ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ಲಭ್ಯವಿರುವ ಕಾವೇರಿ ನೀರಿನಲ್ಲಿ ಸಿಂಹಪಾಲು ಯಾವತ್ತಿನಿಂದಲೂ ತಮಿಳುನಾಡಿಗೇ ಮೀಸಲು. ಆ ರಾಜ್ಯದಲ್ಲಿ ಭತ್ತದ ಎರಡು ಬೆಳೆಗೆ ನೀರು ಪೂರೈಸಬೇಕಿರುವ ವಾರ್ಷಿಕ ಕರ್ಮ ಕರ್ನಾಟಕದ್ದು. ನಮ್ಮಲ್ಲಿ ಕೃಷಿ ಚಟುವಟಿಕೆ ವಿಸ್ತರಿಸುವ ಮಾತು ಒತ್ತಟ್ಟಿಗಿರಲಿ ಕುಡಿಯುವ ನೀರಿಗೂ ತತ್ವಾರವಾಗಿರುವ ಪರಿಸ್ಥಿತಿ.
ಇದು ಘಟಿಸಿದ್ದು ೧೮೦೭ರಲ್ಲಿ. ಬರೋಬ್ಬರಿ ೨೧೬ ವರ್ಷಗಳ ಹಿಂದೆ. ಆ ವರ್ಷ ಮೈಸೂರು ಪ್ರಾಂತ್ಯದ (ಮಹಾರಾಜರ ಮೈಸೂರು ರಾಜ್ಯ) ಹಲವು ಕೆರೆಗಳಲ್ಲಿ ಹೂಳು ತುಂಬಿದ್ದನ್ನು ತೆಗೆಸಲು ಮತ್ತು ಕೆರೆಗಳನ್ನು ಅಭಿವೃದ್ಧಿಗೊಳಿಸಿ ಮತ್ತಷ್ಟು ನೀರಿನ ಸಂಗ್ರಹಕ್ಕೆ ಅಣಿಗೊಳಿಸಲು ಮಹಾರಾಜರ ಸರಕಾರ ತೀರ್ಮಾನಕ್ಕೆ ಬರುತ್ತದೆ. ಅದು ಸುದ್ದಿಯಾಗಿ ಕಿವಿಗೆ ಬಿದ್ದ ಕೂಡಲೇ ಮದ್ರಾಸು ಪ್ರಾಂತ್ಯ ಅದಕ್ಕೆ ತಕರಾರು ಒಡ್ಡುತ್ತದೆ.
ಮೈಸೂರು ಪ್ರಾಂತ್ಯದಲ್ಲಿ ಮುಖ್ಯವಾಗಿ ಕಾವೇರಿ ಕೊಳ್ಳದಲ್ಲಿ ಇಂಥ ಯಾವುದೇ ರೀತಿಯ ಸುಧಾರಣಾ ಆಡಳಿತಕ್ಕೆ ಮದ್ರಾಸು ಪ್ರಾಂತ್ಯ ಮೈಸೂರು ಅರಸರಿಗೆ ಎಚ್ಚರಿಕೆ ನೀಡಿ ಕೈ ಕಟ್ಟಿಹಕುತ್ತದೆ. ಆಗ ಮದ್ರಾಸು ಪ್ರಾಂತ್ಯ ನೇರವಾಗಿ ಬ್ರಿಟಿಷ್ ಆಳ್ವಿಕೆಯ ಸುಪರ್ದಿನಲ್ಲಿತ್ತು. ಆ ಹೊತ್ತಿಗೆ ದೇಶದ ಬಹುತೇಕ ರಾಜರು ಬ್ರಿಟಿಷ್ ಆಳ್ವಿಕೆಯ ಅಧೀನಕ್ಕೆ ಬಂದಿದ್ದರು. ಫಿರಂಗಿ ಆಡಳಿತ ಹೇಳಿದಂತೆ ಕೇಳುವ ಗುಲಾಮಗಿರಿಗೆ ದೇಶದ ಬಹುತೇಕ ರಾಜಮಹಾ ರಾಜರು ತಮ್ಮನ್ನು ಒಪ್ಪಿಸಿಕೊಂಡಿದ್ದರು.
