Saturday, 23rd November 2024

ಶಿಕ್ಷಕ ಮಾತ್ರ ಆದರ್ಶವಾಗಿದ್ದರೆ ಸಾಕೆ ?

ದಾಸ್ ಕ್ಯಾಪಿಟಲ್‌

dascapital1205@gmail.com

ವಿದ್ಯಾರ್ಥಿಯಾಗಿದ್ದಾಗಲೂ ಈ ಪ್ರಶ್ನೆ ಯಾವತ್ತೂ ಕಾಡುತ್ತಲೇ ಇತ್ತು, ಈಗಂತೂ ನಿರಂತರ ಹಿಂಬಾಲಿಸಿ ಬರುತ್ತಿದೆಯೇನೋ ಅನಿಸುತ್ತಿದೆ. ಏಕೆಂದರೆ, ಶಿಕ್ಷಕ ಮಾತ್ರ ತಪ್ಪು ಮಾಡಲೇಬಾರದು ಎಂಬ ಅಭಿಪ್ರಾಯ ಎಲ್ಲೂ ಇದೆ. ಅವನು ನೂರಕ್ಕೆ ನೂರು ಸಾಚಾ ಆಗಿರಬೇಕೆಂದು ಸಮಾಜ ನಿರೀಕ್ಷಿಸುತ್ತದೆ. ಶಿಕ್ಷಕ ಯಾವತ್ತೂ ಆದರ್ಶಪ್ರಾಯನಾಗಿರಬೇಕೆಂಬ ಆಗ್ರಹ-ಅಭಿಪ್ರಾಯಗಳು
ವಿಚಿತ್ರವೆನಿಸುತ್ತವೆ.

ಮುಖ್ಯವಾಗಿ ಹೀಗಂದುಕೊಳ್ಳುವುದೇ ದೊಡ್ಡ ತಪ್ಪು. ಏಕೆಂದರೆ ಶಿಕ್ಷಕನೂ ಮನುಷ್ಯನೇ, ಅವನಿಗೂ ವೈಯಕ್ತಿಕ ಬದುಕಿದೆ, ಅವನನ್ನೇ ನಂಬಿ ನಾಲ್ಕಾರು ತಲೆಗಳು ಬದುಕುತ್ತವೆ. ಮನುಷ್ಯ ಸಹಜ ದೌರ್ಬಲ್ಯ, ನ್ಯೂನತೆ, ರಾಗ-ದ್ವೇಷಗಳು ಪ್ರತಿಯೊಬ್ಬ ಶಿಕ್ಷಕನಲ್ಲೂ ಇರುತ್ತವೆ. ಬೋಧನೆ ಸಂಬಂಧಿತ ಲೋಪಗಳಿರಬಹುದು, ಜ್ಞಾನಾಸಕ್ತಿ, ವಿಷಯಗ್ರಹಣ, ಭಾವಾಭಿವ್ಯಕ್ತಿಯಲ್ಲಿ ವ್ಯತ್ಯಯಗಳಿರಬಹುದು; ಹಾಗಂತ ಶಿಕ್ಷಕನ ಅಭಿರುಚಿಯೂ ಬಯಸಿದಂತೆಯೇ ಇರಬೇಕೇ? ಅದು ಸರಿಯೇ? ಸಮರ್ಥನೀಯವೇ? ಶಿಕ್ಷಕನೊಬ್ಬ ವರ್ತಮಾನಕ್ಕೆ ಸ್ಪಂದಿಸಬೇಕಾದುದು ತನ್ನಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ರವಾನಿಸಬೇಕಾದ ಕೌಶಲ ವನ್ನು ಚೆನ್ನಾಗಿ ಸಿದ್ಧಿಸಿಕೊಳ್ಳುವುದರಲ್ಲಿ ಮಾತ್ರ ಎಂದು ಭಾವಿಸುತ್ತೇನೆ. ಸದ್ಯ ಆಗುತ್ತಿರುವುದೂ ಇದೇ.

