ಪ್ರಚಲಿತ
ಎಲ್.ಪಿ.ಕುಲಕರ್ಣಿ
ಒಮ್ಮಿದೊಮ್ಮೆಲೇ ಕಪ್ಪಾದ ಮೋಡಗಳು ದಟ್ಟಾಯಿಸಿ, ಹಗಲು ಸರಿದು ರಾತ್ರಿ ಆಯಿತೇನೋ ಎಂಬ ವಾತಾವರಣ. ಸುತ್ತ ನಾಲ್ಕೂ ಕಡೆಗಳಿಂದ ಬೀಸುವ ಬಿರುಗಾಳಿ. ಇದುವರೆಗೂ ದಂಡೆಗೆ ಬಂದು ಅಪ್ಪಳಿಸುತ್ತ ಮತ್ತೆ ಸಮುದ್ರವೆಂಬ ಮನೆ ಸೇರುತ್ತಲಿದ್ದ ಪುಟ್ಟ ತೆರೆಗಳು ಈಗ, ಆನೆ ಗಾತ್ರವನ್ನು ಪಡೆದುಕೊಂಡು, ಒಮ್ಮೆಲೆ ದಡವನ್ನು ದಾಟಿ ಊರೊಳಗೆ ಹೋಗುವ ಭಯಾನಕ ದೃಶ್ಯ.
ಜೋರಾದ ಮಳೆ. ಬಿರುಗಾಳಿಯ ಹೊಡೆತಕ್ಕೆ ಮನೆಯ ಚಾವಣಿಗಳು ಕಿತ್ತು ನಾಲ್ಕಾರು ಮೈಲು ದೂರ ಹೋಗಿ ಬೀಳುವುದು. ಮನೆ ಮುಂದೆ ನಿಲ್ಲಿಸಿದ ಕಾರು, ಬೈಕು ಗಳೆಲ್ಲ ನೀರಿಗೆ ಕೊಚ್ಚಿ ಹೋಗುತ್ತಿರುವ, ಗುಡಿಸಲುಗಳನ್ನೊಳಗೊಂಡು ಆರ್‌ಸಿಸಿ ಬಂಗ್ಲೆಗಳು ಗಾಳಿಯ, ನೀರಿನ ರಭಸಕ್ಕೆ ಧೊಪ್ಪೆಂದು ಧರೆಗೆ ಉರುಳಿ ಜನರ, ಜಾನುವಾರುಗಳ ಜೀವಹಾನಿಯಾಗುವ ರೌದ್ರ ರಮಣೀಯ ದೃಶ್ಯ.
ಇದೇನಿದು ಯಾವುದಾದರೂ ಭಯಾನಕ, ಥ್ರಿಲ್ಲರ್ ಸಿನಿಮಾದ ದೃಶ್ಯವೆಂದು ಭಾವಿಸಬೇಡಿ. ಇದು ಚಂಡಮಾರುತದ ನೈಜ ದೃಶ್ಯ.
ಪ್ರತಿವರ್ಷ ಜಗತ್ತಿನ ನಾನಾ ಭಾಗಗಳಲ್ಲಿ ಈ ಸೈಕ್ಲೋನ್, ಅರ್ಥಾತ್ ಚಂಡಮಾರುತಗಳು ಜನ್ಮತಳೆಯುತ್ತಲೇ ಇರುತ್ತವೆ. ಜನ್ಮ ತಳೆದು ಬಂದು ಭಯಾನಕ ವಾತಾವರಣ ವನ್ನು ಸೃಷ್ಟಿ ಮಾಡುತ್ತಲೇ ಇರುತ್ತವೆ. ಈಗ ನಾವು ಕೋವಿಡ್-19ನ ಕರಿನೆರಳಿನ ಭಯದಲ್ಲಿ ಬದುಕುತ್ತಿದ್ದೇವೆ.
