Saturday, 14th December 2024

ತಾಪಮಾನ ಏರಿಕೆ ವಿರುದ್ಧದ ಹೋರಾಟದಲ್ಲಿ ಭಾರತ

ಅಭಿಪ್ರಾಯ

ಗಣೇಶ್ ಭಟ್, ವಾರಣಾಸಿ

ಇತ್ತೀಚೆಗೆ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹವಾಮಾನ ಬದಲಾವಣೆ ಸಮಿತಿಯು ತನ್ನ ಆರನೇ ವರದಿಯನ್ನು ನೀಡಿ ಭೂಮಿಯ ತಾಪಮಾನವಿಂದು ಕಳೆದ 1,25,000 ವರ್ಷಗಳ ಅತಿಹೆಚ್ಚಿನ ಮಟ್ಟಕ್ಕೆ ಏರಿದೆ ಎಂದು ಹೇಳಿದೆ.

ಇದಲ್ಲದೆ ಮುಂದಿನ 20 ವರ್ಷಗಳಲ್ಲಿ ಜಾಗತಿಕ ತಾಪಮಾನವು 1.5 ರಿಂದ 2 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ವರದಿಯ ಪ್ರಕಾರ ಬಿಸಿ ಅಲೆಯ ಪ್ರಮಾಣ ತೀವ್ರವಾಗಲಿದ್ದು ಈ ಶತಮಾನದಲ್ಲಿ ದಕ್ಷಿಣ ಪೂರ್ವ ಏಷ್ಯಾದ ದೇಶಗಳು ಬಹಳ ಸಮಸ್ಯೆಗಳನ್ನೆದುರಿಸಲಿವೆ. ಭಾರತವು ಕೂಡಾ
ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ಎದುರಿಸಲಿದೆ. ಹಿಮಾಲಯದ ನೀರ್ಗಲ್ಲುಗಳು ವೇಗವಾಗಿ ಕರಗಿ ಪ್ರವಾಹವನ್ನು ಉಂಟುಮಾಡಲಿವೆ. ಮಾನ್ಸೂನ್ ಮಾರುತಗಳು ತೀವ್ರವಾಗಿ ಅತಿವೃಷ್ಟಿ ಯಾಗಿ ಪ್ರವಾಹ ಉಂಟಾಗಲಿದೆ.

ಈಗಾಗಲೇ ಏಷ್ಯಾದ ಕರಾವಳಿಗಳಲ್ಲಿ ಜಾಗತಿಕ ಮಟ್ಟದ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಿದೆ. 1800ನೇ ಇಸವಿಯ ನಂತರ ಮಾನವರು ಕೈಗಾರಿಕೆಯಲ್ಲಿ ಕಲ್ಲಿದ್ದಲು, ಪೆಟ್ರೋಲ, ಡಿಸೇಲ್ ಗಳಂತಹ ಪಳಯುಳಿಕೆ ಇಂಧನವನ್ನು ಅತಿಯಾಗಿ ಬಳಸಿದ ಕಾರಣ ೨೪೦೦ ಶತಕೋಟಿ ಟನ್‌ ಗಳಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣವನ್ನು ಸೇರಿದೆ. ಹಸಿರು ಮನೆ ಅನಿಲದ ಹೊರಸೂಸುವಿಕೆ ಯಿಂದಾಗಿ ಭೂಮಿಯ ಉಷ್ಣತೆ ಹೆಚ್ಚಾಗಿ ಧ್ರುವ ಪ್ರದೇಶದ ನೀರ್ಗಲ್ಲುಗಳು ಕರಗಿ ಸಮುದ್ರ ಮಟ್ಟವು ಏರುತ್ತಿದೆ.

ಜಾಗತಿಕ ತಾಪಮಾನದ ಏರಿಕೆಗೆ ಅಮೆರಿಕ, ಯುರೋಪ್ ಹಾಗೂ ಇತ್ತೀಚೆಗೆ ಚೀನಾ ದೇಶಗಳಲ್ಲಿ ನಡೆದ ಕೈಗಾರಿಕಾ ಕ್ರಾಂತಿಯೇ ಬಹು ಮುಖ್ಯ ಕಾರಣವಾಗಿದೆ. ಜಾಗತಿಕ ತಾಪಮಾನದ ಏರಿಕೆಯನ್ನು ತಡೆಯಲು ವಿಶ್ವಸಂಸ್ಥೆಯ ವತಿಯಿಂದ ವಿವಿಧ ಪ್ರಯತ್ನಗಳು ನಡೆಯುತ್ತಿದೆ. 2015ರಲ್ಲಿ ನಡೆದ ಹವಾಮಾನ ಬದಲಾವ ಣೆಯ ಕುರಿತು ವಿಶ್ವಸಂಸ್ಥೆಯ ಚೌಕಟ್ಟು ನಿರೂಪಣಾ ಸಮಾವೇಶದ ಪ್ಯಾರಿಸ್ ಒಪ್ಪಂದದಕ್ಕೆ ಜಗತ್ತಿನ 196 ದೇಶಗಳು ಸಹಿಹಾಕಿದ್ದು ಕೈಗಾರಿಕಾ ಕ್ರಾಂತಿಯ ಪೂರ್ವದ ಜಾಗತಿಕ ತಾಪಮಾನವನ್ನು ಆಧಾರವಾಗಿಟ್ಟುಕೊಂಡು ತಾಪಮಾನದ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸಲು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. 2020ರ ಒಳಗೆ ಎಲ್ಲಾ ದೇಶಗಳು ಹಸಿರು ಅನಿಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ತಾವು ತೆಗೆದುಕೊಂಡ ನಿರ್ಣಯ ಗಳನ್ನು ತಿಳಿಸಬೇಕೆಂದು ಸೂಚಿಸಲಾಯಿತು.

ಬಡ ದೇಶಗಳಿಗೆ ಪುನರ್‌ನವೀಕರಿಸಬಹುದಾದ ಇಂಧನಗಳ ಬಳಕೆಗೆ ಪ್ರೋತ್ಸಾಹಕವಾಗಿ ವಾರ್ಷಿಕವಾಗಿ 100 ಶತಕೋಟಿ ಡಾಲರ್‌ಗಳ ಆರ್ಥಿಕ ನೆರವನ್ನು
ನೀಡುವುದೆಂದು ಮಾತುಕತೆ ಆಗಿತ್ತಾದರೂ ಅದು ಸಮರ್ಪಕವಾಗಿ ಜಾರಿಗೊಂಡಿಲ್ಲ. ಜಾಗತಿಕ ತಾಪಮಾನ ಏರಿಕೆಯಲ್ಲಿ ಭಾರತದ ಪಾಲು ಬಹಳ ಕಡಿಮೆ. ಭಾರತವು ಜಗತ್ತಿನ ಜನಸಂಖ್ಯೆಯ ಶೇ.17.7 ಪಾಲನ್ನು ಹೊಂದಿದ್ದರೂ ಕಳೆದ 200 ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಲ್ಲಿ ಭಾರತದ ಪಾಲು ಶೇ.3ಕ್ಕಿಂತಲೂ ಕಡಿಮೆ. 2020 ರ ಆಗ ತಿಂಗಳಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರೆಸ್ ಹವಾಮಾನ ಬದಲಾವಣೆಯ ವಿರುದ್ಧದ
ಹೋರಾಟದಲ್ಲಿ ಭಾರತವು ಜಾಗತಿಕ ಸೂಪರ್ ಪವರ್ ಆಗಿದೆ ಎಂದು ಬಣ್ಣಿಸಿದ್ದರು.

ಇಂಟರ್ ನ್ಯಾಷನಲ್ ಸೋಲಾರ್ ಅಲಾಯ ನ ರೂಪೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಭಾರತಕ್ಕೆ 2018ರಲ್ಲಿ ವಿಶ್ವ ಸಂಸ್ಥೆಯು ಚ್ಯಾಂಪಿಯ ಆಫ್ ದ ಅರ್ತ್ ಪ್ರಶಸ್ತಿಯನ್ನು ಕೊಟ್ಟಿದೆ. ಭಾರತವು 2030ರೊಳಗೆ ಹಸಿರುಮನೆ ಅನಿಲದ ಬಿಡುಗಡೆಯ ಪ್ರಮಾಣವನ್ನು ಶೇ.33ರಿಂದ 35ರಷ್ಟು ಕಡಿಮೆ ಮಾಡಲಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ 234 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಉತ್ಪತ್ತಿಯಾಗುತ್ತಿದೆ. ದೇಶದ ಬೇಡಿಕೆಯ ಶೇ.53 ವಿದ್ಯುತ್ ಅನ್ನು ಉಷ್ಣ ವಿದ್ಯುತ್ ಸ್ಥಾವರಗಳು ಪೂರೈಸುತ್ತಿವೆ.