ಇದರ ಹೊರತಾಗಿ ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ, ಮಾನಸಿಕವಾಗಿ, ಸಾಂಸ್ಕೃತಿಕವಾಗಿ ಸಂಪನ್ನಗೊಳಿಸುವಲ್ಲಿ ಶಾಲೆಗಳು ಪ್ರಭಾವ ಬೀರುವುದು ಸತ್ಯವೇ ಆದರೂ ಅವು ಅಪ ಮೌಲ್ಯಗೊಂಡಿವೆ. ಶಿಕ್ಷಕನ ಹಕ್ಕನ್ನು ಪ್ರಶ್ನಿಸುವ ಈ ಸಮಾಜಕ್ಕೆ ಅಂಥ ಮೌಲ್ಯಗಳು ಬೇಕಿಲ್ಲ! ಕಲಿಕಾ ಪ್ರಕ್ರಿಯೆಯ ನಿರ್ವಹಣೆ ಯಲ್ಲಿ ಅಗತ್ಯವಾದ ಶಾಂತಸ್ಥಿತಿಯನ್ನು ತಂದುಕೊಳ್ಳುವುದು, ಶಿಕ್ಷಣವೇ ಒತ್ತಡವಾದ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕನಿಗೆ ಸಾಧ್ಯವಾಗುತ್ತಿಲ್ಲ. ಶಿಕ್ಷಕ-ಸಮುದಾಯ- ಶಾಲೆಗಳ ಸಂಬಂಧ ಶುದ್ಧ ವ್ಯಾವ ಹಾರಿಕವಾಗಿದೆ.

ಮತ್ತೆ ಆದರ್ಶದ ಮಾತೆಲ್ಲಿ? ವಿದ್ಯಾರ್ಥಿಗಳಿಂದ ತಪ್ಪಾದಾಗ ಸಾಮ, ದಾನ, ಭೇದ, ದಂಡದ ಹೇಳುವುದು ಶಿಕ್ಷಕನಿಗಿಂದು ಸಾಧ್ಯ ವಿಲ್ಲ. ಮಕ್ಕಳ ಹಕ್ಕುರಕ್ಷಣಾ ಕಾನೂನುಗಳು ಅವನನ್ನು ಕಟ್ಟಿಹಾಕಿವೆ. ಮಕ್ಕಳನ್ನೂ, ಪೋಷಕರನ್ನೂ ದಾರಿತಪ್ಪಿಸಿವೆ. ಮಕ್ಕಳಿಗೆ ಕಡಿಮೆ ಅಂಕ ಬಂದದ್ದಕ್ಕೆ ಶಿಕ್ಷಕನನ್ನೇ ದಬಾಯಿಸುವ ಇಂದಿನ ಪೋಷಕರನೇಕರಲ್ಲಿ ಮಕ್ಕಳ ಕಲಿಕಾ ಸಮಸ್ಯೆ ಯೇನೆಂಬುದನ್ನು ಅರಿಯುವ ಕನಿಷ್ಠ ಜ್ಞಾನವೂ ಇಲ್ಲ.

ಯಾಕೆ ಅಂಕಗಳು ಕಡಿಮೆ ಬರುತ್ತವೆ? ಯಾಕೆ ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಂಡಿzರೆ? ಯಾಕೆ ಕೊಟ್ಟ ಕೆಲಸ ಮಾಡದೆ ಸುಳ್ಳು ಹೇಳುತ್ತಾರೆ, ಪ್ರತಿಯೊಂದಕ್ಕೂ ರೇಗುತ್ತಾರೆ, ಕದಿಯುತ್ತಾರೆ, ಗುರು-ಹಿರಿಯರನ್ನು ಅಗೌರವದಿಂದ ಕಾಣುತ್ತಾರೆ? ಇಂಥ
ಹಲವು ಸಮಸ್ಯೆಗಳಿಗೆ ಪರಿಹಾರ ಶಾಲೆಯ ಆಗಬೇಕೆಂಬ ಹುಂಬು ಹುಚ್ಚು ಪೋಷಕರನೇಕರಲ್ಲಿದೆ. ಶಾಲೆಯಲ್ಲಷ್ಟೇ ವಿದ್ಯಾರ್ಥಿ ಗಳು ಆದರ್ಶವನ್ನು ಕಲಿಯಬೇಕೆ, ಪಾಲಿಸಬೇಕೆ? ಹೊರಗಿನ ವಾತಾವರಣ ಹೇಗಿದ್ದರೂ ಆದೀತೆ? ಮಕ್ಕಳು ಏನು ಮಾಡಿದರೂ ತಲೆಬಿಸಿ ಮಾಡಿಕೊಳ್ಳದ ಪೋಷಕರು, ಕಲಿಕೆಯಲ್ಲಿ ಬೇಜವಾಬ್ದಾರಿ ತೋರಿಸುವ ಮಕ್ಕಳನ್ನು ಶಿಕ್ಷಕ ಪ್ರಶ್ನಿಸಿದರೆ, ಬೈದರೆ, ಪೆಟ್ಟು ಕೊಟ್ಟರೆ ಪೊಲೀಸ್ ಕಂಪ್ಲೇಂಟ್ ಕೊಡಲೂ ಮುಂದಾಗುತ್ತಾರೆ!

