Saturday, 14th December 2024

ಪ್ರತಿಭಾವೈವಿಧ್ಯದ ಆಗರ, ಅಂಬಾತನಯ ಮುದ್ರಾಡಿ ಮೇಷ್ಟ್ರು

ವ್ಯಕ್ತಿ ಚಿತ್ರ

ನಾರಾಯಣ ಶೇವಿರೆ

ಅವರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರು. ಸಾಹಿತಿ. ಉತ್ತಮ ಕವಿತ್ವವುಳವರು. ಬರೆವಣಿಗೆಯಷ್ಟೇ ಮಾತಿನ ಪ್ರತಿಭೆಯೂ ಚೆನ್ನು. ಕನ್ನಡವನ್ನು
ಕೇಳುವುದಾದರೆ ಅವರ ಬಾಯಿಯಿಂದ ಕೇಳಬೇಕು ಎಂಬಷ್ಟು ಭಾಷೆಯ ಮಾತಿನ ಪರಿಶ್ರಮ. ಇಂತಿರ್ಪ ಈ ಅಧ್ಯಾಪಕರು ಒಮ್ಮೆ ಮಣಿಪಾಲದ ಟಿ. ಎ. ಪೈಯವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು.

ಅಲ್ಲಿ ಎಲ್ಲರನ್ನೂ ಉಳಿದವರ ಮಾತಿಗಿಂತ ಹೆಚ್ಚು ಸೆಳೆದದ್ದು ಇವರ ನಿರೂಪಣೆಯ ಮಾತೇ. ಹಾಗೆಂದು ಅದು ಈಗಿನ ಕೆಲವು ಪ್ರತಿಷ್ಠಿತ ನಿರೂಪಕರ ಅಧಿಕ ಮಾತಿನ ವಾಚಾಳಿತನದ ಪ್ರಸ್ತುತಿಯಲ್ಲ. ಎಷ್ಟು ಬೇಕೋ ಅಷ್ಟೇ ಸಂಕ್ಷಿಪ್ತ ಮಾತುಳ್ಳ ನಿರೂಪಣೆ. ಅದಷ್ಟರಿಂದಲೇ ಅವರು ಪೈಗಳ ಬುದ್ಧಿಯನ್ನು ಗೆದ್ದಿದ್ದರು. ಹೃದಯವನ್ನು ಕೂಡಾ. ಆಗ ಪೈಗಳೆಂದರು: ‘ಇಷ್ಟು ಸೊಗಸಾದ ಕನ್ನಡ ಇದೆ ನಿಮ್ಮಲ್ಲಿ. ಈ ಹಳ್ಳಿಯ ಇದ್ದರೆ ಇದಕ್ಕೆ ತಕ್ಕ ಅವಕಾಶ ಸಿಗುವುದಿಲ್ಲ.
ಮಣಿಪಾಲಕ್ಕೆ ಬನ್ನಿ.

ವೇತನ, ಅವಕಾಶ ಎರಡೂ ಯಥೇಚ್ಛವಾಗಿ ಸಿಗುವಂತೆ ನಿಮಗೆ ಉದ್ಯೋಗ ನೀಡುವೆ.’ ಪ್ರೀತಿಯ ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸಿ ಅಧ್ಯಾಪಕರು ಹೇಳಿದರು: ‘ನಾನು ಅಧ್ಯಾಪಕ. ನನ್ನ ಪ್ರೀತಿಯ ಶಿಷ್ಯರನ್ನೂ ಹಳ್ಳಿಯ ಅಧ್ಯಾಪನವನ್ನೂ ಬಿಟ್ಟು ಬರಲಾರೆ.’ ಅರುವತ್ತೆಪ್ಪತ್ತರ ದಶಕದಲ್ಲಿ ಶಾಲಾ ಮಾಸ್ತರಿಕೆ ಅಂದರೆ ಅತೀವ ಬಡತನದ ಉದ್ಯೋಗವೆ ನಿಸಿತ್ತು. ಒಂದಾನೊಂದು ಊರಿನಲ್ಲಿ ಒಬ್ಬ ಬಡ ಮೇಷ್ಟ್ರು ಇದ್ದರು ಎಂದು ಪ್ರಾರಂಭವಾಗುವ ಕಥೆಯಂತೆ ನಿಜದಲ್ಲೂ ಮೇಷ್ಟ್ರು ಬಡವರೇ ಆಗಿರುತ್ತಿದ್ದರು. ಅಂಥ ಮೇಷ್ಟ್ರಿಗೆ ಮಣಿಪಾಲದ ಆಕರ್ಷಕ ಆಹ್ವಾನವನ್ನು ಒಪ್ಪಿಕೊಳ್ಳಬೇಕೆಂದು ಇನಿತೂ ಅನಿಸಲಿಲ್ಲ.