ಪ್ರತಿದಿನ ಸಾವು ನೋವುಗಳ ಸುದ್ದಿಗಳನ್ನು ಕೇಳಿ, ನೋಡಿ, ಓದಿ ಸಾಕಾಗಿದೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಚಂಡ ಮಾರುತಗಳಿಂದಾಗುವ ಹಾನಿ ಬೇರೆ. ಕಳೆದ ನಾಲ್ಕೈದು ದಿನಗಳಿಂದ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಗೋವಾ, ಮಹಾರಾಷ್ಟ್ರದ ಮುಂಬೈ, ಪುಣೆಗಳನ್ನೊಳಗೊಂಡಂತೆ ಗುಜರಾತ್‌ನ 12 ಜಿಗಳಾದ ಕಚ್, ಸೌರಾಷ್ಟ್ರ, ಪೋರ್‌ಬಂದರ್,
ಜುನಾಗಡ್, ಭಾವನಗರ, ಅಹಮದಾಬಾದ್, ಸೂರತ್, ವಲ್ಸಾದ್, ಅಮ್ರೆಲಿ, ಆನಂದ್ ಮತ್ತು ಭರೂಚ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಿಯು ಮೇಲೆ ಈ ‘ತೌಕ್ತೆ’ ಎಂಬ ಚಂಡಮಾರುತ ಅನಾಹುತ ಸೃಷ್ಟಿಸಿಬಿಟ್ಟಿದೆ.
ತೌಕ್ತೆ ಎಂದರೆ ಒಂದು ಜಾತಿಯ ಹಲ್ಲಿ. ಅರಬ್ಬಿ ಸಮುದ್ರ ಹಾಗೂ ಬಂಗಾಲ ಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಇವುಗಳ ಸುತ್ತ ಇರುವ 13 ರಾಷ್ಟ್ರಗಳು ನಾಮಕರಣ ಮಾಡುತ್ತವೆ. ಈ ಹೆಸರುಗಳನ್ನು ಮೊದಲೇ ಸೂಚಿಸಲಾಗುತ್ತವೆ. ಕಳೆದ ವರ್ಷ ಪ್ರತಿರಾಷ್ಟ್ರ 13 ಹೆಸರುಗಳ ಪಟ್ಟಿ ಕೊಟ್ಟ ಆಧಾರದಲ್ಲಿ 169 ಹೊಸ ಹೆಸರುಗಳ ಪಟ್ಟಿಯನ್ನು ಇಂಡಿಯನ್ ಮೆಟ್ರೋಲಾಜಿ ಕಲ್ ವಿಭಾಗ ಬಿಡುಗಡೆ ಮಾಡಿದೆ. ಈ ಹೊಸ ಪಟ್ಟಿಯಲ್ಲಿ ಕ್ರಮವಾಗಿ ಬಾಂಗ್ಲಾ ದೇಶ, ಭಾರತ, ಇರಾನ್, ಮಾಲ್ಡೀ, ಮಾಯನ್ಮಾರ್, ಒಮಾನ್, ಪಾಕಿಸ್ಥಾನ, ಕತಾರ್, ಸೌದಿ, ಶ್ರೀಲಂಕಾ, ಥಾಯ್ಲೆಂಡ್, ಯುಎಇ ಮತ್ತು ಯೆಮೆನ್ ಹೀಗೆ 13
ರಾಷ್ಟ್ರಗಳ ಹೆಸರು ಕ್ರಮವಾಗಿ ಬರುತ್ತವೆ.
ಸದ್ಯ ಬೀಸುತ್ತಿರುವ ಚಂಡಮಾರುತಕ್ಕೆ ‘ತೌಕ್ತೆ’ ಎಂದು ನಾಮಕರಣಮಾಡಿದ ದೇಶ ಮಾಯನ್ಮಾರ್. ತೌಕ್ತೆ ಚಂಡಮಾರುತ ಈಗ
ತಾನೆ ಮಧ್ಯ ಅರಬ್ಬಿ ಸಮುದ್ರದಲ್ಲಿ, ಭಾರತದ ನೈಋತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಅಂದರೆ, ನಮ್ಮ ಪಶ್ಚಿಮದ ಕರಾವಳಿ ಕಡೆಗೆ ಬಂದು, ಹವಾಮಾನ ವಿಶ್ಲೇಷಕರ ಪ್ರಕಾರ ಮೇ 15-16ರಂದು ಪಶ್ಚಿಮದಿಂದ ಉತ್ತರಕ್ಕೆ ಹೊರಟು ಗುಜರಾತ್‌ನ ದಕ್ಷಿಣ ತೀರಕ್ಕೆ 17ರಂದು ತಲುಪಿದೆ.