ಸೋಷಿಯಲ್ ಮೀಡಿಯಾಗಳ ಪ್ರಭಾವ ಮಿತಿಮೀರಿದೆ. ಎಲ್‌ಕೆಜಿ-ಯುಕೆಜಿಗೆ ಹೋಗುವ ಮಗು ಯೂಟ್ಯೂಬ್ ನೋಡುತ್ತದೆ. ವಿಡಿಯೋ ಗೇಮ್ ಆಡುತ್ತದೆ. ಸಿನಿಮಾ ನೋಡುತ್ತದೆ. ಇವೆಲ್ಲ ಪೋಷಕರಿಗೆ ಮಕ್ಕಳ ಹೆಚ್ಚುಗಾರಿಕೆಯಾಗಿ ಕಾಣುತ್ತದೆಯೇ ಹೊರತು ದುಷ್ಪರಿಣಾಮವಾಗಿ ಅಲ್ಲ. ಪೋಷಕರೇ, ನಿಮ್ಮ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅವಲೋಕಿಸಿ ಎಂದು
ಎಚ್ಚರಿಸುವಂಥ ಘಟನೆಗಳು ನಿತ್ಯವೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ.

ಈಗಂತೂ ಮಕ್ಕಳು ಕಲಿಕಾ ವಿಚಾರದಲ್ಲಿ ಹೆತ್ತವರ ಸುಳ್ಳು ಹೇಳುತ್ತಾರೆ; ಅವರೇನೇ ಮಾಡಿದರೂ ಸರಿಯೆಂಬ ಅತಿನಂಬಿಕೆಯಿಂದ ತಮ್ಮ ಮಕ್ಕಳೇ ದಾರಿತಪ್ಪುತ್ತಿzರೆಂಬುದನ್ನು ಪೋಷಕರು ಒಪ್ಪುವುದಿಲ್ಲ. ಅವರಿಗಿದು ಸಣ್ಣ ಸಂಗತಿ! ಆದರೆ ಬಾಲ್ಯದ ನಡವಳಿಕೆ ಗಳು ಪ್ರೌಢಾವಸ್ಥೆಯಲ್ಲಿ ಸಮಸ್ಯೆಯಾಗುತ್ತವೆ. ಬಾಲ್ಯದಲ್ಲಿ ತಿದ್ದದೇ ಹೋದರೆ ಅವರ ವರ್ತನೆಯಗುವ ಸಮಸ್ಯೆಗಳಿಗೆ ಯಾರು ಹೊಣೆ? ತಪ್ಪು ಯಾರದ್ದು? ಶಿಕ್ಷಕರು ಕಲಿಸುವವರೋ, ಕಲಿಕಾ ಸಹಾಯಕರೋ? ಕಲಿಸುವವರು ಎಂದರೆ ಕಲಿಯು ವವನಿಗೆ ಮಹತ್ವವಿರುವುದಿಲ್ಲ.

