Wednesday, 11th December 2024

ಟೆಲಿಕಾಂ ಕ್ಷೇತ: ೫ಜಿಯಿಂದ ೬ಜಿ ಕಡೆಗೆ

-ಪ್ರಕಾಶ್ ಶೇಷರಾಘವಾಚಾರ್

ಪ್ರಧಾನಿ ಮೋದಿಯವರು ೭೭ನೇ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ‘೪ಜಿ ತಂತ್ರಜ್ಞಾನ ಬಂದಾಗ ಭಾರತ ಇತರರನ್ನು ಹಿಂಬಾಲಿಸಿತು, ೫ಜಿ ಬಂದಾಗ ಅವರ ಜತೆ ಹೆಜ್ಜೆ ಹಾಕಿತು, ಈಗ ೬ಜಿ ತಂತ್ರಜ್ಞಾನದಲ್ಲಿ ವಿಶ್ವಕ್ಕೆ ನಾಯಕತ್ವ ಕೊಡುವ ಗುರಿ ಹೊಂದಿದೆ’ ಎಂದು ಭಾರತೀಯ ದೂರಸಂಪರ್ಕ ವಲಯದ ಮುಂದಿನ ನಕ್ಷೆ ಹಾಗೂ ದೇಶದ ಪ್ರಗತಿಯನ್ನು ತೆರೆದಿಟ್ಟರು. ೮೦ರ ದಶಕದಲ್ಲಿ ಸ್ಥಿರ ದೂರವಾಣಿ ಸಂಪರ್ಕ ಪಡೆಯಲು ಗ್ರಾಹಕರು ಹತ್ತು ವರ್ಷ ಕಾಯಬೇಕಾಗಿತ್ತು. ಇಷ್ಟಾಗಿಯೂ ಲಭ್ಯವಿದ್ದುದು ಓಬೀರಾಯನ ಕಾಲದ ಟೆಲಿಫೋನ್ ಉಪಕರಣ. ಟೆಲಿಕಾಂ ಕ್ಷೇತ್ರದಲ್ಲಿ ಐಟಿಐ ಏಕಸ್ವಾಮ್ಯ ಹೊಂದಿದ್ದ ಕಾರಣ ಈ ಕಾಯುವಿಕೆ ಅನಿವಾರ್ಯವಾಗಿತ್ತು. ೧೯೮೪ರಲ್ಲಿ ರಾಜೀವ್ ಗಾಂಧಿಯವರು ಸ್ಯಾಮ್ ಪಿಟ್ರೊಡಾರಿಗೆ ಟೆಲಿಕಾಂ ಕ್ಷೇತ್ರದ ಸುಧಾರಣೆಯ ಹೊಣೆ ವಹಿಸಿದ್ದರ ಫಲವಾಗಿ ಸಿ-ಡಾಟ್ ಎನ್ನುವ ಸಾರ್ವಜನಿಕ ಉದ್ದಿಮೆ ಸ್ಥಾಪನೆಯಾಯಿತು. ರಾಜೀವ್ ಮತ್ತು ಪಿಟ್ರೊಡಾ ಸರಕಾರಿ ಹಿಡಿತದಲ್ಲೇ ದೂರಸಂಪರ್ಕ ಇಲಾಖೆಯ ವಿಸ್ತರಣೆಗೆ ಯತ್ನಿಸಿದರೆ ವಿನಾ ಅದನ್ನು ಖಾಸಗಿಯವರಿಗೆ ತೆರೆಯಲು ಆಸಕ್ತಿ ತೋರಲಿಲ್ಲ. ಹೀಗಾಗಿ ಇವರ ತಂತ್ರಗಾರಿಕೆ ಸಂಪೂರ್ಣ ವಿಫಲವಾಗಿತ್ತು.