ಮೈಸೂರು ಆಡಳಿತ ಇದಕ್ಕೆ ಹೊರತಾಗಿರಲಿಲ್ಲ. ಕೆರೆ ಹೂಳೆತ್ತುವ ಕೆಲಸ ನಂತರದಲ್ಲಿ ನಡೆದರೂ ಅದು ಮದ್ರಾಸ್ ಪ್ರಾಂತ್ಯದ ಹಿತಕ್ಕೆ ಧಕ್ಕೆ ತಾರದಂತೆ ಇರಬೇಕೆಂಬ ಷರತ್ತಿನೊಂದಿಗೆ ನಡೆಯಿತು. ಇವತ್ತು ನಾವು ನೋಡುತ್ತಿರುವ, ಅನುಭವಿಸುತ್ತಿರುವ ಕಾವೇರಿ ನದಿ ವಿವಾದದ ಮೂಲ ಹುಡುಕಿದರೆ ನಮ್ಮ ಗುಲಾಮಗಿರಿ ಎದ್ದು ಕಾಣಿಸುತ್ತದೆ. ೨೧೬ ವರ್ಷದ ಗುಲಾಮಗಿರಿಗೆ ೧೯೪೭ರ ಸ್ವಾತಂತ್ರ್ಯ ಒಂದರ್ಥದಲ್ಲಿ ಅಂತ್ಯ ಹಾಡಿತು. ಆದರೆ ಅಧಿಕಾರಕ್ಕೆ ಬಂದ ನಮ್ಮವರ ಅವಿವೇಕದ ರಾಜಕಾರಣದ ಕಾರಣವಾಗಿ ಎಂದೋ ಮಾಡಿಕೊಂಡ ಒಪ್ಪಂದ ಇವತ್ತು ಕೊರಳು ಸುತ್ತುವರಿದ ಕುಣಿಕೆಯಾಗಿದೆ.
ಮಳೆ ಬಾರದ ಸ್ಥಿತಿ ಆತಂಕ ಸೃಷ್ಟಿಸಿದ್ದರೆ ಸಂಗ್ರಹದಲ್ಲಿರುವ ತುಸುವೇ ನೀರನ್ನೂ ತಮಿಳುನಾಡಿಗೆ ಹರಿಸಬೇಕಿರುವ ಇಕ್ಕಟ್ಟು ಎದುರಾಗಿದೆ. ಇದರಿಂದಾಗಿ ಕಾವೇರಿ ಕೊಳ್ಳದಲ್ಲಿ ವಾರ್ಷಿಕ ವಿಧಿಯೋ ಎಂಬಂತೆ ಜನಾಕ್ರೋಶ ಮತ್ತೆ ಭುಗಿಲೆದ್ದಿದೆ. ರೈತರು
ಬೀದಿಗೆ ಬಂದಿದ್ದಾರೆ. ರೈತರ ನೋವಿನ ಬೆಂಕಿಯಲ್ಲಿ ಬೇಳೆ ಬೇಯಿಸುವ ಹುನ್ನಾರದಲ್ಲಿ ರಾಜ್ಯ ರಾಜಕಾರಣ ತಲ್ಲೀನವಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದತ್ತ, ಸುಪ್ರೀಂ ಕೋರ್ಟ್‌ನತ್ತ ಬೆರಳು ತೋರಿಸಿ, ಇದರಲ್ಲಿ ತಾನು ಅಸಹಾ ಯಕ ಎಂಬಂತೆ ವರ್ತಿಸುತ್ತಿದೆ. ಎಲ್ಲ ಅನಾಹುತಕ್ಕೂ ರಾಜ್ಯ ಸರಕಾರವೇ ಕಾರಣ ಎಂದು ದೂರುತ್ತ ಮುಂದಿನ ಚುನಾವಣೆಯಲ್ಲಿ ಈ ಗದ್ದಲ ಪ್ರಯೋಜನಕ್ಕೆ ಬರಬಹುದೇ ಎಂಬ ಲೆಕ್ಕಾಚಾರದಲ್ಲಿ ವಿರೋಧ ಪಕ್ಷಗಳು ಮುಳುಗಿವೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ ಕರ್ನಾಟಕ ಜನತೆಯ ಸ್ಥಿತಿ.