ಹೀಗಿದ್ದ ಮೇಷ್ಟ್ರು ಅಂಬಾತನಯ ಮುದ್ರಾಡಿ ಅವರು. ಉಡುಪಿ ಜಿಯ ಹೆಬ್ರಿ ಸಮೀಪದ ಮುದ್ರಾಡಿಯ ಬೂಬ ಶೆಟ್ಟಿಗಾರ್ ಮತ್ತು ಪುಟ್ಟಮ್ಮ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ ಕೇಶವ ಮುಂದೆ ಪ್ರಸಿದ್ಧಿಪಡೆದುದು ಅಂಬಾತನಯ ಎಂಬ ಕಾವ್ಯನಾಮದಿಂದ. ಅಂದರೆ ಅವರ ಪ್ರಸಿದ್ಧಿಗೆ ಆಧಾರವಾಗಿದ್ದುದು ಸಾಹಿತ್ಯ. ಆದರೆ ಅವರ ಬದುಕಿನ ಉಸಿರಾಗಿದ್ದುದು ಅಧ್ಯಾಪನ. ಉಪ್ಪಳ ಮರಿಯಪ್ಪ ಕಲ್ಕೂರ ಎಂಬವರು ಕೇಶವರಿಗೆ ಅಧ್ಯಾಪಕರಾಗಿದ್ದರು. ಕಿತ್ತು ತಿನ್ನುವ ಬಡತನದ ಜತೆಗೆ ಶಾಲಾ ಶಿಕ್ಷಣವು ಅರ್ಧಕ್ಕೆ ನಿಂತು ದನಮೇಯಿಸುವ ಕಾಯಕಕ್ಕಿಳಿದ ಕೇಶವರನ್ನು ಮತ್ತೆ ಶಾಲೆಸೇರುವಂತೆ ಮಾಡಿದ್ದು ಈ ಕಲ್ಕೂರ ಮೇಷ್ಟ್ರೇ. ಕಲಿಕೆಯ ಜತೆಗೆ ಕೇಶವರಲ್ಲಿದ್ದ ಕಲಿಸುವ ಪ್ರತಿಭೆಯನ್ನು ಗುರುತಿಸಿ ಮುಂದೆ ಅಧ್ಯಾಪಕನಾಗಲು ಅವರು ಪ್ರೇರೇಪಿಸಿದರು.

ಅದರಂತೆ ಎಂಟನೆಯ ತರಗತಿಯಲ್ಲಿ ಉತ್ತೀರ್ಣರಾದ ಬಳಿಕ ಉಜಿರೆಯಲ್ಲಿ ಆಗ ಇದ್ದ ಬುನಾದಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದ ಕೇಶವ ಶೆಟ್ಟಿಗಾರ್, ೧೯೫೫ರಲ್ಲಿ ಕಾರ್ಕಳ ಸಮೀಪದ ಮಿಯ್ಯಾರಿನಲ್ಲಿ ಶಿಕ್ಷಕವೃತ್ತಿಯನ್ನು ಪ್ರಾರಂಭಿಸಿ ತಾಲೂಕಿನ ಬೇರೆ ಬೇರೆ ಕಡೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತ ೧೯೯೩ರಲ್ಲಿ ನಿವೃತ್ತಿಯಾಗುವವರೆಗೆ ಮಕ್ಕಳ ಪ್ರೀತಿಯ ಶಿಕ್ಷಕರಾಗಿಯೇ ಮುಂದುವರೆದರು. ಶೆಟ್ಟಿಗಾರರ ಕೈಬರಹವೆಂದರೆ ಮುದ್ರಿತ ಅಕ್ಷರಗಳೂ ನಾಚಿಕೊಳ್ಳುವಷ್ಟು ಸುಂದರ. ಸುಂದರ ಕೈಬರಹದ ವ್ಯಕ್ತಿಯೊಬ್ಬ ಕಾರಕೂನರಾದರೆ ಸ್ವತಃ ಅವರಿಗೇ ಕಷ್ಟ; ಬರೆವಣಿಗೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳೂ ಅವರನ್ನೇ ಮುತ್ತಿಕೊಳ್ಳುತ್ತವೆ. ಆತ ಶಿಕ್ಷಕರಾದರೆ ಮಕ್ಕಳಿಗೆ ಕಷ್ಟ; ಮಕ್ಕಳೂ ತನ್ನಂತೆಯೇ ಬರೆಯಬೇಕೆಂಬ ಆಗ್ರಹ ಬೆಳೆಯುತ್ತದೆ.