ದೇಶದ ಒಟ್ಟು ದೂರವಾಣಿ ಬಳಕೆಯ ಸಾಂದ್ರತೆಯು ೧೯೮೯ರಲ್ಲಿ ಶೇ.೦.೬ರಷ್ಟಿದ್ದುದು ೧೯೯೯ರ ವೇಳೆಗೆ ಶೇ.೨.೮ರಷ್ಟು ಮಾತ್ರ ಹೆಚ್ಚಳವಾಗಿತ್ತು. ದೇಶದಲ್ಲಿ ದೂರಸಂಪರ್ಕ ಕ್ರಾಂತಿಗೆ ಗಟ್ಟಿ ಅಡಿಪಾಯ ಹಾಕಿದ್ದು ವಾಜಪೇಯಿಯವರು. ೨೦೦೦ರಲ್ಲಿ, ದೂರಸಂಪರ್ಕ ಇಲಾಖೆಯಿಂದ ನೀತಿ ನಿರ್ಧಾರ ಮತ್ತು ಸೇವೆ ಒದಗಿಸುವ ೨ ಹೊಣೆಯನ್ನು ಪ್ರತ್ಯೇಕಿಸಿ ಬಿಎಸ್‌ಎನ್‌ಎಲ್ ಸ್ಥಾಪಿಸಿ ದೂರ ಸಂಪರ್ಕ ವಲಯವನ್ನು ರಾಜಕೀಯ ಹಿಡಿತದಿಂದ ಮುಕ್ತ ಗೊಳಿಸಿದರು. ಮಾತ್ರವಲ್ಲ, ಇಂಟರ್‌ನೆಟ್ ಸೇವೆಯನ್ನು ಸರಕಾರಿ ಸಂಸ್ಥೆ ವಿಎಸ್‌ಎನ್‌ಎಲ್ ಹಿಡಿತದಿಂದಲೂ ಮುಕ್ತ ಗೊಳಿಸಿ ಖಾಸಗಿಯವರಿಗೆ ಸೇವೆ ಒದಗಿಸಲು ಅವಕಾಶ ನೀಡಿದರು. ಇದೇ ರೀತಿ, ವಿದೇಶಿ ಕರೆಗಳ ಸೇವೆಯನ್ನೂ ಖಾಸಗಿಯವರಿಗೆ ತೆರೆಯಲಾಯಿತು ಮತ್ತು ೨೦೦೨ರಲ್ಲಿ ಮೊಬೈಲ್ ಹ್ಯಾಂಡ್‌ಸೆಟ್ ಮೇಲಿನ ಆಮದು ಶುಲ್ಕವನ್ನು ಶೇ. ೨೫ರಿಂದ ೫ಕ್ಕೆ ಇಳಿಸಲಾಯಿತು. ‘ಇಂಡಿಯಾ ದಿ ಎರ್ಮಜಿಂಗ್ ಜೈಂಟ್’ ಎಂಬ ಕೃತಿಯಲ್ಲಿ ಅರವಿಂದ ಪನಗಾರಿಯ, ‘ದೂರಸಂಪರ್ಕ ಇಲಾಖೆಯ ನೀತಿ ನಿರೂಪಣೆ ಮತ್ತು ಸೇವೆ ಒದಗಿಸುವ ಏಕಸ್ವಾಮ್ಯವನ್ನು ಕೊನೆಗಾಣಿಸಲು ಎದುರಾದ ಎಲ್ಲ ಅಡ್ಡಿಗಳ ನಡುವೆಯೂ ಅದನ್ನು ಜಾರಿಗೊಳಿಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ’ ಎಂದು ಬರೆಯುತ್ತಾರೆ. ವಿಪರ್ಯಾಸವೆಂದರೆ, ಸುಧಾರಣೆ ಮಾಡಲು ವಿಫಲರಾದ ರಾಜೀವರಿಗೆ ಈ ಶ್ರೇಯಸ್ಸು ಸಲ್ಲುತ್ತಿದೆ.

ಖಾಸಗಿಯವರಿಗೆ ದೂರಸಂಪರ್ಕ ವಲಯದ ಬಾಗಿಲು ತೆರೆದ ತರುವಾಯ ಅಭೂತಪೂರ್ವ ಬೆಳವಣಿಗೆಯಾಯಿತು. ೨೦೦೦ನೇ ಇಸವಿಯಲ್ಲಿ ಮೊಬೈಲ್ ಸೇವೆಗೆ ಖಾಸಗಿಯವರ ಪ್ರವೇಶವಾಗಿ ಮೊಬೈಲ್ ಸೇವೆ ದೇಶವ್ಯಾಪಿ ಹರಡಿತು. ೨೦೦೪ರಲ್ಲಿ ಒಟ್ಟು ಮೊಬೈಲ್ ಸಂಪರ್ಕ ದೇಶದ ಒಟ್ಟು ಸ್ಥಿರ ದೂರವಾಣಿ ಸಂಪರ್ಕದ ಸಂಖ್ಯೆಯನ್ನು ಹಿಂದಕ್ಕೆ ಹಾಕಿತು. ೨೦೦೮ರಲ್ಲಿ ೨ಜಿ ತರಂಗಗುಚ್ಛದ ಹರಾಜು ವಿವಾದಾತ್ಮಕ ರೀತಿಯಲ್ಲಾಯಿತು. ಇದು ತನಿಖೆಗೆ ಒಳಪಟ್ಟು ಸಿಎಜಿಯು, ‘ತರಂಗಗುಚ್ಛ ಹಂಚಿಕೆ ಅಸಂವಿಧಾನಾತ್ಮಕವಾಗಿದೆ ಮತ್ತು ನಿರಂಕುಶವಾಗಿದೆ’ ಎಂದು ವರದಿ ನೀಡಿತು. ಈ ಮೂಲಕ ೧.