ತಮಿಳುನಾಡಿನ ರಾಜಕೀಯದ ಕೇಂದ್ರವಸ್ತು ಕಾವೇರಿ ನದಿನೀರು ಹಂಚಿಕೆ ವಿವಾದ. ಈ ವಿವಾದದ ವಿಚಾರದಲ್ಲಿ ಯಾವುದೇ ಬಗೆಯ ಮಾತುಕತೆ ಅಥವಾ ಸಂಧಾನ ಆ ರಾಜ್ಯದ ರಾಜಕೀಯ ಪಕ್ಷಗಳಿಗೆ ಬೇಕಾಗಿಲ್ಲ. ಎಂ.ಜಿ.ರಾಮಚಂದ್ರನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಬಂದು ಕಾವೇರಿ ನದಿನೀರು ಹಂಚಿಕೆ ವಿವಾದ ಇತ್ಯರ್ಥದ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಕಾವೇರಿ ಕುರಿತಂತೆ ಉಭಯ ರಾಜ್ಯಗಳ ನಡುವಣ ಮಾತುಕತೆಗೆ ಎಂಜಿಆರ್ ಬೆಂಗಳೂರಿಗೆ ಬಂದಿದ್ದೇ ಸಂಧಾನದ ಹೆಸರಲ್ಲಿ ನಡೆದ ಕೊನೆಯ ಸಭೆ. ಅದರಾಚೆಗೆ ಕರ್ನಾಟಕದ ಮುಖ್ಯಮಂತ್ರಿ ಅಥವಾ ನೀರಾವರಿ ಮಂತ್ರಿಗಳಲ್ಲಿ ಯಾರೊಬ್ಬರೂ ಈ ಕಾರಣಕ್ಕೆ ಚೆನ್ನೈಗೆ ಹೋಗಲಿಲ್ಲ; ತಮಿಳುನಾಡು ಸಿಎಂಗಳಲ್ಲಿ ಎಂಜಿಆರ್ ತರುವಾಯ ಯಾವ ಸಿಎಂ ಅಥವಾ ನೀರಾವರಿ ಮಂತ್ರಿ ಈ ಉದ್ದೇಶದೊಂದಿಗೆ ಬೆಂಗಳೂರಿಗೆ ಬರಲಿಲ್ಲ.
ಹೀಗೆಂದ ಮಾತ್ರಕ್ಕೆ ಮಾತುಕತೆಯ ಎಲ್ಲ ಬಾಗಿಲೂ ಮುಚ್ಚಿದೆ ಎಂದೇನೂ ಅರ್ಥವಲ್ಲ, ಆದರೆ ಬಾಗಿಲು ತೆರೆಯುವುದು ತಮಿಳು ನಾಡಿಗೆ ಸುತರಾಂ ಬೇಕಾಗಿಲ್ಲ. ಕೊಡಗಿನ ತಲಕಾವೇರಿಯಲ್ಲಿ ಉಗಮಗೊಳ್ಳುವ ಕಾವೇರಿ, ದಕ್ಷಿಣ ಕರ್ನಾಟಕದ ಅಂದರೆ ಹಳೆ ಮೈಸೂರು ಪ್ರಾಂತ್ಯದ ನೀರಿನ ಮುಖ್ಯಮೂಲ. ಜನ-ಜಾನುವಾರು ಕುಡಿಯುವುದಕ್ಕೂ, ಕೃಷಿಗೂ, ಉದ್ಯಮಕ್ಕೂ ಇದೇ ಆಸರೆ. ಕಾವೇರಿ ನದಿ ಜಲಾನಯನ ಪ್ರದೇಶವಿರುವುದು ಕರ್ನಾಟಕದಲ್ಲಿ. ಅಂದರೆ ಇಲ್ಲಿ ಚೆನ್ನಾಗಿ ಮಳೆ ಸುರಿಯಬೇಕು, ಅಣೆಕಟ್ಟುಗಳಲ್ಲಿ ಅದು ಸಂಗ್ರಹ ಆಗಬೇಕು, ಕಾವೇರಿ ನೀರು ಹಂಚಿಕೆ ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರನ್ನು ಹರಿಸಬೇಕು. ಇದರ ಅರ್ಥ ಇಷ್ಟೆ, ತಮಿಳುನಾಡಿನ ನೀರಿನ ಅಗತ್ಯ ಪೂರೈಸುವುದಕ್ಕೆ ಕರ್ನಾಟಕದ ಕಾವೇರಿ ಕೊಳ್ಳದ ಅಣೆಕಟ್ಟೆ ಗಳು ಇರಬೇಕು.