ಶೆಟ್ಟಿಗಾರರ ಮಾಸ್ತರಿಕೆಯ ದಂಡವು ಮಕ್ಕಳನ್ನು ಜೋರುಮಾಡುತ್ತಿದ್ದುದು ಬರೆವಣಿಗೆ ಚಂದವಾಗಬೇಕೆಂಬ ಕುರಿತಾಗಿ. ತರಗತಿಯಲ್ಲಿ ಅವರು ಅತೀವ ಶಿಸ್ತಿನ ಮೇಷ್ಟ್ರು. ತದ್ವಿರುದ್ಧವಾಗಿ ತರಗತಿಯ ಹೊರಗೆ ಶಾಲಾ ಮಕ್ಕಳೆಲ್ಲರ ವಾತ್ಸಲ್ಯದ ತಂದೆ. ಎಲ್ಲ ಮಕ್ಕಳನ್ನೂ ಮಗಾ ಅಂತಲೇ ಕರೆಯುತ್ತಿದ್ದ ಈ ಮೇಷ್ಟ್ರಿಗೆ ಮಕ್ಕಳೆಂದರೆ ಪಂಚಪ್ರಾಣ. ನಿವೃತ್ತಿಯ ನಂತರವಂತೂ ಎಲ್ಲಾ ಮಕ್ಕಳಿಗೆ ಅಜ್ಜನಂತೆ ಇದ್ದರು; ತಂದೆ-ಮಕ್ಕಳ ನಡುವಿನ ಅಂತರ ಅಜ್ಜ-ಮೊಮ್ಮಗುವಿನ ನಡುವೆ ಕಾಣೆಯಾಗುವಂತೆ!

ಅವರ ಇಂಥ ವಿಶಿಷ್ಟ ಸ್ವಭಾವಗಳನ್ನು ಹೆಮ್ಮೆ – ಗೌರವಗಳಿಂದ ಬಿಚ್ಚಿಡುತ್ತಾರೆ, ಅವರ ಶಿಷ್ಯ ಶ್ರೀಹರಿ ಪಾದೆಕಲ್ಲು. ಮನೆ ಮೇಷ್ಟ್ರು: ಇತ್ತೀಚೆಗೆ ಹರಿಹರಪುರದ ಪ್ರಬೋಧಿನೀ ಗುರುಕುಲದಿಂದ ನಾಲ್ಕು ಮಂದಿ ಕಾರಲ್ಲಿ ಮಂಗಳೂರಿನ ವಿಟ್ಲ ಸಮೀಪದ ಮೈತ್ರೇಯೀ ಗುರುಕುಲಕ್ಕೆ ಕಾರ್ಯಕ್ರಮವೊಂದರ ನಿಮಿತ್ತ ಹೋಗುವುದಿತ್ತು. ಆಗುಂಬೆ ದಾಟಿ ಮುಂದೆ ಹೋಗುತ್ತಿದ್ದಂತೆ ಕಾರು ಯಾಕೋ ತನಗೆ ಹುಷಾರಿಲ್ಲ ಎನ್ನತೊಡಗಿತು. ಮುದ್ರಾಡಿ ಬರುವಷ್ಟರಲ್ಲಿ ಇನ್ನು ಮುಂದೆ
ಹೋಗಲಾರೆ ಎಂದು ನಿಂತೇಬಿಟ್ಟಿತು. ಅಷ್ಟೊತ್ತಿಗೆ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ವ್ಯಕ್ತಿಯೊಬ್ಬರು ನಮ್ಮ ಮೂಲಕ ಕಾರನ್ನು ವಿಚಾರಿಸಿದರು. ಪಕ್ಕದ ಹೆಬ್ರಿಯಲ್ಲಿ ವಾಹನ ದುರಸ್ತಿಮಾಡುವ ತಮ್ಮ ಸ್ನೇಹಿತರಿಗೆ ಕರೆಮಾಡಿ ಬರಹೇಳಿದರು. ಅದರ ದುರಸ್ತಿಗೆ ಎರಡು ದಿನ ಬೇಕಾಗುತ್ತದೆ ಎಂದು ಗೊತ್ತಾದ ಬಳಿಕ ತಮ್ಮ
ಕಾರನ್ನು ಕೊಂಡೊಯ್ಯಲು ಆಗ್ರಹಿಸಿದರು. ನಮ್ಮಲ್ಲಿ ಯಾರಿಗೂ ಗೇರ್ಕಾರನ್ನು ಚಲಾಯಿಸಲು ಬರುತ್ತಿರಲಿಲ್ಲವಾಗಿ ಅವರು ಇನ್ನೊಬ್ಬ ಸ್ನೇಹಿತರನ್ನು ಮಾತಾಡಿಸಿ ನಮಗೆ ಬಾಡಿಗೆ ಕಾರಿನ ವ್ಯವಸ್ಥೆ ಮಾಡಿಸಿದರು. ಗೊತ್ತು ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ದಾರಿಹೋಕರ ಬಗ್ಗೆ ಇಷ್ಟೆ ಕಾಳಜಿವಹಿಸುವ ಅವರನ್ನು ಯಾರೆಂದು ವಿಚಾರಿ ಸಲಾಗಿ ಗೊತ್ತಾದುದು ಅವರು ಸನತ್, ಅಂಬಾತನಯರ ಮಗನೆಂದು.