೭ ಲಕ್ಷ ಕೋಟಿ ರು. ಗಾತ್ರದ ಹಗರಣವೊಂದು ಬಯಲಿಗೆ ಬಂತು. ೨೦೧೨ರಲ್ಲಿ ಟೆಲಿಕಾಂ ಇಲಾಖೆಯ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಎ-ಐಆರ್ ದಾಖಲಿಸಿತು. ಹಂಚಿಕೆ ಪ್ರಕ್ರಿಯೆಯು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟು ೧೨೨ ಟೆಲಿಕಾಂ ಪರವಾನಗಿಗಳನ್ನು, ೮ ಕಂಪನಿಗಳಿಗೆ ಹಂಚಿಕೆಯಾದ ಸ್ಪೆಕ್ಟ್ರಮ್ ಅನ್ನು ರದ್ದುಗೊಳಿಸಿತು. ಹರಾಜಿನ ಮೂಲಕವಷ್ಟೇ ರಾಷ್ಟ್ರೀಯ ಸಂಪನ್ಮೂಲಗಳನ್ನು ಹಂಚಿಕೆ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಿತು.

ದೂರಸಂಪರ್ಕ ಇಲಾಖೆಯು ದೇಶದ ಅಭಿವೃದ್ಧಿಗೆ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಅಂದಿನ ಆಡಳಿತಾರೂಢರ ಆರ್ಥಿಕ ಬೆಳವಣಿಗೆಗೆ ಹೆದ್ದಾರಿಯಾಗಿತ್ತು. ೧೯೯೫ರಲ್ಲಿ ಮೊದಲ ಮೊಬೈಲ್ ಸಂಪರ್ಕವು ದೇಶದಲ್ಲಿ ಪರಿಚಯವಾದಾಗ ಕಾಂಗ್ರೆಸ್‌ನ ಅಂದಿನ ಟೆಲಿಕಾಂ ಸಚಿವ ಸುಖ್‌ರಾಮ್‌ರಿಗೆ, ಖಾಸಗಿ ಸಂಸ್ಥೆಯಿಂದ ಲಂಚ ಪಡೆದ ಆರೋಪದಲ್ಲಿ ೫ ವರ್ಷ ಶಿಕ್ಷೆಯಾಯಿತು. ೨೦೧೨ರಲ್ಲಿ ೨ಜಿ ಹಗರಣದ ಪ್ರಮುಖ ರೂವಾರಿಗಳಾಗಿದ್ದ ಯುಪಿಎ ಸರಕಾರದ ದೂರಸಂಪರ್ಕ ಸಚಿವ ಎ.ರಾಜಾ, ಕರುಣಾನಿಧಿ ಪುತ್ರಿ ಕನ್ನಿಮೋಳಿ ಜೈಲು ಸೇರಿದ್ದರು. ೨೦೧೨ರ ಮೊದಲು ಮೊಬೈಲ್ ಲೈಸೆನ್ಸ್ ನೀಡಲು ವಿವಿಧ ರಾಜ್ಯಗಳನ್ನು ಸೇರಿಸಿ ಸರ್ಕಲ್ ರಚಿಸಲಾಗುತ್ತಿತ್ತು. ಇದನ್ನಾಧರಿಸಿ ಕಂಪನಿಗಳಿಗೆ ಮೊಬೈಲ್ ಸೇವೆಯ ಲೈಸೆನ್ಸ್ ನೀಡಲಾಗುತ್ತಿತ್ತು. ೨೦೧೨ರಿಂದ ‘ಒಂದು ದೇಶ ಒಂದು ಲೈಸೆನ್ಸ್’ ಪದ್ಧತಿ ಜಾರಿಗೆ ಬಂದಿತು. ಇದೇ ವೇಳೆ ದೇಶದಲ್ಲಿ ಏರ್‌ಟೆಲ್ ಸಂಸ್ಥೆ ಮೊದಲ ಬಾರಿಗೆ ೪ಜಿ ಸೇವೆಯನ್ನು ಶುರುಮಾಡಿತು. ಜಿಯೋ ಸಂಸ್ಥೆ ಇಂಟರ್‌ನೆಟ್ ಮತ್ತು ಮೊಬೈಲ್ ಕ್ಷೇತ್ರವನ್ನು ಪ್ರವೇಶಿಸಿದ ಮೇಲೆ ಪೈಪೋಟಿ ಹೆಚ್ಚಾಗಿ ಮೊಬೈಲ್ ಮತ್ತು ಇಂಟರ್‌ನೆಟ್‌ನ ದುಬಾರಿ ದರಗಳು ನೆಲಕಚ್ಚಿದವು. ೨೦೧೪ರಲ್ಲಿ ಒಂದು ಜಿಬಿಗೆ ಸರಿಸುಮಾರು ೩೩ರು. ಇದ್ದುದು ೨೦೧೮ರಲ್ಲಿ ೨೧ ರು.ಗೆ ಕುಸಿಯಿತು. ಈಗ ಅದು ಅಂದಾಜು ೧೦.೧ ರು.ಗೆ ಇಳಿದಿದೆ. ಭಾರತ ವಿಶ್ವದಲ್ಲಿ ಅತಿ ಕಡಿಮೆ ದರದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆ
ನೀಡುವ ದೇಶಗಳ ಪಟ್ಟಿಯಲ್ಲಿ ೪ನೇ ಸ್ಥಾನದಲ್ಲಿದ್ದು, ನಮ್ಮಲ್ಲಿಂದು ೧೧೪.೩೦ ಕೋಟಿ ಮೊಬೈಲ್ ಗ್ರಾಹಕರು, ೨೭.೫ ಮಿಲಿಯನ್ ಸ್ಥಿರ ದೂರವಾಣಿ ಮತ್ತು ೬೯ ಕೋಟಿ ಇಂಟರ್ ನೆಟ್ ಗ್ರಾಹಕರಿದ್ದಾರೆ.

ಬಿಎಸ್‌ಎನ್‌ಎಲ್ ೧,೭೮,೦೦೦ ನೌಕರರ ಭಾರದಿಂದ ಕುಗ್ಗಿಹೋಗಿತ್ತು. ಸ್ವಯಂನಿವೃತ್ತಿ ಯೋಜನೆ ಪರಿಣಾಮ ೯೨,೦೦೦ ನೌಕರರ ಭಾರ ಕಮ್ಮಿಯಾಯಿತು. ನಷ್ಟದ ಹಾದಿ ಹಿಡಿದಿರುವ ಸಂಸ್ಥೆಯನ್ನು ಮತ್ತೆ ಹಳಿಗೆ ತರಲು ೩ ಪ್ಯಾಕೇಜ್ಗಳ ಮೂಲಕ ೩.೨ ಲಕ್ಷ ಕೋಟಿ ರು.ಗೆ ಅನುಮೋದನೆ ನೀಡಲಾಗಿದೆ. ಬಿಎಸ್‌ಎನ್‌ಎಲ್ ಅನ್ನು ಮುಚ್ಚುವ ಇರಾದೆ ಕೇಂದ್ರ ಸರಕಾರಕ್ಕಿಲ್ಲ ಎಂಬುದಕ್ಕೆ ಇದು ಸಾಕ್ಷಿ. ‘ಭಾರತ್ ನೆಟ್’ ಯೋಜನೆಯಲ್ಲಿ ದೇಶದ ೨.೫ ಲಕ್ಷ ಗ್ರಾಮ ಪಂಚಾಯತಿಗಳಿಗೆ ಒಎ-ಸಿ ಕೇಬಲ್ ಸಂಪರ್ಕ ನೀಡುವ ಬ್ರಾಡ್ ಬ್ಯಾಂಡ್ ಯೋಜನೆ ಜಾರಿಯಲ್ಲಿದೆ. ನಗರ-ಗ್ರಾಮಗಳ ನಡುವಿನ ಡಿಜಿಟಲ್ ಕಂದಕ ಮುಚ್ಚಲು ಈ ಯೋಜನೆ ಸಹಕಾರಿ. ವಿಶ್ವದಲ್ಲಿ ೪ಜಿ ತರಂಗದಿಂದ ೫ಜಿಗೆ ತಂತ್ರಜ್ಞಾನ ಚಿಮ್ಮಿದಾಗ ಭಾರತ ಹಿಂದೆ ಬೀಳಲಿಲ್ಲ. ವಿವಾದವಾಗಲೀ ಭ್ರಷ್ಟಾಚಾರದ ಸೋಂಕಾಗಲೀ ಇಲ್ಲದೆ ೫ಜಿ ತರಂಗಗುಚ್ಛಗಳನ್ನು ಹರಾಜು ಹಾಕಲಾಯಿತು. ತತ್ಪರಿಣಾಮ,