ಆದರೆ ಉಷ್ಣ ವಿದ್ಯುತ್ ಸ್ಥಾವರಗಳು ಪ್ರತಿ ದಿನ ಟನ್ ಗಟ್ಟಲೆ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸಿ ಪರಿಸರವನ್ನು ಕಲುಷಿತಗೊಳಿಸುತ್ತವೆ. ದೇಶದ ಬದಲಾದ ಇಂಧನ ಯೋಜನೆಯಲ್ಲಿ 2022ರ ಒಳಗೆ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್‌ನ ಅವಲಂಬನೆಯನ್ನು ಶೇ.50ರಷ್ಟು ಇಳಿಸುವ ಹಾಗೂ 2026-27 ರ ಮೊದಲು ಇದನ್ನು ಶೇ.43ಕ್ಕೆ ಮಿತಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಭಾರತದ ನ್ಯಾಷನಲ್ ಥರ್ಮಲ್ ಪರ್ವ ಕಾರ್ಪೋರೇಶನ್ ಕೆಲಸವನ್ನು ಆರಂಭಿಸಿದ್ದು 2032ರೊಳಗೆ ಸೋಲಾರ್ ಮತ್ತು ಇತರ ಮರು ನವೀಕರಿಸಬಹುದಾದ ಮೂಲಗಳಿಂದ 32 ಗಿಗಾ ವ್ಯಾಟ್ ಗಳಷ್ಟು ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ.

ಭಾರತವಿಂದು ಮರು ನವೀಕರಿಸಬಹುದಾದ ಇಂಧನ ಮೂಲದೆಡೆಗೆ ದಾಪುಗಾಲಿಡುತ್ತಿದೆ. 2022ನೇ ಇಸವಿಯ ಒಳಗಾಗಿ 175 ಗಿಗಾವ್ಯಾಟ್ ವಿದ್ಯುತ್
ಅನ್ನು ಸೋಲಾರ್, ಪವನಯಂತ್ರ ಹಾಗೂ ಇತರ ಮರು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅದೇ
ರೀತಿ 2030 ರ ಒಳಗೆ 400 ಗಿಗಾವ್ಯಾಟ್ ವಿದ್ಯುತ್ ಅನ್ನು ಅಸಂಪ್ರದಾಯಿಕ ಮೂಲಗಳಿಂದ ಉತ್ಪಾದಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. 2014ನೇ ಇಸವಿಯವರೆಗೆ ದೇಶದಲ್ಲಿ 2.5 ಗಿಗಾವ್ಯಾಟ್‌ಗಳಷ್ಟು ಸೋಲಾರ್ ವಿದ್ಯುತ್ ಉತ್ಪಾದಿಸಲ್ಪಡುತ್ತಿತ್ತು. ಹಿಂದಿನ ಡಾ.ಮನಮೋಹನ್ ಸಿಂಗ್ ಸರಕಾರವು 2022ನೇ ಇಸವಿಯೊಳಗೆ ದೇಶವು 20 ಗಿಗಾವ್ಯಾಟ್ ಉತ್ಪಾದಿಸುವ ಗುರಿಯನ್ನು ನಿಗದಿ ಮಾಡಿತ್ತು. ಆದರೆ ನರೇಂದ್ರ ಮೋದಿ ಸರಕಾರವು ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಮರು ನಿಗದಿಗೊಳಿಸಿ 2022ರ ಒಳಗೆ 100 ಗಿಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿತು ಹಾಗೂ ಮನಮೋಹನ್ ಸರಕಾರವು ನಿಗದಿ ಪಡಿಸಿದ್ದ 20 ಗಿಗಾವ್ಯಾಟ್ ಗುರಿಯನ್ನು 2018 ರ ಸಾಧಿಸಿತು.

ಪ್ರಸ್ತುತ ದೇಶದಲ್ಲಿ 42.8 ಗಿಗಾವ್ಯಾಟ್ ಸೋರ್ಲಾ ವಿದ್ಯುತ್ ಉತ್ಪಾದನೆ ಯಾಗುತ್ತಿದೆ. 36 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕಗಳ
ಸ್ಥಾಪನೆಯ ಕೆಲಸ ಸಾಗುತ್ತಿದೆ ಹಾಗೂ 27.87 ಗಿಗಾವ್ಯಾಟ್ ಪ್ರಮಾಣದ ಸೋಲಾರ್ ವಿದ್ಯುತ್ ಘಟಕದ ಸ್ಥಾಪನೆಯ ಕೆಲಸವು ಟೆಂಡರ್ ಹಂತದಲ್ಲಿದೆ.
ಗಾಳಿ ಯಂತ್ರಗಳಿಂದ(ವಿಂಡ್ ಮಿಲ) ಪ್ರಸ್ತುತ 38.79 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ನವೀನ ಹಾಗೂ ನವೀಕರಿಸಬಹುದಾದ ಇಂಧನ
ಸಚಿವಾಲಯವು 2022ರ ಒಳಗೆ ಪವನ ಶಕ್ತಿಯಿಂದ 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಈ ಯೋಜನೆಯಿಂದ
12 ಕೋಟಿ ಟನ್ ಕಾರ್ಬನ್ ಡೈ ಆಕ್ಸೈಡ್ ವಾತಾವರಣವನ್ನು ಸೇರುವುದನ್ನು ತಡೆದಂತಾಗುತ್ತದೆ.