ತೀರಾ ಅಪರೂಪವೆಂಬ ಅವರ ಈ ವಿಶಿಷ್ಟವೆನಿಸುವ ಕಾಳಜಿಯ ಹಿಂದೆ ಕೇಶವ ಶೆಟ್ಟಿಗಾರರ ಮಾಸ್ತರಿಕೆ ಮನೆಮಕ್ಕಳ ಮೇಲೂ ಪರಿಣಾಮಕಾರಿಯಾಗಿ
ಕೆಲಸಮಾಡಿರುವುದು ಗೋಚರಕ್ಕೆ ಬಂತು. ಕಾವ್ಯನಾಮದ ಕಾವ್ಯ: ಊರಿನಲ್ಲಿಯೂ ರಾಜ್ಯದೆಡೆಯೂ ಕೇಶವ ಶೆಟ್ಟಿಗಾರರು ಪ್ರಸಿದ್ಧಿ ಪಡೆದುದು ಕಾವ್ಯನಾಮದ
ಮೂಲಕವೇ, ಅಂಬಾತನಯರೆಂದೇ. ಮುದ್ರಾಡಿ ಬಳಿಯಿರುವ ಬಕ್ರೆಮಠದ ದೇವಿಯ ಭಕ್ತರಾಗಿದ್ದರು ಶೆಟ್ಟಿಗಾರರು. ದಕ್ಷಿಣ ಕನ್ನಡ ಜಿಯಲ್ಲಿ ನಗರ ಭಜನೆಯು ಪರಂಪರೆಯಾಗಿ ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ. ಅದರಲ್ಲಿ ಶೆಟ್ಟಿಗಾರರಿಗೆ ಅತೀವ ಆಸಕ್ತಿ. ಒಮ್ಮೆ ಅಂಥ ಒಂದು ನಗರಭಜನೆಯಲ್ಲಿ ಅವರು ಸ್ಥಳದ ಒಂದು ಭಜನೆ ಯನ್ನು ಹೇಳಿಕೊಡುತ್ತಲೇ ರಚಿಸಿದರು.