ತೌಕ್ತೆ ಚಂಡಮಾರುತವು ತೀರ ಪ್ರದೇಶಗಳಲ್ಲಿ ಇದುವರೆಗೂ 70ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಸತ್ತ ಜಾನುವಾರು, ಪ್ರಾಣಿಗಳಿಗೆ ಲೆಕ್ಕವೇ ಸಿಗುತ್ತಿಲ್ಲ. ಮಹಾರಾಷ್ಟ್ರದ 190 ಸ್ಮಾರಕಗಳು ಸಂಪೂರ್ಣ ಜಲಾವೃತಗೊಂಡಿವೆ. ಅರಬ್ಬಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಪಪ್ಪಾ-305 ಹೆಸರಿನ ಬಾರ್ಜ್‌ನಿಂದ ನಾಪತ್ತೆಯಾಗಿದ್ದ 75 ಜನಗಳ ಪೈಕಿ 26 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ 49 ಜನ ಪತ್ತೆಯಾಗಿಲ್ಲ. ಗುಜರಾತಿನಲ್ಲಿ ಇದುವರೆಗೂ 48 ಜನ ತೌಕ್ತೆಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ.
ಮಳೆಗಾಲದ ಪೂರ್ವದಲ್ಲಿ ಅಂದರೆ, ಏಪ್ರಿಲ್‌ನಿಂದ ಜೂನ್‌ವರೆಗೆ ಸತತವಾಗಿ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ನಾಲ್ಕನೇ ಚಂಡಮಾರುತವಾಗಿದೆ ತೌಕ್ತೆ. 2018ರಿಂದ ಈ ಎಲ್ಲಾ ಚಂಡಮಾರುತಗಳನ್ನು ‘ತೀವ್ರ ಚಂಡಮಾರುತ’ ಅಥವಾ ಅದಕ್ಕಿಂತ ಹೆಚ್ಚಿನದಾಗಿ ವರ್ಗೀಕರಿಸಲಾಗಿದೆ.
ಒಮ್ಮೆ ತೌಕ್ತೆ ಬೀಸಿದರೆ ಗುಜರಾತ್ ಅಥವಾ ಮಹಾರಾಷ್ಟ್ರ ಕರಾವಳಿಯನ್ನು ಅಪ್ಪಳಿಸುತ್ತದೆ. ಈ ತೌಕ್ತೆಯಿಂದುಂಟಾದ
ಗಾಳಿಯ ವೇಗ ಗಂಟೆಗೆ ಸರಿಸುಮಾರು 150-160 ಕಿ.ಮೀ ಆರಂಭದಲ್ಲಿ ಇದ್ದರೆ, ಅಂತಿಮವಾಗಿ ಇದು 170 ಕಿ.ಮೀಗೆ ಏರುತ್ತದೆ. ವಿಚಿತ್ರವೆಂದರೆ, ತೌಕ್ತೆ ಚಂಡಮಾರುತದ ಹಿಂದೆಯೇ ಮತ್ತೊಂದು ಚಂಡಮಾರುತ ಬೀಸುವುದು ನಿಶ್ಚಳವಾಗಿದೆ. ಇದೇ ಮೇ 22, 27ರ ವೇಳೆಗೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಗೆ ‘ಯಾಸ್’ ಹೆಸರಿನ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗ ಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ‘ಯಾಸ್’ ಎಂದರೆ ನಿರಾಶೆ ಎಂದರ್ಥ.
ಈ ಚಂಡಮಾರುತಕ್ಕೆ ‘ಯಾಸ್’ ಎಂಬ ಹೆಸರನ್ನು ಕೊಟ್ಟಿದ್ದು ‘ಒಮಾನ್’ ದೇಶ. ಮೇ 22ರ ಹೊತ್ತಿಗೆ ಉತ್ತರ ಅಂಡಮಾನ್ ಸಮುದ್ರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪೂರ್ವ-ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದು ಹಂತಹಂತವಾಗಿ 72 ಗಂಟೆಗಳಲ್ಲಿ ಚಂಡ ಮಾರುತವಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳು ಕಂಡು
ಬರುತ್ತಿವೆ. ನಂತರ ಇದು ವಾಯವ್ಯ ದಿಕ್ಕಿನ ಕಡೆ ಸಾಗಿ ಮೇ 26ರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ, ಒಡಿಶಾ ಕರಾವಳಿಗೆ ತಲುಪುವ ಸೂಚನೆಗಳಿವೆ.