ಹೀಗಾಗಿ ನದಿಯಲ್ಲಿ ಲಭ್ಯವಿರುವ ನೀರಿನಲ್ಲಿ ಸಿಂಹಪಾಲು ಯಾವತ್ತಿನಿಂದಲೂ ಮದ್ರಾಸು ಪ್ರಾಂತ್ಯಕ್ಕೆ ನಂತರದಲ್ಲಿ ಹೆಸರು ಬದಲಾದ ತಮಿಳುನಾಡಿಗೇ ಮೀಸಲು. ಆ ರಾಜ್ಯದಲ್ಲಿ ಭತ್ತದ ಎರಡು ಬೆಳೆಗೆ ನೀರು ಪೂರೈಸಬೇಕಿರುವ ವಾರ್ಷಿಕ ಕರ್ಮ ಕರ್ನಾಟಕದ್ದು. ಇಲ್ಲಿ ಒಂದು ಬೆಳೆಗೂ ನೀರು ಸಿಗದಿರುವ ಅಧ್ವಾನ ಸ್ಥಿತಿ. ಕರ್ನಾಟಕದಲ್ಲಿ ಕೃಷಿ ಚಟುವಟಿಕೆ ವಿಸ್ತರಿಸುವ ಮಾತು
ಒತ್ತಟ್ಟಿಗಿರಲಿ ಕುಡಿಯುವ ನೀರಿಗೂ ತತ್ವಾರವಾಗಿರುವ ಪರಿಸ್ಥಿತಿ. ಜಗತ್ತಿನಲ್ಲಿ ಮುಖ್ಯ ಬರ ಬಿದ್ದಿರುವುದು ಅಂತಃಕರುಣೆಗೆ
ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚು ಸ್ಪಷ್ಟವಾಗುತ್ತಿದೆ. ಈ ಮಾತಿಗೆ ತಮಿಳುನಾಡಿನ ಕಾವೇರಿ ಜಲದಾಹ ಎದ್ದು ಕಾಣಿಸುವ
ನಿದರ್ಶನ.
ಕಾವೇರಿ ನದಿನೀರು ಹಂಚಿಕೆ ವಿಚಾರವಾಗಿ ಬ್ರಿಟಿಷರ ಕಾಲದಲ್ಲಿ ಫಿರಂಗಿ ಆಡಳಿತ ಮತ್ತು ಮೈಸೂರು ಮಹಾರಾಜರ ಆಳ್ವಿಕೆ ನಡುವೆ ಆದ ಒಪ್ಪಂದಕ್ಕೆ ಸ್ವಾತಂತ್ರ್ಯಾನಂತರದಲ್ಲೂ ಮನ್ನಣೆ ಸಿಕ್ಕಿರುವುದಕ್ಕೆ ಹತ್ತಾರು ಒಳ ಕಾರಣಗಳಿವೆ. ಸ್ವಾತಂತ್ರ್ಯ ಪೂರ್ವ ದಲ್ಲಿ ಆದ ಎಷ್ಟೋ ಒಪ್ಪಂದಗಳು ಕಾಲದ ಅಗತ್ಯಕ್ಕೆ ಅನುಗುಣವಾಗಿ ರದ್ದಾದ ಉದಾಹರಣೆ ನಮ್ಮಲ್ಲಿದೆ. ಭಾರತ ಗಣರಾಜ್ಯ ವಾಗುವ ಸಮಯದಲ್ಲಿ ರಾಜ ಮಹಾರಾಜರುಗಳಿಗೆ ಹೇರಳ ರಾಜಧನ ನೀಡುವ ಒಪ್ಪಂದವಾಗಿತ್ತು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಅದನ್ನು ರದ್ದುಗೊಳಿಸುವ ತೀರ್ಮಾನವಾಯಿತು. ಒಂದಿಷ್ಟು ಗೊಣಗಾಟ ಇರುತ್ತದೆ. ಅಂತಿಮವಾಗಿ ಸರಕಾರವೇ ಸರಿ ಎನಿಸುತ್ತದೆ. ಕಾವೇರಿ ಒಪ್ಪಂದದ ವಿಚಾರದಲ್ಲಿ ಮಾತ್ರ ಹೀಗೆ ಆಗಲಿಲ್ಲ. ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಮದ್ರಾಸು ಮಹಾರಾಜನ ಸ್ಥಾನದಲ್ಲಿತ್ತು. ಮೈಸೂರು ಸೇರಿದಂತೆ ಹತ್ತಾರು ರಾಜಾಡಳಿತ ಪ್ರದೇಶ ಅಧೀನದಲ್ಲಿದ್ದವು. ಮದ್ರಾಸು ತೆಗೆದುಕೊಂಡ ಏಕಪಕ್ಷೀಯ ನಿಲುವು, ತೀರ್ಮಾನ, ಒಪ್ಪಂದಗಳಿಗೆ ಮೈಸೂರು ಮಹಾರಾಜರದೂ ಸೇರಿದಂತೆ ಹಲವರದು ರುಜುಹಾಕುವ ಕೆಲಸ ಮಾತ್ರವೇ ಆಗಿತ್ತು.