ತಮ್ಮ ಕಂಠದಿಂದ ನಿರರ್ಗಳವಾಗಿ ಹರಿದುಬಂದ ಈ ಭಜನೆಹಾಡು ದೇವಿಯದೇ ಕೊಡುಗೆ ಎಂದವರು ಭಾವಿಸಿದರು. ತನಗೆ ದೇವಿ ಒಲಿದ ಈ ಪ್ರಕರಣದ ಹಿನ್ನೆಲೆಯಲ್ಲಿ ಅವರು ತಮ್ಮೆಲ್ಲ ಸಾಹಿತ್ಯರಚನೆಯನ್ನು ‘ಅಂಬಾತನಯ’ ಎಂಬ ಕಾವ್ಯನಾಮದಲ್ಲಿ ದಾಖಲಿಸಿದರು. ಈ ಹೆಸರಿನಿಂದಲೇ ಪ್ರಸಿದ್ಧರೂ ಆದರು. ದೇವಿಯ ಅನನ್ಯಭಕ್ತರಾಗಿ ಒಮ್ಮೆ ಹೀಗೆ ಭಜನೆಮಾಡುತ್ತಿದ್ದ ಬಾಲಕ ಕೇಶವನನ್ನು ನೋಡಿದ ಉಡುಪಿ ಕುಕ್ಕಿಕಟ್ಟೆಯ ಅವಧೂತ ಕಾಳುತಂತ್ರಿಗಳೆಂದೇ
ಖ್ಯಾತರಾಗಿದ್ದ ರಾಮಕೃಷ್ಣ ತಂತ್ರಿಗಳು ತಮ್ಮ ಶಿಷ್ಯ ಬಕ್ರೆಮಠದ ಅರ್ಚಕ ವಿಠಲ ಭಟ್ಟರನ್ನು ಕರೆದು ‘ಈ ಹುಡುಗನಿಗೆ ಉಪನಯನ ಮಾಡು’ ಎಂದರು, ಜಾತಿಗೀತಿ ಏನನ್ನೂ ನೋಡದೆ. ಇದೆಲ್ಲ ದೇವಿಯಿಂದಲೇ ಆಯಿತೆಂದು ಭಾವಿಸಿದ ಅಂಬಾತನಯರು ದೇವೀ ಆರಾಧನೆಯನ್ನೂ ಜಪಾನುಷ್ಠಾನವನ್ನೂ ಅತ್ಯಂತ
ಶ್ರದ್ಧೆಯಿಂದ ಆಜೀವನ ನಡೆಸಿಕೊಂಡು ಬಂದರು.

ಕೃತಿ ಚಿಂತನೆ: ಅಂಬಾತನಯರಿಗೆ ಶಿಕ್ಷಕರಾಗಲು ಮರಿಯಪ್ಪ ಕಲ್ಕೂರರು ಪ್ರೇರಣೆಯಾದರೆ ಸಾಹಿತಿಗಳಾಗಲು ಪ್ರಸಿದ್ಧ ಬಾಲಸಾಹಿತ್ಯಕಾರ ಪಳಕಳ ಸೀತಾರಾಮ ಭಟ್ಟರು ಪ್ರೇರಣೆ. ಅವರನ್ನು ಪ್ರೇರಣೆಯಿಂದ ಬರೆದ ಒಂದು ಕವನವನ್ನು ಸೀತಾರಾಮ ಭಟ್ಟರಿಗೇ ತೋರಿಸಿದರು. ಅದನ್ನು ಭಟ್ಟರು ಪ್ರಕಟಣೆಗಾಗಿ ‘ಬಾಲಮಿತ್ರ’ ಪತ್ರಿಕೆಗೆ ಕಳಿಸಿದರು. ಹೀಗೆ ಕವಿಯಾಗಿ ಬೆಳೆದಂತೆ ಮುಂದೆ ಕುವೆಂಪು ಹಾಗೂ ಬೇಂದ್ರೆಯವರ ಪ್ರೇರಣೆಯನ್ನು ಪಡೆದುಕೊಂಡರು. ಆದರೆ ‘ಅಂಬಾತನಯ’ ರಾಗಿ ತಮ್ಮದೇ ಆದ ಕಾವ್ಯಮಾರ್ಗವನ್ನು ಕಂಡುಕೊಂಡರು.

