Wednesday, 11th December 2024

ಮತ್ತೆ ಕಾಡಿದ ಟೇಪ್ ರೆಕಾರ್ಡರ್‌ ಮೋಹ

ಅಭಿಮತ

ಶ್ರೀನಿವಾಸ

ಇತ್ತೀಚೆಗೆ ಆಡಿಯೋ ಟೇಪ್ ಜನಕ ನೆದರ್‌ಲ್ಯಾಂಡ್‌ನ Lou Ottens ನಿಧನರಾದರು. ಅವರ ನಿಧನದ ಸುದ್ದಿಯ ಫೋಟೋಗಳಲ್ಲಿ ಅವರ ಜತೆಗೆ ಅವರು ಆವಿಷ್ಕರಿಸಿದ ಆಡಿಯೋ ಕ್ಯಾಸೆಟ್ಟು ನೋಡಿದೆ. ಆ ಎರಡು ಕಣ್ಣುಗಳುಳ್ಳ ತೆಳ್ಳನೆಯ ಟೇಪಿನ ಚಿಕ್ಕ ಪ್ಲಾಸ್ಟಿಕ್ ಪೆಟ್ಟಿಗೆಯೊಂದಿಗಿನ ನನ್ನ ನೆನಪುಗಳು ಧೊತ್ತನೆ ಮನದಲ್ಲಿ ಮೂಡಿದವು.

ಮೊದಲಿಗೆ ನೆನಪಾದದ್ದು ಹಡಪದ ಅಂಕಲ್. ನಮ್ಮೂರು ಹರಪನಹಳ್ಳಿಯ ಸುಣಗಾರಗೆರೆಯಲ್ಲಿ ಬಂಡ್ರಿ ರಾಮಣ್ಣನವರ ಮಾಲೀಕತ್ವದ 2 ರೂಮಿನ ಚಿಕ್ಕ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಪಕ್ಕದ ಮನೆಯಲ್ಲಿ ಹಡಪದ ಅಂಕಲ್ ಬಾಡಿಗೆ ಇದ್ದರು. ಅವರ ಮನೆಯಲ್ಲಿ ಒಂದು ಟೇಪ್ ರೆಕಾರ್ಡರ್ ಇತ್ತು. ಅಲ್ಲಿ ನಾನು ನೋಡಿದ ಮೊದಲ ಕ್ಯಾಸೆಟ್ಟು ಪ್ರೇಮಲೋಕ ಚಿತ್ರದ್ದು.

ರವಿಚಂದ್ರನ್, ಜೂಹಿ ಚಾವ್ಲಾರ ಆಕರ್ಷಕ ಮುಖಪುಟ ಹೊಂದಿತ್ತು. ಅವರ ಮನೆಯಿಂದ ಹಿಂದಿಯ ‘ಮೈನೆ ಪ್ಯಾರ್ ಕಿಯ’, ಕನ್ನಡದ ಪ್ರೇಮಲೋಕ, ರಣಧೀರ ಚಿತ್ರಗಳ ಹಾಡುಗಳು ಕೇಳಿ ಬರುತ್ತಿದ್ದವು. 1992ರಲ್ಲಿ ನಾವು ಸುಣಗಾರಗೆರೆ ಇಂದ ರಾಮರಾವ್ ಕಂಪೌಂಡ್‌ಗೆ ಶಿಫ್ಟ್‌ ಆದೆವು. ಅದು ಅಧ್ಯಾಪಕರು, ಇತರ ಸರಕಾರಿ ನೌಕರರಿದ್ದ ಹನ್ನೊಂದು ಮನೆಗಳ ವಠಾರ. ಅಲ್ಲಿ ಒಮ್ಮೆ ನಾವು ಹುಡುಗರು ಹೊರಗೆ ಆಡುತ್ತಿದ್ದಾಗ ನೆರೆಮನೆಯ ಮಲ್ಲಿಯ(ಮಲ್ಲಿಕಾರ್ಜುನ) ಅಮ್ಮ ಹೊಸದಾಗಿ ಖರೀದಿಸಿದ ಕೆಂಪನೆಯ ಟೇಪ್ ರೆಕಾರ್ಡರ್ ಅನ್ನು ಅದರ ಕರಿಯ ಹಿಡಿಕೆ ಹಿಡಿದು ಖುಷಿಯಿಂದ ತರುತಿರಲು ಬೇರೆ ಮನೆಯವರೆಲ್ಲ ‘ಏನ್ರಿ!!!, ಹೊಸ ಟೇಪ್ ರೆಕಾರ್ಡರ್ ತಂದಿದ್ದೀರಾ!! ’ ಅಂತ ಕೇಳಲು ಆ ಆಂಟಿಯ ನಗುತ್ತಿರುವ ಮುಖ ನೆನಪಾಯಿತು.

ಮಧ್ಯಮ ವರ್ಗದ ನಮ್ಮ ಮನೆಯಲ್ಲಿ ಮೊದಲಿಗೆ ಬಂದ ಐಷಾರಾಮಿ ವಸ್ತು ಎಂದರೆ ಕಲರ್ ಟಿ.ವಿ, ರೇಡಿಯೋ ನನಗಿಂತಲೂ ಮೊದಲು ನಮ್ಮ ಮನೆಯಲ್ಲಿ ಇತ್ತು. ನಿಧಾನವಾಗಿ ವರ್ಷಕ್ಕೊಂದರಂತೆ ಹೊಸತೊಂದು ಸಾಮಾನು ಮನೆಗೆ ಬರುತ್ತಿತ್ತು. ಲೂನಾ ಬಂತು, ಫ್ರಿಡ್ಜ್‌ , ವಾಷಿಂಗ್ ಮಷಿನ್ ಬಂದವು, ಟೆಲಿಫೋನ್ ಬಂತು.