ಕಲಿಸುವವರೇ ಕಲಿಯುವವನ ಕಲಿಕೆಗೆ ಪೂರ್ಣ ಜವಾಬ್ದಾರರಾಗಿರುತ್ತಾರೆ. ಕಲಿಸುವವರು ಹೇಳಿದ್ದನ್ನು ಕಲಿತುಕೊಂಡರೆ ಕಲಿಯುವವನ ಜವಾಬ್ದಾರಿ ಮುಗಿಯಿತು. ಆದರೆ, ಕಲಿಕಾ ಸಹಾಯಕರು ಎಂದರೆ ಕಲಿಯುವವನ ಜವಾಬ್ದಾರಿಯೇ ಹೆಚ್ಚಿರುತ್ತದೆ. ಕಲಿಕೆಯಲ್ಲಿ ಆಸಕ್ತಿ ಮತ್ತು ಅಭಿರುಚಿಯಿದ್ದಾಗ ಶಿಕ್ಷಕರು, ಪೋಷಕರು, ಸಮಾಜ ಕಲಿಕಾ ಸಹಾಯಕರಾಗುತ್ತಾರೆ. ಆಗ ಹೆಚ್ಚಿನ ದನ್ನು ಕಲಿಯಬಹುದು.

ಕಲಿಕೆಯಲ್ಲಿ ತೊಡಗಿಸಿಕೊಳ್ಳುವಿಕೆಗೆ ಸಹಾಯ ಮಾಡಬೇಕಾದದ್ದು ಶಿಕ್ಷಕರ ಕರ್ತವ್ಯ. ಅಂಥಲ್ಲಿ ಕಲಿಯುವುದು ಎಷ್ಟು
ಮುಖ್ಯವೋ, ಕಲಿಕೆಗೆ ಸಹಾಯ ಮಾಡುವುದೂ ಅಷ್ಟೇ ಮುಖ್ಯ. ಆದ್ದರಿಂದ ಎಲ್ಲವನ್ನೂ ಶಿಕ್ಷಕರ ಮೇಲೆ ಹೊರಿಸುವುದು ಸಲ್ಲ. ಶಿಕ್ಷಕರು ಹೇಳದಿರುವ ಎಷ್ಟೋ ಸಂಗತಿಗಳನ್ನುವಿದ್ಯಾರ್ಥಿ ಕಲಿತಿರುತ್ತಾನೆ. ಆದರೆ ತರಗತಿಯಲ್ಲಿ ಕಲಿಸಿದ್ದು ಮಾತ್ರ ಬರುವುದಿಲ್ಲ! ತಾವಾಗೇ ಕಲಿತಂಥ ವಿಚಾರಗಳನ್ನು ವಿದ್ಯಾರ್ಥಿಗಳು ಮರೆಯುವುದಿಲ್ಲವಲ್ಲ, ಕಾರಣವೇನು? ಸಿನಿಮಾ ಹಾಡು ಬಾಯಿಪಾ ಠವಾದಂತೆ ಪಾಠ-ಪದ್ಯದ ಸಾಲುಗಳು ಬಾಯಿಪಾಠವಾಗುವುದಿಲ್ಲ.

ಹರಿದ ಜೀನ್ಸ್ ಪ್ಯಾಂಟು, ವಿಚಿತ್ರವಾದ ಶರ್ಟು ಧರಿಸಿಬೇಕೆಂಬ ಹಠ ವಿದ್ಯಾರ್ಥಿಗಳಲ್ಲಿ ಹೇಗೆ ಹುಟ್ಟುತ್ತದೆ? ವಿದ್ಯಾಭ್ಯಾಸ,
ವಿನಯ, ವಿಧೇಯತೆ, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಆ ಥರ ಏನೂ ಅನಿಸುವುದಿಲ್ಲವಲ್ಲ! ಇಂಥಲ್ಲಿ ಹೆತ್ತವರ ಪಾತ್ರ ಇಲ್ಲವೇ? ಶಿಕ್ಷಕರ ಪಾತ್ರವೇನಿದೆ? ಶಾಲೆ, ಸಮುದಾಯಗಳು ಏನು ಮಾಡಬೇಕು? ಸಾಂದರ್ಭಿಕ ನಡೆಗಳನ್ನೇ ವ್ಯಕ್ತಿತ್ವವೆನ್ನಲಾಗದು. ಅದರಲ್ಲೂ ಶಿಕ್ಷಕರಷ್ಟೇ ಆದರ್ಶಕ್ಕೆ ಪ್ರತಿನಿಽಯೋ, ದ್ಯೋತಕವೋ ಆಗಿರಬೇಕೆಂದು ಈಗ ನಿರೀಕ್ಷಿಸುವುದು ಸರಿಯಲ್ಲ.