ವಿವೇಚನೆಯ ಕೊರತೆಯಲ್ಲಿ ಭಯದ ಬೆದರಿಕೆಯಲ್ಲಿ ಅಂದು ನಮ್ಮ ಮೇಲೆ ಒಪ್ಪಂದದ ಹೆಸರಿನಲ್ಲಿ ಆದ ಅನ್ಯಾಯಕ್ಕೆ
ಇವತ್ತಿಗೂ ಕರ್ನಾಟಕ ತಲೆದಂಡ ತೆರುತ್ತಿದೆ. ಕಾವೇರಿ ಕೊಳ್ಳದ ನದಿ, ತೊರೆ, ಹಳ್ಳಗಳಲ್ಲಿ ಹರಿದ ನೀರಿಗಿಂತ ತುಸು ಹೆಚ್ಚು ಪ್ರಮಾಣದ ಕಣ್ಣೀರು ಕರ್ನಾಟಕದಲ್ಲಿ ಹರಿದಿದೆ. ಈ ಮಾತು ಉತ್ಪ್ರೇಕ್ಷೆಯದು ಎನಿಸಿದರೂ ಭಾವನಾತ್ಮಕವಾಗಿ ನೋಡಿದರೆ ಹೌದು ಎನಿಸುತ್ತದೆ. ಸ್ವಾತಂತ್ರ್ಯಾನಂತರ ೧೯೬೭ರವರೆಗೂ ಮದ್ರಾಸು ರಾಜ್ಯದಲ್ಲಿದ್ದುದು ಕಾಂಗ್ರೆಸ್ ಸರಕಾರ. ಇಲ್ಲೂ ಅದೇ ಪಕ್ಷದ್ದು. ಕೇಂದ್ರದಲ್ಲೂ ಕಾಂಗ್ರೆಸ್ಸಿನದೇ ಏಕಚಕ್ರಾಧಿಪತ್ಯ. ಆಗಲೂ ಈ ಸಮಸ್ಯೆಗೆ ಚರ್ಚೆ ಮೂಲಕ ಪರಿಹಾರ ಹುಡುಕುವ ಕೆಲಸವಾಗಲಿಲ್ಲ.
ಈಗಂತೂ ತಮಿಳುನಾಡಿನಲ್ಲಿ ಒಂದೋ ಡಿಎಂಕೆ ಇಲ್ಲವೇ ಅಣ್ಣಾ ಡಿಎಂಕೆ ಆಡಳಿತ. ಈ ಪಕ್ಷಗಳು ಕಾವೇರಿ ವಿಚಾರದಲ್ಲಿ ಮೃದು ಧೋರಣೆ ತಾಳುವಂತೆಯೇ ಇಲ್ಲ. ಹಾಗೇನಾದರೂ ಆದಲ್ಲಿ ಆ ಪಕ್ಷಕ್ಕೆ ಚುನಾವಣಾ ಗಂಡಾಂತರ ಕಟ್ಟಿಟ್ಟ ಬುತ್ತಿ. ಪಾಕಿಸ್ತಾನದಲ್ಲಿ
ರಾಜಕಾರಣಕ್ಕೆ ಹೇಗೆ ಭಾರತದ್ವೇಷ ಬಂಡವಾಳವೋ, ಹಾಗೆಯೇ ಕಾವೇರಿಗಾಗಿ ನಿತ್ಯಕ್ಯಾತೆ ತಮಿಳುನಾಡು ರಾಜಕೀಯ ಪಕ್ಷಗಳ ಬಂಡವಾಳ. ಜುಲಿಕರ್ ಅಲಿ ಭುಟ್ಟೊ ಪಾಕಿಸ್ತಾನದ ಆಡಳಿತ ಸೂತ್ರಧಾರಿಯಾಗಿದ್ದಾಗ ಭಾರತದ ವಿರುದ್ಧ ಸಾವಿರ ವರ್ಷದ ಸಮರ ಸಾರಿದ್ದನ್ನು ನೆನಪಿಸಿಕೊಂಡರೆ ತಮಿಳುನಾಡು ಕ್ಯಾತೆಯ ಆಳ ಅಗಲದ ಒಂದು ನೋಟ ದಕ್ಕುತ್ತದೆ.
