Saturday, 23rd November 2024

ಶಿಕ್ಷಕರ ಪಾಲಿನ ಸಹೃದಯಿ ಸಂಘಟನೆ

ದಾಸ್ ಕ್ಯಾಪಿಟಲ್‌

ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ- ಪ್ರೌಢ-ಪದವಿಪೂರ್ವ ಕಾಲೇಜುಗಳ ಬೋಧಕರನ್ನು ಒಂದೇ ವೇದಿಕೆ ಯಲ್ಲಿಟ್ಟು ಏಕಭಾವದಿಂದ ನೋಡುವ ಈ ಪರಿಷತ್ತು ಪ್ರತಿಭಾ ಪುರಸ್ಕಾರ, ಶಿಕ್ಷಣ ಮತ್ತು ಸೇವೆ ಎಂಬ ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ.

ಶಿಕ್ಷಣವನ್ನು ಒಂದು ಸೃಷ್ಟಿಶೀಲ ಶಿಲ್ಪವಾಗಿ ಕಂಡವರು ಕುವೆಂಪು. ಶಿಕ್ಷಕರಲ್ಲಿ ಜ್ಞಾನರಚನೆ, ಮರುರಚನೆ ಮಾಡುವ ಸಾಮರ್ಥ್ಯ ಇರಬೇಕು ಎಂಬುದು ಅವರ ಶಿಕ್ಷಣ ಪರಿಕಲ್ಪನೆಗಳಲ್ಲಿ ಪ್ರಧಾನವಾಗಿ ಕಾಣುವ ಅಂಶ. ಆದರೆ ಸಿಲೆಬಸ್ ಮುಗಿಸುವ ಅವಸರದಲ್ಲಿ, ಅವುಗಳನ್ನು ಮಕ್ಕಳ ಮಿದುಳಿಗೆ ರವಾನಿಸುವ ಭರದಲ್ಲಿ, ಹಗಲು ರಾತ್ರಿಯಾದರೂ ಸರಿ ಬೆಂಬಿಡದೆ ಅವರನ್ನು ಕಾಡಿ ಅವರಿಂದ ಅಂಕಗಳನ್ನು ತೆಗೆಸಬೇಕೆಂಬ ಧಾವಂತಕ್ಕೆ ಶಿಕ್ಷಕರೂ ಬೀಳು ವಂತೆ ಪ್ರಸಕ್ತ ಶೈಕ್ಷಣಿಕ ಪರಿಕಲ್ಪನೆಗಳು ಸಾಗುತ್ತಿವೆ.

ಕಾರ್ಪೊರೇಟ್ ಪ್ರಪಂಚದ ಶೈಕ್ಷಣಿಕ ಪರಿಕಲ್ಪನೆಗಳು ಸರಕಾರಿ ಶಾಲೆಗಳ ಅಸ್ತಿತ್ವದ ಮೇಲೆ ಮಾರಕ ಪೆಟ್ಟನ್ನು ನೀಡುತ್ತಲೇ ಇವೆ. ಆ ಆಘಾತವನ್ನು ಎದುರಿಸುತ್ತಲೇ ಸರಕಾರಿ ಶಾಲೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ದುಸ್ಥಿತಿಯನ್ನು  ಎದುರಿಸುತ್ತಲೇ ಇದೆ. ಸರಕಾರವು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡದ್ದು ಗಮನಾರ್ಹ ಮತ್ತು ಶ್ಲಾಘನೀಯ.

ಹೆಚ್ಚು ಅಂಕಗಳನ್ನು ಗಳಿಸಿ ನಮ್ಮ ಶಾಲೆ ಪ್ರಸಿದ್ಧವಾಗಬೇಕು ಎಂಬ ತುಡಿತದಲ್ಲಿ ಮಕ್ಕಳ ಮಾನಸಿಕ ಮತ್ತು ವೈಚಾರಿಕ ಶಿಸ್ತಿಗೆ ಇಂಬು ನೀಡದೆ ಕೇವಲ ದೈಹಿಕ ಶಿಸ್ತಿಗೆ ಪ್ರಾಧಾನ್ಯ ಕೊಡುತ್ತ ಬಂದಿದ್ದೇವೆ. ಆದ್ದರಿಂದ ಇಂದಿನ ಶಾಲೆಗಳು ಕೇವಲ ವಿದ್ಯಾವಂತ ರನ್ನು ಸೃಷ್ಟಿಸುವ ಕಾರ್ಖಾನೆಗಳಾಗಿವೆ. ಯಾಕೆ ಹೀಗಾಯಿತು? ಶಿಕ್ಷಕರಲ್ಲಿ eನವನ್ನು ಸೃಷ್ಟಿಸುವ ಪ್ರತಿಭೆ- ಸಾಮರ್ಥ್ಯ ಇಲ್ಲವೆ? ಖಂಡಿತವಾಗಿಯೂ ಇದೆ. ಆದರೂ ಅವರು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗುವುದಿಲ್ಲವೇಕೆ? ವರ್ತಮಾನದ ಶಿಕ್ಷಣದ ಪರಿಕಲ್ಪನೆಗಳು ಶಿಕ್ಷಕರ ಪ್ರತಿಭೆಗೆ ಮಾನ್ಯತೆ ನೀಡು ತ್ತಿಲ್ಲವೆ? ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು.

ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಬೆಳೆಸುವ ಮೊದಲು ಶಿಕ್ಷಕರಲ್ಲಿ ಅಂಥ ಪ್ರತಿಭೆಗಳು ಇರಲೇಬೇಕು. ಈ ಪ್ರತಿಭಾಶೋಧದ ಕಾರ್ಯ ಮೊದಲು ಆಗಬೇಕು. ಈ ಕಾರ್ಯದಲ್ಲಿ ಸಕ್ರಿಯವಾಗಿರುವ ಒಂದು ಸಂಘಟನೆಯಿದೆ ಎಂದು ನನಗೆ ಗೊತ್ತಾಗಿದ್ದೇ ಮೈಸೂರಿನಿಂದ ಪಿ. ಮಹೇಶ್ ಎಂಬುವವರು ಫೋನ್ ಮಾಡಿ ತಿಳಿಸಿದಾಗ. ಹುಣಸೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಳೆದ 26 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅವರು, ಶಿಕ್ಷಕರರಲ್ಲಿರುವ ಪ್ರತಿಭೆಯನ್ನು ಗುರುತಿಸುವ ರಾಜ್ಯದ ಏಕೈಕ ಸಂಘಟನೆಯ ರೂವಾರಿಯಾಗಿದ್ದಾರೆ.

ಅದುವೇ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ). ಇದಕ್ಕೆ ಮೈಸೂರಿನಲ್ಲಿ ತನ್ನದೇ ಆದ ಪ್ರತ್ಯೇಕ ರಾಜ್ಯ ಕಚೇರಿಯಿದೆ (ಮೊದಲು ಇದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿತ್ತು). ಒಂದಷ್ಟು ಸಮಾನಮನಸ್ಕ ಶಿಕ್ಷಕರನ್ನು ಒಗ್ಗೂಡಿಸಿ 2007 ರಲ್ಲಿ ಈ ಸಂಘಟನೆ ಹುಟ್ಟುಹಾಕಿದರು ಮಹೇಶ್. ಇದು ತನ್ನ ಕಾರ್ಯಶೀಲತೆಯಲ್ಲಿ ರಚನಾತ್ಮಕ ಹಿಡಿತ ಕಂಡು ಕೊಂಡಿದ್ದು ಕಳೆದ ವರ್ಷದಿಂದ. ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೇರುಬಿಟ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ, ಬೇರಾವುದೇ ಶಿಕ್ಷಕರ ಸಂಘಟನೆಗೆ ಪರ್ಯಾಯವಾಗಿ ಹುಟ್ಟಿಕೊಂಡಿರುವಂಥದ್ದಲ್ಲ.

ಇತರ ಸಂಘಟನೆಗಳಲ್ಲಿನ ಶಿಕ್ಷಕರೂ ಇದರ ಸದಸ್ಯರಾಗಿದ್ದು, ಆ ಸಂಘಟನೆಗಳಿಂದ ಸಲಹೆ-ಸೂಚನೆಗಳನ್ನು ಪಡೆಯುವಲ್ಲಿ ಈ ಪರಿಷತ್ತಿಗೆ ಯಾವುದೇ ಹಿಂಜರಿಕೆಯಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ- ಪ್ರೌಢ-ಪದವಿ ಪೂರ್ವ ಕಾಲೇಜುಗಳ ಬೋಧಕರನ್ನು ಒಂದೇ ವೇದಿಕೆಯಲ್ಲಿಟ್ಟು ಏಕಭಾವದಿಂದ ನೋಡುವ ಈ ಪರಿಷತ್ತು ಪ್ರತಿಭಾ ಪುರಸ್ಕಾರ, ಶಿಕ್ಷಣ ಮತ್ತು ಸೇವೆ ಎಂಬ ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ.

ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಎಲ್ಲ ಪದಾಧಿಕಾರಿಗಳ ಸಹಕಾರ-ಸಲಹೆಯೊಂದಿಗೆ ಪ್ರತಿವರ್ಷ
ಶಿಕ್ಷಕರ ದಿನಾಚರಣೆಯ ವೇಳೆ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟಗಳಲ್ಲಿ ಪ್ರಶಸ್ತಿ ನೀಡುವ ಈ ಪರಿಷತ್ತು, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ಒಬ್ಬೊಬ್ಬ ಪ್ರತಿಭಾವಂತರನ್ನು ಗುರುತಿಸಿ ಡಾ. ರಾಧಾಕೃಷ್ಣನ್ ಪುರಸ್ಕಾರ ಹಾಗೂ ತಲಾ ೧೦ ಸಾವಿರ ರು. ನಗದು ಬಹುಮಾನವನ್ನು ನೀಡುತ್ತದೆ. ಈ ಪುರಸ್ಕಾರಕ್ಕಾಗಿ ಯಾರೂ ಅರ್ಜಿ ಹಾಕಬೇಕೆಂದಿಲ್ಲ; ಇದಕ್ಕೆಂದೇ ರಚಿಸಲಾದ ಸಮಿತಿಗಳು ಪ್ರತಿಭಾವಂತ ಶಿಕ್ಷಕರನ್ನು ಗುರುತಿಸುತ್ತವೆ.

ಶೈಕ್ಷಣಿಕ ಪ್ರತಿಭೋತ್ಸವ ಎಂಬ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಂಡು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕಲಿಕಾ ಉಪಕರಣ ಗಳ ರಚನೆ ಇವೇ ಮೊದಲಾದ ಬಾಬತ್ತುಗಳಲ್ಲಿ ವಿಶೇಷ ಸಾಧನೆ ಮಾಡಿರುವ ಶಿಕ್ಷಕರನ್ನು ಅಭಿನಂದಿಸಿ ಗೌರವಿಸುವ ಪರಿಷತ್ತು, ಕವಿಗೋಷ್ಠಿ, ಚರ್ಚಾಸ್ಪರ್ಧೆ, ಕಾವ್ಯಕಮ್ಮಟ, ವಿಜ್ಞಾನಮೇಳ ಮತ್ತು ಕಾವ್ಯ-ಗಾಯನ- ಕುಂಚದಂಥ ವಿಶಿಷ್ಟ ಕಾರ್ಯಕ್ರಮ ಗಳನ್ನು ಆಯೋಜಿಸಿ ಶಿಕ್ಷಕರ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತದೆ.

ಜತೆಗೆ ಪ್ರತಿ ತಾಲೂಕಿನಲ್ಲಿಯೂ ಶೈಕ್ಷಣಿಕ ಕಾರ್ಯಾಗಾರ, ವಿಚಾರ ಸಂಕಿರಣ, ಚರ್ಚಾಗೋಷ್ಠಿಗಳನ್ನು ಆಯೋಜಿಸುವ
ಪರಿಪಾಠವೂ ಇದರ ತೆಕ್ಕೆಯಲ್ಲಿದೆ. ಸೇವಾ ವಲಯದಲ್ಲೂ ಸಕ್ರಿಯವಾಗಿರುವ ಪರಿಷತ್ತು, ರಕ್ತದಾನ ಮತ್ತು ನೇತ್ರದಾನ ಶಿಬಿರ ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನಡೆಸಿದೆ, ಗಿಡನೆಡುವ ಕಾರ್ಯಕ್ರಮಗಳನ್ನು ಆಯೋಜಿಸಿದೆ, ಶಿಕ್ಷಕರಿಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ.