ಅಂಬಾತನಯರ ವಿಡಂಬನೆಯ ಒಂದು ಝಲಕ್ಕನ್ನು ಲೋಕಿಸುವುದಾದರೆ: ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾಡನ್ನು ಹುರಿದು ಮುಕ್ಕುತ್ತಿರುವ ರಾಜಕೀಯ ಪುಢಾರಿಗಳನ್ನು ವರ್ಣಿಸುವ ‘ಪ್ರಜಾ ಪ್ರಭುತ್ವೇಶ್ವರ ವಚನಶತಕ’ ಎಂಬ ಕೃತಿ ಗಮನೀಯವಾದುದು. ವಚನಸಾಹಿತ್ಯದ ಶೈಲಿಯಲ್ಲಿ ಇದು ವಿಡಂಬನಾತ್ಮಕವಾಗಿ ಮೂಡಿಬಂದಿದೆ. ಹಾಗೆಯೇ ಭಗವಂತನ ನಾಮಾವಳಿಗಳಂತೆ ಅವರು ಈ ಪುಢಾರಿಗಳನ್ನೂ ಅವರಲ್ಲಿ ಸಹಜವಾಗಿ ಇರುವ ಗುಣಗಳಿಂದ ‘ಸ್ತುತಿ’ಸುವ ’ಧೂರ್ತರಾಜಕೀಯನಾಯಕಾಷ್ಟೋತ್ತರಶತನಾವ iವಳಿ’ ಎಂಬ ಕೃತಿಯನ್ನು ಬರೆದಿದ್ದಾರೆ.

ಅಕಾರಾದಿ ಕ್ರಮದಲ್ಲಿ ರಚಿತವಾದ ಅವು ಅಕ್ರಮಾಯ ನಮಃ, ಅಕ್ರಮಪ್ರಬೋಧಕಾಯ ನಮಃ, ಅಕ್ರಮ ಸಕ್ರಮಾಯ ನಮಃ, ಅಧಿಕಾರಕಾಂಕ್ಷಿಣೇ ನಮಃ… ಅಭಿನಯವಿಶಾರದಾಯ ನಮಃ, ಅಲ್ಪಸಂಖ್ಯಾತಪರಿತೋಷಕಾಯ ನಮಃ.. ಆಶ್ವಾಸನಶ್ರೇಷ್ಠಾಯ ನಮಃ, ಆಶ್ವಾಸನಜ್ಯೇಷ್ಠಾಯ ನಮಃ.. ಇಷ್ಟಜನಪರಿವೇಷ್ಟಿತಾಯ ನಮಃ.. ಉದ್ಘಾಟನಾಮೃತಹಸ್ತಾಯ ನಮಃ.. ಧನಪಿಶಾಚಾಯ ನಮಃ.. ಲಂಪಟಾಯ ನಮಃ.. ಲಂಚಸ್ವೀಕಾರಸುಭಗಾಯ ನಮಃ.. ಹೀಗೆ ಸಾಗುತ್ತವೆ.

ಈ ಶತನಾಮಾವಳಿಯನ್ನು ಬರೆದ ಹಿನ್ನೆಲೆಯನ್ನು ಅವರು ವಿವರಿಸುತ್ತ; ದುಷ್ಟಗ್ರಹಪೀಡೆ ನಿವಾರಣೆಗಾಗಿ ನಾವು ಆ ಗ್ರಹಗಳ ನಾಮಜಪವನ್ನು ಮಾಡುವಂತೆ ಧೂರ್ತ ರಾಜಕಾರಣಿಗಳ ಪೀಡಾನಿವಾರಣೆಗಾಗಿ ಇದನ್ನು ಬರೆದೆ ಎಂದಿದ್ದಾರೆ. ವಿಡಂಬನೆಯ ಹಿನ್ನೆಲೆಯಲ್ಲಿಯೂ ಒಂದು ವಿಡಂಬನೆ!