ಈಗಾಗಲೇ ಬೃಹತ್ ಜಲ ವಿದ್ಯುತ್ ಯೋಜನೆಗಳನ್ನು ಹೊರತು ಪಡಿಸಿ ಭಾರತವಿಂದು 100 ಗಿಗಾವ್ಯಾಟ್ ಗಳಷ್ಟು ವಿದ್ಯುತ್ ಅನ್ನು ಸೋಲಾರ್, ಪವನಯಂತ್ರ
ಹಾಗೂ ಬಯೋ ಇಂಧನ ಮೂಲಗಳ ಮೂಲಕ ಉತ್ಪಾದಿಸುತ್ತಿದೆ. ಭಾರತೀಯ ರೈಲ್ವೇಯೂ ಪರಿಸರಸ್ನೇಹಿ ಯಾಗುತ್ತಿದೆ. 2030ರೊಳಗೆ ಭಾರತೀಯ ರೈಲ್ವೆ
ಜಗತ್ತಿನ ಮೊದಲ ಹಸಿರು ರೈಲ್ವೆ ಆಗಲಿದೆ ಎಂದು ರೈಲ್ವೆ ಸಚಿವರಾದ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಭಾರತೀಯ ರೈಲ್ವೇಯ ವಿದ್ಯುದೀಕರಣ ಕೆಲಸವು ಭರದಿಂದ ಸಾಗುತ್ತಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಭಾರತೀಯ ಬಡ ಮಹಿಳೆ ಯರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗುತ್ತಿದ್ದು, ಕಳೆದ 6ವರ್ಷಗಳಲ್ಲಿ 8 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕವನ್ನು ಕೊಡಲಾಗಿದೆ. 2016 ರ ವರೆಗೆ ದೇಶದಲ್ಲಿ ಶೇ.62 ಮನೆಗಳಿಗೆ ಮಾತ್ರ ಅಡುಗೆ ಅನಿಲ ಸಂಪರ್ಕವಿದ್ದಿದ್ದು ಉಜ್ವಲ ಯೋಜನೆಯ ಪರಿಣಾಮವಾಗಿ ಈಗ ಭಾರತದ ಶೇ.99.5 ರಷ್ಟು ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಲಭಿಸಿದೆ. ಇದರ ಪರಿಣಾಮವಾಗಿ ಅಷ್ಟೇ ಪ್ರಮಾಣದಲ್ಲಿ ಉರುವಲಿಗಾಗಿ ಮರಗಳನ್ನು ಕಡಿಯುವುದು ಕಡಿಮೆ ಯಾಗಿದೆ. ಸೌದೆ ಬಳಸಿ ಒಲೆ ಉರಿಸುವುದು ಕಡಿಮೆಯಾಗಿ ವಾತಾವರಣವನ್ನು ಸೇರುವ ಹೊಗೆಯ ಪ್ರಮಾಣವೂ ಕಡಿಮೆಯಾಗಿದೆ ಹಾಗೂ ಪರಿಸರದಲ್ಲಿ ಹಸಿರಿನ ಪ್ರಮಾಣ ಹೆಚ್ಚಾಗಿದೆ.