ಕಳೆದ ವರ್ಷ ಅಂದರೆ 2020 ರಲ್ಲಿ ಪೂರ್ವ ಹಾಗೂ ಪಶ್ಚಿಮ ಎರಡೂ ಕರಾವಳಿಗಳಲ್ಲಿ ಅನಾಹುತ ಸೃಷ್ಟಿಮಾಡಿದ್ದ ‘ಆಂಫಾನ್’
ಚಂಡಮಾರುತವನ್ನು ನಾವಿಲ್ಲಿ ಸ್ಮರಿಸಬಹುದು. ಅಲ್ಲದೆ 2019ರ ಮೇ ತಿಂಗಳ ಮೊದಲ ವಾರ ‘ಫನಿ’ (ಸರ್ಪದ ಹೆಡೆ)’ ಹೆಸರಿನ ಚಂಡಮಾರುತ ಗಂಟೆಗೆ 90 ರಿಂದ 180ಕ್ಕೂ ಹೆಚ್ಚು ಕಿ.ಮೀ. ವೇಗದೊಂದಿಗೆ ತೀರ ಪ್ರದೇಶಗಳನ್ನು ಅಪ್ಪಳಿಸಿ ಅಪಾರ ಹಾನಿ ಮಾಡಿ ಹೋಗಿದ್ದನ್ನು ನಾವು ಇನ್ನೂ ಮರೆತಿಲ್ಲ. ಹಾಗಾದರೆ ವೈeನಿಕವಾಗಿ ಈ ಚಂಡಮಾರುತ ಎಂದರೇನು? ವಾಯು ಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ಅತಿಯಾದ ಮಳೆಯನ್ನು ಚಂಡಮಾರುತ ಎಂದು ಕರೆಯಲಾಗುತ್ತದೆ.
ವಿಷುವುದ್ರೇಖೆಯಿಂದ ಸರಿಸುಮಾರು ಹತ್ತು ಡಿಗ್ರಿ ದೂರದಲ್ಲಿ ಹೆಚ್ಚಾಗಿ ಈ ಚಂಡಮಾರುತಗಳು ಉಂಟಾಗುತ್ತವೆ. ಭೂಮಿ ಪರಿಭ್ರಮಿಸುವ ದಿಕ್ಕಿನ ಇವು ಸುತ್ತುತ್ತವೆ. ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತಗಳು ಸುತ್ತುತ್ತವೆ. ದಕ್ಷಿಣ ಗೋಳದಲ್ಲಿ ಚಂಡಮಾರುತಗಳು ಗಡಿಯಾರದ ದಿಕ್ಕಿನಲ್ಲಿ ಸುತ್ತುತ್ತವೆ. ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡಮಾರುತಗಳು ಉದ್ಬವಿಸುತ್ತವೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಚಂಡಮಾರುತದ ಚಲನೆಯನ್ನು ನಿರ್ದಿಷ್ಟವಾಗಿ ಊಹಿಸುವುದು ಕಷ್ಟ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ. ಇಲ್ಲಿನ ಸಮುದ್ರದ ಒತ್ತಡ, ಗಾಳಿಯ ಚಲನೆಯು ಚಂಡಮಾರುತವನ್ನು ಪದೇಪದೆ ದಿಕ್ಕನ್ನು ಬದಲಿಸುವಂತೆ ಮಾಡುತ್ತದೆ. ಆದರೆ ಬಂಗಾಳಕೊಲ್ಲಿಯ ವಿಸ್ತಾರವು ಪೆಸಿಪಿಕ್ ಅಥವಾ ಅಟ್ಲಾಂಟಿಕ್ ಸಾಗರದಷ್ಟು ವಿಶಾಲ ವಾಗಿರುವುದರಿಂದ ಅಲ್ಲಿ ಇದ್ದಷ್ಟು ಪ್ರಬಲ ಹಾಗೂ ಮಾರಕ ಚಂಡಮಾರುತಗಳು ರೂಪುಗೊಳ್ಳುವುದು ಕಡಿಮೆ.