ಸರಕಾರಕ್ಕೆ ೧,೫೦,೦೦೦ ಕೋಟಿ ರು. ಆದಾಯ ಬಂದಿತು (ಯುಪಿಎ ಸರಕಾರದ ಅವಧಿಯಲ್ಲಿ ೨ಜಿ ತರಂಗಗುಚ್ಛ ಹರಾಜಿನಲ್ಲಿ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ರು. ನಷ್ಟವಾಗಿತ್ತು). ಪ್ರಾಮಾಣಿಕ ಆಡಳಿತಕ್ಕೆ ಇದೊಂದು ಉತ್ತಮ ಉದಾಹರಣೆ. ಸರಕಾರದ ಪಾರದರ್ಶಕತೆ ಕುರಿತು ಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್, ‘ಏರ್‌ಟೆಲ್ ೫ಜಿ ತರಂಗಗುಚ್ಛ ಖರೀದಿಗೆ ಹಣ ಪಾವತಿಸಿದ ಕೆಲ ಹೊತ್ತಿನಲ್ಲೇ ನಿಗದಿತ ಬ್ಯಾಂಡ್ ಹಂಚಿಕೆಯ ಪತ್ರ ನೀಡಲಾಯಿತು, ಹಾಗೆಯೇ ಈ ಬ್ಯಾಂಡ್ ಹಂಚಿಕೆಯನ್ನು ಮತ್ತು ಭರವಸೆ ನೀಡಿದಂತೆ ತರಂಗಗುಚ್ಛವನ್ನು ನೀಡಲಾಯಿತು. ೩೦ ವರ್ಷದ ಕಾರ್ಯಾವಧಿಯಲ್ಲಿ ಇಂಥ ಅನುಭವವಾಗಿದ್ದು ಇದೇ
ಮೊದಲು’ ಎಂದಿದ್ದಾರೆ.

ಪ್ರಪಂಚದಲ್ಲೇ ಅತಿವೇಗವಾಗಿ ೫ಜಿ ಸಂಪರ್ಕವನ್ನು ಭಾರತದಲ್ಲಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ೨.೭ ಲಕ್ಷ ಸೈಟ್ಗಳಲ್ಲಿ ೫ಜಿ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿನಿತ್ಯ ೧೦೦೦ ಜಾಗದಲ್ಲಿ ನೆಟ್‌ವರ್ಕ್ ಸ್ಥಾಪನೆಯಾಗುತ್ತಿದೆ. ೭೦೦ ಜಿಲ್ಲೆಗಳಲ್ಲಿ ಈಗಾಗಲೇ ೫ ಜಿ ಸೇವೆ ಲಭ್ಯವಿದೆ. ಆಡಳಿತಗಾರರ ಉದ್ದೇಶ ಪ್ರಾಮಾಣಿಕವಾಗಿದ್ದರೆ ಎಂಥ ಬೃಹತ್ ಯೋಜನೆಯನ್ನೂ ಸುಸೂತ್ರವಾಗಿ ಕೈಗೊಳ್ಳಬಹುದು ಎಂಬುದನ್ನು ೫ಜಿ
ತರಂಗಗುಚ್ಛ ಹರಾಜು ನಿರೂಪಿಸಿದೆ. ಕೇಂದ್ರ ಸರಕಾರ ಟೆಲಿಕಾಂ ಕಾರ್ಯದರ್ಶಿಯವರ ನೇತೃತ್ವದಲ್ಲಿ ‘ಭಾರತ್ ೬ಜಿ ಸಹಯೋಗ’ ಎಂಬ ಟಾಸ್ಕ್ ಫೋರ್ಸ್ ರಚಿಸಿದೆ. ಮುಂದಿನ ೬ಜಿ ಯುಗದಲ್ಲಿ ಭಾರತ ಅದರ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರಬೇಕು ಎಂಬ ಗುರಿಯೊಂದಿಗೆ ಯತ್ನಗಳು ಶುರುವಾಗಿವೆ. ೧೦ ವರ್ಷದ ಕೆಳಗೆ, ಪ್ರತಿ ಯೋಜನೆಯಲ್ಲೂ ಭ್ರಷ್ಟಾಚಾರದ ಕಮಟು ವಾಸನೆ ಬಡಿಯುತ್ತಿತ್ತು. ಈಗ ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತವಾಗಿ ಮೂಲಭೂತ ಸೌಕರ್ಯ ಯೋಜನೆಗಳು ಜಾರಿಯಾಗುತ್ತಿವೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)