ವಕೀಲ ತಪ್ಪು ವಾದಿಸಬಹುದು, ಎಂಜಿನಿಯರ್‌ನಲ್ಲಿ ಕ್ಷಮತೆಯಿಲ್ಲದಿರಬಹುದು, ವಿಜ್ಞಾನಿ ಸೋಲಬಹುದು, ವೈದ್ಯ ಲಂಚಗುಳಿ
ಯಾಗಬಹುದು, ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕೆಡಿಸುವಂಥ ಸುದ್ದಿಯನ್ನು ಬಿತ್ತರಿಸಬಹುದು, ಸಂನ್ಯಾಸಿಯ ವೇಷಧರಿಸಿ ಅನಾಚಾರ ಮಾಡಬಹುದು, ಸರಕಾರಿ ಖಜಾನೆಯನ್ನು ಅಧಿಕಾರಿ ಲೂಟಿ ಮಾಡಬಹುದು, ಸಿನಿಮಾ ನಟನಟಿಯರು ಡ್ರಗ್ಸ್ ದಂಧೆಯ ಆರೋಪದಲ್ಲಿರಬಹುದು, ಆದರೆ ಶಿಕ್ಷಕ ಮಾತ್ರ ನೈತಿಕ ಅಧಃಪತನ ಕಾಣಬಾರದೆಂಬ ಆಗ್ರಹ ಸಮಾಜದಲ್ಲಿದೆ. ಒಬ್ಬ ಶಿಕ್ಷಕ ತಪ್ಪಿದರೆ ಇಡೀ ಶಿಕ್ಷಕ ಸಮೂಹವೇ ಸರಿಯಿಲ್ಲವೆಂದು ತೀರ್ಮಾನಿಸುವವರು ಆಲೋಚಿಸಬೇಕಾದ್ದು ಬಹಳಷ್ಟಿವೆ.

ಹಾಗೆ ನೋಡಿದರೆ ಶಿಕ್ಷಕರನ್ನು ನೋಡುವ ದೃಷ್ಟಿಕೋನದಲ್ಲಿ ಹಿಂದಿನ ಮೌಲ್ಯಗಳೇ ಘನತೆಯುಳ್ಳzಗಿತ್ತು. ಹಾಗಂತ ಅಂದಿನ ಶಿಕ್ಷಕರಲ್ಲೂ ಜೀವನಮೌಲ್ಯಗಳಿತ್ತೇ ವಿನಾ ದುರಭ್ಯಾಸ-ದುಶ್ಚಟಗಳು ಇರಲಿಲ್ಲವೆಂದಲ್ಲ. ಕುಡಿಯುವ, ಬೀಡಿ-ಸಿಗರೇಟು ಸೇದುವ, ಎಲೆ- ಅಡಿಕೆ-ತಂಬಾಕು ಅಗಿಯುವ ಶಿಕ್ಷಕರಿಲ್ಲವಾಗಿತ್ತೆ? ಹಾಗಂತ ಇದನ್ನೇ ನೆಪವಾಗಿಟ್ಟುಕೊಂಡು ಅವರನ್ನು ಅಗೌರವದಿಂದ
ಕಂಡಿತ್ತೇ ಅಂದಿನ ಸಮಾಜ? ಅಂದಿನ ಶಿಕ್ಷಕರಲ್ಲಿ ಹೃದಯವಂತಿಕೆಯಿತ್ತು. ಕಷ್ಟಕ್ಕೊದಗುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ
ಸ್ವಲ್ಪಮಟ್ಟಿಗಾದರೂ ಅಂಥ ವಾತಾವರಣವಿದೆ.