ಪೆಸಿಪಿಕ್ ಅಥವಾ ಅಟ್ಲಾಂಟಿಕ್ ಸಾಗರಗಳಲ್ಲಿ, ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಚಂಡಮಾರುತಗಳಿಗಿಂತ ಕೆಲವು ಪಟ್ಟು ಅಧಿಕ ಸಾಮರ್ಥ್ಯದ ಚಂಡಮಾರುತಗಳು ರೂಪುಗೊಳ್ಳುತ್ತವೆ. ಇವು ನೇರವಾಗಿ ಭೂಮಿಗೆ ಅಪ್ಪಳಿಸುವುದರಿಂದ ಹಾನಿ ಹೆಚ್ಚು.
2018ರಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯದ ಕರಾವಳಿ ಪ್ರಾಂತ್ಯಗಳಲ್ಲಿ ‘ತಿತ್ಲಿ’ ಚಂಡಮಾರುತ ಅಪ್ಪಳಿಸಿದ್ದನ್ನು ನಾವು ಕಂಡಿದ್ದೇವೆ. ‘ತಿತ್ಲಿ’ ಎಂದು ನಾಮಕರಣ ಮಾಡಿದ್ದು ಪಾಕಿಸ್ತಾನ. ಇದರ ಅರ್ಥ ಗಿಳಿ ಎಂದು.
ಇದರ ಹಿಂದೆ ಭಾರತದ ಪೂರ್ವ ಕರಾವಳಿಗೆ ‘ಹುದ್ ಹುದ್’ ಎಂಬ ಚಂಡಮಾರುತ ಅಪ್ಪಳಿಸಿತ್ತು. ಅದಕ್ಕೆ ಈ ಹೆಸರಿಟ್ಟದ್ದು ಓಮನ್ ದೇಶ. ಹುದ್ ಹುದ್ ಎಂಬುದೂ ಒಂದು ಪಕ್ಷಿಯ ಹೆಸರು. ಫೈಲೀನ್, ನಿಲೋಫರ್, ಲೆಹಾರ್, ದಾಯೆ ಇವೆಲ್ಲ ಇತ್ತೀಚಿನ ಏಷ್ಯಾದ ವಿವಿಧ ಪ್ರಾಂತ್ಯಗಳನ್ನು ಅಳುಗಾಡಿಸಿದ ಚಂಡಮಾರುತಗಳು.
ಇವುಗಳಿಗೆ ಆಗ್ನೇಯ ಏಷ್ಯಾ ದೇಶಗಳು ಹೆಸರಿಟ್ಟಿವೆ. ಚಂಡಮಾರುತಗಳಿಗೆ ಹೆಸರಿಡುವ ಸಂಪ್ರದಾಯ ಅಟ್ಲಾಂಟಿಕ್ ಸಮುದ್ರ ತೀರ ಪ್ರಾಂತ್ಯಗಳಲ್ಲಿ 1953 ರಿಂದಲೇ ಇದೆ. ಅಮೆರಿಕದಲ್ಲಿ ಕತ್ರಿನಾ ಹುರಿಕೇನ್, ಫಿಲಿಪ್ಪೀ ನಲ್ಲಿ ನಾರಿ ಟೈಪೂನ್ ಅಪ್ಪಳಿಸಿದ ಸುದ್ದಿ ಯನ್ನು ನಾವೆಲ್ಲ ಕೇಳಿದ್ದೇವೆ. ವಾಸ್ತವವಾಗಿ ಸೈಕ್ಲೋನ್, ಹುರಿಕೇನ್ ಮತ್ತು ಟೈಪೂನ್ ಇವೆಲ್ಲವೂ ಉಷ್ಣವಲಯದ ಚಂಡ ಮಾರುತಗಳು. ಅಟ್ಲಾಂಟಿಕ್ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹುರಿಕೇನ್ ಎನ್ನುವರು. ಫೆಸಿಪಿಕ್
ಮಹಾ ಸಾಗರದಲ್ಲಿ ಉದ್ಭವಿಸುವ ಚಂಡಮಾರುತಗಳೇ ಟೈಪೂನ್‌ಗಳು. ನಮ್ಮ ಹಿಂದೂ ಮಹಾಸಾಗರದ ಚಂಡಮಾರುತವನ್ನು ಸೈಕ್ಲೋನ್ ಎಂದು ಕರೆಯಲಾಗುತ್ತಿದೆ.