ಯಾರೆಂದು ಬಲ್ಲಿರಿ?: ಮುದ್ರಾಡಿಯಲ್ಲಿ ನಾಲ್ಕು ವರ್ಷಗಳ ಕಾಲ ‘ಅಂಬಾಪ್ರಸಾದಿತ ಯಕ್ಷಗಾನ ಮಂಡಳಿ’ ಪ್ರತಿ ಸಂಕ್ರಮಣ, ಅಮಾವಾಸ್ಯೆ ಮತ್ತು ಹುಣ್ಣಿಮೆ ಗಳಂದು ತಾಳಮದ್ದಲೆ ಕೂಟ ಏರ್ಪಡಿಸುತ್ತಿತ್ತು. ಅದರಲ್ಲಿ ಅರ್ಥ ಹೇಳುತ್ತಿದ್ದ ಬೂಬ ಶೆಟ್ಟಿಗಾರರ ಜತೆಗೆ ಬಾಲಕ ಕೇಶವನೂ ಹೋಗಿ ರಾತ್ರಿ ಕಳೆಯುತ್ತಿದ್ದ. ಅಲ್ಲಿ ಅರ್ಥ ಕೇಳಿ ಕೇಳಿ ತಾಳಮದ್ದಳೆ ಅರ್ಥಗಾರಿಕೆಯಿಂದ ಬಾಲಕ ಅಕರ್ಷಿತನಾದ. ಮುಂದೆ ಉಜಿರೆಯಲ್ಲಿ ಬುನಾದಿ ಶಿಕ್ಷಣ ತರಬೇತಿ ಪಡೆಯುವಾಗ ತಾಳಮದ್ದಲೆ ಅರ್ಥ ಹೇಳುವ ತರಬೇತಿಯೂ ಜತೆಜತೆಗೇ ಆಯಿತು. ತಾಳಮದ್ದಲೆ ಜತೆಗೆ ಯಕ್ಷಗಾನದಲ್ಲಿಯೂ ವೇಷಹಾಕುವ ಅವಕಾಶ ಒದಗಿತು.

ಮುಖ್ಯವಾಗಿ ಇಡಗುಂಜಿ ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಆಗಾಗ ಸಿಗುತ್ತಿದ್ದ ಅವಕಾಶವನ್ನು ತಮ್ಮ ಶಿಕ್ಷಕವೃತ್ತಿಯ ನಡುವೆಯೇ ನಿರ್ವಹಿಸಿದರು.

ದಕ್ಷ ಯೋಜಕ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲೆ ಅಧ್ಯಕ್ಷರಾಗಲು ಅವರನ್ನು ಮಾತಾಡಿಸಿದಾಗ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತ ಅವರೊಳಗಿನ ಸಹೃದಯ ಮತ್ತೊಂದು ಬಗೆಯಲ್ಲಿ ಪ್ರಕಟಗೊಂಡ: ‘ನಿಮ್ಮ ಸಂಘಟನೆಯ ವಿಚಾರಧಾರೆ ಏನೆಂಬುದು ಗೊತ್ತು. ನಾನು ನೇರವಾಗಿ ನಿಮ್ಮ
ವಿಚಾರಧಾರೆಗೆ ಸೇರಿದವನಲ್ಲ. ಆದರೆ ನನ್ನ ಯೋಚನಾ ಧಾಟಿಯು ನಿಮ್ಮ ವಿಚಾರಧಾರೆಗೆ ಪೂರಕವಾಗಿಯೇ ಇದೆ.

ರಾಷ್ಟ್ರೀಯತೆಗೆ ಯಾವುದೇ ರೀತಿಯಲ್ಲಿಯೂ ಇನಿತೂ ಕೊರತೆ ಯಾಗದಂತೆ ನಡೆದುಕೊಳ್ಳುವೆ’. ‘ಅಭಾಸಾಪ’ದ ಜವಾಬ್ದಾರಿ ಯನ್ನು ಅವರು ವಹಿಸಿಕೊಂಡಿದ್ದು ಅವರ ಬದುಕಿನ ಇಳಿವಯಸ್ಸಿನಲ್ಲಿ. ಅದರಲ್ಲಿ ಹೆಚ್ಚು ತೊಡಗಲು ಮುಂದೆ ಕೋವಿಡ್ ಮಹಾಮಾರಿ ಅನುವು ಮಾಡಿಕೊಡಲಿಲ್ಲ. ಆದರೆ ರಾಷ್ಟ್ರೀಯ ವಿಚಾರಧಾರೆಯ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಅವರ ತುಡಿತ ಉಳಿದವರಿಗೆ ಮೇಲ್ಪಂಕ್ತಿಯಂತಿತ್ತು.