ಉಜ್ವಲ ಯೋಜನೆಯಲ್ಲಿ ಅತಿ ಕಡಿಮೆ ವಿದ್ಯುತ್ ಬಳಸುವ 36.78 ಕೋಟಿ ರು. ಎಲ್‌ಇಡಿ ಬಲ್ಬಗಳು ವಿತರಣೆ ನಡೆದಿದ್ದು ಇದರ ಪರಿಣಾಮವಾಗಿ ವಿದ್ಯುತ್
ಬಳಕೆಯ ಪ್ರಮಾಣ ಕಡಿಮೆಯಾಗಿದ್ದು ಈ ಮೂಲಕ ಸುಮಾರು 2.3 ಕೋಟಿ ಟನ್‌ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ವಾತಾವರಣವನ್ನು ಸೇರುವುದನ್ನು
ತಡೆಗಟ್ಟಲಾಗಿದೆ. ಪೆಟ್ರೋಲ್‌ಗೆ ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು ಮುಂದೆ ಈ ಪ್ರಮಾಣ ಶೇ.20ರಷ್ಟಕ್ಕೆ ಏರಲಿದೆ. ಹೈಡ್ರೋಜನ್ ಅನ್ನು
ಇಂಧನವಾಗಿ ಬಳಸುವ ಯೋಜನೆಯೂ ಕಾರ್ಯ ಗತವಾಗುತ್ತಿದ್ದು ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ
ಮೋದಿ ಭಾರತವು 2047ರಲ್ಲಿ, ತನ್ನ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಮೊದಲು ಇಂಧನದ ವಿಚಾರದಲ್ಲಿ ಇತರ ದೇಶಗಳ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿಯಾಗಲಿದೆ ಎಂದು ಹೇಳಿದ್ದಾರೆ.

ಇದೀಗ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಸಂದರ್ಭದಲ್ಲೂ ಪರಿಸರ ಸ್ನೇಹೀ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಗಿಡಮರಗಳನ್ನು ನೆಡಲಾಗುತ್ತಿದೆ. 2016, 2017 ಹಾಗೂ 2018 ರಲ್ಲಿ ಒಂದು ಕೋಟಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ನೆಟ್ಟು ಬೆಳೆಸಲಾಗಿದೆ. ನಿತಿನ್ ಗಡ್ಕರಿಯವರು 2022 ನೇ ಇಸವಿಯ ಒಳಗೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ 125 ಕೋಟಿ ಮರ ಗಳನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ರಾಷ್ಟ್ರೀಯ ಹೆzರಿ ಪ್ರಾಧಿಕಾರವು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಗಿಡ ನೆಡುವ ಕೆಲಸಗಳು ಪ್ರಗತಿಯಲ್ಲಿದೆ.

ಭಾರತವಿಂದು ಇಲೆಕ್ಟ್ರಿಕಲ್ ವಾಹನಗಳ ತಯಾರಿಕೆ ಹಾಗೂ ಖರೀದಿಗೆ ಭಾರಿ ಉತ್ತೇಜನವನ್ನು ನೀಡುತ್ತಿದೆ. ಭಾರತದ ಹೊಸ ಪೆಟ್ರೋಲ್ ಡಿಸೇಲ್ ವಾಹನಗಳ ತಯಾರಿಕೆಯಲ್ಲಿ ಕಡಿಮೆ ಹೊಗೆಯುಗುಳುವ ತಂತ್ರಜ್ಞಾನವಾದ ಭಾರತ್ ಸ್ಟಾಂಡರ್ಡ್ 6 ನ್ನು ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ದೇಶದ 13 ನಗರಗಳಲ್ಲಿ ಮೆಟ್ರೊ ರೈಲುಗಳು ಓಡುತ್ತಿದ್ದು, 9 ನಗರಗಳಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ. 4 ನಗರಗಳಲ್ಲಿ ಮೆಟ್ರೊ ಕಾಮಗಾರಿಗೆ ಅನುಮತಿ ದೊರೆತಿದೆ ಹಾಗೂ ಇನ್ನೂ 14 ನಗರಗಳು ಮೆಟ್ರೊ ರೈಲಿಗೆ ಪ್ರಸ್ತಾವನೆ ಸಲ್ಲಿಸಿವೆ.

ಹೀಗೆ ದೇಶದ ಒಟ್ಟು 42 ನಗರಗಳು ಇಂಗಾಲ ರಹಿತ ಚ್ಛ ಸಾರಿಗೆಯಾದ ಮೆಟ್ರೋ ರೈಲು ವ್ಯವಸ್ಥೆಯನ್ನು ಹೊಂದಲಿವೆ. ಕಳೆದೊಂದು ದಶಕದಲ್ಲಿ ದೇಶದ
ಅರಣ್ಯದ ಪ್ರಮಾಣವು ಶೇ.3ರಷ್ಟು ಹೆಚ್ಚಾಗಿದೆ. ಉತ್ತರಪ್ರದೇಶ ರಾಜ್ಯವೊಂದರ 25 ಕೊಟಿ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಜಾಗತಿಕ ತಾಪಮಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತವಿಂದು ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಅಮೆರಿಕ, ಯುರೋಪ್ ಹಾಗೂ ಚೀನಾಗಳು ಈ ನಿಟ್ಟಿನಲ್ಲಿ ಇನ್ನೂ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಇರುವುದು ಖೇದಕರ ವಿಷಯವಾಗಿದೆ.