ ರೂಢಿಗತವಾಗಿದ್ದ, ಮಕ್ಕಳನ್ನು ಬೆಳೆಸುವ ಅತ್ಯುತ್ತಮ ವಿಧಾನಗಳು ನಮ್ಮಿಂದ ದೂರವಾಗುತ್ತಿವೆ. ಕೂಡುಕುಟುಂಬದಲ್ಲಿ ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ-ತಂಗಿ, ಚಿಕ್ಕಪ್ಪ-ದೊಡ್ಡಪ್ಪ, ಅತ್ತೆ-ಮಾವ ಹೀಗೆ ಕುಟುಂಬದ ಹಲವು ಸದಸ್ಯರಿಂದ ಸಿಗುತ್ತಿದ್ದ ಪ್ರೀತಿ ವಾತ್ಸಲ್ಯ ಮರೀಚಿಕೆ ಯಾಗಿದೆ ಮತ್ತು ತಪ್ಪಾದಾಗ ದೊರಕುತ್ತಿದ್ದ ಮಾರ್ಗದರ್ಶನ ಅಲಭ್ಯವಾಗಿದೆ.
ಸುತ್ತಣ ಸಮಾಜದೊಂದಿಗಿನ ಸಂಬಂಧ ಮತ್ತು ಅದರ ಸೂಕ್ಷ್ಮತೆಯನ್ನು ಗ್ರಹಿಸುವ ಬಹುದೊಡ್ಡ ಅವಕಾಶದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಈ ಸೂಕ್ಷ್ಮಗಳನ್ನು ನಾವು ಅರಿತು, ಸಾಧ್ಯವಾದಷ್ಟು ಇಂಥ ಸಂದರ್ಭಗಳನ್ನು ಮತ್ತಷ್ಟು ಸೃಜಿಸಬೇಕಿದೆ. ಬಾಲ್ಯವನ್ನು ಅವರು ಸಮೃದ್ಧವಾಗಿ ಅನುಭವಿಸು ವಂತಾಗುವ ವಾತಾ ವರಣವನ್ನು ಕಟ್ಟಿಕೊಡಬೇಕಾಗಿದೆ. ನಮ್ಮ ಆಗ್ರಹಾನುಸಾರದ ಆಯುಧಗಳಾಗಿ ಅವರನ್ನು ಪರಿವರ್ತಿಸುವ ಬದಲಾಗಿ, ಸ್ವಂತ ನಿರ್ಧಾರಗಳನ್ನು ತಳೆಯುವಂತಾಗುವಂತೆ ಅವರಿಗೆ ಮಾರ್ಗ ದರ್ಶನ ನೀಡಬೇಕಿದೆ. ಯಾವುದೋ ಸಿದ್ಧಸೂತ್ರಗಳಲ್ಲಿ ಸಿಲುಕದೇ, ಅವರ ಅನನ್ಯತೆ ಯನ್ನು ನಾವು ಗೌರವಿಸಬೇಕಿದೆ.
ವೈವಿಧ್ಯವೆಂಬುದು ಈ ಜಗತ್ತಿನ ಸೌಂದರ್ಯ ಎಂಬ ಸತ್ಯಸಂಗತಿಯನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ, ಮಕ್ಕಳ ಸಾಂದರ್ಭಿಕ ಅಗತ್ಯಗಳಿಗೆ ಸ್ಪಂದಿಸುವ ಹೃದಯವೈಶಾಲ್ಯವನ್ನು ನಾವು ಬೆಳೆಸಿಕೊಳ್ಳಬೇಕಿದೆ, ಅವರ ಸಹಜ ಬೆಳವಣಿಗೆಗೆ ಅನುವು ಮಾಡಿಕೊಡುವುದನ್ನು ನಮ್ಮ
ಆದ್ಯತೆಯಾಗಿಸಿಕೊಳ್ಳಬೇಕಿದೆ.