ವಿಶ್ವ ಪವನಶಾಸ್ತ್ರ ಸಂಘಟನೆ (WMO&World Meteorological Organization) ಪ್ರತಿವರ್ಷ ಅನುಕ್ರಮವಾಗಿ ಇಂಗ್ಲಿಷ್ ವರ್ಣಮಾಲೆಯ ಪ್ರಕಾರ 21 ಹೆಸರುಗಳನ್ನು ಪಟ್ಟಿ ಮಾಡುತ್ತದೆ. 1971 ರಿಂದ ಈಚೆಗೆ, ಆ ಹೆಸರುಗಳನ್ನು ಲಿಂಗಾನುಕ್ರಮಣಿಕೆಗೆ ಅನುಸಾರವಾಗಿ ಕರೆಯಲಾಗುತ್ತದೆ. ಆದರೆ ಈ ಪಟ್ಟಿಯಿಂದ ಇಂಗ್ಲಿಷ್ ವರ್ಣಮಾಲೆಯ ‘ಕ್ಯೂ’, ‘ಯು’, ‘ಎಕ್ಸ್’, ‘ವೈ’, ‘ಝಡ್’ ಅಕ್ಷರಗಳಿಂದ ಬಹಳಷ್ಟು ಹೆಸರುಗಳು ಪ್ರಾರಂಭವಾಗುವುದಿಲ್ಲ. ಇಲ್ಲಿ ತಿಳಿಸಲಾದ ಆ 5 ಅಕ್ಷರಗಳನ್ನು ಹೊರತುಪಡಿಸಿ ಉಳಿದ 21 ಅಕ್ಷರಗಳಿಂದ ವಿಭಿನ್ನ ವಾದ ಹಾಗೂ ವಿಶೇಷವೆನಿಸುವ, ಸರಳವೂ, ಚಿಕ್ಕವೂ ಆಗಿರುವ ಅಲ್ಲದೇ ಉಚ್ಛಾರಣೆ ಮಾಡುವಲ್ಲಿ ಸುಲಭವೆನಿಸುವ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲಾಗುತ್ತದೆ.
ಮೊದಲು, ಕಡಿಮೆ ವೇಗದೊಂದಿಗೆ ರೂಪುಗೊಳ್ಳುವ ಈ ಚಂಡಮಾರುತಗಳು ಬರಬರುತ್ತಾ ರೌದ್ರಾವತಾರ ತಾಳುತ್ತವೆ. ಇಂತಹ ಚಂಡಮಾರುತಗಳು ನೂರಾರು ಕಿ.ಮೀ ವ್ಯಾಪ್ತಿವರೆಗೆ ಆವರಿಸಿಬಿಡುತ್ತವೆ. ಸಾಗರದ 10000 ಮೈಲಿಗಳಷ್ಟು ದೂರ ಕ್ರಮಿಸಿ, ಬಳಿಕ ಭೂಮಿಗೆ ಅಪ್ಪಳಿಸಿ, ಕ್ರಮೇಣ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಸಾಗರದಲ್ಲಿ ಅದಕ್ಕೆ ನೀರಿನ ತೇವಾಂಶ ಮತ್ತು ಶಕ್ತಿ ಲಭಿಸುವುದರಿಂದ ಪ್ರಬಲವಾಗುತ್ತಾ ಸಾಗುತ್ತವೆ. ಆದರೂ ಅವು ಭೂಮಿಯನ್ನು ಪ್ರವೇಶಿಸಿದ ಬಳಿಕ ದುರ್ಬಲಗೊಳ್ಳುತ್ತಾ
ಹೋಗುತ್ತವೆ.