ತಮ್ಮೂರಿನ ಮಕ್ಕಳಿಗೆ ಇವರು ಕಲಿಸುವವರೆಂಬ ಎತ್ತರದ ಭಾವ ಹಳ್ಳಿಗರಲ್ಲಿರುತ್ತದೆ. ಹಿಂದೆಲ್ಲ, ಊರಿನ ಮಕ್ಕಳಿಗೆ ಅದೇ ಊರಿನ ಶಿಕ್ಷಕರು ಕಲಿಸುತ್ತಿದ್ದರು. ಅಂದರೆ ಅಕಾಡೆಮಿಕ್ ಕಲಿಕೆಗಿಂತ ಹೆಚ್ಚಾಗಿ ಜೀವನಮೌಲ್ಯಗಳ ಕಲಿಕೆ ಶಾಲೆಯ ಹೊರಗೂ ಆಗುತ್ತಿತ್ತು.
ಆದ್ದರಿಂದ ಶಿಕ್ಷಕರ ಮೇಲೆ ಭಯ, ಗೌರವ, ಪ್ರೀತಿಯಿತ್ತು. ಏಕೆಂದರೆ, ನಮ್ಮ ವರ್ತನೆ ಅವರ ನಿಯಂತ್ರಣದಲ್ಲಿ ಇರುತ್ತಿತ್ತು.
ಅವರಿಗೆ ಊರಿನ ಒಡನಾಟ ಇರುತ್ತಿದ್ದರಿಂದ ಯಾರೇನೇ ಮಾಡಿದರೂ ಅದು ಊರಿಗೇ ಗೊತ್ತಾಗುತ್ತಿತ್ತು. ಇಂಥ ವಾತಾವರಣದಲ್ಲಿ ದಾರಿತಪ್ಪುವ ಸಾಧ್ಯತೆಗಳು ಕಡಿಮೆಯಿದ್ದವು.

ಆದರೀಗ ಶೈಕ್ಷಣಿಕ ವ್ಯವಸ್ಥೆ ಮತ್ತು ನೀತಿಗಳು ಹಾಗಿಲ್ಲವಾದ್ದರಿಂದ ಅಂಥ ಭಯವೂ ಇಲ್ಲ, ಪ್ರೀತಿಯೂ ಇಲ್ಲ. ಎಲ್ಲವೂ
ಶುದ್ಧಾತಿಶುದ್ಧ ವ್ಯವಹಾರ! ಸಮಾಜವೇ ಸಮಷ್ಟಿ ಬದುಕಿಗೆ ಎರವಾಗಿರುವಂಥ ಕಾಲದ ಹಳ್ಳಿಗಳಿಲ್ಲ. ಇದ್ದರೂ ಬೆರಳಣಿಕೆ ಯಷ್ಟು! ಆಧುನಿಕತೆ ಹಳ್ಳಿಗಳನ್ನು ಬರ್ಬಾದುಗೊಳಿಸಿದೆ. ಹಳ್ಳಿಗಳಲ್ಲಿ ಸಹಜ ಸೌಂದರ್ಯವಿಲ್ಲ. ಸಹಜತೆ, ವಿಶ್ವಾಸ, ಭರವಸೆ, ನಂಬಿಕೆ, ಮುಗ್ಧತೆಗಳಿಗೆ ಆಗರವಾದ ಹಳ್ಳಿಗಳಿಂದು ಮೌಲ್ಯಗಳನ್ನು ಉಳಿಸಿಕೊಳ್ಳದೆ ಬದುಕುತ್ತಿವೆ. ಒಬ್ಬ ಶಿಕ್ಷಕನ ದುರ್ವರ್ತನೆ ಯಿಂದ ಶಿಕ್ಷಕ ಸಮೂಹವೇ ಸರಿಯಿಲ್ಲವೆಂದು ಆಕ್ಷೇಪಿಸುವ ಆಧುನಿಕ ಸಮಾಜದ ಜನರಿಗೆ ಒಳ್ಳೆಯ ಶಿಕ್ಷಕರನ್ನು ತಾವೆಷ್ಟು ಗೌರವದಿಂದ ಕಾಣುತ್ತಿದ್ದೇವೆಂಬ ಅರಿವು ಇರಬೇಕಾಗುತ್ತದೆ. ಹೊಲಸು ರಾಜಕೀಯ ಹಳ್ಳಿಗಳನ್ನೂ ಬಿಡಲಿಲ್ಲ!