ಆದರೆ ಟೇಪ್ ರೆಕಾರ್ಡರ್ ಮಾತ್ರ ನಮ್ಮ ಮನೆಗೆ ಬರಲೇ ಇಲ್ಲ. ನಮ್ಮ ತಂದೆಗೆ ಟೇಪ್ ರೆಕಾರ್ಡರ್ ಅಂದರೆ ಅದೇಕೋ ಇಷ್ಟ ವಿರಲಿಲ್ಲ. ರೇಡಿಯೋದಲ್ಲಿನ ಹಾಡುಗಳು ಅವರಿಗೆ ಸಾಕೆನಿಸಿದ್ದವು. ‘ನಾವು ಟೇಪ್ ರೆಕಾರ್ಡರ್ ತಗೊಳ್ಳಿ’ ಎಂದು ಕೇಳಿದಾಗ ಅವರಿಂದ ಬರುವ ಉತ್ತರವೆಂದರೆ ‘ಈಗಲೇ ಈ ಕೇಬಲ್ ಟಿವಿ ಬಂದು ಹಾಳಾಗಿದ್ದೀರಾ. ಇನ್ನು ಈ ಟೇಪ್ ರೆಕಾರ್ಡರ್ ಬೇರೆ ಕೇಡು’. ಹೀಗೆ ಕನಸಾಗಿ ಉಳಿದ ಟೇಪ್ ರೆಕಾರ್ಡರ್ ಮೇಲಿನ ಮೋಹ ಇನ್ನೂ ಹೆಚ್ಚಾಗುತ್ತಲೇ ಇತ್ತು.

ಬೇಸಿಗೆ ರಜೆಯ ದಿನಗಳಲ್ಲಿ ಬಳ್ಳಾರಿಗೆ ಹೋದಾಗ ಮಾವ ರಾಮಕೃಷ್ಣರ ಮನೆಯಲ್ಲಿ ಆ ಚಿಕ್ಕ ಟೇಪ್ ರೆಕಾರ್ಡರ್‌ನಲ್ಲಿ ರೆಹಮಾನ್ ಸಂಗೀತದ ‘ರೋಜಾ’, ‘ಬಾಂಬೆ’, ಕಾದಲನ್ ಚಿತ್ರದ ಹಾಡುಗಳನ್ನು ಕೇಳಿ ಖುಷಿಪಟ್ಟ ಅನುಭವ ವರ್ಷಪೂರ್ತಿ ನೆನಪಿನಲ್ಲಿರು ತ್ತಿತ್ತು.

90ರ ದಶಕದಲ್ಲಿ ಚಲನಚಿತ್ರದ ಹಾಡುಗಳ ಜನಪ್ರಿಯತೆ ಕ್ಯಾಸೆಟ್ಟುಗಳ ಮಾರಾಟ ಸಂಖ್ಯೆಯ ಮೇಲೆ ನಿರ್ಧಾರವಾಗುತ್ತಿತ್ತು. ಈಗ ಯೂಟ್ಯೂಬ್ ವೀವ್ಸ್‌ ಗಳಿರುವಂತೆ ಅಂದಿನ ದಿನಗಳಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಕ್ಯಾಸೆಟ್ಟುಗಳ ಮಾರಾಟದ ದಾಖಲೆ ಯಾಗುತ್ತಿತ್ತು. ಕಾಲಕ್ರಮೇಣ ಕಂಪ್ಯೂಟರ್, ಸೀಡಿಗಳ ಭರಾಟೆಯಲ್ಲಿ ಟೇಪ್ ರೆಕಾರ್ಡರ್‌ಗಳು, ಕ್ಯಾಸೆಟ್‌ಗಳು ಮೂಲೆಗುಂಪಾ ದವು.

ಇಂದಿನ ಸ್ಮಾರ್ಟ್ಫೋನ್, ಐಫೋನ್ ಕಾಲದಲ್ಲಿ ಕ್ಯಾಸೆಟ್‌ಗಳು ವಸ್ತುಸಂಗ್ರಹಾಲಯದ ವಸ್ತುಗಳಾಗಿವೆ. ಇತ್ತೀಚೆಗೆ Lou Ottens ನಿಧನದ ಸುದ್ದಿಯಿಂದ ಇವೆಲ್ಲಾ ನೆನಪಾದವು. 80ರ ದಶಕದ ಮುನ್ನ ಗ್ರಾಮಾಫೋನ್‌ಗಳಿದ್ದವಂತೆ. ಈಗ ಐಫೋನ್,
ಸ್ಮಾರ್ಟ್ಫೋನ್‌ ಗಳಿವೆ ಆದರೆ 80- 90ರ ದಶಕದಲ್ಲಿ ಬೆಳೆದವರೆಲ್ಲರಿಗೂ ಟೇಪ್ ರೆಕಾರ್ಡರ್, ಕ್ಯಾಸೆಟ್‌ನೊಂದಿಗಿನ ಅನುಭವಗಳು ಖಂಡಿತವಾಗಿ ನೆನಪಿಗೆ ಬಂದಿರುತ್ತವೆ. 90ರ ದಶಕದಲ್ಲಿ ಕ್ಯಾಸೆಟ್‌ನಲ್ಲಿ ಹಾಡು ಕೇಳದ ರಸಿಕನಿದ್ದನೇ ಈ ಜಗದೊಳು….