ಚಂಡಮಾರುತಗಳು ಕೆಲವು ದಿನಗಳ ಕಾಲ ತನ್ನ ಅಸ್ತಿತ್ವ ಹೊಂದಿರುತ್ತವಾದರೂ ಈ ಕಾಲಾವಧಿಯಲ್ಲಿ ಲಕ್ಷಾಂತರ ಮೆಗಾವಾಟ್ ನಷ್ಟು ವಿದ್ಯುತ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಎಂಬುದು ತಜ್ಞರ ಲೆಕ್ಕಾಚಾರ. ಇಂತಹ ವಿದ್ಯುತ್ತನ್ನು ಬಳಸಿಕೊಳ್ಳುವ ತಂತ್ರeನವನ್ನೇನಾದರೂ ಅಭಿವೃದ್ಧಿಪಡಿಸಿದರೆ ಕೊರತೆಯಿಲ್ಲದೇ ನಿರಂತರವಾಗಿ ವಿದ್ಯುತ್ತನ್ನು ಎಗ್ಗಿಲ್ಲದೇ ಬಳಸಬಹುದು! ಇಂತಹ ಚಂಡಮಾರುತಗಳು ಸಾಗರದ ಬಿಸಿ ನೀರಿನ ಮೇಲೆ ರೂಪುಗೊಳ್ಳುತ್ತವೆ. ಉಷ್ಣತೆಗೆ ಆವಿಯಾಗುವ ಸಮುದ್ರದ ನೀರು ಚಂಡಮಾರುತಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ. ಈ ನೀರು ಬಿಸಿಯಾಗಿದ್ದಷ್ಟೂ ಆವಿಯಾಗುವ ಪ್ರಮಾಣ ಅಧಿಕ.
ಇಂತಹ ಸಂದರ್ಭದಲ್ಲಿ ಚಂಡಮಾರುತಗಳು ಅತಿಹೆಚ್ಚು ಬಲಶಾಲಿಯಾಗಿರುತ್ತವೆ. ಭೂಮಿಯ ಮೇಲೆ ಕಳೆದ 30 ವರ್ಷಗಳ ಹಿಂದೆ ಉಂಟಾಗುತ್ತಿದ್ದ ಚಂಡಮಾರುತಗಳ ಪ್ರಭಾವ ಮತ್ತು ಅವುಗಳ ತೀವ್ರತೆಗಿಂತ ಈಗ ಮತ್ತಷ್ಟು ಹೆಚ್ಚಿದೆ. ಇದಕ್ಕೆ ಕಾರಣ
ಜಾಗತಿಕ ತಾಪಮಾನದದ ಹೆಚ್ಚಳ. 1891 ಮತ್ತು 2017 ರ ನಡುವೆ ಭಾರತದ ಬಂಗಾಳಕೊಲ್ಲಿಯಲ್ಲಿ ಕೇವಲ 14 ಭೀಕರ ಚಂಡಮಾರುತಗಳು ಏಪ್ರಿಲ್ ತಿಂಗಳ ಅವಧಿಯಲ್ಲಿ ರೂಪುಗೊಂಡಿದ್ದವು.
ಆದರೆ, ಅವುಗಳಲ್ಲಿ ಒಂದೇ ಒಂದು ಚಂಡಮಾರುತ ಮಾತ್ರ ಭಾರತವನ್ನು ಪ್ರವೇಶಿಸಿತ್ತು ಎಂದು 2019 ರಲ್ಲಿ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಟ್ವೀಟ್ ಮಾಡಿ ತಿಳಿಸಿದ್ದರು. 1977 ರಲ್ಲಿ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದ ಚಂಡಮಾರುತದಲ್ಲಿ 50 ಸಾವಿರ ಜನರ ಜೀವಹಾನಿಯಾಗಿತ್ತು. ಒಡಿಶಾದಲ್ಲಿ 1999 ರಲ್ಲಿ ಅಪಾರ ಹಾನಿ ಮಾಡಿದ್ದ ಅಂದಿನ ಚಂಡಮಾರುತದಿಂದ 10500 ಜನ ಸಾವಿಗೀಡಾಗಿದ್ದರು. 1999 ರಲ್ಲಿ ಮಚಲೀ ಪಟ್ಟಣಂ ಸೈಕ್ಲೋನ್‌ಗೆ ಸಿಲುಕಿ 15 ಸಾವಿರ ಜನ ಸಾವಿಗೀಡಾಗಿದ್ದರು.