ಯಾವ ಶಿಕ್ಷಕನೂ ಪಾಠ ಮಾಡದಿರಲಾರ, ಜೀವನಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಹೇಳದಿರಲಾರ. ಬೋಧನಾ ಕೌಶಲಗಳು ಚೆನ್ನಾಗಿಲ್ಲದಿರಬಹುದು, ಕೆಟ್ಟ ಬೋಧನಾ ಕೌಶಲಗಳಂತೂ ಇರಲಾರದು. ಫೀಸು ಕಟ್ಟುವುದಿಲ್ಲ ಎಂಬ ಪೋಷಕ ರಿಗೂ, ನೀರಿಲ್ಲದ ಜಾಗಕ್ಕೆ ವರ್ಗಾಯಿಸಿ ಬಿಡುತ್ತೇನೆಂದ ಮೇಲಽಕಾರಿಗೂ ಲೋಪವಿಲ್ಲದೆ ಕರ್ತವ್ಯ ನಿರ್ವಹಿಸುವ, ವೃತ್ತಿಬದ್ಧತೆ ಕಾಪಾಡಿಕೊಂಡಿರುವ ಯಾವ ಶಿಕ್ಷಕನೂ ಯಾವ ಮರ್ಜಿಗೂ ಬೀಳಲಾರ. ನಿಯಮ ಪಾಲನೆ ಮತ್ತು ನೀತಿಸಂಹಿತೆ ಯನ್ನು ಉಲ್ಲಂಘನೆ ಮಾಡದ ಶಿಕ್ಷಕ ಅತ್ಮಸಂಮಾನ ಉಳಿಸಿಕೊಂಡೇ ವೃತ್ತಿಜೀವನವನ್ನು ಸೇವಾ ಭಾವದಲ್ಲಿ ದುಡಿಯುತ್ತಾನೆ.

ಶಿಕ್ಷಕರಿಗೆ ಕಲಿಸುವುದು ಗೊತ್ತು, ಕಲಿಯುವುದೂ ಗೊತ್ತು, ಕಲಿಕೆಗೆ ತೊಡಗಿಸುವುದೂ ಗೊತ್ತು. ಒಂದು ಜನಾಂಗವನ್ನೇ ಗುಡಿಸಿ ಗುಂಡಾಂತರ ಮಾಡಿಬಿಡುವ ಶಿಕ್ಷಣ ನೀತಿಗಳನ್ನು ರಚಿಸುವ ಸಾಮರ್ಥ್ಯ ಸರಕಾರಕ್ಕೆ ಇರುವಂತೆ, ಶಿಕ್ಷಕನಿಗೂ ಒಂದು ತಲೆಮಾರನ್ನೇ ದಾರಿತಪ್ಪಿಸುವ ಸಾಮರ್ಥ್ಯವೂ ಇರುತ್ತದೆಂಬಲ್ಲಿಗೆ ಸಮಾಜ ಅವರನ್ನು ನೋಡಿಕೊಳ್ಳಬೇಕಾದ ರೀತಿಯಲ್ಲಿ ಆದರ್ಶದ ಸೋಗಿನ ಹಂಗನ್ನು ಅವರಿಗೆ ಮಾತ್ರ ತೊಡಿಸಬಾರದು. ತಮ್ಮ ಮಕ್ಕಳ ಕಲಿಕಾ ಸಹಾಯಕರೆಂಬ ನೆಲೆಯಲ್ಲಿ ಬೋಧನೆ ಮತ್ತು ಕಲಿಕೆ ಸುಗಮವಾಗುವಂತೆ ಶಾಲೆಗಳನ್ನು ಸಮಾಜವೇ ನಡೆಸಬೇಕು. ಈಗಲೂ ಹಳ್ಳಿಗಳಲ್ಲಿ ಸ್ವಲ್ಪಮಟ್ಟಿಗಿದು ಸಾಧ್ಯವಾಗುತ್ತಿದ್ದೆ.