ಜತೆಗೆ, ಬಡಮಕ್ಕಳಿಗೆ ನೋಟ್ ಬುಕ್, ಬ್ಯಾಗ್, ಜ್ಯಾಮಿಟ್ರಿ ಬಾಕ್ಸ್‌ಗಳ ವಿತರಣೆ, ಪರಿಸರ ಜಾಗೃತಿ ಜಾಥಾದ ಆಯೋಜನೆಯಲ್ಲೂ ತೊಡಗಿಸಿಕೊಂಡಿದೆ. ಸಾಧ್ಯವಾದ ಕಡೆಗಳಲ್ಲಿ ಶಿಕ್ಷಕರ ಪ್ರತಿಭಾ ಭವನ ನಿರ್ಮಿಸಿ ಶಿಕ್ಷಕರ ಪ್ರತಿಭೆಗಳಿಗೆ ಅಧಿಕೃತ ವೇದಿಕೆ ಕಲ್ಪಿಸು ವಿಕೆ, ಬೋಧನೆಗೆ ಸಂಬಂಧಿಸಿ ಉಚಿತ ತರಗತಿಗಳ ಏರ್ಪಾಡು, ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಧನಸಹಾಯ,
ಅಕಾಲಿಕ ಮರಣ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಯಥಾಶಕ್ತಿ ಧನಸಹಾಯ, ಮಾಹಿತಿಹಕ್ಕು ನಿರ್ವಹಣಾ ಕಾರ್ಯಾಗಾರದ
ಆಯೋಜನೆ, ಶಿಕ್ಷಕರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ಮತ್ತು ಶೈಕ್ಷಣಿಕ ಪ್ರವಾಸಗಳ ಏರ್ಪಾಟು ಹೀಗೆ ವೈವಿಧ್ಯಮಯ ಚಟುವಟಿಕೆಗಳ ಆಗರವಾಗಿದೆ ಈ ಪರಿಷತ್ತು.

ಇಂಥ ಎಲ್ಲ ಕಾರ್ಯಗಳನ್ನು ಮಾಡಲು ಕಾಯಾ-ವಾಚಾ-ಮನಸಾ ಶ್ರಮಿಸುತ್ತಿರುವ ಈ ಪರಿಷತ್ತಿಗೆ ರಾಜ್ಯದ ಶಿಕ್ಷಕ ಬಂಧು ಗಳೆಲ್ಲರೂ ಆಸರೆಯಾಗಿ ನಿಂತರೆ ಇನ್ನಷ್ಟು ಸಮಾಜಮುಖಿ ಚಟುವಟಿಕೆಗಳನ್ನು ರಾಜ್ಯಾದ್ಯಂತ ನಡೆಸಬಹುದು ಎಂಬುದು ಸಹೃದಯಿಗಳ ಸಹಜ ಆಶಯ ಮತ್ತು ನಿರೀಕ್ಷೆ. ಹೀಗಾಗಿ, ಶಿಕ್ಷಕರು ಬೌದ್ಧಿಕವಾಗಿ, ವೈಚಾರಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾ ಜಿಕವಾಗಿ ಗುರುತಿಸಿಕೊಳ್ಳುವಂತಾಗಲು ರಾಜ್ಯವ್ಯಾಪಿ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಕ್ರಿಯಾಶೀಲ ಘಟಕಗಳನ್ನು
ಆರಂಭಿಸಲು ಪರಿಷತ್‌ನ ಕೇಂದ್ರ ಸಮಿತಿ ತೀರ್ಮಾನಿಸಿದೆ.

ಇಂಥದೊಂದು ಸದುದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ, ಬಹುಮುಖಿ ಯೋಜನೆಗಳನ್ನು ಅಳವಡಿಸಿಕೊಂಡಿರುವ, ಎಲ್ಲ ಶಿಕ್ಷಕರಲ್ಲೂ ಆತ್ಮವಿಶ್ವಾಸ ತುಂಬಿ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿರುವ ಈ ಪರಿಷತ್ತಿನಲ್ಲಿ ರಾಜ್ಯದ ಶಿಕ್ಷಕ ಬಾಂಧವ ರೆಲ್ಲ ಸದಸ್ಯರಾಗಬೇಕು ಎಂಬುದು ಇದರ ರಾಜ್ಯಾಧ್ಯಕ್ಷ ಪಿ. ಮಹೇಶ್ ಅವರ ಹಂಬಲ. ಶಿಕ್ಷಕರೆಲ್ಲರೂ ಎಲ್ಲ ಬಗೆಯ ತರತಮ ಗಳನ್ನು ಮರೆತು ‘ನಾವೆಲ್ಲ ಒಂದು’ ಎಂಬ ಭಾವವನ್ನು ಉದ್ದೀಪಿಸುವ ನಿಟ್ಟಿನಲ್ಲಿ ಈ ಪರಿಷತ್ (ಇ-ಮೇಲ್ ವಿಳಾಸ:
krsppsahithi20202@gmail.com) ದೊಡ್ಡ ಕೊಂಡಿಯಾಗುವುದರಲ್ಲಿ ಸಂದೇಹವಿಲ್ಲ.