ಸಂಘಟಕನ ಉದ್ದೇಶ: ಸಾಹಿತ್ಯಕ್ಷೇತ್ರವನ್ನು ಸಿದ್ಧಾಂತ, ಜಾತಿ, ರಾಜಕಾರಣ ಇತ್ಯಾದಿಗಳಿಂದ ಮುಕ್ತಗೊಳಿಸಬೇಕು ಎನ್ನುವುದು ಅವರ ಕಾಳಜಿಯಾಗಿತ್ತು. ವಿಶುದ್ಧ ಭಾರತೀಯ ಚಿಂತನೆಯಿದ್ದ ಅವರಂತೂ ಯಾವುದೇ ಸಿದ್ಧಾಂತದ ಪ್ರತಿಪಾದಕರಾಗಿರಲಿಲ್ಲ. ‘ಸಾಹಿತ್ಯಕ್ಷೇತ್ರದಲ್ಲಿ ನವ್ಯ ಬಂಡಾಯ ಮಹಿಳಾ ಇತ್ಯಾದಿ
ಪಂಥಗಳು, ಜಾತೀಯತೆ, ರಾಜಕಾರಣ ಇತ್ಯಾದಿಗಳಿಂದ ಹೊಲಸೆದ್ದು ಹೋಗಿದೆ. ಒಡಕು ಅಲ್ಲಿಯ ಲಕ್ಷಣವೆಂದಾಗಿಬಿಟ್ಟಿದೆ. ಎಲ್ಲರನ್ನೂ ಒಂದಾಗಿಸಿ ಒಟ್ಟಿಗೆ ತೆಗೆದುಕೊಂಡು ಹೋಗಲು ತನ್ನ ಜವಾಬ್ದಾರಿಯ ಅವಽಯಲ್ಲಿ ಪ್ರಯತ್ನಿಸಿದೆ’ ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

‘ನಿಜವಾದ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನಿಂದ ದೂರ ಇದ್ದಾರೆ. ಸಾಹಿತಿಗಳೇ ಅಲ್ಲದವರಿಂದ ಅದು ತುಂಬಿಹೋಗಿದೆ. ಇದನ್ನು ಸರಿಪಡಿಸಿ ಎಲ್ಲರೂ ಸಾಹಿತ್ಯದ ಕಾರ್ಯವನ್ನು ಮಾಡುವಂಥ ಸನ್ನಿವೇಶವನ್ನು ನಿರ್ಮಾಣ ಮಾಡುವುದು ತನ್ನ ಮುಖ್ಯ ಲಕ್ಷ್ಯ’ ಎಂದವರು ತಾವು ಪರಿಷತ್ತಿನ ಅಧ್ಯಕ್ಷರಾದ ಉದ್ದೇಶ ವನ್ನು ಸ್ಪಷ್ಟಪಡಿಸಿದ್ದರು. ಇದು ಯಾವುದೇ ಸಂಸ್ಥೆಯ ಅಧ್ಯಕ್ಷ ಮತ್ತಿತರ ಮುಖ್ಯ ಹೊಣೆಯನ್ನು ಹೊರಲು ಬಯಸುವವರಿಗೆ ತಾವು ಇಟ್ಟುಕೊಳ್ಳಬೇಕಾದ ಧ್ಯೇಯವೆಂಥದ್ದಿರ ಬೇಕೆಂಬುದಕ್ಕೆ ದಿಕ್ಸೂಚಿಯಂತಿದೆ. ಬೆಂಗಳೂರಿಗೆ ಹೋದಾಗ ಸಮಯಾವಕಾಶ ಮಾಡಿಕೊಂಡು ಕೆಲವು ಸಾಹಿತಿಗಳ ಮನೆಗೆ ಹೋಗಿ ಮಾತನಾಡಿಸಿಕೊಂಡು ಹಿರಿಯ ಸಾಹಿತಿಗಳ ಆಶೀರ್ವಾದ ಪಡೆದುಕೊಂಡು ಬರುತ್ತಿದ್ದರು.

ಅನೇಕರು ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ‘ಇಂದು ಇಂಥ ವಾತಾವರಣ ಇಲ್ಲ. ಆಶೀರ್ವಾದ ಪಡೆಯುವ ಸಂಸ್ಕಾರ ದೂರವಾಗಿದೆ. ಮುಖ ನೋಡಿ ಹೊಗಳುವ, ವಿಮರ್ಶಿಸುವ ಅನಾರೋಗ್ಯಕರ ಸಂಸ್ಕೃತಿ ಬೆಳೆದಿದೆ’ ಎನ್ನುತ್ತಿದ್ದರು ನೋವಿನಿಂದ.

(ಲೇಖಕರು: ರಾಜ್ಯ ಸಂಘಟನಾ ಕಾರ್ಯದರ್ಶಿ,
ಅಖಿಲ ಭಾರತೀಯ ಸಾಹಿತ್ಯ ಪರಿಷದ್ )