ಕಾವೇರಿ ವಿವಾದಕ್ಕೆ ಸುದೀರ್ಘ ಇತಿಹಾಸವಿದೆ. ಅದರ ಇತ್ಯರ್ಥಕ್ಕೆ ನಡೆದಿರುವ ಯತ್ನಕ್ಕೂ ಸಾಕಷ್ಟು ದೀರ್ಘ ಇತಿಹಾಸವಿದೆ. ಒಪ್ಪಂದದ ನಿಯಮಗಳನ್ನು ಓದುವ ಯಾರಿಗಾದರೂ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಮಾಹಿತಿ ದೊರೆಯುತ್ತದೆ. ಆದರೆ ಕಾವೇರಿ ನೀರು ನಿರ್ವಹಣಾ (ಸಿಡಬ್ಲ್ಯುಎಂಎ) ಪ್ರಾಧಿಕಾರಕ್ಕೆ ಮಾತ್ರ ಇದು ಅರ್ಥವಾಗುವುದಿಲ್ಲ ಎಂದರೆ ಅದೊಂದು ಚಿದಂಬರ ರಹಸ್ಯವೇ ಸೈ.
ಪ್ರಾಧಿಕಾರವನ್ನು ರಚಿಸುವ ಮೂಲಕ ಸುಪ್ರೀಂ ಕೋರ್ಟ್ ತನ್ನ ಕೈ ತೊಳೆದುಕೊಂಡಿದೆ ಎಂಬ ಮಾತು ಕಾವೇರಿ ನೀರಿನಲ್ಲಿ
ನ್ಯಾಯಯುತ ಪಾಲು ಬೇಡುವ ಚಳವಳಿಗಾರರದು. ತಮಿಳುನಾಡು ತನ್ನ ನೀರಾವರಿ ಕೃಷಿ ಪ್ರದೇಶವನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತ ಸಾಗಿದೆ. ಕೃಷಿ ಪ್ರದೇಶ ಹೆಚ್ಚಿದಂತೆಲ್ಲ ಅದರ ನೀರಿನ ಅಗತ್ಯ ಹೆಚ್ಚುತ್ತ ಸಾಗಿದೆ. ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಕೃಷಿ ಪ್ರದೇಶ ಹೆಚ್ಚಿಸುವುದಕ್ಕೆ ಅಡ್ಡಿ ಪಡಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯಿಂದ ಅದು ಹೊರಗೇ ಉಳಿಯಲು ತೀರ್ಮಾನಿಸಿದಂತಿದೆ. ತಮಿಳುನಾಡಿನ ಜಿಗುಟು ಪ್ರವೃತ್ತಿಯನ್ನು ನೋಡಿದರೆ ಕಾವೇರಿ ಸಮಸ್ಯೆಗೆ ಇತ್ಯರ್ಥ ಸುಲಭದಲ್ಲಿಲ್ಲ ಎನಿಸುತ್ತದೆ.
ಕೋರ್ಟ್ ಅಥವಾ ಪ್ರಾಧಿಕಾರಗಳಲ್ಲಿ ಸಿಗದ ನ್ಯಾಯ ರಾಜಕಾರಣದಲ್ಲಿ ಸಿಗಬಹುದೇ? ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಯನ್ನು ಅವಲಂಬಿಸಿದೆ. ಬಿಜೆಪಿ ಅಣ್ಣಾಡಿಎಂಕೆ ಬಾಲಂಗೋಚಿಯಾಗಿದೆ (ಸಂಬಂಧ ಕಡಿದಿದೆ ಎಂಬ ಸುದ್ದಿ ಹೊಸದು). ರಾಷ್ಟ್ರೀಯ ಪಕ್ಷಗಳನ್ನು ಅಲ್ಲಾಡಿಸುವ ಪ್ರಾದೇಶಿಕ ಪಕ್ಷ ಡಿಎಂಕೆ ಅಥವಾ ಅಣ್ಣಾಡಿಎಂಕೆ ರಾಜಿ ಸಂಧಾನಕ್ಕೆ ಒಪ್ಪುವ ಭರವಸೆ ದೊಡ್ಡ ಮರೀಚಿಕೆ.