2011 ರಲ್ಲಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬೀಸಿದ ಬಿರುಗಾಳಿಯಿಂದ 33 ಜನ ಅಸುನೀಗಿದ್ದರು. 2013 ರಲ್ಲಿ ಬೀಸಿದ ಚಂಡಮಾರುತ ಫೈಲಿನ್ ಪರಿಣಾಮದಿಂದ ಅಂಡಮಾನ್ ಮತ್ತು ನಿಕೋಬಾರ್, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್ ಗಳು ತತ್ತರಿಸಿ ಹೋಗಿ, 23 ಜನರ ಸಾವಿಗೆ ಕಾರಣವಾಗಿತ್ತು. ಮುಂದೆ ಕ್ರಮವಾಗಿ 2014 ರ ‘ಹುಡ್ ಹುಡ್’ ಸೈಕ್ಲೋನ್ ಗೆ 124 ಬಲಿ ಮತ್ತು 2015ರ ಸೈಕ್ಲೋನ್‌ಗೆ ಗುಜರಾತ್ ನಲ್ಲಿ 84 ಜನ ಅಸುನೀಗಿದ್ದರು.
ಬಹುಪಾಲು ಈ ಚಂಡಮಾರುತ ಅಥವಾ ಸೈಕ್ಲೋನ್ ಗಳು ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಮಾತ್ರ ಬೀಸುತ್ತವೆ. ಶೇ.65ರಷ್ಟು ಚಂಡಮಾರುತಗಳು ವರ್ಷದ ನಾಲ್ಕು ತಿಂಗಳು ಮಾತ್ರ ಉದ್ಬವಿಸುತ್ತವೆ. ಇಂತಹ ಚಂಡಮಾರುತ ಬೀಸುವ ಸಂದರ್ಭದಲ್ಲಿ ಹವಾಮಾನ ಇಲಾಖೆ ಹಲವು ವಿಧದಲ್ಲಿ ಎಚ್ಚರಿಕೆ ನೀಡುತ್ತದೆ. ಪ್ರಮುಖವಾಗಿ 4 ವಿಧದಲ್ಲಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ರೆಡ್ ಅಲರ್ಟ್; ಕ್ರಮ ಕೈಗೊಳ್ಳುವುದು.
ಯ ಅಲರ್ಟ್; ಪರಿಸ್ಥಿತಿ ಕ್ರಮ ಕೈಗೊಳ್ಳುವುದು. ಆರೆಂಜ್ ಅಲರ್ಟ್; ಸಿದ್ಧರಾಗಿರಿ. ಗ್ರೀನ್ ಅಲರ್ಟ್; ನೋ ವಾರ್ನಿಂಗ್, ನೋ
ಆಕ್ಷನ್. ಈಗಿನ ತೌಕ್ತೆ ಮತ್ತು ಯಾಸ್ ಚಂಡಮಾರುತಗಳು ಅಷ್ಟೊಂದು ಪ್ರಬಲವಾಗಿಲ್ಲ ಎಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಆದರೂ ನಂಬಲು ಸಾಧ್ಯವಿಲ್ಲ. ದಿನಕಳೆದಂತೆ ಅವು ತಮ್ಮ ತೀವ್ರತೆಯನ್ನು ಹೆಚ್ಚುಮಾಡಿಕೊಳ್ಳಲೂಬಹುದು. ಅದಕ್ಕೆಂದೇ ಈ ಚಂಡಮಾರುತಗಳು ಬೀಸುವ ಕಡೆಗಳ ಕಟ್ಟೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ತೀರ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನು ಕೆಲವು ದಿನ ನಿಲ್ಲಿಸಲಾಗಿದೆ. ಅಷ್ಟೇ ಅ ಆ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆದಿದೆ ಎಂದು ಮೂಲಗಳು ತಿಳಿಸುತ್ತಿವೆ. ಅದೇನೇ ಇರಲಿ ಪ್ರಕೃತಿಯ ಮುಂದೆ ನಾವು ಶಿಶುಗಳು. ಅದರ ಮುನಿಸನ್ನು ನಾವು ಸಹಿಸಿಕೊಳ್ಳಲೇಬೇಕು.